Category: Latest News

  • ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಯಾದಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರದ ಆದೇಶಾನುಸಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ದಿನಾಂಕ: 22.08.2025 ರಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, 07 ದಿನಗಳ ಒಳಗೆ ನೀಡಲು ಕೋರಲಾಗಿತ್ತು.

    ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಅವಧಿಯನ್ನು ವಿಸ್ತರಿಸಲು ಕೋರಿರುವ ಕಾರಣ, ಈ ಬಗ್ಗೆ ಸಲಹೆ/ಸೂಚನೆ ಮನವಿಗಳನ್ನು ನೀಡುವ ಅವಧಿಯನ್ನು ದಿನಾಂಕ: 01.09.2025 ರ ಸಂಜೆ 5.00 ಘಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ. ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬ‌ರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು.

    ಸಾರ್ವಜನಿಕರು ತಮ್ಮ ಸಲಹೆ/ಸೂಚನೆ/ ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16, ಡಿ.ದೇವರಾಜ ಅರಸು ಭವನ,ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ,ಬೆಂಗಳೂರು ಅಥವಾ kscbcb@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.ಹೆಚ್ಚಿನ‌ವಿವರಗಳಿಗೆ ದೂ.ಸಂಖ್ಯೆ 080-29506668 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

  • ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಗುರುಮಠಕಲ್: ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಹಾಗೂ ಹಬ್ಬಗಳನ್ನು ಶಾಂತಿಯುತವಾಗಿ ಸಂಭ್ರಮಿಸಿ ಆಚರಿಸಿ ಎಂದು ಗುರುಮಠಕಲ್ ಪಿ. ಐ. ವೀರಣ್ಣ ದೊಡ್ಡಮನಿ ಹೇಳಿದರು.

    ತಾಲೂಕಿನ ಪಸ್ಪುಲ್ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಊರಿನ ಮುಖಂಡರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಿ ಕಾನೂನಿನ ಸೂಚನೆಗಳನ್ನು ಅವರಿಗೆ ತಿಳಿಸಿದರು.

    ನಶೆ ಮುಕ್ತ ಭರತದಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ ಎಂದರು.

    ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಊರಿನ ಮುಖಂಡರುಗಳು ಹೆಚ್ಚಿನ ಜಾಗೃತೆ ವಹಿಸಿ ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಲು ಸೂಚಿಸಿದರು.

    ಹಬ್ಬಗಳು ನಮ್ಮಲ್ಲಿ ಸಡಗರ ಸಂಭ್ರಮ ಹೆಚ್ಚಿಸಿ ಸೌಹಾರ್ದ ಬೆಳೆಸುತ್ತವೆ. ಆದರೆ ಕೆಲವರ ಅತಿರೇಕತನದಿಂದ ಸೌಹಾರ್ದಕ್ಕೆ ಪೆಟ್ಟು ಬೀಳುತ್ತದೆ. ಅಂತಹ ಅವಕಾಶಕ್ಕೆ ಯಾವುದೇ ಸಂಘಟನೆಯವರು ಅವಕಾಶ ನೀಡದೇ ಕಾನೂನು ರೀತಿ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆಗಾಗಿ ಸ್ಥಳೀಯ ಆಡಳಿತ, ಜೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವೆಂದರು.

  • ಸೌಹಾರ್ದಯುತವಾಗಿ ಹಬ್ಬಗಳು ಆಚರಿಸಿ – ಡಿ.ವೈ.ಎಸ್.ಪಿ ಸುರೇಶ್

    ಸೌಹಾರ್ದಯುತವಾಗಿ ಹಬ್ಬಗಳು ಆಚರಿಸಿ – ಡಿ.ವೈ.ಎಸ್.ಪಿ ಸುರೇಶ್

    ಗುರುಮಠಕಲ್: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಡಿ.ವೈ.ಎಸ್. ಪಿ ಸುರೇಶ್. ಎಮ್. ಹೇಳಿದರು.

    ತಾಲೂಕಿನ ಚಂಡ್ರಿಕಿ ಗ್ರಾಮದಲ್ಲಿ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕು’ ಎಂದರು.

    ಇದೇ ಸಂಧರ್ಭದಲ್ಲಿ ಪಿ. ಐ. ವೀರಣ್ಣ ದೊಡ್ಡಮನಿ ಮಾತನಾಡಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆ ಹೋಗದಂತೆ ಪೋಷಕರು ಗಮನಹರಿಸಿ ಹಾಗೂ ಮೂರ್ತಿಗಳ ವಿಸರ್ಜನೆ ನಮ್ಮ ಇಲಾಖೆ ಬೇಕಾದ ಅಗತ್ಯ ಸಿಬಂದಿಯನ್ನು ನಿಯೋಜನೆ ಮಾಡಲಾಗುವುದು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ತ್ಯಾಜ್ಯವನ್ನು ಒಂದು ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.

