Category: Latest News

  • ನಾನು ನನ್ನ ಆಸ್ತಿ ಲೆಕ್ಕಾಚಾರ ಕೊಡುತ್ತೇನೆ; ಕುಮಾರಸ್ವಾಮಿ ಸಹೋದರನ ಆಸ್ತಿ ಲೆಕ್ಕ ನೀಡಲಿ: ಡಿಸಿಎಂ ಡಿ. ಕೆ. ಶಿವಕುಮಾರ್

    ನಾನು ನನ್ನ ಆಸ್ತಿ ಲೆಕ್ಕಾಚಾರ ಕೊಡುತ್ತೇನೆ; ಕುಮಾರಸ್ವಾಮಿ ಸಹೋದರನ ಆಸ್ತಿ ಲೆಕ್ಕ ನೀಡಲಿ: ಡಿಸಿಎಂ ಡಿ. ಕೆ. ಶಿವಕುಮಾರ್


    *ಬೆಂಗಳೂರು, ಆ.5:*

    “ನನ್ನ ಕುಟುಂಬದ ಆಸ್ತಿ ಲೆಕ್ಕಾಚಾರ ಕೇಳುತ್ತಿದ್ದೀಯಾ, ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ಇದಕ್ಕೂ ಮೊದಲು ನಿನ್ನ ಸಹೋದರನ ಆಸ್ತಿ ಲೆಕ್ಕ ನೀಡು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲೆಸೆದರು.

    ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು “ನಿನ್ನ ಅಧಿಕಾರವಧಿಯಲ್ಲಿ ನಿನ್ನ ಸಹೋದರ ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡ ಎಂಬುದಕ್ಕೆ ಮೊದಲು ಲೆಕ್ಕಾಚಾರ ಹಾಕೋಣ. ಆನಂತರ ನನ್ನದು ಕೊಡುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ” ಎಂದು ತಿರುಗೇಟು ನೀಡಿದರು.

    “ಕುಮಾರಸ್ವಾಮಿ ನನ್ನ ಪ್ರಶ್ನೆ ಮಾಡುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೇ. ಆದರೆ ನಾನು ಅವರ ಸಹೋದರನ ಆಸ್ತಿ ಬಗ್ಗೆ ಮೊದಲು ಉತ್ತರ ನೀಡಲಿ. ಜೆಡಿಎಸ್, ಬಿಜೆಪಿ ಹಗರಣಗಳಿಗೆ ಉತ್ತರ ಕೊಡಿ ಎಂದು ಕೇಳಿದರೂ ಇದುವರೆಗೂ ಉತ್ತರ ಕೊಟ್ಟಿಲ್ಲ” ಎಂದರು.

    “ವಿಜಯೇಂದ್ರ ಹೇಳುತ್ತಾನೆ ಭ್ರಷ್ಟಾಚಾರದ ಪಿತಾಮಹಾ ನಾನು ಎಂದು. ನೀನು ಮೊದಲು ಹೇಳಪ್ಪ, ನೀನು ನಿಮ್ಮ ಅಪ್ಪನನ್ನು ಯಾಕೆ ಜೈಲಿಗೆ ಕಳುಹಿಸಿದೆ? ರಾಜೀನಾಮೆ ಕೊಡಿಸಿದೆ? ಏನಾಯಿತು, ಎಲ್ಲಿ ಬಂತು? ಏಕೆ ಇದೆಲ್ಲಾ ಆಯಿತು ಇದರ ಲೆಕ್ಕಾಚಾರ ಮೊದಲು ನೀಡು. ಮೊದಲು ನಿಮ್ಮ ಪಕ್ಷದ ಯತ್ನಾಳ್, ಗೂಳಿಹಟ್ಟಿ ಶೇಖರ್ ಗೆ ಉತ್ತರ ಕೊಡಿ ಆನಂತರ ನನಗೆ ಕೊಡುವಿರಂತೆ” ಎಂದು ಹೇಳಿದರು.

    “ಇಂದು ಮದ್ದೂರಿನಲ್ಲಿ ಜನಾಂದೋಲನ ಯಾತ್ರೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ಕರ್ನಾಟಕದ ಪಾಲಿನ ಅನುದಾನ ಬಿಡುಗಡೆ ಮಾಡಿಸಿಲ್ಲ ಹಾಗೂ ನಾವು ವಿರೋಧ ಪಕ್ಷದಲ್ಲಿ ಇದ್ದಾಗ ಏನೇನು ಮಾಡಿದ್ದರು ಅದಕ್ಕೆಲ್ಲ ಉತ್ತರ ಕೊಡಿ ಎಂದು ಕೇಳುತ್ತಿದ್ದೇವೆ. ಇದಕ್ಕಾಗಿ ಜನಾಂದೋಲನ ಸಭೆ ನಡೆಸುತ್ತಿದ್ದೇವೆ” ಎಂದರು.

  • ಕಂದಗನೂರು’ನಲ್ಲಿ ಚಿರತೆ ಪತ್ತೆ ದೃಢ; ಕತ್ತೆ ಕಿರುಬ ಎಂದಿದ್ದ ಅರಣ್ಯ ಅಧಿಕಾರಿಗಳು.!

    ಕಂದಗನೂರು’ನಲ್ಲಿ ಚಿರತೆ ಪತ್ತೆ ದೃಢ; ಕತ್ತೆ ಕಿರುಬ ಎಂದಿದ್ದ ಅರಣ್ಯ ಅಧಿಕಾರಿಗಳು.!

    ವರದಿ: ಶ್ರೀಶೈಲ್ ಪೂಜಾರಿ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲೂಕಿನ ಕಂದಗನೂರು ಗ್ರಾಮದಲ್ಲಿ ಚಿರತೆ ಇರುವುದು ದೃಢವಾಗಿದೆ. ನಿನ್ನೆ(ಮಂಗಳವಾರ) ಅಳವಡಿಸಿದ್ದ ಸೆನ್ಸಾರ್ ಕ್ಯಾಮರಾದಲ್ಲಿ ಚಿರತೆ ಬಂದು ಹೋಗಿರುವುದು ಹಾಗೂ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ವಲಯ ಅರಣ್ಯ ಅಧಿಕಾರಿಗಳೊಬ್ಬರು ಸ್ಪಷ್ಟಪಡಿಸಿದರು.

    ಮೂರು ದಿನ ಹಿಂದೆ ಚಿರತೆ ಚಲನವಲನಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿದುಬಂದಿದ್ದು, ಅರಣ್ಯ ಇಲಾಖೆ ನಿನ್ನೆಯಿಂದ ಚಿರತೆಯ ಸೆರೆಗೆ ಬೋನು ಇರಿಸಿದ್ದರು. ಮಂಗಳವಾರ ರಾತ್ರಿ (ಜುಲೈ 30) ಚಿರತೆ ಬಂದು ಹೋಗಿರುವುದು ಹಾಗೂ ಅದರ ಹೆಜ್ಜೆಗುರುತುಗಳು ಪತ್ತೆಯಾಗಿದೆ. ಚಿರತೆ ಹಿಡಿಯಲು ಬೋನಿನಲ್ಲಿ ಮಾಂಸ ಅಳವಡಿಸಲಾಗಿತ್ತು ಆದರೆ ಮೊದಲು ಬೋನಿನಲ್ಲಿ ನಾಯಿ ಬಿದ್ದಿದ್ದು, ತದನಂತರ ಬೋನಿನ ಸಮೀಪ ಚಿರತೆ ಬಂದು ಹೋಗಿದೆ. ಚಿರತೆ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದೇವೆ ಎಂದು ವಲಯ ಅರಣ್ಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

    ಇತ್ತೀಚೆಗೆ ಕಂದಗನೂರನಲ್ಲಿ ಜುಲೈ 28 ಕ್ಕೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಅಲ್ಲದೇ ಗ್ರಾಮದ ಸಿದ್ರಾಮಪ್ಪ ಬೋವಿ ಅವರ ಹೊಲದಲ್ಲಿ ಆಕಳು, ಎಮ್ಮೆಯನ್ನು ತಿಂದು ಕಡಿದು ಹಾಕಿತ್ತು. ಇದರಿಂದ ಗ್ರಾಮದ ರೈತರು ಭಯಭೀತರಾಗಿ ಕೃಷಿಗೆ ಹೋಗುವುದನ್ನ ನಿಲ್ಲಿಸಿದ್ದರು. ಈಗ ಚಿರತೆ ಇರುವುದು ದೃಢವಾದ ಹಿನ್ನಲೆಯಲ್ಲಿ ಮತ್ತೆ ಜಮೀನಿಗೆ ನೀರು ಹಾಯಿಸಲು ಹಾಗೂ ಇನ್ನೀತರ ಕೆಲಸ ಕಾರ್ಯಗಳಿಗೆ ಹೋಗಲು ರೈತರು ಹಿಂದೇಟು ಹಾಕುವಂತಾಗಿದೆ. ಆಗ ಅರಣ್ಯ ಅಧಿಕಾರಿಗಳು ಚಿರತೆ ಅಲ್ಲ ಕತ್ತೆ ಕಿರುಬ ಎಂದು ಹೇಳಿ ನುಣುಚಿಕೊಳ್ಳುವ ಯತ್ನ ಮಾಡಿದ್ದರು.

