Category: Entertainment

Music expresses feeling and thought, without language. It was below and before speech, and it is above and beyond all words.

  • ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಸತ್ಯಕಾಮ ವಾರ್ತೆ ಯಾದಗಿರಿ:

    ನಟ ಡಾಲಿ ಧನಂಜಯ ಅವರು ಯಾದಗಿರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರು ಸಿನಿಮಾಗಳನ್ನು ಅಪಾರ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ಪ್ರೀತಿ ಕಲಾವಿದರಿಗೆ ದೊಡ್ಡ ಶಕ್ತಿ ಎಂದು ಹೇಳಿದರು.

    ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಡವರಾಸ್ಕಲ್’ ನಿರ್ದೇಶಕರೊಂದಿಗೆ ಮಾಡುತ್ತಿರುವ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಕೊನೆಯ ಶೆಡ್ಯೂಲ್ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ಸಿನಿಮಾ ‘ಹಲಗಲಿ’ ಯ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಸುಮಾರು 40 ಶೇಕಡಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉಳಿದ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

    ಇದರ ಜೊತೆಗೆ ‘ಟ್ರಿಪಲ್ ಸಿಕ್ಸ್ – ಆಪರೇಶನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಕೂಡ ನಿರಂತರವಾಗಿ ಸಾಗುತ್ತಿದೆ. ಈ ವರ್ಷದ ಮಧ್ಯಭಾಗದಿಂದ ತಮ್ಮ ಅಭಿನಯದ ಹಾಗೂ ನಿರ್ಮಾಣದ ಸಿನಿಮಾಗಳು ಒಂದರ ಬಳಿಕ ಒಂದಾಗಿ ಬಿಡುಗಡೆಯಾಗಲಿವೆ ಎಂದು ಧನಂಜಯ ಹೇಳಿದರು.

    ತಮ್ಮ ನಿರ್ಮಾಣದ ‘ಜೆಸಿದ ಯೂನಿವರ್ಸಿಟಿ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಹಾಗೂ ಪ್ರೇಮ ಅವರು ಬಿಡುಗಡೆ ಮಾಡಿದ್ದಾರೆ. ಜೈಲು ಹಿನ್ನೆಲೆಯ ಈ ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಹೊಸ ನಾಯಕ–ನಾಯಕಿ ಹಾಗೂ ಹೊಸ ನಿರ್ದೇಶಕರ ತಂಡವನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.

    ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕಡಿಮೆ ದರದಲ್ಲೇ ಎಲ್ಲ ವರ್ಗದ ಪ್ರೇಕ್ಷಕರು ಸಿನಿಮಾ ನೋಡಬಹುದಾಗಿತ್ತು. ಟಿಕೆಟ್ ದರ ಸ್ವಲ್ಪ ಕಡಿಮೆಯಾದರೆ ಬಡ ಪ್ರೇಕ್ಷಕರಿಗೂ ಸಿನಿಮಾ ನೋಡುವ ಅವಕಾಶ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

    ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪೈರಸಿ ಕುರಿತು ಮಾತನಾಡಿದ ಅವರು, ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು ಎಂದು ಹೇಳಿದರು. ಪ್ರೇಕ್ಷಕರು ಪೈರಸಿ ಪ್ರತಿಗಳನ್ನು ತಿರಸ್ಕರಿಸಿ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಮುಂದಾದರೆ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

    ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ಜನರ ಪ್ರೀತಿ ಹಾಗೂ ಬೆಂಬಲವೇ ತಮ್ಮ ಶ್ರಮಕ್ಕೆ ದೊಡ್ಡ ಪ್ರೇರಣೆ ಎಂದು ಹೇಳಿದರು.

    ಕೊನೆಗೆ ಉತ್ತರ ಕರ್ನಾಟಕದ ಜನರ ಆತ್ಮೀಯತೆಗೆ ಋಣಿ ಎಂದು ಡಾಲಿ ಧನಂಜಯ ಹೇಳಿದರು.

  • ‘ಕಲ್ಟ್’ ಸಿನಿಮಾ ಫ್ಲೆಕ್ಸ್‌ ತೆರವು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಬೆದರಿಕೆ, ವಿವಾದ ಭುಗಿಲು

    ‘ಕಲ್ಟ್’ ಸಿನಿಮಾ ಫ್ಲೆಕ್ಸ್‌ ತೆರವು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಬೆದರಿಕೆ, ವಿವಾದ ಭುಗಿಲು


    ಶಿಡ್ಲಘಟ್ಟದಲ್ಲಿ ‘ಕಲ್ಟ್’ ಸಿನಿಮಾ ಪ್ರಚಾರಕ್ಕೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದ ವಿಚಾರ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದೊಂದಿಗೆ ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.

     

    ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ನಡೆದಿತ್ತು. ಕಾರ್ಯಕ್ರಮದ ಭಾಗವಾಗಿ ಕೋಟೆ ವೃತ್ತದ ಬಳಿ ರಸ್ತೆ ಮಧ್ಯೆ ಹಾಗೂ ಸಂಚಾರಕ್ಕೆ ಅಡ್ಡಿಯಾಗುವಂತೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರಿಂದ ನಗರಸಭೆಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಅಳವಡಿಸಿದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ನಗರಸಭೆ ಕಚೇರಿಗೆ ತರಲಾಗಿದೆ.

     

    ಫ್ಲೆಕ್ಸ್‌ ತೆರವುಗೊಳಿಸಿದ ವಿಷಯ ತಿಳಿಯುತ್ತಿದ್ದಂತೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಕರೆ ಮಾಡಿ ಕಿಡಿಕಾರಿದ್ದು, ಅವಾಚ್ಯ ಶಬ್ದಗಳಲ್ಲಿ ನಿಂದನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತಷ್ಟು ಗಂಭೀರವಾಗಿದೆ.

