Category: State

  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಯಾದಗಿರಿ: ಸಂವಿಧಾನ ವಿರೋಧಿ ಹಾಗೂ ಕಾನೂನುಬಾಹಿರ ನಡೆ ನಡೆಸುತ್ತಿರುವ ಆರ್‌ಎಸ್‌ಎಸ್ ವಿರುದ್ಧ, ಮತ್ತು “ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಗೆ ಸ್ವಾಗತಿಸಲು ಬರೆಯಲಾಗಿದೆ” ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಯನ್ನು ಖಂಡಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲವಾಗಿ ನ.25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ತಿಳಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ಈ ಪ್ರತಿಭಟನೆ ನಡೆಯಲಿದ್ದು, ಯಾದಗಿರಿಯಲ್ಲೂ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಸಂವಿಧಾನ ಪ್ರತಿಗಳು, ಅಂಬೇಡ್ಕರ್ ಭಾವಚಿತ್ರ, ನೀಲಿ ಧ್ವಜಗಳು, ತಮಟೆಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ನಂತರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದರು.

    ಅಧಿಕೃತ ನೋಂದಣಿ ಇಲ್ಲದಿದ್ದರೂ ಶತಮಾನೋತ್ಸವ ಆಚರಿಸುತ್ತಿರುವ ಆರ್‌ಎಸ್‌ಎಸ್ ಮನುವಾದಿ ಚಿಂತನೆ ಹರಡುತ್ತಿದ್ದು, ಬಿಜೆಪಿಯ ಮುಖವಾಣಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ವಿರುದ್ಧ ಪ್ರಶ್ನೆ ಎತ್ತಿದ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬವನ್ನು ಅವಮಾನಿಸುವ ಕ್ರಮ ನಾಚಿಕೆಗೆಡು ಎಂದು ಖಂಡಿಸಿದರು.

    ನಂತರ ಮಾತನಾಡಿದ ಶಿವಲಿಂಗ ಹಸನಾಪುರ, ಸಂವಿಧಾನ–ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಶಕ್ತಿಗಳು ಸಕ್ರಿಯವಾಗಿವೆ. ಸಿಜೆಐ ಬಿ.ಆರ್. ಗವಾಯಿ ಹಾಗೂ ಅಂಬೇಡ್ಕರ್ ವಿರುದ್ಧ ನಡೆಯುತ್ತಿರುವ ಅವಹೇಳನ ಪ್ರಜಾಪ್ರಭುತ್ವಕ್ಕೆ ಅಪಾಯದ ಸೂಚನೆ ಎಂದು ಹೇಳಿದರು.

    ಪ್ರಿಯಾಂಕ್ ಖರ್ಗೆ ಅವರು ಕೇವಲ ಸಂವಿಧಾನದ ಚೌಕಟ್ಟಿನಲ್ಲಿ ನಡೆದುಕೊಳ್ಳಲು ಹೇಳಿದ್ದಕ್ಕಾಗಿ ಕೆಲ ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದು, ಜೀವ ಬೆದರಿಕೆ ಹಾಕುತ್ತಿರುವುದನ್ನು ಅವರು ಖಂಡಿಸಿದರು. ದಲಿತ ನಾಯಕರ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ  ಎಂದು ಹೇಳಿದರು.

