Category: Crime

  • ನಕಲಿ ಮುಟೇಷನ್ ದಾಖಲೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು 

    ನಕಲಿ ಮುಟೇಷನ್ ದಾಖಲೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು 

    ಯಾದಗಿರಿ:  ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಷನ್ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ ಆರೋಪದ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರು ವ್ಯಕ್ತಿಗಳ ವಿರುದ್ಧ ಜಿಲ್ಲೆಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಿಮ್ಮಾಪುರ ನಿವಾಸಿ ಅಶೋಕ ಅವರು ನೀಡಿದ ದೂರಿನಂತೆ, ವಣಕಿಹಾಳ ಹಾಗೂ ಹಸನಾಪುರ ಗ್ರಾಮಗಳ ವಿವಿಧ ಸರ್ವೆ ಸಂಖ್ಯೆಗಳ ಕುರಿತು ಮುಟೇಷನ್ ನಂ. 28 ಮತ್ತು 30 (05-10-1996)ಗಳ ನಕಲಿ ಪ್ರತಿಗಳನ್ನು ತಯಾರಿಸಿ, ಸರಕಾರಿ ಸೀಲ್–ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಜಿಲ್ಲಾಧಿಕಾರಿ ಹಾಗೂ ಸುರಪುರ ತಹಸೀಲ್ದಾರ್ ಕಚೇರಿಗಳಿಂದ ನಡೆದ ಪರಿಶೀಲನೆ, ಅಭಿಲೇಖಾಲಯ ಶಾಖೆಯ ವರದಿಗಳು ಹಾಗೂ ಪಹಣಿ ದಾಖಲೆಗಳ ಪರಿಶೀಲನೆಯಿಂದ ಈ ಮುಟೇಷನ್ ಪ್ರತಿಗಳು ಕೊಟ್ಟಿ (ನಕಲಿ) ದಾಖಲೆಗಳಾಗಿವೆ ಎಂಬುದು ದೃಢಪಟ್ಟಿದೆ ಎಂದು ದೂರಿನಲ್ಲಿ  ಉಲ್ಲೇಖಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಬಸವರಾಜ ತಂದೆ ರಾಜಶೇಖರಪ್ಪ ಸಜ್ಜನ್, ಡಿಸಿಸಿ ಬ್ಯಾಂಕ್ ಕಲಬುರಗಿ ನಿರ್ದೇಶಕ ಸುರೇಶ ತಂದೆ ರಾಜಶೇಖರಪ್ಪ ಸಜ್ಜನ್ ಹಾಗೂ ಪ್ರಕಾಶ ತಂದೆ ರಾಜಶೇಖರಪ್ಪ ಸಜ್ಜನ್ ವಿರುದ್ಧ ಐಪಿಸಿ ಕಲಂ. 464, 465, 468, 471 ಮತ್ತು 420 ಅಡಿಯಲ್ಲಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಪೊಲೀಸ್ ಮೂಲಗಳು ತಿಳಿಸಿವೆ.

  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ!

    ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ!

    ಬಿಲಾಸ್‌ಪುರ್ (ಛತ್ತೀಸ್‌ಗಢ): ಮಂಗಳವಾರ ಸಂಜೆ ಛತ್ತೀಸ್‌ಗಢದ ಬಿಲಾಸ್‌ಪುರ್ ಜಿಲ್ಲೆಯ ಲಾಲ್‌ಖದಾನ್ ಬಳಿ ರೈಲು ಮಾರ್ಗದಲ್ಲಿ ನಡುಗುವಂತ ಘಟನೆ ನಡೆಯಿತು. ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲುಗಳು ಪರಸ್ಪರ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ, ಕ್ಷಣಾರ್ಧದಲ್ಲಿ ಅನೇಕ ಬೋಗಿಗಳು ಹಳಿ ತಪ್ಪಿ ಪರಸ್ಪರದ ಮೇಲೆ ಏರಿವೆ. ಈ ಭೀಕರ ಅಪಘಾತದಲ್ಲಿ ಹಲವರು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆಯ ನಂತರ ತಕ್ಷಣವೇ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕತ್ತಲಿನ ನಡುವೆಯೇ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯ ನಡೆದಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

