Category: Special News

  • ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ತಪ್ಪು ಹ್ಯಾಶ್ ಟ್ಯಾಗ್ : ಸಾರ್ವಜನಿಕರಲ್ಲಿ ಗೊಂದಲ

    ಮೇಲಧಿಕಾರಿಗಳಿಗಿಂತ ಈತನೇ ದೊಡ್ಡವನಾ.?

    ಕಲಬುರ್ಗಿ: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಪೋಸ್ಟಗಳಲ್ಲಿ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುವುದರಿಂದ ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.

    ಹೌದು ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ರಚಿಸಲಾಗಿರುವ DIPR Kalaburgi ಪೇಜ್ ನಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಅಪ್ಲೋಡ್ ಮಾಡುವ ವೇಳೆ ಇಲಾಖೆಯ ಸಿಬ್ಬಂದಿ ರವಿ ಮೀರಾಸ್ಕಾರ್ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಉದ್ಭವಗೊಂಡಿದೆ.

    ಅದೇನೆಂದರೆ ರವಿ ಮಿರಾಸ್ಕರ್ DIPR Kalaburgi ಪೇಜ್ ನಲ್ಲಿ ದಿನ ನಿತ್ಯ ಅಪ್ಲೋಡ್ ಮಾಡುವ ಪೋಸ್ಟ್ ನಲ್ಲಿ ರವಿ ಮೀರಾಸಕರ್ ಪ್ರಾದೇಶಿಕ ಆಯುಕ್ತರು ಕಲಬುರ್ಗಿ ವಿಭಾಗ ಎಂಬ ಹ್ಯಾಶ್ಟ್ಯಾಗ್ ಕಾಣಿಸುತ್ತದೆ, ಇದು ನೋಡುಗರಿಗೆ ಬೇರೆ ರೀತಿಯ ಸಂದೇಶವನ್ನೇ ರವಾನಿಸುತ್ತದೆ,

    ಹಾಗಾದ್ರೆ ಕಲಬುರಗಿ ಇಲಾಖೆಯ ಪ್ರಾದೇಶಿಕ ಆಯುಕ್ತರಾದ್ರು ಯಾರು.?

    ಸಿಬ್ಬಂದಿಗಳು ಈ ರೀತಿಯಾಗಿ ತಮ್ಮ ಹೆಸರನ್ನು ಬಳಸಿ ಇಲಾಖೆಯ ಮೇಲಾಧಿಕಾರಿಗಳ ಹ್ಯಾಶ್ಟ್ಯಾಗ್ ಬಳಸಿದಾಗ DIPR ಕಲಬುರಗಿ ವಿಭಾಗದ ಆಯುಕ್ತರು ಇವರೇನಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ, ಇದ್ದರಿಂದ ಇಲಾಖೆಗೆ ಅರ್ಜಿ ಬರೆಯುವವರಿಗೆ ಇದು ತಪ್ಪು ಮಾಹಿತಿ ತಿಳಿಸುತ್ತದೆ ಅಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ನೋಡುವರಿಗೂ ಕೂಡ ಇಂತಹ ಹ್ಯಾಶ್ಟ್ಯಾಗ್ ತಪ್ಪು ಮಾಹಿತಿ ನೀಡುತ್ತದೆ.

    ರವಿ ಮಿರಾಸ್ಕರ್ ಎಂಬತಾ ಪೋಸ್ಟ್ ಮಾಡುವ ವೇಳೆ ಹ್ಯಾಶ್ಟ್ಯಾಗ್ ನಲ್ಲಿ ಅಲ್ಪವಿರಾಮ ಚಿಹ್ನೆ ಬಳಸದೆ ಇಲಾಖೆಯ ಮುಖ್ಯಸ್ಥರ ಸ್ಥಾನದ ಹ್ಯಾಶ್ಟ್ಯಾಗ್ ಬಳಸಿರುವುದರಿಂದ ಈ ಪ್ರಶ್ನೆ ಉದ್ಭವವಾಗಿದೆ.

