ಕಲಬುರಗಿ- ಕೇಂದ್ರದ ಮೋಟಾರು ವಾಹನ ಕಾಯ್ದೆ-1988 ಮತ್ತು ತಿದ್ದುಪಡಿ ಕಾಯ್ದೆ-2019ರ ಪ್ರಕಾರ ಹಿಟ್ & ರನ್ ಮೋಟಾರು ಅಪಘಾತ ಯೋಜನೆ- 2022ರಡಿ ಹಿಟ್ & ರನ್ ಪ್ರಕರಣಗಳಲ್ಲಿ ವಿಮೆ ಮಾಡಿಸಿಕೊಳ್ಳದ ಪಾದಚಾರಿಗಳಿಗೆ ಮರಣ ಪ್ರಕರಣದಲ್ಲಿ 2 ಲಕ್ಷ ರೂ. ಮತ್ತು ರಸ್ತೆ ಅಫಘಾತದಲ್ಲಿ ಗಾಯಾಳು ಪ್ರಕರಣಗಳಲ್ಲಿ 50 ಸಾವಿರ ರೂ. ಪರಿಹಾರ ಒದಗಿಸುವ ಸೌಲಭ್ಯವಿದ್ದು, ಸಂತ್ರಸ್ತರ ಅವಲಂಭಿತರು ಮತ್ತು ಗಾಯಾಳುಗಳು ಇದರ ಸೌಲಭ್ಯ ಪಡೆಯಬೇಕು ಎಂದು ಕಲಬುರಗಿ ಉಪ ವಿಭಾಗದ ಹಕ್ಕು ತನಿಖಾಧಿಕಾರಿಯಾಗಿರುವ ಸಹಾಯಕ ಆಯುಕ್ತೆ ಸಾಹಿತ್ಯ ತಿಳಿಸಿದ್ದಾರೆ.
ಈ ಯೋಜನೆಯಡಿ ಕ್ಲೇಮ್ ವಿಚಾರಣಾ ಅಧಿಕಾರಿಯು ಕ್ಲೇಮ್ ಸ್ವೀಕರಿಸಿದ ಒಂದು ತಿಂಗಳೊಳಗೆ ಪೊಲೀಸ್ ಮತ್ಥ ವೈದ್ಯಕೀಯ ವರದಿಯನ್ನು ಆಧಾರವಾಗಿಟ್ಟುಕೊಂಡು ತನ್ನ ನಿರ್ಧಾರವನ್ನು ತಿಳಿಸಬೇಕಾಗುತ್ತದೆ. ನಂತರ ಕ್ಲೇಮ್ ಇತ್ಯರ್ಥ ಅಧಿಕಾರಿಗೆ ಕ್ಲೇಮ್‌ಗಳನ್ನು ಮಂಜೂರು ಮಾಡಲು ಮತ್ತು ಮಂಜೂರಾತಿ ಆದೇಶವನ್ನು ಜನರಲ್ ಇನ್ಶುರೆನ್ಸ್ ಕೌನ್ಸಿಲ್‌ಗೆ ಕಳುಹಿಸಲು 15 ದಿನಗಳ ಕಾಲಾವಕಾಶ ಇರುತ್ತದೆ. ಈ ಸಂಬಂಧ ಮೋಟಾರ್ ಅಪಘಾತ ಕ್ಲೇಮ್ ನ್ಯಾಯಮಂಡಳಿ ಮತ್ತು ಸಾರಿಗೆ ಆಯುಕ್ತರಿಗೂ ಕ್ಲೇಮ್ ಇತ್ಯರ್ಥ ಅಧಿಕಾರಿ ಮಾಹಿತಿ ನೀಡುತ್ತಾರೆ. ತರುವಾಯ, ಜನರಲ್ ಇನ್ಶುರೆನ್ಸ್ ಕೌನ್ಸಿಲ್ 15 ದಿನಗಳ ಅವಧಿಯಲ್ಲಿ ಸಂತ್ರಸ್ತರಿಗೆ ಕ್ಲೇಮ್‌ಗೆ ಪರಿಹಾರದ ಮೊತ್ತದ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.
ಇನ್ನು ಪ್ರತಿ ಜಿಲ್ಲೆಯಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತಿ ತ್ರೈಮಾಸಿಕ ಸಭೆ ಸೇರಿ ಹಿಟ್ & ರನ್ ಪ್ರಕರಣಗಳ ಪರಿಹಾರ ಪ್ರಕ್ರಿಯೆ ಪರಾಮರ್ಶಿಸಬೇಕು. ಅಲ್ಲದೆ ಪ್ರತಿ ತ್ರೈಮಾಸಿಕ ವರದಿ ಹಾಗೂ ಮಾಸಿಕವಾರು ಸ್ವೀಕೃತ ಅರ್ಜಿ, ಪರಿಹಾರ ಮಂಜೂರಾತಿ, ಬಾಕಿ ವಿವರ ಸ್ಥಾಯಿ ಸಮಿತಿಗೆ ಸಲ್ಲಿಸಬೇಕಾಗುತ್ತದೆ ಎಂದು ಯೋಜನೆ ಕುರಿತು ಸಹಾಯಕ ಆಯುಕ್ತೆ ಸಾಹಿತ್ಯ ಮಾಹಿತಿ ನೀಡಿದ್ದಾರೆ.

