Category: Latest News

  • ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ಪ್ರಯಾಣಿಕರ ಭಾರೀ ದಟ್ಟಣೆ: ಮೈಸೂರು–ಬೆಳಗಾವಿ ನಡುವೆ 3 ಟ್ರಿಪ್ ವಿಶೇಷ ರೈಲು ಘೋಷಣೆ

    ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ಪ್ರಯಾಣಿಕರ ಭಾರೀ ದಟ್ಟಣೆ: ಮೈಸೂರು–ಬೆಳಗಾವಿ ನಡುವೆ 3 ಟ್ರಿಪ್ ವಿಶೇಷ ರೈಲು ಘೋಷಣೆ

     


    ಸಂಕ್ರಾಂತಿ ಹಬ್ಬ ಮತ್ತು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ರೈಲುಗಳಿಗೆ ಭಾರೀ ಬೇಡಿಕೆ ಉಂಟಾಗುತ್ತಿರುವುದರಿಂದ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಳಗಾವಿ ನಡುವೆ ಮೂರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

     

    ಮೈಸೂರು–ಬೆಳಗಾವಿ ವಿಶೇಷ ರೈಲು (06285)

    ಈ ವಿಶೇಷ ರೈಲು ಜನವರಿ 13, 16 ಮತ್ತು 23ರಂದು ರಾತ್ರಿ 8:40ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿಗೆ ತಲುಪಲಿದೆ. ಹಬ್ಬದ ಸಮಯದಲ್ಲಿ ಉತ್ತರ ಕರ್ನಾಟಕದತ್ತ ತೆರಳುವ ಪ್ರಯಾಣಿಕರಿಗೆ ಇದು ಬಹಳ ಅನುಕೂಲಕರವಾಗಲಿದೆ.

     

    ಬೆಳಗಾವಿ–ಮೈಸೂರು ವಿಶೇಷ ರೈಲು (06286)

    ಮರಳುವ ಪ್ರಯಾಣಿಕರ ಸೌಲಭ್ಯಕ್ಕಾಗಿ ಬೆಳಗಾವಿಯಿಂದ ಮೈಸೂರಿಗೆ ವಿಶೇಷ ರೈಲು ಕೂಡ ವ್ಯವಸ್ಥೆ ಮಾಡಲಾಗಿದೆ. ಈ ರೈಲು ಜನವರಿ 15, 18 ಮತ್ತು 26ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 6:15ಕ್ಕೆ ಮೈಸೂರಿಗೆ ತಲುಪಲಿದೆ.

     

    ನಿಲ್ದಾಣಗಳು

    ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ

    ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತವೆ.

     

    ಬೋಗಿಗಳ ವಿವರ

    ಒಟ್ಟು 23 ಬೋಗಿಗಳನ್ನು ಒಳಗೊಂಡಿರುವ ಈ ವಿಶೇಷ ರೈಲಿನಲ್ಲಿ –

    ಎಸಿ 2-ಟೈರ್ ಕಮ್ ಎಸಿ 3-ಟೈರ್ – 1 ಬೋಗಿ

    ಎಸಿ 3-ಟೈರ್ – 3 ಬೋಗಿಗಳು

    ಸ್ಲೀಪರ್ ಕ್ಲಾಸ್ – 13 ಬೋಗಿಗಳು

    ಸಾಮಾನ್ಯ ದ್ವಿತೀಯ ದರ್ಜೆ – 4 ಬೋಗಿಗಳು

    ಎಸ್‌ಎಲ್‌ಆರ್/ಡಿ – 2 ಬೋಗಿಗಳು ಇರಲಿವೆ.

    ಹಬ್ಬದ ಸಂಭ್ರಮದ ನಡುವೆಯೂ ಸುಗಮ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ದೊಡ್ಡ ನೆರವಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

  • ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಬಾಕಿ ಹಣ ಸಿಗದಿದ್ದ ಮಹಿಳೆಯರಿಗೆ ಸರ್ಕಾರದಿಂದ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಇಲಾಖೆಯ ಅನುಮತಿ ದೊರಕಿದ ತಕ್ಷಣವೇ ಈ ಎರಡು ತಿಂಗಳ ಬಾಕಿ ಹಣ ಬಿಡುಗಡೆ ಆಗಲಿದೆ ಎಂದು ಹೇಳಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ವಿಧಾನಸಭೆಯಲ್ಲೂ ಈ ವಿಷಯಕ್ಕೆ ಉತ್ತರ ನೀಡಲಾಗಿದೆ ಎಂದರು.

    ಕೆಲವು ಫಲಾನುಭವಿಗಳಿಗೆ ಹಣ ಜಮಾ ಆಗದೇ ಇರುವುದಕ್ಕೆ ಕಾರಣವನ್ನೂ ಸಚಿವೆ ವಿವರಿಸಿದರು. ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಿರುವ ಕಾರಣ ಕೆಲವರ ಹಣ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಗೃಹಲಕ್ಷ್ಮಿ ಯೋಜನೆ ಸಂಪೂರ್ಣವಾಗಿ ರೇಷನ್‌ ಕಾರ್ಡ್‌ ಆಧಾರಿತವಾಗಿರುವುದರಿಂದ, ಆಹಾರ ಇಲಾಖೆಯಿಂದ ಹೊಸ ದತ್ತಾಂಶ ಬಂದ ಬಳಿಕ ಅರ್ಹರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ತೆರಿಗೆ ಪಾವತಿದಾರರಲ್ಲದ ಅರ್ಹ ಮಹಿಳೆಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇದೇ ವೇಳೆ ಗೃಹಲಕ್ಷ್ಮಿ ಸಹಕಾರ ಸಂಘದ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವೆ, ಸಂಘದ ಸದಸ್ಯರು ತಿಂಗಳಿಗೆ 200 ರೂಪಾಯಿ ಉಳಿಸುವಂತೆ ತಿಳಿಸಿದರು. ಕನಿಷ್ಠ ಆರು ತಿಂಗಳು ಸದಸ್ಯತ್ವ ಪೂರ್ಣಗೊಂಡ ನಂತರ ಸಾಲ ಸೌಲಭ್ಯ ಪಡೆಯಲು ಅವಕಾಶ ಸಿಗಲಿದೆ. ಹೆಚ್ಚು ನಿಯಮಗಳಿಲ್ಲದೆ ನಿಜವಾದ ಅರ್ಹರನ್ನು ಗುರುತಿಸಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ಯೋಚನೆಯೂ ಸರ್ಕಾರದ ಮುಂದಿದೆ ಎಂದು ಹೇಳಿದರು.

