- ಸಂಬಳ ಒಂದೇ, ಕೆಲಸ ಎರಡು – ನಗರಸಭೆ ಕ್ರಮಕ್ಕೆ ಆಕ್ಷೇಪ
ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿರುವ ನಡುವೆಯೇ, ಇರುವ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ ನೀಡಿ, ನಗರಸಭೆಯ ಕೆಲಸಗಳ ಜೊತೆಗೆ ಪತ್ರಿಕಾ ಭವನದ ಸ್ವಚ್ಛತೆ ಕಾರ್ಯವನ್ನೂ ನಿರ್ವಹಿಸುವಂತೆ ಸೂಚಿಸಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ನಗರಸಭೆಯ ದೈನಂದಿನ ಕಾರ್ಯಭಾರವೇ ಹೆಚ್ಚಾಗಿರುವ ಸಂದರ್ಭದಲ್ಲಿ, ನಗರಸಭೆಯ ಖಾಯಂ ಡಿ-ಗ್ರೂಪ್ ಸಿಬ್ಬಂದಿ ಶ್ರೀಶೈಲ ಅವರನ್ನು ನಗರಸಭೆಯ ವ್ಯಾಪ್ತಿಗೆ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದು ಆಡಳಿತಾತ್ಮಕ ಅಸಮಂಜಸತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬರುತ್ತಿದೆ.
ನಗರಸಭೆ ಸಿಬ್ಬಂದಿಯನ್ನು ನಗರಸಭೆಯ ಹೊರಗಿನ ಕೆಲಸಗಳಿಗೆ ಬಳಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ವಿದ್ಯಾವಂತರು ಅಭಿಪ್ರಾಯಪಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಹೊಸ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವುದು ಅಥವಾ ತಾತ್ಕಾಲಿಕ ವ್ಯವಸ್ಥೆ ರೂಪಿಸುವುದು ಆಡಳಿತದ ಕರ್ತವ್ಯವಾಗಿದ್ದು, ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಘದ ಹೊಣೆಗಾರಿಕೆ ಪ್ರಶ್ನಾರ್ಥಕ: ಪತ್ರಿಕಾ ಭವನದ ದಿನನಿತ್ಯದ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಆ ಭವನವನ್ನು ನಡೆಸುತ್ತಿರುವ ಸಂಘದದ್ದೇ ಆಗಿರಬೇಕು. ಆದರೆ ಸಂಘವು ತನ್ನ ಕರ್ತವ್ಯವನ್ನು ನಿರ್ವಹಿಸದೇ, ನಗರಸಭೆ ಸಿಬ್ಬಂದಿಯನ್ನು ಅವಲಂಬಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಸಂಘಕ್ಕೆ ಸಿಬ್ಬಂದಿ ಅಗತ್ಯವಿದ್ದರೆ, ತನ್ನದೇ ಮೂಲಗಳಿಂದ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಕರ್ನಾಟಕ ನಗರಸಭೆಗಳ ಸೇವಾ ನಿಯಮಗಳ ಪ್ರಕಾರ, ಖಾಯಂ ನೌಕರರನ್ನು ಅವರ ನೇಮಕಾತಿ ಹುದ್ದೆ, ವೇತನ ಶ್ರೇಣಿ ಹಾಗೂ ನಿಗದಿತ ಕಾರ್ಯವ್ಯಾಪ್ತಿಗೆ ಹೊರಗಿನ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದೆ. ಯಾವುದೇ ಹೆಚ್ಚುವರಿ ಅಥವಾ ಪ್ರಭಾರಿ ಜವಾಬ್ದಾರಿ ನೀಡಬೇಕಾದಲ್ಲಿ, ಅರ್ಹ ಪ್ರಾಧಿಕಾರದ ಲಿಖಿತ ಆದೇಶ, ಅವಧಿ ನಿಗದಿ ಹಾಗೂ ನಿಯಮಾನುಸಾರ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಖಾಯಂ ನೌಕರರಾದ ಶ್ರೀಶೈಲಾ ಅವರನ್ನು ಸೇವಕ ಹುದ್ದೆಗೆ ಅಥವಾ ನಗರಸಭೆಯ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದಾದರೆ, ಅದು ಕರ್ನಾಟಕ ನಗರಸಭೆ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ. ನಗರಸಭೆ ಸಿಬ್ಬಂದಿಯನ್ನು ಸೇವಾ ನಿಯಮಗಳಿಗೆ ವಿರುದ್ಧವಾಗಿ ಹೊರಗಿನ ಕೆಲಸಗಳಿಗೆ ನಿಯೋಜಿಸಿರುವುದಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಡಿ. ಗ್ರೂಪ್ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