    ಹೀಗಾಗಿ  ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಂಬೇಡ್ಕರ್‌ ತತ್ವಗಳನ್ನು ನಂಬಿದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಕರೆ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಚಂದಪ್ಪ ಮುನೆಪ್ಪನೋರ, ಮರೆಪ್ಪ ಕ್ರಾಂತಿ, ಭೀಮಣ್ಣ ಹುಣಸಗಿ, ತಿಪ್ಪಣ್ಣ ಶೆಳ್ಳಗಿ, ಶರಭಣ್ಣ ದೊರನಳ್ಳಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ರಂಗಸ್ವಾಮಿ ಕೊಂಕಲ್, ದೊಡ್ಡಪ್ಪ ಕಾಡಂಗೇರಾ, ರಮೇಶ್ ಭಾಚಿಮಟ್ಟಿ, ಚಂದ್ರು ಬಲಶೆಟ್ಟಿಹಾಳ, ಎಂ. ಪಟೇಲ್, ಬಲಭೀಮ ಬೇವಿನಹಳ್ಳಿ, ಚನ್ನಪ್ಪ ದೇವಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ರಸ್ತೆ, ಬೀದಿ ಎಲ್ಲ ಕಡೆ ಕ್ಯಾಮೆರಾ ಹಾಕ್ತಿದ್ದೇವೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ರೆ, ಆ ದೃಶ್ಯ ನೋಡಿ ಅವರ ಮನೆ ಮುಂದೆ ಕಸ ತಂದು ಹಾಕ್ತೀನಿ!” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಬಗ್ಗೆ ನಿರಂತರ ಟೀಕೆ ಮಾಡುತ್ತಿರುವ ನಾಗರಿಕರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ ಮಾತನಾಡಿದರು. “ಈ ಸಮಸ್ಯೆ ಬೆಂಗಳೂರು ಮಾತ್ರದಲ್ಲ, ಇನ್ನೂ ಅನೇಕ ನಗರಗಳಲ್ಲಿ ಇದೆ. ಆದ್ರೆ ಮಾಧ್ಯಮಗಳು ಇಲ್ಲಿ ಮಾತ್ರ ಹೆಚ್ಚು ತೋರಿಸ್ತಾರೆ. ಈಗ ಇದಕ್ಕೆ ಸ್ಪಷ್ಟ ಪರಿಹಾರ ಕೊಡ್ತಿದ್ದೀವಿ ನಗರಪಾಲಿಕೆಯಿಂದ ಹೊಸ ಕ್ಯಾಮೆರಾ ಜಾಲ ಹಾಕಲಾಗುತ್ತದೆ. ಯಾರೂ ಸಹ ರಸ್ತೆ, ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕಬಾರದು” ಎಂದು ಹೇಳಿದರು.

    ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದ ಘಟನೆ ಒಂದನ್ನು ಹಂಚಿಕೊಂಡು, “ಅಲ್ಲೂ ಕೆಲವರು ರಸ್ತೆಗೆ ಕಸ ಹಾಕಿದ್ದರು, ನಾವು ಹಿಂಬಾಲಿಸಿ ಅವರ ಮನೆ ಮುಂದೆಯೇ ಕಸ ಬಿಟ್ಟು ಬಂದಿದ್ದೇವೆ” ಎಂದು ಉದಾಹರಣೆ ನೀಡಿದ್ದಾರೆ. “ಕಸವನ್ನು ವಾಹನಗಳಲ್ಲಿ ಹಾಕಿ ಬೇರೆಡೆ ಬಿಸಾಡುವ ಏಜೆಂಟರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

    ಡಿಕೆಶಿ ನಾಗರಿಕರಿಗೆ ಕರೆ ನೀಡಿ, “ಪ್ರತಿ ಮನೆಯಲ್ಲೂ ಕಸದ ಡಬ್ಬಿ ಇಡಿ. ನಮ್ಮ ವಾಹನ ಮನೆ ಮನೆಗೆ ಬರುತ್ತದೆ, ಕಸವನ್ನು ಅದಕ್ಕೆ ನೀಡಿ. ಚಿತ್ರ ತೆಗೆದು ಟೀಕೆ ಮಾಡುವುದಕ್ಕಿಂತ ಸ್ವಚ್ಛತೆಗೆ ಸಹಕರಿಸಿ” ಎಂದು ಮನವಿ ಮಾಡಿದರು.

    ಕಾಂಟ್ರ್ಯಾಕ್ಟರ್‌ ಮಾದರಿ ನಿರ್ವಹಣೆ ನಗರದ ಮುಖ್ಯರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಸದ ನಿರ್ವಹಣೆ ಕಾಂಟ್ರ್ಯಾಕ್ಟರ್‌ಗಳಿಗೆ ಹಸ್ತಾಂತರಿಸುವ ಆಲೋಚನೆಯೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರರೆ. ಸ್ವಚ್ಛ ನಗರ ನಿರ್ಮಾಣಕ್ಕಾಗಿ ಕಠಿಣ ಕ್ರಮ ಕೈಗೆತ್ತಿಕೊಳ್ಳಲಿರುವುದಾಗಿ ಡಿಕೆಶಿ ಹೇಳಿದ್ದು, “ನಿಯಮ ಉಲ್ಲಂಘನೆ ಮಾಡಿದರೆ ಯಾರನ್ನೂ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.

  • ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಸತ್ಯಕಾಮ ವಾರ್ತೆ ವಿಜಯನಗರ:

    ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭವಾಗುತ್ತಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಈಗ ಸಚಿವರೇ ಬಾಯ್ಬಿಟ್ಟಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಖಾನ್ ಅವರು, ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿವರೆಗೆ ಅನುದಾನ ಬೇಕಾಗುತ್ತದೆ ಎಂದರು. ಈ ಮಹತ್ತರ ಮೊತ್ತವನ್ನು ಪೂರೈಸುವಲ್ಲಿ ಸರ್ಕಾರಕ್ಕೆ ಬರುವ ಒತ್ತಡವೇ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ಸಂದರ್ಭದಲ್ಲಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸರನ್ನು ಹೊಗಳಿದ ಸಚಿವರು, “ನಮ್ಮ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ. ಅನುದಾನಕ್ಕಾಗಿ ಕಾಲಿಗೆ ಬಿದ್ದು ಕೇಳ್ತಾರೆ. ಅಣ್ಣ, ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸ್ಬೇಕು ಅಂತ ಮನವಿ ಮಾಡ್ತಾರೆ” ಎಂದು ಹೇಳಿದರು. ಆದರೆ ಇದೇ ಮಾತಿನ ಮಧ್ಯೆ ಗ್ಯಾರಂಟಿ ಯೋಜನೆಗಳಿಂದ ಅನುದಾನ ತಡೆಯಾಗುತ್ತಿದೆ ಎಂಬ ಅಂಶವನ್ನೂ ಅವರು ಅನಿವಾರ್ಯವಾಗಿ ಒಪ್ಪಿಕೊಂಡರು.

    ಸಚಿವರ ಈ ಹೇಳಿಕೆ, ವಿಪಕ್ಷಗಳು ಹಲವು ದಿನಗಳಿಂದ ಮಾಡುತ್ತಿದ್ದ “ಗ್ಯಾರಂಟಿ ಯೋಜನೆಗಳ ಭಾರದಿಂದ ರಾಜ್ಯದ ಖಜಾನೆ ಬತ್ತಿದೆ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ” ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಪಟುತೆ ಕುರಿತು ನಡೆಯುತ್ತಿದ್ದ ವಾದ ವಿವಾದಕ್ಕೆ ಇದೀಗ ಸರ್ಕಾರದ ಮಂತ್ರಿಯೇ ಬಲಪಡೆಯುವಂತಹ ಹೇಳಿಕೆ ಕೊಟ್ಟಿರುವುದು ವಿಶೇಷ.

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಲ್ಲಿ ಯೋಜನೆಗಳು ಜನಪ್ರಿಯವಾದರೂ, ಆಡಳಿತಾತ್ಮಕವಾಗಿ ಹಾಗೂ ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಹೊಸ ಸವಾಲುಗಳು ಎದುರಾದಂತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ರಾಜ್ಯದ ಅಭಿವೃದ್ಧಿ ಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅನ್ನುವುದನ್ನು ಕಾದು ನೋಡಬೇಕಿದೆ.

  • ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾವಾಗಿ ನ.2 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಕಸಾಪ ಸಭಾಂಗಣದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವ ಮತ್ತು 2025 ನೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಕರ್ಮ ಏಕದಂಡಿಗಿ ಮಠದ ಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಈ ಜೋಡು ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುದೋಳ್ ಉದ್ಘಾಟಿಸುವರು,ನಿವೃತ್ತ ಶಿಕ್ಷಕರಾದ ಸಕ್ರಪ್ಪ ಮಾಮನಿ, ಬಸವರಾಜ ಸಾಹು ಗೊಂದಡಗಿ, ಶಿವಪ್ಪ ದಾಸನಕೇರಿ, ಹಸನ್ ಸಾಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಹೊಟ್ಟಿ ಹೇಳಿದರು.

