ಸಮತಾವಾದ, ಸಮಾಜವಾದ ಇವಾವುದೂ ಇಲ್ಲ. ಈಗೇನಿದ್ದರೂ ಎಲ್ಲ ಸಿದ್ದಾಂತಗಳನ್ನು ಬದಿಗೊತ್ತಿ ಬರೀ ಅವಕಾಶಕ್ಕಾಗಿ ಕಾಯುವುದು ಅದೇ ಅವಕಾಶವಾದ.
ಈ ವಿಚಾರ ಇತ್ತೀಚೆಗೆ ಮತ್ತೊಮ್ಮೆ ರುಜುಗೊಂಡುದು ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಾಗ. ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿತ್ತು. ಕಾಂಗ್ರೆಸ್ ಎನ್‌ಡಿಎ ಸರ್ಕಾರವನ್ನು ಕೆಳಗಿಳಿಸಿ ಇಂಡಿ ಮೈತ್ರಿಕೂಟದ ಸರ್ಕಾರ ರಚಿಸುವ ಕನಸು ಕಂಡಿತ್ತು.
ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಎನ್ ಡಿ ಎ ಪರವಾಗಿದ್ದವು. ಆದರೆ ಫಲಿತಾಂಶ ಮಾತ್ರ ಎಲ್ಲ ಸಮೀಕ್ಷೆಗಳನ್ನೂ ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿತ್ತು. ಎನ್ ಡಿ ಎ ಮೈತ್ರಿಕೂಟ 293 ಸ್ಥಾನಗಳೊಂದಿಗೆ ಬಹುಮತ ಪಡೆಯಿತು. ಕಾಂಗ್ರೆಸ್ ಮುಂದಾಳುತ್ವದ ಇಂಡಿ ಮೈತ್ರಿಕೂಟ 232 ಸ್ಥಾನ ಪಡೆಯಿತು. ಪಕ್ಷವಾರು ಫಲಿತಾಂಶದ ಬಗ್ಗೆ ಹೇಳುವುದಾದರೆ ಬಿಜೆಪಿ 240 ಸ್ಥಾನ ಪಡೆದಿದ್ದರೆ ಕಾಂಗ್ರೆಸ್ ಕೇವಲ 99 ಸ್ಥಾನ ಪಡೆಯಿತು.
ಆದರೆ ವಿಶೇಷವೆಂದರೆ ಸರಕಾರ ರಚಿಸುವ ನಿಟ್ಟಿನಲ್ಲಿ ಎನ್ ಡಿ ಎಗಿಂತ ಮೊದಲು ಸಭೆ ಸೇರಿದ್ದು ಇಂಡಿ ಮೈತ್ರಿಕೂಟ! 99 ಸ್ಥಾನ ಪಡೆದ ಕಾಂಗ್ರೆಸ್ 240 ಸ್ಥಾನ ಪಡೆದ ಅತಿ ದೊಡ್ಡ ಪಕ್ಷ ಬಿಜೆಪಿಯನ್ನು ಹೊರಗಿಟ್ಟು ಕೇಂದ್ರದಲ್ಲಿ ಸರಕಾರ ರಚಿಸುವ ಬಗ್ಗೆ ಚರ್ಚಿಸಿತು. ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಜೆಡಿಯು ಟಿಡಿಪಿ ಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ನೋಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಅದು ಬೇರೆ ವಿಚಾರ. ಆದರೆ ಕಾಂಗ್ರೆಸ್ ಸರಕಾರ ರಚನೆಯ ಅವಕಾಶವನ್ನು ತನ್ನದಾಗಿಸಿಕೊಳ್ಳಲು ಸರ್ಕಸ್ ಮಾಡಿದ್ದಂತೂ ಸತ್ಯ.
