Category: Latest News

  • 20 ದಿನಗಳಲ್ಲಿ 750 ವಾಹನಗಳಿಗೆ ಆನ್ ಲೈನ್ ದಂಡ : ಎಸ್.ಪಿ ಪೃಥ್ವಿಕ್ ಶಂಕರ್ ಮಾಹಿತಿ

    20 ದಿನಗಳಲ್ಲಿ 750 ವಾಹನಗಳಿಗೆ ಆನ್ ಲೈನ್ ದಂಡ : ಎಸ್.ಪಿ ಪೃಥ್ವಿಕ್ ಶಂಕರ್ ಮಾಹಿತಿ

    ಯಾದಗಿರಿ: ವಾಹನ ಸವಾರರು ಉಲ್ಲಂಘಿಸುವ ಸಂಚಾರ ನಿಯಮಗಳಿಗೆ ದಂಡ ಹಾಕುವ ಕೆಲಸ ಕಳೆದ ಅ.6 ರಿಂದ ನಗರದಲ್ಲಿ ಆರಂಭಿಸಿರುವ ಪೊಲೀಸರು ಕೇವಲ ಮೂರೇ ವಾರದಲ್ಲಿ ಸುಮಾರು 750 ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.

    ಶನಿವಾರ ತಮ್ಮ ಕಚೇರಿಯಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವ ಮತ್ತು ಮೂರು ಜನರು ಕುಳಿತು ವಾಹನಗಳನ್ನು ಚಲಾಯಿಸುವ ಸವಾರರಿಗೆ ಆನ್ ಲೈನ್ ದಂಡ ಹಾಕಲಾಗುತ್ತಿದೆ.‌ ಈ ಸಂಪರ್ಕ ರಹಿತ ದಂಡ ಹಾಕುವ ಉದ್ದೇಶವಿಷ್ಠೆ. ಮಂಡ್ಯದಲ್ಲಿ ಸಂಚಾರ ನಿಮಯ ಉಲ್ಲಂಘಿಸಿ ಹೋಗುತ್ತಿದ್ದ ಸವಾರರನ್ನು ಹಿಡಿಯಲು ಪೊಲೀಸರು‌ ಮುಂದಾದಾಗ ತಪ್ಪಿಸಿಕೊಳ್ಳಲು ಹೋಗಿ‌ ಜೀವ‌ ಕಳೆದುಕೊಂಡಿದ್ದರಿಂದ ನಮ್ಮ ನಗರದಲ್ಲಿ‌ ಸಂಪರ್ಕ ರಹಿತ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ ಇದು‌ ಬರುವ ದಿನಗಳಲ್ಲಿ‌ ಜಿಲ್ಲೆಯ ಎಲ್ಲಡೆ ವಿಸ್ತರಿಸಲಾಗುವುದೆಂದರು.

    ಜೀವಕ್ಕಿಂತ ದೊಡ್ಡದ್ದು ಏನು ಇಲ್ಲ. ಆದರೇ ನಗರ ಸೇರಿದಂತೆಯೇ ಜಿಲ್ಲೆಯಲ್ಲಿ‌ ಬಹುತೇಕ ವಾಹನ ಸವಾರರು ಸಂಚಾರಿ‌ ನಿಯಮಗಳನ್ನು ಉಲ್ಲಂಘಿಸಿಯೇ ಸಂಚರಿಸುತ್ತಾರೆ. ಇದು ಅವರ ಜೀವಗಳಿಗೆ ಅಪಾಯವಿದ್ದು, ಇದನ್ನು ತಡೆಗಟ್ಟಲು ದಂಡ ಹಾಕುವ ಮೂಲಕ ಅರಿವು‌ ಮೂಡಿಸುವ ಕೆಲಸ ನಡೆದಿದೆ. ಮುಂದೇ ಎಲ್ಲ ತರಹದ ಸಂಚಾರ ನಿಯಮಗಳನ್ನು‌ ಉಲ್ಲಂಘಿಸಿವವಿಗೂ ಈ ಆನ್ ಲೈನ್ ದಂಡ ಹಾಕಲಾಗುವುದೆಂದರು.

    ಐಟಿಎಂಎಸ್ ಅಳವಡಿಕೆಗೆ ಜಿಲ್ಲೆಗೆ 2.40 ಕೋಟಿ ರೂ. ಅನುದಾನ

    ಇಂಟಿಗ್ರೇಟೆಡ್‌ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್ (ಐಟಿಎಂಎಸ್‌) ಅಳವಡಿಕೆಗೆ ರಾಜ್ಯ ಸರ್ಕಾರವು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್‌) ಅಡಿ ಜಿಲ್ಲೆಗೆ 2.40 ಕೋಟಿ ಅನುದಾನ ನೀಡಿದೆ ಎಂದರು.

    ಐಟಿಎಂಎಸ್‌ ಅಡಿ ಹೈ ಡೆಫಿನಿಷನ್‌ ಸಿ.ಸಿ.ಟಿ.ವಿ ಕ್ಯಾಮೆರಾ, ಅಟೊಮೇಟಿಕ್ ನಂಬರ್ ಪ್ಲೇಟ್‌ ರಿಕಗ್ನಿಷನ್ (ಎಎನ್‌ಪಿಆರ್‌), ರಸ್ತೆಗಳಲ್ಲಿ ವಾಹನಗಳ ವೇಗವನ್ನು ಮಾಪನ ಮಾಡಿ ಅಳೆಯುವ ಸ್ಪೀಡ್ ರಾಡಾರ್ ತಂತ್ರಜ್ಞಾನದ ಗನ್, ಕ್ಯಾಟ್ ಐಸ್ ಉಪಕರಣ, ಡಿಜಿಟಲ್ ಸೈನ್ ಬೋರ್ಡ್‌ಗಳಂತಹ ಸಾಧನಗಳನ್ನು ಒಳಗೊಂಡಿರಲಿದೆ. ಈ ಸಾಧನಗಳ ಮೂಲಕ ತ್ರಿಬಲ್ ರೈಡ್, ಮೊಬೈಲ್ ಬಳಸುತ್ತಾ ವಾಹನಗಳ ಚಾಲನೆ, ಮಿತಿಗಿಂತ ವೇಗವಾಗಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.