    ಡಿಕ್ಕಿಯ ತೀವ್ರತೆ ಅಷ್ಟು ಭಯಾನಕವಾಗಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ, ಬೋಗಿಗಳ ಲೋಹದ ಚೂರುಗಳು ದೂರದೂರಿಗೆ ಹಾರಿಹೋಗಿದ್ದವು. ಅಲ್ಲದೆ ಡಿಕ್ಕಿಯಿಂದ ಓವರ್‌ಹೆಡ್ ತಂತಿಗಳು ಕಳಚಿಕೊಂಡಿದ್ದು, ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಬಿಲಾಸ್‌ಪುರ್ ಮಾರ್ಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ರೈಲುಗಳು ತಡೆದಿಡಲ್ಪಟ್ಟಿದ್ದು, ಕೆಲವು ಬೇರೆ ಮಾರ್ಗಗಳಿಗೆ ತಿರುಗಿಸಲಾಗುತ್ತಿದೆ.

    ಘಟನೆಯ ನಂತರ ರೈಲ್ವೆ ಇಲಾಖೆ ತುರ್ತು ತನಿಖೆಗೆ ಆದೇಶ ನೀಡಿದ್ದು, ಅಪಘಾತದ ನಿಖರ ಕಾರಣ ತಿಳಿಯುವ ಕಾರ್ಯ ಪ್ರಾರಂಭವಾಗಿದೆ. ಮೊದಲ ಹಂತದ ಮಾಹಿತಿಯ ಪ್ರಕಾರ ಸಿಗ್ನಲ್ ದೋಷ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆಗಳಿರಬಹುದು ಎಂದು ಪರಿಗಣಿಸಿದ್ದಾರೆ.

    ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಜನತೆ ಕೋಪೋದ್ರಿಕ್ತರಾಗಿದ್ದು, “ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಿವೆ, ರೈಲ್ವೆ ಇಲಾಖೆ ನಿಜವಾಗಿಯೂ ಎಚ್ಚರದಲ್ಲಿದೆಯೇ?” ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.

    ಇದೇ ವೇಳೆ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯ ಕೈಗೊಂಡಿದ್ದು, ಸಹಾಯವಾಣಿ ಸಂಖ್ಯೆಗಳ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾವಿನ ನಿಖರ ಸಂಖ್ಯೆ ಹಾಗೂ ಹಾನಿಯ ಪ್ರಮಾಣವನ್ನು ಬೆಳಗ್ಗಿನ ವೇಳೆಗೆ ಬಹಿರಂಗಪಡಿಸುವ ಸಾಧ್ಯತೆ ಇದೆ.

  • ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರ : ರಾಜಸ್ಥಾನದ ಹೃದಯಭಾಗವಾದ ಜೈಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ನೂರಾರು ಕಣ್ಣೀರನ್ನು ತರಿಸಿದೆ. ಮದ್ಯದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡ ಡಂಪರ್ ಟ್ರಕ್ ಚಾಲಕನೊಬ್ಬ, ಬರೋಬ್ಬರಿ ಐದು ಕಿಲೋಮೀಟರ್ ದೂರವರೆಗೆ ಅಬ್ಬರಿಸಿದ ಪರಿಣಾಮ, 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಐವತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಜೀವ–ಮರಣ ಹೋರಾಟ ನಡೆಸುತ್ತಿದ್ದಾರೆ.

