ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಏರ್ಪಟ್ಟ ಗೊಂದಲವು ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಶೇಷವಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಯಲ್ಲಿ ಪೈಲಟ್‌ಗಳ ಕೊರತೆ ಉಲ್ಬಣಗೊಂಡಿದ್ದರಿಂದ ನೂರಾರು ವಿಮಾನಗಳು ರದ್ದುಗೊಂಡಿದ್ದು, ಪ್ರಯಾಣದ ಯೋಜನೆ ಮಾಡಿಕೊಂಡಿದ್ದ ಅನೇಕ ಜನರು ತಲೆಬಿಸಿಗೆ ಒಳಗಾಗಿದ್ದಾರೆ. ಹಬ್ಬ-ಜಾತ್ರೆ, ಪ್ರವಾಸ, ಉದ್ಯೋಗ ಸಂಬಂಧಿತ ಪ್ರಯಾಣಗಳ ಗರಿಷ್ಠ ಸಮಯದಲ್ಲಿ ಬಂದಿರುವ ಈ ತೊಂದರೆ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ, ಪ್ರಯಾಣಿಕರ ಅನುಕೂಲವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿರುವ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ವಿಮಾನ ರದ್ದುಗಳಿಂದ ಬಾಧಿತರಾಗಿರುವವರಿಗೆ ತಕ್ಷಣದ ಪರ್ಯಾಯ ಪ್ರಯಾಣ ಅವಕಾಶ ಕಲ್ಪಿಸಲು ಹಲವಾರು ಪ್ರೀಮಿಯಂ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಿ ಪ್ರಯಾಣ ವ್ಯವಸ್ಥೆಯನ್ನು ಸುಧಾರಿಸಿದೆ.
ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ, ಹೆಚ್ಚಿನ ಗರಿಷ್ಠ ಬೇಡಿಕೆ ಎದುರಿಸುತ್ತಿರುವ ದೇಶದ ಪ್ರಮುಖ ನಗರಗಳಿಂದ ಪ್ರಯಾಣಿಸುವ ಒಟ್ಟು 37 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಕೋಚ್‌ಗಳು ಮತ್ತು ಹೆಚ್ಚುವರಿ ಟ್ರಿಪ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ ಸ್ಲೀಪರ್, ಚೇರ್ ಕಾರ್, ಸೆಕೆಂಡ್ ಎಸಿ, ಮತ್ತು ಥರ್ಡ್ ಎಸಿ ಸೇರಿದಂತೆ ವಿವಿಧ ಶ್ರೇಣಿಗಳ 116 ಹೆಚ್ಚುವರಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸುಲಭವಾಗಿ ಕಾಯ್ದಿರಿಸಿದ ಟಿಕೆಟ್ ಸಿಗುವಂತಾಗಿದೆ.
ಬೆಂಗಳೂರು ಮೂಲದ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳು:
ಬೆಂಗಳೂರು ನಗರದಿಂದ ದೇಶದ ವಿವಿಧ ಭಾಗಗಳಿಗೆ ಸಂಚರಿಸುವ ಕೆಲವು ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಸೇರಿಸಲಾಗಿದೆ.
- ಬೆಂಗಳೂರು – ಅಗರ್ತಲಾ ಹಂಸಫರ್ ಎಕ್ಸ್‌ಪ್ರೆಸ್
- ಬೆಂಗಳೂರು – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್
- ಬೆಂಗಳೂರು – ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್
- ಬೆಂಗಳೂರು – ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
- ಬೆಂಗಳೂರು – ಮುಂಬೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
- ಬೆಂಗಳೂರು – ಚೆನ್ನೈ ಬೀಚ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
ಇಂಡಿಗೋದ ಸಂಕಷ್ಟಕ್ಕೆ ಕಾರಣವೇನು?:
ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ. 60 ಕ್ಕಿಂತ ಹೆಚ್ಚು ಪಾಲು ಹೊಂದಿರುವ ಇಂಡಿಗೋ, ಪೈಲಟ್‌ಗಳ ತೀವ್ರ ಕೊರತೆಯಿಂದಾಗಿ ಕಾರ್ಯಾಚರಣೆಯಲ್ಲಿ ಅಡಚಣೆ ಅನುಭವಿಸುತ್ತಿದೆ. ಇದರಿಂದ ನಿರಂತರವಾಗಿ ವಿಮಾನಗಳು ರದ್ದುಗೊಳ್ಳುತ್ತಿದ್ದು, ಪ್ರಯಾಣಿಕರ ಬೇಸರ ಹೆಚ್ಚುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಬದಲಿ ವ್ಯವಸ್ಥೆಗಾಗಿ ಜನರು ಹಾತೊರೆಯುತ್ತಿದ್ದಾರೆ.
ಪ್ರಯಾಣಿಕರ ಕಷ್ಟವನ್ನು ಮನಗಂಡ ಭಾರತೀಯ ರೈಲ್ವೆ, ತ್ವರಿತ ನೆರವಿನೊಂದಿಗೆ ಸುಧಾರಿತ ಮತ್ತು ಸುರಕ್ಷಿತ ಪ್ರಯಾಣ ಮಾರ್ಗವನ್ನು ಒದಗಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ದೊಡ್ಡ ಪರಿಹಾರವಾಗಿದೆ. ಇನ್ನೊಂದು ಕಡೆ, ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಶೀಘ್ರ ಸುಧಾರಿಸುವ ನಿರೀಕ್ಷೆಯಿದೆ.
