ಅಡಿಲೇಡ್ : ಅಡಿಲೇಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಸೋಲು ಕಂಡಿದೆ. ಮೊದಲ ಏಕದಿನದಲ್ಲೇ ಸೋಲು ಕಂಡಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲೂ ಆಸ್ಟ್ರೇಲಿಯಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ದಾಳಿಗೆ ತತ್ತರಿಸಿ 3 ಪಂದ್ಯಗಳ ಸರಣಿಯನ್ನು 0–2 ಅಂತರದಿಂದ ಕಳೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್‌ಗಳನ್ನು ಪೇರಿಸಿತು. ಆದರೆ ಗುರಿ ಬೆನ್ನಟ್ಟಿದ ಆತಿಥೇಯ ಆಸ್ಟ್ರೇಲಿಯಾ ತಂಡ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭಾರತದ ಇನ್ನಿಂಗ್ಸ್ ಆರಂಭದಿಂದಲೇ ಅಸ್ಥಿರವಾಗಿತ್ತು. ನಾಯಕ ಶುಭಮನ್ ಗಿಲ್ ಕೇವಲ 9 ರನ್ ಗಳಿಗೇ ವಿಕೆಟ್ ಕಳೆದುಕೊಂಡರೆ, ವಿರಾಟ್ ಕೊಹ್ಲಿ ನಿರಂತರ ಎರಡನೇ ಬಾರಿಗೆ ಸೊನ್ನೆಗೆ ಔಟಾದರು. ಆರಂಭಿಕ ಆಘಾತದ ನಂತರ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ ಗೆ 118 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ನಿಶ್ಚಿತ ಭದ್ರತೆ ನೀಡಿದರು. ರೋಹಿತ್ 81 ರನ್ ಗಳಿಸಿದರು, ಅಯ್ಯರ್ 63 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಕೆಎಲ್ ರಾಹುಲ್ ಮತ್ತು ನಿತೀಶ್ ರೆಡ್ಡಿ ನಿರೀಕ್ಷೆಯ ಮಟ್ಟಕ್ಕೆ ಆಡಲಿಲ್ಲ.
ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಕ್ಸೇವಿಯರ್ ಬಾರ್ಲೆಟ್ ಮತ್ತು ಸ್ಪಿನ್ನರ್ ಆ್ಯಡಂ ಝಂಪಾ ಅವರು ಭರ್ಜರಿ ಬೌಲಿಂಗ್ ತೋರಿದರು. ಝಂಪಾ ಅವರ ಸ್ಪಿನ್ ಬಲೆಗೆ ಭಾರತೀಯ ಬ್ಯಾಟರ್‌ಗಳು ತತ್ತರಿಸಿದರು. ಬಾರ್ಲೆಟ್ ಆರಂಭದಲ್ಲಿ ಭಾರತದ ಟಾಪ್ ಆರ್ಡರ್‌ನ ಮೂವರು ಆಟಗಾರರನ್ನು ಪೆವಿಲಿಯನ್ ಕಡೆ ಮುಖ ಮಾಡುವಂತೆ ಮಾಡಿದರು.
ಆಸ್ಟ್ರೇಲಿಯಾದ ಪರ ಬ್ಯಾಟಿಂಗ್ ಮಾಡಲು ಇಳಿದವರು ಪ್ರಾರಂಭದಲ್ಲಿ ನಿಧಾನಗತಿಯಿಂದ ಆಡಿದರು. ನಾಯಕ ಮಿಚೆಲ್ ಮಾರ್ಷ್ (11) ಮತ್ತು ಟ್ರಾವಿಸ್ ಹೆಡ್ (28) ಬೇಗನೆ ಔಟಾದರೂ, ಮ್ಯಾಥ್ಯೂ ಶಾರ್ಟ್ (74) ಮತ್ತು ಅಂತಿಮ ಹಂತದಲ್ಲಿ ಅಜೇಯ ಅರ್ಧಶತಕ ಬಾರಿಸಿದ ಕೂಪರ್ ಕಾನೊಲಿ (61*) ಅವರು ಪಂದ್ಯವನ್ನು ಆಸ್ಟ್ರೇಲಿಯಾ ಕಡೆ ತಳ್ಳಿದರು. ಇವರ ತಾಳ್ಮೆಯ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ಭಾರತದಿಂದ 2 ವಿಕೆಟ್ ಗಳ ರೋಮಾಂಚಕ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು 2–0 ಅಂತರದಿಂದ ಗೆದ್ದು ಭಾರತಕ್ಕೆ ನಿರಾಶೆ ಮೂಡಿಸಿದೆ. ವೇಗಕ್ಕೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಸ್ಪಿನ್ನರ್ ಝಂಪಾ ಅವರ ಬುದ್ಧಿವಂತ ಬೌಲಿಂಗ್, ಹಾಗೂ ಕಾನೊಲಿ–ಶಾರ್ಟ್ ಜೋಡಿಯ ಜಾಣ್ಮೆಯ ಬ್ಯಾಟಿಂಗ್ ಆಸ್ಟ್ರೇಲಿಯಾ ಗೆಲುವಿನ ಪ್ರಮುಖ ಅಸ್ತ್ರಗಳಾದವು.

