ಅರಣ್ಯಭೂಮಿಯ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಮಿತಿ ವಿಧಿಸುವಂತಹ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2ರ ಪ್ರಕಾರ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಅರಣ್ಯಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಸೇರಿದಂತೆ ಅರಣ್ಯೇತರ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾನೂನಿಗೆ ವಿರುದ್ಧವಾಗಿ ನೀಡಲಾದ ಯಾವುದೇ ಗುತ್ತಿಗೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಅದನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಅರಣ್ಯಭೂಮಿಯ ಮೇಲಿನ ಗುತ್ತಿಗೆಯನ್ನು ಮುಂದುವರಿಸಲು ಸಹಕಾರಿ ಸಂಘಕ್ಕೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ನ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ. ಅರಣ್ಯಭೂಮಿಯನ್ನು ಕೃಷಿ ಉದ್ದೇಶಗಳಿಗೆ ನೀಡುವುದೇ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ವಿರುದ್ಧ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಷ್ಟೇ ಅಲ್ಲದೆ, ಹಾನಿಗೊಳಗಾದ ಅರಣ್ಯಭೂಮಿಯನ್ನು ಪುನಃ ಹಸಿರುಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯ ಅರಣ್ಯ ಇಲಾಖೆಗೆ ನೀಡಿದ ಸುಪ್ರೀಂಕೋರ್ಟ್, ಹನ್ನೆರಡು ತಿಂಗಳ ಒಳಗಾಗಿ ಸ್ಥಳೀಯ ಜಾತಿಯ ಮರಗಳು ಹಾಗೂ ಸಸ್ಯಗಳನ್ನು ನೆಡುವ ಮೂಲಕ ಭೂಮಿಯನ್ನು ಮೂಲ ಸ್ಥಿತಿಗೆ ತರುವಂತೆ ನಿರ್ದೇಶನ ನೀಡಿದೆ.
ಈ ಪ್ರಕರಣ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿ ಇರುವ ಒಟ್ಟು 134 ಎಕರೆ 6 ಗುಂಟೆ ಅರಣ್ಯಭೂಮಿಗೆ ಸಂಬಂಧಿಸಿದೆ. 1976ರ ಜೂನ್ 30ರಂದು ರಾಜ್ಯ ಸರ್ಕಾರವು ಈ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಹತ್ತು ವರ್ಷಗಳ ಗುತ್ತಿಗೆಯ ಮೇಲೆ ಒಂದು ಸಹಕಾರಿ ಸಂಘಕ್ಕೆ ನೀಡಿತ್ತು. ಗುತ್ತಿಗೆ ಅವಧಿಯಲ್ಲಿ ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯನ್ನು ಕೃಷಿಗೆ ಬಳಸಿದ್ದರು.
ಗುತ್ತಿಗೆ ಅವಧಿ ಮುಗಿದ ನಂತರ, ರಾಜ್ಯ ಸರ್ಕಾರವು ಅದನ್ನು ವಿಸ್ತರಿಸಲು ನಿರಾಕರಿಸಿ, 1985ರ ಮಾರ್ಚ್ 13ರಂದು ಗುತ್ತಿಗೆಯನ್ನು ರದ್ದುಗೊಳಿಸಿತು. ಇದನ್ನು ಪ್ರಶ್ನಿಸಿ ಸಹಕಾರಿ ಸಂಘವು 1985 ಮತ್ತು 1987ರಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ ಆಗ ಹೈಕೋರ್ಟ್ ಅವುಗಳನ್ನು ವಜಾಗೊಳಿಸಿತ್ತು. ನಂತರದ ಹಂತದಲ್ಲಿ ಹೈಕೋರ್ಟ್ ನೀಡಿದ್ದ ಅನುಕೂಲಕರ ಆದೇಶವನ್ನು ಇದೀಗ ಸುಪ್ರೀಂಕೋರ್ಟ್ ರದ್ದುಗೊಳಿಸುವ ಮೂಲಕ ಅರಣ್ಯ ಸಂರಕ್ಷಣೆಗೆ ಬಲವಾದ ಸಂದೇಶ ನೀಡಿದೆ.
ಈ ತೀರ್ಪು ದೇಶದಾದ್ಯಂತ ಅರಣ್ಯಭೂಮಿಯ ದುರುಪಯೋಗ ತಡೆಯುವಲ್ಲಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ದಿಕ್ಕು ತೋರಿಸುವುದಾಗಿ ಪರಿಗಣಿಸಲಾಗಿದೆ.