     

    ಆಡಿಯೋದಲ್ಲಿ, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಕ್ಕೆ ಕೋಪಗೊಂಡ ರಾಜೀವ್ ಗೌಡ ಅವರು ಬೆದರಿಕೆಯ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಪೌರಾಯುಕ್ತೆ ಅಮೃತಾ ಗೌಡ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿರುವುದು ಆಡಿಯೋದಲ್ಲೇ ಕೇಳಿಸುತ್ತಿದೆ. ಅಪಘಾತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಹೊರುವ ಪರಿಸ್ಥಿತಿ ಉಂಟಾಗುವುದರಿಂದ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

     

    ಈ ಘಟನೆಯು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರವೃತ್ತಿಯನ್ನೇ ತೋರಿಸುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜೀವ್ ಗೌಡ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು. ಅವರ ಪತ್ನಿ ಸ್ಥಳೀಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲೂ ಪ್ರಕರಣಕ್ಕೆ ರಾಜಕೀಯ ಬಣ್ಣ ಸಿಕ್ಕಿದೆ.

     

    ಆಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ, ರಾಜೀವ್ ಗೌಡ ಅವರು ತಮ್ಮ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತೆ ಅಮೃತಾ ಗೌಡ ಅವರ ಬಳಿ ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ. ಆದರೂ, ಈ ಘಟನೆ ಆಡಳಿತಾತ್ಮಕ ಅಧಿಕಾರಿಗಳ ರಕ್ಷಣೆಯ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

  • ಶಿವಣ್ಣ ಭವಿಷ್ಯ ನಿಜವಾಗುತ್ತಾ? ʻಬಿಗ್‌ ಬಾಸ್‌ 12ʼ ಫಿನಾಲೆಗೆ ಮುನ್ನ ಗಿಲ್ಲಿ  ಅಲೆ ಜೋರು

    ಶಿವಣ್ಣ ಭವಿಷ್ಯ ನಿಜವಾಗುತ್ತಾ? ʻಬಿಗ್‌ ಬಾಸ್‌ 12ʼ ಫಿನಾಲೆಗೆ ಮುನ್ನ ಗಿಲ್ಲಿ ಅಲೆ ಜೋರು


    ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಫಿನಾಲೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಿನ್ನರ್‌ ಕುರಿತ ಚರ್ಚೆ ಜೋರಾಗಿದೆ. ಯಾರು ಕಿರೀಟ ಹೊಡೆಯುತ್ತಾರೆ ಎಂಬ ಕುತೂಹಲದ ನಡುವೆ ಈಗ ನಟ ಶಿವರಾಜ್‌ಕುಮಾರ್‌ ಅವರ ಹೇಳಿಕೆ ದೊಡ್ಡ ಮಟ್ಟದ ಗಮನ ಸೆಳೆದಿದೆ. “ಈ ಸೀಸನ್‌ ಗಿಲ್ಲಿಯದ್ದೇ” ಎಂಬ ಶಿವಣ್ಣ ಮಾತುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್‌ ಆಗಿದ್ದು, ಗಿಲ್ಲಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

     

    ಈ ಸೀಸನ್‌ ಅಂತಿಮ ಹಂತ ತಲುಪುತ್ತಿದ್ದಂತೆ ವೋಟಿಂಗ್‌, ಅಭಿಮಾನಿಗಳ ಅಭಿಯಾನ, ರ್ಯಾಲಿ, ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗಳು ಎಲ್ಲವೂ ಗಿಲ್ಲಿ ಪರವಾಗಿಯೇ ಕಾಣಿಸುತ್ತಿವೆ. ಸಾಮಾನ್ಯ ವೀಕ್ಷಕರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳವರೆಗೂ ಗಿಲ್ಲಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇಷ್ಟು ಮಟ್ಟಿಗೆ ಜನಪ್ರೀತಿ ಪಡೆದ ಸ್ಪರ್ಧಿ ಕನ್ನಡದ ʻಬಿಗ್‌ ಬಾಸ್‌ʼ ಇತಿಹಾಸದಲ್ಲೇ ವಿರಳ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

     

    ಗಿಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವುದಕ್ಕೆ ಮುಖ್ಯ ಕಾರಣ ಅವರ ನ್ಯಾಚುರಲ್‌ ಆಟ. ಯಾವುದೇ ಕೃತಕತೆ ಇಲ್ಲದೆ, ತಮ್ಮದೇ ಶೈಲಿಯ ಕಾಮಿಡಿ, ಸರಳ ನಡವಳಿಕೆ ಹಾಗೂ ಎಂಟರ್‌ಟೈನ್‌ಮೆಂಟ್‌ ಮೂಲಕ ಅವರು ಜನರಿಗೆ ಹತ್ತಿರವಾಗಿದ್ದಾರೆ. ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ “ವಿನ್ನರ್‌ ಫಿಕ್ಸ್‌” ಎಂಬ ಮಟ್ಟಿಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವುದು ಇದರ ಸ್ಪಷ್ಟ ಉದಾಹರಣೆ.

     

    ಗಿಲ್ಲಿ ಹಾಗೂ ಶಿವರಾಜ್‌ಕುಮಾರ್‌ ಅವರ ಪರಿಚಯ ಹೊಸದಲ್ಲ. ಜೀ ಕನ್ನಡದ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ವೇದಿಕೆಯಲ್ಲಿ ಗಿಲ್ಲಿಯ ಪ್ರದರ್ಶನ ನೋಡಿ ಶಿವಣ್ಣ ಮೆಚ್ಚಿಕೊಂಡಿದ್ದರು. ಆ ಕಾರ್ಯಕ್ರಮದಲ್ಲೇ “ಟ್ರೂ ಹಾನೆಸ್ಟ್‌ ಎಂಟರ್‌ಟೈನರ್‌” ಎಂದು ಗಿಲ್ಲಿಯನ್ನು ಹೊಗಳಿದ್ದ ಶಿವಣ್ಣ, ಅವರ ಎನರ್ಜಿ ಮತ್ತು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಿಲ್ಲಿಯ ಕಾಮಿಡಿ ಹಾಗೂ ನೃತ್ಯ ಶೈಲಿ ಅಂದಿನ ಜಡ್ಜ್‌ಗಳನ್ನೇ ಮನರಂಜಿಸಿದ್ದದ್ದು ಎಲ್ಲರಿಗೂ ನೆನಪಿದೆ.