    ಇಲ್ಲಿ ಮತ್ತೊಂದು ವಿಷಯವೇನೆಂದರೆ ಸಚಿವರು ಹೆಸರಿನ ಮುಂದೆಯೇ ಮೇಲಾದಿಕಾರಿಗಳ ಹೆಸರು ಬಳಸಬೇಕೆಂಬ ಪರಿಜ್ಞಾನತೆ ಇವರಿಗಿಲ್ವಾ. ಹಾಗಾದ್ರೆ ಮೇಲಾದಿಕಾರಿಗಳಿಗಿಂತ ಇವರೇ ದೊಡ್ಡವರಾ.?

    ಓರ್ವ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ನೌಕರರು ಅಂತರ್ಜಾಲದ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಗಳ ಅವಕಾಶಗಳನ್ನು ಮೀರಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ವ್ಯಕ್ತಪಡಿಸುವುದು ಕಂಡುಬರುತ್ತಿದೆ.

    ಮಾಹಿತಿ ಮತ್ತು ಸಂವಹನ ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿ ಕೊಂಡು ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ವಾರ್ತಾ ಇಲಾಖೆ ಮುಂದಾಗಿದೆ. ಆದ್ರೆ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸಿ ಮುಂದೆ ಇಲಾಖೆಯ ಹ್ಯಾಶ್ ಟ್ಯಾಗ್ ಬಳಸಿದರೆ ಮೇಲಾಧಿಕಾರಿಗಳಿಗೆ ಇರುವ ಬೆಲೆಯಾದರು ಏನು?

  • ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ

    ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ


    *ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು*

    *ಸುಪ್ರೀಂಕೋರ್ಟ್ ಆದೇಶಕ್ಕೂ ಇಲ್ಲಿಲ್ಲ ಕವಡೆ ಕಾಸಿನ ಕಿಮ್ಮತ್ತು*

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ :*
    ವಾಹನಗಳಿಗೆ ಕೂಲಿಂಗ್ ಪೇಪರ್ ಹಾಕಿಕೊಂಡು ಖಾಸಗಿ ವಾಹನಗಳು ತಿರುಗಾಡುವುದು ಅಂತಹ ದೊಡ್ಡ ವಿಷಯವೇನಲ್ಲವೆಂದರೂ ಸಹ ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯೇ ಆಗಿದೆ.ಆದರೆ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಯ ಅನೇಕ ವಾಹನಗಳೇ ಸುಪ್ರಿಂ ಆದೇಶ ಧಿಕ್ಕರಿಸಿ ಕಪ್ಪು ಬಣ್ಣದ ಪೇಪರ್ ಹಾಕಿಕೊಂಡು ರಾಜಾರೋಷವಾಗಿ ತಿರುಗುತ್ತಿರುವುದು ಸೋಜಿಗ ಮೂಡಿಸಿದೆ.

    ಹೌದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸುವ ಮೂಲಕ ಅಂಧಾ ದರ್ಬಾರ್ ನಡೆಸುತ್ತಿರುವುದಕ್ಕೆ ಹತ್ತು ಹಲವು ಉದಾಹರಣೆಗಳು ನಿತ್ಯ ಕಂಡು ಸಿಗುತ್ತವೆ ಇವುಗಳ ಪೈಕಿ ಕಪ್ಪು ಪರದೆ ಅಳವಡಿಸಿಕೊಂಡು ತಿರುಗುವ ವಾಹನಗಳು ಅದರಲ್ಲೂ ಸರ್ಕಾರಿ ವಾಹನಗಳ ತಿರುಗುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿರುವುದು ತಾಜಾ ಉದಾಹರಣೆ ಇಲ್ಲಿದೆ ನೋಡಿ,

    ಕಾನೂನು ಕಾಪಾಡಬೇಕಾದ ಅಧಿಕಾರಿಗಳು ತಮ್ಮ ಸರ್ಕಾರಿ ಕಾರಿಗೆ ಕಪ್ಪು ಪರದೆ (ಕೂಲಿಂಗ್ ಪೇಪರ್) ಹಾಕಿಕೊಂಡಿರುವ ಪ್ರಕರಣಗಳು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದವು.

