Category: Special News

  • ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ

    ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ

    ಸತ್ಯಕಾಮ ವಾರ್ತೆ ಕಲಬುರಗಿ: 

    ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಬ್ರಹ್ಮಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣವಾಗಿ ಮಳೆನೀರಿನಿಂದ ಕೇರೆಯಂತಾಗಿದ್ದು, ಶಾಲೆಗೆ ತೆರಳಿದ ಮಕ್ಕಳು ಪರದಾಡುವಂತಾಗಿದೆ.

    ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಆವರಣದ ಒಳಗೇ ನೀರು ನಿಂತುಹೋಗಿದೆ. ಬೆಳಗ್ಗೆ ಪೋಷಕರು ಮಕ್ಕಳನ್ನು ಶಾಲೆಗೆ ಕೊಂಡೊಯ್ಯಲು ತೊಂದರೆ ಅನುಭವಿಸಿದರೆ, ಕೆಲವು ವಿದ್ಯಾರ್ಥಿಗಳು ನೀರನ್ನು ದಾಟಿ ತರಗತಿಗೆ ಸೇರಬೇಕಾಯಿತು.

    ಶಾಲಾ ಆವರಣದಲ್ಲಿ ನೀರು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಪ್ರತಿ ಬಾರಿ ಮಳೆ ಬಿದ್ದಾಗ ಇದೇ ಪರಿಸ್ಥಿತಿ. ಹೀಗಾದರೆ ಮಕ್ಕಳು ಓದುವುದು ಹೇಗೆ?” ಎಂದು ಪೋಷಕರು ಪ್ರಶ್ನಿಸಿದರು.

  • ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ವರದಿ; ಶ್ರೀಶೈಲ್ ಪೂಜಾರಿ
    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರೆದಿದೆ. ಈ ಮಧ್ಯೆ ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಂದ ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ದರಕ್ಕೆ ಕೊಂಡುಕೊಂಡು ಹೆಚ್ಚಿನ ದರಕ್ಕೆ ಬೇರೆ ಪ್ರದೇಶಗಳಿಗೆ ಕಳುಹಿಸುವ ಅಕ್ರಮ ದಂಧೆ ತಂಡ ವ್ಯಾಪಕವಾಗಿ ಬೇರೂರಿವೆ. ಆಹಾರ ಇಲಾಖೆ ಈ ಅಕ್ರಮವನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿದ್ದು ಪ್ರಜ್ಞಾವಂತ ನಾಗರೀಕರು ಆಹಾರ ಇಲಾಖೆ ಅಧಿಕಾರಿಗಳು ಇದ್ದಾರೋ ಇಲ್ಲವೋ ಎಂದು ಕೇಳುವ ಪ್ರಶ್ನೆ ಉದ್ಭವವಾಗಿದೆ.

    ಹೌದು.. ತಾಲೂಕಿನ ಮೈಬೂಬನಗರದ ಶಿರೋಳ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಣೆ ಪಡಿತರ ಅಕ್ಕಿ ವಾಹನವನ್ನು ಸಾರ್ವಜನಿಕರು ಹಿಡಿದು ಮಾಹಿತಿ ನೀಡಿದರು ಕೂಡ ಆಹಾರ ಇಲಾಖೆ ಅಧಿಕಾರಿಗಳು ಬರದೇ ಇರುವುದರಿಂದ ಸೋಮವಾರ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುವುದಲ್ಲದೇ ತಹಶಿಲ್ದಾರರಿಗೆ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಅವರ ವಿರುದ್ಧ ದೂರು ನೀಡಲಾಗಿದೆ.

    ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಮುದ್ದೇಬಿಹಾಳ ಹಾಗೂ ಸುತ್ತಲಿನ ಗ್ರಾಮದಲ್ಲಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಕಾಳಸಂತೆಯಲ್ಲಿ ಅಕ್ರಮ ಪಡಿತರ ಮಾರಾಟಕ್ಕೆ ಬ್ರೇಕ್‌ ಹಾಕಲು ಶ್ರಮ ವಹಿಸುತ್ತಿದ್ದರೆ, ಆದರೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ವ್ಯವಹಾರ ಎಗ್ಗಿಲ್ಲದೆ ಸಾಗಿರುವುದು ಜನ ಹುಬ್ಬೆರಿಸುವಂತೆ ಮಾಡುವುದಲ್ಲದೇ ಆಹಾರ ಇಲಾಖೆ ವಿರುದ್ಧ ಸಂಶಯ ವ್ಯಕ್ತವಾಗಿದೆ.

    ಅನ್ನಭಾಗ್ಯ ದಲ್ಲಾಳಿಗಳಿಗೆ ಮಾರಾಟ

    ತಾಲೂಕಿನ ವಿವಿಧ ಗ್ರಾಮಗಳ ಮನೆಗೆ ತೆರಳುವ ಈ ಗುಂಪು, ರೇಷನ್‌ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಅಧಿಕ ಹಣಕ್ಕೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್‌ ಗಳ ಮೂಲಕ ಲಾರಿಗಳಲ್ಲಿ ಬೇರೆ ರಾಜ್ಯಕ್ಕೆ ಸಾಗಿಸುತ್ತಾರೆ ಎಂಬ ಗುಮಾನಿ ಇದೆ.

