ಸತ್ಯಕಾಮ ವಾರ್ತೆ ಯಾದಗಿರಿ:
ನಟ ಡಾಲಿ ಧನಂಜಯ ಅವರು ಯಾದಗಿರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರು ಸಿನಿಮಾಗಳನ್ನು ಅಪಾರ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ಪ್ರೀತಿ ಕಲಾವಿದರಿಗೆ ದೊಡ್ಡ ಶಕ್ತಿ ಎಂದು ಹೇಳಿದರು.
ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಡವರಾಸ್ಕಲ್’ ನಿರ್ದೇಶಕರೊಂದಿಗೆ ಮಾಡುತ್ತಿರುವ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಕೊನೆಯ ಶೆಡ್ಯೂಲ್ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ಸಿನಿಮಾ ‘ಹಲಗಲಿ’ ಯ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಸುಮಾರು 40 ಶೇಕಡಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉಳಿದ ಚಿತ್ರೀಕರಣ ಆರಂಭಿಸಲಾಗುವುದು ಎಂದರು.
ಇದರ ಜೊತೆಗೆ ‘ಟ್ರಿಪಲ್ ಸಿಕ್ಸ್ – ಆಪರೇಶನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಕೂಡ ನಿರಂತರವಾಗಿ ಸಾಗುತ್ತಿದೆ. ಈ ವರ್ಷದ ಮಧ್ಯಭಾಗದಿಂದ ತಮ್ಮ ಅಭಿನಯದ ಹಾಗೂ ನಿರ್ಮಾಣದ ಸಿನಿಮಾಗಳು ಒಂದರ ಬಳಿಕ ಒಂದಾಗಿ ಬಿಡುಗಡೆಯಾಗಲಿವೆ ಎಂದು ಧನಂಜಯ ಹೇಳಿದರು.
ತಮ್ಮ ನಿರ್ಮಾಣದ ‘ಜೆಸಿದ ಯೂನಿವರ್ಸಿಟಿ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಹಾಗೂ ಪ್ರೇಮ ಅವರು ಬಿಡುಗಡೆ ಮಾಡಿದ್ದಾರೆ. ಜೈಲು ಹಿನ್ನೆಲೆಯ ಈ ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಹೊಸ ನಾಯಕ–ನಾಯಕಿ ಹಾಗೂ ಹೊಸ ನಿರ್ದೇಶಕರ ತಂಡವನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕಡಿಮೆ ದರದಲ್ಲೇ ಎಲ್ಲ ವರ್ಗದ ಪ್ರೇಕ್ಷಕರು ಸಿನಿಮಾ ನೋಡಬಹುದಾಗಿತ್ತು. ಟಿಕೆಟ್ ದರ ಸ್ವಲ್ಪ ಕಡಿಮೆಯಾದರೆ ಬಡ ಪ್ರೇಕ್ಷಕರಿಗೂ ಸಿನಿಮಾ ನೋಡುವ ಅವಕಾಶ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪೈರಸಿ ಕುರಿತು ಮಾತನಾಡಿದ ಅವರು, ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು ಎಂದು ಹೇಳಿದರು. ಪ್ರೇಕ್ಷಕರು ಪೈರಸಿ ಪ್ರತಿಗಳನ್ನು ತಿರಸ್ಕರಿಸಿ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಮುಂದಾದರೆ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.
ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ಜನರ ಪ್ರೀತಿ ಹಾಗೂ ಬೆಂಬಲವೇ ತಮ್ಮ ಶ್ರಮಕ್ಕೆ ದೊಡ್ಡ ಪ್ರೇರಣೆ ಎಂದು ಹೇಳಿದರು.
ಕೊನೆಗೆ ಉತ್ತರ ಕರ್ನಾಟಕದ ಜನರ ಆತ್ಮೀಯತೆಗೆ ಋಣಿ ಎಂದು ಡಾಲಿ ಧನಂಜಯ ಹೇಳಿದರು.
