
*ಬೆಂಗಳೂರು, ಆ.5:*
“ನನ್ನ ಕುಟುಂಬದ ಆಸ್ತಿ ಲೆಕ್ಕಾಚಾರ ಕೇಳುತ್ತಿದ್ದೀಯಾ, ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ಇದಕ್ಕೂ ಮೊದಲು ನಿನ್ನ ಸಹೋದರನ ಆಸ್ತಿ ಲೆಕ್ಕ ನೀಡು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲೆಸೆದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು “ನಿನ್ನ ಅಧಿಕಾರವಧಿಯಲ್ಲಿ ನಿನ್ನ ಸಹೋದರ ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡ ಎಂಬುದಕ್ಕೆ ಮೊದಲು ಲೆಕ್ಕಾಚಾರ ಹಾಕೋಣ. ಆನಂತರ ನನ್ನದು ಕೊಡುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ” ಎಂದು ತಿರುಗೇಟು ನೀಡಿದರು.
“ಕುಮಾರಸ್ವಾಮಿ ನನ್ನ ಪ್ರಶ್ನೆ ಮಾಡುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೇ. ಆದರೆ ನಾನು ಅವರ ಸಹೋದರನ ಆಸ್ತಿ ಬಗ್ಗೆ ಮೊದಲು ಉತ್ತರ ನೀಡಲಿ. ಜೆಡಿಎಸ್, ಬಿಜೆಪಿ ಹಗರಣಗಳಿಗೆ ಉತ್ತರ ಕೊಡಿ ಎಂದು ಕೇಳಿದರೂ ಇದುವರೆಗೂ ಉತ್ತರ ಕೊಟ್ಟಿಲ್ಲ” ಎಂದರು.
“ವಿಜಯೇಂದ್ರ ಹೇಳುತ್ತಾನೆ ಭ್ರಷ್ಟಾಚಾರದ ಪಿತಾಮಹಾ ನಾನು ಎಂದು. ನೀನು ಮೊದಲು ಹೇಳಪ್ಪ, ನೀನು ನಿಮ್ಮ ಅಪ್ಪನನ್ನು ಯಾಕೆ ಜೈಲಿಗೆ ಕಳುಹಿಸಿದೆ? ರಾಜೀನಾಮೆ ಕೊಡಿಸಿದೆ? ಏನಾಯಿತು, ಎಲ್ಲಿ ಬಂತು? ಏಕೆ ಇದೆಲ್ಲಾ ಆಯಿತು ಇದರ ಲೆಕ್ಕಾಚಾರ ಮೊದಲು ನೀಡು. ಮೊದಲು ನಿಮ್ಮ ಪಕ್ಷದ ಯತ್ನಾಳ್, ಗೂಳಿಹಟ್ಟಿ ಶೇಖರ್ ಗೆ ಉತ್ತರ ಕೊಡಿ ಆನಂತರ ನನಗೆ ಕೊಡುವಿರಂತೆ” ಎಂದು ಹೇಳಿದರು.
“ಇಂದು ಮದ್ದೂರಿನಲ್ಲಿ ಜನಾಂದೋಲನ ಯಾತ್ರೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ಕರ್ನಾಟಕದ ಪಾಲಿನ ಅನುದಾನ ಬಿಡುಗಡೆ ಮಾಡಿಸಿಲ್ಲ ಹಾಗೂ ನಾವು ವಿರೋಧ ಪಕ್ಷದಲ್ಲಿ ಇದ್ದಾಗ ಏನೇನು ಮಾಡಿದ್ದರು ಅದಕ್ಕೆಲ್ಲ ಉತ್ತರ ಕೊಡಿ ಎಂದು ಕೇಳುತ್ತಿದ್ದೇವೆ. ಇದಕ್ಕಾಗಿ ಜನಾಂದೋಲನ ಸಭೆ ನಡೆಸುತ್ತಿದ್ದೇವೆ” ಎಂದರು.
 Total Visits: 41
Total Visits: 41 All time total visits: 31798
All time total visits: 31798
 
			 
                                 
                              
         
         
         
        