    ಚಿರತೆ ಸೆರೆಗೆ ಪರಿಣಿತ ತಂಡ ರಚನೆ ಯಾವಾಗ?

    ಇಷ್ಟೆಲ್ಲಾ ಘಟನೆ ಸಂಭವಿಸಿದರು ಈ ವರೆಗೂ ವಲಯ ಅರಣ್ಯಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಚಿರತೆ ಕಾಣಿಸಿಕೊಂಡಿರುವುದನ್ನು ಗ್ರಾಮಸ್ಥರು ಮೂರು ದಿನದಿಂದ ಹೇಳುತ್ತಿದ್ದರು ಅಧಿಕಾರಿಗಳು ಕಾಲಹರಣ ಮಾಡಿದ್ದು ನಿನ್ನೆಯಿಂದ ಬೋನು ಅಳವಡಿಸಲಾಗಿದೆ.

    ಈವರೆಗೂ ಚಿರತೆ ಹಿಡಿಯಲು ಪರಿಣಿತ ತಂಡ ರಚನೆ ಆಗಿಲ್ಲ. ಇಲ್ಲಿನ ಸಿಬ್ಬಂದಿಗಳಿಗೆ ಶಿಪ್ಟ್ ರೀತಿಯಲ್ಲಿ ಐದು ಜನರ ತಂಡ ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ. ಆದರೆ ಗ್ರಾಮದ ಸುತ್ತಮುತ್ತಲೂ ಕಬ್ಬು ಇರುವುದರಿಂದ ಕಾರ್ಯಾಚರಣೆಗೆ ಅಡಚಣೆ ಆಗಿದ್ದು, ಪರಣಿತ ತಂಡ ರಚನೆ ಆಗುವವರೆಗೂ ಈ ಚಿರತೆ ಸೆರೆ ಹಿಡಿಯುವುದು ಯಶಸ್ವಿ ಆಗುತ್ತಾ ಎನ್ನುವಂತಾಗಿದೆ.

    ವಿಡಿಯೋ ವೈರಲ್; ಚಿರತೆ ಇಲ್ಲ ಕೇವಲ ವದಂತಿ ಎಂದು ಕೆಲವರು ಅಂದರೆ ಇನ್ನು ಕೆಲವರು ಚಿರತೆ ಯನ್ನು ಸೆರೆ ಹಿಡಿಯಲಾಗಿದೆ ಎಂದು ಹೇಳಿದ್ದರು. ಆದರೆ ಇದೆಲ್ಲದಕ್ಕೂ ಈಗ ತೆರೆಬಿದ್ದಿದ್ದು, ಕಂದಗನೂರಿನಲ್ಲಿ ಗ್ರಾಮ ವ್ಯಾಪ್ತಿ ಜಮೀನಿನಲ್ಲಿ ಚಿರತೆ ಓಡಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಮುದ್ರಣ ಮಾಧ್ಯಮದ ಮೇಲೆ ಜನರಿಗೆ ಅಪಾರ ವಿಶ್ವಾಸ ;ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

    ಮುದ್ರಣ ಮಾಧ್ಯಮದ ಮೇಲೆ ಜನರಿಗೆ ಅಪಾರ ವಿಶ್ವಾಸ ;ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:
    ಮುದ್ರಣ ಮಾಧ್ಯಮದ ಮೇಲೆ ಜನರ ಮೇಲೆ ಅಪಾರವಾದ ವಿಶ್ವಾಸವಿದೆ. ಹೀಗಾಗಿಯೇ ಸಾಮಾಜಿಕ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ವಿಷಯವನ್ನು ಜನರಿಗೆ ತಿಳಿಸುವ ಮುನ್ನ ಸತ್ಯಾಸತ್ಯತೆ ಅರಿಯಬೇಕು. ನಿಖರವಾದ ಮಾಹಿತಿಯ ತಿಳಿಸಬೇಕು. ತಪ್ಪಾಗಿ ನೀಡಿದರೇ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.

    ನಂತರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ ಎಲ್ಲಿಯೂ ನ್ಯಾಯ ಸಿಗದಿದ್ದಾಗ ಮಾಧ್ಯಮಗಳ ಮುಂದೆ ಹೋದರೇ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಜನರ ಮೇಲಿದೆ. ಹೀಗಾಗಿಯೇ ಪತ್ರಕರ್ತರು ಸತ್ಯವನ್ನು ಜನತೆಗೆ ತಿಳಿಸುವಂತಹ ಕೆಲಸ ಮಾಡಲು ಮುಂದಾಗುವುದು ತುಂಬ ಅಗತ್ಯವಿದೆ ಎಂದು ಹೇಳಿದರು.

    ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಮಾತನಾಡಿ; ರಾಜ್ಯ ಸರಕಾರ ಆಂಧ್ರ ಮಾದರಿಯಲ್ಲಿ ಪತ್ರಕರ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪತ್ರಕರ್ತರಿಗೆ ನಿವೇಶನಗಳನ್ನು ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ತಿಳಿಸಿದರು.

    ರಾಜ್ಯ ಸರಕಾರ ಶೀಘ್ರದಲ್ಲಿಯೇ ಗ್ರಾಮೀಣ ಪ್ರತಕರ್ತರಿಗೆ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿದೆ. ಇದರ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವುದು ತುಂಬ ಅಗತ್ಯವಿದೆ ಎಂದು ತಿಳಿಸಿದರು.

    ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ; ಪತ್ರಿಕೋದ್ಯಮದಲ್ಲಿ ನೈಜ ಪತ್ರಕರ್ತರ ಸಂಖ್ಯೆ ಕಡಿಮೆ ಆಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಇದಲ್ಲದೇ ಯಾವುದೇ ಸುದ್ದಿ ಬರೆಯುವ ಮುನ್ನ ಅದರ ಅಧ್ಯಯನ ಮಾಡಬೇಕು ಎಂದರು.

    ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ; ಸ್ಪರ್ಧಾತ್ಮ ಜಗತ್ತಿನಲ್ಲಿ ಸಾಕಷ್ಟು ಮಾಧ್ಯಮಗಳು ಹೊಸದಾಗಿ ಬರುತ್ತಿವೆ. ಅದರಲ್ಲಿಯೂ ದೃಶ್ಯ ಮಾಧ್ಯಮಗಳಿಗಿಂತಲೂ ಮುದ್ರಣ ಮಾಧ್ಯಮ ಮೇಲೆ ಸಾಕಷ್ಟು ವಿಶ್ವಾಸವಿದೆ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್ ಸೇರಿದಂತೆ ಇನ್ನಿತರರು ಇದ್ದರು.

  • ಕಾರ್ಗಿಲ್ ವಿಜಯಕ್ಕೆ ರಜತ ಸಂಭ್ರಮ!

    ಕಾರ್ಗಿಲ್ ವಿಜಯಕ್ಕೆ ರಜತ ಸಂಭ್ರಮ!

