ಸತ್ಯಕಾಮ ವಾರ್ತೆ ವಡಗೇರಾ:
ತಾಲೂಕಿನ ಹೈಯ್ಯಾಳ .ಬಿ ಗ್ರಾಮದ ಸಗರನಾಡಿನ ಆರಾಧ್ಯ ದೈವ ಶ್ರೀ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ರವಿವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.
ನೂಲ ಹುಣ್ಣಿಮೆಯ ಮುಂಚಿತವಾಗಿ ಹಾಲಂಬಲಿ ಹಬ್ಬ ಆಚರಿಸಿದ ದಿನದಿಂದಲೇ ಭಕ್ತರು 21 ದಿನಗಳ ಕಾಲ ವ್ರತ ಆರಂಭಿಸುವುದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ ವೃತ ಹಿಡಿಯುವ ಭಕ್ತರು ದಿನನಿತ್ಯ ಸಾಯಂಕಾಲ ಹೈಯ್ಯಾಳ ಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿಸುವ ಸಂಪ್ರದಾಯವನ್ನು ಮಹಿಳೆಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಊರಿನ ಮತ್ತು ಸುತ್ತಮುತ್ತಲು ಗ್ರಾಮದ ಕುರಿಗಾಯಿಗಳು ತಮ್ಮ ಕುರಿಗಳನ್ನು ದೇವಸ್ಥಾನದ ಮುಂದೆ ಕರೆತರುವುದರ ಜೊತೆಗೆ ಕುರಿ ಕಾಯುವವರು ಪ್ರತಿ ವರ್ಷ ಹೊಸದಾದ ಕೋಲುಗಳನ್ನು ತಂದು ಹೊಸ ಮಣ್ಣಿನ ಗಡಿಗೆಯಲ್ಲಿ ಕುರಿ ಹಾಗೂ ಆಕಳು ಹಾಲು ತುಂಬಿಸಿ ಗರ್ಭಗುಡಿಯ ಮುಂದೆ ಕೋಲುಗಳನ್ನು ಇಟ್ಟು ಪೂಜೆ ಸಲ್ಲಿಸಿ ಕುರಿಗಳಿಗೆ ಯಾವುದೇ ರೀತಿಯ ರೋಗ ರುಜಿನೆ ಬಾರದಿರಲಿ ಕುರಿಗಳ ಸಂತತಿಯು ಸಮೃದದ್ಧಿಯಾಗಿರಲಿ ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಲಿ ಎಂದು ಹೈಯಾಳಲಿಂಗೇಶ್ವರರಲ್ಲಿ ಬೇಡಿಕೊಂಡು ಏಳು ಕೋಟಿಗೆ ಏಳು ಕೋಟಿಗೆ ಅಂತಾ ಘೋಷಣೆ ಕೂಗಿ ಹಾಲು ಭಂಡಾರವನ್ನು ಮಿಶ್ರಣ ಮಾಡಿ ಗುಡಿಯ ಸುತ್ತಲೂ ಕುರಿಗಳ ಮೇಲೆ ಚರಗ ಚೆಲ್ಲಿ ಚಿಕ್ಕ ಮಕ್ಕಳನ್ನು ಬೆಕ್ಕುಗಳಾಗಿ ಮಾಡಿ ಅವರಿಗೆ ಹಾಲು ಕುಡಿಸುವುದು ತುಂಬಾ ವಿಶೇಷವಾಗಿದೆ ಮೂಲಕ ಈ ಹಾಲು ಹಬ್ಬವನ್ನು ಭಕ್ತರೆಲ್ಲರೂ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ .ಭಂಡಾರ ಹಾಲು, ಪ್ರಕೃತಿ ಸಮೃದ್ಧಿಯ ಸಂಕೇತವಾಗಿವೆ ನಾಡಿನ ತುಂಬಾ ಉತ್ತಮ ಮಳೆ ಬೆಳೆ ಆರೋಗ್ಯ ಸಮೃದ್ಧಿಗಾಗಿ ಪ್ರತಿವರ್ಷ ಆಚರಿಸುವ ಹಬ್ಬವೇ ಹಾಲಹಬ್ಬ ಎಂದು ಹಿರಿಯರು ಹೇಳುತ್ತಾರೆ.
- Advertisement -
ಹೈಯ್ಯಾಳ ಲಿಂಗೇಶ್ವರ ಜಾತ್ರೆಯು ನೂಲು ಹುಣ್ಣಿಮೆಯ ದಿನ ಜರಗುವ ಜಾತ್ರೆಯೆಂದು 21 ದಿನಗಳ ವ್ರತ ಮುಕ್ತಾಯಗೊಳಿಸಿ ಅಂದು ಮಹಿಳೆಯರು ಮನೆಯಲ್ಲಿ ನೈವೇದ್ಯ ರೂಪದಲ್ಲಿ ಹೋಳಿಗೆ ಕರ್ಜಿಕಾಯಿ ಕಡಬು ಇನ್ನಿತರ ಖ್ಯಾಧ್ಯಗಳನ್ನು ಮಾಡಿ ಬುಟ್ಟಿಯಲ್ಲಿ ತುಂಬಿಕೊಂಡು ದೇವರಿಗೆ ಅರ್ಪಿಸುವ ಪದ್ಧತಿ ಮೊದಲಿನಿಂದಲೂ ಇದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಪೂಜಾರಿಗಳು ಸುತ್ತಮುತ್ತಲು ಗ್ರಾಮದ ಭಕ್ತರು ಗ್ರಾಮಸ್ಥರು ಹಾಗೂ ಇನ್ನಿತರರು ಭಾಗವಹಿಸಿದ್ದರು