    ಅಕ್ರಮ ಸಾಗಣೆ ವಾಹನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರು ಕೂಡ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಸ್ಥಳಕ್ಕೆ ಬರದೇ ಸಮಯ ಕಳೆಯುತ್ತಾ ಕುಂಟುನೆಪ ಹೇಳಿ ಜಾರಿಕೊಂಡ ಸನ್ನೀವೇಶ ನಡೆದರೆ, ಅಕ್ರಮ ಸಾಗಣೆ ವಾಹನ ಪರ ಕೆಲವರು ಪರೋಕ್ಷವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವೆ ಎಂದು ಬಿಂಬಿಸಿ ಪರೋಕ್ಷವಾಗಿ ಅಕ್ರಮ ಅಕ್ಕಿ ವಾಹನವನ್ನು ಎಸ್ಕೇಪ್ ಮಾಡಿದ ಸನ್ನಿವೇಶ ಜರುಗಿತು.

    ಇನ್ನು ಯಾವುದೇ ಭಯವಿಲ್ಲದೇ ಅಕ್ರಮವಾಗಿ ಅಕ್ಕಿ ಖರೀದಿ ಹಾಗೂ ಸಾಗಣೆ ಮಾಡುತ್ತಿದ್ದರೂ ತಾಲೂಕಿನಲ್ಲಿ ಯಾವುದೇ ಕ್ರಮ ಇಲ್ಲದಂತಾಗಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಅಕ್ಕಿ ನೀಡಿದರೆ ಅದು ಅಕ್ರಮ ದಂಧೆಗೆ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅನ್ನಭಾಗ್ಯ ಯೋಜನೆಯನ್ನು ಕಾಪಾಡಬೇಕಿದೆ.

    ಏನೇ ಆಗಲಿ ಅನ್ನಭಾಗ್ಯ ಯೊಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಅವ್ಯಾಹತವಾಗಿ ನಡೆದಿರುವುದಕ್ಕೆ ಕಡಿವಾಣ ಹಾಕಲು ಒಂದು ಕಡೆ ಅಧಿಕಾರಿಗಳು ಹೆಣಗಾಡುತ್ತಿದ್ದರೆ, ಮತ್ತೊಂದು ಕಡೆ ಅನ್ನಭಾಗ್ಯ ಅಕ್ರಮ ಸಾಗಾಟಕ್ಕೆ ತಂಡಪೋ ತಂಡಗಳು ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿವೆ. ಇದಕ್ಕೆ ಪುಷ್ಟಿಕರಿಸುವಂತೆ ಮಾಹಿತಿ ನೀಡಿದರೂ ಕೂಡ ಭಾನುವಾರ ಅಕ್ರಮ ಸಾಗಣೆ ವಾಹನ ವಶಪಡಿಸಿಕೊಳ್ಳದೇ ಬಿಟ್ಟಿದ್ದು ಸಾರ್ವಜನಿಕರಲ್ಲಿ ಅಧಿಕಾರಿಗಳು ಕೂಡ ಅಕ್ಕಿ ಅಕ್ರಮ ಸಾಗಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ರಾ ಎಂಬ ಮಾತುಗಳು ಕೇಳಿಬಂದವು.

  • ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ವರದಿ; ಕುದಾನ್ ಸಾಬ್

    ಸತ್ಯಕಾಮ ವಾರ್ತೆ ಯಾದಗಿರಿ

    ನಗರದ ಹೊಸ ಪದವಿ ಕಾಲೇಜಿನ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಶಿಕ್ಷಣ ಸಂಸ್ಥೆ ಎಂದು ಕರೆಯುವುದು ಲಜ್ಜೆಯ ವಿಷಯವಾಯ್ತು. ಈ ಕಾಲೇಜು ನಿಜಕ್ಕೂ ಓದುವ ಸ್ಥಳವೇ? ಅಥವಾ ಕಾಡುಮೂಲಗಳ ತಾಣವೋ? ಅನ್ನಿಸುತ್ತದೆ.

    ಹೌದು ಏಕೆಂದರೆ ಹೊಸ ಪದವಿ ಕಾಲೇಜಿನ  ಕೌಂಪೌAಡ್ ಸುತ್ತ ಬೆಳೆದಿರುವ ಜಾಲಿಗಿಡ, ತರಗತಿಯೊಳಗೆ ನುಗ್ಗುವ ಹಾವು-ಚೇಳುಗಳು, ಓಡುವ ಬದಲು ಓಡಾಟ ನಡೆಯುವ ತರಗತಿಗಳು — ಇದು ಪ್ರತಿದಿನದ ದೃಶ್ಯ. ವಿದ್ಯಾರ್ಥಿಗಳು ಪುಸ್ತಕದ ಕಡೆಗಿಂತ ಜಿಗಿತದ ಕಡೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

    ಅದರಲ್ಲೂ ಕಾಲೇಜಿನ ಕಟ್ಟಡದ ಗೋಡೆಗಳ ಮೇಲೆ ಬೆಳೆದಿರುವ ಬಳ್ಳಿಗಳು ಆವರಿಸಿರುವುದರಿಂದ ಕೆಲವು ಕಿಟಕಿಗಳು ಮುಚ್ಚಲಾಗದ ಸ್ಥಿತಿಯಲ್ಲಿವೆ, ಇಂತಹ ಸ್ಥಿತಿ ಒಂದೆರಡು ದಿನಗಳಲ್ಲಿ ಉಂಟಾಗಿಲ್ಲ. ವರ್ಷಗಳಿಂದ ನಿರ್ವಹಣೆಗೆ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.

    ಅಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೇ ನೀವೇ ಜಾಲಿಗಿಡ ತೆಗೆದುಹಾಕಿ! ಸ್ವಚತೆ ಮಾಡಿ ಎಂದು ಹೇಳುತ್ತಾರಂತೆ, ಇದು ಪ್ರಾಶುಂಪಾಲರಿAದ ಬರಬಹುದಾದ ಮಾತುಗಳಾ? ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದಿಂದ ನಂಬಿಕೆ ಹೋಗುವುದಕ್ಕಿಂತ ದುರಂತ ಇನ್ನೊಂದು ಇಲ್ಲ.

