ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧ ತಡೆಗಟ್ಟುವುದು ಮತ್ತು ಸಾರ್ವಜನಿಕರ ಭದ್ರತೆಯನ್ನು ಖಾತ್ರಿ ಪಡಿಸುವುದು ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿಯಿಂದ ಸಾರ್ವಜನಿಕರ ಮೇಲೆ ಅಸೌಜನ್ಯ ವರ್ತನೆ, ದರ್ಪದ ನಡವಳಿಕೆ, ಹಲ್ಲೆ ಮತ್ತು ಅಧಿಕಾರದ ದುರುಪಯೋಗದ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ, ಜನರ ವಿಶ್ವಾಸ ಮತ್ತೆ ಗಳಿಸಲು ರಾಜ್ಯದ ಪೊಲೀಸ್ ಇಲಾಖೆಗೆ ಕಠಿಣ ಮಾರ್ಗಸೂಚಿ ಹೊರಡಿಸಲಾಗಿದೆ.
ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರು ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಘಟಕಗಳಿಗೆ ಹೊಸ ಸೌಜನ್ಯ ಹಾಗೂ ನೈತಿಕ ನಡವಳಿಕೆಯ ಮಾರ್ಗಸೂಚಿ ಪ್ರಕಟಿಸಿದ್ದು, ಪೊಲೀಸರು ಜನರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ವಿವರವಾದ ಸೂಚನೆಗಳನ್ನು ನೀಡಿದ್ದಾರೆ.
ಪೊಲೀಸರ ನಡವಳಿಕೆಗೆ ಹೊಸ ಮಾದರಿ: ಪಾರದರ್ಶಕತೆ ಮತ್ತು ಸೌಜನ್ಯ ಮುಖ್ಯ
ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಅಕ್ರಮ ಲಾಭದಿಂದ ದೂರವಿರಬೇಕು. ಪೊಲೀಸ್ ಠಾಣೆಗೆ ಬರುವ ಯಾರನ್ನೂ ಅವರ ಹಿನ್ನೆಲೆಯ ಆಧಾರದ ಮೇಲೆ ವಿಭಜನೆ ಮಾಡದೇ, ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ, ತಾಳ್ಮೆಯಿಂದ ಅವರ ದೂರುಗಳು ಅಥವಾ ಕುಂದುಕೊರತೆಗಳನ್ನು ಆಲಿಸಬೇಕೆಂದು ಸೂಚಿಸಲಾಗಿದೆ.
ದೂರು ಬಂದ ತಕ್ಷಣ ಕಾನೂನಿನ ಪ್ರಕಾರ ಅದನ್ನು ದಾಖಲಿಸಬೇಕು ಮತ್ತು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬಳಸಬಾರದು, ಬದಲಾಗಿ ಸೌಜನ್ಯ, ಶಿಸ್ತಿನಿಂದ ಹಾಗೂ ಘನತೆಯಿಂದ ವರ್ತಿಸಬೇಕು.
ಸಂತ್ರಸ್ಥರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೂ ವಿಶೇಷ ಗೌರವ
ಮಹಿಳೆಯರು, ಮಕ್ಕಳರು ಮತ್ತು ಹಿರಿಯ ನಾಗರಿಕರೊಂದಿಗೆ ಮಾತನಾಡುವಾಗ ಪೊಲೀಸರು ಸೂಕ್ಷ್ಮತೆ ಮತ್ತು ಗೌರವದಿಂದ ವರ್ತಿಸಬೇಕು.
ಸಂಜೆ 6 ಗಂಟೆಯ ನಂತರ ಮಹಿಳೆಯನ್ನು ಠಾಣೆಗೆ ವಿಚಾರಣೆಗಾಗಿ ಕರೆತರಬಾರದು.
ಮಹಿಳೆಯು ಆರೋಪಿಯಾಗಿದ್ದರೆ ಅಥವಾ ಸಂತ್ರಸ್ಥೆಯಾಗಿದ್ದರೆ ಆಕೆಯ ಹೇಳಿಕೆ ಅಥವಾ ವಿಚಾರಣೆಯನ್ನು ಮಹಿಳಾ ಪೊಲೀಸರ ಉಪಸ್ಥಿತಿಯಲ್ಲಿ, ಆಕೆಯ ಮನೆಯಲ್ಲಿಯೇ ನಡೆಸಬೇಕು.
ಮಹಿಳೆಯರನ್ನು ಪೊಲೀಸ್ ಠಾಣೆಯಲ್ಲಿ ಇರಿಸದೆ ರಾಜ್ಯ ಗೃಹ (ಸ್ಟೇಟ್ ಹೋಮ್)ಗಳಲ್ಲಿ ಇರಿಸುವಂತೆ ಸೂಚಿಸಲಾಗಿದೆ.
ದಾಖಲೆ ಮತ್ತು ತನಿಖೆಯಲ್ಲಿ ನಿಖರತೆ
ಪೊಲೀಸ್ ಅಧಿಕಾರಿಗಳು ತಮ್ಮ ಸ್ಟೇಷನ್ ಹೌಸ್ ಡೈರಿ ಹಾಗೂ ಕೇಸ್ ಫೈಲ್‌ಗಳಲ್ಲಿ ನಿಖರ ದಾಖಲೆಗಳನ್ನು ಕಾಯ್ದುಕೊಳ್ಳಬೇಕು. ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡಿ, ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ನಾಗರಿಕರಿಗೆ ಅನಗತ್ಯ ತೊಂದರೆ ನೀಡಬಾರದು ಮತ್ತು ಅವರ ಖಾಸಗಿತನವನ್ನು ಗೌರವಿಸಬೇಕು.
