ನಮ್ಮ ದೇಹದ ಶ್ರೇಯಸ್ಸು ಕರುಳಿನ ಆರೋಗ್ಯದಿಂದಲೇ ಆರಂಭವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಸರಿಯಾದ ಜೀರ್ಣಕ್ರಿಯೆ ನಮ್ಮ ದೇಹದ ಸಮತೋಲನವನ್ನು ಕಾಪಾಡಿ ಶಕ್ತಿ, ಚೈತನ್ಯ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಕೆಲವು ಆಹಾರಗಳ ಕುರಿತು ತಿಳಿದುಕೊಳ್ಳೋಣ.
ಫೈಬರ್ – ಕರುಳಿನ ಆರೋಗ್ಯದ ಹೀರೋ
ನಾವು ತಿನ್ನುವ ಆಹಾರದಲ್ಲಿ ಫೈಬರ್ ಅಂಶ ತುಂಬಾ ಮುಖ್ಯ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಕರುಳಿನ ಚಲನವಲನ ಸರಾಗವಾಗಿರಲು ಇದು ನೆರವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸುವುದು ಕರುಳಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ.
ಹುರಿದ ಕಡಲೆ – ಚಿಕ್ಕದಾದರೂ ದೊಡ್ಡ ಲಾಭ
ಹುರಿದ ಕಡಲೆ ನಮ್ಮ ಊಟದ ನಂತರ ತಿನ್ನಲು ಅತ್ಯುತ್ತಮವಾದ ಸ್ನ್ಯಾಕ್ ಆಗಿದೆ. ಇದರಲ್ಲಿ ಫೈಬರ್ ಹಾಗೂ ಪ್ರೋಟೀನ್ ಎರಡೂ ದೊರೆಯುತ್ತವೆ. ಕಡಲೆಯಲ್ಲಿರುವ ಕರಗದ ನಾರು ಮಲದ ಪ್ರಮಾಣವನ್ನು ಹೆಚ್ಚಿಸಿ ಮಲಬದ್ಧತೆಯನ್ನು ತಡೆಗಟ್ಟುವಂತೆ ಮಾಡುತ್ತದೆ. ಕರುಳಿನ ಚಲನೆಯನ್ನು ವೇಗಗೊಳಿಸಿ ಸುಲಭವಾಗಿ ತ್ಯಾಜ್ಯ ವಿಸರ್ಜನೆಗೆ ಸಹಾಯ ಮಾಡುತ್ತದೆ.
ಕಪ್ಪು ಉದ್ದಿನ ಬೇಳೆ – ನೈಸರ್ಗಿಕ ಜೀರ್ಣಶಕ್ತಿ ವರ್ಧಕ
ಕಪ್ಪು ಉದ್ದಿನ ಬೇಳೆ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರವಾಗಿದೆ. ಇದು ಫೈಬರ್‌ಗಳಿಂದ ಸಮೃದ್ಧವಾಗಿದ್ದು ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಉದ್ದಿನ ಬೇಳೆಯಲ್ಲಿರುವ ನಾರು ಅಂಶ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಪೇರಳೆ – ಸರಳ ಹಣ್ಣು, ಶ್ರೇಷ್ಠ ಪ್ರಯೋಜನ
ಪೇರಳೆ ಎಲ್ಲರಿಗೂ ಲಭ್ಯವಾಗುವ ಹಣ್ಣು. ಇದರಲ್ಲಿ ಕರಗುವ ಮತ್ತು ಕರಗದ ಎರಡೂ ರೀತಿಯ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೆ ಒಂದು ಪೇರಳೆ ತಿಂದರೆ ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ.
ಚಿಯಾ ಬೀಜಗಳು – ಚಿಕ್ಕದಾದರೂ ಅದ್ಭುತ
ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಅಧಿಕವಾಗಿ ದೊರೆಯುತ್ತದೆ. ನೀರಿನೊಂದಿಗೆ ಸೇರಿ ಹೊಟ್ಟೆಯೊಳಗೆ ಜೆಲ್ ರಚನೆ ಮಾಡುತ್ತದೆ, ಇದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಆಹಾರ ಸರಿಯಾಗಿ ಹಜಮಾಗುತ್ತದೆ. ಈ ಬೀಜಗಳು ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ಹೊರಬರುವಂತೆ ಮಾಡುತ್ತವೆ.
ರಾಸ್ಪೆರಿ – ಕರುಳಿನ ಸ್ನೇಹಿತ ಹಣ್ಣು
ರಾಸ್ಪೆರಿ ಹಣ್ಣಿನಲ್ಲಿರುವ ಫೈಬರ್ ಕರುಳಿನ ಒಳಗಿನ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಈ ಸೂಕ್ಷ್ಮಜೀವಿಗಳು ದೇಹದೊಳಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇದರ ಪರಿಣಾಮವಾಗಿ ದೇಹದಲ್ಲಿ ಪೋಷಕಾಂಶಗಳ ಶೋಷಣೆ ಸುಧಾರಿಸುತ್ತದೆ.
ಕರುಳಿನ ಆರೋಗ್ಯ ಕಾಪಾಡುವುದು ದೀರ್ಘಕಾಲದ ಶಕ್ತಿಯ, ಸಂತೋಷದ ಮತ್ತು ಸಮತೋಲನದ ಗುಟ್ಟು. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಇಂತಹ ನೈಸರ್ಗಿಕ, ಫೈಬರ್‌ಯುಕ್ತ ಪದಾರ್ಥಗಳನ್ನು ಸೇರಿಸಿ, ಕರುಳಿನ ಆರೈಕೆಗೆ ವಿಶೇಷ ಗಮನ ನೀಡಿದರೆ ಉತ್ತಮ.
