- ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕಡಿಮೆಯಾದ ಮಳೆ ಮತ್ತೆ ತನ್ನ ಅಬ್ಬರ ತೋರಿಸಲು ಸಿದ್ಧವಾಗಿದೆ. ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಮುಂದಿನ ವಾರದಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 20) ಶಿವಮೊಗ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಬೆಳಗಿನ ವೇಳೆಯಿಂದಲೇ ಮೋಡ ಆವರಿಸಿಕೊಂಡು ಮಳೆ ಆರಂಭವಾಗಿದ್ದು, ಕೆಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿಯ ಸಹಿತ ಮಳೆ ಸುರಿಯುತ್ತಿದೆ.
ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 23ರಿಂದ 26ರವರೆಗೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ದಿನಪೂರ್ತಿ ಮಳೆ ಸುರಿಯಬಹುದು. ಇದೇ ವೇಳೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿಯೂ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.
ಅಕ್ಟೋಬರ್ 24ರಂದು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಸಹ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಧ್ಯಮ ಮಟ್ಟದ ಮಳೆಯಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಮಿಂಚು ಸಹ ಆಗಬಹುದು.
ಕರಾವಳಿ ಭಾಗಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸಹ ಸಲಹೆ ನೀಡಲಾಗಿದೆ, ಏಕೆಂದರೆ ಸಮುದ್ರದ ಗಾಳಿ 40 ರಿಂದ 50 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಸಾರ್ವಜನಿಕರಿಗೆ, ವಿಶೇಷವಾಗಿ ರೈತರಿಗೆ ಎಚ್ಚರಿಕೆ ನೀಡಿದೆ ಹೊಲಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಮತ್ತು ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಿ ಎಂದು ಎಚ್ಚರಿಕೆ ನೀಡಿದೆ.