2018ರಲ್ಲಿ ರಾಜ್ಯ ಕಾಂಗ್ರೆಸ್ ಕೂಡ ಹೀಗೆೇ ಮಾಡಿತ್ತು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತವಿರಲಿಲ್ಲ. ಬಿಜೆಪಿಗೆ 104 ಕಾಂಗ್ರೆಸ್ಸಿಗೆ 80 ಜೆಡಿಎಸ್ ಗೆ 40 ಸ್ಥಾನ ಲಭಿಸಿತ್ತು. ಆದರೆ ಕಾಂಗ್ರೆಸ್ ಅತ್ಯಂತ ಹೆಚ್ಚು ಸ್ಥಾನ ಗೆದ್ದಿದ್ದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಜೆಡಿಎಸ್ ನೊಂದಿಗೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸುವ ಅವಕಾಶವನ್ನು ತನ್ನದಾಗಿಸಿಕೊಂಡಿತು. ಅದಕ್ಕಾಗಿ ಕಡಿಮೆ ಸ್ಥಾನ ಹೊಂದಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿತ್ತು. ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಏನಾದರೂ ಸರ್ಕಾರ ರಚನೆಗೆ ಅವಕಾಶ ಸಿಕ್ಕ ಸಂತೃಪ್ತಿ ಕಾಂಗ್ರೆಸ್ಸಿನದು. ಮಾತೆತ್ತಿದರೆ ಸಂವಿಧಾನ ಪ್ರಜಾಪ್ರಭುತ್ವ ಎಂದೆಲ್ಲ ಹೇಳಿಕೊಳ್ಳುವ ಕಾಂಗ್ರೆಸ್ ಬಹುಮತ ಪಡೆದ ಪಕ್ಷವನ್ನು ಅಧಿಕಾರದಿಂದ ಹೊರಗಿಡಲು ನೋಡುತ್ತಿರುವುದು ಯಾವ ಬಗೆಯ ಪ್ರಜಾಪ್ರಭುತ್ವವೋ ತಿಳಿಯದು!
ಕಾಂಗ್ರೆಸ್ ಎಂದಲ್ಲ ರಾಜಕೀಯದಲ್ಲಿ ಎಲ್ಲರೂ ಅವಕಾಶವಾದಿಗಳೇ. ಬೇಳೆ ಬೇಯಿಸಿಕೊಳ್ಳಲು ನೋಡುವವರೇ. ಬಿಜೆಪಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 272 ಸ್ಥಾನ ಪಡೆಯುವಲ್ಲಿ ಎಡವಿದ್ದರಿಂದ ಮಿತ್ರ ಪಕ್ಷಗಳ ಅವಲಂಬನೆ ಅನಿವಾರ್ಯವಾಗಿ ಬಿಟ್ಟಿತು. ಬಿಜೆಪಿಯ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡು ಜೆಡಿಎಸ್ ಟಿಡಿಪಿ ಗಳು ಮೋದಿ ಸರ್ಕಾರಕ್ಕೆ ಜೈ ಎಂದರೂ ವಿಶೇಷ ಸ್ಥಾನವೂ ಸೇರಿದಂತೆ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟವು. ಪರಿಣಾಮವಾಗಿ ಏನ್ ಡಿಎ ಮೈತ್ರಿಸರ್ಕಾರ ಸಮ್ಮಿಶ್ರ ಸರ್ಕಾರವಾಗಿ ಮಾರ್ಪಟ್ಟಿತು. ಸಮ್ಮಿಶ್ರ ಸರ್ಕಾರವೆಂದ ಮೇಲೆ ಕೇಳಬೇಕೆ? ಸಂಪುಟ ರಚನೆಗೆ ಮುನ್ನವೇ ಸಂಕಟ ಸಹಜ.
ದೇಶ ಮೊದಲು ಎನ್ನುತ್ತಲೇ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರು. ಅವರ ಕಂಗಳಲ್ಲಿ ವಿಕಸಿತ ಭಾರತದ ಕನಸಿನ್ನೂ ಕಮರಿದಂತಿಲ್ಲ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ , ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನಾವು ನಿಮ್ಮೊಂದಿಗಿದ್ದೇವೆ ಎಂದು ಸದ್ಯಕ್ಕೆ ಮೋದಿ ಬೆನ್ನಿಗೆ ನಿಂತಿದ್ದಾರೆ. ನಿತೀಶ್ ಕುಮಾರ್ ಅವರಂತೂ ನಾಲ್ಕೈದು ಬಾರಿ ಕಾಂಗ್ರೆಸ್ ಬಿಟ್ಟು ಬಿಜೆಪಿ, ಬಿಜೆಪಿ ಬಿಟ್ಟು ಕಾಂಗ್ರೆಸ್ ಜೊತೆ ಕೈಜೋಡಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದವರು.