    ವಿದ್ಯಾರ್ಥಿಗಳ ಓದು ಕೇವಲ ಪಾಠಪುಸ್ತಕಗಳ ಸಾಲುಗಳಲ್ಲಿ ಸೀಮಿತವಲ್ಲ. ಅವರಿಗೆ ಬೇಕಾಗಿರುವ ಭದ್ರತೆ, ಸ್ವಚ್ಛತೆ ಮತ್ತು ಮಾನವೀಯ ಮೌಲ್ಯಗಳಿಂದ ತುಂಬಿದ  ವಾತಾವರಣ. ಆದರೆ ಇದನ್ನೆಲ್ಲಾ ಮರೆತು ಬಿಟ್ಟು ಶಿಕ್ಷಣ ಸಂಸ್ಥೆಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದಾಗ, ವಿದ್ಯಾರ್ಥಿಯ ಭವಿಷ್ಯವೇ ಹದಗೆಡುವ ಸ್ಥಿತಿಗೆ ತಲುಪುತ್ತದೆ. ಶಾಲೆ ಅಥವಾ ಕಾಲೇಜು ಕೇವಲ ಕಟ್ಟಡವಲ್ಲ – ಅದು ನೂರು ಕನಸುಗಳ ನೆಲೆ. ಈ ನೆಲೆ ಶುದ್ಧವಾಗಿರಬೇಕು, ಸುರಕ್ಷಿತವಾಗಿರಬೇಕು. ಏಕೆಂದರೆ ನಿರ್ವಹಣೆ ನಿಲ್ಲಿಸಿದಾಗ, ಶಿಕ್ಷಣದ ಭವಿಷ್ಯವೂ ನಿಲ್ಲುತ್ತದೆ! ಎಂಬುದನ್ನು ಅರಿತು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ವಾತಾವಾರಣ ಕಲ್ಪಿಸಲು ಆಡಳಿತ ವರ್ಗ ಅಥವಾ ಪ್ರಾಂಶುಪಾಲರು ಮುಂದಾಗತ್ತಾರೋ ಎಂಬುದನ್ನು ಕಾದು ನೋಡೋಣ.

     

    ಕಾಲೇಜಿನ  ಸುತ್ತಮುತ್ತ  ಜಂಗಲದAತಾಗಿ ಬೆಳೆದಿರುವ  ಜಾಲಿಗಿಡಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಮಾತ್ರವಲ್ಲದೆ  ವಿದ್ಯಾಭ್ಯಾಸಕ್ಕೂ  ತೀವ್ರ  ಅಡ್ಡಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣದ ಸುತ್ತಮುತ್ತಲನ್ನು ತಕ್ಷಣ ಸ್ವಚ್ಛಗೊಳಿಸಿ, ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಶಾಂತ, ಸ್ವಚ್ಛ ಮತ್ತು ಭದ್ರ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.

    – ಹೆಸರೇಳಲಿಚ್ಛಿಸದ ವಿದ್ಯಾರ್ಥಿ

  • ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಸತ್ಯಕಾಮ ವಾರ್ತೆ ಶಹಾಪುರ :

    ನಾಗರ ಪಂಚಮಿ ಹಬ್ಬದ ಅಂಗವಾಗಿ ಶಹಾಪುರ ತಾಲ್ಲೂಕಿನ ಇಟಗಾ (ಎಸ್) ಗ್ರಾಮದ ಯುವಕ ನಾಗರಾಜ ಈರಪ್ಪ ದೊಡ್ಡಮನಿ ಎಂಬವರು ತಮ್ಮ ವಿಶಿಷ್ಟ ಶಕ್ತಿ ಪ್ರದರ್ಶನದಿಂದ ಕೆಸರು ಗದ್ದೆಯಲ್ಲಿಯೇ ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು ಎಲ್ಲರ ಮನ ಗೆದ್ದಿದ್ದಾರೆ.

    ಹಬ್ಬದ ಸಂಭ್ರಮದಲ್ಲಿ ಕೇವಲ ಸಂಪ್ರದಾಯ ಪಾಲನೆ ಮಾತ್ರವಲ್ಲ, ಶಕ್ತಿಯ ನಿದರ್ಶನವನ್ನೂ ನೀಡಿದ ಇವರು ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು, ಕಾಲ್ನಡಿಗೆ ಮೂಲಕ ಇಟಗಾ (ಎಸ್) ಗ್ರಾಮದಿಂದ ಶಹಾಪುರದ ಹನುಮಾನ ದೇವಾಲಯಕ್ಕೆ ತಲುಪಿಸುವುದು ಇತಿಹಾಸ ಕಾರ್ಯವಾಗಿದೆ ಎನ್ನಬಹುದು.

    ಈ ಅಪರೂಪದ ಶಕ್ತಿ ಪ್ರದರ್ಶನ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ತವರು ಗ್ರಾಮದಿಂದ ಶಹಾಪುರ ನಗರದ ದೇವಾಲಯದವರೆಗೆ ಅವರ ಮನೋಬಲ, ಶಕ್ತಿಶಾಲಿತ್ವ ಹಾಗೂ ಧೈರ್ಯ ಎಲ್ಲರಿಗೂ ಪ್ರೇರಣೆಯಾಗುತ್ತಿದೆ. ಈತನೊಂದಿಗೆ ಗ್ರಾಮದಿಂದ ಬಂದ ಹಲವಾರು ಯುವಕರು ಸಂತೋಷ ವ್ಯಕ್ತಪಡಿಸಿ ನಾಗರಾಜನನ್ನು ಸನ್ಮಾನಿಸಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಅಭಿನಂದಿಸಿದರು.