     

    ಇದೀಗ ಹೊರಬಿದ್ದಿರುವ ವಿಡಿಯೋದಲ್ಲಿ ಶಿವರಾಜ್‌ಕುಮಾರ್‌ ಅವರು ಸ್ಪಷ್ಟವಾಗಿ “ಈ ಸೀಸನ್‌ ಗಿಲ್ಲಿನೇ ಗೆಲ್ಲೋದು” ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತಂದಿದೆ. ಜೊತೆಗೆ ಗಿಲ್ಲಿಗೆ “ಆಲ್‌ ದಿ ಬೆಸ್ಟ್‌” ಎಂದು ಶುಭಾಶಯ ಕೋರಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಮಾತುಗಳು ಹೊರಬಿದ್ದ ಕೂಡಲೇ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಗಿಲ್ಲಿ ಪರ ವಾತಾವರಣ ಇನ್ನಷ್ಟು ಗಟ್ಟಿಯಾಗುತ್ತಿದೆ.

     

    ಫಿನಾಲೆ ಹತ್ತಿರವಾಗುತ್ತಿದ್ದಂತೆ ಎಲ್ಲರ ಕಣ್ಣೂ ಒಂದೇ ಪ್ರಶ್ನೆಯ ಮೇಲೆ ಇದೆ ಶಿವಣ್ಣ ಭವಿಷ್ಯ ನಿಜವಾಗುತ್ತಾ? ಗಿಲ್ಲಿ ಈ ಸೀಸನ್‌ ಕಿರೀಟ ಧರಿಸುತ್ತಾನಾ? ಇದಕ್ಕೆ ಉತ್ತರ ಸಿಗಲು ಇನ್ನೂ ಕೆಲವೇ ದಿನಗಳು ಬಾಕಿ. ಆದರೆ, ಈ ಕ್ಷಣಕ್ಕೆ ಮಾತ್ರ ಗಿಲ್ಲಿ ಪರ ಅಲೆ ಜೋರಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

  • ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿದ್ದ ಫ್ಯಾನ್ಸ್‌ ವಾರ್‌ಗೆ ನಟ ಕಿಚ್ಚ ಸುದೀಪ್‌ ಸ್ವತಃ ತೆರೆ ಎಳೆದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದ್ದ ಮಾತಿನ ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆಯೇ ಸುದೀಪ್‌ ಮಾಡಿದ ಒಂದು ಸಾಲಿನ ಟ್ವೀಟ್‌ ಎಲ್ಲ ಗದ್ದಲಕ್ಕೂ ಬ್ರೇಕ್‌ ಹಾಕಿದೆ. ದರ್ಶನ್‌ ಬಗ್ಗೆ ಅವರು ವ್ಯಕ್ತಪಡಿಸಿದ ನಿಲುವು ಇದೀಗ ಅಭಿಮಾನಿಗಳ ನಡುವೆ ವೈರಲ್‌ ಆಗಿದೆ.

    ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಡಿಸೆಂಬರ್‌ 25ರಂದು ತೆರೆಗೆ ಬರಲಿದ್ದು, ಇದರ ಹಿನ್ನೆಲೆಯಲ್ಲಿ ನಡೆದ ಹುಬ್ಬಳ್ಳಿ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಸುದೀಪ್‌ ‘ಯುದ್ಧಕ್ಕೆ ಸಿದ್ಧ’ ಎಂಬ ಮಾತು ಹೇಳಿದ್ದರು. ಈ ಮಾತು ಪೈರಸಿ ವಿರೋಧದ ಅಭಿಯಾನಕ್ಕೆ ಸಂಬಂಧಿಸಿದದ್ದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಕೆಲವರು ಇದನ್ನು ದರ್ಶನ್‌ ವಿರುದ್ಧದ ಸಂದೇಶ ಎಂದು ಅರ್ಥ ಮಾಡಿಕೊಂಡರು. ಇದರಿಂದ ಇಬ್ಬರು ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತೀವ್ರಗೊಂಡಿತು.

    ಈ ಮಧ್ಯೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗಳನ್ನೂ ಕೆಲವರು ಪರೋಕ್ಷ ಟಾಂಗ್‌ ಎಂದುಕೊಂಡು ಚರ್ಚೆಗೆ ಎಳೆದರು. ಪರಿಣಾಮವಾಗಿ ಫ್ಯಾನ್ಸ್‌ ವಾರ್‌ ದಿನೇ ದಿನೇ ಹೆಚ್ಚುತ್ತಾ ಹೋಗಿತ್ತು. ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್‌ ಟ್ವಿಟರ್‌ನಲ್ಲಿ ‘ಆಸ್ಕ್‌ ಮಿ ಎನಿಥಿಂಗ್‌’ ಸೆಷನ್‌ ನಡೆಸಿದ್ದು, ಅಲ್ಲೇ ಎಲ್ಲ ಗೊಂದಲಕ್ಕೂ ತೆರೆ ಬಿದ್ದಂತಾಯಿತು.

    ಸೆಷನ್‌ ವೇಳೆ ಒಬ್ಬ ಅಭಿಮಾನಿ ಸುದೀಪ್‌ ಹಾಗೂ ದರ್ಶನ್‌ ಜೊತೆಗಿನ ಹಳೆಯ ಫೋಟೋವೊಂದನ್ನು ಹಂಚಿಕೊಂಡು, “ಇವರ ಬಗ್ಗೆ ಒಂದು ಮಾತು ಹೇಳಿ” ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಸುದೀಪ್‌ ಯಾವುದೇ ತಿರುಗುಬಾಣವಿಲ್ಲದೆ, ಸರಳವಾಗಿ “ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೀನಿ” ಎಂದು ಉತ್ತರಿಸಿದರು. ಈ ಒಂದು ಸಾಲಿನ ಪ್ರತಿಕ್ರಿಯೆ ಸಾಕಾಯಿತು, ಇಡೀ ವಿವಾದದ ತಾಪ ತಣ್ಣಗಾಗಲು.

    ಕಿಚ್ಚ ಸುದೀಪ್‌ ಅವರ ಈ ನಿಲುವನ್ನು ಹಲವರು ಮೆಚ್ಚಿಕೊಂಡಿದ್ದು, ಸ್ಟಾರ್‌ಗಳ ನಡುವಿನ ಗೌರವ ಹಾಗೂ ಸ್ನೇಹವೇ ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸಾಬೀತಾಗಿದೆ. ಫ್ಯಾನ್ಸ್‌ ನಡುವೆ ನಡೆಯುವ ಅನಗತ್ಯ ಸಂಘರ್ಷಕ್ಕೆ ಇಂತಹ ಹೇಳಿಕೆಗಳು ಬ್ರೇಕ್‌ ಹಾಕಬೇಕು ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.

  • ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಬಿಗ್ ಬಾಸ್ ಕನ್ನಡ 11’ ಮೂಲಕ ಸಾಕಷ್ಟು ಗಮನ ಸೆಳೆದ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಇದೀಗ ಸರಳ ವಿವಾಹಕ್ಕೆ ಸಿದ್ಧರಾಗಿದ್ದಾರೆ. ಆಡಂಬರ ಇಲ್ಲದ, ಮನೆಯವರ ಆಶೀರ್ವಾದದೊಂದಿಗೆ ನಡೆಯುವ ಮದುವೆಯೇ ಇವರ ನಿರ್ಧಾರ.

    ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ಪರಿಚಯ, ನಂತರ ಪ್ರೀತಿ, ಆಮೇಲೆ ಕುಟುಂಬದವರೊಂದಿಗೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಮದುವೆಯ ಹಂತಕ್ಕೆ ಬಂದಿದ್ದಾರೆ. ಪ್ರಪೋಸ್ ಮಾಡಿದ್ದು ನಾನೇ ಎಂದು ಹೇಳಿಕೊಂಡಿರುವ ಉಗ್ರಂ ಮಂಜು, ‘ನೇರವಾಗಿ ಮದುವೆ ಬಗ್ಗೆ ಮಾತನಾಡಿದೆ. ಎರಡು ಮೂರು ತಿಂಗಳಲ್ಲೇ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೆವು’ ಎಂದು ತಮ್ಮ ಪ್ರೀತಿಯ ಕಥೆಯನ್ನು ಹಂಚಿಕೊಂಡಿದ್ದಾರೆ.

    ಮದುವೆ ಯಾವಾಗ, ಎಲ್ಲಿ ಅನ್ನೋ ಪ್ರಶ್ನೆಗೆ ಉಗ್ರಂ ಮಂಜು ತಾವೇ ಸ್ಪಷ್ಟ ಉತ್ತರ ನೀಡಿದ್ದಾರೆ. ಜನವರಿ 23ರಂದು ಹಂಸಗಿರಿ ಹೊಸೂರಿನ ಮನೆ ದೇವರಾದ ತಿಮ್ಮರಾಯಸ್ವಾಮಿ ಸನ್ನಿಧಿಯಲ್ಲಿ ಇವರ ವಿವಾಹ ನಡೆಯಲಿದೆ. ಗುರುವಿನ ಸಲಹೆ ಹಾಗೂ ತಮ್ಮ ಆಸೆಯಂತೆ ದೇವಾಲಯದಲ್ಲೇ ಮದುವೆಯಾಗಲು ನಿರ್ಧರಿಸಿದ್ದು, ಕುಟುಂಬದವರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಲಿದೆ.

    ಆಡಂಬರ, ಅತಿಯಾದ ಖರ್ಚು ನಮಗೆ ಇಷ್ಟವಿಲ್ಲ ಎನ್ನುವ ಉಗ್ರಂ ಮಂಜು, ಮದುವೆಗಾಗಿ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಿ ನಂತರ ಅದರ ಒತ್ತಡ ಹೊರುವುದಕ್ಕಿಂತ ಶಾಂತವಾಗಿ ದೇವರ ಆಶೀರ್ವಾದದೊಂದಿಗೆ ಹೊಸ ಜೀವನ ಆರಂಭಿಸುವುದೇ ನಮ್ಮ ಯೋಚನೆ ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಸಾಯಿ ಸಂಧ್ಯಾ ಕೂಡ ಹಂಚಿಕೊಂಡಿದ್ದಾರೆ.

    ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಮದುವೆಗೆ ಸಜ್ಜಾಗಿದೆ. ಜನವರಿ 23ರಂದು ಮನೆ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಸರಳ ವಿವಾಹಕ್ಕೆ ಅಭಿಮಾನಿಗಳಿಂದ ಈಗಾಗಲೇ ಶುಭಾಶಯಗಳ ಸುರಿಮಳೆ ಆರಂಭವಾಗಿದೆ.

  • ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು  ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19ರಂದು ಜಗತ್ತಿನಾದ್ಯಂತ ತೆರೆಗೆ ಬರಲು ಸಿದ್ಧವಾಗುತ್ತಿದ್ದಂತೆಯೇ, ಕನ್ನಡದಿಂದ ಹಿಡಿದು ಬಾಲಿವುಡ್‌–ಟಾಲಿವುಡ್‌ ವರೆಗೆ ಎಲ್ಲೆಡೆ ಚಲನಚಿತ್ರ ಚಲನ ಶುರುವಾಗಿದೆ. ಇನ್ನೂ ನೂರು ದಿನ ಬಾಕಿ ಇದ್ದರೂ ಟಾಕ್ಸಿಕ್ ಕುರಿತಂತೆ ಚರ್ಚೆ ಗಟ್ಟಿಯಾಗಿ ನಡೆಯುತ್ತಿದೆ. ಯಶ್ ತಮ್ಮ ಅಭಿಮಾನಿಗಳೊಂದಿಗೆ ಹೊಸ ಸಂದೇಶ ಹಂಚಿಕೊಂಡಿರುವುದು ಈ ಸಂಭ್ರಮಕ್ಕೆ ಮತ್ತಷ್ಟು ವೇಗ ನೀಡಿದೆ. ಆದರೆ ಈ ಬಾರಿ ಟಾಕ್ಸಿಕ್ ಒಬ್ಬನೇ ಕಣಕ್ಕಿಳಿಯುವುದಿಲ್ಲ; ಅದೇ ಸಮಯದಲ್ಲಿ ಇನ್ನೂ ಅನೇಕ ದೊಡ್ಡ ಸಿನಿಮಾಗಳು ಸಾಲಾಗಿ ನಿಂತಿವೆ.