    ಈ ವೇಳೆ ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪಿ.ಡಿ.ಓ. ಗೀತಾ, ಶಿವರಾಮ ರೆಡ್ಡಿ ಸೇರಿದಂತೆ ಊರಿನ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

  • ಗೋಶಾಲೆಯಲ್ಲಿ ಸಾಕಿದ್ದ ಜಿಂಕೆ ಮರಿ ವಶ

    ಗೋಶಾಲೆಯಲ್ಲಿ ಸಾಕಿದ್ದ ಜಿಂಕೆ ಮರಿ ವಶ

    ಸತ್ಯಕಾಮ ವಾರ್ತೆ ಯಾದಗಿರಿ :
    ಯಾದಗಿರಿ ನಗರದ ಹೊರವಲಯದಲ್ಲಿರುವ ಭಗವಾನ್ ಮಹಾವೀರ ಜೈನ್ ಗೋಶಾಲಾದಲ್ಲಿ ಸಾಕಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

    ಮೂಲಗಳ ಮಾಹಿತಿ ಪ್ರಕಾರ, ಪಕ್ಕದ ಜಮೀನಿನಲ್ಲಿ ಸಿಕ್ಕಿದ್ದ ಜಿಂಕೆಯನ್ನು ಗೋಶಾಲಾ ಸಿಬ್ಬಂದಿಗಳು ಕಳೆದ ಒಂದು ವರ್ಷದಿಂದ ಸಾಕುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಜಿಂಕೆ ಪತ್ತೆಯಾಗಿದೆ.

    ಜಿಂಕೆಯನ್ನು ವಶಕ್ಕೆ ಪಡೆಯುವ ವೇಳೆ ಗೋಶಾಲಾ ಸಿಬ್ಬಂದಿಗಳು ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯವೂ ಅಲ್ಲಿ ಕಂಡುಬಂದಿತು. ಆದಾಗ್ಯೂ, ಅರಣ್ಯ ಕಾಯ್ದೆ ಪ್ರಕಾರ ಕಾಡುಪ್ರಾಣಿಗಳನ್ನು ಮನೆಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಾಕುವುದು ಕಾನೂನು ಬಾಹಿರವಾಗಿರುವುದರಿಂದ ಅಧಿಕಾರಿಗಳು ಜಿಂಕೆಯನ್ನು ವಶಕ್ಕೆ ಪಡೆದು ಎಲೆರಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದರ ನಡುವೆ, ಜಿಂಕೆ ಗೋಶಾಲೆಯಲ್ಲಿ ಗೋಪ್ಯವಾಗಿ ಇಟ್ಟ ಗೋಶಾಲೆಯ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗಿತ್ತು ಎಂಬ ಸಾರ್ವಜನಿಕರ ಬೇಡಿಕೆ ವ್ಯಕ್ತವಾಗಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

  • ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

    ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ, ಕಲಬುರಗಿಯ ಮಹಾ ದಾಸೋಹಿ ಪರಂ ಪೂಜ್ಯ ಶರಣಬಸಪ್ಪ ಅಪ್ಪ (92) ಅವರು ಇಂದು ರಾತ್ರಿ 9.23ಕ್ಕೆ ದಾಸೋಹ ಮಹಾ ಮನೆಯಲ್ಲಿ ಲಿಂಗೈಕ್ಯರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪಾಜಿ, ಕೆಲವು ದಿನಗಳಿಂದ ಮಠದಲ್ಲೇ ವೆಂಟಿಲೇಟರ್‌ನಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಪರಮಧಾಮ ಪ್ರವೇಶಿಸಿದರು.

    ಕುಟುಂಬಸ್ಥರು ದೇವಸ್ಥಾನದ ಮುಂಭಾಗದಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದು, ಭಕ್ತರ ಭಾರಿ ಆಗಮನದ ಹಿನ್ನಲೆ ಕಲಬುರಗಿ ಪೊಲೀಸ್ ಇಲಾಖೆ ಕಠಿಣ ಬಂದೋಬಸ್ತ್ ಕೈಗೊಂಡಿದೆ. ಅಂತಿಮ ದರ್ಶನದ ವೇಳೆಯನ್ನು ಕುಟುಂಬ ಸಮಾಲೋಚನೆ ಬಳಿಕ ಪ್ರಕಟಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ತಿಳಿಸಿದ್ದಾರೆ.