    ಗ್ರಾಮದ ಹಿರಿಯರು ಈ ಘಟನೆಯನ್ನು ಕೇವಲ ಶಕ್ತಿ ಪ್ರದರ್ಶನವೆಂದು ನೋಡದೆ, ಅದು ಯುವ ಪೀಳಿಗೆಗೆ ಪ್ರೇರಣೆಯ ಮಾದರಿಯೆಂದು ಅಭಿಪ್ರಾಯಪಟ್ಟರು. “ಇಂತಹ ಕಾರ್ಯಗಳು ಗ್ರಾಮೀಣ ಭಾವೈಕ್ಯತೆ ಹಾಗೂ ಭ್ರಾತೃತ್ವ ಬಲಪಡಿಸುತ್ತವೆ,” ಎಂದು  ಹೇಳಿದರು.

    ಈ ಸಂದರ್ಭದಲ್ಲಿ ಶಹಾಪುರದ ಯುವ ನಾಯಕ ಅವಿನಾಶ್ ಗುತ್ತೇದಾರ್ ಅವರು ನಾಗರಾಜನನ್ನು ಸನ್ಮಾನಿಸಿ ಗೌರವಿಸಿದರು. ಈ ಉತ್ಸವದಲ್ಲಿ ಇಟಗಾ ಹಾಗೂ ಶಹಾಪುರದ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ವಿಜೃಂಭಣೆಗೆ ಕಾರಣರಾದರು.

  • ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಸತ್ಯಕಾಮ ವಿಶೇಷ

    ವರದಿ: ಪ್ರಕಾಶ ಗುದ್ನೇಪ್ಪನವರ.
    ಶಹಾಪುರ : ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ನಾಗರ ಕೆರೆ, ಮಾವಿನ ಕೆರೆಗಳು ತುಂಬಿ ತುಳುಕುತ್ತಿವೆ ಅಲ್ಲದೇ ದಕ್ಷಿಣ ಬಾಗದಲ್ಲಿ ಸಗರಾದ್ರಿ ಬೆಟ್ಟಗಳಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿರುವ ವಿಹಂಗಮ ದೃಶ್ಯ ಪ್ರವಾಸಿಗರ ಚಿತ್ತ ಇತ್ತ ಕಡೆ ಹರಿಸುವದರಲ್ಲಿ ಯಾವುದೇ ಸಂದೇಹ ವಿಲ್ಲ ಎನ್ನಬಹುದು.

    ನಗರದ ದಕ್ಷಿಣ ಭಾಗದಲ್ಲಿ ಸಾಲು ಸಾಲಾಗಿ ಕಂಡು ಬರುವ ಬೆಟ್ಟಗುಡ್ಡುಗಳಿಗೆ ಸಗರಾದ್ರಿ ಬೆಟ್ಟವೆಂದು ಕರೆಯಲಾಗುತ್ತದೆ ಹಾಗೂ ಸಗರನಾಡಿನ ಬೆಟ್ಟಗಳನ್ನೆ ಸಗರಾದ್ರಿ ಬೆಟ್ಟ ಎನ್ನಲಾಗುತ್ತಿದೆ.


    ಇಲ್ಲಿನ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ಪ್ರವಾಸಿಗರ ಕಣ್ಮಣ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನಾಳ್ಕೈದು ಗುಡ್ಡ ಹೊಂದಿಕೊಂಡು ದೂರದಿಂದ ಬುದ್ಧ ಮಲಗಿರುವಂತೆ ಸ್ಪಷ್ಟವಾಗಿ ಚಿತ್ರ ಪ್ರತಿಯುಬ್ಬರಿಗೂ ಆಶ್ಚರ್ಯವನ್ನುಂಟು ಮಾಡಿರುವುದಂತೂ ಸತ್ಯ.

    ಈ ಭಾಗದಲ್ಲಿಯೇ ಗವಿ ಬಸಪ್ಪ ನಾಗ ಬಸಪ್ಪ ಬೆಟ್ಟದ ಪಕ್ಕದಿಂದ ಹರಿದು ಬರುವ ನೀರು ಜಲಪಾತ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು. ಇಂತಹ ಬಿಸಿಲನಾಡಿನಲ್ಲಿ ಇಂತಹದೊಂದು ಅದ್ಭುತ ಜಲಪಾತ ಮಳೆಗಾದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಹತ್ತಾರು ದಿನಗಳಿಂದ ಸತತ ಮಳೆ ಸುರಿಯುತ್ತಿರುವದರಿಂದ ಇದೀಗ ಸಗರಾದ್ರಿ ಜಲಪಾತ ಮೈದುಂಬಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರವುದು ವಿಶೇಷವಾಗಿದೆ.
    ಮಳೆ ಬಂದಿತೆಂದರೆ ದಾಸನಕೊಳ್ಳ, ಸಗರಾದ್ರಿ ಜಲಪಾತ, ಈ ಭಾಗವೆಲ್ಲ ಹಸಿರಿನಿಂದ ದುಂಬಿಕೊಂಡು ಜನರನ್ನು ಆಕರ್ಷಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶ ಮಲೆನಾಡನ್ನು ನೆನಪಿಸುತ್ತದೆ.


    ಸರ್ಕಾರವಾಗಲಿ ಜನಪ್ರತಿನಿದಿನಗಳು ಇತ್ತ ಕಡೆ ಗಮನ ಹರಿಸಿದರೆ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಯಾವದೇ ಸಂದೇಹವಿಲ್ಲ ಎನ್ನುವರು ಇಲ್ಲಿನ ಸೌಂದರ್ಯ ಸವಿಯಲು ಬರುವ ಜನರು.