    ಲೋಹಮಂಡಿ ರಸ್ತೆಯೆಂಬ ಜೈಪುರದ ಬ್ಯುಸಿ ಮಾರ್ಗದಲ್ಲಿ ಈ ಭೀಕರ ಸರಣಿ ಅಪಘಾತ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಬಂದಿದ್ದ. ಒಂದು ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲುವ ಬದಲು, ನೇರವಾಗಿ ಇನ್ನೊಂದು ಗಾಡಿಗೆ ಅಪ್ಪಳಿಸುತ್ತಾ ಮುಂದುವರಿದ. ಕೆಲವೇ ಕ್ಷಣಗಳಲ್ಲಿ ರಸ್ತೆ ನರಮೇಧಕ್ಕೆ ಕಣವಾಗಿತ್ತು, ಕಾರುಗಳ ಅವಶೇಷಗಳು, ಬೈಕ್‌ಗಳ ತುಂಡುಗಳು, ಚೂರುಚೂರು ಗಾಜುಗಳು, ರಕ್ತದ ಗುರುತುಗಳು ಎಲ್ಲೆಡೆ ಅಳಲು ಮತ್ತು ಆಕ್ರಂದನದ ವಾತಾವರಣ ಸೃಷ್ಟಿಯಾಯಿತು.

    ಆಘಾತಕಾರಿ ದೃಶ್ಯವನ್ನು ಕಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವು ನಿಮಿಷಗಳಲ್ಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ, ನಜ್ಜುಗುಜ್ಜಾದ ವಾಹನಗಳಡಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅನೇಕರ ಜೀವ ಉಳಿಯಲಿಲ್ಲ. “ಆ ಟ್ರಕ್ ನಿಲ್ಲುತ್ತಿಲ್ಲವೆಂದು ಎಲ್ಲರೂ ಕಿರುಚುತ್ತಿದ್ದೆವು. ಆದರೆ ಚಾಲಕನಿಗೆ ಬುದ್ಧಿಯೇ ಇರಲಿಲ್ಲ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಕಣ್ಣೀರು ತಡೆದುಕೊಂಡು ಹೇಳಿದ್ದಾನೆ.

    ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಅವನು ತೀವ್ರ ಮದ್ಯಪಾನ ಮಾಡಿದ್ದನೆಂಬುದು ದೃಢಪಟ್ಟಿದೆ. ವೈದ್ಯಕೀಯ ವರದಿ ಕೂಡ ಅದನ್ನೇ ದೃಢಪಡಿಸುತ್ತಿದೆ. ಈ ಘಟನೆಯ ನಂತರ ಜೈಪುರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, “ಕುಡಿದ ಚಾಲಕರಿಗೆ ಕಟ್ಟುನಿಟ್ಟಿನ ಶಿಕ್ಷೆ ಕೊಡಬೇಕು” ಎಂಬ ಬೇಡಿಕೆ ಕೇಳಿ ಬಂದಿದೆ.

    ಈ ದುರ್ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ಜೈಪುರದಲ್ಲಿ ಸಂಭವಿಸಿದ ಈ ದುರಂತದಿಂದ ನನಗೆ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರವನ್ನು ಘೋಷಿಸಲಾಗಿದೆ.

    ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸಹ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಬಲಪಡಿಸಲು ಸೂಚನೆ ನೀಡಿದ್ದಾರೆ.

  • ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಸದ್ಯ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಅಭಿಮಾನಿ ಬಳಗ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಈ ನಟನ ವಿರುದ್ಧ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಸುದ್ದಿಯಾಗಿದೆ.

