ಯಾದಗಿರಿ: ಗಾಂಧಿ ನಗರ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳು ಹಿಡಿದು ಹೊಡೆದಾಟ ನಡಿಸಿದ ಸಂಬಂಧ ಇಬ್ಬರನ್ನು ಬಂಧಿಸಿ, 25 ಆರೋಪಿಗಳ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈಯಲ್ಲಿ ತಲ್ವಾರ್, ಚಾಕು, ಕಲ್ಲು, ಇಟ್ಟಿಗೆ, ಕಟ್ಟಿಗೆಗಳನ್ನು ಹಿಡಿದು ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಎರಡೂ ಕಡೆಯವರು ದೂರು– ಪ್ರತಿದೂರು ದಾಖಲಿಸಿದ್ದಾರೆ. ತೇಜರಾಜ್ ರಾಠೋಡ (46) ಹಾಗೂ ರಮೇಶ ದೇವುಜಿ ರಾಠೋಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಮೇಶ ದೇವುಜಿ ನೀಡಿದ ದೂರಿನ ಅನ್ವಯ ತೇಜರಾಜ್, ಶಶಿ, ಮೋನು, ಮಿಥುನ್, ಬಾಬು ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಶಿಕುಮಾರ ತೇಜರಾಜ್ ನೀಡಿದ ಪ್ರತಿ ದೂರಿನ ಪ್ರಕಾರ ರಮೇಶ, ಕಲಾವತಿ, ಲಕ್ಷ್ಮಿಬಾಯಿ, ಅಂಬರೇಶ, ಅರ್ಜುನ್ ಸೇರಿ 14 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