    ಒಟ್ಟಾರೆ ಬಿಸಿಲನಾಡಿನಲ್ಲಿ ಮಳೆಗಾಲದಲ್ಲಿ ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿನ ಜಲಪಾತಗಳು ಧೂಮ್ಮಿಕ್ಕಿ ಹರಿದು ಸುತ್ತಮುತ್ತಲಿನ ಜನತೆಗೆ ಖುಷಿ ನೀಡುತ್ತಿರುವುದು ತುಂಬಾ ಸಂತಸ ಎನ್ನಬಹುದು.

    ಪ್ರಕೃತಿಯ ಮಡಿಲಿನಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳೊಂದಡೆಯಾದರೆ ಧೂಮುಕ್ಕಿ ಹರಿಯುತ್ತಿರುವ ಜಲಾಪಾತಗಳು ಹಾಗೂ ಮೈದುಂಬಿಕೊಂಡಿರುವ ಕೆರೆಗಳು ನಿಸರ್ಗದ ಸವಿ ಸವಿಯಲು ಪ್ರವಾಸಿಗರು ದಿನ ನಿತ್ಯ ನೂರಾರು ಜನ ಆಗಮಿಸುತ್ತಿರುವುದು ಸರ್ವೇ ಸಮಾನ್ಯವಾಗಿದೆ.

    “ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿ ಅನೇಕ ಜಾಲಧಾರೆ ಜಲಪಾತಗಳಿಂದ ನಿಸರ್ಗದ ಸೌಂದರ್ಯ ಇಮ್ಮಡಿಯಾಗಿದೆ ಇಂತಹ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿವಹಿಸಿ ಅಭಿವೃದ್ಧಿಗೆ ಮುಂದಾದರೆ ಇನ್ನೂ ಹೆಚ್ಚಿನ ಜನಾಕರ್ಶನಗೊಳ್ಳವುದು ಶತಸಿದ್ಧ ಎನ್ನುವರು” ̲ನಿವೃತ್ತ ರಾಷ್ಟ್ರ ಪಶಸ್ತಿ ವಿಜೇತ ಶಿಕ್ಷಕರಾದ ಸೋಮಶೇಖರಯ್ಯ ಹಿರೇಮಠ.

  • ತೀವ್ರ ಶೀತ ಗಾಳಿ ಹಿನ್ನೆಲೆ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಿ.ಸಿ. ಮನವಿ

    ತೀವ್ರ ಶೀತ ಗಾಳಿ ಹಿನ್ನೆಲೆ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಿ.ಸಿ. ಮನವಿ

    ಕಲಬುರಗಿ: ಭಾರತೀಯ ಹವಾಮಾನ ಇಲಾಖೆಯು ಡಿ.18 ರಂದು ರೆಡ್ ಅಲರ್ಟ್ ಮತ್ತು ಡಿ.19 ರಂದು ಎಲ್ಲೋ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಈ ಅವಧಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ಇರಲಿದೆ. ವಿಶೇಷವಾಗಿ ಸಾರ್ವಜನಿಕರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತ್ರದ ನಂತರ ವಾಕಿಂಗ್ (ವಾಯುವಿಹಾರ) ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ಓಡಾಡಬಾರದೆಂದು ಅವರು ತಿಳಿಸಿದ್ದಾರೆ.

    *ಮುನ್ನಚ್ಚರಿಕೆ ಕ್ರಮಗಳೇನು?*

    ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬಾರದಂತೆ ಎಚ್ಚರಿಕೆ ವಹಿಸುವುದು. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ವೆಟರ್, ಜಾಕೇಟ್, ಉಲನ್ ಟೋಪಿ, ಕಾಲು ಕುಬಸ, ಕೈ ಗ್ಲೌಸ್ ಗಳನ್ನು ಧರಿಸಬೇಕು. ವಿಶೇಷವಾಗಿ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಬಾರದು.

    *ರೈತರಿಗೆ ಸಲಹೆ:*

    ಇನ್ನು ರೈತ ಬಾಂದವರು ಈ ದಿವಸಗಳಲ್ಲಿ ವಿಶೇಷವಾಗಿ ರಾತ್ರಿ ಸಮಯದಲ್ಲಿ ಹೊಲಗಳಲ್ಲಿ ತಂಗುವುದು ಮತ್ತು ಹಗಲಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿರಲು ತಿಳಿಸಿದೆ. ಅವಶ್ಯವಿದ್ದಲ್ಲಿ ಮಾತ್ರ ಬೆಚ್ಚನೆಯ ಉಡುಪುಗಳನ್ನು ಧರಿಸಲು ತಿಳಿಸಿದೆ. ಮುನ್ಮೆಚ್ಚರಿಕೆ ಕ್ರಮವಾಗಿ ರೈತರು ಹಿಂಗಾರು ಬೆಳೆಗಳಿಗೆ ಶೀತ ಗಾಳಿಯ ಪ್ರಭಾವವನ್ನು ಪ್ರತಿರೋಧಿಸಲು ಪ್ಲ್ಯಾನೋಫಿಕ್ಸ್ 0.5 ಎಂ.ಎಲ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ರೈತರಿಗೆ ಸಲಹೆ ನೀಡಿದ್ದಾರೆ.