    ಚಿದಾನಂದ ಮಾಯಪ್ಪಾ ಪಡದಾಳೆ

    ಅಂದು ಮೇ. 3, 1999. ಫರ್ಕೂನ್ ಎಂಬ ಹಳ್ಳಿಯ ತಶಿ ನಂಗ್ಯಾಲ್ ಎಂಬಾತ ಕುರಿಗಳನ್ನು ಮೇಯಿಸಲು ಹೊರಟಿದ್ದ. ಆಗ ಆತನ ಗಮನ ಟೋಲೋಲಿಂಗ್ ಬೆಟ್ಟದ ಕಡೆಗೆ ನೆಟ್ಟಿತು. ಆತ ಸೂಕ್ಷ್ಮವಾಗಿ ಗಮನಿಸಿದ ಅವರು ಗಾಢ ಬಣ್ಣದ ಬಟ್ಟೆ ಧರಿಸಿದ್ದರು. ಅವರು ತಮ್ಮ ಕೆಲಸದಲ್ಲಿ ನಿರತವಾಗಿದ್ದರು. ಈತನಿಗೆ ಸಂಶಯ ಉಂಟಾಗಿ ಆ ಪ್ರದೇಶದ ಸೈನ್ಯಾಧಿಕಾರಿಗೆ ವಿಷಯ ಮುಟ್ಟಿಸಿದ. ಸೈನ್ಯಾಧಿಕಾರಿಯು ತನ್ನ ಸೈನಿಕರಿಗೆ ಬೆಟ್ಟದ ಮೇಲಿರುವ ಬಂಕರ್‍ಗಳನ್ನು ಪರೀಕ್ಷಿಸಿ ಬರುವಂತೆ ಆದೇಶ ನೀಡುತ್ತಾರೆ. ಆರು ಜನರಿದ್ದ ಗುಂಪೊಂದು ಆ ಬೆಟ್ಟದ ಮೇಲೆ ಹೋಗಿ 22 ದಿನಗಳ ನಂತರ ವಾಪಸಾಗುತ್ತದೆ. ಆದರೆ ಜೀವಂತವಾಗಿ ಅಲ್ಲ. ಬದಲಾಗಿ ಗುರುತು ಹಿಡಿಯಲಾರದಂಥ ಶವಗಳಾಗಿ! ಆ ಶವಗಳು ಬೇರಾರೂ ಆಗಿರುವುದಿಲ್ಲ ಸ್ವತಃ ನಮ್ಮ ಭಾರತ ದೇಶದ ಸೈನಿಕರ ಶವಗಳವು! ಈ ಬರ್ಬರ ಕೃತ್ಯ ಎಸಗಿದವರು ಬೇರಾರೂ ಅಲ್ಲ ಕುರಿ ಕಾಯುವಾತ ಕಂಡಿದ್ದ ಗಾಢ ಬಣ್ಣದ ಬಟ್ಟೆ ಧರಿಸಿದವರು. ಆ ಬಟ್ಟೆ ಧರಿಸಿದವರು ಬೇರಾರೂ ಅಲ್ಲ, ಅಕ್ರಮವಾಗಿ ಭಾರತದ ಗಡಿಯನ್ನು ನುಸುಳಿ ಬಂದ ಪಾಕಿಸ್ತಾನಿ ಹೇಡಿ ಸೈನಿಕರು.! ಪಾಕಿಸ್ತಾನ ಮುನ್ಸೂಚನೆ ಇಲ್ಲದೆಯೇ ಭಾರತದ ಗಡಿಯನ್ನು ದಾಟಿ ಬಂದಿತ್ತಿಲ್ಲದೇ ನಮ್ಮ ಆರು ಜನ ಸೈನಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿತ್ತು. ಈ ಕೃತ್ಯದ ಹಿಂದಿದ್ದಿವರು ಬೇರಾರೂ ಅಲ್ಲ, ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಜನರ್ ಪರ್ವೇಜ್ ಮುಷರಫ್!

    ಹಿನ್ನೆಲೆ:
    1971ರಲ್ಲಿಯೇ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ‘ಸಿಮ್ಲಾ’ ಒಪ್ಪಂದವಾಗಿತ್ತು. ಒಪ್ಪಂದದಂತೆ ಉಭಯ ದೇಶಗಳು ಸೌಹಾರ್ದತೆ, ಮಾನವೀಯತೆಯಿಂದ ತಮ್ಮ ನೆಲೆಗಳಲ್ಲಿಯೇ ಬಾಳಬೇಕು. ಗಡಿ ನಿಯಂತ್ರಣ ರೇಖೆ ಉಲ್ಲಂಘಿಸದಂತೆ ಎರಡೂ ದೇಶಗಳು ನೋಡಿಕೊಳ್ಳಬೇಕು ಎಂಬುವುದಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ 1990ರ ಫೆಬ್ರುವರಿ ತಿಂಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಬಸ್ ಯಾತ್ರೆಯ ಮೂಲಕ ಪಾಕಿಸ್ತಾನಕ್ಕೆ ತೆರಳಿ ‘ಲಾಹೋರ್ ಘೋಷಣೆ’ಗೆ ಅಂಕಿತ ಹಾಕಿದ್ದರು. ಈ ಘೋಷಣೆಯ ಮುಖ್ಯ ಉದ್ದೇಶವೆಂದರೆ, ‘ಕಾಶ್ಮೀರದ ಬಿಕ್ಕಟ್ಟಿಗೆ ಶಾಂತಿಯುತವಾದ ದ್ವಿ-ಪಕ್ಷೀಯ ಪರಿಹಾರ ಹುಡುಕುವುದಾಗಿತ್ತು’. ಈ ಸಂದರ್ಭದಲ್ಲಿ ಷರೀಫರಿಗೆ ವಾಜಪೇಯಿಯವರು ಭಾರತಕ್ಕೆ ಬರುವಂತೆ ಆಹ್ವಾನವಿತ್ತಿದ್ದರು. ಆಗ ಭಾರತ-ಪಾಕಿಸ್ತಾನ ‘ಭಾಯಿ-ಭಾಯಿ’ ಎನ್ನುತ್ತಿದ್ದವರು, ವಾಜಪೇಯಿಯವರು ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ತೋರಿತ್ತು! ಪಾಕ್ ಸೈನಿಕರನ್ನು ಭಾರತದೊಳಗೆ ನುಸುಳುವಂತೆ ಸೂಚಿಸಿತ್ತಾದರೂ; ತಾವು ಈ ಕೃತ್ಯ ಮಾಡಿಲ್ಲ ಎಂದು ಬೊಗಳೆ ಬಿಟ್ಟಿತೇ ಹೊರತು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. 1998ರ ಅಕ್ಟೋಬರ್‍ನಲ್ಲಿಯೇ ಅಧಿಕಾರ ಸ್ವೀಕರಿಸಿದ್ದ ಮುಷರಫ್ ತನ್ನ ಸೈನಿಕರಿಗೆ ಭಾರತದ ಬಗ್ಗೆ ವಿಷದ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಿದ್ದ. 30-40 ಜನರ ತಂಡಗಳನ್ನು ರಚಿಸಿದ. ಇದರಲ್ಲಿ ಮುಜಾಹಿದ್ದೀನ್ ಕೂಡ ಇದ್ದರು ಎನ್ನುವುದು ಜಗಜ್ಜಾಹಿರು. ‘ಆಪರೇಷನ್ ಬದ್ರ್’ ಎಂಬ ತಂತ್ರ ರೂಪಿಸಿ ಕಾಶ್ಮೀರ ಕಣಿವೆಯಿಂದ ಲಡಾಖ್‍ನ್ನು ಬೇರ್ಪಡಿಸಿ, ಸಿಯಾಚಿನ್ ಗ್ಲೇಷಿಯರನ್ನು ವಶಪಡಿಸಿಕೊಳ್ಳುವುದು ಮುಷರಫ್ ಉದ್ದೇಶವಾಗಿತ್ತು. ಇದಕ್ಕಾಗಿ ಗಡಿ ನಿಯಂತ್ರಣ ರೇಖೆಯಿಂದ ಕಾರ್ಗಿಲ್‍ನ ಸುಮಾರು 160 ಕಿ.ಮೀ.ವರೆಗೆ ಪಾಕ್ ಸೈನಿಕರು ನುಗ್ಗಿ ಬಂದಿದ್ದರು. ಅಂದರೆ ‘ಸಿಮ್ಲಾ’ ಒಪ್ಪಂದಕ್ಕೆ ಹಾಗೂ ‘ಲಾಹೋರ್ ಘೋಷಣೆ’ಗೆ ಎಳ್ಳು ನೀರು ಹೊಯ್ದು ಕೈ ತೊಳೆದುಕೊಂಡು ತೋಳೆರಿಸಿ ಪಾಕ್, ಭಾರತದ ಮುಂದೆಯೇ ಎದೆಯುಬ್ಬಿಸಿ ನಿಂತಿತ್ತು. ಆದರೆ ಅದಕ್ಕೇನು ಗೊತ್ತು ಭಾರತದ ಶಕ್ತಿ?