    ಮಾಹಿತಿಯ ಪ್ರಕಾರ, ಮನೋಜ್ ಎಂಬ ನಿವಾಸಿಯವರು ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಕೆಲವು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ವಾಸಿಸುವ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಈ ಎಲ್ಲರಿಂದ ನಿರಂತರ ತೊಂದರೆ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನ ಪ್ರಕಾರ, ಪ್ರತಿದಿನವೂ ಧ್ರುವ ಸರ್ಜಾ ಅವರ ಮನೆಯನ್ನು ನೋಡುವುದಕ್ಕಾಗಿ ಅನೇಕ ಅಭಿಮಾನಿಗಳು ಬಂದು ಮನೆಯ ಮುಂದೆಯೇ ಬೈಕ್‌ಗಳನ್ನು ಪಾರ್ಕ್ ಮಾಡುತ್ತಾರೆ, ಧೂಮಪಾನ ಮಾಡುತ್ತಾರೆ, ಮತ್ತು ಗೋಡೆಗಳ ಮೇಲೆ ಉಗುಳುವಂತಹ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ. ಈ ಘಟನೆಗಳಿಂದ ಪ್ರದೇಶದ ಶಾಂತಿ ಭಂಗವಾಗಿದ್ದು, ಅಕ್ಕಪಕ್ಕದ ಜನರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ಮನೋಜ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

    ಅಷ್ಟೇ ಅಲ್ಲದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನೋಜ್ ಬೇಡಿಕೆ ಇಟ್ಟಿದ್ದಾರೆ.

    ಸದ್ಯ ಈ ದೂರಿನನ್ವಯ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non Cognizable Report) ದಾಖಲಾಗಿದ್ದು, ಪೊಲೀಸರು ವಿಷಯದ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

    ಧ್ರುವ ಸರ್ಜಾ ಅಥವಾ ಅವರ ತಂಡದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ. ಆದರೆ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕನ್ನಡ ಸಿನಿ ಲೋಕದ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಧ್ರುವ ಸರ್ಜಾ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರೀತಿಯ ವಿವಾದಾತ್ಮಕ ದೂರುಗಳು ಅವರ ಮೇಲೆ ಹೊಸ ಸವಾಲು ಎಸೆದಂತಾಗಿದೆ.

  • ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಸಿನಿಮಾ ಲೋಕದಲ್ಲಿ ಜನಪ್ರಿಯತೆ ಪಡೆದವರು ಎದುರಿಸಬೇಕಾದ ದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ತಮ್ಮ ಹೆಸರು ಮತ್ತು ಮುಖದ ದುರುಪಯೋಗ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆ ಡೀಪ್‌ಫೇಕ್ ಎಂಬ ಹೊಸ ಅಪಾಯವನ್ನು ತಂದುಕೊಟ್ಟಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಈ ತಂತ್ರಜ್ಞಾನವು ಯಾರ ಮುಖವನ್ನು ಬೇರೆ ವ್ಯಕ್ತಿಯ ದೇಹದ ಮೇಲೆ ನಿಖರವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಜವಾದ ಹಾಗೇ ಕಾಣುವ ನಕಲಿ ವೀಡಿಯೋಗಳನ್ನು ರಚಿಸಲಾಗುತ್ತದೆ. ಇದೇ ತಂತ್ರಜ್ಞಾನದಿಂದ ಈಗ ಮೆಗಾಸ್ಟಾರ್ ಚಿರಂಜೀವಿ ಸಂಕಷ್ಟ ಅನುಭವಿಸುತ್ತಿದ್ದಾರೆ

    ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿಯೂ, ಸಾಮಾನ್ಯ ಜನರಲ್ಲಿಯೂ ಆಘಾತ ಮೂಡಿಸಿದೆ. ಚಿರಂಜೀವಿ ಅವರ ಹೆಸರು, ಮುಖದ ಹೋಲಿಕೆ ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಿದ ಅಶ್ಲೀಲ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಟ ಸ್ವತಃ ಕಾನೂನು ಹೋರಾಟ ಆರಂಭಿಸಿದ್ದಾರೆ.

    ಚಿರಂಜೀವಿ ಅವರ ದೂರಿನಲ್ಲಿ ಏನಿದೆ?