    ತಮ್ಮ ಅಧ್ಯಕ್ಷತೆಯಲ್ಲಿ ಸಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಅವರು ಕರ್ನಾಟಕ ಏಕಿಕರಣ ಚಳುವಳಿ‌ ಕುರಿತು ಹಾಗೂ ಕನ್ನಡ ಅಧ್ಯಾಪಕ ಡಾ. ಡಿ.ಎನ್. ಪಾಟೀಲ್ ಕರಡಕಲ್ ಅವರು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆಂದರು.
    ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವಿಂದ್ರ ಹೊಸಮನಿ, ಯಾದಗಿರಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರೆಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಗೌರವ ಕೋಶಾಧ್ಯಕ್ಷ ಬಸವರಾಜ ಅರಳಿ ಮೊಟನಳ್ಳಿ, ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಪಾಟೀಲ್ ಕಿಲ್ಲನಕೇರಾ, ದೇವರಾಜಗೌಡ ಬೆಳಗೆರಿ, ಗೌರವ ಕೋಶಾಧ್ಯಕ್ಷ ವೀರಭದ್ರಪ್ಪ ಸ್ವಾಮಿ ಜಾಕಾ ಮಠ, ನಾಗಪ್ಪ ಸಜ್ಜನ್‌,  ವೆಂಕಟೇಶ ಕಲಕಂಬ,  ಸ್ವಾಮಿದೇವ ದಾಸನಕೇರಿ  ಸೇರಿದಂತೆಯೇ ಇತರರಿದ್ದರು.

  • ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಗೆ ಬೆಳಗ್ಗೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮುದ್ದೇಬಿಹಾಳ ಬಸ್ ನಿಲ್ದಾಣ
    ಮುದ್ದೇಬಿಹಾಳ ಬಸ್ ನಿಲ್ದಾಣ

    ಹೌದು.. ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ನೂರಕ್ಕೆ ನೂರರಷ್ಟು ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಿಂದಿನ ಕೆಲಸಕ್ಕಾಗಿ ಬಂದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನದಟ್ಟಣೆ ಕಂಡು ಬಂದರೆ, ಶಾಲೆ-ಕಾಲೇಜು ಎಂದಿನಂತೆ ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾದ ಸನ್ನಿವೇಶಗಳು ಎದುರಾದವು.

    ಅಂಬೇಡ್ಕರ್ ವೃತ್ತ
    ಅಂಬೇಡ್ಕರ್ ವೃತ್ತ

    ಸರಕಾರಿ, ಖಾಸಗಿ ಶಾಲೆ, ಕಾಲೇಜುಗಳು ಕೆಲವೊತ್ತು ತೆಗೆದು ಮುಚ್ಚಿದರೆ. ಪೆಟ್ರೋಲ್ ಬಂಕ್ , ಔಷಧ ಅಂಗಡಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹೋರಾಟ ಕೇಂದ್ರ ಸ್ಥಳವಾದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ ಬಳಿಕ ಪ್ರತಿಭಟನೆ ಕಾವು ಜೋರಾಯಿತು.

    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಇಂದಿರಾ ಸರ್ಕಲ್
    ಇಂದಿರಾ ಸರ್ಕಲ್

    ಇಂದಿರಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದ್ಯಾಮವ್ವಣ ಕಟ್ಟೆ, ಬಜಾರ ರಸ್ತೆ ಯಲ್ಲಿ ಯಾವುದೇ ಅಂಗಡಿಗಳನ್ನು ತೆಗೆಯದೇ ಮುದ್ದೇಬಿಹಾಳ ಬಂದ್ ಗೆ ಬೆಂಬಲವನ್ನು ಭಾಗಶಃ ಸೂಚಿಸಿದವು.

