Category: Sports

  • ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಕ್ರಿಕೆಟ್ ಪ್ರಪಂಚದ ಗಮನ ಈಗ ಅಡಿಲೇಡ್‌ನತ್ತ ನೆಟ್ಟಿದೆ.  ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣ ತರುವಂತ ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಬರೆಯಲು ಸಜ್ಜಾಗಿದ್ದಾರೆ. ಅಕ್ಟೋಬರ್ 23ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ದಾಖಲೆಗಳ ಮಳೆ ಸುರಿಸುವ ಸಾಧ್ಯತೆ ಇದೆ.

    ಅಡಿಲೇಡ್ ಮೈದಾನ ಕೊಹ್ಲಿಗೆ ಅತಿ ಪ್ರಿಯವಾದ ಮೈದಾನಗಳಲ್ಲಿ ಒಂದು. ಇಲ್ಲಿಯ ಪಿಚ್, ವಾತಾವರಣ ಮತ್ತು ಅಭಿಮಾನಿಗಳ ಉತ್ಸಾಹ ಈ ಎಲ್ಲವೂ ಅವರ ಆಟಕ್ಕೆ ಜೀವ ತುಂಬುತ್ತವೆ. ಈ ಮೈದಾನದಲ್ಲಿ ಅವರು ಈಗಾಗಲೇ 5 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ 2 ಏಕದಿನಗಳು ಮತ್ತು 3 ಟೆಸ್ಟ್‌ಗಳು ಸೇರಿವೆ. ಈ ಮೂಲಕ ಅವರು ಇಂಗ್ಲೆಂಡ್‌ನ ದಾಂಡಿಗ ಜ್ಯಾಕ್ ಹಾಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಬ್ಸ್ ಅವರು ಮೆಲ್ಬೋರ್ನ್ ಮೈದಾನದಲ್ಲಿ 5 ಶತಕಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ಹೊಸ ದಾಖಲೆಯು ಅವರ ಹೆಸರಿಗಿರಲಿದೆ.

    ಇಷ್ಟೇ ಅಲ್ಲದೆ ಕೊಹ್ಲಿ ಇನ್ನೂ ಕೇವಲ 25 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ರನ್ ಪೂರೈಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಗೌರವವೂ ಅವರಿಗೆ ದೊರೆಯಲಿದೆ. ಈಗಾಗಲೇ ಅವರು ಈ ಮೈದಾನದಲ್ಲಿ 17 ಇನಿಂಗ್ಸ್‌ಗಳಲ್ಲಿ 975 ರನ್‌ಗಳನ್ನು ಕಲೆಹಾಕಿದ್ದಾರೆ. ಅಂದರೆ ನಾಳೆಯ ಪಂದ್ಯದಲ್ಲಿ ಕೇವಲ ಒಂದು ಸಣ್ಣ ಇನಿಂಗ್ಸ್ ಅವರ ಹೆಸರನ್ನು ಮತ್ತೊಂದು ಮೈಲುಗಲ್ಲಿನತ್ತ ಕರೆದೊಯ್ಯಲಿದೆ.

    ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಎಂದರೆ ಕಣ್ಣಿಗೆ ಹಬ್ಬ. ಪಿಚ್‌ನಲ್ಲಿ ಬೌನ್ಸ್ ಮತ್ತು ಸ್ವಿಂಗ್ ಇದ್ದರೂ ಅವರು ಅದನ್ನು ತಾಳ್ಮೆಯಿಂದ ಎದುರಿಸಿ, ಅಚ್ಚುಕಟ್ಟಾದ ಶಾಟ್‌ಗಳ ಮೂಲಕ ರನ್ ಕಲೆಹಾಕುತ್ತಾರೆ. ಅವರ ಸ್ಮರಣೀಯ ಇನಿಂಗ್ಸ್‌ಗಳು, ಗೆಲುವಿಗೆ ದಾರಿ ಮಾಡಿದ ಶತಕಗಳು  ಇವೆಲ್ಲವೂ ಈ ಮೈದಾನದ ನೆನಪನ್ನು ಅಭಿಮಾನಿಗಳ ಮನದಲ್ಲಿ ಶಾಶ್ವತಗೊಳಿಸಿವೆ.

    ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿಯ ಹೆಸರು ಎಂದರೆ ನಂಬಿಕೆ, ಹೋರಾಟ, ಹಾಗೂ ಪ್ರೇರಣೆ. ಅವರು ಕೇವಲ ಬ್ಯಾಟ್ಸ್‌ಮನ್ ಅಲ್ಲ, ಭಾರತದ ಕ್ರಿಕೆಟ್ ಗೌರವದ ಪ್ರತೀಕ. ಈ ಸರಣಿಯಲ್ಲೂ ಅವರು ಅದೇ ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದ್ದಾರೆ.

    ಅಭಿಮಾನಿಗಳೆಲ್ಲರೂ ಈಗ ಕಾತರದಿಂದ ಕಾಯುತ್ತಿರುವುದು ಒಂದೇ ವಿಷಯಕ್ಕೆ ಅಡಿಲೇಡ್ ಮೈದಾನದಲ್ಲಿ ಮತ್ತೆ ಒಮ್ಮೆ ಕಿಂಗ್ ಕೊಹ್ಲಿಯ ಬ್ಯಾಟ್ ಮಿಂಚಲಿ, ಮತ್ತೊಂದು ಶತಕ ಭಾರಿಸಿ ಇತಿಹಾಸ ಬರೆಯಲಿ!

  • ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ನಾಯಕತ್ವದ ಗಾಳಿ – ಶಾಹೀನ್ ಶಾ ಅಫ್ರಿದಿಗೆ ಹೊಸ ಜವಾಬ್ದಾರಿ!

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ನಾಯಕತ್ವದ ಗಾಳಿ – ಶಾಹೀನ್ ಶಾ ಅಫ್ರಿದಿಗೆ ಹೊಸ ಜವಾಬ್ದಾರಿ!

