ಕ್ರೀಡಾಂಗಣದಲ್ಲಿ ರನ್‌ಗಳು ಮತ್ತು ವಿಕೆಟ್‌ಗಳ ಮೂಲಕ ಭಾರತದ ಹೆಮ್ಮೆ ಹೆಚ್ಚಿಸಿರುವ ರವೀಂದ್ರ ಜಡೇಜಾ, ಈ ಬಾರಿ ತಮ್ಮ ಪತ್ನಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ರಾಜಕೀಯ ವೇದಿಕೆಯಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಿವಾಬಾ ಜಡೇಜಾ ಈಗ ಗುಜರಾತ್ ರಾಜ್ಯದ ಸಚಿವರಾಗಿದ್ದು, ಈ ಸಂದರ್ಭದಲ್ಲಿ ಪತಿ ಜಡೇಜಾ ನೀಡಿದ ಸಂದೇಶ ಎಲ್ಲೆಡೆ ವೈರಲ್ ಆಗಿದೆ.
2022ರ ವಿಧಾನಸಭೆ ಚುನಾವಣೆಯಲ್ಲಿ ಜಾಮನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಜಯಗಳಿಸಿದ ರಿವಾಬಾ, ಇದೀಗ ಗುಜರಾತ್ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯಶಸ್ಸು ಕೇವಲ ರಾಜಕೀಯ ವಿಜಯವಲ್ಲ, ಅದು ಮಹಿಳಾ ನಾಯಕತ್ವದ ಶಕ್ತಿಗೆ ಮತ್ತೊಂದು ಉದಾಹರಣೆ ಎಂದೂ ಹೇಳಬಹುದು.
ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಪತಿಯಾದ ಭಾರತದ ಅಲ್‌ರೌಂಡರ್ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡರು. ಅವರು ತಮ್ಮ X ನಲ್ಲಿ ಬರೆದಿದ್ದು ಹೀಗೆ
“ನಿನ್ನ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ. ನೀನು ಯಾವ ಕ್ಷೇತ್ರದಲ್ಲಾದರೂ ಅದ್ಭುತ ಕೆಲಸ ಮಾಡುತ್ತೀಯ ಎಂಬುದು ನನ್ನ ನಂಬಿಕೆ, ನೀವು ಅನೇಕ ಜನರಿಗೆ ಪ್ರೇರಣೆಯಾಗುವಿರಿ ಎಂಬ ವಿಶ್ವಾಸ ನನಗೆ ಇದೆ. ಗುಜರಾತ್ ಸರ್ಕಾರದ ಸಚಿವೆಯಾಗಿರುವ ನಿಮಗೆ ಹಾರ್ದಿಕ ಶುಭಾಶಯಗಳು. ಜಯ ಹಿಂದ್!” ಎಂದು ಬರೆದಿದ್ದಾರೆ.
ಈ ಸಂದೇಶಕ್ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದರು. ಹಲವರು “ಈ ಜೋಡಿ ನಿಜಕ್ಕೂ ಪ್ರೇರಣೆಯಾದ ದಂಪತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ಕ್ರಿಕೆಟ್ ಮೈದಾನದಲ್ಲಿ ದೇಶಕ್ಕೆ ಗೌರವ ತಂದ ಜಾಡೇಜಾ, ತಮ್ಮ ಪತ್ನಿಯ ರಾಜಕೀಯ ಸಾಧನೆಗೆ ಹೆಮ್ಮೆ ಪಟ್ಟು ಅಭಿನಂದಿಸಿರುವುದು ಒಳ್ಳೆಯ ವಿಚಾರ. ಪರಸ್ಪರ ಪ್ರೋತ್ಸಾಹ ಮತ್ತು ಗೌರವದಿಂದ ಕೂಡಿದ ಈ ಕ್ಷಣ, ಕ್ರೀಡೆ ಮತ್ತು ರಾಜಕೀಯದ ನಡುವಿನ ಹೃದಯಸ್ಪರ್ಶಿ ಸೇತುವೆಯಂತೆ ಕಂಡುಬಂದಿದೆ.