    ಟಾಕ್ಸಿಕ್ ಬಿಡುಗಡೆಯಾದ ತಕ್ಷಣದ ದಿನವೇ ಅಜಯ್ ದೇವಗನ್ ನಟನೆಯ ಧಮಾಲ್ 4 ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕಾಮಿಡಿ ಮತ್ತು ಮನರಂಜನೆಯನ್ನು ಒಟ್ಟುಗೂಡಿಸಿಕೊಂಡಿರುವ ಈ ಸಿನಿಮಾಗೆ ಬಾಲಿವುಡ್‌ನಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅದರ ಜೊತೆಗೆ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಓಡುತ್ತಿದ್ದು, ಅದರ ಮುಂದಿನ ಭಾಗವನ್ನು ಇದೇ ಸಮಯಕ್ಕೆ ತರಲು ತಂಡ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ಬಾಲಿವುಡ್‌ ಸಿನಿಮಾಗಳು ತಮ್ಮದೇ ಅಭಿಮಾನಿ ಬಳಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವುದರಿಂದ, ಮರೀಚಿಕೆ ಗದ್ದಲ ಖಚಿತ.

    ಇದೇ ವೇಳೆ ಟಾಲಿವುಡ್‌ ಕೂಡ ಕೈ ಮುಗಿದು ಕುಳಿತಿಲ್ಲ. ಮಾರ್ಚ್ ತಿಂಗಳ ಕೊನೆಯಲ್ಲಿ ಡಕಾಯಿತ್ ಸಿನಿಮಾ ರಿಲೀಸ್‌ ಆಗಲು ಸಜ್ಜಾಗುತ್ತಿದೆ. ಗುಂಡು–ಗಲಾಟೆ, ಟೆನ್ಷನ್, ಆಕ್ಷನ್ ಆಲ್ ಮಿಕ್ಸೆಡ್ ಎಂಬ ಶೈಲಿಯ ಈ ಚಿತ್ರ ಈಗಲೇ ಪ್ರೇಕ್ಷಕರಲ್ಲಿ ಕುತೂಹಲ ಬಿತ್ತಿದೆ. ಅದೇ ವಾರದಲ್ಲಿ ರಾಮ್ ಚರಣ್ ತನ್ನ ಅತ್ಯಂತ ನಿರೀಕ್ಷಿತ ಪೆದ್ದಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಹಾಡುಗಳು ಮತ್ತು ಟೀಸರ್‌ಗಳು ವೈರಲ್ ಆಗಿರುವುದರಿಂದ ಈ ಚಿತ್ರದ ನಿರೀಕ್ಷೆ ಮಾರ್ಚ್‌ ತಿಂಗಳ ಹವಾ ಬದಲಾಯಿಸುವ ಮಟ್ಟಕ್ಕೆ ಏರಿದೆ. ಇದೇ ದಿನ ಮತ್ತೊಂದು ದೊಡ್ಡ ಚಲನಚಿತ್ರ, ನಾನಿ ಅಭಿನಯದ ದಿ ಪ್ಯಾರಡೈಸ್, ಪ್ರೇಕ್ಷಕರ ಮುಂದೆ ಬರಲಿದೆ. ನಾನಿಯ ಚಿತ್ರಗಳಿಗೆ ಇರುವ ನಂಬಿಕೆ ಮತ್ತು ಪ್ರೀತಿ ಈ ಚಿತ್ರಕ್ಕೂ ಬಲ ನೀಡಲಿದೆ.

    ಒಂದೇ ತಿಂಗಳಲ್ಲಿ, ಒಂದೇ ಕಾಲದಲ್ಲಿ ಆರು ಬೃಹತ್ ಸಿನಿಮಾಗಳು ತೆರೆಗೆ ಬರುವುದು ಸಾಮಾನ್ಯ ಸಂಗತಿ ಅಲ್ಲ. ಪ್ರತಿ ಚಿತ್ರವೂ ತನ್ನದೇ ಭಿನ್ನ ಜಾನರ್‌, ವಿಭಿನ್ನ ಸಿನೆಮಾಟಿಕ್‌ ಸ್ಟೈಲ್‌, ತನ್ನದೇ ಅಭಿಮಾನಿಗಳ ಬೆಂಬಲ ಇವೆಲ್ಲ ಸೇರಿ ಮಾರ್ಚ್ 2026 ಅನ್ನು ನಿಜವಾದ ಸಿನೆಮಾ ಹಬ್ಬದ ತಿಂಗಳನ್ನಾಗಿ ಮಾಡುತ್ತಿದೆ. ಇದೊಂದು ಬಾಕ್ಸ್‌ ಆಫೀಸ್‌ ಯುದ್ಧವೇ ಆಗಬಹುದು, ಆದರೆ ಪ್ರೇಕ್ಷಕರಿಗೆ ಇದು ಸಂಪೂರ್ಣ ಉತ್ಸವ.

    ಟಾಕ್ಸಿಕ್ ತನ್ನದೇ ಲೆವೆಲ್‌ನಲ್ಲಿ ದೊಡ್ಡ ನಿರೀಕ್ಷೆಯನ್ನು ಹೊತ್ತಿದ್ದರೂ, ಎದುರು ನಿಂತಿರುವ ಸಿನಿಮಾಗಳು ಕೂಡ ಲಘು ಪ್ರತಿಸ್ಪರ್ಧಿಗಳಲ್ಲ. ಯಶ್, ಅಜಯ್ ದೇವಗನ್, ರಣವೀರ್ ಸಿಂಗ್, ರಾಮ್ ಚರಣ್, ನಾನಿ ಎಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮದೇ ಆದ ಮಿಂಚನ್ನು ತೋರಿಸಲು ಸಿದ್ಧರಾಗಿದ್ದಾರೆ. ಯಾವ ಸಿನಿಮಾ ಜೋರಾಗಿ ಓಡುತ್ತದೆ, ಯಾವುದು ಬಾಕ್ಸ್‌ ಆಫೀಸ್‌ನಲ್ಲಿ ಸ್ಪರ್ಧೆಯನ್ನು ಮೀರಿಸುತ್ತದೆ ಎಂಬ ಕುತೂಹಲ ಈಗಲೇ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

    ಒಟ್ಟಾರೆ ನೋಡಿದರೆ, 2026ರ ಮಾರ್ಚ್ ತಿಂಗಳು ಸಿನಿಮಾಪ್ರಿಯರಿಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಹಬ್ಬದ ಮಾಸವಾಗಲಿದೆ. ಪ್ರೇಕ್ಷಕರು ಯಾವ ಚಿತ್ರವನ್ನು ಮೊದಲಿಗೆ ನೋಡಬೇಕು ಎಂದು ಯೋಚಿಸುವಷ್ಟರಲ್ಲಿ ಮತ್ತೊಂದು ದೊಡ್ಡ ರಿಲೀಸ್‌ ಬಾಗಿಲಲ್ಲೇ ಕಾದಿದೆ. ಒಂದು ಮಾತಿನಲ್ಲಿ ಹೇಳಬೇಕಾದರೆ ಆ ತಿಂಗಳು ಥಿಯೇಟರ್‌ಗಳಿಗೆ ಹೋಗುವುದು ಕೇವಲ ಸಿನಿಮಾ ನೋಡುವುದು ಅಲ್ಲ; ಅದು ಒಂದು ಅನುಭವ!