    ಈ ಒಟ್ಟು ಅನುದಾನದಲ್ಲಿ 1.40 ಕೋಟಿ ರೂ. ಜಿಲ್ಲೆಯ ಏಳು ಕಡೆ ಐಟಿಎಂಎಸ್ ಅಳವಡಿಕೆಗೆ ಬಳಕೆಯಾಗಲಿದ್ದು. ಉಳಿದ ಒಂದು ಕೋಟಿ ರೂ.ದಲ್ಲಿ ಎಲ್ಲ ರೀತಿಯ ಸಂಚಾರಿ ಸಾಮಾಗ್ರಿಗಳನ್ನು ಖರೀದಿಸಲಾಗುವುದೆಂದು ಅವರು ಹೇಳಿದರು.

    ಮಹಿಳೆಗೆ ಅವಮಾನ ಘಟನೆ – ಇಬ್ಬರ ಬಂಧನ: ಶಹಾಪುರ ತಾಲೂಕಿನ ಚಾಮನಾಳ ತಾಂಡಾ ಮಹಿಳೆಯೊಬ್ಬಳ ತಲೆಗೂದಲು ಕತ್ತರಿಸಿ ತಲೆಗೆ ಸುಣ್ಣ ಹಚ್ಚಿ ಅಮಾನುಷವಾಗಿ‌ ವರ್ತಿಸಿದ‌ ಘಟನೆಗೆ ಸಂಬಂಧಿಸಿದಂತೆಯೇ ಕೆಂಭಾವಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.

  • ಬೋಧಕ-ಸಿಬ್ಬಂದಿಗೆ ಸಂತಸದ ಸುದ್ದಿ-ತುಟ್ಟಿಭತ್ಯೆ ಶೇಕಡ 58ಕ್ಕೆ ಹೆಚ್ಚಿಸಿ ಅಧಿಕೃತ ಆದೇಶ

    ಬೋಧಕ-ಸಿಬ್ಬಂದಿಗೆ ಸಂತಸದ ಸುದ್ದಿ-ತುಟ್ಟಿಭತ್ಯೆ ಶೇಕಡ 58ಕ್ಕೆ ಹೆಚ್ಚಿಸಿ ಅಧಿಕೃತ ಆದೇಶ

    ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ದೊಡ್ಡ ಗುಡ್ ನ್ಯೂಸ್. ಕೇಂದ್ರ ಸರ್ಕಾರವು UGC/ICAR/AICTE ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಪೂರ್ಣಕಾಲಿಕ ನೌಕರರಿಗಾಗಿ ತುಟ್ಟಿಭತ್ಯೆ ಶೇಕಡ 58ಕ್ಕೆ ಏರಿಸಲು ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಹುದ್ದೆ ಅನುಸಾರ 1ನೇ ಜುಲೈ 2025ರಿಂದ ಜಾರಿಗೆ ಬರಲಿದೆ.

    ತುಟ್ಟಿಭತ್ಯೆ ಏಕೆ ಹೆಚ್ಚುತ್ತಿದೆ?
    2016ರಲ್ಲಿ ಪರಿಷ್ಕೃತ UGC/ICAR/AICTE ವೇತನ ಶ್ರೇಣಿಗಳಲ್ಲಿ ಬೋಧಕರಿಗೆ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ನೀಡಲಾಗುವ ತುಟ್ಟಿಭತ್ಯೆಯ ದರವು ಮೊದಲು ಮೂಲ ವೇತನದ 55% ಆಗಿದ್ದರಿಂದ ಇದನ್ನು ಶೇಕಡ 58ಕ್ಕೆ ಹೆಚ್ಚಿಸಲಾಗುತ್ತಿದೆ. ಈ ಕ್ರಮದ ಉದ್ದೇಶ, ಶೈಕ್ಷಣಿಕ ಕ್ಷೇತ್ರದಲ್ಲಿ ನೌಕರರ ಸ್ಥಿರತೆ ಮತ್ತು ಪ್ರೋತ್ಸಾಹವನ್ನು ಉತ್ತೇಜಿಸುವುದಾಗಿದೆ.

    ಮುಖ್ಯ ಅಂಶಗಳು:
    ಮೂಲ ವೇತನ ಎಂದರೆ ನೌಕರನು ತನ್ನ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ವೇತನ ಶ್ರೇಣಿಯಡಿಯಲ್ಲಿ ಪಡೆಯುವ ವೇತನ.
    ಈ ಆದೇಶವು ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ.
    ವೇತನದಲ್ಲಿ ಪರಿಗಣಿಸದ ಯಾವುದೇ ಉಪಲಬ್ಧಗಳನ್ನು ಮೂಲ ವೇತನದಲ್ಲಿ ಸೇರಿಸಬಾರದು.
    ಅನುಮೋದಿತ ತುಟ್ಟಿಭತ್ಯೆ ಮುಂದಿನ ಆದೇಶದವರೆಗೂ ನಗದು ರೂಪದಲ್ಲಿ ಪಾವತಿಸಬೇಕಾಗಿದೆ.
    ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ವೇತನಕ್ಕೆ ಮುಂಚಿತವಾಗಿ ಪಾವತಿಸಬೇಕಾಗಿದೆ.
    ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರೈಸಲಾಗುವುದು; ಐವತ್ತು ಪೈಸೆಕ್ಕಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ತೊರೆದಿಡಲಾಗುವುದು.
    ತುಟ್ಟಿಭತ್ಯೆ ಸಂಭಾವನೆಯ ವಿಶೇಷ ಅಂಶವಾಗಿ ಮಾತ್ರ ತೋರಿಸಬೇಕಾಗಿದ್ದು, ಇದನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ವೇತನವೆಂದು ಪರಿಗಣಿಸಲಾಗುವುದಿಲ್ಲ.