    ಪಾಕಿಸ್ತಾನ ಗಡಿಯೊಳಗೆ ನುಸುಳಿದೆ ಎಂದು ಗೊತ್ತಾದೊಡನೆ ವಾಜಪೇಯಿಯವರು ಜಾಗೃತರಾಗಿ 1999ರ ಜೂನ್ 7ರಂದು ದೇಶವನ್ನುದ್ದೇಶಿಸಿ ಮಾತನಾಡಿ, ‘ನಮ್ಮ ಸೈನ್ಯ ಹಾಗೂ ಸೈನಿಕರ ಮೇಲೆ ಸಂಪೂರ್ಣ ನಂಬಿಕೆಯಿದೆ. ಪಾಕ್ ಆಕ್ರಮಿಸಿಕೊಂಡ ಇಂಚಿಂಚು ನೆಲವನ್ನು ಕೂಡ ನಮ್ಮ ಯೋಧರು ವಾಪಸ್ ಪಡೆದುಕೊಳ್ಳುತಾರೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ’ ಎಂದರು. ಇಂತಹ ಮಾತುಗಳಿಂದ ಪ್ರೇರಿತರಾದ ನಮ್ಮ ವೀರ ಯೋಧರು ಯುದ್ಧಕ್ಕೆ ಸನ್ನದ್ಧರಾದರು. ವಾಜಪೇಯಿಯವರ ವಿಶ್ವಾಸದ ಮಾತುಗಳಿಂದ ಸೈನಿಕರ ಬಲ ನೂರ್ಮಡಿಗೊಂಡಿತು. ಯುದ್ಧ ಗೆಲ್ಲುವುದು ಖಚಿತ ಎಂಬ ಭಾವನೆ ಭಾರತೀಯರೆಲ್ಲರಲ್ಲೂ ಮನೆ ಮಾಡಿತು. ದೇಶದ ಪ್ರತಿಯೊಬ್ಬರ ಹೃದಯ ಗೆಲುವಿಗಾಗಿ ಪ್ರಾರ್ಥಿಸಿತು. ಆ ಪ್ರಾರ್ಥನೆಗೆ ವ್ಯರ್ಥವಾಗಲಿಲ್ಲ.

    ಆಪರೇಷನ್ ವಿಜಯ್:
    1999ರ ಮೇ 3ರಂದು ಕುರಿ ಕಾಯುವವ ನೀಡಿದ ಸುಳಿವಿನಂತೆ, ಮೇ ಎರಡನೇ ವಾರದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದಲ್ಲಿ 5 ಜನರ ಸೇನಾ ತುಕಡಿಯನ್ನು ಬೆಟ್ಟದ ಮೇಲಿರುವ ಬಂಕರ್‍ಗಳನ್ನು ಪರೀಕ್ಷಿಸಿ ಬರುವಂತೆ ಆದೇಶ ನೀಡಲಾಗುತ್ತದೆ. ಆದರೆ ಅವರನ್ನು ಮೇ 15ರಂದು ಸೆರೆಹಿಡಿದು, ಚಿತ್ರಹಿಂಸೆ ನೀಡಿ, ಬರ್ಬರವಾಗಿ ಹತ್ಯೆಗೈದು 22 ದಿನಗಳ ನಂತರ ಅಂದರೆ ಜೂನ್ 7ಕ್ಕೆ ಭಾರತಕ್ಕೆ ಯೋಧರ ಶವಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ಕಳುಹಿಸಿರುತ್ತಾರೆ ಪಾಪಿಗಳು! ಕಾರ್ಗಿಲ್ ಯುದ್ಧ ಆರಂಭವಾಗುವುದಕ್ಕೆ ಇದೂ ಒಂದು ಮುಖ್ಯ ಕಾರಣವಾಯ್ತು. ಇದರಿಂದ ಕ್ರುದ್ಧಗೊಂಡ ವಾಜಪೇಯಿಯವರು ಪಾಕ್ ವಿರುದ್ಧ ಯುದ್ಧ ಸಾರಿಯೇ ಬಿಟ್ಟರು. ಅನುಮತಿಯನ್ನೇ ಕಾಯುತ್ತಿದ್ದ ಬಾರತೀಯ ಸೈನಿಕರ ಸಹನೆ ಕಟ್ಟೆಯೊಡೆಯಿತು. ‘ಆಪರೇಷನ್ ವಿಜಯ್’ ಮೂಲಕ ಹುಲಿಗಳಂತೆ ಪಾಕ್ ಸೈನಿಕರ ಮೇಲೆ ನುಗ್ಗಿದರು. ಕಾರ್ಗಿಲ್-ಡ್ರಾಸ್ ವಲಯದಲ್ಲಿ ಸುಮಾರು 30,000ದಷ್ಟು ಸೈನಿಕರಿದ್ದರು. ಇದರಲ್ಲಿ 20,000 ಭೂ ಸೇನಾ ಪಡೆಯ ಯೋಧರು, 10,000 ವಾಯು ಸೇನೆ ಯೋಧರು ಹಾಗೂ ಅರೆಸೇನಾಪಡೆಯ ಯೋಧರೂ ಇದ್ದರು. ಅವರೆಲ್ಲರೂ ಹೋರಾಡಬೇಕಾದ ಪ್ರದೇಶ ಅತ್ಯಂತ ದುರ್ಗಮ ಪ್ರದೇಶವಾಗಿತ್ತು. -15 ಡಿಗ್ರಿಗಳಷ್ಟು ಮೈ ಹೆಪ್ಪುಗಟ್ಟುವಂತಹ ಛಳಿಯಿದ್ದರೂ ಸಹಿತ, ಸಮುದ್ರ ಮಟ್ಟಕ್ಕಿಂತ 16,000 ಅಡಿಗಳಷ್ಟು ಎತ್ತರದ ಯುದ್ದಭೂಮಿಯಲ್ಲಿ ಹೋರಾಡಿದರು. ಇದಕ್ಕೆ ವಾಯು ಸೇನೆಯು ‘ಆಪರೇಷನ್ ಸಫೇದ್ ಸಾಗರ್’ ಮೂಲಕ ಬೆಂಬಲ ನೀಡಿ ಸೈನಿಕರನ್ನು ಹುರಿದುಂಬಿಸಿತು.