    ಗ್ರಾಮದೇವತೆ(ದ್ಯಾಮವನ) ಕಟ್ಟೆ
    ಗ್ರಾಮದೇವತೆ(ದ್ಯಾಮವನ) ಕಟ್ಟೆ

    ಕರೆ ಸ್ವೀಕರಿಸದ ತಹಶಿಲ್ದಾರ ಕೀರ್ತಿ ಚಾಲಕ್

    ಇನ್ನು ಮುದ್ದೇಬಿಹಾಳ ಬಂದ್ ಗೆ ಬಗ್ಗೆ ತಹಶಿಲ್ದಾರರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸದೇ ಶಾಲಾ-ಕಾಲೇಜುಗಳ ರಜೆ ಬಗ್ಗೆ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡರು. ಶಾಲೆಗಳು ಆರಂಭ ಬಗ್ಗೆ ಬಿಇಒ ಬಿ ಎಸ್ ಸಾವಳಗಿ ಅವರಿಗೆ ಸಂಪರ್ಕಿಸಿದಾಗ ಶಾಲೆಗಳನ್ನು ರಜೆ ನೀಡಲು ನಮಗೆ ಯಾವುದೇ ಅನುಮತಿ ಇರುವುದಿಲ್ಲ. ಹೀಗಾಗಿ ತಾಲೂಕಿಗೆ ತಹಶಿಲ್ದಾರರೇ ಅಂತಿಮ ನಿರ್ಧಾರ ಕೈಗೊಳ್ಳುವರು. ಶಾಲಾ ರಜೆ ನೀಡಲು ಅವರೇ ಜವಬ್ದಾರರು. ಈಗಾಗಲೇ ಮುದ್ದೇಬಿಹಾಳ ಬಂದ್ ಬಗ್ಗೆ ಶಿಕ್ಷಣ ಇಲಾಖೆಯಿಂದ ತಹಶಿಲ್ದಾರರಿಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಹಶಿಲ್ದಾರರಿಂದ ಶಾಲಾ ಬಂದ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಹೀಗಾಗಿ ಶಾಲೆಗಳನ್ನು ರಜೆ ಘೋಷಣೆ ಮಾಡಿಲ್ಲ ಎಂದರು.

  • ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಗುರುಮಠಕಲ್: ಸಮಾಜದ ಮಕ್ಕಳು ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಹಿರಿಯ ವಿಜ್ಞಾನಿ ಸಖಾರಾಮ ಶ್ರೀನಿವಾಸಲು ಕರೆ ನೀಡಿದರು.

    ಪಟ್ಟಣದ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,  ಗುರುಮಠಕಲ್ ಸಮಾಜ ಸಾಕಷ್ಟು ಪ್ರಭಾವಶಾಲಿಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ. ಸಮಾಜದ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಹೆಮ್ಮೆಯ ವಿಷಯ.

    ಜೀವನ ಶೈಲಿ ಸಾಕಷ್ಟು ಬದಲಾಗಿದೆ. ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುಂದೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಯಂತಿ ಶುಭ ಸಂದರ್ಭದಲ್ಲಿ ಐಎಎಸ್ ಮಾಡುವ ಸಂಕಲ್ಪ ಮಾಡೋಣ ಎಂದರು.

    ಪ್ರಗತಿ ಪಥದಲ್ಲಿ ಸಾಗುತ್ತಿರುವ ಯುವ ಸಮೂಹ ಇನ್ನು ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು, ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

    ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಪೌರಾಣಿಕ ಹಿನ್ನೆಲೆಯುಳ್ಳ ಮಹಾರಾಜರ ಜಯಂತಿಯು ಗುರುಮಠಕಲ್ ನಲ್ಲಿ 55 ವರ್ಷಗಳಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ‌, ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಅರಿಯಬೇಕು, ರಾಮಾಯಣ, ಮಹಾಭಾರತದಲ್ಲಿ ಕಾರ್ತವೀರಾರ್ಜುನರ ಉಲ್ಲೇಖವಿದೆ. ಸಹಸ್ರ ಬುಜಗಳ ವರ ಪಡೆದ ಹಿನ್ನೆಲೆ ಸಹಸ್ತ್ರಾರ್ಜುನ ಹೆಸರು ಬಂದಿದೆ.

    ಆಧ್ಯಾತ್ಮ ಶಕ್ತಿ ಯಿಂದ ದತ್ತಾತ್ರೇಯ ರಿಂದ ವರ ಪಡೆದಿದ್ದಾರೆ. ವೀರ ಪರಾಕ್ರಮಿ ರಾಜಾರಾಗಿದ್ದಾರೆ. ರಾವಣ ಶಿವ ಪೂಜೆಯಲ್ಲಿ ತೊಡಗಿದ್ದಾಗ ನದಿಯ ಪ್ರವಾಹ ಹೆಚ್ಚಾಗಿ ಯುದ್ದವಾಯಿತು. ಮಹಾರಾಜರು ರಾವಣನನ್ನು ಬಂಧಿಯಾಗಿ ಮಾಡಿದ್ದರು.

    ಮಹರ್ಷಿ ಜಮದಾಗ್ನಿ ಆಶ್ರಮದಿಂದ ಕಾಮಧೇನು ಗೋವು ತಂದಿದ್ದರು ಈ ಹಿನ್ನೆಲೆಯಲ್ಲಿ 21 ಬಾರಿ ಯುದ್ಧವಾಗಿತ್ತು ಎಂದರು, ನ್ಯಾಯಯುತ, ಪರಾಕ್ರಮಿ, ಶೌರ್ಯ ಮಹಾನ್ ರಾಜರ ವಂಶದಲ್ಲಿ ಜನಿಸಿದ ನಾವು ಪುಣ್ಯವಂತರು ಎಂದರು.