  • ತೆರಿಗೆ ಸಂಗ್ರಹಣೆಗೆ ಸಾರ್ವಜನಿಕರ ಸ್ಪಂದನೆ

    ತೆರಿಗೆ ಸಂಗ್ರಹಣೆಗೆ ಸಾರ್ವಜನಿಕರ ಸ್ಪಂದನೆ

    ತೆರಿಗೆ ವಸೂಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ನಿಶ್ಚಿತ ಗುರಿ ಸಾಧಿಸಿರುವುದು ಸ್ವಾಗತಾರ್ಹ ಕ್ರಮ

    ಯಾದಗಿರಿ :  ಜಿಲ್ಲೆಯಲ್ಲಿ ಕರವಸೂಲಾತಿಗೆ ಹಮ್ಮಿಕೊಂಡಿದ್ದ ಒಂದೇ ದಿನದಲ್ಲಿ ಕೋಟಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, 2025ರ ಆಗಸ್ಟ್ 12 ರಂದು 1,46,00,855 ಕೋ.ರೂ.ಗಳ ದಾಖಲೆಯ ತೆರಿಗೆ ಸಂಗ್ರಹವಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.

    ಯಾದಗಿರಿ ಜಿಲ್ಲೆಯಾದ್ಯಂತ ಒಂದೇ ದಿನ 1,46,00,855 ಕೋ.ರೂ.ಗಳ ದಾಖಲೆಯ ಹಿನ್ನೆಲೆ ಕಾಯಕವನ್ನು ಮಾಡುವಾಗ ಮನಸ್ಸು ಶುದ್ಧವಾಗಿರಬೇಕು, ಅಂದರೆ ಯಾವುದೇ ದುರುದ್ದೇಶವಿಲ್ಲದೆ, ಭಕ್ತಿಯಿಂದ ಮಾಡಿದ ಕೆಲಸಕ್ಕೆ ಯಶಸ್ಸು ಸಾಧ್ಯ ಎನ್ನುವಂತೆ ಇಂದಿನ ತೆರಿಗೆ ಸಂಗ್ರಹಣೆಯಲ್ಲಿ ನಿಷ್ಟೆಯಿಂದ, ಭಕ್ತಿಯಿಂದ ಕೆಲಸ ನಿರ್ವಹಿಸಿದ್ದಕ್ಕಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಾಯಿತು

    ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಿಸುವ ಮೂಲಕ ರಾಜ್ಯ ಮಟ್ಟದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಸಾಧನೆಯ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಲಾಗಿತ್ತು. ಅದರಂತೆ, ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎನ್.ಆರ್.ಎಲ್.ಎಮ್ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಮತ್ತು ಎಲ್ಲಾ ಸಿಬ್ಬಂದಿಗಳು ಸೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ತೆರಿಗೆ ಸಂಗ್ರಹಣೆಗೆ ಸಹಕರಿಸುವಂತೆ ಕೋರಿ ಯಶಸ್ವಿಯಾಗಿದ್ದಾರೆ. ಒಂದೇ ದಿನದಲ್ಲಿ 1,46,00,855 ರೂ.ಗಳ ತೆರಿಗೆ ವಸೂಲಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ನಿಶ್ಚಿತ ಗುರಿ ಸಾಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

    2025ರ ಆಗಸ್ಟ್ 10 ರಂದು ಯಾದಗಿರಿ ಜಿಲ್ಲೆಯ ರಾಜ್ಯದ ಕರವಸೂಲಾತಿ ಪ್ರಗತಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿತ್ತು ಆದರೆ 2025ರ ಆಗಸ್ಟ್ 12 ರಂದು ನಡೆದ ಕರವಸೂಲಾತಿಯಲ್ಲಿ ಕೋಟಿ ಅಭಿಯಾನ ಪ್ರಯುಕ್ತ ಯಾದಗಿರಿ ಜಿಲ್ಲೆ ರಾಜ್ಯದಲ್ಲಿ 20ನೇ ಸ್ಥಾನದಲ್ಲಿ ಬಂದಿರುತ್ತದೆ. ಒಟ್ಟಾರೆಯಾಗಿ ಯಾದಗಿರಿ ಜಿಲ್ಲೆಯಲ್ಲಿ ರೂ.18.74 ಕೋಟಿ ಚಾಲ್ತಿ ಬೇಡಿಕೆಗೆ ಎದುರಾಗಿ 2025ರ ಆಗಸ್ಟ್ 12 ರಂದು ಒಟ್ಟು ರೂ.4.35 (ಶೇ.23.22%) ಕೋಟಿ ತೆರಿಗೆ ವಸೂಲಿ ಮಾಡಲಾಯಿತು ಎಂದರು.