    ಟೋಲೋಲಿಂಗ್ ವಶ:
    ಯುದ್ಧ ಪ್ರಾರಂಭವಾಗುವ ಹಂತದಲ್ಲೇ ಟೋಲೋಲಿಂಗ್ ಬೆಟ್ಟ ಪಾಕ್ ವಶವಾಗಿತ್ತು. ಈ ಬೆಟ್ಟ ಕಾರ್ಗಿಲ್‍ನಿಂದ 20 ಕಿ.ಮೀ. ಹಾಗೂ ಡ್ರಾಸ್‍ನಿಂದ 6 ಕಿ.ಮೀ ಅಂತರದಲ್ಲಿತ್ತು. ಆದರೆ ಈ ಬೆಟ್ಟವನ್ನು ವೈರಿ ಸೈನಿಕರಿಂದ ಬಿಡಿಸಿಕೊಳ್ಳುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅದಲ್ಲದೇ ಈ ಪ್ರದೇಶ ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದಲ್ಲಿರುವ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಭೂಮಿಯಾಗಿತ್ತು. ಆದಷ್ಟು ಬೇಗ ಈ ಪ್ರದೇಶ ನಮ್ಮ ವಶವಾಗಬೇಕಿತ್ತು, ಏಕೆಂದರೆ ಅದು ಲೇಹ್‍ನ ಓಊ-1 ರಾಷ್ಟ್ರೀಯ ಹೆದ್ದಾರಿಯ ಪ್ರದೇಶದಲ್ಲಿತ್ತು. ಟೋಲೋಲಿಂಗ್‍ಗೆ ಹೋಗಲು ಈ ದಾರಿಯೊಂದೆ ಸೂಕ್ತ ಹಾಗೂ ಏಕೈಕ ಮಾರ್ಗವಾಗಿತ್ತು. ಈ ದಾರಿಯಿಂದ ಯಾರೇ ಮುನ್ನುಗ್ಗಿದರೂ ಶವವಾಗಿ ಮರಳುತ್ತಿದ್ದರು. ಹಲವಾರು ಸೈನಿಕರ ಬಲಿದಾನದ ಬಳಿಕ ಈ ಬೆಟ್ಟ ನಮ್ಮ ಸೈನಿಕರ ವಶವಾಯಿತು. ಭೀಕರ ಹೋರಾಟದ ನಂತರ ರೈಫಲ್ಸ್ ಕಮಾಂಡರ್ ರವೀಂದ್ರನಾಥ್ ನೇತೃತ್ವದ ತಂಡ ಜೂನ್ 12ರಂದು ಟೋಲೋಲಿಂಗ್ ವಶಪಡಿಸಿಕೊಂಡು ಸಾಹಸ ಮೆರೆಯಿತು. ಆದರೆ ದುಃಖಮಯ ಸಂಗತಿಯೆಂದರೆ ಕಾರ್ಗಿಲ್‍ನಲ್ಲಿ ಪ್ರಾಣ ತೆತ್ತ ಅರ್ಧದಷ್ಟು ಸೈನಿಕರು ಇದೇ ಟೋಲೋಲಿಂಗ್‍ನಲ್ಲಿ ಹತರಾದರು.
    ಟೋಲೋಲಿಂಗ್ ವಶದ ನಂತರ ಸೇನೆಗೆ ಮತ್ತಷ್ಟು ಹುರುಪು ಬಂದಿತು. ಈ ನಿಟ್ಟಿನಲ್ಲಿ ಕೇವಲ ಒಂದೇ ವಾರದಲ್ಲಿ ಪಾಯಿಂಟ್ 4590, 5140 ಗೆಲ್ಲುವುದರ ಮೂಲಕ ನಾಲ್ಕು ದಿಗ್ವಿಜಯಗಳನ್ನು ಭಾರತದ ಯೋಧರು ಸಾಧಿಸಿದರು. ಇದಕ್ಕಿಂತ ಮೊದಲು ಲೆಫ್ಟಿನೆಂಟ್ ಕೇಶಿಂಗ್ ಸೋನುಗ್ರಮ್‍ರ ನಾಯಕತ್ವದಲ್ಲಿ ಪಾಯಿಂಟ್ 4812ನ್ನು ವಶಪಡಿಸಿಕೊಳ್ಳಲು ಮುಂದಡಿಯಿಟ್ಟರು. ಅದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪಾಕ್ ಸೈನಿಕರು ಭಾರೀ ತಯಾರಿಯೊಂದಿಗೆ ಇದ್ದರು. ಅದಕ್ಕಾಗಿ ಅಲ್ಲಿ ದಾಳಿ ಮಾಡುವ ಯಾವುದೇ ರೀತಿಯ ಉಪಾಯ ಹೊಳೆಯಲಿಲ್ಲ. ಸ್ವಲ್ಪ ಹೊತ್ತು ಕಾದ ಸೋನುಗ್ರಮ್ ಶತ್ರುಗಳಿಂದ ತೂರಿಬರುತ್ತಿರುವ ಗುಂಡುಗಳ ಮಧ್ಯೆಯೇ ಎದುರಾಗಿ ದಾಳಿ ಆರಂಭಿಸಿಯೇ ಬಿಟ್ಟರು. ವೈರಿ ಬಂಕರ್ ಮೇಲೆ ಗ್ರೇನೆಡ್ ಎಸೆದು ಛಿದ್ರವಾಗಿಸಿದರು. ಆದರೆ ದುರಾದೃಷ್ಟ…… ವೀರಯೋಧ ಸೋನುಗ್ರಮ್ ಶತ್ರುಗಳ ಗುಂಡುಗಳಿಗೆ ಎದೆಯೊಡ್ಡಿದ್ದರು! ಆದರೂ ಪಾಯಿಂಟ್ ವಶವಾಗುವವರೆಗೆ ಆತ ಮಾತ್ರ ಹೋರಾಡುತ್ತಲೇ ಇದ್ದ. ಪಾಯಿಂಟ್ ವಶವಾದ ನಂತರ ಆತ ಕೊನೆಯುಸಿರೆಳೆದ! ಎಂಥಾ ದೇಶಪ್ರೇಮವದು!

    ಟೈಗರ್ ಹಿಲ್ ವಶ:
    ಕಾರ್ಗಿಲ್‍ನ ಮತ್ತೊಂದು ದುರ್ಗಮ ಪ್ರದೇಶ ಈ ಟೈಗರ್ ಹಿಲ್. ಸುಮಾರು 15 ರಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಈ ಬೆಟ್ಟವನ್ನು ಕಾಲ್ನಡಿಗೆಯಲ್ಲಿಯೇ ಹತ್ತಬೇಕು. ಇದನ್ನು ಏರಲು ಯೋಧನಿಗೆ ಸುಮಾರು 11 ಗಂಟೆಗಳಾದರೂ ಬೇಕು. ಏರಿ ಹೋಗುವಾಗ ಶತ್ರುಗಳು ದಾಳಿ ಮಾಡುವ ಸಂಭವವು ಇತ್ತು. ಆದರೆ ಧೃತಿಗೆಡದ ಸೈನಿಕರು ಹೋರಾಟ ನಡೆಸಿದ ಫಲವಾಗಿ ಟೈಗರ್ ಹಿಲ್ ಜುಲೈ 5 ರಂದು ಭಾರತದ ವಶವಾಗಿತ್ತು. ಈ ಸಮಯಕ್ಕೆ ಪಾಕ್ ಯುದ್ಧ ಸಾಕು ಎನ್ನುವಷ್ಟರ ಮಟ್ಟಿಗೆ ಬಳಲಿತ್ತು. ಭಾರತೀಯರ ಆರ್ಭಟಕ್ಕೆ ಬೆದರಿದ ಷರೀಫ್‍ನ ನೀರಿಳಿದಿತ್ತು. ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‍ರಿಗೆ 1999ರ ಜುಲೈ 4ರಂದು ಭೇಟಿಯಾಗಿ ಕಾಲಿಗೆ ಬೀಳುವುದು ಒಂದೇ ಬಾಕಿ, ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಕ್ಲಿಂಟನ್‍ರಿಗೆ ಹೇಳಿದಾಗ ಕ್ಯಾರೇ ಎನ್ನದ ಅವರು ನಿಮ್ಮ ಸೈನಿಕರನ್ನು ಮೊದಲು ಹಿಂದೆ ಕರೆಸಿಕೊಳ್ಳಿ ಎಂದು ಉಗಿದು ಕಳಿಸಿದರು. ಆದರೆ ಷರೀಫ್ ಏನೂ ಮಾಡುವಂತಿರಲಿಲ್ಲ. ಏಕೆಂದರೆ ಸೈನ್ಯದ ಲಗಾಮು ಮುಷರಫ್ ಕೈಯಲ್ಲಿತ್ತು! ಆಗ ಷರೀಫ್ ಪರಿಸ್ಥಿತಿ ‘ಅಂಡ ಸುಟ್ಟ ಬೆಕ್ಕಿನ ಹಾಗಾಗಿತ್ತು!
    ಈಗ ಪಾಕ್ ಸೈನ್ಯವನ್ನು ಹಿಂದೆ ಕರೆಸಿಕೊಳ್ಳಬೇಕೆನಿಸುವಷ್ಟರಲ್ಲಿ ಶೇ.80% ಭಾಗವನ್ನು ಭಾರತ ಅದಾಗಲೇ ವಶಪಡಿಸಿಕೊಂಡಿತ್ತು. ಕೊನೆಯ ಭಾಗವಾದ ಡ್ರಾಸ್ ಪ್ರದೇಶವನ್ನು ಗೆದ್ದು, ಪಾಕ್ ಸೈನ್ಯವನ್ನು ಯಶಸ್ವಿಯಾಗಿ ಬಗ್ಗು ಬಡಿದು ಜುಲೈ 26ರಂದು ಗೆಲುವಿನ ಕೇಕೆ ಹಾಕಿತ್ತು ನಮ್ಮ ಭಾರತ! ಆದರೆ 527 ವೀರಯೋಧರನ್ನು ನಾವು ಕಳೆದುಕೊಂಡೆವು. 1363 ಸೈನಿಕರು ಕಣ್ಣು, ಕೈ, ಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾದರು. ಪಾಕ್ ಸೈನ್ಯದಲ್ಲಿನ 696 ಸೈನಿಕರನ್ನು ಭಾರತೀಯರು ಸೈನಿಕರು ಹೊಸಕಿ ಹಾಕಿದ್ದರು. ಯುದ್ಧಾನಂತರ ತನ್ನ ದೇಶದ ಸೈನಿಕರ ಶವ ಒಯ್ಯಲು ಸ್ವತಃ ಪಾಕಿಸ್ತಾನ ಬರಲಿಲ್ಲ. ಕ್ಯಾ. ಸೌರಭ್ ಕಾಲಿಯಾ, ಕ್ಯಾ ವಿಕ್ರಮ್ ಬಾತ್ರಾ, ಲೆ. ಮನೋಜ್‍ಕುಮಾರ್ ಪಾಂಡೆ, ಸಿಪಾಯಿ ಅಮರದೀಪ ಸಿಂಗ್, ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್, ರೈಫಲ್ ಮ್ಯಾನ್ ಸಂಜಯ್‍ಕುಮಾರ್, ಲೆ. ಕಣಾದ್ ಭಟ್ಟಾಚಾರ್ಯ, ಕ್ಯಾ. ಸಜುಚೇರಿಯನ್, ಲೆ. ನಂಗ್ರಮ್, ಕ್ಯಾ. ಜೆರ್ರಿ ಪ್ರೇಮ್ ರಾಜ್, ಮೇಜರ್ ಸೋನಮ್ ವಾಂಗತ್ ಚುಕ್, ಕ್ಯಾ. ವಿಜಯ್ ಥಾಪರ್, ವೈ.ಕೆ.ಜೋಷಿ, ಅನೂಜ್ ನಯ್ಯರ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ವೀರಪುತ್ರರು ನಮಗೆ ದೊರೆಯುತ್ತಾರೆ. ಪ್ರತಿಯೊಬ್ಬರೂ ಶೌರ್ಯ, ಸಾಹಸದ ಅವತಾರ ಮೂರ್ತಿಗಳು. ಸತ್ತ ಪಾಕ್ ಯೋಧರನ್ನು ನಮ್ಮ ಭಾರತೀಯ ಯೋಧರೇ ಅಂತಿಮ ಸಂಸ್ಕಾರ ಮಾಡಿ ಮಾನವೀಯತೆ ಮರೆದರು.