    ಜಿಲ್ಲೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ತಾವು ಬಳಸುವ ಇಲಾಖೆ ಕಾರುಗಳಿಗೆ ಇಂತಹ ಕಪ್ಪು ಪರದೆ ಟಿಂಟೆಡ್ ಗ್ಲಾಸ್ ಅಳವಡಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

    ಸುಪ್ರಿಂ ಆದೇಶ ಮತ್ತು ಸರ್ಕಾರದ ಸುತ್ತೋಲೆಗಳ ನಿಯಮದ ಪ್ರಕಾರ ಕಾರಿನ ವಿಂಡೋಗೆ ಟಿಂಟೆಡ್ ಗ್ಲಾಸ್ ಹಾಕುವಂತಿಲ್ಲ. ಟಿಂಟೆಡ್ ಗ್ಲಾಸ್‌ಅನ್ನು ಹಾಕಿಕೊಂಡು ತಿರುಗಾಡುವುದು ನಿಯಮಕ್ಕೆ ವಿರುದ್ಧವಾದುದು. ಆದಾಗ್ಯೂ ಕೆಲ ಸರ್ಕಾರಿ ಕಾರುಗಳಿಗೆ ಈ ರೀತಿಯ ಗ್ಲಾಸ್ ಬಳಕೆ ಆಗುತ್ತಿದೆ.

    ಶೇ. 70 ರಷ್ಟು ಪಾರದರ್ಶಕವಾಗಿರಬೇಕು ಎಂಬ ನಿಯಮವನ್ನು ಅಧಿಕಾರಿಗಳ ಕಾರುಗಳೇ ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ತಿರುಗುತ್ತಿದ್ದರೂ ಕ್ಯಾರೆ ಎನ್ನುವವರಿಲ್ಲ. ಕೆಎ 33 ಎಂ 3090 ನಂಬರಿನ ವಾಹನ ಹಾಗೂ ಅರಣ್ಯ ಇಲಾಖೆಯ ಕೆಎ 04 ಜಿ 1879 ವಾಹನಗಳು ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಕಂಡುಬಂತು.

    ಈ ಇಲಾಖೆಗಳ ಅಧಿಕಾರಿಗಳೇ ಸ್ವತಃ ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ನೋಡಿ ನಾಗರಿಕರು “ಏನು ಮಾಡೊಕ್ಕಾಗೊದಿಲ್ಲ” ಎಂದುಕೊಳ್ಳುತ್ತಾ ಮುಂದಕ್ಕೆ ಹೋಗುತ್ತಿರುವುದು ಕಂಡುಬಂತು.

    ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಆರ್‌ಟಿಒ ಅಧಿಕಾರಿಗಳು, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಸುಪ್ರೀಂ ಆದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಸುಪ್ರಿಂ ಕೋರ್ಟ್ ಆದೇಶವೂ ಈ ಅಧಿಕಾರಿಗಳಿಗೂ ಗೊತ್ತಿಲ್ಲವೋ ಅಥವಾ ಏನು ಮಾಡಿದರೂ ನಡೆಯುತ್ತದೆ ಎಂಬ ಅಸಡ್ಡೆಯೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸಲು ಅಧಿಕಾರಿ/ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ

    ವರದಿ:ಕುದಾನ್ ಸಾಬ್
    ಯಾದಗಿರಿ: ಜಿಲ್ಲೆಯ ವಡಗೇರ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಯಾವೊಬ್ಬ ಸಿಬ್ಬಂದಿಯೂ ಕಚೇರಿಯ ಕರ್ತವ್ಯಯವಧಿಯಲ್ಲಿ ಸಿಬ್ಬಂದಿಯ ಗುರುತಿನ ಚೀಟಿ ಧರಿಸದೇ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವುದು ನಡೆಯುತ್ತಿದೆ.