    ಹಲವು ವೆಬ್‌ಸೈಟ್‌ಗಳು ನನ್ನ ಹೆಸರು ಮತ್ತು ಮುಖವನ್ನು ಬಳಸಿ ಕೃತಕವಾಗಿ ರಚಿಸಿದ ಅಶ್ಲೀಲ ವೀಡಿಯೋಗಳನ್ನು ಪ್ರಕಟಿಸಿವೆ. ಈ ವೀಡಿಯೋಗಳು ನನಗೆ ವಿರುದ್ಧವಾದ ತಪ್ಪು ಗ್ರಹಿಕೆಯನ್ನು ಉಂಟುಮಾಡಿ, ನನ್ನ ಮಾನ-ಗೌರವಕ್ಕೆ ಧಕ್ಕೆಯುಂಟುಮಾಡಿವೆ. ನನ್ನ ಮೇಲೆ ಜನರಲ್ಲಿದ್ದ ಸದ್ಭಾವನೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ, ಎಂದು ತಿಳಿಸಿದ್ದಾರೆ.

    ಈ ದೂರು ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಷನ್‌ಗಳು 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 79, 294, 296 ಮತ್ತು 336(4) ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4 ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.

    ಚಿರಂಜೀವಿ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, ಈ ವೀಡಿಯೋಗಳು ಸಂಪೂರ್ಣ ನಕಲಿ. ಕೃತಕ ಬುದ್ಧಿಮತ್ತೆ ಮೂಲಕ ನನ್ನ ಮುಖಭಾವ, ಶರೀರಭಾಷೆ ಮತ್ತು ವ್ಯಕ್ತಿತ್ವವನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಮಾನಹಾನಿಕಾರಕ, ಎಂದು ಖಂಡಿಸಿದ್ದಾರೆ.

    ಈ ಪ್ರಕರಣ ಕೇವಲ ಚಿರಂಜೀವಿಯವರ ವೈಯಕ್ತಿಕ ಹಕ್ಕಿನ ವಿಷಯವಲ್ಲ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರಕ್ರಿಯೆಗಳ ವಿರುದ್ಧ ಎಚ್ಚರಿಕೆಯ ಗಂಟೆ ಎಂಬಂತೆ ಪರಿಣಿತರು ಹೇಳಿದ್ದಾರೆ. ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಸೃಜನಶೀಲ ಕ್ಷೇತ್ರಗಳಿಗೆ ಅವಕಾಶಗಳನ್ನೂ ಕೊಡುವುದೇ ಸರಿ, ಆದರೆ ಅದನ್ನು ದುರುಪಯೋಗ ಮಾಡಿದರೆ ವ್ಯಕ್ತಿಗಳ ಗೌರವ ಮತ್ತು ಸಮಾಜದ ನೈತಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ.

    ಹೈದರಾಬಾದ್ ಪೊಲೀಸರು ಈಗ ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಚಿರಂಜೀವಿಯ ಪ್ರಕರಣದಿಂದ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

  • ಪುಷ್ಪಾ ಸ್ಟೈಲ್‌ನಲ್ಲಿ ಸ್ಮಗ್ಲಿಂಗ್ ಪ್ಲಾನ್-750 ಕೆ.ಜಿ. ಶ್ರೀಗಂಧ ವಶ

    ಪುಷ್ಪಾ ಸ್ಟೈಲ್‌ನಲ್ಲಿ ಸ್ಮಗ್ಲಿಂಗ್ ಪ್ಲಾನ್-750 ಕೆ.ಜಿ. ಶ್ರೀಗಂಧ ವಶ

    ಕರ್ನಾಟಕದ ಶ್ರೀಗಂಧವು ವಿಶ್ವಪ್ರಸಿದ್ಧ. ಅದರ ಸುಗಂಧ ಮತ್ತು ಔಷಧೀಯ ಗುಣಗಳ ಕಾರಣದಿಂದಾಗಿ ವಿದೇಶಗಳಲ್ಲಿ ಇದರ ಬೇಡಿಕೆ ಅಪಾರವಾಗಿದೆ. ಆದರೆ ಇದೇ ಬೇಡಿಕೆ ಅಕ್ರಮ ಕಟಾವು ಮತ್ತು ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ಕಾನೂನು ಬಿಗಿಗೊಳಿಸಿದ್ದರೂ, ಲಾಭದಾಸೆಯೆಡೆಗೆ ಕಣ್ಣಿಟ್ಟ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

