ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ಭಾರತ ತಂಡ ಹೋಬರ್ಟ್‌ನಲ್ಲಿ ಅದ್ಭುತ ತಿರುಗೇಟು ನೀಡಿದೆ. ಐದು ಪಂದ್ಯಗಳ ಟಿ20 ಐ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು 186 ರನ್‌ಗಳೊಳಗೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.
ಹರ್ಷಿತ್ ರಾಣಾ ಅವರ ಬದಲಿಗೆ ತಂಡದಲ್ಲಿ ಅವಕಾಶ ಪಡೆದುಕೊಂಡ ಅರ್ಶದೀಪ್ ಸಿಂಗ್ ತಮ್ಮ ಆಯ್ಕೆಯೇ ಶತಪಾಲು ಲೇಸೆಂದು ಸಾಬೀತುಪಡಿಸಿದರು. ಆರಂಭದಲ್ಲೇ ವೇಗ ಮತ್ತು ಸ್ವಿಂಗ್‌ನಿಂದ ಆಸ್ಟ್ರೇಲಿಯಾ ಟಾಪ್ ಆರ್ಡರ್‌ನ್ನು ಪೆವಿಲಿಯನ್ ಸೇರುವಂತೆ ಮಾಡಿದರು. ತಮ್ಮ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಟಿಂ ಡೇವಿಡ್ (38 ಎಸೆತಗಳಲ್ಲಿ 74) ಹಾಗೂ ಮಾರ್ಕಸ್ ಸ್ಟೋಯ್ನಿಸ್ (42 ರನ್) ಮಾತ್ರ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದರು ಇತರರು ಯಾವುದೇ ಪ್ರಭಾವ ಬೀರಲಿಲ್ಲ. ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
187 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 16 ಎಸೆತಗಳಲ್ಲಿ 25 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿದ ಅವರು ಆಸ್ಟ್ರೇಲಿಯಾ ತಂಡದ ಬೌಲಿಂಗ್‌ನ್ನು ಮೊದಲ ಕ್ಷಣದಿಂದಲೇ ಒತ್ತಡಕ್ಕೆ ಸಿಲುಕಿಸಿದರು. ಆದರೆ ನೇಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಸೇರಿದರು. ಆ ಬಳಿಕ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇನಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಮೊತ್ತವನ್ನು ಹೆಚ್ಚಿಸಿದರು. ಸೂರ್ಯಕುಮಾರ್ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿ ತಂಡಕ್ಕೆ ಹಿನ್ನಡೆ ಆಗದಂತೆ ನೋಡಿಕೊಂಡರು.
ಮಧ್ಯ ಕ್ರಮಾಂಕದಲ್ಲಿ ತಿಲಕ್ ವರ್ಮಾ (26 ಎಸೆತಗಳಲ್ಲಿ 29) ಮತ್ತು ಅಕ್ಷರ್ ಪಟೇಲ್ (12 ಎಸೆತಗಳಲ್ಲಿ 17) ಇಬ್ಬರೂ ಕೂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಭಾರತ ತಂಡ ಮಧ್ಯದ ಹಂತದಲ್ಲಿ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿದರೂ, ಆ ವೇಳೆ ವಾಶಿಂಗ್ಟನ್ ಸುಂದರ್ ತಂಡದ ನಂಬಿಗಸ್ತರಾಗಿ ಆಟವಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸುಂದರ್ ತಮ್ಮ ಸಮತೋಲನ ಮತ್ತು ಶಾಂತ ಬ್ಯಾಟಿಂಗ್‌ನಿಂದ ಪಂದ್ಯದ ಗತಿ ಸಂಪೂರ್ಣವಾಗಿ ಭಾರತ ಪರ ತಿರುಗಿಸಿದರು. ಅವರಿಗೆ ಜಿತೇಶ್ ಶರ್ಮಾ ತಕ್ಕ ಬೆಂಬಲ ನೀಡಿದರು. ಈ ಜೋಡಿ ಆಸ್ಟ್ರೇಲಿಯಾದ ಗೆಲುವಿನಾಸೆಗೆ ತಣ್ಣೀರೆರಚಿ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿತು.
ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಎಲ್ಲಿಸ್ ಮತ್ತು ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದರೂ, ಭಾರತದ ದೃಢ ಮನೋಭಾವದ ಮುಂದೆ ಅವರು ಅಸಹಾಯಕರಾದರು. ಪಂದ್ಯದಲ್ಲಿನ ಅತೀ ಪ್ರಮುಖ ಪಾತ್ರ ವಹಿಸಿದ ಅರ್ಶದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಜಯದೊಂದಿಗೆ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಪರೂಪದ ಸಾಧನೆ ಭಾರತ ಮಾಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ಕಳೆದ ಐದು ಪಂದ್ಯಗಳಲ್ಲೂ ಗೆಲುವು ಕಂಡಿದ್ದ ಆಸ್ಟ್ರೇಲಿಯಾ ಈ ಬಾರಿ ಸೋಲಿನ ರುಚಿ ಕಂಡಿದೆ.
