ವಡಗೇರಾ: ಪೊಲೀಸ್ ವ್ಯವಸ್ಥೆ ಕುರಿತು ಜನರಲ್ಲಿ ಭಯ ದೂರಮಾಡಿ ಮನೆ ಬಾಗಿಲಿಗೆ ಪೊಲೀಸರು ಭೇಟಿ ನೀಡಿ ಸ್ಪಂದಿಸುವ ಸದುದ್ದೇಶದಿಂದ ಜಾರಿಗೊಳಿಸುತ್ತಿರುವ ಮನೆ ಮನಗೆ ಪೊಲೀಸ್ ಅಭಿಯಾನಕ್ಕೆ ಪಟ್ಟಣದಲ್ಲಿ ಪಿಎಸ್ಐ ಮೆಹಬೂಬ್ ಅಲಿ ಚಾಲನೆ ನೀಡಿದರು.
ಪಟ್ಟಣದಲ್ಲಿನ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
ಇದೇ ವೇಳೆ ಕರಪತ್ರ, ಭಿತ್ತಿಪತ್ರ ಹಂಚಿ, ಕಾನೂನು ಬಾಹಿರ ಚಟುವಟಿಕೆಗಳು, ಮಕ್ಕಳಿಗೆ ತೊಂದರೆ, ಅಥವಾ ಶಂಕಾಸ್ಪದ ಘಟನೆಗಳ ಬಗ್ಗೆ ಮುಕ್ತವಾಗಿ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡಲಾಯಿತು.
ಸಾರ್ವಜನಿಕರಿಗೆ ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಸೇರಿದಂತೆ ಸಾಮಾನ್ಯರು ಕಷ್ಟದ ಸಮಯದಲ್ಲಿ ಬಳಸಬಹುದಾದ ತುರ್ತು ಕರೆಗಳ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

