ಮುದ್ದೇಬಿಹಾಳ:- ತಾಲ್ಲೂಕಿನ ಚಿಕ್ಕಬಿಜೂರ ಗ್ರಾಮದ ರೈತ ಶಿವಪುತ್ರಪ್ಪ ಯಮನಪ್ಪ ಹಾಲವರ ಹಾಗೂ ಅವರ ಕುಟುಂಬ, ತಮ್ಮ ಜಮೀನಿಗೆ ವರ್ಷಗಳಿಂದ ಬಳಕೆಯಲ್ಲಿರುವ ದಾರಿಗಳನ್ನು ವ್ಯವಸಾಯೇತರ ಚಟುವಟಿಕೆಗಳಿಗೆ ಮುಂದುವರಿಸಿಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಕಿರ್ತಿ ಚಾಲಕ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.
ಚಿಕ್ಕಬಿಜೂರ ಗ್ರಾಮದಲ್ಲಿರುವ ತಮ್ಮ ಜಮೀನಿನ ರಿ.ಸ.ನಂ. 74/1ರಲ್ಲಿ ಒಟ್ಟು 4 ಎಕರೆ ವಿಸ್ತೀರ್ಣವಿದ್ದು, ಅದರ ಉತ್ತರ ಭಾಗದ 2 ಎಕರೆ ಜಮೀನನ್ನು ಈಗಾಗಲೇ ಉಪಗ್ರಾಮ ಕಂದಾಯಕ್ಕೆ ಒಪ್ಪಿಸಲಾಗಿದ್ದು, ಪಹಣಿಯಲ್ಲೂ ದಾಖಲಾಗಿರುವುದಾಗಿ ಮನವಿಯಲ್ಲಿ ವಿವರಿಸಲಾಗಿದೆ. ಉಳಿದ ದಕ್ಷಿಣ ಭಾಗದ 2 ಎಕರೆ ಜಮೀನಿಗೆ ಪ್ರವೇಶಿಸಲು ಇತಿಹಾಸದಿಂದಲೂ ಎರಡು ದಾರಿಗಳೇ ಇರುವುದಾಗಿ ರೈತ ಕುಟುಂಬ ಸ್ಪಷ್ಟಪಡಿಸಿದೆ.
ಒಂದು ದಾರಿ ಖಾದಿರಸಾಬ ಬಡೇಸಾಬ ನದಾಫ ಅವರ ಮನೆಯ ಮಗ್ಗುಲಿನಿಂದ ಹಾದು ಹೋಗುವ ಸುಮಾರು 20 ಅಡಿ ಅಗಲದ ದಾರಿಯಾಗಿದ್ದು, ಇನ್ನೊಂದು ದಾರಿ ರಾಮಣ್ಣ ನಿಂಗಪ್ಪ ನಂದ್ಯಾಳ ಹೊಲ ಹಾಗೂ ಉಮಾಶ್ರೀ ಶರಣಪ್ಪ ನಂದ್ಯಾಳ ಅವರ ಮನೆಯ ಪಕ್ಕದಿಂದ ಸಾಗುವ ಸುಮಾರು 25 ಅಡಿ ಅಗಲದ ದಾರಿಯಾಗಿದೆ. ಈ ಎರಡನೇ ದಾರಿಯಲ್ಲಿ ಮಳೆಗಾಲದ ಹೆಚ್ಚುವರಿ ನೀರು ಹರಿದು ಹೋಗುವ ಚರಂಡಿಯೂ ಸೇರಿದೆ ಎಂದು ತಿಳಿಸಿದ್ದಾರೆ.
ಈ ಎರಡು ಮಾರ್ಗಗಳನ್ನೇ ತಮ್ಮ ಜಮೀನಿಗೆ ವ್ಯವಸಾಯೇತರ ಚಟುವಟಿಕೆಗಳಿಗಾಗಿ ಬಳಸಿಕೊಂಡು ಬರುತ್ತಿದ್ದು, ಇದಕ್ಕೆ ಹೊರತು ಬೇರೆ ಯಾವುದೇ ಪರ್ಯಾಯ ದಾರಿಯೇ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಗ್ರಾಮಸ್ಥರು ಈ ದಾರಿಗಳ ಬಳಕೆಗೆ ಅಡ್ಡಿಪಡಿಸುತ್ತಿದ್ದು, ಇದರಿಂದ ತಮಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಕಂದಾಯ ಅಧಿಕಾರಿಗಳು ವಿಷಯ ತಿಳಿದಿದ್ದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ರೈತ ಕುಟುಂಬ, ತಮ್ಮ ಜಮೀನಿಗೆ ಇರುವ ಹಳೆಯ ದಾರಿಗಳನ್ನು ಯಥಾಸ್ಥಿತಿಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿ, ಗ್ರಾಮಸ್ಥರು ಅಡ್ಡಿ ಮಾಡದಂತೆ ತಾಕೀತು ಆದೇಶ ನೀಡುವಂತೆ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
ನ್ಯಾಯ ಸಿಗದಿದ್ದಲ್ಲಿ ಮೇಲಾಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ವಿಷಯ ತರಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
