ವಿಶ್ವ ವಿಖ್ಯಾತ ಹಂಪಿಯ ಅದ್ಭುತ ವೈಭವವನ್ನ ನೇರವಾಗಿ ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದೀಗ ಸುಗಮ ಪ್ರಯಾಣದ ದಾರಿ ತೆರೆದಿದೆ. ಕರ್ನಾಟಕದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಕಣಜವಾದ ವಿಜಯನಗರ ಸಾಮ್ರಾಜ್ಯದ ಪುರಾತನ ರಾಜಧಾನಿ ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಂಪಿಗೆ ನೇರ ವಿಮಾನ ಸಂಪರ್ಕದ ಕೊರತೆ ಪ್ರವಾಸೋದ್ಯಮದ ಬೆಳವಣಿಗೆಗೆ ಅಡ್ಡಿಯಾಯಿತು. ಇದೀಗ ಆ ಅಡ್ಡಿ ದೂರವಾಗಲಿದೆ.
ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಹಂಪಿ ಬೆಂಗಳೂರು ವಿಮಾನಯಾನ ಸೇವೆಗೆ ಮತ್ತೆ ಜೀವ ದೊರೆತಿದೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ (Star Air) ನವೆಂಬರ್ 1ರಿಂದ ಬೆಂಗಳೂರು–ವಿದ್ಯಾನಗರ–ಬೆಂಗಳೂರು ಮಾರ್ಗದಲ್ಲಿ ದೈನಂದಿನ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಈ ಹೆಜ್ಜೆ ಕೇವಲ ಪ್ರವಾಸಿಗರಿಗಲ್ಲ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೈಗಾರಿಕಾ ವಲಯಕ್ಕೂ ಸಂಜೀವನಿಯಾಗಲಿದೆ.
ವಿಮಾನ ಸೇವೆಯ ಸಂಪೂರ್ಣ ವೇಳಾಪಟ್ಟಿ:
ಬೆಳಗ್ಗೆ 7:50 ಕ್ಕೆ: ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುತ್ತದೆ.
ಬೆಳಗ್ಗೆ 8:40 ಕ್ಕೆ: ವಿದ್ಯಾನಗರ ವಿಮಾನ ನಿಲ್ದಾಣ (ಹಂಪಿಗೆ ಸಮೀಪ) ತಲುಪುತ್ತದೆ.
ಕೇವಲ 30 ನಿಮಿಷಗಳ ವಿರಾಮದ ಬಳಿಕ,
ಬೆಳಗ್ಗೆ 9:10 ಕ್ಕೆ: ವಿದ್ಯಾನಗರದಿಂದ ವಿಮಾನ ಮರಳಿ ಹೊರಡುತ್ತದೆ.
ಬೆಳಗ್ಗೆ 10:00 ಕ್ಕೆ: ಬೆಂಗಳೂರು ತಲುಪುತ್ತದೆ.
ಈ ವೇಗದ ಮತ್ತು ಅನುಕೂಲಕರ ವೇಳಾಪಟ್ಟಿ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹಾಗೂ ವ್ಯಾಪಾರ ವಹಿವಾಟುಗಳ ನಿಮಿತ್ತ ಆಗಮಿಸುವವರಿಗೆ ಅತ್ಯಂತ ಉಪಯುಕ್ತ.
ಹಂಪಿಗೆ ತಲುಪುವ ಸುಗಮ ಮಾರ್ಗ:
ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಇದುವರೆಗೂ ಹಂಪಿಗೆ ಪ್ರಯಾಣಿಕರು 150 ಕಿಲೋಮೀಟರ್ ದೂರದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಸಬೇಕಾಗುತ್ತಿತ್ತು. ಹೊಸ ವಿಮಾನ ಸೇವೆಯಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡನ್ನೂ ಉಳಿತಾಯ ಮಾಡಬಹುದು.
ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ:
ಹಂಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕಾ ವಲಯವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ JSW ಉಕ್ಕು ಕಾರ್ಖಾನೆ ಹಾಗೂ ಅನೇಕ ಮಧ್ಯಮ ಮಟ್ಟದ ಉದ್ಯಮಗಳು ಇಲ್ಲಿವೆ. ಹೀಗಾಗಿ, ಸ್ಟಾರ್ ಏರ್‌ನ ಈ ಹೊಸ ವಿಮಾನ ಮಾರ್ಗವು ಉದ್ಯಮಿಗಳು, ತಂತ್ರಜ್ಞರು ಮತ್ತು ವ್ಯಾಪಾರಿಗಳಿಗೆ ವೇಗದ ಸಂಚಾರದ ಸೌಲಭ್ಯ ಒದಗಿಸಲಿದೆ.
ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಸೇವೆ ಮಹತ್ವದ್ದಾಗಿದೆ. ಸ್ಥಳೀಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟ್ಯಾಕ್ಸಿ ಸೇವೆಗಳು ಹಾಗೂ ಪ್ರವಾಸಿ ಮಾರ್ಗದರ್ಶಕರು ಇದರ ಪ್ರಯೋಜನವನ್ನು ಅನುಭವಿಸಲಿದ್ದಾರೆ.
ಇನ್ನು, ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘದ ಕಾರ್ಯದರ್ಶಿಯೊಬ್ಬರು ಹೇಳಿವ ಪ್ರಕಾರ ಈ ಅತ್ಯಂತ ಅಗತ್ಯವಾದ ವಿಮಾನ ಸೇವೆಯನ್ನ ಮರುಪ್ರಾರಂಭಿಸಿದಕ್ಕಾಗಿ ನಾವು ಸ್ಟಾರ್ ಏರ್‌ಗೆ ಕೃತಜ್ಞರಾಗಿದ್ದೇವೆ. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲಿನ ಅವಲಂಬನೆ ತಪ್ಪಲಿದ್ದು, ಪ್ರವಾಸಿಗರಿಗೆ ಹಂಪಿ ಇನ್ನಷ್ಟು ಹತ್ತಿರವಾಗಲಿದೆ.
ಹಂಪಿ ಕೇವಲ ಪುರಾತನ ಅವಶೇಷಗಳ ತಾಣವಲ್ಲ, ಅದು ನಮ್ಮ ಸಂಸ್ಕೃತಿಯ ಜೀವಂತ ಚಿಹ್ನೆ. ಪ್ರವಾಸಿಗರು ಈಗ ವೇಗವಾಗಿ ಈ ಐತಿಹಾಸಿಕ ನಾಡಿಗೆ ತಲುಪುವ ಅವಕಾಶವನ್ನು ಪಡೆಯಲಿದ್ದಾರೆ. ಸ್ಟಾರ್ ಏರ್‌ನ ಈ ಹೊಸ ಸೇವೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