  • ಮಾರ್ಕ್’ ಟ್ರೈಲರ್ ರಿಲೀಸ್ ಆದ ಕೆಲ ಹೊತ್ತಲ್ಲೇ ದಾಖಲೆ

    ಮಾರ್ಕ್’ ಟ್ರೈಲರ್ ರಿಲೀಸ್ ಆದ ಕೆಲ ಹೊತ್ತಲ್ಲೇ ದಾಖಲೆ

    ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ‘ಮಾರ್ಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸ್ಯಾಂಡಲ್‌ವುಡ್‌ ವಾತಾವರಣವೇ ಬದಲಾಗಿದೆ. ಯೂಟ್ಯೂಬ್ ತೆರೆಯುತ್ತಿದ್ದವರಿಗೇ ಮೊದಲಿಗೆ ಕಾಣಿಸಿಕೊಂಡದ್ದು ಕಿಚ್ಚನ ಖಡಕ್ ಲುಕ್. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ದಾಟಿ, ‘ಮಾರ್ಕ್’ ಟ್ರೆಂಡಿಂಗ್ ಪಟ್ಟಿಯ ಮೇಲ್ಭಾಗಕ್ಕೆ ಸರಿಯುವಷ್ಟು ಸದ್ದು ಮಾಡಿದೆ.

    ಟ್ರೈಲರ್ ನೋಡಿದ ಕ್ಷಣದಿಂದಲೇ ಅಭಿಮಾನಿಗಳ ಪ್ರತಿಕ್ರಿಯೆ ಒಂದೇ ರೀತಿ ಇದು ಕಿಚ್ಚನ ಪಕ್ಕಾ ಮಾಸ್ ಲುಕ್. ಪೊಲೀಸ್ ಅಧಿಕಾರಿಯಾಗಿ ನಿಂತುಕೊಂಡಿರುವ ಸುದೀಪ್‌ ಅವರ ನೋಟ, ಸಂಭಾಷಣೆ, ಶೈಲಿ ಎಲ್ಲವೂ ‘ಮ್ಯಾಕ್ಸ್’ನ ಜೋಶ್‌ ಹಿಂದಿರುಗಿದೆ ಅನ್ನೋ ಭಾವನೆ ಕೊಡುತ್ತದೆ. 18 ಮಕ್ಕಳ ಅಪಹರಣ ಪ್ರಕರಣವನ್ನು 18 ಗಂಟೆಗಳೊಳಗೆ ಬಗೆಹರಿಸಬೇಕಾದ ಒತ್ತಡದ ಕಥೆ ಟ್ರೈಲರ್‌ನಷ್ಟರಲ್ಲೇ ತೀವ್ರತೆಯನ್ನು ತೋರಿಸಿದೆ. ಸುದೀಪ್‌ ಅವರ ಮುಖದಲ್ಲಿರುವ ಗಂಭೀರತೆ, ಟ್ರೈಲರ್‌ನ ಬ್ಯಾಕ್ಗ್ರೌಂಡ್ ಮ್ಯೂಸಿಕ್, ಆಕ್ಷನ್ ಸೀನ್‌ಗಳು ಎಲ್ಲವೂ ಒಟ್ಟಿಗೆ ಸಿನಿಮಾ ದಿಕ್ಕೇ ಹೇಳುವಂತೆ ಮಾಡಿವೆ.

    ಕಳೆದ ವರ್ಷ ಇದೇ ಸಮಯದಲ್ಲಿ ‘ಮ್ಯಾಕ್ಸ್’ ಹುಚ್ಚುಹಬ್ಬ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿತ್ತು. ಈಗ ಅದೇ ಜೋಶ್ ಮತ್ತೆ ಕಾಣಿಸಿಕೊಂಡಿದೆ. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ದಾಖಲೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಾಮಾನ್ಯ ಪ್ರೇಕ್ಷಕರೂ ಟ್ರೈಲರ್‌ ಅನ್ನು ಹಂಚಿಕೊಳ್ಳುತ್ತಿರುವುದು ಚಿತ್ರಕ್ಕೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

    ಸುದೀಪ್ ಹಾಕಿರುವ ಹೊಸ ಹಾಡಿನ ಸಣ್ಣ ಸ್ಟೆಪ್ ಟ್ರೈಲರ್‌ನಲ್ಲೇ ಗಮನ ಸೆಳೆದಿದೆ. ‘ಮ್ಯಾಕ್ಸ್’ ಸಮಯದಲ್ಲಿ ಹೇಗೆ ಕಿಚ್ಚನ ಸ್ಟೆಪ್ಸ್ ವೈರಲ್ ಆಗಿದ್ದವೋ, ಇದೇ ರೀತಿ ಈ ಬಾರಿಯೂ ಟ್ರೆಂಡ್ ಆಗೋದ್ರಲ್ಲಿ ಎರಡು ಮಾತಿಲ್ಲ. ಕಿಚ್ಚನ ನ್ಯಾಚುರಲ್ ಸ್ಟೈಲ್, ಕಿಕ್ ಕೊಡುವ ಸ್ಕ್ರೀನ್ ಪ್ರೆಸೆನ್ಸ್ಈ ರೀತಿಯದ್ದನ್ನು ನೋಡುವುದು ಅಭಿಮಾನಿಗಳಿಗೆ ಯಾವಾಗಲೂ ವಿಶೇಷ.