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಬದಲಾವಣೆಯ ಅಲೆ ಬೀಸಿದೆ. ಪಾಕ್ ಕ್ರಿಕೆಟ್ ಬೋರ್ಡ್ (PCB) ಇತ್ತೀಚಿಗೆ ಪ್ರಕಟಿಸಿದ ಹೊಸ ನಿರ್ಧಾರದಿಂದ, ಮೊಹಮ್ಮದ್ ರಿಜ್ವಾನ್ ಅವರ ಏಕದಿನ (ODI) ನಾಯಕತ್ವ ಅವಧಿಗೆ ತೆರೆ ಬಿದ್ದಿದೆ. ಅವರ ಸ್ಥಾನಕ್ಕೆ ಯುವ ವೇಗ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ಹೊಸ ನಾಯಕನಾಗಿ ನೇಮಕ ಮಾಡಲಾಗಿದೆ.

    ಇತ್ತೀಚಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದಿಂದ ನಿರೀಕ್ಷಿತ ಫಲಿತಾಂಶಗಳು ಬರದಿದ್ದರಿಂದ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರಿಂದ, ಪಿಸಿಬಿ ಬೋರ್ಡ್ ತಕ್ಷಣ ಕ್ರಮ ಕೈಗೊಂಡಿದೆ. ಹೊಸ ಚೈತನ್ಯ ತರಬೇಕೆಂಬ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

    ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನದ ವೇಗದ ಬೌಲಿಂಗ್‌ನ ಪ್ರತೀಕವಾಗಿರುವ ಯುವ ಆಟಗಾರ. ಕೇವಲ 25ರ ಹರೆಯದಲ್ಲೇ 60ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು, ತಮ್ಮ ವೇಗ, ಶಿಸ್ತು ಹಾಗೂ ನಿರಂತರ ಪ್ರದರ್ಶನದಿಂದ ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ. ಅವರ ನಾಯಕತ್ವ ಶೈಲಿ ಆತ್ಮವಿಶ್ವಾಸದೊಂದಿಗೆ ನಿಂತು, ತಂಡವನ್ನು ಒಗ್ಗೂಡಿಸುವ ಗುಣವನ್ನು ಹೊಂದಿದ್ದಾರೆ ಎಂಬುದೇ ಇದಕ್ಕೆ ಮುಖ್ಯ ಕಾರಣ.

    ಅಫ್ರಿದಿ ಮೊದಲು ಟಿ20 ತಂಡದ ನಾಯಕತ್ವವನ್ನು ಕೆಲವು ಪಂದ್ಯಗಳಲ್ಲಿ ನಿರ್ವಹಿಸಿದ್ದರು. ಆದರೆ ಈಗ ಅವರಿಗೆ ದೊಡ್ಡ ವೇದಿಕೆಯಾಗಿ ಏಕದಿನ ತಂಡದ ಪೂರ್ಣ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಪಾಕ್ ಕ್ರಿಕೆಟ್ ಅಭಿಮಾನಿಗಳು ಈಗ “ಶಾಹೀನ್ ಯುಗ” ಪ್ರಾರಂಭವಾಗುತ್ತದೆ ಎಂಬ ಆಶಾಭಾವದಲ್ಲಿದ್ದಾರೆ.

    ಆದರೆ ಗಮನಿಸಬೇಕಾದ ಅಂಶವೆಂದರೆ, ಕಳೆದ ಒಂದು ವರ್ಷದಲ್ಲೇ ಪಾಕಿಸ್ತಾನ ತಂಡದಲ್ಲಿ ಇದು ಮೂರನೇ ನಾಯಕತ್ವ ಬದಲಾವಣೆ. ಇದು ತಂಡದ ಒಳಗಿನ ಅಸ್ಥಿರತೆಯನ್ನು ತೋರಿಸುತ್ತಿದೆ. ಹೊಸ ನಾಯಕ ಶಾಹೀನ್ ಶಾ ಅಫ್ರಿದಿ ಈ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಂಡಕ್ಕೆ ಹೊಸ ದಿಕ್ಕು ಹೇಗೆ ನೀಡುತ್ತಾರೆ ಎಂಬುದು ಮುಂದಿನ ಸರಣಿಗಳಲ್ಲಿ ಸ್ಪಷ್ಟವಾಗಲಿದೆ.

    ಒಟ್ಟು ಹೇಳುವುದಾದರೆ, ಪಾಕ್ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಮೊಹಮ್ಮದ್ ರಿಜ್ವಾನ್ ಯುಗ ಮುಗಿದಿದ್ದು, ಶಾಹೀನ್ ಶಾ ಅಫ್ರಿದಿ ಕಾಲ ಶುರುವಾಗಿದೆ. ಯುವ ಶಕ್ತಿ, ಉತ್ಸಾಹ ಮತ್ತು ಹೊಸ ತಂತ್ರದ ಸಂಕೇತವಾದ ಶಾಹೀನ್, ಪಾಕಿಸ್ತಾನ ಕ್ರಿಕೆಟ್‌ಗೆ ಹೊಸ ಜೀವನ ತುಂಬಬಹುದೇ?

  • ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಪರ್ಥ್‌ನ ವಾಕಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮಳೆಯ ಅಡಚಣೆಯಿಂದ 26 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ಕೇವಲ 136 ರನ್‌ಗಳಿಗೆಯೇ ಸಿಮಿತವಾಯಿತು.

    ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು, ವೇಗ ಮತ್ತು ಬೌನ್ಸ್‌ನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಂಕಷ್ಟ ಅನುಭವಿಸಿದರು. ನಾಯಕ ಶುಭಮನ್ ಗಿಲ್ (12), ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0), ಹಾಗೂ ಶ್ರೇಯಸ್ ಅಯ್ಯರ್ (6) ಇವರೆಲ್ಲರೂ ಕೂಡ ಮೈದಾನಕ್ಕೆ ಇಳಿದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ (32) ಮತ್ತು ಅಕ್ಷರ್ ಪಟೇಲ್ (28) ಇವರು ಮಾತ್ರ ಸ್ವಲ್ಪ ಹೋರಾಟ ನೀಡಿದರೂ ತಂಡ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು.