    ಈ ಕುರಿತು ಪತ್ರಿಕೆ ರಿಯಾಲಿಟಿ ಚೆಕ್ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಐಡಿ ಕಾರ್ಡ್ ಬಗ್ಗೆ ಸಿಬ್ಬಂದಿಯವರಿಗೆ ಕೇಳಿದರೆ, ಟ್ಯಾಗ್ ಇಲ್ಲಾ, ಐಡಿ ಕಾರ್ಡ್ ಕೊಟ್ಟಿಲ್ಲ ಎಂಬ ಸಬೂಬುಗಳ ಕಥೆ ಕಟ್ಟುತ್ತಾರೆ ಹೊರತು ಅದನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಐಡಿ ಕಾರ್ಡ್ ತೆಗೆದುಕೊಳ್ಳುವ ಕನಿಷ್ಠ ಸೌಜನ್ಯವು ಇವರಿಗಿಲ್ಲ,

    ಮೊದಲೇ ಹೊಸ ತಾಲ್ಲೂಕು ಆಗಿದ್ದು, ಅಲ್ಲದೇ ತೀರ ಹಿಂದುಳಿದ ಭಾಗವಾಗಿರುವುದರಿಂದ ಯಾವುದೇ ಜಿಲ್ಲಾ ಇಲ್ಲವೇ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲವೇ ಪ್ರಮುಖರು ಬರುವ ಸಾಧ್ಯತೆಯೂ ಇಲ್ಲದಿರುವುದರಿಂದ ಸಿಬ್ಬಂದಿಗೆ ಕಾನೂನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಎಳ್ಳಷ್ಟು ಚಿಂತೆ ಇಲ್ಲದಿರುವುದು ಕಂಡುಬಂತು.

    ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು 16.03.2021 ರಂದು ಈ ಕುರಿತು ಸ್ಪಷ್ಟ ಆದೇಶ (ಸಂಖ್ಯೆ: ಸಿ.ಆ.ಸು.ಇ 12 ಕತವ 2021) ಹೊರಿಡಿಸಿದ್ದು, ಇಲಾಖೆ ನೌಕರರು ಅಧಿಕಾರಿಗಳು ತಮ್ಮ ತಮ್ಮ ಹೆಸರಿನ ಹುದ್ದೆಯ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕೆಂಬ ಸುತ್ತೋಲೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದು ಇರುತ್ತದೆ. ಇದರ ಪ್ರಕಾರ ಎಲ್ಲ ಸರ್ಕಾರಿ ನೌಕರರು, ನಿಗಮಗಳ ನೌಕರರುಗಳಿಗೆ ಇದು ಅನ್ವಯವಾಗುತ್ತದೆ.

    ಆದರೆ ವಡಗೇರಾ ತಾಲ್ಲೂಕಿನಲ್ಲಿ ಇದರ ಪಾಲನೆ ಮಾತ್ರ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಕುರಿತು ತಹಸೀಲ್ದಾರ ಶ್ರೀನಿವಾಸ ಚಾಪಲ್ ರನ್ನು ವಿಚಾರಿಸಿದರೆ ಈ ಬಗ್ಗೆ ಐಡಿ ಕಾರ್ಡ್ ಹಾಕಿಕೊಂಡು ಕುಳಿತುಕೊಳ್ಳಬೇಕೆಂದು ಏನಾದರು ಇದೆಯಾ, ಆ ರೀತಿ ನಿಯಮವೇನು ಇಲ್ಲಾ ಎಂದು ಪತ್ರಿಕೆಗೆ ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದರು.