    ಯಾದಗಿರಿ ತಾಲೂಕಿ ಮುದ್ನಾಳ ಗ್ರಾಮ ಪಂಚಾಯತ 6,06,706 ರೂ.ಗಳ, ಹತ್ತಿಕುಣಿ ಗ್ರಾಮ ಪಂಚಯತ್ 5,08,571 ರೂ.ಗಳ, ಶಹಾಪೂರ ತಾಲೂಕಿನ ಉಕ್ಕಿನಾಳ 4,18,736 ರೂ.ಗಳ, ಖಾನಾಪೂರ ಗ್ರಾಮ ಪಂಚಾಯತ್3,92,257 ರೂ.ಗಳ, ಹುಣಸಗಿ ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯತ್ 3,15,862 ರೂ.ಗಳ, ಕಾಮನಟಗಿ ಗ್ರಾಮ ಪಂಚಾಯತ್ 2,13,336 ರೂ.ಗಳ, ಸುರಪುರ ತಾಲೂಕಿನ ಏವೂರ ಗ್ರಾಮ ಪಂಚಾಯತ್ 3,07,768 ರೂ.ಗಳ, ಮಲ್ಲ ಬಿ 2,13,431 ರೂ.ಗಳ, ವಡಗೇರಾ ತಾಲೂಕಿನ ವಡಿಗೇರಾ 3,03,881 ರೂ.ಗಳ, ಬೆಂಡೆಬೆAಬಳಿ ಗ್ರಾಮ ಪಂಚಾಯತ್ 2,48,746 ರೂ.ಗಳ, ಗುರುಮಠಕಲ್ ತಾಲೂಕಿನ ಚಂದ್ರಿಕಿ ಗ್ರಾಮ ಪಂಚಾಯತ್ 1,73,920 ರೂ.ಗಳ, ಕಾಕಲ್ವರ್ ಗ್ರಾಮ ಪಂಚಾಯತ್ 1,71,233 ರೂ.ಗಳ, ಇದೆ. ಶಹಾಪೂರ, ಯಾದಗಿರಿ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್ ತಾಲೂಕಿನಲ್ಲಿ ಒಟ್ಟು 1,46,11854.99 ಕೋ.ರೂ.ಗಳ ತೆರಿಗೆ ವಸೂಲಿ ಮಾಡಲಾಯಿತು.

    ಗ್ರಾಮ ಪಂಚಾಯತ್ ಅಭಿವೃದ್ಧಿಗೆ ತೆರಿಗೆಯ ಮೂಲ ಅತೀ ದೊಡ್ಡ ಶಕ್ತಿಯಾಗಿ ಪರಿಣಮಿಸುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಾರ್ವಜನಿಕರಲ್ಲಿ ತೆರಿಗೆಯ ಬಗ್ಗೆ ಮನವೊಲಿಸಿ ಯಾದಗಿರಿ ಜಿಲ್ಲೆಯು ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ತೆರಿಗೆ ಪಾವತಿಯಿಂದ ಗ್ರಾಮ ಪಂಚಾಯತಿಯ ವಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಅನುಕೂಲವಾಗುತ್ತದೆ. ಹೀಗಾಗಿ ಕೋಟಿ ಅಭಿಯಾನ ಹೆಸರಿನಲ್ಲಿ ಒಂದು ದಿನದಲ್ಲಿ ಕೋಟಿ ಸಂಗ್ರಹಣೆ ಮಾಡಿರುತ್ತಾರೆ. ವಿಶೇಷವೆಂದರೆ ತೆರಿಗೆ ವಸೂಲಿ ಮಾಡಲು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಾಬಂಧನ ಹಬ್ಬದ ಪ್ರತೀಕರವಾಗಿ ಸಹೋದರರಿಗೆ ಕಾಣಿಕೆಯಾಗಿ ತೆರಿಗೆ ಪಾವತಿಸುವಂತೆ ಮನವೊಲಿಸಿದ್ದು ವಿಶೇಷವಾಗಿತ್ತು. ಅದರಂತೆ ತೆರಿಗೆ ಸಂಗ್ರಹಿಸಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಶಾ ಮುಕ್ತ ಭಾರತಕ್ಕೆ ಎಲ್ಲರೂ ಸಹಕರಿಸಿ: ನ್ಯಾ. ಮರಿಯಪ್ಪ