    ಮಹಿಳೆಯರ ಸುರಕ್ಷತೆ ಮತ್ತು ಸಹಾಯಕ್ಕಾಗಿ ‘ಅಕ್ಕ ಪಡೆ’ ಎಂಬ ಹೊಸ ಯೋಜನೆಯನ್ನೂ ಸರ್ಕಾರ ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆಯ ಸಹಯೋಗದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಸಿಬ್ಬಂದಿ ನೇಮಕಾತಿ ಮಾಡಲಾಗಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬಸ್‌ ನಿಲ್ದಾಣಗಳು, ದೇವಸ್ಥಾನಗಳು, ಮಾಲ್‌ಗಳು, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಸಚಿವೆ ತಿಳಿಸಿದರು.

    ಅಕ್ಕ ಪಡೆ ಶಾಲೆ ಮತ್ತು ಕಾಲೇಜುಗಳಿಗೂ ಭೇಟಿ ನೀಡಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ದೂರು ನೀಡಲು ಹಿಂಜರಿಯುವ ಮಹಿಳೆಯರ ಗುರುತು ಸಂಪೂರ್ಣವಾಗಿ ಗೌಪ್ಯವಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ವಂಚನೆ, ಕೌಟುಂಬಿಕ ಹಿಂಸೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಅಕ್ಕ ಪಡೆಗೆ ದೂರು ನೀಡಬಹುದಾಗಿದೆ ಎಂದು ಸಚಿವೆ ಹೇಳಿದರು.

    ಒಟ್ಟಾರೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಜೊತೆಗೆ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹೊಸ ಕ್ರಮಗಳು ಜಾರಿಗೆ ಬರುತ್ತಿರುವುದು ಸರ್ಕಾರದ ಮಹತ್ವಾಕಾಂಕ್ಷಿ ನಡೆ ಎಂಬುದಾಗಿ ಸಚಿವರ ಹೇಳಿಕೆ ಸ್ಪಷ್ಟಪಡಿಸಿದೆ.

  • ಡಾ. ಜಯಮಾಲಾಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ: ಕನ್ನಡ ಸಿನಿಮಾ ಇತಿಹಾಸಕ್ಕೆ ಗೌರವ ಸಲ್ಲಿಸಿದ ಕರ್ನಾಟಕ ಸರ್ಕಾರ

    ಡಾ. ಜಯಮಾಲಾಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ: ಕನ್ನಡ ಸಿನಿಮಾ ಇತಿಹಾಸಕ್ಕೆ ಗೌರವ ಸಲ್ಲಿಸಿದ ಕರ್ನಾಟಕ ಸರ್ಕಾರ


    ಕನ್ನಡ ಚಿತ್ರರಂಗದ ಇತಿಹಾಸವನ್ನು ನಿರ್ಮಿಸಿದ ಸಾಧಕರನ್ನು ಗೌರವಿಸುವುದು ಕೇವಲ ಪ್ರಶಸ್ತಿ ಪ್ರದಾನವಲ್ಲ, ಅದು ಒಂದು ಸಂಸ್ಕೃತಿಯ ಆಚರಣೆ. ನಟನೆಯಿಂದ ಹಿಡಿದು ನಿರ್ದೇಶನ, ನಿರ್ಮಾಣ ಹಾಗೂ ತಾಂತ್ರಿಕ ಕ್ಷೇತ್ರಗಳವರೆಗೆ ತಮ್ಮ ಬದುಕನ್ನೇ ಸಿನಿಮಾಗೆ ಅರ್ಪಿಸಿದ ಮಹನೀಯರನ್ನು ಸ್ಮರಿಸುವ ಈ ಗೌರವಗಳು, ಮುಂದಿನ ತಲೆಮಾರಿಗೆ ಪ್ರೇರಣೆಯಾಗುತ್ತವೆ. ಅಂಥದ್ದೇ ಮಹತ್ವದ ಘೋಷಣೆಯನ್ನು ಕರ್ನಾಟಕ ಸರ್ಕಾರ ಮಾಡಿದ್ದು, 2020 ಮತ್ತು 2021ನೇ ಸಾಲಿನ ಸಿನಿಮಾ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.

    ಈ ಬಾರಿ ಹಿರಿಯ ನಟಿ, ಸಮಾಜ ಸೇವಕಿ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಡಾ. ಜಯಮಾಲಾ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಘೋಷಿಸಿರುವುದು ಕನ್ನಡ ಸಿನಿರಸಿಕರಲ್ಲಿ ಸಂತಸ ಮೂಡಿಸಿದೆ. ನಟನೆಯ ಮೂಲಕ ಮಹಿಳಾ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಜಯಮಾಲಾ ಅವರ ಸಾಧನೆಗೆ ಇದು ತಕ್ಕ ಗೌರವವಾಗಿದೆ.

    ಗೌರವದ ಪ್ರತೀಕವಾದ ಪ್ರಶಸ್ತಿಗಳು

    ಡಾ. ರಾಜ್‌ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಹೆಸರಿನಲ್ಲಿ ನೀಡಲಾಗುವ ಅತ್ಯುನ್ನತ ಜೀವಮಾನ ಗೌರವ ಪ್ರಶಸ್ತಿಗಳಾಗಿವೆ.

    ಪ್ರತಿ ಪ್ರಶಸ್ತಿಯೂ ₹5 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

     

    2020ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:

    1.ಡಾ. ರಾಜ್‌ಕುಮಾರ್ ಪ್ರಶಸ್ತಿ:

    ಹಿರಿಯ ನಟಿ ಡಾ. ಜಯಮಾಲಾ

    ನಟನೆಯ ಮೂಲಕ ಸಾಮಾಜಿಕ ಸಂದೇಶ ನೀಡಿದ ಜಯಮಾಲಾ, ಕನ್ನಡ ಸಿನಿಮಾಗೆ ಶಕ್ತಿಶಾಲಿ ಮಹಿಳಾ ಪಾತ್ರಗಳ ಕೊಡುಗೆ ನೀಡಿದ ಅಪರೂಪದ ನಟಿ.