ತಂತ್ರಜ್ಞಾನ ಮತ್ತು ಕ್ಯಾಮೆರಾ ಬಳಕೆ
ಪೊಲೀಸರು ತಮ್ಮ ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಹಾಗೂ ಇತರ ತಂತ್ರಜ್ಞಾನ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಇದು ಪೊಲೀಸ್ ಕಾರ್ಯಗಳಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿ ಎಂದು ಸೂಚಿಸಲಾಗಿದೆ.
ಸಮವಸ್ತ್ರದ ಗೌರವ ಮತ್ತು ವೃತ್ತಿಪರತೆ
ನೀಟಾದ ಮತ್ತು ಶಿಸ್ತಿನ ಸಮವಸ್ತ್ರ ಧರಿಸಿರುವ ಪೊಲೀಸ್ ಅಧಿಕಾರಿ ಸಾರ್ವಜನಿಕರಿಂದ ಹೆಚ್ಚುವರಿ ಗೌರವ ಪಡೆಯುತ್ತಾನೆ. ಸಲೀಂ ಅವರು, ಸಮವಸ್ತ್ರವು ಕೇವಲ ಉಡುಪು ಅಲ್ಲ ,ಅದು ಶಿಸ್ತಿನ, ನೈತಿಕತೆಯ ಮತ್ತು ವೃತ್ತಿಪರತೆಗೆಯ ಪ್ರತೀಕ ಎಂದು ತಿಳಿಸಿದ್ದಾರೆ.
ಸಮುದಾಯದೊಂದಿಗೆ ನಂಟು ಹೆಚ್ಚಿಸಲು ಸೂಚನೆ
ಪೊಲೀಸರು ಸಮುದಾಯದೊಂದಿಗೆ ಸಕ್ರಿಯವಾಗಿ ಭಾಗವಹಿಸಬೇಕು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಪಾರದರ್ಶಕ, ಕಾನೂನುಬದ್ಧ ಮತ್ತು ಮಾನವೀಯ ಪೊಲೀಸಿಂಗ್ ಮೂಲಕ ಜನ-ಪೊಲೀಸ್ ನಂಬಿಕೆಯ ಬಲವಾದ ಸೇತುವೆ ನಿರ್ಮಾಣ ಅಗತ್ಯ ಎಂದು ಸಲೀಂ ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಪ್ರಭಾವದಿಂದ ದೂರವಿರಬೇಕು
ಯಾರಾದರೂ ಪೊಲೀಸ್ ಕಾರ್ಯದಲ್ಲಿ ಅಕ್ರಮ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಅಥವಾ ಭ್ರಷ್ಟಗೊಳಿಸಲು ಯತ್ನಿಸಿದರೆ, ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕರ್ತವ್ಯದಲ್ಲಿ ನಿಷ್ಠೆ, ಪಾರದರ್ಶಕತೆ ಮತ್ತು ಸೌಜನ್ಯ ಇರಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇನ್ನು, ಸಾರ್ವಜನಿಕರ ಹಕ್ಕುಗಳಿಗೆ ಗೌರವ ನೀಡಿ, ಸಂಯಮದಿಂದ ವರ್ತಿಸುವುದು ಪೊಲೀಸ್ ಇಲಾಖೆಯ ಘನತೆಯನ್ನು ಹೆಚ್ಚಿಸುತ್ತದೆ. ದರ್ಪದಿಂದ ವರ್ತಿಸುವುದು ಅಥವಾ ಬಲ ಪ್ರಯೋಗ ಮಾಡುವುದು ಇಲಾಖೆಯ ಶಿಸ್ತಿಗೆ ತಕ್ಕದ್ದಲ್ಲ. ಸಲೀಂ ಅವರ ಮಾರ್ಗಸೂಚಿಯ ಪ್ರಕಾರ, ಪೊಲೀಸರು ಜನರೊಂದಿಗೆ ಸಹಾನುಭೂತಿಯುಳ್ಳ, ನೈತಿಕ ಮತ್ತು ಶಿಸ್ತಿನ ನಡವಳಿಕೆಯ ಮೂಲಕ ಇಲಾಖೆಯ ಪ್ರತಿಷ್ಠೆಯನ್ನು ಕಾಪಾಡಬೇಕು.
ಇನ್ನು, ಈ ಹೊಸ ಮಾರ್ಗಸೂಚಿಯ ಉದ್ದೇಶ ಪೊಲೀಸರು ಜನರಿಗಾಗಿ, ಜನರೊಂದಿಗೆ, ಜನರ ವಿಶ್ವಾಸದಿಂದ ಕೆಲಸ ಮಾಡುವಂತಹ ಸೌಜನ್ಯಪೂರ್ಣ ಮತ್ತು ಮಾನವೀಯ ಪೊಲೀಸಿಂಗ್ ವ್ಯವಸ್ಥೆ ರೂಪಿಸುವುದಾಗಿದೆ.
