ಸತ್ಯಕಾಮ ವಾರ್ತೆ ವಡಗೇರಾ :
ಯಾದಗಿರಿ ಜಿಲ್ಲೆಯ ತಾಲ್ಲೂಕಿನ ರೊಟ್ನಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಬಹಳ ತೀವ್ರವಾಗಿದೆ. ಶಾಲೆಯ ಹಳೆಯ ಕಟ್ಟಡದ ಗೋಡೆಗಳು ಸೀಳಿ ಹೋಗಿದ್ದು, ಮೇಲ್ಚಾವಣಿ ಯಾವಾಗ ಬೇಕಾದರೂ ಕುಸಿದು ಬೀಳುವ ಭೀತಿಯಲ್ಲಿದೆ.
100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಈ ಶಾಲೆಯಲ್ಲಿ ಕೇವಲ ಒಬ್ಬ ಕಾಯಂ ಶಿಕ್ಷಕರಿದ್ದಾರೆ. ಉಳಿದವರು ಅತಿಥಿ ಶಿಕ್ಷಕರು. ಬೀಳುವ ಚಾವಣಿಯಿಂದ ಮಕ್ಕಳು ಅಪಾಯಕ್ಕೀಡಾಗುವ ಭೀತಿಯಿಂದ ಶಿಕ್ಷಕರು ಪಾಠವನ್ನು ಶಾಲಾ ಹೊರಾಂಗಣದಲ್ಲಿ ಮಾಡಲಾಗುತ್ತಿದೆ.
ಇನ್ನೂ ಮಳೆ ಬಂದರೆ ಶಾಲೆ ಮಳೆ ನೀರಿನ ಸೋರಿಕೆಯಿಂದ ತುಂಬಿ ಹೋಗುತ್ತದೆ. ಅಲ್ಲದೇ ಶೌಚಾಲಯ ವ್ಯವಸ್ಥೆ, ನೀರಿನ ಕೊರತೆ ಮತ್ತು ಶಾಲೆಗೆ ತಡೆಗೋಡೆಯಿಲ್ಲದ ಪರಿಸ್ಥಿತಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಜಾಸುದ್ದಿಗಳಿಗಾಗಿ ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಿವನಾಗಪ್ಪ ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲವೆಂದು ಗಂಭೀರ ಆರೋಪ ಮಾಡಿದ್ದಾರೆ.
ಅಮೃತ ಯೋಜನೆಯಡಿ ಮಂಜೂರಾದ ₹5 ಲಕ್ಷ ಮೊತ್ತದ ಹೈಟೆಕ್ ಶೌಚಾಲಯವೂ ಬಾಗಿಲಿಲ್ಲದ ಕಳಪೆ ಕಾಮಗಾರಿ ಎನಿಸಿದೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಶಿಕ್ಷಕರು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ತಕ್ಷಣವೇ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಬದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೂತನ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಒದಗಿಸದಿದ್ದರೆ, ಪಾಲಕರು ಮಕ್ಕಳೊಂದಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