ಅಂದುಕೊಂಡಂತೆ ಆಗದಿದ್ದಲ್ಲಿ ಎನ್ ಡಿಎ ತೊರೆದು ಹೊರ ನಡೆದರೂ ಅಚ್ಚರಿಯಿಲ್ಲ. ಆದರೂ ಟಿವಿ ಮಾಧ್ಯಮವೊಂದರಲ್ಲಿ ನಿರೂಪಕರೊಬ್ಬರು ಹೇಳಿರುವಂತೆ ಒಬ್ಬರು ಇಬ್ಬರು ಹೋದರೂ ಒಳಕ್ಕೆ ಬರುವುದಕ್ಕೂ ರೆಡಿ ಇರುತ್ತಾರೆ. ಇಷ್ಟರಲ್ಲಿಯೇ ಶಿವಸೇನೆಯ ಉದ್ದವ ಠಾಕ್ರೆ ಎನ್ ಡಿ ಎ ಜೊತೆ ಕೈಜೋಡಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಅಧಿಕಾರಾರೂಢರ ಜೊತೆ ಸೇರುವ ಅವಕಾಶ ಯಾರಿಗೆ ತಾನೇ ಬೇಡ?
ನಮ್ಮ ಜನರಿಗೆ ಬೇಕಾಗಿರುವುದು ಗುಲಾಮಗಿರಿ ಬಿಟ್ಟು ಭಾಗ್ಯ, ಸುಳ್ಳು ಭರವಸೆ, ಹಾಗೂ ಜಾತಿ ರಾಜಕೀಯ ಎಂದು ತಮಿಳುನಾಡಿನ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ನೊಂದು ನುಡಿದಿದ್ದಾರೆ. ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮತದಾರರು ಅವರ ಕೈ ಹಿಡಿಯಲಿಲ್ಲ. ಅವರನ್ನು ಎಂದಲ್ಲ. ಉತ್ತರಪ್ರದೇಶ ಮಹಾರಾಷ್ಟ್ರಗಳಲ್ಲೂ ಬಿಜೆಪಿಗೆ ಕೈ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೂ ಸೇರಿದಂತೆ ಇನ್ನಿಲ್ಲದ ಸವಲತ್ತುಗಳನ್ನು ಕಲ್ಪಿಸಲಾಗಿದ್ದರೂ ಅಲ್ಲಿಯ ಬಿಜೆಪಿ ಅಭ್ಯರ್ಥಿಯೇ ಗೆಲ್ಲಲಾಗಿಲ್ಲ. ಅಲ್ಲಿನ ಮುಸ್ಲಿಂ ಮತದಾರರು ಎನ್ ಡಿಎ ಸರಕಾರ ಕೊಡ ಮಾಡಿದ ಸೌಲಭ್ಯಗಳನ್ನು ಅನುಭವಿಸಿದರೆೇ ಹೊರತು ಎನ್ ಡಿಎ ಅಭ್ಯರ್ಥಿಗಳಿಗೆ ಮತ ಚಲಾಯಿಸದಷ್ಟು ಕೃತಘ್ನರಾದರೆಂಬುದು ಬಿಜೆಪಿಗಾದ ಕಹಿ ಅನುಭವ.
ರಾಜ್ಯ ಕಾಂಗ್ರೆಸ್ ಸರಕಾರಕ್ಕೂ ಇದೇ ಅನುಭವವಾದಂತಿದೆ. ಸರ್ಕಾರ ಬಿಟ್ಟಿ ಭಾಗ್ಯಗಳನ್ನು ನಂಬಿಕೊಂಡಿತ್ತು. ಆದರೆ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಬಿಟ್ಟಿ ಭಾಗ್ಯಗಳು ಮತಗಳಾಗಿ ಮಾರ್ಪಟ್ಟಿಲ್ಲ. ಜನ ಬಿಟ್ಟಿ ಭಾಗ್ಯದ ಸವಲತ್ತುಗಳನ್ನು ತಮ್ಮದಾಗಿಸಿಕೊಂಡರೆ ಹೊರತು ತನಗೆ ವೋಟು ಹಾಕಿಲ್ಲವೆಂಬುದು ಕಾಂಗ್ರೆಸ್ ಕಂಡುಕೊಂಡ ಕಟು ಸತ್ಯ.