  • ಮಾಜಿ ಮುಖ್ಯಮಂತ್ರಿ ಶ್ರೀ ಎಸ್ಎಂ ಕೃಷ್ಣ ನಿಧನ: ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ನಾಳೆ ರಜೆ

    ಮಾಜಿ ಮುಖ್ಯಮಂತ್ರಿ ಶ್ರೀ ಎಸ್ಎಂ ಕೃಷ್ಣ ನಿಧನ: ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ನಾಳೆ ರಜೆ

    Screenshot

    ಕಲಬುರಗಿ- ಇಂದು ದಿ. 10 ಮಂಗಳವಾರ ರಂದು ಬೆಳಗ್ಗೆ 2:30ಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್ಎಂ ಕೃಷ್ಣ ಅವರು ನಿಧನವಾದ ಕಾರಣ ದಿನಾಂಕ 11 ಬುಧವಾರದಂದು ಹುಟ್ಟುರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ದಿನಾಂಕ 11 ಬುಧವಾರದಂದು ರಾಜ್ಯದಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ ಅಲ್ಲದೆ ದಿನಾಂಕ 10 ರಿಂದ 12ರ ವರೆಗೆ ಮೂರು ದಿನಗಳು ರಾಜ್ಯಾದ್ಯಂತ ಶೋಕ ಆಚರಣೆ ಮಾಡಲಾಗದು ಎಂದು ಸರ್ಕಾರ ಘೋಷಿಸಿದೆ.

  • ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಸತ್ಯಕಾಮ ವಾರ್ತೆ ಯಾದಗಿರಿ:

    ಮೋಟನಳ್ಳಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಸತ್ಯಕಾಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿ ಪ್ರೇಮ್ ಮೂರ್ತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಸೆ.17(ಸೋಮವಾರ) ರಂದು “ಮೋಟನಳ್ಳಿ ವಸತಿ ಶಾಲೆಯ ಲ್ಲಿ ಸಾಲು ಸಾಲು ಸಮಸ್ಯೆಗಳು” ಕಣ್ಣಿದ್ದೂ ಕುರುಡರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆ ಸುದ್ದಿಯನ್ನು ಪ್ರಕಟಿಸಿತ್ತು, ಇದರ ಆಧಾರದ ಮೇಲೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಅಲ್ಲಿನ ವಿದ್ಯಾರ್ಥಿಗಳ ಸಮುಖದಲ್ಲಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು.

    ಈ ವೇಳೆ ವಿದ್ಯಾರ್ಥಿಗಳು ಪ್ರಮುಖವಾಗಿ ಶುದ್ಧ ಕುಡಿಯುವ ನೀರು, ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಬರುವ ಕಿಟ್ ಸಿಗುತ್ತಿಲ್ಲ, ಬಯಲು ಶೌಚಯಲವೇ ಗತಿಯ ಬಗ್ಗೆ ಬಂದಂತಹ ಅಧಿಕಾರಿಗಳಿಗೆ ತಮ್ಮ ವಸತಿ ನಿಲಯದ ಸಮಸ್ಯೆಗಳ ಬಗ್ಗೆ ವಿವರಿಸಿದರು.

    ಈ ಸಂದರ್ಭದಲ್ಲಿ ಆಪ್ತ ಸಮಾಲೋಚನಾ ಆಧಿಕಾರಿ ದೇವಪ್ಪ, ಪ್ರಿನ್ಸಿಪಾಲ್ ಸಿದ್ದಪ್ಪ, ವಾರ್ಡನ್ ಆದಯ್ಯ ಹಿರೇಮಠ್, ಶಿಕ್ಷಕ ಮೌನೇಶ್ ಮೊಟನಹಳ್ಳಿ, ಸುನೀಲ್ ಕುಮಾರ್ ಸೇರಿದಂತೆ ಇತರರು ಇದ್ದರು.

     

  • ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ

    ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ

    1. ಮೊಹರಂ ಆಚರಣೆಗೆ ಕಳೆ ಹೆಚ್ಚಿಸಿದ ಮುಂಗಾರು ಮಳೆ 
    2. ಉತ್ತಮ ಮಳೆ ಬೆಳೆ ನಿರೀಕ್ಷೆ ತಂದ ಖುಷಿ, ಸರ್ವ ಧರ್ಮಿಯರ ಮೊಹರಂ ಖರೀದಿ ಜೋರು.
    3. ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ
    • ವರದಿ: ಪ್ರೀತಿ ಪಿ ರಾಠಿ

    ಸತ್ಯಕಾಮ ವಾರ್ತೆ ನಾರಾಯಣಪೂರ:

    ಈ ವರ್ಷ ಆರಂಭದಲ್ಲೇ ಮುಂಗಾರು ಮಳೆ ರೈತರಲ್ಲಿ ಆಶಾ ಭಾವನೆ ಮೂಡಿಸುವ ಮೂಲಕ ಈಗಾಗಲೇ ಬಿತ್ತನೆಯೂ ಮುಗಿದಿದೆ, ಅತ್ತ ಉತ್ತಮ ಫಸಲೂ ಸಹ ಚಿಗುರೊಡೆದಿದ್ದು ರೈತರಲ್ಲಿ ಮತ್ತಷ್ಟು ಖುಷಿ ತಂದಿದೆ, ಈಗಾಗಿ ಅಣ ಯಾಗಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ನಾರಾಯಣಪೂರ ವ್ಯಾಪ್ತಿಯ ಹಳ್ಳಿಗಾಡು ಪ್ರದೇಶದಲ್ಲಿ ಹಬ್ಬದ ಆಚರಣೆಯ ಸಾಮಾನುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ ನಡೆದಿದೆ.