    ಈ ಆದೇಶವು ವಿದ್ಯಾಭ್ಯಾಸದ ಹತ್ತಿರ ಕೆಲಸ ಮಾಡುವ ನೌಕರರಿಗೆ ಬಹುಮಾನ ಹಾಗೂ ಪ್ರೋತ್ಸಾಹದ ಹೊಸ ಹಂತವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಅವರು ತಮ್ಮ ಸೇವೆಯ ಗುಣಮಟ್ಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರುವಲ್ಲಿ ಸಹಾಯವಾಗಲಿದೆ.

  • IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ

    IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ

    ಅಡಿಲೇಡ್ : ಅಡಿಲೇಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಸೋಲು ಕಂಡಿದೆ. ಮೊದಲ ಏಕದಿನದಲ್ಲೇ ಸೋಲು ಕಂಡಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲೂ ಆಸ್ಟ್ರೇಲಿಯಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ದಾಳಿಗೆ ತತ್ತರಿಸಿ 3 ಪಂದ್ಯಗಳ ಸರಣಿಯನ್ನು 0–2 ಅಂತರದಿಂದ ಕಳೆದುಕೊಂಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್‌ಗಳನ್ನು ಪೇರಿಸಿತು. ಆದರೆ ಗುರಿ ಬೆನ್ನಟ್ಟಿದ ಆತಿಥೇಯ ಆಸ್ಟ್ರೇಲಿಯಾ ತಂಡ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

    ಭಾರತದ ಇನ್ನಿಂಗ್ಸ್ ಆರಂಭದಿಂದಲೇ ಅಸ್ಥಿರವಾಗಿತ್ತು. ನಾಯಕ ಶುಭಮನ್ ಗಿಲ್ ಕೇವಲ 9 ರನ್ ಗಳಿಗೇ ವಿಕೆಟ್ ಕಳೆದುಕೊಂಡರೆ, ವಿರಾಟ್ ಕೊಹ್ಲಿ ನಿರಂತರ ಎರಡನೇ ಬಾರಿಗೆ ಸೊನ್ನೆಗೆ ಔಟಾದರು. ಆರಂಭಿಕ ಆಘಾತದ ನಂತರ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ ಗೆ 118 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ನಿಶ್ಚಿತ ಭದ್ರತೆ ನೀಡಿದರು. ರೋಹಿತ್ 81 ರನ್ ಗಳಿಸಿದರು, ಅಯ್ಯರ್ 63 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಕೆಎಲ್ ರಾಹುಲ್ ಮತ್ತು ನಿತೀಶ್ ರೆಡ್ಡಿ ನಿರೀಕ್ಷೆಯ ಮಟ್ಟಕ್ಕೆ ಆಡಲಿಲ್ಲ.

    ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಕ್ಸೇವಿಯರ್ ಬಾರ್ಲೆಟ್ ಮತ್ತು ಸ್ಪಿನ್ನರ್ ಆ್ಯಡಂ ಝಂಪಾ ಅವರು ಭರ್ಜರಿ ಬೌಲಿಂಗ್ ತೋರಿದರು. ಝಂಪಾ ಅವರ ಸ್ಪಿನ್ ಬಲೆಗೆ ಭಾರತೀಯ ಬ್ಯಾಟರ್‌ಗಳು ತತ್ತರಿಸಿದರು. ಬಾರ್ಲೆಟ್ ಆರಂಭದಲ್ಲಿ ಭಾರತದ ಟಾಪ್ ಆರ್ಡರ್‌ನ ಮೂವರು ಆಟಗಾರರನ್ನು ಪೆವಿಲಿಯನ್ ಕಡೆ ಮುಖ ಮಾಡುವಂತೆ ಮಾಡಿದರು.

    ಆಸ್ಟ್ರೇಲಿಯಾದ ಪರ ಬ್ಯಾಟಿಂಗ್ ಮಾಡಲು ಇಳಿದವರು ಪ್ರಾರಂಭದಲ್ಲಿ ನಿಧಾನಗತಿಯಿಂದ ಆಡಿದರು. ನಾಯಕ ಮಿಚೆಲ್ ಮಾರ್ಷ್ (11) ಮತ್ತು ಟ್ರಾವಿಸ್ ಹೆಡ್ (28) ಬೇಗನೆ ಔಟಾದರೂ, ಮ್ಯಾಥ್ಯೂ ಶಾರ್ಟ್ (74) ಮತ್ತು ಅಂತಿಮ ಹಂತದಲ್ಲಿ ಅಜೇಯ ಅರ್ಧಶತಕ ಬಾರಿಸಿದ ಕೂಪರ್ ಕಾನೊಲಿ (61*) ಅವರು ಪಂದ್ಯವನ್ನು ಆಸ್ಟ್ರೇಲಿಯಾ ಕಡೆ ತಳ್ಳಿದರು. ಇವರ ತಾಳ್ಮೆಯ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ಭಾರತದಿಂದ 2 ವಿಕೆಟ್ ಗಳ ರೋಮಾಂಚಕ ಗೆಲುವು ಸಾಧಿಸಿತು.

    ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು 2–0 ಅಂತರದಿಂದ ಗೆದ್ದು ಭಾರತಕ್ಕೆ ನಿರಾಶೆ ಮೂಡಿಸಿದೆ. ವೇಗಕ್ಕೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಸ್ಪಿನ್ನರ್ ಝಂಪಾ ಅವರ ಬುದ್ಧಿವಂತ ಬೌಲಿಂಗ್, ಹಾಗೂ ಕಾನೊಲಿ–ಶಾರ್ಟ್ ಜೋಡಿಯ ಜಾಣ್ಮೆಯ ಬ್ಯಾಟಿಂಗ್ ಆಸ್ಟ್ರೇಲಿಯಾ ಗೆಲುವಿನ ಪ್ರಮುಖ ಅಸ್ತ್ರಗಳಾದವು.

  • ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಇತ್ತೀಚಿಗೆ ವಿಮಾನಯಾನದಲ್ಲಿ ಸುರಕ್ಷತೆ ಅತಿ ಮುಖ್ಯವಾದ ಅಂಶವಾಗಿದೆ. ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿಯು ವಿಮಾನ ಪ್ರಯಾಣವನ್ನು ತಕ್ಷಣ ಅಪಾಯಕ್ಕೆ ತರುವ ಸಾಧ್ಯತೆ ಹೊಂದಿದೆ. ಇತ್ತೀಚೆಗೆ ಇದೇ ರೀತಿಯ ತುರ್ತು ಘಟನೆ ಉತ್ತರ ಭಾರತದ ವಾರಣಾಸಿಯಲ್ಲಿ ಸಂಭವಿಸಿದೆ. ಶ್ರೀನಗರಕ್ಕೆ ಹಾರುತ್ತಿರುವ ಇಂಡಿಗೋ ವಿಮಾನದಲ್ಲಿ ಇಂಧನ ಸೋರಿಕೆಯ ತೊಂದರೆ (Fuel Leak) ಕಾಣಿಸಿಕೊಂಡು, ಪೈಲಟ್‌ ತುರ್ತು ಕ್ರಮ ಕೈಗೊಂಡಿದ್ದಾರೆ.

    ಕೋಲ್ಕತ್ತಾದಿಂದ ಶ್ರೀನಗರಗೆ ಹೊರಟಿದ್ದ ಈ ವಿಮಾನವು, ಮಾರ್ಗದಲ್ಲಿ ಇಂಧನ ಸೋರಿಕೆ ಉಂಟಾಗುತ್ತಿರುವುದನ್ನು ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಪೈಲಟ್‌ ತುರ್ತು ನಿರ್ಧಾರ ಕೈಗೊಂಡು, ವಿಮಾನವನ್ನು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರವಾಗಿ ಭೂಸ್ಪರ್ಶ ಮಾಡಿಸಿದ್ದಾರೆ. ಈ ವೇಳೆ ವಿಮಾನದಲ್ಲಿ ಇದ್ದ 166 ಪ್ರಯಾಣಿಕರು ಮತ್ತು ಸಿಬ್ಬಂದಿಯವರೆಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಾರಣಾಸಿ ಪೊಲೀಸ್ ಇಲಾಖೆ ತಿಳಿಸಿದೆ.

    ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯ ಕುರಿತು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಅದರೊಂದಿಗೆ, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿ ತಂದುಕೊಂಡಿದ್ದಾರೆ ಎಂದು ಪ್ರಕಟಿಸಿದ್ದಾರೆ. ಘಟನೆಯಿಂದ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಉಳಿದ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

    ಈ ಘಟನೆಯು ವಿಮಾನಯಾನದ ತಾಂತ್ರಿಕ ಸುರಕ್ಷತೆ, ತಕ್ಷಣ ನಿರ್ಧಾರ ಕೈಗೊಳ್ಳುವ ಪೈಲಟ್‌ ನೈಪುಣ್ಯ ಮತ್ತು ಸಹಜ ತುರ್ತು ಸಿದ್ಧತೆಗಳ ಮಹತ್ವವನ್ನು ಮತ್ತೊಮ್ಮೆ ಹೇಳುತ್ತಿದೆ. ಪ್ರಯಾಣಿಕರ ಸುರಕ್ಷತೆಯೆಂದರೆ ಯಾವತ್ತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.

  • ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲಬುರಗಿ: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ನೂತನ ಆಯುಕ್ತರಾಗಿ ಬಿ. ವೆಂಕಟಸಿಂಗ್ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ರೈಲು ನಿಲ್ದಾಣ ಹತ್ತಿರದ ಮಹಲ್-ಎ-ಶಾಹಿ ಅತಿಥಿಗೃಹ ಆವರಣದಲ್ಲಿರುವ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

    ಈ ವೇಳೆ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ವತಿಯಿಂದ ಆಯುಕ್ತರನ್ನು ಸನ್ಮಾನಿಸಿ ಶುಭಕೋರಲಾಯಿತು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಹನುಮಂತ ಬೋಧಾನ್, ಸಹ ಕಾರ್ಯದರ್ಶಿ ರುಕ್ಮಿಶ್ ಭಂಡಾರಿ, ಸದಸ್ಯ ವಿಟ್ಟಲ್ ಚಿಕಣಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ ಹಾಗೂ ವಾರ್ತಾ ಇಲಾಖೆಯ ಗ್ರಂಥಪಾಲಕ ರವಿ ಮಿರಾಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ವಿಧಾನಸಭೆ ಚುನಾವಣೆ (Bihar Election 2025) ಸಮೀಪಿಸುತ್ತಿರುವಂತೆ, ರಾಜಕೀಯ ವಾತಾವರಣ ದಿನೇದಿನೇ ಚುರುಕಾಗುತ್ತಿದೆ. ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಈ ವೇಳೆಯಲ್ಲಿ ಕರ್ನಾಟಕ ಮತ್ತು ಬಿಹಾರ ರಾಜಕೀಯದ ನಡುವೆ ಹೊಸ ವಾಗ್ವಾದ ಉಂಟಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ಜೋರಾಗಿವೆ. ಈ ಪೈಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ತಿರುಗೇಟು ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, “ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ನಾವು ಅಲ್ಲ, ಬಿಜೆಪಿ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹಾಕ್ತಿದ್ದಾರೆ,” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರು ಕರ್ನಾಟಕವನ್ನು ‘ಎಟಿಎಂ ರಾಜ್ಯದಂತೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಇನ್ನು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ (RSS Activities Ban) ಕುರಿತ ವಿವಾದಕ್ಕೂ ಅವರು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಹೊರಡಿಸಿದ ಸುತ್ತೋಲೆ ಹೊಸದೇನಲ್ಲ. ಇದೇ ರೀತಿಯ ಸುತ್ತೋಲೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಿದ್ದರು, ಅದೇ ಸುತ್ತೋಲೆ ಈಗಲೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಯಾವ ಸಂಸ್ಥೆ ಚಟುವಟಿಕೆ ನಡೆಸಬೇಕು ಎಂಬುದು ಸರ್ಕಾರದ ಪರಿಗಣನೆಗೆ ಒಳಪಟ್ಟ ವಿಷಯ. ಪರ್ಮಿಷನ್ ಬೇಕು ಎಂದರೆ ಅದು ಕಡ್ಡಾಯವಲ್ಲ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದಲೇ ಅನುಮತಿ ನೀಡಲಾಗುತ್ತದೆ,” ಎಂದು ಹೇಳಿದರು.

    ಈ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಹಾರ ಚುನಾವಣೆಗೂ ಮುನ್ನ ರಾಜಕೀಯ ಕೆಸರೆರರಾಚಾಟಕ್ಕೆ ಪುಷ್ಟಿ ತುಂಬಿದ್ದಾರೆ.

  • ಕರ್ನಾಟಕದಲ್ಲಿ ಮಳೆ ಅಬ್ಬರ ! ಶಿವಮೊಗ್ಗ, ತುಮಕೂರು, ದಾವಣಗೆರೆಗೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಕರ್ನಾಟಕದಲ್ಲಿ ಮಳೆ ಅಬ್ಬರ ! ಶಿವಮೊಗ್ಗ, ತುಮಕೂರು, ದಾವಣಗೆರೆಗೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    1. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕಡಿಮೆಯಾದ ಮಳೆ ಮತ್ತೆ ತನ್ನ ಅಬ್ಬರ ತೋರಿಸಲು ಸಿದ್ಧವಾಗಿದೆ. ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಮುಂದಿನ ವಾರದಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಈ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 20) ಶಿವಮೊಗ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಬೆಳಗಿನ ವೇಳೆಯಿಂದಲೇ ಮೋಡ ಆವರಿಸಿಕೊಂಡು ಮಳೆ ಆರಂಭವಾಗಿದ್ದು, ಕೆಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿಯ ಸಹಿತ ಮಳೆ ಸುರಿಯುತ್ತಿದೆ.

    ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 23ರಿಂದ 26ರವರೆಗೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ದಿನಪೂರ್ತಿ ಮಳೆ ಸುರಿಯಬಹುದು. ಇದೇ ವೇಳೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿಯೂ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.

    ಅಕ್ಟೋಬರ್ 24ರಂದು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಸಹ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಧ್ಯಮ ಮಟ್ಟದ ಮಳೆಯಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಮಿಂಚು ಸಹ ಆಗಬಹುದು.

    ಕರಾವಳಿ ಭಾಗಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸಹ ಸಲಹೆ ನೀಡಲಾಗಿದೆ, ಏಕೆಂದರೆ ಸಮುದ್ರದ ಗಾಳಿ 40 ರಿಂದ 50 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

    ಹವಾಮಾನ ಇಲಾಖೆ ಸಾರ್ವಜನಿಕರಿಗೆ, ವಿಶೇಷವಾಗಿ ರೈತರಿಗೆ ಎಚ್ಚರಿಕೆ ನೀಡಿದೆ ಹೊಲಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಮತ್ತು ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಿ ಎಂದು ಎಚ್ಚರಿಕೆ ನೀಡಿದೆ.

  • ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

    ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

    ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯು ಕೇವಲ ಲೋಹವಲ್ಲ, ಅವು ಸಂಸ್ಕೃತಿ, ಪರಂಪರೆ, ಆರ್ಥಿಕತೆ ಹಾಗೂ ಭಾವನೆಗಳಿಗೂ ಮೇಳೈಸಿರುವ ಅಮೂಲ್ಯ ಸಂಪತ್ತು. ಹಬ್ಬ-ಹರಿದಿನಗಳಿಂದ ಹಿಡಿದು ಮದುವೆ, ಧಾರ್ಮಿಕ ಕಾರ್ಯಕ್ರಮಗಳು, ಹೂಡಿಕೆ ಹಾಗೂ ಭವಿಷ್ಯ ಭದ್ರತೆವರೆಗೆ ಚಿನ್ನ ಮತ್ತು ಬೆಳ್ಳಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಾಚೀನ ಕಾಲದಿಂದಲೇ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದ್ದು, ಆರ್ಥಿಕ ಅಸ್ಥಿರತೆ ಅಥವಾ ದರ ಏರಿಕೆಯ ಸಮಯದಲ್ಲಿ ಜನರು ಚಿನ್ನ-ಬೆಳ್ಳಿಯತ್ತ ಮುಖ ಮಾಡುವುದು ಸಾಮಾನ್ಯ.