    ಹೀಗಾಗಿ ತಾಲ್ಲೂಕಿನಲ್ಲಿ ಮುಖ್ಯಸ್ಥರೇ ಹೀಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಇನ್ನು ಸಿಬ್ಬಂದಿಯವರ ಕಥೆ ಹೇಗಿರಬೇಡ? ಇದನ್ನಂತೂ ಹೇಳಲು ಬಾರದು, ಗ್ರಾಮೀಣ ಪ್ರದೇಶದಲ್ಲಿ ಒಂದು ಜನಪದರ ಗಾದೆ ಚಾಲ್ತಿಯಲ್ಲಿದೆ ಅದೇನೆಂದರೆ ಶಾಲೆಲಿ ಮಾಸ್ತರ ನಿಂತು ಸೂಸೂ ಮಾಡಿದರೆ ಮಕ್ಕಳು ಓಡಾಡಿ ಮಾಡಿದರು ಎಂಬ ಮಾತಿದೆ.

    ಹೀಗೆಯೇ ಜಿಲ್ಲೆಯಲ್ಲಿಯೂ ಸಹ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದ್ದು, ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಜ್ಞಾನ ಇಲ್ಲದಿದ್ದರೆ ಸಿಬ್ಬಂದಿಯವರಂತೂ ಇನ್ನು ಅಧ್ವಾನವಾಗಿ ವರ್ತಿಸುವುದು ಸರ್ವೆ ಸಾಮಾನ್ಯ. ಎಷ್ಟೋ ಕಚೇರಿಯಲ್ಲಿ ಸರ್ಕಾರದ ಸುತ್ತೋಲೆ ಸೂಚನೆ ಆದೇಶಗಳು ಇರಲಿ ಹೈಕೋರ್ಟ್ ಸುಪ್ರಿಂ ಕೋರ್ಟ್ ಆದೇಶಗಳನ್ನೇ ಪಾಲಿಸದೇ ಜಾಣ ಕುರುಡು ಇಲ್ಲವೇ ಮೈಗಳ್ಳ ಕುರುಡು ಇಲ್ಲವೇ ಅಸಡ್ಡೆ ಕುರುಡು/ಕಿವುಡು ಅನುಸರಿಸುತ್ತಿರುವುದರಿಂದ ಶ್ರೀಸಾಮಾನ್ಯರಿಂದ ಹಿಡಿದು ಜಿಲ್ಲೆ ರಾಜ್ಯದ ಏಳ್ಗೆಯೂ ಕನಸೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂಬುದಂತೂ ಸುಳ್ಳಲ್ಲ.

  • ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ:*
    ನಗರ, ಗ್ರಾಮ ಮನೆ ಬೆಳಗಬೇಕಾದ ಜೆಸ್ಕಾಂ ವಿದ್ಯುತ್ ಶಕ್ತಿ ಪೂರೈಸುವ ಕಂಬಗಳು, ಟಿಸಿಗಳು ಜೀವ ತೆಗೆಯುವ ರಕ್ಕಸ ಶಕ್ತಿಯಾಗಿ ಬಾಯಿ ತೆರೆದು ನಿಂತಿರುವ ಅಪಾಯಕಾರಿ ಜಿಲ್ಲೆಯ ಶಹಾಪುರ ನಗರದ ತುಂಬ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿವೆ.

    ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಮತಕ್ಷೇತ್ರವಾದ ಶಹಾಪೂರ ತಾಲೂಕಿನಲ್ಲಿ ಮತ್ತು ವಿಶೇಷವಾಗಿ ಶಹಾಪುರ ನಗರದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳ ಕಂಬಗಳು ಅಳವಡಿಸಿರುವ ರೀತಿ ಸ್ಥಿತಿ ನೋಡಿದರೆ ಇವು ವಿದ್ಯುತ್ ಶಕ್ತಿ ನೀಡುವ ಕಂಬಗಳೋ ಅಥವಾ ಶಕ್ತಿ ಕಿತ್ತು ಸಾವು ದಯಪಾಲಿಸುವ ಯಮಕಂಭಗಳೋ ಎಂಬ ಅನುಮಾನ ಬರದೇ ಇರದು.

    ವಿದ್ಯುಚ್ಛಕ್ತಿಯು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿದೆ, ವಿದ್ಯುತ್ ಮೇಲೆಯೇ ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೆವೆ.ಪ್ರತಿದಿನ ಸಾವಿರಾರು ಕಾರ್ಯಗಳಿಗೆ ನಮಗೆ ಇದು ಬೇಕಾಗುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ವಿದ್ಯುತ್ ಅತ್ಯಂತ ಅಪಾಯಕಾರಿ ಎಂಬುದಕ್ಕೆ ಇತ್ತೀಚಿಗೆ ಬೆಂಗಳೂರಿನ ಕಾಡು ಗೋಡಿಯಲ್ಲಿ ಸಂಭವಿಸಿದ ತಾಯಿ-ಮಗು ದುರಂತ ಸಾವು ಜ್ವಲಂತ ಸಾಕ್ಷಿ. ಅಂತಹ ಘಟನೆಗಳು ಶಹಾಪುರದಲ್ಲೂ ಸಂಭವಿಸುವ ಸಾಧ್ಯತೆಯ ಪ್ರಮಾಣ ಅತಿ ಗರಿಷ್ಟ ಮಟ್ಟದಲ್ಲಿದೆ.

    ಹೌದು ಶಹಾಪುರದಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೆ ಅಪಾಯಕಾರಿ ಸ್ಥಿತಿಯಲ್ಲಿ ತೀರ ರಸ್ತೆಗೆ ಹೊಂದಿಕೊಂಡು ಇರುವ ವಿದ್ಯುತ್ ಕಂಬಗಳು, ಟಿಸಿಗಳ ಕಂಬಗಳು ಕೈಗೆಟುಕುವ ಅಂತರದಲ್ಲಿ ತಂತಿಗಳನ್ನು ಜೋತು ಬೀಳಿಸಿಕೊಂಡು ಬಲಿಗೆ ಬಾಯಿ ತೆರೆದು ನಿಂತ ರಕ್ಕಸನ ನೋಡಿದಂತಾಗುತ್ತದೆ.

    ಉದಾಹರಣೆಗೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇಂತಹ ಅಪಾಯಕಾರಿ ವಿದ್ಯುತ್ ಕಂಬದ ಕೆಳಗೆ ವ್ಯಾಪಾರ ಮಾಡುತ್ತಿದ್ದಾರೆ ಒಂದು ವೇಳೆ ಅಚಾನಕ್ಕಾಗಿ ಅಲ್ಲಿನ ವಿದ್ಯುತ್ ಕಂಬದಲ್ಲಿನ ಕೇಬಲ್ ಅವರ ಮೇಲೆ ಬಿದ್ದರೆ ಅಲ್ಲೊಂದು ಬೆಂಗಳೂರಿನ ತಾಯಿ ಮಗುವಿನ ಘಟನೆ ನಡೆಯುವ ಸಾಧ್ಯತೆ ಪ್ರಮಾಣ ಮಾತ್ರ ಶೇ. 90ಕ್ಕೂ ಹೆಚ್ಚು ಎಂದು ಹೇಳಬೇಕು.

