Category: ಯಾದಗಿರಿ

  • ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    • ಸಂಬಳ ಒಂದೇ, ಕೆಲಸ ಎರಡು – ನಗರಸಭೆ ಕ್ರಮಕ್ಕೆ ಆಕ್ಷೇಪ

    ವರದಿ: ಕುದಾನ್ ಸಾಬ್ 

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿರುವ ನಡುವೆಯೇ, ಇರುವ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ ನೀಡಿ, ನಗರಸಭೆಯ ಕೆಲಸಗಳ ಜೊತೆಗೆ ಪತ್ರಿಕಾ ಭವನದ ಸ್ವಚ್ಛತೆ ಕಾರ್ಯವನ್ನೂ ನಿರ್ವಹಿಸುವಂತೆ ಸೂಚಿಸಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

    ನಗರಸಭೆಯ ದೈನಂದಿನ ಕಾರ್ಯಭಾರವೇ ಹೆಚ್ಚಾಗಿರುವ ಸಂದರ್ಭದಲ್ಲಿ, ನಗರಸಭೆಯ ಖಾಯಂ ಡಿ-ಗ್ರೂಪ್ ಸಿಬ್ಬಂದಿ ಶ್ರೀಶೈಲ  ಅವರನ್ನು ನಗರಸಭೆಯ ವ್ಯಾಪ್ತಿಗೆ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದು ಆಡಳಿತಾತ್ಮಕ ಅಸಮಂಜಸತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬರುತ್ತಿದೆ.

    ನಗರಸಭೆ ಸಿಬ್ಬಂದಿಯನ್ನು ನಗರಸಭೆಯ ಹೊರಗಿನ ಕೆಲಸಗಳಿಗೆ ಬಳಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ವಿದ್ಯಾವಂತರು ಅಭಿಪ್ರಾಯಪಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಹೊಸ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವುದು ಅಥವಾ ತಾತ್ಕಾಲಿಕ ವ್ಯವಸ್ಥೆ ರೂಪಿಸುವುದು ಆಡಳಿತದ ಕರ್ತವ್ಯವಾಗಿದ್ದು, ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

    ಸಂಘದ ಹೊಣೆಗಾರಿಕೆ ಪ್ರಶ್ನಾರ್ಥಕ: ಪತ್ರಿಕಾ ಭವನದ ದಿನನಿತ್ಯದ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಆ ಭವನವನ್ನು ನಡೆಸುತ್ತಿರುವ ಸಂಘದದ್ದೇ ಆಗಿರಬೇಕು. ಆದರೆ ಸಂಘವು ತನ್ನ ಕರ್ತವ್ಯವನ್ನು ನಿರ್ವಹಿಸದೇ, ನಗರಸಭೆ ಸಿಬ್ಬಂದಿಯನ್ನು ಅವಲಂಬಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಸಂಘಕ್ಕೆ ಸಿಬ್ಬಂದಿ ಅಗತ್ಯವಿದ್ದರೆ, ತನ್ನದೇ ಮೂಲಗಳಿಂದ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

    ಕರ್ನಾಟಕ ನಗರಸಭೆಗಳ ಸೇವಾ ನಿಯಮಗಳ ಪ್ರಕಾರ, ಖಾಯಂ ನೌಕರರನ್ನು ಅವರ ನೇಮಕಾತಿ ಹುದ್ದೆ, ವೇತನ ಶ್ರೇಣಿ ಹಾಗೂ ನಿಗದಿತ ಕಾರ್ಯವ್ಯಾಪ್ತಿಗೆ ಹೊರಗಿನ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದೆ. ಯಾವುದೇ ಹೆಚ್ಚುವರಿ ಅಥವಾ ಪ್ರಭಾರಿ ಜವಾಬ್ದಾರಿ ನೀಡಬೇಕಾದಲ್ಲಿ, ಅರ್ಹ ಪ್ರಾಧಿಕಾರದ ಲಿಖಿತ ಆದೇಶ, ಅವಧಿ ನಿಗದಿ ಹಾಗೂ ನಿಯಮಾನುಸಾರ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಖಾಯಂ ನೌಕರರಾದ ಶ್ರೀಶೈಲಾ ಅವರನ್ನು ಸೇವಕ ಹುದ್ದೆಗೆ ಅಥವಾ ನಗರಸಭೆಯ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದಾದರೆ, ಅದು ಕರ್ನಾಟಕ ನಗರಸಭೆ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ. ನಗರಸಭೆ ಸಿಬ್ಬಂದಿಯನ್ನು ಸೇವಾ ನಿಯಮಗಳಿಗೆ ವಿರುದ್ಧವಾಗಿ ಹೊರಗಿನ ಕೆಲಸಗಳಿಗೆ ನಿಯೋಜಿಸಿರುವುದಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಡಿ. ಗ್ರೂಪ್ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ೩೩ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಬಳಲಿರುವ ಘಟನೆ ಬೆಳಕಿಗೆ ಬಂದಿದೆ.