     

    2. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ:

    ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು

    ಸಾಮಾಜಿಕ ಚಿಂತನೆ, ವಾಸ್ತವಿಕತೆ ಮತ್ತು ರಾಜಕೀಯ ಪ್ರಜ್ಞೆಯ ಚಿತ್ರಗಳ ಮೂಲಕ ಕನ್ನಡ ಸಿನಿರಂಗಕ್ಕೆ ವಿಶಿಷ್ಟ ಗುರುತು ನೀಡಿದ ನಿರ್ದೇಶಕ.

     

    3. ಡಾ. ವಿಷ್ಣುವರ್ಧನ್ ಪ್ರಶಸ್ತಿ:

    ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ್

    ಹಲವಾರು ದಶಕಗಳ ಕಾಲ ಕನ್ನಡ ಚಿತ್ರರಂಗದ ದೃಶ್ಯ ಸೌಂದರ್ಯಕ್ಕೆ ಜೀವ ತುಂಬಿದ ತಾಂತ್ರಿಕ ತಜ್ಞ.

    2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

     

    4. ಡಾ. ರಾಜ್‌ಕುಮಾರ್ ಪ್ರಶಸ್ತಿ

    ನಿರ್ಮಾಪಕ ಸಾ. ರಾ. ಗೋವಿಂದ್

    ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಿ ಕನ್ನಡ ಸಿನಿಮಾಗೆ ಮೌಲ್ಯ ನೀಡಿದ ಹಿರಿಯ ನಿರ್ಮಾಪಕ.

     

    5. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ:

    ನಿರ್ದೇಶಕ ಶಿವರುದ್ರಯ್ಯ ಕೆ.

    ಸಾಹಿತ್ಯಾಧಾರಿತ ಹಾಗೂ ಸಂವೇದನಾಶೀಲ ಚಿತ್ರಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕ.

     

    ಡಾ. ವಿಷ್ಣುವರ್ಧನ್ ಪ್ರಶಸ್ತಿ:

    ಹಿರಿಯ ನಟ ಎಂ.ಕೆ. ಸುಂದರ್ ರಾಜ್

    ಪಾತ್ರಗಳ ವೈವಿಧ್ಯತೆ ಮತ್ತು ಅಭಿನಯದ ಘನತೆಯಿಂದ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸ್ಥಾನ ಪಡೆದ ನಟ.

    ಕನ್ನಡ ಸಿನಿಮಾಗೆ ಸರ್ಕಾರದ ಗೌರವ

    ಈ ಪ್ರಶಸ್ತಿಗಳ ಮೂಲಕ ಕನ್ನಡ ಚಿತ್ರರಂಗದ ಸಾಧನೆಗಳನ್ನು ಸರ್ಕಾರ ಗೌರವಿಸಿರುವುದು ಶ್ಲಾಘನೀಯ. ಇದು ಕೇವಲ ವ್ಯಕ್ತಿಗಳ ಗೌರವವಲ್ಲ, ಕನ್ನಡ ಸಿನಿಮಾದ ಇತಿಹಾಸ, ಸಂಸ್ಕೃತಿ ಮತ್ತು ಸೃಜನಶೀಲತೆಗೆ ಸಲ್ಲುವ ಗೌರವವಾಗಿದೆ.

     

  • ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ

    ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ


    ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಖಜಾನೆಯಿಂದ, ಕಡಿಮೆ ಓದುಗರಿರುವ ರಾಷ್ಟ್ರೀಯ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ಹಣ ಹರಿದಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕ ಹಣವನ್ನು ಹೇಗೆ, ಯಾರಿಗೆ ಮತ್ತು ಯಾವ ಮಾನದಂಡದ ಆಧಾರದಲ್ಲಿ ಬಳಸಬೇಕು ಎಂಬ ಪ್ರಶ್ನೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜಾಹೀರಾತು ಬಜೆಟ್‌ನ ಪಾರದರ್ಶಕತೆ ಕುರಿತು ಹೊಸ ಸಂಶಯಗಳನ್ನು ಎಬ್ಬಿಸಿದೆ.

    ಬಿಜೆಪಿ ಆರೋಪವೇನು?
    ಬಿಜೆಪಿ ಆರೋಪಿಸಿದಂತೆ, ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಸಮಾನ ಪ್ರಮಾಣದ ಹಣ ನೀಡಲಾಗಿದೆ.
    2023–24 ನೇ ಸಾಲಿನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ₹1.90 ಕೋಟಿ ಜಾಹೀರಾತು
    2024–25 ನೇ ಸಾಲಿನಲ್ಲಿ ಸುಮಾರು ₹99 ಲಕ್ಷ ಜಾಹೀರಾತು ಹಣ ನೀಡಲಾಗಿದೆ.
    ಬಿಜೆಪಿ ಹೇಳುವ ಪ್ರಕಾರ, 2024–25 ರಲ್ಲಿ ರಾಜ್ಯ ಸರ್ಕಾರ ಎಲ್ಲಾ ರಾಷ್ಟ್ರೀಯ ಪತ್ರಿಕೆಗಳಿಗೆ ಒಟ್ಟು ₹1.42 ಕೋಟಿ ಖರ್ಚು ಮಾಡಿದ್ದರೆ, ಅದರಲ್ಲಿ ಶೇ.69ರಷ್ಟು ಹಣ ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ನೀಡಲಾಗಿದೆ.

    ಕಡಿಮೆ ಓದುಗರಿರುವ, ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಸರಿಯಾದ ವಿತರಣೆ ಇಲ್ಲದ ಪತ್ರಿಕೆಗೆ ಇಷ್ಟೊಂದು ಮೊತ್ತ ನೀಡಿರುವುದೇಕೆ? ಎಂಬುದೇ ಬಿಜೆಪಿ ಪ್ರಮುಖ ಪ್ರಶ್ನೆ.

    ನ್ಯಾಷನಲ್ ಹೆರಾಲ್ಡ್ ಪ್ರೀತಿ – ಸಿದ್ದರಾಮಯ್ಯ ಸರ್ಕಾರದ ಮೇಲೆ ಚಾರ್ಜ್‌ಶೀಟ್:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಷನಲ್ ಹೆರಾಲ್ಡ್ ಮೇಲಿನ ವಿಶೇಷ ಪ್ರೀತಿ ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಕೇವಲ ಜಾಹೀರಾತು ವಿಷಯವಲ್ಲ, ರಾಜಕೀಯ ಪ್ರೇರಿತ ನಿರ್ಧಾರ ಎಂಬ ಗಂಭೀರ ಆರೋಪವನ್ನೂ ಮಾಡಿದೆ.

    ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರವಾಗಿ ಪ್ರತಿಕ್ರಿಯಿಸಿ, ನ್ಯಾಷನಲ್ ಹೆರಾಲ್ಡ್ ಸ್ಕ್ಯಾಮ್‌ನಲ್ಲಿ ತಾಯಿ–ಮಗ ಬೇಲ್ ಮೇಲೆ ಇದ್ದಾರೆ. ಅಂಥ ಪತ್ರಿಕೆಗೆ ಕರ್ನಾಟಕ ಸರ್ಕಾರದ ದುಡ್ಡು ಕೊಡೋದು ಸಿದ್ದರಾಮಯ್ಯ ಸರ್ಕಾರದ ರಾಷ್ಟ್ರೀಯ ಬೌದ್ಧಿಕ ದಿವಾಳಿತನ ಎಂದು ಕಿಡಿಕಾರಿದ್ದಾರೆ.

    ಇನ್ನು ಬಿಜೆಪಿ ನಾಯಕ ಅಶೋಕ್ ಕೂಡ ನ್ಯಾಷನಲ್ ಹೆರಾಲ್ಡ್ ಬೋಗಸ್ ಪತ್ರಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್–ಡಿಸಿಎಂ ಸಮರ್ಥನೆ ಏನು?
    ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಜಾಹೀರಾತು ನೀಡುವ ಸಂಪೂರ್ಣ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
    ಇನ್ನು ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂಪೂರ್ಣವಾಗಿ ಕಾನೂನುಬದ್ಧ (ಲೀಗಲ್) ವಹಿವಾಟು ಎಂದು ಸ್ಪಷ್ಟಪಡಿಸಿದ್ದಾರೆ.

    ಜಾಹೀರಾತು ಹಣ – ರಾಜಕೀಯ ವಿವಾದದ ಕೇಂದ್ರಬಿಂದು:
    ಒಟ್ಟಾರೆ, ನ್ಯಾಷನಲ್ ಹೆರಾಲ್ಡ್‌ಗೆ ನೀಡಿದ ಜಾಹೀರಾತು ಹಣವು ಕೇವಲ ಆರ್ಥಿಕ ವಿಚಾರವಲ್ಲ, ಇದು ರಾಜಕೀಯ ನೈತಿಕತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಣದ ಬಳಕೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
    ಈ ಆರೋಪ–ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

  • ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    • ಸಂಬಳ ಒಂದೇ, ಕೆಲಸ ಎರಡು – ನಗರಸಭೆ ಕ್ರಮಕ್ಕೆ ಆಕ್ಷೇಪ

    ವರದಿ: ಕುದಾನ್ ಸಾಬ್ 

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿರುವ ನಡುವೆಯೇ, ಇರುವ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ ನೀಡಿ, ನಗರಸಭೆಯ ಕೆಲಸಗಳ ಜೊತೆಗೆ ಪತ್ರಿಕಾ ಭವನದ ಸ್ವಚ್ಛತೆ ಕಾರ್ಯವನ್ನೂ ನಿರ್ವಹಿಸುವಂತೆ ಸೂಚಿಸಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

    ನಗರಸಭೆಯ ದೈನಂದಿನ ಕಾರ್ಯಭಾರವೇ ಹೆಚ್ಚಾಗಿರುವ ಸಂದರ್ಭದಲ್ಲಿ, ನಗರಸಭೆಯ ಖಾಯಂ ಡಿ-ಗ್ರೂಪ್ ಸಿಬ್ಬಂದಿ ಶ್ರೀಶೈಲ  ಅವರನ್ನು ನಗರಸಭೆಯ ವ್ಯಾಪ್ತಿಗೆ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದು ಆಡಳಿತಾತ್ಮಕ ಅಸಮಂಜಸತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬರುತ್ತಿದೆ.

    ನಗರಸಭೆ ಸಿಬ್ಬಂದಿಯನ್ನು ನಗರಸಭೆಯ ಹೊರಗಿನ ಕೆಲಸಗಳಿಗೆ ಬಳಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ವಿದ್ಯಾವಂತರು ಅಭಿಪ್ರಾಯಪಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಹೊಸ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವುದು ಅಥವಾ ತಾತ್ಕಾಲಿಕ ವ್ಯವಸ್ಥೆ ರೂಪಿಸುವುದು ಆಡಳಿತದ ಕರ್ತವ್ಯವಾಗಿದ್ದು, ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

    ಸಂಘದ ಹೊಣೆಗಾರಿಕೆ ಪ್ರಶ್ನಾರ್ಥಕ: ಪತ್ರಿಕಾ ಭವನದ ದಿನನಿತ್ಯದ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಆ ಭವನವನ್ನು ನಡೆಸುತ್ತಿರುವ ಸಂಘದದ್ದೇ ಆಗಿರಬೇಕು. ಆದರೆ ಸಂಘವು ತನ್ನ ಕರ್ತವ್ಯವನ್ನು ನಿರ್ವಹಿಸದೇ, ನಗರಸಭೆ ಸಿಬ್ಬಂದಿಯನ್ನು ಅವಲಂಬಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಸಂಘಕ್ಕೆ ಸಿಬ್ಬಂದಿ ಅಗತ್ಯವಿದ್ದರೆ, ತನ್ನದೇ ಮೂಲಗಳಿಂದ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

    ಕರ್ನಾಟಕ ನಗರಸಭೆಗಳ ಸೇವಾ ನಿಯಮಗಳ ಪ್ರಕಾರ, ಖಾಯಂ ನೌಕರರನ್ನು ಅವರ ನೇಮಕಾತಿ ಹುದ್ದೆ, ವೇತನ ಶ್ರೇಣಿ ಹಾಗೂ ನಿಗದಿತ ಕಾರ್ಯವ್ಯಾಪ್ತಿಗೆ ಹೊರಗಿನ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದೆ. ಯಾವುದೇ ಹೆಚ್ಚುವರಿ ಅಥವಾ ಪ್ರಭಾರಿ ಜವಾಬ್ದಾರಿ ನೀಡಬೇಕಾದಲ್ಲಿ, ಅರ್ಹ ಪ್ರಾಧಿಕಾರದ ಲಿಖಿತ ಆದೇಶ, ಅವಧಿ ನಿಗದಿ ಹಾಗೂ ನಿಯಮಾನುಸಾರ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಖಾಯಂ ನೌಕರರಾದ ಶ್ರೀಶೈಲಾ ಅವರನ್ನು ಸೇವಕ ಹುದ್ದೆಗೆ ಅಥವಾ ನಗರಸಭೆಯ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದಾದರೆ, ಅದು ಕರ್ನಾಟಕ ನಗರಸಭೆ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ. ನಗರಸಭೆ ಸಿಬ್ಬಂದಿಯನ್ನು ಸೇವಾ ನಿಯಮಗಳಿಗೆ ವಿರುದ್ಧವಾಗಿ ಹೊರಗಿನ ಕೆಲಸಗಳಿಗೆ ನಿಯೋಜಿಸಿರುವುದಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಡಿ. ಗ್ರೂಪ್ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ

    ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ

    ರಾಯಚೂರು ಜಿಲ್ಲೆಯು ಸಾಮಾನ್ಯವಾಗಿ ಬಿಸಿಲಿನ ತಾಪಕ್ಕೆ ಹೆಸರುವಾಸಿಯಾಗಿರುವ ಪ್ರದೇಶ. ಆದರೆ ಈ ಬಾರಿ ಡಿಸೆಂಬರ್ ಚಳಿಯು ಅಚ್ಚರಿಯ ತಿರುವು ಪಡೆದು ಬಿಸಿಲುನಾಡಿನ ಜನರ ದಿನಚರಿಯನ್ನೇ ಬದಲಿಸುವ ಮಟ್ಟಿಗೆ ತಂಪಿನ ಹೊಡೆತ ನೀಡಿದೆ. ಉತ್ತರ ಭಾರತದ ವಾತಾವರಣವನ್ನೇ ನೆನಪಿಸುವಂತೆ, ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ಏಕಾಏಕಿ 9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಈ ಹಂಗಾಮಿನಲ್ಲೇ ದಾಖಲೆ ಮಟ್ಟದ ತಣ್ಣನೆ ವಾತಾವರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ತಂಪುಗಾಳಿಯ ಪರಿಣಾಮ, ರಾಯಚೂರಿನಲ್ಲಿ ಇನ್ನೂ ಐದು ದಿನಗಳವರೆಗೆ ಚಳಿಯ ಅಬ್ಬರ ಮುಂದುವರಿಯಲಿದೆ ಎಂಬ ಮುನ್ಸೂಚನೆ ಜನರಲ್ಲಿ ಆತಂಕಕ್ಕೂ ಎಚ್ಚರಕ್ಕೂ ಕಾರಣವಾಗಿದೆ.

    ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದ್ದು, ಬೆಳಗಿನ ಜಾವ ಮತ್ತು ರಾತ್ರಿ ಸಮಯದಲ್ಲಿ ತಣ್ಣನೆಯ ಅನುಭವ ತೀವ್ರವಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ರಾಯಚೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯ ಸಾಧ್ಯತೆಯಿದ್ದು, ಗರಿಷ್ಠ ಉಷ್ಣಾಂಶ 28 ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 10 ರಿಂದ 7 ಡಿಗ್ರಿ ಸೆಲ್ಸಿಯಸ್ ನಡುವೆಯೇ ಇರಲಿದೆ ಎಂದು ತಿಳಿಸಿದೆ.

    ಚಳಿಯ ಪರಿಣಾಮ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದೆ. ತೀವ್ರ ಚಳಿಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಅಗತ್ಯ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

    ಇನ್ನು ಜನಸಾಮಾನ್ಯರ ಆರೋಗ್ಯದ ಮೇಲೂ ಚಳಿಯ ಪ್ರಭಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವೈದ್ಯರು ಸಾರ್ವಜನಿಕರಿಗೆ ಬೆಳಗಿನ ಜಾವ ವಾಕಿಂಗ್ ಅನ್ನು ತಡವಾಗಿ ಆರಂಭಿಸುವಂತೆ ಸೂಚನೆ ನೀಡುತ್ತಿದ್ದು, ವಿಶೇಷವಾಗಿ ಚಿಕ್ಕಮಕ್ಕಳು ಹಾಗೂ ವೃದ್ಧರು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ತೀವ್ರ ಚಳಿಯ ಸಂದರ್ಭದಲ್ಲಿ ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.

    ಚಳಿಯ ತೀವ್ರತೆಯಿಂದಾಗಿ ಉದ್ಯಾನವನಗಳು ಹಾಗೂ ಕ್ರೀಡಾಂಗಣಗಳು ವಾಕಿಂಗ್‌ಗೆ ಬರುವ ಜನರಿಲ್ಲದೆ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ. ತಣ್ಣನೆಯಿಂದ ತಪ್ಪಿಸಿಕೊಳ್ಳಲು ಜನರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಬಿಸಿಲುನಾಡು ರಾಯಚೂರು ಈ ಬಾರಿ ಸಂಪೂರ್ಣವಾಗಿ ಚಳಿಯ ಮಡಿಲಲ್ಲಿ ಸಿಲುಕಿರುವಂತಾಗಿದೆ.

  • ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.

    ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.

    ಮುದ್ದೇಬಿಹಾಳ:- ತಾಲ್ಲೂಕಿನ ಚಿಕ್ಕಬಿಜೂರ ಗ್ರಾಮದ ರೈತ ಶಿವಪುತ್ರಪ್ಪ ಯಮನಪ್ಪ ಹಾಲವರ ಹಾಗೂ ಅವರ ಕುಟುಂಬ, ತಮ್ಮ ಜಮೀನಿಗೆ ವರ್ಷಗಳಿಂದ ಬಳಕೆಯಲ್ಲಿರುವ ದಾರಿಗಳನ್ನು ವ್ಯವಸಾಯೇತರ ಚಟುವಟಿಕೆಗಳಿಗೆ ಮುಂದುವರಿಸಿಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್‌ ಕಿರ್ತಿ ಚಾಲಕ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

    ಚಿಕ್ಕಬಿಜೂರ ಗ್ರಾಮದಲ್ಲಿರುವ ತಮ್ಮ ಜಮೀನಿನ ರಿ.ಸ.ನಂ. 74/1ರಲ್ಲಿ ಒಟ್ಟು 4 ಎಕರೆ ವಿಸ್ತೀರ್ಣವಿದ್ದು, ಅದರ ಉತ್ತರ ಭಾಗದ 2 ಎಕರೆ ಜಮೀನನ್ನು ಈಗಾಗಲೇ ಉಪಗ್ರಾಮ ಕಂದಾಯಕ್ಕೆ ಒಪ್ಪಿಸಲಾಗಿದ್ದು, ಪಹಣಿಯಲ್ಲೂ ದಾಖಲಾಗಿರುವುದಾಗಿ ಮನವಿಯಲ್ಲಿ ವಿವರಿಸಲಾಗಿದೆ. ಉಳಿದ ದಕ್ಷಿಣ ಭಾಗದ 2 ಎಕರೆ ಜಮೀನಿಗೆ ಪ್ರವೇಶಿಸಲು ಇತಿಹಾಸದಿಂದಲೂ ಎರಡು ದಾರಿಗಳೇ ಇರುವುದಾಗಿ ರೈತ ಕುಟುಂಬ ಸ್ಪಷ್ಟಪಡಿಸಿದೆ.