    ಅತ್ತ ನಗರಸಭೆ ಎದುರು ಇರುವ ಆಟೋ ಸ್ಟ್ಯಾಂಡ್ ನ ಬಳಿ ಕೂಡ ವಿದ್ಯುತ್ ಕಂಬಕ್ಕೆ ಯಾವುದೇ ಸುರಕ್ಷತೆ ಇಲ್ಲ, ಅಲ್ಲದೆ ಲಕ್ಷ್ಮಿನಗರ, ಕನ್ಯಕೂಳೂರ ಅಗಸಿ ಸೇರಿದಂತೆ ಪ್ರಮುಖ ಕಡೆ ವಿದ್ಯುತ್ ಕಂಬಕ್ಕೆ ತಂತಿಬೆಲಿ ಕೂಡ ಹಾಕಿಲ್ಲ,

    ಕೇಬಲ್ ಗೊಂಚಲು:
    ವಿದ್ಯುತ್ ಕಂಬಗಳಲ್ಲಿ ಇತರ ಕೇಬಲ್‌ಗಳು ರಾಶಿ ಇವೆ. ಬಹುತೇಕ ಕಂಬಗಳಲ್ಲಿ ವಿದ್ಯುತ್ ತಂತಿಗಳ ನಡುವೆಯೇ ನೆಟ್‌ವರ್ಕ್ ಇನ್ನಿತರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹಲವು ಕಂಬಗಳಲ್ಲಿ ಕೇಬಲ್ ಸುರಳಿ ಸುತ್ತಿ ಕೈಗೆಟಕುವಂತೆ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಕೇಬಲ್ ತುಂಡಾಗಿ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಬಿದ್ದಿವೆ. ವಿದ್ಯುತ್ ತಂತಿಗೆ ಸ್ಕಿನ್ ಆಗಿರುವ ಕೇಬಲ್ ತಾಕಿದರೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಯಾವುದೋ ಕೇಬಲ್ ಎಂದು ತುಳಿದವರ ಪ್ರಾಣಕ್ಕೆ ಯರವಾಗುವುದು ಶತಸಿದ್ಧ.

    ಈ ರೀತಿಯ ಕೇಬಲ್‌ಗಳನ್ನು ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲು ಇಲ್ಲವೇ ಸೂಕ್ತ ಪ್ರತಿಬಂಧಕೋಪಾಯ ಕೈಗೊಳ್ಳಬೇಕಾದ ಇಲಾಖೆ ಕುಂಭಕರ್ಣ ನಿದ್ದೆಗೆ ಜಾರಿದೆ.

    ಇನ್ನು ಹಲವಾರು ಕಡೆ ಫುಟ್‌ಪಾತ್‌ನಲ್ಲೇ ಬೃಹತ್ ಗಾತ್ರದ ವಿದ್ಯುತ್ ಉಪಕರಣ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವುಗಳ ಸುತ್ತ ತಂತಿ ಬೇಲಿ ಮಾದರಿಯನ್ನು ಅಳವಡಿಸಿಲ್ಲ. ಟ್ರಾನ್ಸ್ಫಾರ್ಮ್ರಗಳು ಕೆಲವೆಡೆ ಕೈಗೆಟುಕುವಷು ತಳಮಟ್ಟದಲ್ಲಿವೆ. ಇವುಗಳಿಂದಲೂ ಅಪಾಯ ಸಂಭವಿಸುವ ಸಾಧ್ಯತೆ ತೀರ ಹೆಚ್ಚು.

    ವಿದ್ಯುತ್ ಸುರಕ್ಷತೆಯ ಅಗತ್ಯತೆ ಅನಿವಾರ್ಯತೆಯನ್ನ ಅಧಿಕಾರಿಗಳು ಮನಗಾಣಬೇಕಿದೆ. ಆದರೆ ಅವರಿಗೆ ಬಡಿದೆಬ್ಬಿಸಲು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ದರ್ಶನಾಪೂರ ಅವರ ಸ್ವಮತಕ್ಷೇತ್ರದ ವಾಸ್ತವದ ಕಡೆ ಗಮನಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದೆ ಇಲ್ಲದಿದ್ದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ ಎಂಬುದು ಪತ್ರಿಕೆ ಕಳಕಳಿಯಾಗಿದೆ. ಯಾವ ಕ್ರಮ ಕೈಗೊಳ್ಳುವೋರು ಕಾದು ನೋಡಬೇಕಿದೆ.