    ಆಸ್ಟ್ರೇಲಿಯಾ ಪರ ವೇಗದ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್ ಮತ್ತು ಅಬ್ಬಾಟ್ ತೀವ್ರ ಆಕ್ರಮಣ ನಡೆಸಿದರು.

    ಭಾರತ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 21.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ಟ್ರಾವಿಸ್ ಹೆಡ್ (8) ಮತ್ತು ಮ್ಯಾಥ್ಯೂ ಶಾರ್ಟ್ (10) ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರೂ ನಾಯಕ ಮಿಚೆಲ್ ಮಾರ್ಶ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡವನ್ನು ತಲುಪಿಸಿದರು. ಅವರು 51 ಎಸೆತಗಳಲ್ಲಿ 46 ಅಜೇಯ ರನ್‌ಗಳನ್ನು ಬಾರಿಸಿದರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಟ್ ರೆನ್ಶಾ (21) ರನ್ ಗಳಿಸಿ ಗೆಲವು ಸುಲಭಗೊಳಿಸಿದರು.

    ಭಾರತ ಪರ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕದ ಮೊದಲ ಏಕದಿನದಲ್ಲಿ ಭಾರತಕ್ಕೆ ಈ ಸೋಲು ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಅಗ್ರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮಳೆ ಅಡಚಣೆ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

  • ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸತ್ಯಪರೀಕ್ಷೆಗೆ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೆ ಕಣಕ್ಕಿಳಿಯಲು ಸಜ್ಜಾಗಿವೆ. ಕಳೆದ ವರ್ಷದ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ ಭಾರತಕ್ಕೆ, ಈ ಸರಣಿ ಒಂದು ರೀತಿಯ ಪ್ರತೀಕಾರದ ವೇದಿಕೆಯಾಗಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ನೆನಪು ಇದ್ದರೂ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಸ್ಥಳ, ಪಿಚ್, ತಂಡದ ಸಂಯೋಜನೆ ಎಲ್ಲವೂ ಭಾರತಕ್ಕೆ ಹೊಸ ಸವಾಲುಗಳು.

    ಪರ್ತ್‌ನ ವಾಕಾ ಮೈದಾನ ಎಂದರೆ ಬೌನ್ಸಿಗೆ ಪ್ರಸಿದ್ಧ ಅಲ್ಲಿ ವೇಗಿಗಳೇ ಮೇಲುಗೈ ಅದಕ್ಕಾಗಿಯೇ ಎಷ್ಟು ಪೇಸರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಪ್ರಶ್ನೆ ಈಗ ತಂಡದ ಮುಂದಿದೆ.

    ಈ ಹಿನ್ನೆಲೆಯಲ್ಲಿ ಕನ್ನಡಿಗರ ಹೆಸರುಗಳೂ ಚರ್ಚೆಯಲ್ಲಿವೆ

    ಕೆಎಲ್ ರಾಹುಲ್, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅನುಭವ, ತಾಳ್ಮೆ ಮತ್ತು ಮಧ್ಯ ಕ್ರಮದಲ್ಲಿ ನಿಲ್ಲುವ ಶಕ್ತಿ ಭಾರತಕ್ಕೆ ಅಗತ್ಯವಾದ ಅಂಶಗಳಾಗಿವೆ.

    ಮತ್ತೊಂದು ಹೆಸರು ಪ್ರಸಿದ್ಧ ಕೃಷ್ಣ ವೇಗದ ಬೌಲರ್. ವಾಕಾದಂತಹ ಪಿಚ್‌ನಲ್ಲಿ ಅವರ ಉದ್ದದ ಬೌನ್ಸ್ ಎದುರಾಳಿಗಳಿಗೆ ಕಠಿಣ ಪರೀಕ್ಷೆಯಾಗಬಹುದು. ಆದರೂ ಅವರ ಸ್ಥಾನ ಖಚಿತವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಯುವ ವೇಗಿ ಹರ್ಷಿತ್ ರಾಣಾ ಅವರ ಪ್ರದರ್ಶನವೂ ಆಯ್ಕೆದಾರರ ಗಮನ ಸೆಳೆದಿದೆ.

    ಇತ್ತ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ತಂಡದತ್ತ ಎಲ್ಲರ ಕಣ್ಣು, ಏಷ್ಯಾ ಕಪ್ ಗೆಲುವಿನ ನಂತರ, ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮಾಡಿ ಈ ಎಲ್ಲ ಯಶಸ್ಸುಗಳ ನಡುವೆ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ಮುಂದೆ ಅದು ಸಾಕಾಗುತ್ತದೆಯಾ ಎಂಬುದು ಈಗಿನ ಪ್ರಶ್ನೆ.

    ಅಕ್ಟೋಬರ್ 19ರಂದು ಭಾನುವಾರ ನಡೆಯಲಿರುವ ಈ ಮೊದಲ ಏಕದಿನ ಪಂದ್ಯ ಕೇವಲ ಪಂದ್ಯವಲ್ಲ ಅದು ಗೌರವ, ಆತ್ಮಗೌರವ ಮತ್ತು ಪ್ರತೀಕಾರದ ಪರ್ತ್‌ನ ಬೌನ್ಸಿ ಪಿಚ್‌ನಲ್ಲಿ ವೇಗಿಗಳ ರಣಭೂಮಿ ಸಜ್ಜಾಗಿದೆ.

  • ಭಾರತ ವಿರುದ್ಧದ ಸರಣಿಗೂ ಮೊದಲು ಆಸ್ಟ್ರೇಲಿಯಾಗೆ ದೊಡ್ಡ ಆಘಾತ!

    ಭಾರತ ವಿರುದ್ಧದ ಸರಣಿಗೂ ಮೊದಲು ಆಸ್ಟ್ರೇಲಿಯಾಗೆ ದೊಡ್ಡ ಆಘಾತ!

    ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಅಘಾತ ಎದುರಾಗಿದೆ. ಸರಣಿಯ ಮೊದಲ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ, ತಂಡದ ಪ್ರಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

    ಆಸ್ಟ್ರೇಲಿಯಾ ತಂಡ ಈಗಾಗಲೇ ಗಾಯಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಇನ್ನಷ್ಟು ಚಿಂತೆಗೀಡಾಗುವ ವಿಷಯವಾಗಿದೆ. ಗ್ರೀನ್‌ ಬದಲಿಗೆ ಅನುಭವಿಯ ಆಟಗಾರ ಮಾರ್‌ನಸ್ ಲ್ಯಾಬುಶೇನ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಲ್ಯಾಬುಶೇನ್ ಇತ್ತೀಚೆಗೆ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಶತಕ ಬಾರಿಸಿ ಚರ್ಚೆಗೆ ಗ್ರಾಸರಾಗಿದ್ದರು, ಹೀಗಾಗಿ ಅವರ ಆಯ್ಕೆ ತಂಡಕ್ಕೆ ಹೊಸ ಬಲ ನೀಡಲಿದೆ.

    ಗ್ರೀನ್‌ ಗಾಯದ ನಿಖರ ವಿವರ ಬಹಿರಂಗಪಡಿಸದಿದ್ದರೂ, ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ತೊಡೆ ನೋವು ಕಾರಣದಿಂದ ಕಳೆದ ಕೆಲವು ಪಂದ್ಯಗಳಲ್ಲಿ ಹೊರಗುಳಿದಿದ್ದರು. ಇದರ ಜೊತೆಗೆ ಸೀನ್ ಅಬಾಟ್ ಮತ್ತು ಬ್ರೆಂಡನ್ ಡಾಗೆಟ್ ಅವರಿಗೂ ಗಾಯದ ತೊಂದರೆ ಇದೆ.

    ಇಷ್ಟಾದರೂ, ಆಸ್ಟ್ರೇಲಿಯಾ ತಂಡ ತಮ್ಮ ಯುವ ಆಟಗಾರರ ಮೇಲೆ ಭರವಸೆ ಇಟ್ಟು ಆಟದ ತಯಾರಿಯಲ್ಲಿದೆ. ತಂಡದ ಕೋಚ್ ಗಳು “ನಾವು ಹೊಸ ಆಟಗಾರರಿಗೆ ಅವಕಾಶ ನೀಡಿ ತಂಡದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

    ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಪೈಪೋಟಿಗೆ ದೊಡ್ಡ ನಿರೀಕ್ಷೆ ಇದೆ. ಗಾಯಗಳಿಂದ ಉಂಟಾದ ಸವಾಲುಗಳ ನಡುವೆಯೂ ಆಸ್ಟ್ರೇಲಿಯಾ ತಂಡ ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಿದೆ.

  • 2026ರ ಐಸಿಸಿ ಟಿ20 ವಿಶ್ವಕಪ್‌ಗೆ 20 ತಂಡಗಳು

    2026ರ ಐಸಿಸಿ ಟಿ20 ವಿಶ್ವಕಪ್‌ಗೆ 20 ತಂಡಗಳು

    ಕ್ರಿಕೆಟ್ ಲೋಕದ ದೊಡ್ಡ ಹಬ್ಬವನ್ನೇ ಹೋಲುವ ಐಸಿಸಿ ಟಿ20 ವಿಶ್ವಕಪ್ 2026 ಇನ್ನೇನು ಮೂರು ತಿಂಗಳಲ್ಲೇ ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಉತ್ಸಾಹ ಹೆಚ್ಚಾಗಿದೆ. ಈ ಬಾರಿ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಅದರ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಲಿರುವ 20 ತಂಡಗಳ ಅಂತಿಮ ಪಟ್ಟಿಯನ್ನು ಈಗ ಪ್ರಕಟಿಸಿದೆ.

    ಈ ಬಾರಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ತಂಡಗಳು ಭಾಗವಹಿಸುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಏಷ್ಯಾದಿಂದಲೇ ಎಂಟು ತಂಡಗಳು ಸೇರಿಕೊಂಡಿರುವುದು ವಿಶೇಷ. ಕ್ರಿಕೆಟ್‌ನಲ್ಲಿ ಏಷ್ಯಾದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇದು ಒಂದು ಸ್ಪಷ್ಟ ಉದಾಹರಣೆಯಾಗಿದೆ.

    ಭಾರತ ಮತ್ತು ಶ್ರೀಲಂಕಾ ಆತಿಥೇಯ ರಾಷ್ಟ್ರಗಳಾಗಿ ನೇರವಾಗಿ ಟೂರ್ನಿಗೆ ಅರ್ಹತೆ ಪಡೆದಿವೆ. ಅದರ ಜೊತೆಗೆ 2024ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತ ತಲುಪಿದ ಎಂಟು ತಂಡಗಳು ನೇರವಾಗಿ ಆಯ್ಕೆಯಾದವು. ಪಾಕಿಸ್ತಾನ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ಟಿ20 ರ‍್ಯಾಂಕಿಂಗ್ ಆಧಾರದ ಮೇಲೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಉಳಿದ ಎಂಟು ಸ್ಥಾನಗಳನ್ನು ಖಂಡವಾರು ಅರ್ಹತಾ ಸುತ್ತುಗಳ ಮೂಲಕ ಆಯ್ಕೆ ಮಾಡಲಾಗಿದೆ.

    ಅಮೆರಿಕಾದಿಂದ ಕೆನಡಾ, ಯುರೋಪಿನಿಂದ ಇಟಲಿ ಮತ್ತು ನೆದರ್‌ಲ್ಯಾಂಡ್ಸ್, ಆಫ್ರಿಕಾದಿಂದ ನಮೀಬಿಯಾ ಮತ್ತು ಜಿಂಬಾಬ್ವೆ ಹಾಗೂ ಏಷ್ಯಾ-ಪೆಸಿಫಿಕ್‌ನಿಂದ ಒಮಾನ್, ನೇಪಾಳ ಮತ್ತು ಯುಎಇ ತಂಡಗಳು ಅರ್ಹತೆ ಗಳಿಸಿವೆ. ಈ ಮೂಲಕ ವಿಶ್ವಕಪ್‌ನ 20 ತಂಡಗಳ ಪಟ್ಟಿ ಸಂಪೂರ್ಣಗೊಂಡಿದೆ.

    ಈ ಬಾರಿ ವಿಶ್ವಕಪ್‌ನಲ್ಲಿ ಏಷ್ಯಾದ ಪ್ರಭಾವ ಸ್ಪಷ್ಟವಾಗಿದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ, ಒಮಾನ್, ನೇಪಾಳ ಮತ್ತು ಯುಎಇ ಸೇರಿ ಒಟ್ಟು ಎಂಟು ಏಷ್ಯದ ತಂಡಗಳು ಸ್ಪರ್ಧಿಸುತ್ತಿವೆ. ಈ ರಾಷ್ಟ್ರಗಳು ತಮ್ಮ ತಮ್ಮ ಶೈಲಿಯಲ್ಲಿ ಟೂರ್ನಿಗೆ ಹೊಸ ಚೈತನ್ಯವನ್ನು ತರುತ್ತವೆ ಎನ್ನುವುದು ಅಭಿಮಾನಿಗಳ ನಂಬಿಕೆಯಾಗಿದೆ.

    ವಿಶ್ವಕಪ್‌ನ ಪಂದ್ಯಗಳು ಭಾರತ ಮತ್ತು ಶ್ರೀಲಂಕಾದ ವಿವಿಧ ಮೈದಾನಗಳಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನೀಡಲಿವೆ. ಹಲವು ಹೊಸ ತಂಡಗಳು ವಿಶ್ವಕಪ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ನೇಪಾಳ ಮತ್ತು ಇಟಲಿ ಮೊದಲ ಬಾರಿಗೆ ಈ ಮಟ್ಟದ ಸ್ಪರ್ಧೆಯಲ್ಲಿ ಆಡಲಿರುವುದು ವಿಶೇಷವಾಗಿದ್ದು, ಸಣ್ಣ ರಾಷ್ಟ್ರಗಳ ಕ್ರಿಕೆಟ್ ಅಭಿವೃದ್ಧಿಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.

    ಒಟ್ಟಿನಲ್ಲಿ, 2026ರ ಟಿ20 ವಿಶ್ವಕಪ್ ಕೇವಲ ಕ್ರಿಕೆಟ್ ಟೂರ್ನಿಯಷ್ಟೇ ಅಲ್ಲ, ಅದು ಜಾಗತಿಕ ಕ್ರಿಕೆಟ್ ಕುಟುಂಬದ ವೈವಿಧ್ಯತೆಯನ್ನು ತೋರಿಸುವ ಮಹಾ ಹಬ್ಬವಾಗಿದೆ. ಹೊಸ ತಂಡಗಳ ಉತ್ಸಾಹ, ಹಿರಿಯ ತಂಡಗಳ ಅನುಭವ  ಇವೆಲ್ಲ ಸೇರಿ ಈ ಬಾರಿ ವಿಶ್ವಕಪ್ ಅನ್ನು ಇನ್ನೂ ಹೆಚ್ಚು ರೋಚಕಗೊಳಿಸಿವೆ.

    ಈ ಬಾರಿ ಅಭಿಮಾನಿಗಳ ಬಾಯಲ್ಲಿ ಒಂದೇ ಪ್ರಶ್ನೆ “ಯಾರು ಗೆಲ್ಲುತ್ತಾರೆ 2026ರ ಟಿ20 ವಿಶ್ವಕಪ್?” ಅದಕ್ಕೆ ಉತ್ತರ ಇನ್ನೇನು ಕೆಲವು ತಿಂಗಳಲ್ಲಿ ಸಿಗಲಿದೆ.

  • ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಆರ್ ಸಿ ಬಿ ನಾಯಕ

    ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಆರ್ ಸಿ ಬಿ ನಾಯಕ

    ಕ್ರಿಕೆಟ್ ಅಭಿಮಾನಿಗಳಿಗೆ ಇಂದೋರ್‌ನ ರಣಜಿ ಮೈದಾನದಲ್ಲಿ ಇಂದು ಹಬ್ಬದ ವಾತಾವರಣವಿತ್ತು. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದ ರಜತ್ ಪಾಟಿದಾರ್, ಈಗ ದೇಶೀಯ ಕ್ರಿಕೆಟ್‌ನಲ್ಲಿಯೂ ಅದೇ ರೀತಿ ಮಿಂಚಿದ್ದಾರೆ. 2025-26ರ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಪಂಜಾಬ್ ವಿರುದ್ಧ ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

    ಮಧ್ಯಪ್ರದೇಶದ ಪರ ಹೊಸ ಆಲ್-ಫಾರ್ಮ್ಯಾಟ್ ನಾಯಕನಾಗಿ ಕಣಕ್ಕಿಳಿದ ರಜತ್ ಪಾಟಿದಾರ್, ತನ್ನ ನಾಯಕತ್ವದ ಮೊದಲ ಇನ್ನಿಂಗ್ಸ್‌ನಲ್ಲೇ ನೂರರ ಗಡಿ ತಲುಪಿ ಅಜೇಯನಾಗಿ ಉಳಿದಿದ್ದಾರೆ. ಅವರು 185 ಎಸೆತಗಳಲ್ಲಿ 107 ರನ್‌ಗಳನ್ನು ಬಾರಿಸಿದ್ದು, ಅದರಲ್ಲಿ 12 ಬೌಂಡರಿಗಳಿವೆ. ಅವರ ಈ ಇನ್ನಿಂಗ್ಸ್ ತಂಡಕ್ಕೆ ಆತ್ಮವಿಶ್ವಾಸ ತುಂಬುವಂತದ್ದಾಗಿತ್ತು.

    ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿ 232 ರನ್‌ಗಳಲ್ಲಿ ಸೀಮಿತವಾಯಿತು. ಮಧ್ಯಪ್ರದೇಶದ ಆರಂಭ ಸ್ವಲ್ಪ ನಿಧಾನವಾಗಿದ್ದರೂ, ನಾಲ್ಕು ವಿಕೆಟ್‌ಗಳಿಗೆ ಕೇವಲ 155 ರನ್‌ಗಳಷ್ಟಿದ್ದಾಗ ತಂಡ ಒತ್ತಡದಲ್ಲಿತ್ತು. ಇದೇ ಸಂದರ್ಭದಲ್ಲಿ ನಾಯಕ ಪಾಟಿದಾರ್ ಕ್ರೀಸ್‌ನಲ್ಲೇ ನಿಂತು ಆಟದ ಹೊಣೆ ಹೊತ್ತರು. ಅವರಿಗೆ ಸಹಕಾರಿಯಾಗಿ ಬಂದ ವೆಂಕಟೇಶ್ ಅಯ್ಯರ್ 114 ಎಸೆತಗಳಲ್ಲಿ 73 ರನ್‌ಗಳನ್ನು ಬಾರಿಸಿದರು. ಇವರಿಬ್ಬರ ನಡುವಿನ 147 ರನ್‌ಗಳ ಜೊತೆಯಾಟ ತಂಡವನ್ನು 300 ರನ್‌ಗಳ ಗಡಿ ದಾಟಿಸಿತು.

    ಪಾಟಿದಾರ್ ಅವರ ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸ, ತಾಳ್ಮೆ, ಮತ್ತು ನಾಯಕತ್ವದ ಪೌರುಷ ಸ್ಪಷ್ಟವಾಗಿತ್ತು. ಅವರು ಪ್ರತಿ ಶಾಟ್‌ನಲ್ಲಿ ಪರಿಪಕ್ವತೆಯ ಸಂಕೇತ ತೋರಿದರು. ಶತಕ ಪೂರೈಸಿದ ನಂತರವೂ ಬ್ಯಾಟ್ ಕೈಬಿಡದೆ ಇನ್ನಿಂಗ್ಸ್ ಮುಂದುವರೆಸಿದ ರಜತ್, ಎರಡನೇ ದಿನದಾಟದ ಅಂತ್ಯಕ್ಕೆ ಅಜೇಯರಾಗಿದ್ದರು. ಪಂದ್ಯ ನಡೆಯುತ್ತಿರುವ ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ, ಅಭಿಮಾನಿಗಳು ಅವರ ಬ್ಯಾಟಿಂಗ್‌ಗೆ ತಟ್ಟಿದ ಚಪ್ಪಾಳಿಯು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು.

    ದೇಶೀಯ ಕ್ರಿಕೆಟ್‌ನಲ್ಲಿ ಪಾಟಿದಾರ್ ಈಗಾಗಲೇ ಸ್ಥಿರ ಪ್ರದರ್ಶನದ ಹೆಸರನ್ನು ಗಳಿಸಿದ್ದಾರೆ. ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರು ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಕಳೆದ ರಣಜಿ ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಾಗಿದ್ದ ಅವರು 529 ರನ್‌ಗಳನ್ನು 48.09 ಸರಾಸರಿಯಲ್ಲಿ ಗಳಿಸಿದ್ದರು.

    ಈ ಸಾಧನೆಯಿಂದಾಗಿ ರಜತ್ ಪಾಟಿದಾರ್ ಕೇವಲ ಮಧ್ಯಪ್ರದೇಶದ ನಾಯಕನಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ನ ಭವಿಷ್ಯದ ಪ್ರಮುಖ ನಾಯಕನಾಗುವ ಸಾಧ್ಯತೆಗಳನ್ನೂ ಬಲಪಡಿಸಿದ್ದಾರೆ. ಐಪಿಎಲ್‌ನಲ್ಲಿ ತನ್ನ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದ ಈ ನಾಯಕ, ಈಗ ಭಾರತಕ್ಕಾಗಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ಮಿಂಚುವ ಭರವಸೆಯನ್ನು ನೀಡುತ್ತಿದ್ದಾರೆ.

  • ಮಗುವಿನ ತಪ್ಪು ಸಹಿಸಲು ಸಾಧ್ಯವೇ? — ವರುಣ್ ಚಕ್ರವರ್ತಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ

    ಮಗುವಿನ ತಪ್ಪು ಸಹಿಸಲು ಸಾಧ್ಯವೇ? — ವರುಣ್ ಚಕ್ರವರ್ತಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ

    ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿವೆ. ಆದರೆ ಕೆಲವೊಮ್ಮೆ ಅಲ್ಲಿ ನಡೆಯುವ ನಕಾರಾತ್ಮಕ ಪ್ರತಿಕ್ರಿಯೆಗಳು ಅತಿಯಾಗಿ ಬಿಂಬಿಸುತ್ತವೆ. ಇತ್ತೀಚೆಗೆ ಜನಪ್ರಿಯ ಟೆಲಿವಿಷನ್ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್‌ಪತಿ (KBC)ಯಲ್ಲಿ ಭಾಗವಹಿಸಿದ್ದ ಬಾಲಕ ಇಶಿತ್ ಭಟ್‌ನ ಘಟನೆಯೂ ಅದಕ್ಕೆ ಒಂದು ಉದಾಹರಣೆಯಾಗಿದ.

    ಇಶಿತ್ ಭಟ್ ಎಂಬ ಐದನೇ ತರಗತಿ ವಿದ್ಯಾರ್ಥಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ. ಆಟದ ಸಮಯದಲ್ಲಿ ಅವನ ಮಾತುಗಳು ಮತ್ತು ವರ್ತನೆ ಕೆಲವರಿಗೆ ಇಷ್ಟವಾಗಲಿಲ್ಲ. “ನನಗೆ ನಿಯಮಗಳು ಗೊತ್ತು, ಆದ್ದರಿಂದ ನೀವು ಹೇಳಬೇಕಾಗಿಲ್ಲ” ಎಂದು ಹೇಳಿದ ಅವನ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಯಿತು. ಕೆಲವರು ಅವನ ನಡವಳಿಕೆಯನ್ನು ಅಸಭ್ಯ ಎಂದು ಖಂಡಿಸಿ ತೀವ್ರವಾಗಿ ಟ್ರೋಲ್ ಮಾಡಿದರು.