    2025ರ ಆರಂಭದಿಂದಲೇ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಏರಿದವು. ದರ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗದ ಜನರಿಗೆ ಚಿನ್ನ ಖರೀದಿಸುವುದೇ ಕಷ್ಟವಾಗಿತ್ತು. ಆದರೆ ಈಗ ಮಾರುಕಟ್ಟೆಯ ಚಿತ್ರಣ ಬದಲಾಗುತ್ತಿದ್ದು, ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.

    ಬೆಲೆ ಏರಿಕೆಯ ಬಳಿಕ ಇಳಿಕೆಯ ಎಚ್ಚರಿಕೆ:

    ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್ (Amit Goyal) ಅವರ ಪ್ರಕಾರ, ಇತ್ತೀಚಿನ ಚಿನ್ನದ ಬೆಲೆ ಏರಿಕೆಯು ಶಾಶ್ವತವಲ್ಲ. ಅವರ ಅಂದಾಜಿನ ಪ್ರಕಾರ, ಚಿನ್ನದ ಬೆಲೆ ಶೇಕಡಾ 30 ರಿಂದ 35ರಷ್ಟು ಇಳಿಯುವ ಸಾಧ್ಯತೆ ಇದೆ. ಇದರರ್ಥ, ಪ್ರತಿ 10 ಗ್ರಾಂ ಚಿನ್ನದ ದರವು ಸುಮಾರು ₹77,701 ಮಟ್ಟಕ್ಕೆ ಕುಸಿಯಬಹುದು.

    ಅದೇ ರೀತಿ ಬೆಳ್ಳಿಯ ಬೆಲೆಯಲ್ಲಿ ಶೇಕಡಾ 50ರಷ್ಟು ಕುಸಿತ ಸಾಧ್ಯವೆಂದು ಅವರು ತಿಳಿಸಿದ್ದಾರೆ. ಹೂಡಿಕೆದಾರರು ಹಾಗೂ ಖರೀದಿದಾರರು ಈ ಭವಿಷ್ಯವನ್ನು ಮನನ ಮಾಡಿಕೊಂಡು ತಮ್ಮ ಹಣಕಾಸು ತೀರ್ಮಾನಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

    ಚಿನ್ನದ ಬೆಲೆಯಲ್ಲಿ ಶೇಕಡಾ 30–35ರಷ್ಟು ಇಳಿಕೆಯ ನಿರೀಕ್ಷೆ:

    ಗೋಯಲ್ ಅವರ ವಿಶ್ಲೇಷಣೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ಚಿನ್ನದ ಬೆಲೆ ಶೇಕಡಾ 30–35ರಷ್ಟು ಇಳಿಯುವ ಸಾಧ್ಯತೆ ಇದೆ. ಪ್ರತಿ 10 ಗ್ರಾಂ ಚಿನ್ನದ ದರವು ₹77,701 ರವರೆಗೆ ಕುಸಿಯಬಹುದು.

    ಬೆಳ್ಳಿಯ ಬೆಲೆಯು ಸಹ ಶೇಕಡಾ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಮತ್ತು ₹77,450 ಮಟ್ಟ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಬದಲಾವಣೆಯು ಹೂಡಿಕೆ ಮಾರುಕಟ್ಟೆಗೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

    2025ರಲ್ಲಿ ಏರಿಕೆಯ ಹಾದಿಯಿಂದ ಇಳಿಕೆಯ ಹಾದಿಗೆ:

    2025ರ ಆರಂಭದಿಂದಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡುಬಂತು. ಮಧ್ಯಮ ವರ್ಗದ ಜನರಿಗೆ ಚಿನ್ನದ ಖರೀದಿ ಅಸಾಧ್ಯವಾಗುವ ಮಟ್ಟಿಗೆ ದರ ಏರಿಕೆ ಕಂಡುಬಂದಿತ್ತು. ಆದರೆ ಈಗ ತಜ್ಞರ ಪ್ರಕಾರ ಈ ಏರಿಕೆಯು ಕೊನೆಯ ಹಂತವನ್ನು ತಲುಪಿದೆ.

    2007, 2008 ಮತ್ತು 2011 ರಲ್ಲಿಯೂ ಇದೇ ರೀತಿಯ ಸನ್ನಿವೇಶ ಕಂಡುಬಂದಿತ್ತು, ಆ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯ ನಂತರ ಶೇಕಡಾ 45ರಷ್ಟು ಕುಸಿತ ದಾಖಲಾಗಿತ್ತು. ಇದೇ ಮಾದರಿಯ ಪರಿಸ್ಥಿತಿ ಮತ್ತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

    ಬೆಳ್ಳಿಯ ಬೆಲೆ ಏರಿಕೆ:

    ಕಳೆದ ಹತ್ತು ತಿಂಗಳಲ್ಲಿ ಬೆಳ್ಳಿಯ ಬೆಲೆ ಎರಡು ಪಟ್ಟು ಏರಿರುವುದು ಗಮನಾರ್ಹ. ಚಿನ್ನಕ್ಕಿಂತಲೂ ಬೆಳ್ಳಿಯು ಹೂಡಿಕೆದಾರರಿಗೆ ಶೇಕಡಾ 37ರಷ್ಟು ಹೆಚ್ಚುವರಿ ಲಾಭ ನೀಡಿದೆ. ಇದರ ಹಿಂದಿರುವ ಪ್ರಮುಖ ಕಾರಣಗಳು, ಹಬ್ಬದ ಕಾಲದಲ್ಲಿ ಹೆಚ್ಚಿದ ಖರೀದಿ ಬೇಡಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಯ ಹೆಚ್ಚಿದ ಬಳಕೆ ಮತ್ತು ಜಾಗತಿಕ ಪೂರೈಕೆಯ ಕೊರತೆ.

