ಇಂದಿನ ವೇಗದ ಜೀವನಶೈಲಿ, ಒತ್ತಡ, ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ನಡುವೆ ಮಧುಮೇಹ (Diabetes) ಎಂಬ ಕಾಯಿಲೆ ನಮ್ಮ ದೇಶದಲ್ಲಿ ಭಯಾನಕ ಮಟ್ಟದಲ್ಲಿ ಹೆಚ್ಚುತ್ತಿದೆ. ಹಿಂದೆ ಈ ಕಾಯಿಲೆ ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತಾದರೂ, ಈಗ ಯುವಕರು ಮತ್ತು ಮಧ್ಯವಯಸ್ಕರೂ ಇದರ ಬಲಿಯಾಗುತ್ತಿದ್ದಾರೆ.
ಮಧುಮೇಹವನ್ನು ತಜ್ಞರು ಮೌನಹಂತಕ (Silent Killer) ಎಂದು ಕರೆಯುತ್ತಾರೆ, ಏಕೆಂದರೆ ಇದು ನಿಧಾನವಾಗಿ ದೇಹದೊಳಗೆ ಹಲವಾರು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೊದಲ ಹಂತಗಳಲ್ಲಿ ಅದರ ಲಕ್ಷಣಗಳು ಬಹುಮಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಯಾವ ವಯಸ್ಸಿನಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ? ಯಾವ ವಯಸ್ಸಿನಲ್ಲಿ ಜನರು ದುರ್ಬಲರಾಗುತ್ತಾರೆ? ಮತ್ತು ಈ ಕಾಯಿಲೆಯನ್ನು ತಡೆಗಟ್ಟಲು ಏನು ಮಾಡಬಹುದು? ನೋಡೋಣ.
ಯಾವ ವಯಸ್ಸಿನಲ್ಲಿ ಮಧುಮೇಹ ಹೆಚ್ಚು ಕಾಣಿಸುತ್ತದೆ?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಅಧ್ಯಯನದ ಪ್ರಕಾರ, ಮಧುಮೇಹವು ಸಾಮಾನ್ಯವಾಗಿ 40 ರಿಂದ 45 ವರ್ಷ ವಯಸ್ಸಿನ ಮಧ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು “ಮಧ್ಯವಯಸ್ಕ” ಜನರಲ್ಲಿ ಆರಂಭವಾಗಿ ವೃದ್ಧಾಪ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತದೆ.
ಆದರೆ ಇಂದಿನ ಕಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ತಜ್ಞರ ಎಚ್ಚರಿಕೆಯ ಪ್ರಕಾರ 20 ರಿಂದ 30 ವರ್ಷ ವಯಸ್ಸಿನ ಯುವಕರಲ್ಲಿಯೂ ಮಧುಮೇಹದ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ.
ಇದಕ್ಕೆ ಪ್ರಮುಖ ಕಾರಣಗಳು:
ಕಳಪೆ ಆಹಾರ ಪದ್ಧತಿ (ಜಂಕ್ ಫುಡ್, ಸಿಹಿ ಪಾನೀಯಗಳು)
ದೈಹಿಕ ಚಟುವಟಿಕೆಯ ಕೊರತೆ
ಒತ್ತಡ
ಅತಿಯಾಗಿ ಕುಳಿತಿರುವ ಜೀವನಶೈಲಿ
ವಯಸ್ಸು ಮತ್ತು ಮಧುಮೇಹದ ಸಂಬಂಧ:
ವಯಸ್ಸಾದಂತೆ ದೇಹದ ಇನ್ಸುಲಿನ್ ಉತ್ಪಾದನೆ ನಿಧಾನಗತಿಯಾಗುತ್ತದೆ. ಇನ್ಸುಲಿನ್ ಪ್ರತಿರೋಧ (Insulin Resistance) ಹೆಚ್ಚಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದೇಹಕ್ಕೆ ಕಷ್ಟವಾಗುತ್ತದೆ.
45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪ್ರಿಡಿಯಾಬಿಟಿಸ್ (Prediabetes) ಮತ್ತು ಟೈಪ್ 2 ಮಧುಮೇಹ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾದವರಲ್ಲಿ ಕಡಿಮೆ ದೈಹಿಕ ಚಟುವಟಿಕೆ, ದುರ್ಬಲ ಸ್ನಾಯುಗಳು, ಹಾಗೂ ಜೀರ್ಣಕ್ರಿಯೆಯ ನಿಧಾನಗತಿ. ಇವೆಲ್ಲವೂ ಸಕ್ಕರೆ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.
ಯಾಕೆ 40 ನಂತರ ಅಪಾಯ ಹೆಚ್ಚಾಗುತ್ತದೆ?:
ತಜ್ಞರ ಪ್ರಕಾರ, 40 ವರ್ಷ ನಂತರ ದೇಹದ ಮೆಟಾಬಾಲಿಸಂ ನಿಧಾನಗತಿಯಾಗುತ್ತದೆ.
ತೂಕ ಹೆಚ್ಚಾಗುವುದು (ಬೊಜ್ಜು)
ಹಾರ್ಮೋನಲ್ ಬದಲಾವಣೆಗಳು
ಒತ್ತಡ ಮತ್ತು ನಿದ್ರೆ ಕೊರತೆ
ಇವುಗಳೆಲ್ಲಾ ಮಧುಮೇಹಕ್ಕೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುತ್ತವೆ.
ಯಾರಾದರೂ ಕುಟುಂಬದಲ್ಲಿ ಮಧುಮೇಹ ಇತಿಹಾಸ ಇದ್ದರೆ (Parents ಅಥವಾ Grandparents), ಅವರಿಗೆ ಮಧುಮೇಹ ಬರುವ ಅಪಾಯ ಇನ್ನೂ ಹೆಚ್ಚು.
ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ಕಾರಣಗಳು:
ಇಂದಿನ ಪೀಳಿಗೆಯಲ್ಲಿ ಮಧುಮೇಹ ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಪ್ರಮುಖ ಕಾರಣಗಳು,
ಫಾಸ್ಟ್ ಫುಡ್ ಸೇವನೆ
ಮಲಗುವ ಸಮಯದ ಅಸಮಂಜಸತೆ
ಮೊಬೈಲ್/ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಸಮಯ
ವ್ಯಾಯಾಮದ ಕೊರತೆ
ನಿರಂತರ ಒತ್ತಡ ಮತ್ತು ನಿದ್ರಾಹೀನತೆ
ಈ ಎಲ್ಲವು ದೇಹದ ಇನ್ಸುಲಿನ್ ಕಾರ್ಯವನ್ನು ಹಾನಿಗೊಳಿಸುತ್ತವೆ.
ಮಧುಮೇಹವನ್ನು ತಡೆಗಟ್ಟಲು ಏನು ಮಾಡಬೇಕು?
ತಜ್ಞರ ಸಲಹೆ ಪ್ರಕಾರ ಮಧುಮೇಹವನ್ನು ಜೀವನಶೈಲಿ ಬದಲಾವಣೆಗಳ ಮೂಲಕವೇ ತಡೆಗಟ್ಟಬಹುದು.
ಆಹಾರ: ಹಸಿರು ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡ ಆಹಾರ ಸೇವನೆ.
ವ್ಯಾಯಾಮ: ಪ್ರತಿದಿನ ಕನಿಷ್ಠ 30 ನಿಮಿಷ ಚುರುಕಾದ ನಡೆ, ಯೋಗ ಅಥವಾ ಸೈಕ್ಲಿಂಗ್ ಮಾಡಿ.
ತೂಕ ನಿಯಂತ್ರಣ: BMI ಸರಿಯಾದ ಮಟ್ಟದಲ್ಲಿ ಇರಲಿ.
ನಿದ್ರೆ: ದಿನಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆ.
ಒತ್ತಡ ನಿಯಂತ್ರಣ: ಧ್ಯಾನ, ಪ್ರಾಣಾಯಾಮ, ಅಥವಾ ಹವ್ಯಾಸಗಳಿಂದ ಮನಸ್ಸು ಶಾಂತವಾಗಿಡಿ.
ಪರೀಕ್ಷೆ: 35 ವರ್ಷವಾದ ನಂತರ ವರ್ಷಕ್ಕೊಮ್ಮೆ ರಕ್ತದ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳಿ.
ವಯಸ್ಸಾದಂತೆ ಮಧುಮೇಹದ ಅಪಾಯ ಸಹಜವಾಗಿ ಹೆಚ್ಚಾದರೂ, ಇಂದಿನ ಯುವಜನರ ಜೀವನಶೈಲಿಯೇ ಅದನ್ನು ಮುಂಚಿತವಾಗಿ ಎಳೆಯುತ್ತಿದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಈ ಮೌನಹಂತಕ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು ಸಾಧ್ಯ.