    ಖರೀದಿ ಜೋರು: ನಾರಾಯಣಪೂರ ಸೇರಿದಂತೆ ಗಡಿ ಭಾಗದ ನಾಲತವಾಡ ಪಟ್ಟಣದ ಪ್ರಮುಖ ಮಾರುಕಟ್ಟೆ ಬಸವೇಶ್ವರ, ಕನಕ ವೃತ್ತ ಹಾಗೂ ಗಣೇಶ ವೃತ್ತದ ಬಳಿ ಸಿದ್ದಗೊಂಡಿರುವ ಮೋಹರಂ ಅಲಾಯಿ ದೇವರುಗಳಿಗೆ ಅವಶ್ಯಕತೆ ಹೂಗಳು ತುರಾಯಿ, ಪಂಜೆಗಳಿಗೆ ಬೆಳ್ಳಿ ಸಾಮಾನುಗಳು ಹಾಗೂ ಭಕ್ತರು ಅರ್ಪಿಸುವ ದಾರದ ಲಾಡಿ, ಚಿನ್ನಿ ಸಕ್ಕರೆ, ಉತ್ತತ್ತಿ ಮತ್ತು ಲೋಬಾನು ಖರೀದಿ ಪುರುಷೊತ್ತಿಲ್ಲದೆ ನಡೆದಿದೆ.

    ಇಷ್ಟಾರ್ಥ ಪೂರೈಕೆ:

    ಮೋಹರಂ ಶೋಕದ ಹಿನ್ನಲೆ ಹೊಂದಿದ್ದು ಭೇದ ಭಾವವಿಲ್ಲದೇ ಹಿಂದೂ ಮುಸ್ಲಿಂರ ಹಲವರು ಫಕೀರ್‌ಗಳು ಆಗುತ್ತಾರೆ, ಮೋಹರಂ ಹಬ್ಬವು ಪ್ರವಾದಿ ಮಹ್ಮದರ ಮೊಮ್ಮಕ್ಕಳಾದ ಹಸನ್ ಹುಸೇನ್‌ರ ಕರ್ಬಲಾ ಯುದ್ದದ ಪ್ರತೀಕವಾಗಿ ಆಚರಿಸಲಾಗುತ್ತಿದೆ.

    ಗೂಳೆ ಹೋದವರು ತವರಿಗೆ:

    ವರ್ಷವಿಡೀ ದುಡಿಯಲು ಪರ ರಾಜ್ಯಗಳಿಗೆ ಗೂಳೆ ಹೋದವರು ಮೋಹರಂ ಆಚರಿಸಲತ್ತಿದ್ದಾರೆ, ತಾವು ಬೇಡಿಕೊಂಡ ಅಲಾಯಿ ದೇವರುಗಳಿಗೆ ಇಷ್ಟಾರ್ಥ ಪೂರೈಸಲು ಪಂಜೆಗಳಿಗೆ ಮಲಮಲ ಬಟ್ಟೆ, ಡೋಲಿ ದೇವರುಗಳಿಗೆ ಬೆಳ್ಳಿ ಛತ್ರಿಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಬಂಗಾರದ ಅಂಗಡಿಗಳಲ್ಲಿ ಖರೀದಿ ಜೋರಾಗಿ ನಡೆದಿದೆ.

    ಮಣ್ಣಿನ ಮಡಿಕೆಗೆ ಡಿಮ್ಯಾಂಡ್:

    ಅಲಾಯಿ ದೇವರುಗಳಿಗೆ ಸಾಂಪ್ರಾದಾಯಿಕವಾಗಿ ಆಚರಣೆ ವೇಳೆ ಹಲವರು ಮಣ್ಣಿನ ಮಡಿಕೆಯಲ್ಲಿ ಶರಬತ್, ನೈವೇದ್ಯ ತಯಾರಿಸಿ ಅರ್ಪಿಸುತ್ತಾರೆ, ಹಾಗಾಗಿ ಪಟ್ಟಣದಲ್ಲಿ ಮಣ್ಣಿನ ಮಡಿಕೆ ಖರೀದಿಗೂ ಜನ ಮುಂದಾಗಿದ್ದಾರೆ.

  • ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಪತ್ರಕರ್ತ ಪಿ ಎಂ ಮಣ್ಣೂರ್ ಈಗ ನೆನಪು ಮಾತ್ರ

    ವಿಶೇಷ ಲೇಖನ : ಸುರೇಶ ಕೊಟಗಿ.

    ಪತ್ರಿಕಾರಂಗದ ಅಪ್ರತಿಮ ವ್ಯಕ್ತಿತ್ವ, ಮಹಾನಚೇತನ ಶ್ರೀ ಪಿ ಎಂ ಮಣ್ಣೂರರವರು ಜುಲೈ 1 ಪತ್ರಿಕಾ ದಿನಾಚರಣೆಯಂದು ಜನಿಸಿದರು. ಅವರ ಬದುಕು ಎಲ್ಲರಿಗೂ ಆದರ್ಶಮಯವಾಗಿತ್ತು. 2023 ಜೂಲೈ 1 ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತುಂಬಾ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗಿತ್ತು, ಇಂದು ಅದು ಇತಿಹಾಸ ಮಾತ್ರ.ಅನೇಕ ಗಣ್ಯರು, ಪತ್ರಕರ್ತರು, ಆಪ್ತರು ಹಾಗೂ ಮಿತ್ರರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮಣ್ಣೂರ್ ರವರ ಮಾತುಗಳು ಯುವ ಜನಾಂಗಕ್ಕೆ ಪತ್ರಕರ್ತರಿಗೆ ಧೈರ್ಯ, ಸಾಮರ್ಥ್ಯ ಮತ್ತು ಸ್ಪೂರ್ತಿ ತುಂಬುವ ಅವರ ಮನದಾಳದ ಮಾತುಗಳು ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚು ಹಸಿರಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು ಪತ್ರಿಕಾ ಮಿತ್ರರಿಗೆ ಟಾನಿಕ್ ನೀಡಿದಂತೆ ಪರಿಣಮಿಸಿತು ಆ ದಿನ.