    ರಾತ್ರಿ ೭.೩೦ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.

    ಒಟ್ಟು ೧೫೦ ವಿದ್ಯಾರ್ಥಿಗಳಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿAದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ.

    ತುರ್ತು ಪರಿಸ್ಥಿತಿಯನ್ನು ಮನಗಂಡು ತಾಲೂಕ ಆಸ್ಪತ್ರೆ ವೈದ್ಯರ ಜೊತೆಗೆ ಪಟ್ಟಣದ ಸ್ಥಳೀಯ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರ್ಪಡೆಗೊಂಡು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆಯ ಮಾಹಿತಿ ತಿಳಿದ ಜಿಲ್ಲಾ ಆಡಳಿತದ ತಂಡ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಸೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದರು.

    ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

    ಘಟನೆಯಿAದ ಆತಂಕಗೊAಡ ಪೋಷಕರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.

  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾವಾಗಿ ನ.2 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಕಸಾಪ ಸಭಾಂಗಣದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವ ಮತ್ತು 2025 ನೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಕರ್ಮ ಏಕದಂಡಿಗಿ ಮಠದ ಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಈ ಜೋಡು ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುದೋಳ್ ಉದ್ಘಾಟಿಸುವರು,ನಿವೃತ್ತ ಶಿಕ್ಷಕರಾದ ಸಕ್ರಪ್ಪ ಮಾಮನಿ, ಬಸವರಾಜ ಸಾಹು ಗೊಂದಡಗಿ, ಶಿವಪ್ಪ ದಾಸನಕೇರಿ, ಹಸನ್ ಸಾಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಹೊಟ್ಟಿ ಹೇಳಿದರು.

    ತಮ್ಮ ಅಧ್ಯಕ್ಷತೆಯಲ್ಲಿ ಸಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಅವರು ಕರ್ನಾಟಕ ಏಕಿಕರಣ ಚಳುವಳಿ‌ ಕುರಿತು ಹಾಗೂ ಕನ್ನಡ ಅಧ್ಯಾಪಕ ಡಾ. ಡಿ.ಎನ್. ಪಾಟೀಲ್ ಕರಡಕಲ್ ಅವರು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆಂದರು.
    ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವಿಂದ್ರ ಹೊಸಮನಿ, ಯಾದಗಿರಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರೆಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಗೌರವ ಕೋಶಾಧ್ಯಕ್ಷ ಬಸವರಾಜ ಅರಳಿ ಮೊಟನಳ್ಳಿ, ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಪಾಟೀಲ್ ಕಿಲ್ಲನಕೇರಾ, ದೇವರಾಜಗೌಡ ಬೆಳಗೆರಿ, ಗೌರವ ಕೋಶಾಧ್ಯಕ್ಷ ವೀರಭದ್ರಪ್ಪ ಸ್ವಾಮಿ ಜಾಕಾ ಮಠ, ನಾಗಪ್ಪ ಸಜ್ಜನ್‌,  ವೆಂಕಟೇಶ ಕಲಕಂಬ,  ಸ್ವಾಮಿದೇವ ದಾಸನಕೇರಿ  ಸೇರಿದಂತೆಯೇ ಇತರರಿದ್ದರು.

  • ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಗುರುಮಠಕಲ್: ಸಮಾಜದ ಮಕ್ಕಳು ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಹಿರಿಯ ವಿಜ್ಞಾನಿ ಸಖಾರಾಮ ಶ್ರೀನಿವಾಸಲು ಕರೆ ನೀಡಿದರು.

    ಪಟ್ಟಣದ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,  ಗುರುಮಠಕಲ್ ಸಮಾಜ ಸಾಕಷ್ಟು ಪ್ರಭಾವಶಾಲಿಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ. ಸಮಾಜದ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಹೆಮ್ಮೆಯ ವಿಷಯ.

    ಜೀವನ ಶೈಲಿ ಸಾಕಷ್ಟು ಬದಲಾಗಿದೆ. ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುಂದೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಯಂತಿ ಶುಭ ಸಂದರ್ಭದಲ್ಲಿ ಐಎಎಸ್ ಮಾಡುವ ಸಂಕಲ್ಪ ಮಾಡೋಣ ಎಂದರು.

    ಪ್ರಗತಿ ಪಥದಲ್ಲಿ ಸಾಗುತ್ತಿರುವ ಯುವ ಸಮೂಹ ಇನ್ನು ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು, ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

    ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಪೌರಾಣಿಕ ಹಿನ್ನೆಲೆಯುಳ್ಳ ಮಹಾರಾಜರ ಜಯಂತಿಯು ಗುರುಮಠಕಲ್ ನಲ್ಲಿ 55 ವರ್ಷಗಳಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ‌, ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಅರಿಯಬೇಕು, ರಾಮಾಯಣ, ಮಹಾಭಾರತದಲ್ಲಿ ಕಾರ್ತವೀರಾರ್ಜುನರ ಉಲ್ಲೇಖವಿದೆ. ಸಹಸ್ರ ಬುಜಗಳ ವರ ಪಡೆದ ಹಿನ್ನೆಲೆ ಸಹಸ್ತ್ರಾರ್ಜುನ ಹೆಸರು ಬಂದಿದೆ.

    ಆಧ್ಯಾತ್ಮ ಶಕ್ತಿ ಯಿಂದ ದತ್ತಾತ್ರೇಯ ರಿಂದ ವರ ಪಡೆದಿದ್ದಾರೆ. ವೀರ ಪರಾಕ್ರಮಿ ರಾಜಾರಾಗಿದ್ದಾರೆ. ರಾವಣ ಶಿವ ಪೂಜೆಯಲ್ಲಿ ತೊಡಗಿದ್ದಾಗ ನದಿಯ ಪ್ರವಾಹ ಹೆಚ್ಚಾಗಿ ಯುದ್ದವಾಯಿತು. ಮಹಾರಾಜರು ರಾವಣನನ್ನು ಬಂಧಿಯಾಗಿ ಮಾಡಿದ್ದರು.

    ಮಹರ್ಷಿ ಜಮದಾಗ್ನಿ ಆಶ್ರಮದಿಂದ ಕಾಮಧೇನು ಗೋವು ತಂದಿದ್ದರು ಈ ಹಿನ್ನೆಲೆಯಲ್ಲಿ 21 ಬಾರಿ ಯುದ್ಧವಾಗಿತ್ತು ಎಂದರು, ನ್ಯಾಯಯುತ, ಪರಾಕ್ರಮಿ, ಶೌರ್ಯ ಮಹಾನ್ ರಾಜರ ವಂಶದಲ್ಲಿ ಜನಿಸಿದ ನಾವು ಪುಣ್ಯವಂತರು ಎಂದರು.

    ಅತಿಥಿಗಳಾಗಿ ಹಣಮಂತರಾವ ಗೊಂಗಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ. ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕ ಕ್ರಾಂತಿ ಯಾಗುತ್ತದೆ. ಐಎಎಸ್, ಐಪಿಎಸ್ ತರಬೇತಿಗೆ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು.

    ಎಂತಹ ಕಷ್ಟವೇ ಇರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

    ಪ್ರೊ. ಡಾ. ಯಶವಂತರಾವ ಮೇಂಗಜಿ ಮಾತನಾಡಿದರು. ಚಂದುಲಾಲ ಚೌಧರಿ ಅಧ್ಯಕ್ಷೀಯ ಮಾತನಾಡಿದರು.

    ಪ್ರಮುಖರಾದ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ ವೇದಿಕೆಯಲ್ಲಿದ್ದರು.

    ಈ ವೇಳೆ ಸಾಧಕ ಮಕ್ಕಳಿಗೆ ಸನ್ಮಾನ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಜಯಂತಿ ಹಿನ್ನೆಲೆ ದೇವಿಯ ಅಭಿಷೇಕ, ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ಬಳಿಕ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು. ಶಶಿಕಾಂತ ಜನಾರ್ಧನ ನಿರೂಪಿಸಿದರು.ಮಾಣಿಕಪ್ರಭು ಚೌಧರಿ ವಂದಿಸಿದರು.

  • ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಉತ್ತಮ‌ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಶಾಸಕ ಶರಣಗೌಡ ಕಂದಕೂರ ವೈದ್ಯರಿಗೆ ಕಿವಿ ಮಾತು ಹೇಳಿದರು.

    ತಾಲೂಕಿನ ಅರಕೇರಾ(ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಶಸ್ತ್ರ ಚಿಕಿತ್ಸಾಲಯದ ಕೋಣೆಯನ್ನು ಉದ್ಘಾಟಿಸಿದ ಶಾಸಕರು, ಸರ್ಕಾರಿ ದವಾಖಾನಿಗಳಿಗೆ ಬರುವವರು ಬಡವರೇ ಆಗಿರುತ್ತಾರೆ. ಅವರಿಗೋಸ್ಕರವೇ ಸರ್ಕಾರಗಳು‌ ಇಂತಹ ವ್ಯವಸ್ತೆ ಮಾಡಿರುತ್ತದೆ. ಕಾರಣ, ನಿಗದಿತ ಅವಧಿಯಲ್ಲಿ ರೋಗಕ್ಕೆ ತಕ್ಕ ಚಿಕಿತ್ಸೆ ನೀಡುವ ಮೂಲಕ ತಾವುಗಳು ಎರಡನೇ ದೇವರಾಗಬೇಕೆಂದು ಮಾರ್ಮಿಕವಾಗಿ ಹೇಳಿದರು.

    ಇಲ್ಲಿ ಇನ್ನೂ ಏನಾದರೂ ಸೌಲಭ್ಯಗಳು ಬೇಕಾದರೇ ತಮ್ಮ ಗಮನಕ್ಕೆ ತಂದರೇ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ‌ ಪ್ರಯತ್ನ ಮಾಡಲಾಗುವುದೆಂದರು.

    ಪರಮಾನಂದೇಶ್ವರ ಶ್ರೀಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ಡಿಎಚ್ ಒ ಡಾ.ಮಹೇಶ ಬಿರಾದಾರ, ಡಾ.ಎಂ.ಎಸ್.ಪಾಟೀಲ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ನೀಲಾಂಬಿಕಾ ಎಂ.ಜಾಪಟ್ಟಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

  • ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025–28 ನೇ ಅವಧಿಯ ಚುನಾವಣೆಯು ನವೆಂಬರ್ 9ರಂದು ನಡೆಯಲಿದ್ದು, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ದಿನೇಶ್ ವಿ.ಸಿ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕ ಕುಮಾರಸ್ವಾಮಿ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

    ಈ ವೇಳೆ ಸಂಜೆಕಾಲ ಪತ್ರಿಕೆಯ ಸಂಪಾದಕರಾದ ರಾಜೇಶ್ ಪಾಟೀಲ್, ಪತ್ರಕರ್ತರಾದ ತೋಟೆಂದ್ರ, ಮಲ್ಲು ಕಾಮರೆಡ್ಡಿ, ಕುದಾನ್ ಸಾಬ್, ಬಸವರಾಜ್ ಕಾಂಬಳೆ, ಮಂಜು ಬಿರಾದಾರ್, ದೇವಿಂದ್ರ ಕಿಲ್ಲನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • 20 ದಿನಗಳಲ್ಲಿ 750 ವಾಹನಗಳಿಗೆ ಆನ್ ಲೈನ್ ದಂಡ : ಎಸ್.ಪಿ ಪೃಥ್ವಿಕ್ ಶಂಕರ್ ಮಾಹಿತಿ

    20 ದಿನಗಳಲ್ಲಿ 750 ವಾಹನಗಳಿಗೆ ಆನ್ ಲೈನ್ ದಂಡ : ಎಸ್.ಪಿ ಪೃಥ್ವಿಕ್ ಶಂಕರ್ ಮಾಹಿತಿ

    ಯಾದಗಿರಿ: ವಾಹನ ಸವಾರರು ಉಲ್ಲಂಘಿಸುವ ಸಂಚಾರ ನಿಯಮಗಳಿಗೆ ದಂಡ ಹಾಕುವ ಕೆಲಸ ಕಳೆದ ಅ.6 ರಿಂದ ನಗರದಲ್ಲಿ ಆರಂಭಿಸಿರುವ ಪೊಲೀಸರು ಕೇವಲ ಮೂರೇ ವಾರದಲ್ಲಿ ಸುಮಾರು 750 ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.

    ಶನಿವಾರ ತಮ್ಮ ಕಚೇರಿಯಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವ ಮತ್ತು ಮೂರು ಜನರು ಕುಳಿತು ವಾಹನಗಳನ್ನು ಚಲಾಯಿಸುವ ಸವಾರರಿಗೆ ಆನ್ ಲೈನ್ ದಂಡ ಹಾಕಲಾಗುತ್ತಿದೆ.‌ ಈ ಸಂಪರ್ಕ ರಹಿತ ದಂಡ ಹಾಕುವ ಉದ್ದೇಶವಿಷ್ಠೆ. ಮಂಡ್ಯದಲ್ಲಿ ಸಂಚಾರ ನಿಮಯ ಉಲ್ಲಂಘಿಸಿ ಹೋಗುತ್ತಿದ್ದ ಸವಾರರನ್ನು ಹಿಡಿಯಲು ಪೊಲೀಸರು‌ ಮುಂದಾದಾಗ ತಪ್ಪಿಸಿಕೊಳ್ಳಲು ಹೋಗಿ‌ ಜೀವ‌ ಕಳೆದುಕೊಂಡಿದ್ದರಿಂದ ನಮ್ಮ ನಗರದಲ್ಲಿ‌ ಸಂಪರ್ಕ ರಹಿತ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ ಇದು‌ ಬರುವ ದಿನಗಳಲ್ಲಿ‌ ಜಿಲ್ಲೆಯ ಎಲ್ಲಡೆ ವಿಸ್ತರಿಸಲಾಗುವುದೆಂದರು.

    ಜೀವಕ್ಕಿಂತ ದೊಡ್ಡದ್ದು ಏನು ಇಲ್ಲ. ಆದರೇ ನಗರ ಸೇರಿದಂತೆಯೇ ಜಿಲ್ಲೆಯಲ್ಲಿ‌ ಬಹುತೇಕ ವಾಹನ ಸವಾರರು ಸಂಚಾರಿ‌ ನಿಯಮಗಳನ್ನು ಉಲ್ಲಂಘಿಸಿಯೇ ಸಂಚರಿಸುತ್ತಾರೆ. ಇದು ಅವರ ಜೀವಗಳಿಗೆ ಅಪಾಯವಿದ್ದು, ಇದನ್ನು ತಡೆಗಟ್ಟಲು ದಂಡ ಹಾಕುವ ಮೂಲಕ ಅರಿವು‌ ಮೂಡಿಸುವ ಕೆಲಸ ನಡೆದಿದೆ. ಮುಂದೇ ಎಲ್ಲ ತರಹದ ಸಂಚಾರ ನಿಯಮಗಳನ್ನು‌ ಉಲ್ಲಂಘಿಸಿವವಿಗೂ ಈ ಆನ್ ಲೈನ್ ದಂಡ ಹಾಕಲಾಗುವುದೆಂದರು.

    ಐಟಿಎಂಎಸ್ ಅಳವಡಿಕೆಗೆ ಜಿಲ್ಲೆಗೆ 2.40 ಕೋಟಿ ರೂ. ಅನುದಾನ

    ಇಂಟಿಗ್ರೇಟೆಡ್‌ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್ (ಐಟಿಎಂಎಸ್‌) ಅಳವಡಿಕೆಗೆ ರಾಜ್ಯ ಸರ್ಕಾರವು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್‌) ಅಡಿ ಜಿಲ್ಲೆಗೆ 2.40 ಕೋಟಿ ಅನುದಾನ ನೀಡಿದೆ ಎಂದರು.

    ಐಟಿಎಂಎಸ್‌ ಅಡಿ ಹೈ ಡೆಫಿನಿಷನ್‌ ಸಿ.ಸಿ.ಟಿ.ವಿ ಕ್ಯಾಮೆರಾ, ಅಟೊಮೇಟಿಕ್ ನಂಬರ್ ಪ್ಲೇಟ್‌ ರಿಕಗ್ನಿಷನ್ (ಎಎನ್‌ಪಿಆರ್‌), ರಸ್ತೆಗಳಲ್ಲಿ ವಾಹನಗಳ ವೇಗವನ್ನು ಮಾಪನ ಮಾಡಿ ಅಳೆಯುವ ಸ್ಪೀಡ್ ರಾಡಾರ್ ತಂತ್ರಜ್ಞಾನದ ಗನ್, ಕ್ಯಾಟ್ ಐಸ್ ಉಪಕರಣ, ಡಿಜಿಟಲ್ ಸೈನ್ ಬೋರ್ಡ್‌ಗಳಂತಹ ಸಾಧನಗಳನ್ನು ಒಳಗೊಂಡಿರಲಿದೆ. ಈ ಸಾಧನಗಳ ಮೂಲಕ ತ್ರಿಬಲ್ ರೈಡ್, ಮೊಬೈಲ್ ಬಳಸುತ್ತಾ ವಾಹನಗಳ ಚಾಲನೆ, ಮಿತಿಗಿಂತ ವೇಗವಾಗಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.

    ಈ ಒಟ್ಟು ಅನುದಾನದಲ್ಲಿ 1.40 ಕೋಟಿ ರೂ. ಜಿಲ್ಲೆಯ ಏಳು ಕಡೆ ಐಟಿಎಂಎಸ್ ಅಳವಡಿಕೆಗೆ ಬಳಕೆಯಾಗಲಿದ್ದು. ಉಳಿದ ಒಂದು ಕೋಟಿ ರೂ.ದಲ್ಲಿ ಎಲ್ಲ ರೀತಿಯ ಸಂಚಾರಿ ಸಾಮಾಗ್ರಿಗಳನ್ನು ಖರೀದಿಸಲಾಗುವುದೆಂದು ಅವರು ಹೇಳಿದರು.

    ಮಹಿಳೆಗೆ ಅವಮಾನ ಘಟನೆ – ಇಬ್ಬರ ಬಂಧನ: ಶಹಾಪುರ ತಾಲೂಕಿನ ಚಾಮನಾಳ ತಾಂಡಾ ಮಹಿಳೆಯೊಬ್ಬಳ ತಲೆಗೂದಲು ಕತ್ತರಿಸಿ ತಲೆಗೆ ಸುಣ್ಣ ಹಚ್ಚಿ ಅಮಾನುಷವಾಗಿ‌ ವರ್ತಿಸಿದ‌ ಘಟನೆಗೆ ಸಂಬಂಧಿಸಿದಂತೆಯೇ ಕೆಂಭಾವಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.

  • ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಸತ್ಯಕಾಮ ವಾರ್ತೆ ಸುರಪುರ:

    ಕನ್ನಡ ನಾಡು ನುಡಿ ನೆಲ ಜಲದ ಭಾಷೆ ವಿಷಯಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೀಮು ನಾಯಕ ಕಳೆದ ಅನೇಕ ವರ್ಷಗಳಿಂದ ಕನ್ನಡಪರ ಹೋರಾಟಗಾರನಾಗಿದ್ದು ಮುಂದೆಯೂ ಉತ್ತಮವಾದ ಸಂಘಟನೆಯನ್ನು ಜಿಲ್ಲೆಯಲ್ಲಿ ಬೆಳೆಸಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ಇಂದು ತುಂಬಾ ಅಪಾಯದಲ್ಲಿದೆ ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕನ್ನಡಿಗರಿಗೆ ಇದ್ದು, ಮ.ರಾ.ಮೂರ್ತಿ, ವಿ.ಕೃ ಗೋಕಾಕ ಡಾ.ರಾಜಕುಮಾರ್,ವಾಟಾಳ

    ನಾಗರಾಜ್, ಜಿ ನಾರಾಯಣ ಕುಮಾರ್ ಸೇರಿದಂತೆ ಹಲವು ಮಹನೀಯರು ಕನ್ನಡಕ್ಕಾಗಿ ದುಡಿದಿದ್ದಾರೆ ಅಂತವರಿಂದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಆರಂಭಗೊಂಡಿದೆ ಎಂದರು.

    ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಭೀಮು ನಾಯಕ ಮಲ್ಲಿಬಾವಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬೆಳೆಸುವುದಾಗಿ ತಿಳಿಸಿದರು.

    ಪ್ರಸ್ತಾವಿಕವಾಗಿ ಸಾಹಿತಿ ಅಶೋಕ ಚೌಧರಿ ಮಾತನಾಡಿ, 80ರ ದಶಕದಲ್ಲಿ ಕನ್ನಡಕ್ಕೆ ಪಕ್ಕದ ರಾಜ್ಯಗಳ ಭಾಷೆಗಳು ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಜಿ ನಾರಾಯಣ ಕುಮಾರ್ ಅವರು ರಾಜ್ಯದಲ್ಲಿ ಕನ್ನಡಿಗರನ್ನು ಸಂಘಟಿಸುವ ಜೊತೆಗೆ ದೊಡ್ಡಮಟ್ಟದಲ್ಲಿ ಹೋರಾಟವನ್ನು ನಡೆಸಿ ಕನ್ನಡ ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.

    ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗಮಿಸುತ್ತಿದ್ದಂತೆ ನಗರದಲ್ಲಿ ಅದ್ದೂರಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌಧರಿ ಮಾತನಾಡಿದರು.ಯಲ್ಲಪ್ಪ ನಾಯಕ ಮಲ್ಲಿಬಾವಿ ನೇತೃತ್ವ ವಹಿಸಿದ್ದರು. ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಸಮಿತಿಯ ಮುಖಂಡ ರಾಜಣ್ಣ ಉಪಸ್ಥಿತರಿದ್ದರು.ಮಹೇಶ ಗಂಜಿ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ಪರಶುರಾಮ ಮಲ್ಲಿಬಾವಿ ವಂದಿಸಿದರು. ಸಂಘಟನೆಯ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

    ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಭೀಮು ಹೆಚ್.ನಾಯಕ ಅವರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಸ್ವಾಮೀಜಿಗಳ ಮೂಲಕ ನೀಡಿ ಗೌರವಿಸಲಾಯಿತು.
  • ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅವಧಿಯನ್ನು ಇ-ಕೆವೈಸಿ ಮೂಲಕ ಪೂರ್ಣಗೊಳಿಸಲಾಗುತ್ತಿದ್ದು, ಎಲ್ಲ್ಲಾ ನರೇಗಾ ಕೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಕಡ್ಡಾಯವಾಗಿ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ರವರು ಮನವಿ ಮಾಡಿದ್ದಾರೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದ್ದು, ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮೂಲಕ ಪೂರ್ಣಗೊಳಿಸಲು ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ ಎಂದರು.

    ತರಬೇತಿ ಪಡೆದ ಎಲ್ಲಾ ಸಿಬ್ಬಂದಿಗಳು ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಕೂಲಿಕಾರ್ಮಿಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳದ ಜಾಬ್-ಕಾರ್ಡ್ಗಳು ನಿಷ್ಕ್ರಿಯವಾಗುತ್ತವೆ ಎಂದು ತಿಳಿಸಿದ್ದಾರೆ.

    ಮಹಾತ್ಮಗಾಂಧಿ ನರೇಗಾ ಯೋಜನೆಯ ಹೆಚ್ಚು ಪಾರದರ್ಶಕ ಅನುಷ್ಟಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ತಮ್ಮ ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಅಷ್ಟೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಹಾಪುರ 51944, ಸುರಪುರ 56669, ಯಾದಗಿರಿ 40934, ಗುರುಮಿಟಕಲ್ 22022, ವಡಗೇರಾ 32215 ಹಾಗೂ ಹುಣಸಗಿ 48155 ಸೇರಿ ಒಟ್ಟು 2,51,939 ಜನ ಸಕ್ರಿಯ ಕೂಲಿಕಾರ್ಮಿಕರಿದ್ದು, ಎಲ್ಲರೂ ಸಹ ತಪ್ಪದೇ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಅಪ್ಲೇಟ್ ಮಾಡಿಕೊಳ್ಳಲು ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್ಟಿ, ಜಿಕೆಎಂ ಸೇರಿದಂತೆ ನರೇಗಾ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.