    ನಶಾ ಮುಕ್ತ ಭಾರತಕ್ಕೆ ಎಲ್ಲರೂ ಸಹಕರಿಸಿ: ನ್ಯಾ. ಮರಿಯಪ್ಪ

    ಯಾದಗಿರಿ: ನಶಾ ಮುಕ್ತ ಭಾರತ ನಿರ್ಮಾಣ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಅವರು ಹೇಳಿದರು.
    ನಶಾ ಮುಕ್ತ ಭಾರತ ಅಭಿಯಾನ ಯೋಜನೆಯು 5 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಬುಧವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಹಾಗೂ ಸಾಮೂಹಿಕ ಪ್ರತಿಜ್ಞೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದು ಯುವಜನತೆ ಇದಕ್ಕೆ ಅತಿಯಾಗಿ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಅನೇಕ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಇದನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ‌.ಈ ನಿಟ್ಟಿನಲ್ಲಿ‌ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ನ್ಯಾಯಧೀಶರು ಹೇಳಿದರು.
    ಇದೇ ಸಂದರ್ಭದಲ್ಲಿ ನಶಾಮುಕ್ತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಜಿಲ್ಲಾ ಪಂಚಾಯತ್ ಆವರಣದಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
    ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಜಿಲ್ಲಾ ಆಯುಷ್ ಅಧಿಕಾರಿ ವಂದನಾ ಗಾಳಿ,ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
  • ವಾಲ್ಮೀಕಿ ನಾಯಕ ಸಮಾಜದಿಂದ ಬೃಹತ್ ಪ್ರತಿಭಟನೆ

    ವಾಲ್ಮೀಕಿ ನಾಯಕ ಸಮಾಜದಿಂದ ಬೃಹತ್ ಪ್ರತಿಭಟನೆ

    ಜಗದ್ಗುರುಗಳ, ಸಮಾಜದ ಮುಖಂಡರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಸಾವಿರಾರು ಜನರು.

    ಯಾದಗಿರಿ:‌ ನಕಲಿ ಜಾತಿ ಪ್ರಮಾಣಪತ್ರ ಮತ್ತು ಸಿಂದುತ್ವಗಳನ್ನು ರದ್ದು ಪಡಿಸುವುದು ಸೇರಿದಂತೆಯೇ ವಿವಿಧ ಪ್ರಮುಖ ಹತ್ತು ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘವು ಬುಧವಾರ ಕರೆ ನೀಡಿದ್ದ ಬೃಹತ್ ಪ್ರತಿಭಟನೆ ವಿರಾಟ ಸ್ವರೂಪ ಪಡೆದು ವಾಲ್ಮೀಕಿಗಳ ಕೂಗು  ಸರ್ಕಾರದ ಕಿವಿ ಗಡಚುವಂತೆಯೇ ಮಾಡಿತು.

    ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಈ ಎಲ್ಲ ಬೇಡಿಕೆಗಳಿಗೆ ಒತ್ತಾಯಿಸಲು ನೂರಾರು ಊರುಗಳಿಂದ ಬಂದಿದ್ದ ಸಾವಿರಾರು ವಾಲ್ಮೀಕಿ ಸಮುದಾಯ ಜನರು ಇಲ್ಲಿನ ತಹಸಿಲ್ ಕಚೇರಿ ಬಳಿ ಜಮಾಗೊಂಡರು.

    ಕೈ,ಕೊರಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಧ್ವಜ ಹಾಗೂ ಕರವಸ್ತ್ರ ಹಿಡಿದ ಅಪಾರ ಜನರು ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಘೋಷಣೆ ಕೂಗಿ ಶಾಸ್ತ್ರಿ ಚೌಕ್ ಮೂಲಕ ಹಾದು ನೇತಾಜಿ ಸುಭಾಸಚಂದ್ರ ಬೋಸ್ ಸರ್ಕಲ್ ಗೆ ಆಗಮಿಸಿದಾಗ ಸಿಡಿದೆದ್ದ ವಾಲ್ಮಿಕಿಗರು ತಮಗಾದ ಅನ್ಯಾಯದ ವಿರುದ್ದ ಸರ್ಕಾರದ ವಿರುದ್ಧ ಭಾರಿ ಧ್ವನಿಯಲ್ಲಿ ಪ್ರತಿಭಟಿಸಿ ಹಕ್ಕುಗಳಿಗಾಗಿ ಒತ್ತಾಯಿಸಿದರು.ದಾವಣಗೇರಿ ಜಿಲ್ಲೆಯ ರಾಜನಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಮಾರೆಪ್ಪ ನಾಯಕ್ ಮಗ್ದಂಪುರ, ಜಿಲ್ಲಾಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ್, ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ  ಚಳುವಳಿ ರಾಜಣ್ಣ, ನಗರಸಭೆ ಸದಸ್ಯ ಹಣಮಂತ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಸಾವಿರಾರು ಇಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ಬಂದು ಡಿಸಿ ಕಚೇರಿ ದ್ವಾರದ ಬಳಿ ಸಮಾವೇಶಗೊಂಡರು.