    ಒಂದು ದಾರಿ ಖಾದಿರಸಾಬ ಬಡೇಸಾಬ ನದಾಫ ಅವರ ಮನೆಯ ಮಗ್ಗುಲಿನಿಂದ ಹಾದು ಹೋಗುವ ಸುಮಾರು 20 ಅಡಿ ಅಗಲದ ದಾರಿಯಾಗಿದ್ದು, ಇನ್ನೊಂದು ದಾರಿ ರಾಮಣ್ಣ ನಿಂಗಪ್ಪ ನಂದ್ಯಾಳ ಹೊಲ ಹಾಗೂ ಉಮಾಶ್ರೀ ಶರಣಪ್ಪ ನಂದ್ಯಾಳ ಅವರ ಮನೆಯ ಪಕ್ಕದಿಂದ ಸಾಗುವ ಸುಮಾರು 25 ಅಡಿ ಅಗಲದ ದಾರಿಯಾಗಿದೆ. ಈ ಎರಡನೇ ದಾರಿಯಲ್ಲಿ ಮಳೆಗಾಲದ ಹೆಚ್ಚುವರಿ ನೀರು ಹರಿದು ಹೋಗುವ ಚರಂಡಿಯೂ ಸೇರಿದೆ ಎಂದು ತಿಳಿಸಿದ್ದಾರೆ.

    ಈ ಎರಡು ಮಾರ್ಗಗಳನ್ನೇ ತಮ್ಮ ಜಮೀನಿಗೆ ವ್ಯವಸಾಯೇತರ ಚಟುವಟಿಕೆಗಳಿಗಾಗಿ ಬಳಸಿಕೊಂಡು ಬರುತ್ತಿದ್ದು, ಇದಕ್ಕೆ ಹೊರತು ಬೇರೆ ಯಾವುದೇ ಪರ್ಯಾಯ ದಾರಿಯೇ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಗ್ರಾಮಸ್ಥರು ಈ ದಾರಿಗಳ ಬಳಕೆಗೆ ಅಡ್ಡಿಪಡಿಸುತ್ತಿದ್ದು, ಇದರಿಂದ ತಮಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಸ್ಥಳೀಯ ಕಂದಾಯ ಅಧಿಕಾರಿಗಳು ವಿಷಯ ತಿಳಿದಿದ್ದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ರೈತ ಕುಟುಂಬ, ತಮ್ಮ ಜಮೀನಿಗೆ ಇರುವ ಹಳೆಯ ದಾರಿಗಳನ್ನು ಯಥಾಸ್ಥಿತಿಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿ, ಗ್ರಾಮಸ್ಥರು ಅಡ್ಡಿ ಮಾಡದಂತೆ ತಾಕೀತು ಆದೇಶ ನೀಡುವಂತೆ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

    ನ್ಯಾಯ ಸಿಗದಿದ್ದಲ್ಲಿ ಮೇಲಾಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ವಿಷಯ ತರಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

  • ಕ್ರಿಸ್‌ಮಸ್ ಸಂಭ್ರಮಕ್ಕೆ KSRTC ಸಿದ್ಧತೆ: ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ

    ಕ್ರಿಸ್‌ಮಸ್ ಸಂಭ್ರಮಕ್ಕೆ KSRTC ಸಿದ್ಧತೆ: ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ

    ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರಯಾಣಿಕರ ಸಂಚಾರ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೆಎಸ್‌ಆರ್‌ಟಿಸಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಬ್ಬದ ದಿನಗಳಲ್ಲಿ ಊರುಗಳಿಗೆ ಹೋಗುವವರು, ಪ್ರವಾಸಿ ತಾಣಗಳಿಗೆ ತೆರಳುವವರು ಮತ್ತು ಕುಟುಂಬ ಸಮೇತರಾಗಿ ಪ್ರಯಾಣಿಸುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುವುದರಿಂದ, ಈ ಬಾರಿ ಸಾವಿರಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ. ಈ ಸೇವೆಗಳು ಡಿಸೆಂಬರ್ 19ರಿಂದ ಆರಂಭವಾಗಿ ಡಿಸೆಂಬರ್ 28ರವರೆಗೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

    ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರ ಬೇಡಿಕೆಯನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡಿರುವ ನಿಗಮ, ಡಿಸೆಂಬರ್ 19, 20 ಹಾಗೂ 24ರಂದು ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಈ ದಿನಗಳಲ್ಲಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಂತಹ ಧಾರ್ಮಿಕ ಕ್ಷೇತ್ರಗಳು, ಮಂಗಳೂರು, ಉಡುಪಿ, ಮಡಿಕೇರಿ, ಶಿವಮೊಗ್ಗದಂತಹ ಕರಾವಳಿ ಮತ್ತು ಮಲೆನಾಡು ಭಾಗಗಳು, ಜೊತೆಗೆ ಮೈಸೂರು, ಹಾಸನದಂತಹ ಮಧ್ಯ ಕರ್ನಾಟಕ ನಗರಗಳಿಗೆ ಹೆಚ್ಚುವರಿ ಸಂಚಾರ ಇರಲಿದೆ. ಇದರ ಜೊತೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಕಲಬುರಗಿ, ರಾಯಚೂರು, ಬೀದರ್ ಮುಂತಾದ ನಗರಗಳಿಗೂ ವಿಶೇಷ ಬಸ್‌ಗಳು ಓಡಲಿವೆ.

    ಹಬ್ಬ ಮುಗಿದ ಬಳಿಕ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಡಿಸೆಂಬರ್ 26 ಹಾಗೂ 28ರಂದು ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮರಳಿ ಪ್ರಯಾಣಿಸುವ ವೇಳೆ ಉಂಟಾಗುವ ದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಕೆಎಸ್‌ಆರ್‌ಟಿಸಿಯದು.

    ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ಅನುಕೂಲವೆಂದರೆ, ಈ ವಿಶೇಷ ಬಸ್‌ಗಳಿಗೆ ಯಾವುದೇ ಹೆಚ್ಚುವರಿ ಹಬ್ಬದ ದರ ವಿಧಿಸಲಾಗುವುದಿಲ್ಲ. ಸಾಮಾನ್ಯ ದಿನಗಳಲ್ಲಿರುವ ಟಿಕೆಟ್ ದರಗಳೇ ಅನ್ವಯವಾಗಲಿದ್ದು, ಪ್ರಯಾಣಿಕರು ಹೆಚ್ಚಿನ ವೆಚ್ಚದ ಭಾರವಿಲ್ಲದೆ ಪ್ರಯಾಣಿಸಬಹುದು. ಬೇಡಿಕೆ ಇನ್ನಷ್ಟು ಹೆಚ್ಚಾದಲ್ಲಿ, ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವ ವ್ಯವಸ್ಥೆಯನ್ನೂ ನಿಗಮ ಮಾಡಿಕೊಂಡಿದೆ.

    ಒಟ್ಟಾರೆ, ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಪ್ರಯಾಣ ಸುಗಮವಾಗಲು, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕೆಎಸ್‌ಆರ್‌ಟಿಸಿ ಸಮಗ್ರ ಯೋಜನೆ ರೂಪಿಸಿಕೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಸಾರಿಗೆ ವ್ಯವಸ್ಥೆಯೂ ಕೈಜೋಡಿಸಿರುವಂತಾಗಿದೆ.

  • ಐಪಿಎಲ್‌ನಲ್ಲಿ ಧೋನಿ ಅಂತಿಮ ಅಧ್ಯಾಯ? 2026 ಬಳಿಕ CSKಯಲ್ಲಿ ಹೊಸ ಯುಗ: ರಾಬಿನ್ ಉತ್ತಪ್ಪ

    ಐಪಿಎಲ್‌ನಲ್ಲಿ ಧೋನಿ ಅಂತಿಮ ಅಧ್ಯಾಯ? 2026 ಬಳಿಕ CSKಯಲ್ಲಿ ಹೊಸ ಯುಗ: ರಾಬಿನ್ ಉತ್ತಪ್ಪ

    ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ಭವಿಷ್ಯಕ್ಕೆ ಸಂಬಂಧಿಸಿದ ಚರ್ಚೆಗೆ ಈಗ ಸ್ಪಷ್ಟ ದಿಕ್ಕು ಸಿಕ್ಕಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕದ ರಾಬಿನ್ ಉತ್ತಪ್ಪ, ಧೋನಿ ನಿವೃತ್ತಿ ಕುರಿತು ಬಹಳ ಖಚಿತ ಮಾತುಗಳನ್ನು ಆಡಿದ್ದು, ಈ ಸೀಸನ್‌ ಅವರ ಐಪಿಎಲ್ ಬದುಕಿನ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಗಟ್ಟಿಯಾಗಿದೆ.

    2026ರ ಐಪಿಎಲ್ ಮಿನಿ ಹರಾಜಿನ ನಂತರ ಮಾತನಾಡಿದ ಉತ್ತಪ್ಪ, ಸಿಎಸ್‌ಕೆ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳನ್ನು ಗಮನಿಸಿದರೆ ಎಲ್ಲವೂ ಗೋಡೆಯ ಮೇಲೆ ಬರೆಯಲ್ಪಟ್ಟಂತೆಯೇ ಇದೆ ಎಂದು ಹೇಳಿದ್ದಾರೆ. ಅನುಭವಿ ಆಟಗಾರರ ಬದಲಿಗೆ ಯುವ ಪ್ರತಿಭೆಗಳ ಮೇಲೆ ಫ್ರಾಂಚೈಸಿ ಹೆಚ್ಚು ನಂಬಿಕೆ ಇಡುತ್ತಿರುವುದು, ಧೋನಿ ನಿವೃತ್ತಿಯತ್ತ ಸಾಗುತ್ತಿರುವ ಸೂಚನೆಯೇ ಆಗಿದೆ ಎನ್ನುವುದು ಅವರ ಅಭಿಪ್ರಾಯ.

    ಧೋನಿ ಇನ್ನೊಂದು ವರ್ಷ ಆಡ್ತಾರಾ, ಇಲ್ಲವಾ ಎಂಬ ಊಹಾಪೋಹಗಳಿಗೆ ಇನ್ನು ಜಾಗವೇ ಇಲ್ಲ. ಈ ಸೀಸನ್‌ ಮುಗಿದ ಬಳಿಕ ಅವರು ಕ್ರಿಕೆಟ್‌ಗೆ ಪೂರ್ಣ ವಿರಾಮ ಕೊಡುವುದು ಬಹುತೇಕ ಪಕ್ಕಾ ಎಂದು ಉತ್ತಪ್ಪ ಹೇಳಿದ್ದಾರೆ. ಆದರೆ ಮೈದಾನದಿಂದ ದೂರ ಸರಿದರೂ, ಸಿಎಸ್‌ಕೆ ಜೊತೆಗಿನ ಅವರ ಸಂಬಂಧ ಕಡಿದು ಹೋಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಆಟಗಾರನಾಗಿ ಅಲ್ಲದಿದ್ದರೂ, ತಂಡದ ಮೆಂಟರ್ ಅಥವಾ ಮಾರ್ಗದರ್ಶಕರಾಗಿ ಧೋನಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂಬುದು ಉತ್ತಪ್ಪನ ಭವಿಷ್ಯ ನುಡಿ.

