ಭಾರತದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಮನಸ್ಸಿಗೆ ಬರುವ ಚಿತ್ರ ಗಲ್ಲಿಗೇರಿಸುವುದು. ಈ ದೃಶ್ಯವು ಕೇವಲ ನ್ಯಾಯದ ಬಲವಾದ ಹಂತವಲ್ಲ, ಮಾನವೀಯ ಮೌಲ್ಯಗಳ ಪರೀಕ್ಷೆಯೂ ಹೌದು. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಸಾಮೂಹಿಕ ದೌರ್ಜನ್ಯ ಮುಂತಾದ ಭೀಕರ ಅಪರಾಧಗಳಿಗೆ ಮರಣದಂಡನೆ ವಿಧಿಸುವುದು ನ್ಯಾಯಾಂಗದ ಭಾಗವಾಗಿದ್ದರೂ, ಅಪರಾಧಿಯ ಜೀವವನ್ನು ಕೊನೆಗಾಣಿಸುವ ವಿಧಾನದಲ್ಲಿ ಮಾನವೀಯತೆ ಇರಬೇಕೇ? ಎಂಬ ಪ್ರಶ್ನೆ ಇತ್ತೀಚೆಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಸುಪ್ರೀಂ ಕೋರ್ಟ್ ಇದೀಗ ಇದೇ ವಿಷಯದ ಕುರಿತು ಗಂಭೀರವಾಗಿ ಚಿಂತನೆ ಆರಂಭಿಸಿದೆ, ಗಲ್ಲು ಶಿಕ್ಷೆಯ ಬದಲು ವಿಷದ ಚುಚ್ಚುಮದ್ದು (lethal injection) ಅಥವಾ ನೋವಿಲ್ಲದ ಇತರ ವಿಧಾನಗಳನ್ನು ಅಳವಡಿಸಬೇಕೇ ಎಂಬ ವಿಚಾರದಲ್ಲಿ ನ್ಯಾಯಾಂಗದ ನಿಲುವು ಚರ್ಚೆಗೆ ಗ್ರಾಸವಾಗಿದೆ.
ಮರಣದಂಡನೆ ಎಂದರೇನು?
ಮರಣದಂಡನೆ ಎಂದರೆ ನ್ಯಾಯಾಲಯವು ಒಬ್ಬ ಅಪರಾಧಿಗೆ ವಿಧಿಸುವ ಅಂತಿಮ ಶಿಕ್ಷೆ. ಭಾರತದಲ್ಲಿ ಇದು ಸಾಮಾನ್ಯವಾಗಿ ಗಲ್ಲು ಶಿಕ್ಷೆಯ ರೂಪದಲ್ಲಿ ಜಾರಿಯಲ್ಲಿದೆ. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಮಕ್ಕಳ ಮೇಲಿನ ಕ್ರೂರ ದೌರ್ಜನ್ಯ, ಸರಕಾರದ ವಿರುದ್ಧ ದಂಗೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಸೇನಾ ದ್ರೋಹ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸಬಹುದು. ಅಲ್ಲದೆ, ಸುಳ್ಳು ಸಾಕ್ಷಿಯಿಂದ ನಿರಪರಾಧಿಯು ಮರಣದಂಡನೆಗೆ ಗುರಿಯಾದರೆ, ಆ ಸುಳ್ಳು ಸಾಕ್ಷಿ ನೀಡಿದ ವ್ಯಕ್ತಿಗೂ ಇದೇ ಶಿಕ್ಷೆ ವಿಧಿಸಬಹುದು.
ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಚರ್ಚೆ:
ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಗಲ್ಲು ಶಿಕ್ಷೆ ಸಾಂಪ್ರದಾಯಿಕವಾಗಿ ಮುಂದುವರಿದಿದೆ. ಆದರೆ ಈಗ ವಿಶ್ವದ ಅನೇಕ ರಾಷ್ಟ್ರಗಳು ಮರಣದಂಡನೆಗೆ ಮಾನವೀಯ ಪರ್ಯಾಯ ಮಾರ್ಗಗಳನ್ನು ಹುಡುಕಿವೆ. ಈ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ಗಲ್ಲು ಶಿಕ್ಷೆಯ ಬದಲಿಗೆ ವಿಷದ ಚುಚ್ಚುಮದ್ದು, ಗುಂಡು ಹಾರಿಸುವುದು, ವಿಷ ಅನಿಲ ಅಥವಾ ವಿದ್ಯುತ್ ಪ್ರಹಾರದಿಂದ ಶಿಕ್ಷೆ ನೀಡುವ ಆಯ್ಕೆಯನ್ನು ನೀಡಬಹುದು ಎಂದು ಮನವಿ ಮಾಡಿದ್ದಾರೆ.
ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ತಾತ್ವಿಕ ಸತ್ಯವಿದೆ ಎಂದು ಗಮನಿಸಿದೆ. ನೇಣು ಹಾಕುವ ವಿಧಾನದಲ್ಲಿ ವ್ಯಕ್ತಿಯ ತೂಕ, ಎತ್ತರ ಅಥವಾ ದೇಹದ ಸ್ಥಿತಿಯನ್ನು ಪರಿಗಣಿಸದೆ ಒಂದೇ ರೀತಿಯ ಕ್ರಮ ಅನುಸರಿಸಲಾಗುತ್ತದೆ. ಇದರಿಂದ ಕೆಲವು ಕೈದಿಗಳು ನಾಲ್ವತ್ತು ನಿಮಿಷಗಳವರೆಗೆ ನರಕಯಾತನೆ ಅನುಭವಿಸುತ್ತಾರೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೋರ್ಟ್ ಹೇಳಿದೆ.
ಗಲ್ಲು ಶಿಕ್ಷೆಯ ವಿಧಾನ:
ಅಪರಾಧಿಯನ್ನು ಗಲ್ಲಿಗೆ ಏರಿಸುವ ಮುನ್ನಾ ದಿನ ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಕೈದಿಯ ತೂಕದಷ್ಟೇ ಮರಳು ತುಂಬಿದ ಚೀಲವನ್ನು ನೇತು ಹಾಕಿ ಹಗ್ಗದ ಬಲ ಪರೀಕ್ಷಿಸುತ್ತಾರೆ. ಬಳಿಕ ಕೈದಿಯ ಎತ್ತರಕ್ಕೆ ತಕ್ಕಂತೆ ಹಗ್ಗದ ಉದ್ದವನ್ನು ನಿಗದಿಪಡಿಸಲಾಗುತ್ತದೆ. ಆದರೆ ನೇಣು ಹಾಕಿದ ಕ್ಷಣದಲ್ಲೇ ಪ್ರಾಣ ಹೋಗುವುದಿಲ್ಲ, ಉಸಿರಾಟ ನಿಲ್ಲಲು ಸುಮಾರು 30–40 ನಿಮಿಷ ಬೇಕಾಗುತ್ತದೆ. ಇದರಿಂದಲೇ ಈ ಕ್ರಮವನ್ನು ಅಮಾನವೀಯ ಎಂದು ವಿಮರ್ಶಿಸಲಾಗಿದೆ.
ವಿಷದ ಚುಚ್ಚುಮದ್ದು ವಿಧಾನ:
ವಿಷದ ಚುಚ್ಚುಮದ್ದು ವಿಧಾನದಲ್ಲಿ ಮರಣದಂಡನೆ ಅತಿ ಕಡಿಮೆ ಯಾತನೆಯೊಂದಿಗೆ ಜಾರಿಗೊಳ್ಳುತ್ತದೆ. ಅಪರಾಧಿಯನ್ನು ಮಂಚದ ಮೇಲೆ ಮಲಗಿಸಿ ಹಗ್ಗಗಳಿಂದ ಕಟ್ಟಲಾಗುತ್ತದೆ. ಬಳಿಕ ಅಧಿಕಾರಿಗಳ ಸಮಕ್ಷಮದಲ್ಲಿ ಮೂರು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ,
ಅರಿವಳಿಕೆ ಮದ್ದು – ಅಪರಾಧಿಯನ್ನು ನಿದ್ರೆಗೆ ಜಾರಿಸುತ್ತದೆ.
ಪ್ಯಾನ್‌ಕುರೋನಿಯಮ್ ಬೋಮೈಡ್ – ನರಗಳು ಮತ್ತು ಸ್ನಾಯುಗಳನ್ನು ಅಚಲಗೊಳಿಸುತ್ತದೆ.
ಪೊಟ್ಯಾಸಿಯಮ್ ಕ್ಲೋರೈಡ್ – ಹೃದಯ ಬಡಿತವನ್ನು ನಿಲ್ಲಿಸುತ್ತದೆ.
ಈ ಪ್ರಕ್ರಿಯೆ ಸುಮಾರು 10–15 ನಿಮಿಷಗಳಲ್ಲಿ ನೋವಿಲ್ಲದೆ ಜೀವಹರಣ ಮಾಡುತ್ತದೆ. ಅಮೆರಿಕಾ, ಚೀನಾ, ತೈವಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಇದೇ ವಿಧಾನ ಅಳವಡಿಸಲಾಗಿದೆ.
ಗಲ್ಲು ಶಿಕ್ಷೆಯ ಅಂಕಿಅಂಶ:
ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರು ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು.
ಸ್ವಾತಂತ್ರ್ಯಾನಂತರ ಈ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.
2023ರ ವರೆಗೆ ಭಾರತದಲ್ಲಿ ಒಟ್ಟು 561 ಮಂದಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಗಲ್ಲು ಶಿಕ್ಷೆಗೆ ವಿರೋಧದ ಕಾರಣ ಏನು?
ಇದು ಅಮಾನವೀಯ ಮತ್ತು ಹಿಂಸಾತ್ಮಕ ಎಂದು ಅನೇಕರು ಪರಿಗಣಿಸುತ್ತಾರೆ.
ಪ್ರಾಣ ಒಂದೇ ಬಾರಿಗೆ ಹೋಗದೆ ದೀರ್ಘಕಾಲದ ನೋವುಂಟಾಗುತ್ತದೆ.
ಮರಣದಂಡನೆ ಅಪರಾಧವನ್ನು ತಡೆಯುತ್ತದೆ ಎಂಬ ದೃಢವಾದ ಸಾಬೀತುಗಳಿಲ್ಲ.
ಈ ಕಾರಣಗಳಿಂದ ಹಲವಾರು ರಾಷ್ಟ್ರಗಳು ಈ ಶಿಕ್ಷೆಯನ್ನು ನಿಷೇಧಿಸಿವೆ ಅಥವಾ ಬದಲಾವಣೆ ಮಾಡಿದ್ದಾರೆ.
ವಿವಿಧ ದೇಶಗಳಲ್ಲಿ ಮರಣದಂಡನೆ ವಿಧಾನಗಳು:
ಗುಂಡು ಹಾರಿಸುವುದು – ರಷ್ಯಾ, ಇಂಡೋನೇಷ್ಯಾ, ಬಾಂಗ್ಲಾ, ಕೊರಿಯಾ ಮುಂತಾದ ದೇಶಗಳಲ್ಲಿ.
ತಲೆ ಕತ್ತರಿಸುವುದು – ಸೌದಿ ಅರೇಬಿಯಾ, ಇರಾನ್, ಯೆಮೆನ್.
ವಿಷದ ಚುಚ್ಚುಮದ್ದು – ಚೀನಾ, ಅಮೆರಿಕಾ, ಥಾಯ್ಲೆಂಡ್.
ಕಲ್ಲು ಹೊಡೆದು ಕೊಲ್ಲುವುದು – ನೈಜೀರಿಯಾ, ಪಾಕಿಸ್ಥಾನ, ಸುಡಾನ್.
ವಿದ್ಯುತ್ ಕುರ್ಚಿ ಅಥವಾ ವಿಷ ಅನಿಲ ಕೊಠಡಿ – ಅಮೆರಿಕಾ.
ವಿಶ್ವದ ನಿಲುವು ಏನು?
2ನೇ ಮಹಾಯುದ್ಧದ ಬಳಿಕ ವಿಶ್ವಾದ್ಯಂತ ಮರಣದಂಡನೆ ವಿರೋಧ ಚಳವಳಿ ಬಲವತ್ತಾಯಿತು.
1977ರಲ್ಲಿ ಕೇವಲ 16 ರಾಷ್ಟ್ರಗಳು ಮರಣದಂಡನೆಯನ್ನು ನಿಷೇಧಿಸಿದ್ದರೆ, ಇಂದಿಗೆ 95 ರಾಷ್ಟ್ರಗಳು ಸಂಪೂರ್ಣವಾಗಿ ರದ್ದುಮಾಡಿವೆ.
ಭಾರತ ಸೇರಿದಂತೆ 58 ರಾಷ್ಟ್ರಗಳಲ್ಲಿ ಮಾತ್ರ ಈ ಶಿಕ್ಷೆ ಇನ್ನೂ ಅಸ್ತಿತ್ವದಲ್ಲಿದೆ.
ಇನ್ನು, ಮರಣದಂಡನೆ ಕುರಿತು ಚರ್ಚೆ ಕೇವಲ ಕಾನೂನಿನ ವಿಷಯವಲ್ಲ, ಅದು ಮಾನವೀಯತೆಯ ಮತ್ತು ನ್ಯಾಯದ ಮಧ್ಯದ ಸೂಕ್ಷ್ಮ ಸಮತೋಲನ. ಅಪರಾಧವನ್ನು ತಡೆಯುವ ಹೆಸರಿನಲ್ಲಿ ಅಪರಾಧಿಯನ್ನೇ ಕ್ರೂರವಾಗಿ ಕೊಲ್ಲುವುದು ಸರಿಯೇ ಎಂಬ ಪ್ರಶ್ನೆ ಸಮಾಜದ ಅಂತರಾಳವನ್ನು ತಟ್ಟುತ್ತಿದೆ.