    ಎಲ್ಲರಿಗೂ ಕಾರ್ಗಿಲ್ ವಿಜಯೋತ್ಸವದ ಶುಭಾಷಯಗಳು
    ಭಾರತ್ ಮಾತಾ ಕೀ ಜೈ

  • ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ: ಜುಲೈ 27ಕ್ಕೆ ತೆಂಗಿನ ಬಹಿರಂಗ ಹರಾಜು ಪ್ರಕ್ರಿಯೆ

    ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ: ಜುಲೈ 27ಕ್ಕೆ ತೆಂಗಿನ ಬಹಿರಂಗ ಹರಾಜು ಪ್ರಕ್ರಿಯೆ

    ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಜಾತ್ರಾ
    ಮಹೋತ್ಸವ ಪ್ರಯುಕ್ತ ಶ್ರಾವಣ ಮಾಸದ ಅವದಿಗೆ ತೆಂಗಿನ ಬಹಿರಂಗ ಹರಾಜು ಪ್ರಕ್ರಿಯೆ ಜುಲೈ 27 ರಂದು ಮಧ್ಯಾಹ್ನ 1
    ಗಂಟೆಗೆ ದೇವಸ್ಥಾನ ಆವರಣದಲ್ಲಿ ಜರುಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಆಶಪ್ಪ  ಪೂಜಾರಿ ತಿಳಿಸಿದ್ದಾರೆ.
    ಇಚ್ಛೆವುಳ್ಳ ಸಾರ್ವಜನಿಕರು, ವ್ಯಾಪಾರಸ್ಥರು, ಹೋಲಸೇಲ್ ಅಂಗಡಿದಾರರು ಭಾಗವಹಿಸಬೇಕೆಂದು ಕೋರಲಾಗಿದೆ.

  • ಮೇ ತಿಂಗಳಿಂದ ಜುಲೈ 20 ರ ವರೆಗೆ 20 ಲಕ್ಷಕ್ಕೂ ಹೆಚ್ಚು ಹಣ ವಸೂಲಿ: ಜಿಲ್ಲಾಧಿಕಾರಿ

    ಮೇ ತಿಂಗಳಿಂದ ಜುಲೈ 20 ರ ವರೆಗೆ 20 ಲಕ್ಷಕ್ಕೂ ಹೆಚ್ಚು ಹಣ ವಸೂಲಿ: ಜಿಲ್ಲಾಧಿಕಾರಿ

    ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ, ಇಲ್ದಿದ್ರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ಡಾ.ಸುಶೀಲ ಬಿ

    ಮೇ ತಿಂಗಳಿಂದ ಜುಲೈ 20 ರ ವರೆಗೆ 20 ಲಕ್ಷದ 2 ಸಾವಿರ ರೂ ವಸೂಲಿ: ಜಿಲ್ಲಾಧಿಕಾರಿ

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣೆ ನಡೆದಿರುವ ಮೇ ತಿಂಗಳಿಂದ ಜುಲೈ 20 ನೇ ವರೆಗೆ 44 ವಾಹನಗಳಿಗೆ ದಂಡ ವಿಧಿಸಿ 20 ಎಫ್.ಐ.ಆರ್ ದಾಖಲಿಸಿ ಒಟ್ಟು 20 ಲಕ್ಷದ 2 ಸಾವಿರ ರೂಗಳ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು, ಎಲ್ಲಾ ತರಹದ ಖನಿಜ ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಒಂದು ವೇಳೆ ಜಿಪಿಎಸ್ ಇಲ್ಲದಿರುವುದು ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಪರವಾನಗಿಯನ್ನು ರದ್ದು ಮಾಡಲಾಗುತ್ತಿದೆ. ಜಿಪಿಎಸ್ ಅಳವಡಿಕೆ ಇಲ್ಲದ ಸುಮಾರು 62 ವಾಹನಗಳಿಗೆ ದಂಡ ವಿಧಿಸಿ 6 ಲಕ್ಷದ 20 ರೂಗಳ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಕಂಡುಬಂದರೆ ಕಾನೂನಿನ ಚೌಕಟ್ಟಿನೊಳಗೆ ತಕ್ಷಣ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಸಮಪರ್ಕವಾಗಿ ನಿರ್ವಹಣೆ ಮಾಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

    ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್‌ಟಿಓ, ಪರಿಸರ ನಿಯಂತ್ರಣ ಮಂಡಳಿ ಹೀಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣ, ಸಾಗಟದ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

    ಅಕ್ರಮ ಸಾಗಾಟದಲ್ಲಿ ಭಾಗಿಯಾಗುವ ವಾಹನಗಳನ್ನು ಆರ್‌ಟಿಓ ಮತ್ತು ಸಂಬಂಧಿಸಿದ ಅಧಿಕಾರಿಗಳು ಸೀಜ್ ಮಾಡಬೇಕು. ರಾಯಲ್ಟಿಕ್ಕಿಂತ ಹೆಚ್ಚಿನ ಟ್ರಿಪ್ ಸಾಗಾಣಿಕೆಯಾಗದಂತೆ ನಿಗಾ ವಹಿಸಬೇಕು. ಜಿಪಿಎಸ್ ಅಳವಡಿಸಿಕೊಂಡಿರುವ ಲಾರಿಗಳಿಗೆ ಮಾತ್ರ ಮರಳು ಸಾಗಣೆಗೆ ಪರ್ಮೀಟ್ ಕೊಟ್ಟು, ಅಕ್ರಮವಾಗಿ ಸಾಗಣೆ ಮಾಡಿ ನಿಯಮ ಉಲ್ಲಂಘಿಸುವ ಲಾರಿಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

    ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟುಕೊಂಡರೆ ಆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ತಹಶೀಲ್ದಾರು ಮತ್ತು ಪೊಲೀಸ್ ಸಿಬ್ಬಂದಿಗಳು ಕ್ರಮಕ್ಕೆ ಮುಂದಾಗಬೇಕು.

    ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಿಗೆ, ರಾಯಲ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿಯೂ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆ ನಡೆಸಬೇಕು. ಸಹಾಯಕ ಆಯುಕ್ತರ ಸಮಿತಿ‌ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ನಿಗಾ ವಹಿಸಬೇಕು‌ ಎಂದರು.