    ಸಿಎಸ್‌ಕೆ ಈಗಾಗಲೇ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಲೆಕ್ಕಾಚಾರ ಆರಂಭಿಸಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಯೋಜನೆ ನಡೆಯುತ್ತಿದ್ದು, ಧೋನಿ ಅವರ ಅನುಭವ ಮತ್ತು ಮಾರ್ಗದರ್ಶನ ಇದಕ್ಕೆ ಬಲ ನೀಡಲಿದೆ ಎಂಬ ವಿಶ್ವಾಸವೂ ವ್ಯಕ್ತವಾಗಿದೆ. ಮತ್ತೊಬ್ಬ ಜಡೇಜಾ ತರಹದ ಆಲ್‌ರೌಂಡರ್‌ಗಳನ್ನು ಬೆಳೆಸಬೇಕಾದರೆ, ಈಗಲೇ ಈ ಬದಲಾವಣೆ ಅಗತ್ಯ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವರ್ಷದ ಕೊನೆಯಲ್ಲಿ ಯುವ ಆಟಗಾರರಿಗೆ ನೀಡಿದ ಅವಕಾಶಗಳು ಸಿಎಸ್‌ಕೆ ಪಾಲಿಗೆ ಲಾಭವಾಗಿದ್ದವು. ಡಿವಾಲ್ಡ್ ಬ್ರೆವಿಸ್, ಆಯುಷ್ ಮಹಾತ್ರೆ, ಉರ್ವಿಲ್ ಪಟೇಲ್‌ಗಳಂತಹ ಯುವಕರು ತಂಡಕ್ಕೆ ಹೊಸ ಉತ್ಸಾಹ ತುಂಬಿದ್ದರು. ಇದೇ ದಾರಿಯಲ್ಲಿ ಮುಂದುವರಿದಿರುವ ಸಿಎಸ್‌ಕೆ, 2026ರ ಮಿನಿ ಹರಾಜಿನಲ್ಲಿ ಇನ್ನೂ ದೊಡ್ಡ ಹೆಜ್ಜೆ ಇಟ್ಟಿದೆ.

    ಉತ್ತರ ಪ್ರದೇಶದ 19 ವರ್ಷದ ಯುವ ಪ್ರತಿಭೆ ಪ್ರಶಾಂತ್ ವೀರ್ ಹಾಗೂ 20 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಅವರನ್ನು ಭಾರೀ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಇವರು ಇಬ್ಬರೂ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಖರೀದಿಸಲ್ಪಟ್ಟ ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಎಂಬುದು ವಿಶೇಷ.

    ಒಟ್ಟಿನಲ್ಲಿ ನೋಡಿದರೆ, ಸಿಎಸ್‌ಕೆ ಒಂದು ಹೊಸ ಯುಗಕ್ಕೆ ಕಾಲಿಟ್ಟಂತಾಗಿದೆ. ಮೈದಾನದಲ್ಲಿ ಧೋನಿ ಆಟಗಾರನಾಗಿ ಕಾಣಿಸಿಕೊಳ್ಳದ ದಿನಗಳು ಹತ್ತಿರವಾಗುತ್ತಿದ್ದರೂ, ತಂಡದ ಹೃದಯವಾಗಿರುವ ಅವರ ಪಾತ್ರ ಮಾತ್ರ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿವೆ. ಕ್ಯಾಪ್ಟನ್ ಕೂಲ್ ನಿವೃತ್ತಿಯಾದರೂ, ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಅವರ ನೆರಳು ಇನ್ನೂ ಬಹುಕಾಲ ಬೀಳುತ್ತಲೇ ಇರಲಿದೆ.

  • ಬೆಂಗ್ಳೂರಲ್ಲಿ ತೀವ್ರ ಚಳಿ ಅಲರ್ಟ್: ಶೀತಗಾಳಿಯ ಹೊಡೆತಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು

    ಬೆಂಗ್ಳೂರಲ್ಲಿ ತೀವ್ರ ಚಳಿ ಅಲರ್ಟ್: ಶೀತಗಾಳಿಯ ಹೊಡೆತಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು

    ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಗಾಲ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದ್ದು, ಶೀತಗಾಳಿಯ ಎಫೆಕ್ಟ್ ಜನಜೀವನದ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ತಾಪಮಾನವು ಕೇವಲ ಹವಾಮಾನ ಬದಲಾವಣೆಗೂ ಸೀಮಿತವಾಗದೇ, ನಾಗರಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಚಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ.

    ನಗರದಲ್ಲಿ ಕಳೆದ ಎರಡ್ಮೂರು ವಾರಗಳಿಂದ ಕನಿಷ್ಠ ತಾಪಮಾನ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಕೆಲ ಪ್ರದೇಶಗಳಲ್ಲಿ 14 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೂ ತಲುಪಿದೆ. ಈ ತೀವ್ರ ಚಳಿಯಿಂದಾಗಿ ಜನರು ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವುದಕ್ಕೂ ಹಿಂಜರಿಯುತ್ತಿದ್ದಾರೆ. ಶೀತಗಾಳಿಯ ಪರಿಣಾಮವಾಗಿ ಶೀತ, ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಹೆಚ್ಚಾಗಿದೆ.

    ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಶೀತ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳು, ವಯಸ್ಕರು ಹಾಗೂ ವೃದ್ಧರು ಶೀತ, ಕೆಮ್ಮು, ಉಸಿರಾಟದ ತೊಂದರೆಗಳೊಂದಿಗೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳಲ್ಲಿ ಆರೋಗ್ಯ ಏರುಪೇರು ಕಂಡುಬರುತ್ತಿದ್ದು, ವೈದ್ಯರು ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳ ವಿಭಾಗದಲ್ಲಿ ಹಾಸಿಗೆಗಳ ಭರ್ತಿ ಪ್ರಮಾಣವೂ ಹೆಚ್ಚಾಗಿದೆ.

    ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಸಮಸ್ಯೆಗಳು ಕಂಡುಬರುವುದು ಸಹಜವಾದರೂ, ಈ ಬಾರಿ ಚಳಿ ಹೆಚ್ಚಿರುವುದರಿಂದ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಕೆಲವರು ತಪಾಸಣೆ ಪಡೆದು ಔಷಧಿ ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯದ ತೀವ್ರತೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

    ಹವಾಮಾನ ಇಲಾಖೆ ಸೂಚನೆಯಂತೆ ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಹೆಚ್ಚಿನ ಚಳಿ ಬೀಳುವ ಸಾಧ್ಯತೆ ಇದ್ದು, ತಾಪಮಾನ ದಾಖಲೆ ಮಟ್ಟದಲ್ಲಿ ಕುಸಿಯುವ ಅಂದಾಜು ಇದೆ. ಹೀಗಾಗಿ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಬೆಚ್ಚನೆಯ ಉಡುಪುಗಳನ್ನು ಧರಿಸುವುದು, ತಂಪಾದ ಗಾಳಿಯಿಂದ ದೂರವಿರುವುದು, ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗಾಲದ ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದರೆ ಮಾತ್ರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯ.