ಆಧುನಿಕ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ಗಡಿಗಳು ನಿಧಾನವಾಗಿ ಬಗೆಹರಿಯುತ್ತಿವೆ. ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಉದ್ಯೋಗಿಗಳು ಅಧಿಕೃತ ಕೆಲಸದ ಅವಧಿ ಮುಗಿದರೂ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಹಾಗೂ ಆನ್‌ಲೈನ್ ಸಭೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿರಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಉದ್ಯೋಗಿಗಳ ಆರೋಗ್ಯ, ಕುಟುಂಬ-ಸಮಾಜ ಜೀವನ ಹಾಗೂ ಮಾನಸಿಕ ಸಮತೋಲನಕ್ಕೆ ಹಾನಿಯಾಗುತ್ತಿರುವುದು ಹಲವು ಅಧ್ಯಯನಗಳಿಂದ ದೃಢವಾಗಿದೆ.
ಈ ಹಿನ್ನೆಲೆಯಲ್ಲಿ, ಕೆಲಸದ ಸಮಯದ ಹೊರಗೆ ಉದ್ಯೋಗಿಗಳಿಗೆ ಸಂಪರ್ಕ ಕಡಿತಗೊಳಿಸುವ ಹಕ್ಕು(Right to Disconnect) ನೀಡುವ ಉದ್ದೇಶದಿಂದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಂಸತ್ತಿನಲ್ಲಿ ಒಂದು ಮಹತ್ವದ ಖಾಸಗಿ ಮಸೂದೆ (Private Bill) ಮಂಡಿಸಿದ್ದಾರೆ.
ಮಸೂದೆಯ ಮುಖ್ಯ ಅಂಶಗಳು:
ಅಧಿಕೃತ ಕೆಲಸದ ಅವಧಿ ಮುಗಿದ ನಂತರ ಹಾಗೂ ರಜೆಗಳ ವೇಳೆ ಕಂಪನಿ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಕ್ಕು ಉದ್ಯೋಗಿಗಳಿಗೆ ದೊರೆಯಬೇಕು.
ಉದ್ಯೋಗಿಗಳ ಅಭ್ಯುದಯ, ಕೆಲಸದ ಒತ್ತಡ ನಿಯಂತ್ರಣ ಹಾಗೂ ಆರೈಕೆಗೆ ನೌಕರರ ಕಲ್ಯಾಣ ಪ್ರಾಧಿಕಾರ (Employee Welfare Authority) ರಚನೆ.
ಕೆಲಸದ ಅನುಕೂಲತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವ ಪ್ರಾಥಮಿಕ ಗುರಿ.
ಖಾಸಗಿ ಮಸೂದೆ ಎಂದರೇನು?:
ಸಚಿವರಲ್ಲದ ಸಂಸತ್ ಸದಸ್ಯರು ಮಂಡಿಸುವ ಮಸೂದೆಗೆ ಖಾಸಗಿ ಮಸೂದೆ ಎಂದು ಕರೆಯಲಾಗುತ್ತದೆ.
- ಇವು ಸರ್ಕಾರಿ ಮಸೂದೆಗಳಿಗಿಂತ ಭಿನ್ನವಾಗಿದ್ದು,
- ಸರ್ಕಾರದಿಂದ ನೇರವಾಗಿ ಪ್ರಸ್ತಾಪವಾಗುವುದಿಲ್ಲ.
ಸಾಮಾನ್ಯವಾಗಿ ನಿರ್ದಿಷ್ಟ ಸಮಸ್ಯೆ, ಗುಂಪು ಅಥವಾ ಪ್ರದೇಶಕ್ಕೆ ಸಂಬಂಧಿತ ಕಾನೂನು ಬದಲಾವಣೆ ಅಥವಾ ಹೊಸ ಕಾನೂನು ಪ್ರಸ್ತಾಪವಾಗಿರುತ್ತದೆ.
ಇದನ್ನು ಅಂಗೀಕರಿಸುವ ವಿಧಾನವು ಸರ್ಕಾರಿ ಮಸೂದೆಗಳ ಹಾಗೆಯೇ ಕಠಿಣ ಮತ್ತು ದೀರ್ಘ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
ಮಾನ್ಯತೆ ದೊರೆಯುವ ಸಾಧ್ಯತೆ?:
ಭಾರತೀಯ ಸಂಸತ್ತಿನ ಅನುಭವ ಹೇಳುವು ಪ್ರಕಾರ, ಬಹುಪಾಲು ಖಾಸಗಿ ಮಸೂದೆಗಳು ಚರ್ಚೆಯ ಮಟ್ಟದಲ್ಲೇ ನಿಲ್ಲುತ್ತವೆ. ಸರ್ಕಾರ ತನ್ನ ಅಭಿಪ್ರಾಯವನ್ನು ನೀಡಿದ ನಂತರ
ಸದಸ್ಯರು ಸ್ವಯಂ ಮಸೂದೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭಗಳು ಸಾಮಾನ್ಯ. ಆದ್ದರಿಂದ, ಈ ಮಸೂದೆಯೂ ಅಂಗೀಕರಿಸಿಕೊಳ್ಳುವ ಅವಕಾಶ ಬಹಳ ಕಡಿಮೆ ಎಂಬುದು ತಜ್ಞರ ಅಂದಾಜು.