    ‘ಮಾರ್ಕ್’ ಚಿತ್ರದಲ್ಲಿ ವಿಕ್ರಾಂತ್, ನವೀನ್ ಚಂದ್ರ, ರೋಶಿಣಿ ಪ್ರಕಾಶ್, ಯೋಗಿಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೂಡ ಸಂಭ್ರಮದ ನಡುವೆಯೇ ಜರುಗಿದ್ದು, ನಿರ್ದೇಶಕ ಪ್ರೇಮ್‌, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮತ್ತು ಸುದೀಪ್‌ ಅವರ ಪತ್ನಿ ಪ್ರಿಯಾ ಕೂಡ ಉಪಸ್ಥಿತರಿದ್ದರು.

    ಡಿಸೆಂಬರ್ 25ರಂದು ಕ್ರಿಸ್‌ಮಸ್ ದಿನ ‘ಮಾರ್ಕ್’ ಬಿಡುಗಡೆಯಾಗಲಿದೆ. ಟ್ರೈಲರ್‌ನಷ್ಟರಲ್ಲೇ ಸಿನಿಮಾ ಕೊಡುವ ಜೋಷ್ ಸ್ಪಷ್ಟವಾಗಿದೆ. ಬಿಡುಗಡೆಯ ದಿನವು ಅಭಿಮಾನಿಗಳಿಗೆ ಹಬ್ಬದಂತೆಯೇ ಇರಲಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಟ್ರೈಲರ್ ನೀಡಿರುವ ಸ್ಪೀಡ್ ನೋಡಿದರೆ ‘ಮಾರ್ಕ್’ ಬಾಕ್ಸ್ ಆಫೀಸ್‌ನಲ್ಲಿ ಧೂಳು ಎಬ್ಬಿಸೋದು ಅನಿವಾರ್ಯ ಎನ್ನುವ ಮಾತು ಈಗಲೇ ಕೇಳಿ ಬರುತ್ತಿದೆ.

  • ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾ ಗದ್ದಲಗೊಂಡಿದೆ. ಆದರೆ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ಒಂದೇ ‘ಬಿಗ್ ಬಾಸ್ ಕನ್ನಡ 12’ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ತಕ್ಷಣದ ಹಾಸ್ಯಭರಿತ ಎಂಟ್ರಿ.

    ಟ್ರೇಲರ್‌ನಲ್ಲೊಂದು ಸಣ್ಣ ಸನ್ನಿವೇಶ. ಪೊಲೀಸ್‌ ಮುಂದೆ ಕುಳಿತಿರುವ ಗಿಲ್ಲಿ ನಟ, ತಮ್ಮದೇ ಶೈಲಿಯಲ್ಲಿ “ಎಕ್ಸ್‌ಕ್ಯೂಸ್ ಮಿ ಪಿಸಿ… ಸ್ವಲ್ಪ ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ!” ಎನ್ನುವ ಡೈಲಾಗ್ ಹೇಳುತ್ತಾರೇನು, ಕ್ಷಣಾರ್ಧದಲ್ಲೇ ಆ ದೃಶ್ಯಕ್ಕೇ ಬಣ್ಣ ಬದಲಾಗುತ್ತದೆ. ಅವರ ಡೆಲಿವರಿ, ಟೈಮಿಂಗ್ ಎರಡೂ ಸೇರಿ ಟ್ರೇಲರ್‌ನಲ್ಲಿರುವ ಗಂಭೀರತೆಯಲ್ಲಿ ಕ್ಷಣಿಕ ನಗುವಿನ ಗಾಳಿ ಹರಿಸುತ್ತವೆ.

    ಬಿಗ್ ಬಾಸ್’ ಮನೆಯಲ್ಲಿ ಈಗಾಗಲೇ ಗಿಲ್ಲಿ ನಟ ಹಾಸ್ಯದಿಂದ ಜನರ ಮನ ಗೆದ್ದಿದ್ದಾರೆ. ಡಬಲ್ ಮೀನಿಂಗ್ ಬೇಡ, ಅಸಭ್ಯ ಪದ ಬೇಡ… ಮನೆಯಲ್ಲೇ ನಡೆಯುವ ಚಿಕ್ಕ ಘಟನೆಗಳಿಗೆ ಸನ್ನಿವೇಶ, ಚಿತ್ರ ರೆಫರೆನ್ಸ್‌ ಜೋಡಿಸಿ, ತಕ್ಷಣ ಕಾಮಿಡಿ ಸಿಡಿಸುವುದು ಅವರ ಸ್ಟೈಲ್. ಅದೇ ಶೈಲಿ ಟ್ರೇಲರ್‌ನಲ್ಲೂ ಕಂಡುಬಂದಿದ್ದು, ವೀಕ್ಷಕರಿಗೆ “ಇವರ ಪಾತ್ರ ಸಿನಿಮಾದಲ್ಲೂ ಮುಖ್ಯವೇನೋ” ಎಂಬ ಅಂದಾಜು ಮೂಡಿಸಿದೆ.

    ಈಗಾಗಲೇ ಶೋ ಮೂಲಕ ಜನರಿಗೆ ಕನೆಕ್ಟ್ ಆಗಿರುವ ಅವರು, ದೊಡ್ಡ ಪರದೆ ಮೇಲೂ ತಮ್ಮದೇ ರೀತಿಯ ಗುರುತು ಮೂಡಿಸಿಕೊಳ್ಳಬಹುದು ಅನ್ನೋ ಆಸೆ ಅಭಿಮಾನಿಗಳಲ್ಲಿದೆ. ‘ಮ್ಯಾಕ್ಸ್ ಮಂಜು’ ಹೇಗೆ ಒಂದು ಚಿತ್ರದ ಮೂಲಕ ಹೊಸ ಇಮೇಜ್ ಪಡೆದುಕೊಂಡರೋ, ಗಿಲ್ಲಿ ನಟನಿಗೂ ‘ದಿ ಡೆವಿಲ್’ ಅದೇ ಅವಕಾಶ ಕೊಡುವ ಸಾಧ್ಯತೆ ದೊಡ್ಡದು.

    ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಟ್ರೇಲರ್‌ನಲ್ಲಿ ಕೇವಲ ಕೆಲವು ಸೆಕೆಂಡ್‌ನಲ್ಲಿಲೇ ಸದ್ದು ಮಾಡಿದ ಗಿಲ್ಲಿ ನಟ, ಚಿತ್ರ ಬಂದ ಮೇಲೆ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ದರ್ಶನ್‌ ಅಭಿನಯದ ಭಾರೀ ಚಿತ್ರದಲ್ಲಿ ಅವರು ಯಾವ ರೀತಿಯಲ್ಲಿ ಮೆರುಗು ತರುತ್ತಾರೆ ಅನ್ನೋದನ್ನು ಈಗ ಎಲ್ಲರೂ ಕಾತರದಿಂದ ಕಾದಿದ್ದಾರೆ.

  • ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ಸ್ಯಾಂಡಲ್‍ವುಡ್‌ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, “ಇವರು ಮದುವೆಯಾಗಿದ್ದಾರೆ” ಎಂಬ ವಿಷಯಕ್ಕೆ ಎಂದಿಗೂ ಅಧಿಕೃತ ದೃಢೀಕರಣ ಬಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ತೆರೆದುಕೊಂಡಿರುವ ಹಳೆ ಫೋಟೋಗಳು, ಚರ್ಚೆಗೆ ಮತ್ತಷ್ಟು ಆಹಾರ ನೀಡಿದ್ದಾರೆ.

    ಇತ್ತೀಚೆಗಷ್ಟೇ ವೈರಲ್ ಆದ ರೀಲ್ ವಿಡಿಯೋದಲ್ಲಿ ದರ್ಶನ್ ಮತ್ತು ಪವಿತ್ರಾ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಪವಿತ್ರಾ ಅವರ ಕತ್ತಿನಲ್ಲಿರುವ ಅರಿಶಿಣದ ದಾರ, ದರ್ಶನ್ ಅವರ ಉಡುಗೆ ಹಾಗೂ ಇಬ್ಬರ ಭಾವಭಂಗಿ, ಅಭಿಮಾನಿಗಳಲ್ಲಿ “ಇದು ಅವರ ಮದುವೆಯ ಫೋಟೋವೇ?” ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ತೆಗೆಯಲ್ಪಟ್ಟಿದೆ ಎನ್ನಲಾಗಿರುವ ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಅನೇಕ ವಾದ ಪ್ರತಿವಾದಗಳಿಗೆ ಕಾರಣವಾಗಿವೆ.

    ಆ ಸಮಯದಲ್ಲೇ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿದ್ದ ಸಂದರ್ಭದಲ್ಲಿ, ಪವಿತ್ರಾ ಅವರು ಅವರಿಗೆ ಊಟ ಮಾಡಿಸುತ್ತಿರುವ ಕ್ಷಣಗಳೂ ಫೋಟೋಗಳಲ್ಲಿ ಕಾಣಿಸುತ್ತಿವೆ. ಈ ಅನೌಪಚಾರಿಕ ದೃಶ್ಯಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತಿವೆ.

    ಆದರೆ, ಗಮನಿಸಬೇಕಾದ ಸಂಗತಿ ಏನೆಂದರೆ ಈವರೆಗೆ ಇವರು ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಈ ಹಳೆಯ ಫೋಟೋಗಳ ಮೇಲಿನ ಚರ್ಚೆ ಹೆಚ್ಚುತ್ತಿದ್ದಂತೆಯೇ, ಅಭಿಮಾನಿಗಳಲ್ಲಿ ಕುತೂಹಲ ತಾರಕ್ಕೇರಿದೆ.

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಇದು ನಿಜವಾದ ಮದುವೆಯೇ? ಇಲ್ಲಾ ಫೋಟೋಶೂಟ್‌ನಾ?” ಎಂದು ಅಚ್ಚರಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ

    ಫೋಟೋಗಳು ವೈರಲ್ ಆದರೂ, ನಿಜ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಷ್ಟರಲ್ಲೇ, ದರ್ಶನ್ ಪವಿತ್ರಾ ಜೋಡಿ ಕುರಿತು ಊಹಾಪೋಹಗಳು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿವೆ.

  • ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಸದ್ಯ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಅಭಿಮಾನಿ ಬಳಗ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಈ ನಟನ ವಿರುದ್ಧ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಸುದ್ದಿಯಾಗಿದೆ.

    ಮಾಹಿತಿಯ ಪ್ರಕಾರ, ಮನೋಜ್ ಎಂಬ ನಿವಾಸಿಯವರು ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಕೆಲವು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ವಾಸಿಸುವ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಈ ಎಲ್ಲರಿಂದ ನಿರಂತರ ತೊಂದರೆ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನ ಪ್ರಕಾರ, ಪ್ರತಿದಿನವೂ ಧ್ರುವ ಸರ್ಜಾ ಅವರ ಮನೆಯನ್ನು ನೋಡುವುದಕ್ಕಾಗಿ ಅನೇಕ ಅಭಿಮಾನಿಗಳು ಬಂದು ಮನೆಯ ಮುಂದೆಯೇ ಬೈಕ್‌ಗಳನ್ನು ಪಾರ್ಕ್ ಮಾಡುತ್ತಾರೆ, ಧೂಮಪಾನ ಮಾಡುತ್ತಾರೆ, ಮತ್ತು ಗೋಡೆಗಳ ಮೇಲೆ ಉಗುಳುವಂತಹ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ. ಈ ಘಟನೆಗಳಿಂದ ಪ್ರದೇಶದ ಶಾಂತಿ ಭಂಗವಾಗಿದ್ದು, ಅಕ್ಕಪಕ್ಕದ ಜನರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ಮನೋಜ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

    ಅಷ್ಟೇ ಅಲ್ಲದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನೋಜ್ ಬೇಡಿಕೆ ಇಟ್ಟಿದ್ದಾರೆ.

    ಸದ್ಯ ಈ ದೂರಿನನ್ವಯ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non Cognizable Report) ದಾಖಲಾಗಿದ್ದು, ಪೊಲೀಸರು ವಿಷಯದ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

    ಧ್ರುವ ಸರ್ಜಾ ಅಥವಾ ಅವರ ತಂಡದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ. ಆದರೆ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕನ್ನಡ ಸಿನಿ ಲೋಕದ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಧ್ರುವ ಸರ್ಜಾ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರೀತಿಯ ವಿವಾದಾತ್ಮಕ ದೂರುಗಳು ಅವರ ಮೇಲೆ ಹೊಸ ಸವಾಲು ಎಸೆದಂತಾಗಿದೆ.