    ಈ ಘಟನೆ ಗಮನಿಸಿದ ಕ್ರಿಕೆಟ್ ಆಟಗಾರ ವರುಣ್ ಚಕ್ರವರ್ತಿ ಮಗುವಿನ ಪರವಾಗಿ ಧ್ವನಿ ಎತ್ತಿದ್ದಾರೆ. ಅವರು ತಮ್ಮ ‘X’ (Twitter) ಖಾತೆಯಲ್ಲಿ ಬರೆದ ಸಂದೇಶದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಈ ರೀತಿಯ ನಿಂದನೆಯನ್ನು ಖಂಡಿಸಿದ್ದಾರೆ.

    “ಇಂದಿನ ಸಾಮಾಜಿಕ ಮಾಧ್ಯಮಗಳು ಯಾವುದೇ ಅರ್ಥವಿಲ್ಲದೆ ಬಾಯಿ ಬಿಡುವ ಹೇಡಿಗಳ ತಾಣವಾಗಿ ಮಾರ್ಪಟ್ಟಿವೆ. ದೇವರ ದಯೆ, ಆತ ಇನ್ನೂ ಮಗು! ಅವನನ್ನು ಬೆಳೆದುಕೊಳ್ಳಲು ಬಿಡಿ. ಒಂದು ಮಗುವಿನ ತಪ್ಪನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ, ನಾವು ದೊಡ್ಡವರ ಹುಚ್ಚುತನಗಳನ್ನು ಹೇಗೆ ಸಹಿಸುತ್ತೇವೆ?” ಎಂದು ಪ್ರಶ್ನಿಸಿದ್ದಾರೆ.

    https://x.com/chakaravarthy29/status/1978447488924168630

    ವರಣ್ ಅವರ ಈ ಮಾತು ಬಹು ಜನರ ಹೃದಯ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದರು. ಏಕೆಂದರೆ ಒಂದು ಬಾಲಕ ಮಾಡಿದ ಸಣ್ಣ ತಪ್ಪಿಗೆ ಇಷ್ಟು ಕಠಿಣ ಪ್ರತಿಕ್ರಿಯೆ ನೀಡುವುದು ಅನಾವಶ್ಯಕ ಎಂಬ ಅಭಿಪ್ರಾಯ ಹೆಚ್ಚು ಜನರಿಂದ ಕೇಳಿಬಂದಿತು.

    ಅಮಿತಾಭ್ ಬಚ್ಚನ್ ಅವರು ಕೂಡಾ ಈ ಘಟನೆಯನ್ನು ಶಾಂತವಾಗಿ ನಿಭಾಯಿಸಿದರು. ಅವರು ಮಗುವಿನ ವರ್ತನೆಗೆ ಅಸಹನೆ ತೋರದೆ, “ಕೆಲವೊಮ್ಮೆ ಮಕ್ಕಳು ಹೆಚ್ಚು ಆತ್ಮವಿಶ್ವಾಸದಿಂದ ತಪ್ಪು ಮಾಡುತ್ತಾರೆ” ಎಂದು ಹೇಳಿ ಈ ವಿಷಯವನ್ನು ಅಲ್ಲೇ ಕೈ ಚಲ್ಲಿದರು. ಅವರ ಈ ತಾಳ್ಮೆಗೂ ವರುಣ್ ಚಕ್ರವರ್ತಿಯ ಮಾನವೀಯ ನಿಲುವಿಗೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಕೇವಲ ಒಂದು ಟಿವಿ ಘಟನೆಯಲ್ಲ, ಇದು ಸಮಾಜದ ಮನೋಭಾವನೆಗೂ ಕನ್ನಡಿಯನ್ನು ಹಿಡಿದಂತಾಗಿದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನಾದರೂ ಟ್ರೋಲ್ ಮಾಡುವುದನ್ನು ಜನರು ಮನರಂಜನೆ ಎಂದುಕೊಳ್ಳುತ್ತಾರೆ. ಆದರೆ ಅದರ ಅದು ಕೇವಲ ಒಂದು ಮಗು ಆಗಿದ್ದರೆ, ನಾವು ದೊಡ್ಡವರಾಗಿ ನಮ್ಮ ನಡವಳಿಕೆಯನ್ನು ತಿರುಗಿ ನೋಡಬೇಕಾದ ಸಮಯ ಇದಾಗಿದೆ.

    ಮಕ್ಕಳಿಂದ ತಪ್ಪುಗಳು ಆಗುವುದು ಸಹಜ ಅವರ ಬೆಳವಣಿಗೆಯ ಭಾಗವಾಗಿ ನೋಡಬೇಕಾದ ಈ ತಪ್ಪುಗಳನ್ನು ನಾವು ದೊಡ್ಡ ವಿಷಯವನ್ನಾಗಿ ಮಾಡಿದರೆ, ಅದು ಅವರ ಮನಸ್ಸಿನಲ್ಲಿ ಭಯ ಮತ್ತು ನಾಚಿಕೆ ಹುಟ್ಟಿಸುತ್ತದೆ. ಇಂತಹ ಘಟನೆಗಳು ನಮ್ಮ ಸಮಾಜದ ಸಂವೇದನೆಯನ್ನು ಪರೀಕ್ಷಿಸುವಂತಿವೆ.

    ವರುಣ್ ಚಕ್ರವರ್ತಿಯ ಮಾತುಗಳಲ್ಲಿ ನೆನಪಿಸಿಕೊಳ್ಳಬೇಕಾದದ್ದು ಒಂದೇ  “ಒಬ್ಬ ಬಾಲಕ ಮಾಡಿದ ಸಣ್ಣ ತಪ್ಪನ್ನು ಕ್ಷಮಿಸದಿದ್ದರೆ ನಾವು ನಮ್ಮ ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ.”

  • ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ರಾಜ್ ಕೋಟ್ : ರಣಜಿ ಟ್ರೋಫಿಯ ಎಲೈಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಶತಕ ಜೊತೆಯಾಟದ ನೆರವಿನಿಂದ ಕರ್ನಾಟಕ ತಂಡವು ಬಲಿಷ್ಠ ಸೌರಾಷ್ಟ್ರ ವಿರುದ್ಧ ಮೊದಲ ದಿನದಲ್ಲೇ ಪಂದ್ಯದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

    ಟಾಸ್ ಗೆದ್ದ ಸೌರಾಷ್ಟ್ರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಕರ್ನಾಟಕಕ್ಕೆ ಸತತ ಎರಡು ವಿಕೆಟ್ ನಷ್ಟವಾದರೂ, ಬಳಿಕ ಪಡಿಕ್ಕಲ್ ಮತ್ತು ಕರುಣ್ ನಾಯರ್ ಜೋಡಿಯ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

    ಆರಂಭಿಕ ಆಟಗಾರರಾಗಿ ನಿಕಿನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆರಂಭಿಕ ಜೋಡಿ ಸ್ವಲ್ಪ ಸಮಯ ಕ್ರೀಸ್ ನಲ್ಲಿ ನಿಂತು ಎದುರಾಳಿ ತಂಡಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಮೈದಾನಕ್ಕಿಳಿದ ಎಡಗೈ ಬ್ಯಾಟರ್ ಪಡಿಕ್ಕಲ್ 11 ಬೌಂಡರಿ ಸಹಿತ 141 ಎಸೆತಗಳಲ್ಲಿ 96 ರನ್ ಗಳಿಸಿ ಶತಕದ ಹತ್ತಿರ ತಲುಪಿ ಶತಕ ವಂಚಿತರಾದರು,

    Photo Credit: BCCI Domestic

    ಬಳಿಕ ಕಣಕ್ಕಿಳಿದ ಕರುಣ್ ನಾಯರ್ 9 ಬೌಂಡರಿ ಸಹಿತ 126 ಎಸೆತಗಳಲ್ಲಿ 73 ರನ್ ಗಳ ಸೊಗಸಾದ ಆಟವಾಡಿದರು. ಪಡಿಕ್ಕಲ್ ಮತ್ತು ಕರುಣ್ ಇವರಿಬ್ಬರ ನಡುವಿನ 146 ರನ್‌ಗಳ ತೃತೀಯ ವಿಕೆಟ್ ಜೊತೆಯಾಟ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ರನ್ ಕಲೆಹಾಕಲು ಸುಲಭವಾಯಿತು.

    ನಂತರ ಬ್ಯಾಟ್ ಬೀಸಲು ಬಂದ ಸ್ಮರಣ್ ಮತ್ತು ಶ್ರೇಯಸ್ ಗೋಪಾಲ್ ಅವರ 81 ರನ್‌ಗಳ ಜೊತೆಯಾಟ ಕರ್ನಾಟಕದ ರನ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿ ಮುಂದಿನ ದಿನದಾಟಕ್ಕೆ ಕಾಲಿಟ್ಟಿತು.

    ಸೌರಾಷ್ಟ್ರ ಪರವಾಗಿ ಬೌಲ್ ಮಾಡಿದ ಸ್ಪಿನ್ನರ್ ಧರ್ಮೇಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಕರ್ನಾಟಕದ ಬ್ಯಾಟರ್ ಗಳನ್ನು ಕಟ್ಟಿಹಾಕಲು ಮುಂದಾದರೂ ಕೂಡ ಫಲ ದೊರೆಯಲಿಲ್ಲ.

    ಪಡಿಕ್ಕಲ್ ರವರ ಲಯಬದ್ದ ಬೌಂಡರಿಗಳು ಮತ್ತು ಕರುಣ್ ನಾಯರ್ ಅವರ ಉತ್ತಮ ಬ್ಯಾಟಿಂಗ್ ಶೈಲಿ ಕರ್ನಾಟಕದ ಅಭಿಮಾನಿಗಳಿಗೆ ನಾಳಿನ ಪಂದ್ಯವನ್ನು ನೋಡಲು ಉತ್ಸಾಹ ಭರಿತರಾಗಿ ಕಾಯುವಂತೆ ಮಾಡಿದೆ.

  • ವಾಲಿಬಾಲ್: ಕ್ಯಾತನಾಳ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    ವಾಲಿಬಾಲ್: ಕ್ಯಾತನಾಳ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:
    ಆಗಸ್ಟ್ 5 ರಂದು ಶಹಾಪುರ ನಗರದಲ್ಲಿ ನಡೆದ ಹೋಬಳಿ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಡಗೇರಾ ತಾಲೂಕಿನ ಕ್ಯಾತನಾಳ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

     
    ಮಕ್ಕಳ ಸಾಧನೆ ಕುರಿತು ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಬಾಗ್ಲಿ ಮಾತನಾಡಿದರು.ಗ್ರಾಮೀಣ  ಪ್ರತಿಭೆಗಳಿಗೆ ಕ್ರೀಡೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡುತ್ತಿದ್ದು ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಮುಂದೆ ನಡೆಯುವ  ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಎಂದು ಹಾರೈಸಿದರು.
     
    ಈ ಮಕ್ಕಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಬಾಗ್ಲಿ ,ಶಿಕ್ಷಕ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಗ್ರಾ ಪಂ ಸದಸ್ಯರಾದ ಮಂಜುಳಾ ಎಚ್. ಬಿ ಪಾಟೀಲ, ಮಲ್ಲಿಕಾರ್ಜುನ್ ಠಾಣಗುಂದಿ , ವಿದ್ಯಾಧರ್ ಜಾಕಾ, ದೇವೇಂದ್ರಪ್ಪ ಗುಡ್ಡೆನೂರು, ಸಿದ್ದಮ್ಮ, ದೇವೇಂದ್ರಪ್ಪ ಮಲ್ಲಳ್ಳಿ, ಸೋಫಿಯಾ ಬೇಗಂ, ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.