     

    ಈ ವೇಳೆ ಮಾತನಾಡಿದ ಸಾನಿಧ್ಯ ವಹಿಸಿದ್ದ ಗುರುಗಳು ಮತ್ತು ನೇತೃತ್ವ ವಹಿಸಿದ್ದ ಮುಖಂಡರು ಮಾತನಾಡಿ, ಹಿಂದುಳಿದ ಪ್ರವರ್ಗ 1ರಲ್ಲಿ ಬರುವ ಅಂಬಿಗಾ, ಬೆಸ್ತಾ, ಕಬ್ಬಲಿಗಾ, ಮತ್ತು ಕೋಲಿ ಜನಾಂಗದ ವೃತ್ತಿ ಸೂಚಕ ತಳವಾರರನ್ನು ಹಿಂದುಳಿದ ಪ್ರವರ್ಗ 1ರ ಕ್ರಮ ಸಂಖ್ಯೆ 6 ರ ಬೆಸ್ತಾರ 38 ನೇ ಪದವಾಗಿ ಸೇರಿಸಬೇಕು, ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ, ಸಿಂದುತ್ವಗಳು ಪಡೆದುಕೊಳ್ಳುತ್ತಿರುವುದನ್ನು ತಡೆಯಬೇಕು ಮತ್ತು ಉಚ್ಛ ನ್ಯಾಯಾಲಯದ ಆದೇಶದಂತೆಯೇ  ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ತಹಸಿಲ್ದಾರ, ಸಿಬ್ಬಂದಿಗಳ ಹಾಗೂ  ಪಡೆದುಕೊಳ್ಳುತ್ತಿರುವವರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದರು.

     

    ಈ ಸಮಾಜದ ಕಾಲೇಜು,ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ,ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಈ ಇಲಾಖೆಗೆ ಕೂಡಲೇ ಸಚಿವರನ್ನು ನೇಮಿಸಬೇಕು, ಬುಡಕಟ್ಟು ವಿವಿ ಸ್ಥಾಪಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದರು.
    ಈ ಜನಾಂಗದ ಜನರ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿ,ಗತಿ ಅಧ್ಯಯನಕ್ಕೆ ಅನುದಾನ ನೀಡಬೇಕು, ದೌರ್ಜನ್ಯ, ದಬ್ಬಾಳಿಕೆ, ಕೊಲೆ,ಅತ್ಯಾಚಾರ ಹೀಗೆ ವಿವಿಧ ಅಹಿತಕರ ಘಟನೆಗಳು ಈ ಸಮಾಜದ ಮೇಲೆ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಕೂಡಲೇ ತಡೆಯಬೇಕೆಂದು ಅವರು ಆಗ್ರಹಿಸಿದರು.

     

