
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದ ಒಂದು ಘಟನೆ ಈಗ ಮಾನವೀಯ ಪ್ರಶ್ನೆಗಳನ್ನು ಎತ್ತಿದೆ. ಮನೆ ಕಟ್ಟುವ ಕನಸಿನಿಂದ ಅಡಿಪಾಯ ತೋಡಿದ ಬಡ ಕುಟುಂಬಕ್ಕೆ ಅಚ್ಚರಿಯೆಂಬಂತೆ ಚಿನ್ನದ ನಿಧಿ ಸಿಕ್ಕಿತು. ಆದರೆ ಆ ಚಿನ್ನ ಅವರ ಬದುಕಿಗೆ ಬೆಳಕು ನೀಡುವ ಬದಲು, ಕುಟುಂಬವನ್ನು ಬೀದಿಗೆ ತಳ್ಳುವ ಪರಿಸ್ಥಿತಿ ನಿರ್ಮಿಸಿದೆ.
ಲಕ್ಕುಂಡಿಯ ಗಂಗವ್ವ ರಿತ್ತಿ ಅವರ ಕುಟುಂಬ ಹಲವು ಕಷ್ಟಗಳ ನಡುವೆ ಹೊಲವನ್ನು ಮಾರಿಕೊಂಡು ಸಣ್ಣ ಮನೆಯನ್ನು ಕಟ್ಟಲು ಮುಂದಾಗಿತ್ತು. ಅಡಿಪಾಯ ಅಗೆಯುವ ವೇಳೆ ಅವರ ಪುತ್ರ ಪ್ರಜ್ವಲ್‌ಗೆ ಮಣ್ಣಿನೊಳಗೆ ತಂಬಿಗೆಯೊಂದು ಸಿಕ್ಕಿತು. ಅದರಲ್ಲಿ ಕೈಗಡಗಗಳು, ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಸುಮಾರು 470 ಗ್ರಾಂ ತೂಕದ ಚಿನ್ನಾಭರಣಗಳು ಇದ್ದವು. ವಿಷಯ ತಿಳಿದ ತಕ್ಷಣ ಕುಟುಂಬ ಯಾವುದೇ ಲೋಭಕ್ಕೆ ಒಳಗಾಗದೆ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿತು. ಬಳಿಕ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಪಂಚನಾಮೆ ನಡೆಸಿ ಚಿನ್ನವನ್ನು ಸರ್ಕಾರದ ವಶಕ್ಕೆ ಪಡೆದರು.
ಇಲ್ಲಿಯವರೆಗೆ ಇದು ಪ್ರಾಮಾಣಿಕತೆಯ ಕಥೆಯಂತೆ ಕಾಣಿಸಿದರೂ, ನಂತರ ನಡೆದ ಬೆಳವಣಿಗೆ ಕುಟುಂಬಕ್ಕೆ ಆಘಾತ ತಂದಿತು. ನಿಧಿ ಪತ್ತೆಯಾದ ಜಾಗವನ್ನು ಪ್ರಾಚ್ಯಾವಶೇಷಗಳ ದೃಷ್ಟಿಯಿಂದ ‘ನಿಷೇಧಿತ ಪ್ರದೇಶ’ ಎಂದು ಘೋಷಿಸಲಾಯಿತು. ಇದರಿಂದ ಅರ್ಧಕ್ಕೆ ನಿಂತಿದ್ದ ಮನೆ ನಿರ್ಮಾಣಕ್ಕೆ ತಕ್ಷಣವೇ ಬ್ರೇಕ್ ಬಿತ್ತು. ಆ ಜಾಗದಲ್ಲಿ ವಾಸಿಸುವುದಕ್ಕೂ ಅವಕಾಶವಿಲ್ಲದಂತಾಗಿ, ತಾಯಿ ಮತ್ತು ಚಿಕ್ಕ ಮಗನಿರುವ ಈ ಕುಟುಂಬ ಇಂದು ಅಲೆಮಾರಿಯ ಬದುಕಿಗೆ ತಳ್ಳಲ್ಪಟ್ಟಿದೆ.