    ಅತಿಥಿಗಳಾಗಿ ಹಣಮಂತರಾವ ಗೊಂಗಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ. ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕ ಕ್ರಾಂತಿ ಯಾಗುತ್ತದೆ. ಐಎಎಸ್, ಐಪಿಎಸ್ ತರಬೇತಿಗೆ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು.

    ಎಂತಹ ಕಷ್ಟವೇ ಇರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

    ಪ್ರೊ. ಡಾ. ಯಶವಂತರಾವ ಮೇಂಗಜಿ ಮಾತನಾಡಿದರು. ಚಂದುಲಾಲ ಚೌಧರಿ ಅಧ್ಯಕ್ಷೀಯ ಮಾತನಾಡಿದರು.

    ಪ್ರಮುಖರಾದ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ ವೇದಿಕೆಯಲ್ಲಿದ್ದರು.

    ಈ ವೇಳೆ ಸಾಧಕ ಮಕ್ಕಳಿಗೆ ಸನ್ಮಾನ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಜಯಂತಿ ಹಿನ್ನೆಲೆ ದೇವಿಯ ಅಭಿಷೇಕ, ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ಬಳಿಕ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು. ಶಶಿಕಾಂತ ಜನಾರ್ಧನ ನಿರೂಪಿಸಿದರು.ಮಾಣಿಕಪ್ರಭು ಚೌಧರಿ ವಂದಿಸಿದರು.

  • 5 ವರ್ಷಗಳ ಸೇವೆಯ ನಂತರ ದೊರೆಯುವ ಕಾನೂನುಬದ್ಧ ಹಕ್ಕು.! ಗ್ರಾಚ್ಯುಟಿಯ ಸಂಪೂರ್ಣ ಮಾಹಿತಿ

    5 ವರ್ಷಗಳ ಸೇವೆಯ ನಂತರ ದೊರೆಯುವ ಕಾನೂನುಬದ್ಧ ಹಕ್ಕು.! ಗ್ರಾಚ್ಯುಟಿಯ ಸಂಪೂರ್ಣ ಮಾಹಿತಿ

    ಉದ್ಯೋಗ ಜೀವನದಲ್ಲಿ ಪ್ರತಿಯೊಬ್ಬ ನೌಕರನಿಗೂ ಒಂದು ಗುರಿ ಇರುತ್ತದೆ ಭದ್ರ ಭವಿಷ್ಯವನ್ನು ನಿರ್ಮಿಸುವುದು. ವರ್ಷಗಳ ಕಾಲ ನಿಷ್ಠೆಯಿಂದ, ಪರಿಶ್ರಮದಿಂದ ಕೆಲಸ ಮಾಡಿದ ನಂತರ ನಿವೃತ್ತಿ ಅಥವಾ ಉದ್ಯೋಗ ಬದಲಾವಣೆ ಸಮಯದಲ್ಲಿ ಗ್ರಾಚ್ಯುಟಿ ಎಂಬುದು ಆರ್ಥಿಕ ಭದ್ರತೆ ನೀಡುವ ಪ್ರಮುಖ ಲಾಭವಾಗಿದೆ. ಇದು ಕೇವಲ ಹಣಕಾಸಿನ ಸಹಾಯವಲ್ಲ ನೌಕರರ ನಿಷ್ಠೆ, ದೀರ್ಘಾವಧಿ ಸೇವೆ ಮತ್ತು ಸಂಸ್ಥೆಯ ಮೇಲಿನ ಬದ್ಧತೆಯ ಪ್ರತಿಫಲವಾಗಿದೆ. ಭಾರತದ Payment of Gratuity Act, 1972 ಪ್ರಕಾರ, ಗ್ರಾಚ್ಯುಟಿ ಒಂದು ಕಾನೂನುಬದ್ಧ ಹಕ್ಕಾಗಿದೆ. ಈ ಕಾನೂನಿನ ಉದ್ದೇಶ ನೌಕರರ ಜೀವನದ ಸ್ಥಿರತೆಯನ್ನು ಖಾತ್ರಿಪಡಿಸುವುದು ಮತ್ತು ನಿವೃತ್ತಿಯ ನಂತರವೂ ಆರ್ಥಿಕ ಸುರಕ್ಷತೆ ಒದಗಿಸುವುದು.