    ಈ ಸಂದರ್ಭದಲ್ಲಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಲೋಜ್ ಪಾಟೀಲ, ಜಿಲ್ಲಾ ವರಿಷ್ಠಾಧಿಕಾರಿ ಜಿ ಸಂಗೀತ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪೂರ್ಣಿಮಾ ಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ ಸೇರಿದಂತೆ ಎಲ್ಲಾ ತಾಲೂಕಿನ ತಹಶಿಲ್ದಾರರು ಹಾಗೂ ಸಂಬಂಧಿಸಿದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೃಷ್ಣಾ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ

    ಕೃಷ್ಣಾ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ :

    ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳ ಸುರಕ್ಷತೆಯ ಮುಂಜಾಗ್ರತಾ ಕ್ರಮವಾಗಿ ಮುನ್ಸೂಚನೆ ನೀಡಲಾಗುತ್ತಿದೆ ಎಂದು ನಾರಾಯಣಪೂರ ಕೃ.ಭಾ.ಜ.ನಿ.ನಿ ಅಧೀಕ್ಷಕ ಅಭಿಯಂತರರು ಅವರು ತಿಳಿಸಿದ್ದಾರೆ.

    2024-25ನೇ ಸಾಲಿನ ಮುಂಗಾರು ಪ್ರಾರಂಭವಾಗಿದ್ದು, ಮಹಾರಾಷ್ಟç ರಾಜ್ಯದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗಿರುತ್ತದೆ. ಆಲಮಟ್ಟಿ ಜಲಾಶಯದಿಂದ ನಾರಾಯಪೂರ ಜಲಾಶಯಕ್ಕೆ 40,000 ಕ್ಯೂಸೆಕ್ಸ ಪ್ರಮಾಣದ ನೀರನ್ನು ಹರಿಬಿಡಲಾಗುತ್ತಿದೆ. 2024ರ ಜುಲೈ 16 ರಂದು ನಾರಾಯಣಪೂರ ಜಲಶಯದ ನೀರಿನ ಮಟ್ಟ 490.18 ಮೀ.ಇದ್ದು, ಜಲಾಶಯದ ನೀರಿನ ಸಂಗ್ರಹಣೆ 24.675 ಟಿಎಂಸಿ ಇರುತ್ತದೆ ಹಾಗೂ ಜಲಾಶಯಕ್ಕೆ 40,000 ಕ್ಯೂಸೆಕ್ಸ್ ನೀರಿನ ಒಳಹರಿವು ಬರುತ್ತಿದೆ.

    ನಾರಾಯಣಪೂರ ಜಲಾಶಯಕ್ಕೆ ಬರುವ ನಿರೀಕ್ಷಿತ ಒಳಹರಿವಿನ ಮಾಹಿತಿಯನ್ನು ಕೇಂದ್ರ ಜಲ ಆಯೋಗ ಮೂಲಕ ಪಡೆಯಲಾಗುತ್ತಿದೆ. ಅದೇ ರೀತಿ ನಾರಾಯಣಪೂರ ಜಲಾಶಯದ ಹಿಂಭಾಗದ ಜಲಾಶಯಗಳಾದ ಆಲಮಟ್ಟಿ ಜಲಾಶಯ ಹಾಗೂ ನವಿಲು ತೀರ್ಥ ಜಲಾಶಯಗಳಿಂದ ಬಿಡಬಹುದಾದ ಹೊರಹರಿವಿನ ಮಾಹಿತಿಯನ್ನು ಸಂಬAಧಪಟ್ಟ ಅಧಿಕಾರಿಗಳಿಂದ ಮುಂಜಾಗ್ರತಾ ಕ್ರಮಕ್ಕಾಗಿ ಪಡೆಯಲಾಗುತ್ತಿದ್ದು, ಪ್ರವಾಹ ನಿಯಂತ್ರಣ ಕಾರ್ಯಕ್ಕಾಗಿ ನಾರಾಯಣಪೂರ ಜಲಾಶಯವನ್ನು ಸನ್ನದ್ಧತೆಯಲ್ಲಿ ಇಟ್ಟುಕೊಳ್ಳಲಾಗಿದೆ.

    ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆಗೊಳಿಸುವ ಸಾಧ್ಯವಿರುವ ಕಾರಣ ನಾರಾಯಣಪೂರ ಜಲಾಶಯಕ್ಕೆ ಹರಿದು ಬರುವ ಒಳಹರಿವು ಪ್ರಮಾಣಕ್ಕನುಗುಣವಾಗಿ ನಾರಾಯಣಪೂರ ಜಲಾಶಯದಿಂದ ಕೆಳಭಾಗದ ಕೃಷ್ಣಾ ನದಿ ಪಾತ್ರಕ್ಕೆ ಯಾವುದೇ ಕ್ಷಣದಲ್ಲಿ ಪ್ರವಾಹದ ನೀರನ್ನು ಹರಿಬಿಡುವ ಸಾಧ್ಯತೆ ಇರುತ್ತದೆ.

    ನಾರಾಯಣಪೂರ ಜಲಾಶಯದ ಕೆಳಭಾಗದ ಕೃಷ್ಣಾ ನದಿ ಪಾತ್ರದ ಪ್ರದೇಶದಲ್ಲಿರುವ ಗ್ರಾಮಗಳ ಜನರು, ರೈತರು ಜಾಗ್ರತೆಯಿಂದ ಇರಲು ಹಾಗೂ ತಮ್ಮ ಜಾನುವಾರುಗಳು, ಪಂಪ್‌ಸೆಟ್ ಇತ್ಯಾದಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಳ್ಳಲು ಹಾಗೂ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಪ್ರವಾಹದ ಮುನ್ಸೂಚನೆ ನೀಡಲು ಸಂಬAಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲು ತಿಳಿಸಿದೆ.

    ಪ್ರವಾಹ ಮುನ್ನಚ್ಚರಿಕೆ ಕ್ರಮಗಳಿಗಾಗಿ ಮನವಿ 1,00,000 ಕ್ಯೂಸೆಕ್ಸ ವರೆಗೆ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳಿಗೆ ಸುರಕ್ಷತೆಗಾಗಿ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಾಗ್ರತೆ ನೀಡುವುದು. 1,50,000 ಕ್ಯೂಸೆಕ್ಸ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. 2,50,000 ಕ್ಯೂಸೆಕ್ಸ ಹೂವಿನಹೆಡಗಿ ಸೇತುವೆ (ದೇವದುರ್ಗಾ-ಕಲಬುರ್ಗಿ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು.

     

    3,00,000 ಕ್ಯೂಸೆಕ್ಸ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ನಡುಗಡೆಯಾಗಬಹುದು. 3,90,000 ಕ್ಯೂಸೆಕ್ಸ ಗುರ್ಜಾಪುರ ಬ್ಯಾರೇಜ್ ಹಾಗೂ ಸೇತುವೆ ಮುಳುಗಡೆಯಾಗಬಹುದು. 3,90,000 ಕ್ಯೂಸೆಕ್ಸ ಮೇಲ್ಪಟ್ಟು ಕೃಷ್ಣಾ ನದಿ ಇಕ್ಕೆಲಗಳಲ್ಲಿ ಪ್ರವಾಹ ಉಕ್ಕಿ ಹರಿಯುವುದರಿಂದ, ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದ ಸುರಕ್ಷತೆ ಕುರಿತು ಮುನ್ನೆಚ್ಚರಿಕೆಯಿಂದಿರಲು ಸೂಚಿಸುವುದು. 5,40,000 ಕ್ಯೂಸೆಕ್ಸ್ ಯರಗೋಡಿ ಸೇತುವೆ, ಜಲದುರ್ಗಾ ಸೇತುವೆ ಮತ್ತು ಗೂಗಲ್ ಗ್ರಾಮದ ಹತ್ತಿರ ಗೂಗಲ್ ಬ್ಯಾರೇಜ್ ಮುಳುಗಡೆಯಾಗಬಹುದು. 7,50,000 ಕ್ಯೂಸೆಕ್ಸ ಸುರಪುರ ತಾಲೂಕಿನ ರಾಷ್ಟಿçÃಯ ಹೆದ್ದಾರಿಯ ತಿಂಥಣಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಆಯೆಷಾ ಖಾನಂ ಅವರಿಗೆ ಸನ್ಮಾನ

    ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಆಯೆಷಾ ಖಾನಂ ಅವರಿಗೆ ಸನ್ಮಾನ

    ಸತ್ಯಕಾಮ ಬೆಂಗಳೂರು :
    ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಆಯೆಷಾ ಖಾನಂ ಅವರನ್ನು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಆಯೆಷಾ ಖಾನಂ ಅವರು, ಸರಕಾರವು ಮಹಿಳೆಯನ್ನು ಗುರುತಿಸಿ ನೇಮಕ ಮಾಡಿರುವುದು ನನಗೆ ಹೆಮ್ಮೆ ತಂದಿದೆ. ಎಲ್ಲರ ಸಹಕಾರದಿಂದ ಮಾಧ್ಯಮ ಅಕಾಡೆಮಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪಕ್ಷಾತೀತವಾಗಿ ಎಲ್ಲರೂ ನನಗೆ ಅಭಿನಂದಿಸುತ್ತಿರುವುದು ನನಗೆ ಖುಷಿ ತಂದಿದೆ ಎಂದರು.

    ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ವೈ.ಪದ್ಮಾ ನಾಗರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್, ರಾಜ್ಯ ಕಾರ್ಯದರ್ಶಿ ಅನೂಪಕುಮಾರ, ಬೆಂಗಳೂರು ವಿವಿ ಪ್ರೊ.ಡಾ‌.ಸಮತಾ ದೇಶಮಾನೆ , ಮಲ್ಲಮ್ಮ ನುಡಿ ಸಂಪಾದಕ ರಮೇಶ ರೆಡ್ಡಿ ಬೀದರ ಸೇರಿದಂತೆ ಇನ್ನಿತರರು ಇದ್ದರು.

  • ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಿ: ಬಸವರಾಜ್ ಶರಬೈ

    ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಿ: ಬಸವರಾಜ್ ಶರಬೈ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಳೆಗಾಲ ಪ್ರಾರಂಭವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಸಾಂಕ್ರಾಮಿಕ ರೋಗಗಳನ್ನು ಎಲ್ಲ ರೀತಿಯಿಂದಲೂ ನಿಯಂತ್ರಿಸುವ ಅವಶ್ಯಕತೆ ಇದ್ದು, ತಾಲೂಕಿನ ಎಲ್ಲ ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸುವಂತೆ ಯಾದಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ ಸೂಚಿಸಿದರು.

    ಸೋಮವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು, ಯಾದಗಿರಿ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು. ತೆರೆದ ಬಾವಿಗೆ ಪ್ರತಿದಿನ ಕ್ಲೋರಿನ್, ಬ್ಲಿಚಿಂಗ್ ಪೌಡರ್ ಹಾಕಬೇಕು. ಕುಡಿಯುವ ನೀರಿನ ಮೂಲಗಳ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸರಬರಾಜು ಮಾಡುವ ಕೊಳವೆಗಳಲ್ಲಿ ಸೋರಿಕೆಗಳಿದ್ದಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

    ಚರಂಡಿಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊಹರಂ ಹಬ್ಬ ಇರುವುದರಿಂದ ಪಟ್ಟಣ ಪ್ರದೇಶಗಳಿಂದ ಜನರು ಬಂದಿರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚಿಸಬೇಕು, ಹಾಗೂ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಬೇಕು ಎಂದರು.

    ಈ ವೇಳೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬಸವರಾಜ ಹೈರಡ್ಡಿ ಸಭೆಯಲ್ಲಿ ಹಾಜರಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ನೀಡಿದರು. ಮತ್ತು ಜೆ.ಜೆ.ಎಮ್ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

    ಪೈಪ್ ಲೀಕೆಜ್ ಆದಲ್ಲಿ ಮತ್ತು ಕಾಮಗಾರಿ ಅಪೂರ್ಣ ಇದ್ದಲ್ಲಿ ತಕ್ಷಣವೇ ಪೂರ್ಣಗೊಳಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದರು.

    ತಾಲೂಕು ವೈದ್ಯಧಿಕಾರಿಗಳಾದ ಡಾ.ಹಣವಂತ ರೆಡ್ಡಿ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವುದರೊಂದಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಲು ಸೂಚಿಸಲಾಗಿದೆ, ಈಗಾಗಲೇ ಗ್ರಾಮದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆಂದು ತಿಳಿಸಿದರು.

    ಈ ವೇಳೆ ಯಾದಗಿರಿ ಸಹಾಯಕ ನಿರ್ದೇಶಕರು, ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕನಕ ನೌಕರರ ಸಂಘದ ಸಂಘಟನೆ ಬಲಗೊಳಿಸಿ:ಬಸವರಾಜ್ ಪಾಟೀಲ್ ಕೊಂಕಲ್

    ಕನಕ ನೌಕರರ ಸಂಘದ ಸಂಘಟನೆ ಬಲಗೊಳಿಸಿ:ಬಸವರಾಜ್ ಪಾಟೀಲ್ ಕೊಂಕಲ್

    ಸತ್ಯಕಾಮ ವಾರ್ತೆ ಯಾದಗಿರಿ:

    ಕನಕ ನೌಕರರ ಸಂಘದ ಸಂಘಟನೆಯನ್ನು ಬಲಗೊಳಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಲಬುರ್ಗಿ ವಿಭಾಗೀಯ ಕನಕ ನೌಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಕೂಂಕಲ್ ಹೇಳಿದರು.

    ಭಾನುವಾರ ಯಾದಗಿರಿ ಪಟ್ಟಣದ ಕುರುಬ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲಾ ಕನಕ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದ ಅವರು ನಮ್ಮ ಸಮಾಜದ ನೌಕರ ಮೇಲಿನ ಕಿರುಕುಳ ಕಂಡುಬಂದಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡುವಂತೆ ಸಲಹೆ ನೀಡಿದರು.

    ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಲ್ಲಣ್ಣ ಐಕೂರ ಮಾತನಾಡಿ ಕನಕ ನೌಕರರ ಸಂಘದ ಬೆಂಬಲಕ್ಕೆ ಜಿಲ್ಲಾ ಕುರುಬ ಸಂಘದಿಂದ ಸಂಪೂರ್ಣ ಬೆಂಬಲವಿರುತ್ತದೆ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರುವಂತೆ ಹೇಳಿದರು.

    • ನೂತನ ಪದಾಧಿಕಾರಿಗಳ ವಿವರ.
    • ಅಯಣ್ಣ ಇನಾಮದಾರ, ಜಿಲ್ಲಾಧ್ಯಕ್ಷ,
    • ಮಲ್ಲಿಕಾರ್ಜುನ್ ಪೂಜಾರಿ ಉಪಾಧ್ಯಕ್ಷ,
    • ಪ್ರಧಾನ ಕಾರ್ಯದರ್ಶಿ ಮನೋಹರ್ ಕಟ್ಟಿಮನಿ,
    • ಖಜಾಂಚಿ ದೇವೇಂದ್ರಪ್ಪ ಕರಿಕಳ್ಳಿ,

    ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಶೇಖರ್ ಧನವಾಡ, ಬನ್ನಪ್ಪ ಮೈಲಾಪುರ, ಬೀರಪ್ಪ ಸಂಕಿನ, ಸಹ ಕಾರ್ಯದರ್ಶಿಗಳಾಗಿ ದ್ಯಾಮಣ್ಣ ಹುಣಸಿಗಿ, ಸಿದ್ದು ಬಡಿಗೇರ್, ಹಾಗೂ ಪ್ರತಿ ತಾಲೂಕಿನಿಂದ ಐದು ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮಗ್ಗ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಜಿಲ್ಲಾ ಹಿರಿಯ ನಾಗರಿಕ ಮತ್ತು ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಗೌಡ ಪಾಟೀಲ್ ಕ್ಯಾತನಾಳ, ಸರಕಾರಿ ನೌಕರರ ಸಂಘದ ವಡಗೇರಾ ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೂಂದೆನೂರ, ಕುರುಬ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಲ್ಲಿಪೂರ ,ಚಂದ್ರಕಾಂತ ನಾಯ್ಕೋಡಿ, ಸಾಯಿಬಣ್ಣ ಕೆಂಗೂರಿ, ಮಲ್ಲಯ್ಯ ಕಸಬಿ, ಹಾಗೂ ಕನಕ ನೌಕರ ಸಂಘದ ನಿರ್ದೇಶಕರು ಪದಾಧಿಕಾರಿಗಳು ವಿವಿಧ ಇಲಾಖೆಯ ನೌಕರರು ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.