ಮನೆಯ ಯಜಮಾನ ಈಗಾಗಲೇ ನಿಧನರಾಗಿದ್ದು, ಕುಟುಂಬಕ್ಕೆ ಆಧಾರವೇ ಇಲ್ಲ. ಕೆಲ ದಿನಗಳು ಸಂಬಂಧಿಕರ ಮನೆಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆಯುತ್ತಿದ್ದಾರೆ. “ಚಿನ್ನ ನಮಗೆ ಬೇಡ. ಬದುಕಲು ಒಂದು ಮನೆ ಬೇಕು” ಎಂಬ ಅವರ ಮಾತುಗಳು ಈಗ ಲಕ್ಕುಂಡಿಯಲ್ಲಿ ಪ್ರತಿಧ್ವನಿಯಾಗಿವೆ. ಮಗನ ಶಿಕ್ಷಣ, ಮುಂದಿನ ಬದುಕು ಎಲ್ಲವೂ ಅನಿಶ್ಚಿತವಾಗಿದೆ ಎಂಬ ಆತಂಕ ತಾಯಿಯನ್ನು ಕಾಡುತ್ತಿದೆ.
ಗ್ರಾಮಸ್ಥರೂ ಈ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಪ್ರಾಮಾಣಿಕತೆ ತೋರಿದ ಕುಟುಂಬಕ್ಕೆ ಶಿಕ್ಷೆಯಂತೆ ಈ ಪರಿಸ್ಥಿತಿ ಬರಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ, ಈ ಕುಟುಂಬಕ್ಕೆ ಪರ್ಯಾಯ ನಿವೇಶನ ಅಥವಾ ಮನೆ ನಿರ್ಮಿಸಿಕೊಡಬೇಕು ಎಂಬುದು ಅವರ ಒತ್ತಾಯ.
ಇತ್ತ, ಚಿನ್ನದ ತಂಬಿಗೆ ಪತ್ತೆಯಾದ ಘಟನೆ ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನೂ ಮತ್ತೆ ನೆನಪಿಸಿದೆ. ಈ ಪ್ರದೇಶದಲ್ಲಿ ಹಿಂದೆಯೂ ಹಲವು ಪುರಾತನ ಅವಶೇಷಗಳು ಪತ್ತೆಯಾಗಿವೆ. ಈಗ ಸಿಕ್ಕ ನಿಧಿ ಲಕ್ಕುಂಡಿಯ ಶ್ರೀಮಂತ ಇತಿಹಾಸಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿರುವ ಈ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಖನನ ನಡೆಯುವ ಸಾಧ್ಯತೆ ಇದೆ. ತಂಬಿಗೆ ಯಾವ ಕಾಲಘಟ್ಟಕ್ಕೆ ಸೇರಿದ್ದು ಎಂಬುದು ಇತಿಹಾಸ ತಜ್ಞರ ಅಧ್ಯಯನದ ಬಳಿಕವೇ ಗೊತ್ತಾಗಲಿದೆ.
ಆದರೆ ಇತಿಹಾಸದ ಹೊಳಪಿನ ನಡುವೆ, ಒಂದು ಬಡ ಕುಟುಂಬದ ಬದುಕು ಕತ್ತಲಲ್ಲಿ ಮುಳುಗಿದೆ. ಚಿನ್ನ ಸಿಕ್ಕರೂ ನೆಮ್ಮದಿ ಸಿಗದೆ, ಆಶ್ರಯಕ್ಕಾಗಿ ಸರ್ಕಾರದತ್ತ ನೋಡುವ ಈ ಕುಟುಂಬದ ಕಥೆ ಈಗ ಲಕ್ಕುಂಡಿಯ ನೋವಿನ ಪ್ರತಿಬಿಂಬವಾಗಿದೆ.
