ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಈಗ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಲಿದೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಿಲಯನ್ಸ್ ಜಿಯೋ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಜೋಡಿಸಿ ಹೊಸ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಮುಂದಾಗಿವೆ. ದೇಶದಾದ್ಯಂತ 4G ಮತ್ತು 5G ನೆಟ್‌ವರ್ಕ್ ಬಳಸುವ ಜಿಯೋ ಗ್ರಾಹಕರಿಗೆ, ತಮ್ಮ ವಾಹನವು ಅಪಾಯಕಾರಿ ಪ್ರದೇಶವನ್ನು ಸಮೀಪಿಸಿದ ಕ್ಷಣದಲ್ಲೇ ನೇರವಾಗಿ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ತಲುಪುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ ಒಂದೇ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರು ಅಪಾಯದ ಪ್ರದೇಶಕ್ಕೆ ತಲುಪುವ ಮುಂಚಿತವಾಗಿಯೇ ಮಾಹಿತಿ ಪಡೆದು ಎಚ್ಚರಿಕೆಯಿಂದ ಸಾಗಲು ಅವಕಾಶ ಒದಗಿಸುವುದು. ಹೆದ್ದಾರಿಯ ಕೆಲವೆಡೆ ದಟ್ಟ ಮಂಜು ಆವರಿಸಿರಬಹುದು, ಕೆಲವೆಡೆ ಜಾನುವಾರುಗಳು ರಸ್ತೆ ದಾಟುವುದು ಸಾಮಾನ್ಯ, ಕೆಲವು ಭಾಗಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ, ಮತ್ತೆ ಕೆಲವೊಂದು ಮಾರ್ಗಗಳಲ್ಲಿ ಧಿಡೀರ್ ತಿರುವುಗಳು ಮತ್ತು ಡೈವರ್ಶನ್‌ಗಳು ಚಾಲಕರನ್ನು ಗೊಂದಲಕ್ಕೊಳಪಡಿಸುತ್ತವೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ, ಜಿಯೋ ಟವರ್‌ಗಳ ಮೂಲಕ ನೇರವಾಗಿ ಆ ಪ್ರದೇಶದ ಮಾಹಿತಿ ಗ್ರಾಹಕರ ಫೋನ್‌ಗೆ ತಲುಪಲಿದೆ.
ಈ ಎಚ್ಚರಿಕೆಗಳು ಎಸ್‌ಎಂಎಸ್, ವಾಟ್ಸಾಪ್ ಸಂದೇಶ ಮತ್ತು ಹೈ ಪ್ರಿಯಾರಿಟಿ ವಾಯ್ಸ್ ಕಾಲ್‌ಗಳ ರೂಪದಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವೆಂದರೆ, ನೆಟ್‌ವರ್ಕ್ ಸಮಸ್ಯೆಯಿರುವ ಪ್ರದೇಶಗಳಲ್ಲಿದ್ದರೂ ಈ ಅಲರ್ಟ್‌ಗಳು ತಲುಪುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎನ್ನುವುದು ಗಮನಾರ್ಹ ಸಂಗತಿ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಈ ವ್ಯವಸ್ಥೆಗೆ ಹೊಸ ಹಾರ್ಡ್‌ವೇರ್ ನಿರ್ಮಾಣದ ಅಗತ್ಯವಿಲ್ಲ; ಜಿಯೋ ಈಗಾಗಲೇ ಹೊಂದಿರುವ ಟೆಲಿಕಾಂ ಟವರ್‌ಗಳ ನೆಟ್‌ವರ್ಕ್‌ನನ್ನೇ ಬಳಸಲಾಗುತ್ತಿದೆ. ಜೊತೆಗೆ ‘ರಾಜಮಾರ್ಗಯಾತ್ರಾ’ ಆಪ್ ಮತ್ತು 1033 ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ಕೂಡ ಈ ಅಲರ್ಟ್‌ಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ.
ತೊಂದರೆಗಳು ಹೆಚ್ಚು ಇರುವ ಹೆದ್ದಾರಿ ಸೆಕ್ಷನ್‌ಗಳಲ್ಲಿ ಸಂಚರಿಸುವ ಎಲ್ಲ ಜಿಯೋ ಬಳಕೆದಾರರಿಗೆ ಸ್ವಯಂಚಾಲಿತವಾಗಿ ಈ ಎಚ್ಚರಿಕೆಗಳು ತಲುಪುತ್ತವೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಜಿಯೋ ಬಳಕೆ ಮಾಡುತ್ತಿರುವುದರಿಂದ, ಈ ವ್ಯವಸ್ಥೆ ವ್ಯಾಪಕ ಮಟ್ಟದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಮೊದಲ ಹಂತದಲ್ಲಿ ಆಯ್ದ ಹೆದ್ದಾರಿಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆರಂಭಿಸಿ, ನಂತರ ಪೂರ್ಣ ದೇಶಕ್ಕೆ ವಿಸ್ತರಿಸುವ ಯೋಜನೆ ಸಚಿವಾಲಯದ ಬಳಿ ಇದೆ ಎಂದು ತಿಳಿದುಬಂದಿದೆ.
ದೆಶದ ಹೆದ್ದಾರಿಗಳನ್ನು ಸುರಕ್ಷಿತಗೊಳಿಸಲು ಟೆಲಿಕಾಂ ತಂತ್ರಜ್ಞಾನವನ್ನು ಈ ರೀತಿ ಉಪಯೋಗಿಸುವುದು ಹೊಸ ಪ್ರಯತ್ನ ಎನ್ನಬಹುದು. ಚಾಲಕರಿಗೆ ನೇರವಾಗಿ ಎಚ್ಚರಿಕೆ ನೀಡುವ ಈ ಕ್ರಮ, ದೂರ ಪ್ರಯಾಣ ಮಾಡುವವರಿಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡಲಿದೆ. ಜಿಯೋ–NHAI ಒಟ್ಟಿಗೆ ಹೆದ್ದಾರಿ ಸುರಕ್ಷತೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಜ್ಜಾಗಿವೆ ಎನ್ನಬಹುದು