    ಆದರೆ ದುರಾದುಷ್ಟಕರ ಜುಲೈ 1, 2024ರ ಜನ್ಮದಿನಕ್ಕೆ ಅವರಿಲ್ಲ, ಅವರ ನೆನಪು ಮಾತ್ರ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ನಮ್ಮಿಂದ ದೂರ ಹೋದ ಮೇಲೆ ಅರ್ಥವಾಗುತ್ತದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಸತ್ಯಕಾಮ ಕಾರ್ಯಾಲಯಕ್ಕೆ ಬಂದು ಒಂದೆರಡು ಗಂಟೆ ಕಾರ್ಯಾಲಯದ ಕಾರ್ಯವನ್ನು ನೋಡಿಕೊಂಡು ಅವರ ಪುತ್ರ ಆನಂದರಿಗೆ ಪತ್ರಿಕೆಯತ್ತ ವಿಶೇಷ ಗಮನ ಹರಿಸಲು ಸೂಚಿಸುತ್ತಿದ್ದರು. ಅವರನ್ನು ಭೇಟಿಯಾಗಲು ಅವರ ಮಿತ್ರರು ಪತ್ರಕರ್ತರು ಬಂದು ಹೋಗುವ ವಾಡಿಕೆ, ಆ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಎಂಥ ಮನುಷ್ಯರಿದ್ದರೆಂದರೆ, ಅವರ ಎದುರು ತಪ್ಪು ಮಾಡಿದ ಎಂತಹ ವ್ಯಕ್ತಿಯನ್ನು ಕ್ಷಮಿಸಿ ತಿಳಿ ಹೇಳುವ ದೊಡ್ಡ ಗುಣ ಅವರಲ್ಲಿತ್ತು. ಸತ್ಯಕಾಮ ಪತ್ರಿಕೆಯ ಸಿಬ್ಬಂದಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಆದ ಕಾರಣ ಇಂದಿಗೂ ಸಿಬ್ಬಂದಿ ವರ್ಗ ಅವರೊಂದಿಗಿನ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಳವಳ ಪಡುತ್ತಾರೆ.

    ಇದು ಪಿ ಎಂ ಮಣ್ಣೂರ್ ರವರು ನಡೆದು ಬಂದ ದಾರಿ. ಪತ್ರಿಕೆಯ ಜವಾಬ್ದಾರಿ ಹೊರೆ ಹೊತ್ತ ಅವರ ಪುತ್ರ ಶ್ರೀ ಆನಂದ ಮಣ್ಣೂರ ರವರು ತಂದೆಯವರ ಆಶೋತ್ತರ ಗಳ ಕಡೆಗೆ ಕಾಳಜಿ ವಹಿಸುತ್ತಾ ಅಪ್ಪಾಜಿಯವರು ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವ ಹಿರಿಯ ಗುರಿಯಾಗಿತ್ತು. ಇದು ಅನೇಕ ಸಲ ಚರ್ಚೆಗೂ ಬಂದಿದೆ. ಅವರ ಈ ಕನಸಿನ ಸಂಕಲ್ಪ, ಜವಾಬ್ದಾರಿಯಿಂದ ನಿಭಾಯಿಸಿ ನನಗೆ ಎಷ್ಟೇ ತೊಂದರೆ ಬಂದರೂ ನನಸಾಗಿ ಮಾಡುವ ಧ್ಯೇಯ ಹೊಂದಿದ್ದೇನೆ. ಅವರು ತೀರಿ ಹೋದಾಗಿನಿಂದ ಇಲ್ಲಿಯವರೆಗೆ ಅನೇಕ ಸಮಸ್ಯೆಗಳು ಎದುರಾಗಿವೆ ಕೆಲವು ಕಾಣದ ಕೈಗಳಿಂದ ತೊಂದರೆಗಳು ಎದುರಾಗುತ್ತಿವೆ. ಪರವಾಗಿಲ್ಲ, ಅಪ್ಪಾಜಿ ಅವರು ಭೌತಿಕವಾಗಿ ನನ್ನೊಂದಿಲ್ಲದಿದ್ದರೂ ಅವರ ಕೃಪಾಶೀರ್ವಾದ ದಿವ್ಯ ಚೇತನ ಶಕ್ತಿ ನನ್ನೊಂದಿಗೆ ಇದೆ ಬರುವ ಎಲ್ಲಾ ಸಮಸ್ಯೆಗಳಿಗೂ ಎದೆ ತಟ್ಟಿ ನಿಂತು ಪರಿಹಾರ ಕಂಡುಕೊಳ್ಳುವೆ. ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾ ನನಗೆ ಬೆನ್ನೆಲುಬಾಗಿ ಸಮಾಜದ ಶಕ್ತಿ, ಸ್ವತಹ ಜನರೇ ಬೆಂಬಲಕ್ಕೆ ನಿಂತಿದ್ದಾರೆ.

    ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಸಾಧನೆ ಮಾಡಿದ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲೂ, ಸಾಮಾಜಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸತ್ಯ ಸುದ್ದಿಗಳನ್ನು ಬಯಲಿಗೆಳೆದು ಗುಣಮಟ್ಟದ ಲೇಖನಗಳು ಹಾಗೂ ಸುದ್ದಿಗಳನ್ನು ಪ್ರಕಟಗೊಳಿಸುತ್ತಿರುವುದು ವಿಸ್ಮಯ. ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಾಗರಕ್ಕೆ ಕನ್ನಡಿ ಹಿಡಿದಂತಾಗಿದೆ. ಸಮಾಜದ ಜಾಗೃತಿಗೆ ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಶ್ರಮಿಸುವೆ, ಇದೇ ನನ್ನ ದೃಢ ವಿಶ್ವಾಸ ವೀರ ಸಂಕಲ್ಪ ಎಂದು ಹೇಳಿದರು.