    ದೀಪಾವಳಿ ಮತ್ತು ಧನತ್ರಯೋದಶಿಯ ಸಂದರ್ಭದಲ್ಲಿ ಭಾರತದಲ್ಲಿ ಬೆಳ್ಳಿ ಖರೀದಿ ಹೆಚ್ಚಾಗುವ ನಿರೀಕ್ಷೆಯಿದೆ. ಜೊತೆಗೆ ಸೌರ ವಿದ್ಯುತ್ ಘಟಕಗಳು, ಎಐ (AI) ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಬೆಳ್ಳಿಯ ಬಳಕೆ ವೇಗವಾಗಿ ಹೆಚ್ಚುತ್ತಿರುವುದರಿಂದ ಜಾಗತಿಕ ಬೇಡಿಕೆಯೂ ಏರಿದೆ.

    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಬೃಹತ್ ಬದಲಾವಣೆಗಳು ಹೂಡಿಕೆದಾರರಿಗೆ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿವೆ. ಬೆಲೆ ನಿಗದಿ ವ್ಯವಸ್ಥೆಯ ಬದಲಾವಣೆಗಳು, ಜಾಗತಿಕ ಆರ್ಥಿಕ ಪರಿಸ್ಥಿತಿ ಹಾಗೂ ಬೇಡಿಕೆ–ಪೂರೈಕೆಯ ಅಸಮತೋಲನಗಳು ಮುಂದಿನ ಬೆಲೆ ಬದಲಾವಣೆಗಳಲ್ಲಿ ಪ್ರಮುಖ ಪಾತ್ರವಹಿಸಲಿವೆ.

    ಹೀಗಾಗಿ, ಹೂಡಿಕೆದಾರರು ಹಾಗೂ ಖರೀದಿದಾರರು ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುವುದು ಅತ್ಯಂತ ಮುಖ್ಯ.

  • ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಕರ್ನಾಟಕದಲ್ಲಿ ಇತ್ತೀಚೆಗೆ ಬಿಪಿಎಲ್‌ (BPL) ಮತ್ತು ಎಪಿಎಲ್‌ (APL) ಕಾರ್ಡ್‌ಗಳ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಆಹಾರ ಇಲಾಖೆಯ ಪ್ರಕಾರ, ಅನೇಕರು ನಕಲಿ ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್ ಪಡೆದಿದ್ದರು. ಇಂತಹವರ ಕಾರ್ಡ್‌ಗಳನ್ನು ಈಗ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ನಿಜವಾದ ಬಡ ಕುಟುಂಬಗಳ ಕಾರ್ಡ್‌ಗಳೂ ಸಹ ತಪ್ಪಾಗಿ ಬದಲಾಯಿಸಿರುವುದು ಕಂಡುಬಂದಿದೆ.

    ಆದರೆ ಚಿಂತೆ ಬೇಡ! ಸರ್ಕಾರ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ ಯಾರು ನಿಜವಾಗಿಯೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಾಗಿದ್ದಾರೋ ಅವರು ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಿದರೆ, ಅವರ ಎಪಿಎಲ್‌ ಕಾರ್ಡ್‌ಗಳನ್ನು ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುತ್ತದೆ.

    ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಅರ್ಜಿಯನ್ನು ಸಲ್ಲಿಸಿದ ನಂತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ಸಾಬೀತಾದರೆ 45 ದಿನಗಳ ಒಳಗಾಗಿ ಆ ಕುಟುಂಬಕ್ಕೆ ಹೊಸ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತದೆ.

    ರಾಜ್ಯದಲ್ಲಿ ನಕಲಿ ದಾಖಲೆಗಳಿಂದ ಪಡೆದಿರುವ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 7,76,000 ಬಿಪಿಎಲ್‌ ಕಾರ್ಡ್‌ಗಳು ಅನರ್ಹ ಎಂದು ಕಂಡುಬಂದಿವೆ. ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ, ಒಟ್ಟು 13,87,651 ಪಡಿತರ ಚೀಟಿಗಳು ಅನರ್ಹ ಎಂದು ಪರಿಗಣಿಸಲಾಗಿದೆ.

    ಅದರಿಂದಾಗಿ ಅರ್ಹರು ತಮ್ಮ ಪ್ರದೇಶದ ತಹಶೀಲ್ದಾರ್‌ ಕಚೇರಿಗೆ ತೆರಳಿ, ಕುಟುಂಬದ ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ಅಥವಾ ಆಸ್ತಿ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ದಾಖಲೆಗಳು ಸರಿಯಾಗಿದ್ದರೆ ಬಿಪಿಎಲ್‌ ಕಾರ್ಡ್‌ ಮತ್ತೆ ನೀಡಲಾಗುತ್ತದೆ.