ಮತದಾರರಲ್ಲಿ ಕೃತಜ್ಞತಾ ಭಾವವೆಂಬುದು ಇದ್ದಲ್ಲಿ ಎನ್ ಡಿ ಎ ಗೆ ಉತ್ತರ ಪ್ರದೇಶದಲ್ಲಿ ಹೀಗಾಗುತ್ತಿರಲಿಲ್ಲ ಬಿಡಿ.
ರಾಜಕೀಯವೆಂದರೆ ಬರೀ ಅವಕಾಶವಾದವೆನಿಸಿದೆ. ಈಗ ಎಲ್ಲರೂ ಅನುಕೂಲ ಸಿಂಧು ರಾಜಕೀಯ ಮಾಡುವವರೇ. ಅಧಿಕಾರವೇ ಮುಖ್ಯವೆನಿಸಿದಾಗ ದೇಶ ಹಿತ ಗೌಣವಾಗಿ ಬಿಡುತ್ತದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದರೂ ತಮ್ಮ ಪಕ್ಷ ಕೇಂದ್ರದಲ್ಲಿ ಇಂಡಿ ಮೈತ್ರಿಕೂಟದ ಭಾಗವಾಗಿರುವುದೆಂದರು. ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಇದು ಅವಕಾಶವಾದ ರಾಜಕೀಯವೆಂದಿದ್ದರು.
ಮೋದಿಯವರ ಮೂರನೇ ಅವಧಿಯ ಸರ್ಕಾರ ಈ ಹಿಂದಿನಂತಲ್ಲ. ಇದು ಸಮ್ಮಿಶ್ರ ಸರ್ಕಾರ. ಸಮ್ಮಿಶ್ರ ಸರ್ಕಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆಗ ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಲ್ಲಿನ ನಿಧಾನಗತಿ ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಡಿಸ್ ಅನಾಲಿಟಿಕ್ಸ್ ಅಭಿಪ್ರಾಯ ಪಟ್ಟಿದೆ. ಈ ನಡುವೆ ಅವಕಾಶವಾದಿಗಳನ್ನೂ ನಂಬುವಂತಿಲ್ಲ. ಇದಕ್ಕಿಂತ ಮಿಗಿಲಾದ ಅವಕಾಶ ಸಿಕ್ಕಲ್ಲಿ ಇಲ್ಲವೇ ಅಂದುಕೊಂಡಂತೆ ಆಗದೆ ಹೋದಲ್ಲಿ ಹೊರ ನಡೆದರೂ ಅಚ್ಚರಿ ಇಲ್ಲ. ಇಷ್ಟರಲ್ಲೇ ಸಚಿವ ಸಂಪುಟ ರಚನೆ ಮುಗಿದು ಮೋದಿ ನೇತೃತ್ವದ ಎನ ಡಿ ಎ ಸರಕಾರ ಮೂರನೇ ಅವಧಿಯ ಜೈತ್ರಯಾತ್ರೆಗೆ ಶುಭನಾಂದಿ ಹಾಡಿದೆ. ಆದರೆಬಎಲ್ಲಾ ಮಿತ್ರ ಪಕ್ಷಗಳ ಓಲೈಕೆ ಅನಿವಾರ್ಯವೆನಿಸುತ್ತದೆ. ಏನಿದ್ದರೂ ಸಮ್ಮಿಶ್ರ ಸರಕಾರವೆಂಬುದು ತಂತಿ ಮೇಲಿನ ನಡಿಗೆಯಿದ್ದಂತೆ. ಇಲ್ಲಿ ರಕ್ಷಣಾತ್ಮಕ ಆಟ ಅನಿವಾರ್ಯವೆನಿಸುತ್ತದೆ. ಏನಂತೀರಾ…?
-ರಾಂ ಎಲ್ಲಂಗಳ, ರಾಜಕೀಯ ವಿಶ್ಲೇಷಕರು