    ನಿಖರ ಕಾರಣವಿಲ್ಲದೇ ಏಕಾಏಕಿ ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನು ತೆಗೆಯುವ ಮೂಲಕ ಸಮಸ್ತ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದ್ದು, ಕೂಡಲೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮತ್ತು ಕೆಕೆ ಭಾಗದ ಕಲಬುರಗಿ,ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ಟಿಎಸ್ ಪಿ ಅನುದಾನವನ್ನು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಬಳಸದೇ ಬೇರೆ ಕಡೆ ಬಳಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳಾದ ಸಾಹೇಬಗೌಡ ಗೌಡಗೇರಾ,ಶ್ರವಣಕುಮಾರ ನಾಯಕ, ಮರೆಪ್ಪ ಪ್ಯಾಟಿ, ಭೀಮಣ್ಣಗೌಡ ಯಮನೂರು, ಬಸಣ್ಣಗೌಡ ಕಡದ್ರಾಳ, ಕಾಶಪ್ಪ ನಾಯಕ, ತಿಮ್ಮಣ್ಣ ನಾಯಕ್ ಸೇರಿದಂತೆಯೇ ಸಾವಿರಾರು‌ ಜನರು ಭಾಗವಹಿಸಿದ್ದರು. ಡಿಸಿ ಹರ್ಷಲ್ ಭೋಯರ್ ಅವರಿಗೆ ಶ್ರೀ ಸದ್ಗುರು ರಂಗಲಿಂಗೇಶ್ವರ ಮಠದ‌ ಪೀಠಾಧಿಪತಿ ಶ್ರೀ ತ್ರಿಶೂಲಪ್ಪ ಶರಣರು ಮುಡಬೂಳ ಶ್ರೀಗಳು ಸೇರಿದಂತೆಯೇ ಮುಖಂಡರು ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಶ್ರೀ ತ್ರೀಶೂಲಪ್ಪ ಶರಣರು ಮುಡಬೂಳ. ಬೀದರ ಜಿಲ್ಲಾ ಅಧ್ಯಕ್ಷ ದಶರಥ ನಾಯಕ. ಬಳ್ಳಾರಿ ಜಿಲ್ಲಾ ಅಧ್ಯಕ್ಷ ಯರ್ರಿಸ್ವಾಮಿ. ವಿಜಯ ನಗರ ಜಿಲ್ಲಾ ಅಧ್ಯಕ್ಷ ಜಂಬಯ್ಯ ನಾಯಕ. ರಾಯಚೂರು ಜಿಲ್ಲಾ ಅಧ್ಯಕ್ಷ ರಘುವೀರ ನಾಯಕ ಹಾಗೂ ಶಾರದ ಹುಲಿನಾಯಕ. ಬಿಜಾಪೂರ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಕೌಲಗಿ. ಭೀಮರಾಯ ಠಾಣಗುಂದಿ. ಅಂಬುನಾಯಕ. ಟಿ ಎನ್ ಬೀಮುನಾಯಕ. ಸಾಬು ಬಗ್ಲಿ. ರಮೇಶ ದೊರೆ. ಗಂಗಾಧರ ನಾಯಕ. ವೆಂಕಟೇಶ ಬೇಟೆಗಾರ. ಹಣಮಂತ್ರಾಯ ದೊರೆ ವನದುರ್ಗಾ. ಶೇಖರ ದೊರೆ. ಪ್ರಭು ಹುಲಿನಾಯಕ. ವೆಂಕಟೇಶ ಬೈರಮಡಗಿ. ಚಂದ್ರಕಾಂತ ಕವಲ್ದಾರ. ನರಸಪ್ಪ ಬೂಡಯ್ಯನೋರ. ವಿಶ್ವನಾಥ ನಾಯಕ. ಹಣಮಂತ ನಾಯಕ. ಸಿದ್ದುನಾಯಕ ಹತ್ತಿಕುಣಿ.ದೊಡಯ್ಯ ನಾಯಕ ಹಳಿಗೇರ. ಹಣಮಂತ ನಾಯಕ ಖಾನಹಳ್ಳಿ. ಮಲ್ಲಮ್ಮ ಕೋಮರ. ರೇಣುಕಾ ಮೋನಪ್ಪ ಹಳಿಗೇರ ಸೇರಿದಂತೆಯೇ ಕಲ್ಯಾಣ ಕರ್ನಾಟಕದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯಾದಗಿರಿ ಜಿಲ್ಲೆಯ ವಾಲ್ಮೀಕಿ ಸಮುದಾಯದ ಮುಖಮಡರು ಸಮಾಜದ ಭಾಂದವರು ಉಪಸ್ಥಿತರಿದ್ದರು.
  • ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿ

    ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿ

    ಅನೇಕ ಮಹನೀಯರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ – ವಿಭೂತಿಹಳ್ಳಿ

    ಯಾದಗಿರಿ:- ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತ್ಯಾಗ–ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದಿದ್ದಾರೆ. ಅವರ ಸ್ಮರಣಾರ್ಥವಾಗಿ ಸರ್ಕಾರ ಹರ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಕರೆ ನೀಡಿದರು.

    ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ವತಿಯಿಂದ ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ನಗರದ ಬಸವೇಶ್ವರ ಗಂಜ್ ಸರ್ಕಲ್  ಹತ್ತಿರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು,  ಸ್ವಾತಂತ್ರ್ಯೋತ್ಸವದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಹೋರಾಟಗಾರರ ತ್ಯಾಗ ಮುಂದಿನ ಪೀಳಿಗೆಗೆ ತಲುಪುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ  ಮಾತನಾಡಿ ಅವರು ಸಮಾಜ ಅಭಿವೃದ್ಧಿಯಾಗಬೇಕು ಎಲ್ಲರೂ ಉತ್ತಮ ದಾರಿಯಲ್ಲಿ ಸಾಗಬೇಕು. ತಮ್ಮ ಮನೆಗಳ ಮೇಲೆ ಪಕ್ಷ ಭೇದ ಮರೆತು ರಾಷ್ಟ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ   ಪ್ರಧಾನಿ ನರೇಂದ್ರ ಮೋದಿಯವರು ಮನೆ–ಮನೆಗೆ ತಿರಂಗಾ ಹಾರಿಸುವಂತೆ ನೀಡಿರುವ ಕರೆ ಕುರಿತು ವಿವರಿಸಿದರು.

    ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ ಮಾತನಾಡಿದ ಅವರು ಜಿಲ್ಲಾ ತುಂಬಾ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಪ್ರತಿ ಜನರಲ್ಲೂ ರಾಷ್ಟ್ರಧ್ವಜದ ಜೊತೆಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ ಮತ್ತು ದೆವಿಂದ್ರಪ್ಪ ಕೊನೇರ, ಮಾರುತಿ ಕಲಾಲ್, ನಗರಸಭೆ ಉಪಾಧ್ಯಕ್ಷೆ ರುಕೀಯ್ ಬೇಗಂ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅಜೇಯ್ ಮಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಶ್ರೀದೇವಿ ಶೆಟ್ಟಹಳ್ಳಿ,ಕೃಷ್ಣಮೂರ್ತಿ ಕುಲಕರ್ಣಿ,ಭೀಮಣ್ಣಗೌಡ ಖ್ಯಾತನಾಳ,ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸುರೇಶ್ ಅಂಬಿಗೇರ,ಸ್ವಾಮಿದೇವ ದಾಸನಕೆರಿ,ವಿಜಯಲಕ್ಷ್ಮಿ ನಾಯಕ,ಮೋನೇಶ ಬೆಳಿಗೇರಿ, ರಮೇಶ್ ದೊಡಮನಿ,ಲಕ್ಷ್ಮಿಪುತ್ರ ಮಾಲಿಪಾಟೀಲ,ಅಪ್ಪಣ್ಣ ಜೈನ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗುತ್ತೆದಾರ ಮತ್ತು ಮಲ್ಲು ಕೊಲಿವಾಡ,ರಾಜು ಸ್ವಾಮಿ,ಮರಿಲಿಂಗ  ಕರಾಟೆ,ಪವನ್ ಲಿಂಗೇರಿ, ಭೀಮ ಬಾಯಿ ಶೆಂಡಿಗಿ,ಶಕುಂತಲಾ ಜಿ,ರಾಜು ಉಪ್ಪಿನ್, ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳ ಕಾರ್ಯಕರ್ತರು ಭಾಗಿಯಾಗಿದರು…
  • ಒಳಮೀಸಲಾತಿ ವರದಿ ವಿರುದ್ಧ ಬಲಗೈ ಸಮುದಾಯದ ಬೃಹತ್ ಪ್ರತಿಭಟನೆ ನಾಳೆ

    ಒಳಮೀಸಲಾತಿ ವರದಿ ವಿರುದ್ಧ ಬಲಗೈ ಸಮುದಾಯದ ಬೃಹತ್ ಪ್ರತಿಭಟನೆ ನಾಳೆ

    ಯಾದಗಿರಿ: ನ್ಯಾ. ನಾಗಮೋಹನದಾಸ್ ಸಮಿತಿಯ ಒಳಮೀಸಲಾತಿ ವರದಿಯನ್ನು ಖಂಡಿಸಿ ಬಲಗೈ ಸಮುದಾಯವು ಆಗಸ್ಟ್‌ 14ರಂದು(ನಾಳೆ) ನಗರದ ಅಂಬೇಡ್ಕರ್‌ ನಗರದಿಂದ ಸುಭಾಷ್‌ಚಂದ್ರ ಬೋಸ್‌ ವೃತ್ತದವರೆಗೆ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

    ನಗರದ ಹಳೆ ಪ್ರವಾಸ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಲಗೈ ಸಮುದಾಯದ 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ, ವರದಿಯಲ್ಲಿ ತಮ್ಮ ಸಮುದಾಯಕ್ಕೆ ಜನಸಂಖ್ಯೆಗೆ ತಕ್ಕ ಮೀಸಲಾತಿ ನೀಡದ ಮೂಲಕ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಈ ನಿರ್ಧಾರ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹಾನಿಕಾರಕವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

    “ವರದಿ ಜಾರಿಯಾಗಲು ಬಿಡುವುದಿಲ್ಲ” ಎಂದು ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದು, ನಾಳೆಯ ಪ್ರತಿಭಟನೆಯಲ್ಲಿ ಜಿಲ್ಲೆಯ ಸಾವಿರಾರು ಜನರು ಆಗಮಿಸಿ  ಭಾಗವಹಿಸುವಂತೆ ಕರೆ ನೀಡಿದರು.

    ಸಭೆಯಲ್ಲಿ ಹಿರಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.