    ಆದರೆ, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳ ವಿತರಣೆ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಆದ್ದರಿಂದ ಸರ್ಕಾರವು ಮೊದಲು ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಮುಗಿಸಿ ನಂತರ ಹೊಸ ಕಾರ್ಡ್‌ಗಳನ್ನು ನೀಡುವ ಯೋಜನೆ ಹೊಂದಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಬಡ ಕುಟುಂಬಗಳು ಹೊಸ ಕಾರ್ಡ್‌ಗಾಗಿ ಕಾಯುತ್ತಿವೆ.

    ಈ ಪರಿಸ್ಥಿತಿಯಿಂದ ಜನರು ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಪಡಿತರ ಸಿಗದೆ ಅನೇಕ ಬಡ ಕುಟುಂಬಗಳು ಪರದಾಡುತ್ತಿವೆ. ಸಾರ್ವಜನಿಕರು “ಬಿಪಿಎಲ್‌ ಕಾರ್ಡ್‌ಗಳ ದುರ್ಬಳಕೆ ತಡೆಯುವುದು ಸರಿಯೇ, ಆದರೆ ನಿಜವಾದ ಬಡವರಿಗೆ ತೊಂದರೆ ಕೊಡಬಾರದು” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಒಟ್ಟಿನಲ್ಲಿ, ಸರ್ಕಾರದ ಉದ್ದೇಶ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿ ನಿಜವಾದ ಬಡ ಕುಟುಂಬಗಳಿಗೆ ನೆರವು ನೀಡುವುದಾಗಿದೆ. ಆದರೆ ತಪ್ಪು ಕಾರ್ಡ್‌ ಬದಲಾವಣೆಗಳಿಂದ ಸಮಸ್ಯೆ ಉಂಟಾಗಿದೆ. ಅರ್ಹರು 45 ದಿನಗಳೊಳಗೆ ದಾಖಲೆ ಸಲ್ಲಿಸಿದರೆ ಮತ್ತೆ ಬಿಪಿಎಲ್‌ ಕಾರ್ಡ್‌ ಪಡೆಯುವ ಅವಕಾಶವಿದೆ.

  • ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಸತ್ಯಕಾಮ ವಾರ್ತೆ ಸುರಪುರ:

    ಕನ್ನಡ ನಾಡು ನುಡಿ ನೆಲ ಜಲದ ಭಾಷೆ ವಿಷಯಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೀಮು ನಾಯಕ ಕಳೆದ ಅನೇಕ ವರ್ಷಗಳಿಂದ ಕನ್ನಡಪರ ಹೋರಾಟಗಾರನಾಗಿದ್ದು ಮುಂದೆಯೂ ಉತ್ತಮವಾದ ಸಂಘಟನೆಯನ್ನು ಜಿಲ್ಲೆಯಲ್ಲಿ ಬೆಳೆಸಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ಇಂದು ತುಂಬಾ ಅಪಾಯದಲ್ಲಿದೆ ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕನ್ನಡಿಗರಿಗೆ ಇದ್ದು, ಮ.ರಾ.ಮೂರ್ತಿ, ವಿ.ಕೃ ಗೋಕಾಕ ಡಾ.ರಾಜಕುಮಾರ್,ವಾಟಾಳ

    ನಾಗರಾಜ್, ಜಿ ನಾರಾಯಣ ಕುಮಾರ್ ಸೇರಿದಂತೆ ಹಲವು ಮಹನೀಯರು ಕನ್ನಡಕ್ಕಾಗಿ ದುಡಿದಿದ್ದಾರೆ ಅಂತವರಿಂದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಆರಂಭಗೊಂಡಿದೆ ಎಂದರು.

    ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಭೀಮು ನಾಯಕ ಮಲ್ಲಿಬಾವಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬೆಳೆಸುವುದಾಗಿ ತಿಳಿಸಿದರು.

    ಪ್ರಸ್ತಾವಿಕವಾಗಿ ಸಾಹಿತಿ ಅಶೋಕ ಚೌಧರಿ ಮಾತನಾಡಿ, 80ರ ದಶಕದಲ್ಲಿ ಕನ್ನಡಕ್ಕೆ ಪಕ್ಕದ ರಾಜ್ಯಗಳ ಭಾಷೆಗಳು ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಜಿ ನಾರಾಯಣ ಕುಮಾರ್ ಅವರು ರಾಜ್ಯದಲ್ಲಿ ಕನ್ನಡಿಗರನ್ನು ಸಂಘಟಿಸುವ ಜೊತೆಗೆ ದೊಡ್ಡಮಟ್ಟದಲ್ಲಿ ಹೋರಾಟವನ್ನು ನಡೆಸಿ ಕನ್ನಡ ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.

    ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗಮಿಸುತ್ತಿದ್ದಂತೆ ನಗರದಲ್ಲಿ ಅದ್ದೂರಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌಧರಿ ಮಾತನಾಡಿದರು.ಯಲ್ಲಪ್ಪ ನಾಯಕ ಮಲ್ಲಿಬಾವಿ ನೇತೃತ್ವ ವಹಿಸಿದ್ದರು. ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಸಮಿತಿಯ ಮುಖಂಡ ರಾಜಣ್ಣ ಉಪಸ್ಥಿತರಿದ್ದರು.ಮಹೇಶ ಗಂಜಿ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ಪರಶುರಾಮ ಮಲ್ಲಿಬಾವಿ ವಂದಿಸಿದರು. ಸಂಘಟನೆಯ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

    ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಭೀಮು ಹೆಚ್.ನಾಯಕ ಅವರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಸ್ವಾಮೀಜಿಗಳ ಮೂಲಕ ನೀಡಿ ಗೌರವಿಸಲಾಯಿತು.