ಗುರುಮಠಕಲ್: ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಹಾಗೂ ಹಬ್ಬಗಳನ್ನು ಶಾಂತಿಯುತವಾಗಿ ಸಂಭ್ರಮಿಸಿ ಆಚರಿಸಿ ಎಂದು ಗುರುಮಠಕಲ್ ಪಿ. ಐ. ವೀರಣ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಪಸ್ಪುಲ್ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಊರಿನ ಮುಖಂಡರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಿ ಕಾನೂನಿನ ಸೂಚನೆಗಳನ್ನು ಅವರಿಗೆ ತಿಳಿಸಿದರು.
ನಶೆ ಮುಕ್ತ ಭರತದಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ ಎಂದರು.
ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಊರಿನ ಮುಖಂಡರುಗಳು ಹೆಚ್ಚಿನ ಜಾಗೃತೆ ವಹಿಸಿ ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಲು ಸೂಚಿಸಿದರು.
ಹಬ್ಬಗಳು ನಮ್ಮಲ್ಲಿ ಸಡಗರ ಸಂಭ್ರಮ ಹೆಚ್ಚಿಸಿ ಸೌಹಾರ್ದ ಬೆಳೆಸುತ್ತವೆ. ಆದರೆ ಕೆಲವರ ಅತಿರೇಕತನದಿಂದ ಸೌಹಾರ್ದಕ್ಕೆ ಪೆಟ್ಟು ಬೀಳುತ್ತದೆ. ಅಂತಹ ಅವಕಾಶಕ್ಕೆ ಯಾವುದೇ ಸಂಘಟನೆಯವರು ಅವಕಾಶ ನೀಡದೇ ಕಾನೂನು ರೀತಿ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆಗಾಗಿ ಸ್ಥಳೀಯ ಆಡಳಿತ, ಜೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವೆಂದರು.