    ಗ್ರಾಚ್ಯುಟಿ ಎಂದರೇನು?
    ಗ್ರಾಚ್ಯುಟಿ ಎಂದರೆ, ನೌಕರರು ಒಂದು ಸಂಸ್ಥೆಯಲ್ಲಿ ನಿರಂತರವಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಉದ್ಯೋಗದಾತರಿಂದ ನೀಡಲಾಗುವ ಆರ್ಥಿಕ ಮೊತ್ತ. ಇದು ನೌಕರರ ಸೇವಾ ಅವಧಿಯ ಗೌರವ ಸೂಚಕವಾಗಿದೆ. ನೌಕರರು ನಿವೃತ್ತಿಯಾದಾಗ, ರಾಜೀನಾಮೆ ನೀಡಿದಾಗ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ (ಉದಾಹರಣೆಗೆ ಸಾವು ಅಥವಾ ಗಂಭೀರ ಅನಾರೋಗ್ಯ) ಈ ಮೊತ್ತವನ್ನು ಪಾವತಿಸಲಾಗುತ್ತದೆ.

    ಯಾರಿಗೆ ಗ್ರಾಚ್ಯುಟಿ ಸಿಗುತ್ತದೆ?:
    ಗ್ರಾಚ್ಯುಟಿ ಪಡೆಯಲು ನೌಕರರು ಕನಿಷ್ಠ 5 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.
    ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ,
    ನೌಕರರ ಸಾವು,
    ಅಪಘಾತ ಅಥವಾ ತೀವ್ರ ಅನಾರೋಗ್ಯ,
    ಅಥವಾ ಸೇವೆ ಮುಗಿಯುವ ಮುಂಚಿನ ಅಪಾಯಕಾರಿ ಪರಿಸ್ಥಿತಿಗಳು
    ಈ ಸಂದರ್ಭಗಳಲ್ಲಿ ಐದು ವರ್ಷ ಪೂರೈಸದಿದ್ದರೂ, ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಗ್ರಾಚ್ಯುಟಿ ಮೊತ್ತ ಪಾವತಿಸಲಾಗುತ್ತದೆ.
    ಈ ನಿಯಮ ನೌಕರರನ್ನು ಸಂಸ್ಥೆಯೊಂಗಿದೆ ದೀರ್ಘಾವಧಿಗೆ ಬದ್ಧವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

    ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ ಮಾಡುವುದು?:
    ಗ್ರಾಚ್ಯುಟಿ ಲೆಕ್ಕಾಚಾರ ಸರಳವಾದ ಒಂದು ಸೂತ್ರದ ಆಧಾರದ ಮೇಲೆ ಮಾಡಲಾಗುತ್ತದೆ,
    ಗ್ರಾಚ್ಯುಟಿ = (ಕೊನೆಯ ಸಂಬಳ × 15 × ಸೇವಾ ವರ್ಷಗಳು) ÷ 26
    ಕೊನೆಯ ಸಂಬಳ = ಮೂಲ ಸಂಬಳ + ಡಿಎ (Dearness Allowance)
    15 = ತಿಂಗಳ 15 ದಿನಗಳ ಸಂಬಳಕ್ಕೆ ಸಮನಾದ ಮೊತ್ತ
    26 = ತಿಂಗಳಲ್ಲಿ ಸರಾಸರಿ ಕೆಲಸದ ದಿನಗಳ ಸಂಖ್ಯೆ

    ಉದಾಹರಣೆ: 7 ವರ್ಷ ಸೇವೆ ಸಲ್ಲಿಸಿದ ನೌಕರನ ಲೆಕ್ಕಾಚಾರ
    ಒಬ್ಬ ನೌಕರನ ಕೊನೆಯ ಸಂಬಳ ₹70,000 ಎಂದು ಪರಿಗಣಿಸೋಣ. ಅವರು 7 ವರ್ಷಗಳ ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.
    ಹಂತ 1: ಕೊನೆಯ ಸಂಬಳವನ್ನು 15/26 ರೊಂದಿಗೆ ಗುಣಿಸೋಣ
    = ₹70,000 × (15/26)
    = ₹70,000 × 0.576923
    ≈ ₹40,384.62

    ಹಂತ 2: ಈ ಮೊತ್ತವನ್ನು ಸೇವಾ ವರ್ಷಗಳೊಂದಿಗೆ ಗುಣಿಸೋಣ
    = ₹40,384.62 × 7
    ≈ ₹2,82,692.34
    ಅಂತಿಮ ಗ್ರಾಚ್ಯುಟಿ ಮೊತ್ತ: ₹2,82,692

    ಗ್ರಾಚ್ಯುಟಿಯ ಪ್ರಮುಖ ಪ್ರಯೋಜನಗಳು
    ಆರ್ಥಿಕ ಭದ್ರತೆ:
    ನಿವೃತ್ತಿ ಅಥವಾ ಕೆಲಸ ಬಿಟ್ಟ ನಂತರ ಹಣಕಾಸಿನ ಹಿನ್ನಡೆ ತಪ್ಪಿಸಲು ಸಹಾಯ ಮಾಡುತ್ತದೆ.

    ನೌಕರರ ಪರಿಶ್ರಮಕ್ಕೆ ಗೌರವ:
    ಸಂಸ್ಥೆಯು ನಿಷ್ಠಾವಂತ ನೌಕರರನ್ನು ಗೌರವಿಸುವ ಮಾರ್ಗವಾಗಿದೆ.

    ತೆರಿಗೆ ಮುಕ್ತ ಲಾಭ:
    ₹20 ಲಕ್ಷ ರೂ.ವರೆಗೆ ಗ್ರಾಚ್ಯುಟಿ ಮೊತ್ತ ತೆರಿಗೆ ಮುಕ್ತವಾಗಿದೆ (ಆಕರ್ಷಕ ಲಾಭ).

    ಕುಟುಂಬದ ಸುರಕ್ಷತೆ:
    ತುರ್ತು ಸಂದರ್ಭಗಳಲ್ಲಿ (ಸಾವು ಅಥವಾ ಅನಾರೋಗ್ಯ) ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುತ್ತದೆ.

    ಗ್ರಾಚ್ಯುಟಿಯ ಮಹತ್ವ: ನೌಕರರ ಭವಿಷ್ಯದ ಆರ್ಥಿಕ ಆಧಾರ,
    ಗ್ರಾಚ್ಯುಟಿ ನೌಕರರಿಗಾಗಿ ಕೇವಲ ಒಂದು ಪಾವತಿ ಅಲ್ಲ, ಅದು ನಿಷ್ಠೆ, ಪರಿಶ್ರಮ ಮತ್ತು ಸೇವೆಯ ಮೌಲ್ಯವನ್ನು ಗುರುತಿಸುವ ಒಂದು ಗೌರವ ಸೂಚಕ. ನಿವೃತ್ತಿಯ ನಂತರವೂ ಈ ಮೊತ್ತ ಜೀವನದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮನೆ ಖರ್ಚು, ಆರೋಗ್ಯ, ಮಕ್ಕಳ ಶಿಕ್ಷಣ ಮುಂತಾದ ಅಗತ್ಯಗಳಲ್ಲಿ ಇದು ಉಪಯೋಗವಾಗುತ್ತದೆ. ಸಂಸ್ಥೆಯು ಗ್ರಾಚ್ಯುಟಿಯ ಮೂಲಕ ನೌಕರರೊಂದಿಗೆ ದೀರ್ಘಾವಧಿಯ ವಿಶ್ವಾಸದ ಬಾಂಧವ್ಯವನ್ನು ನಿರ್ಮಿಸುತ್ತದೆ. ನೌಕರನಿಗೂ ಈ ಮೊತ್ತದಿಂದ ಭರವಸೆ, ಶಾಂತಿ ಮತ್ತು ಭದ್ರತೆ ದೊರಕುತ್ತದೆ.

    ಒಟ್ಟಾರೆಯಾಗಿ, ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರತಿಯೊಬ್ಬ ನೌಕರರಿಗೂ ಗ್ರಾಚ್ಯುಟಿ ಹಕ್ಕು ಇದೆ. ಇದು ನೌಕರರ ಜೀವನದ ಭದ್ರತೆಗೆ ಕಾನೂನುಬದ್ಧವಾದ, ಮಾನವೀಯ ಹಾಗೂ ಗೌರವಯುತ ಪ್ರೋತ್ಸಾಹವಾಗಿದೆ.

  • ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.

    ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

     

    ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.

    ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.

    ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.

    ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.