    ಪುಷ್ಪ ಸಿನಿಮಾದಲ್ಲಿ ನೀವು ನೋಡಿದಂತೆ ರಕ್ತಚಂದನ ಕಳ್ಳಸಾಗಣೆ ಹೇಗೆ ನಡೆಯುತ್ತದೋ, ಅದೆ ರೀತಿ ಈಗ ನೈಜ ಜೀವನದಲ್ಲಿಯೂ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ ಘಟನೆಯೊಂದು ಇದಕ್ಕೆ ನಿದರ್ಶನವಾಗಿದೆ ಎನ್ನಬಹುದು. ಈ ಬಾರಿ ಕಳ್ಳರು ಈರುಳ್ಳಿ ಮೂಟೆಯೊಳಗೆ ಶ್ರೀಗಂಧದ ತುಂಡುಗಳನ್ನು ಮರೆಮಾಡಿ ಸಾಗಿಸುತ್ತಿದ್ದರು!

    ಆಂಧ್ರಪ್ರದೇಶದ ಕರ್ನೂಲ್‌ನಿಂದ ಬೆಂಗಳೂರಿನತ್ತ ಬರುತ್ತಿದ್ದ ವ್ಯಾನ್‌ನಿಂದ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಿದ್ದಾಪುರ ಪೊಲೀಸರು ವ್ಯಾನ್‌ನ್ನು ತಡೆದು ಪರಿಶೀಲಿಸಿದಾಗ, ಮೊದಲ ನೋಟಕ್ಕೆ ಇದು ಸಾಮಾನ್ಯ ಈರುಳ್ಳಿ ಸಾಗಾಟವೆಂದು ಕಂಡಿತು. ಆದರೆ ತಪಾಸಣೆ ವೇಳೆ ಈರುಳ್ಳಿ ಚೀಲಗಳ ಅಡಿಯಲ್ಲಿ ಮರೆಮಾಡಲಾಗಿದ್ದ 18 ಮೂಟೆಗಳಲ್ಲಿ ಸುಮಾರು 750 ಕೆ.ಜಿ. ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.

    ಆಂಧ್ರದ ಸಿರಾಜ್ ಎಂಬಾತ ಈ ದೊಡ್ಡ ಅಕ್ರಮ ಚಟುವಟಿಕೆಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ತನ್ನ ತಂಡದವರಾದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್ ಮತ್ತು ರಾಮ್ ಭೂಪಾಲ್ ಜೊತೆ ಸೇರಿ, ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸಿ, ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು. ನಂತರ ಬೆಂಗಳೂರಿನ ಅಕ್ರಮ ಡೀಲರ್‌ಗಳ ಮೂಲಕ ಶ್ರೀಗಂಧವನ್ನು ವಿದೇಶಗಳಿಗೆ ವಿಶೇಷವಾಗಿ ಚೀನಾಗೆ ಕಳುಹಿಸುವ ಯೋಜನೆ ಮಾಡಿಕೊಂಡಿದ್ದರು ಎನ್ನಲಾಗಿದೆ.

    ಸಿದ್ದಾಪುರ ಠಾಣಾ ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸಿ ಈ ಕಳ್ಳರ ಕೃತ್ಯವನ್ನು ಪತ್ತೆಹಚ್ಚಿದರು. ಕಳ್ಳಸಾಗಣೆಗಾರರನ್ನು ಸ್ಥಳದಲ್ಲೇ ಬಂಧಿಸಿ, ವ್ಯಾನ್‌ ಸೇರಿದಂತೆ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 750 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳ ಮೌಲ್ಯ ಲಕ್ಷಾಂತರ ರೂ.ಗಳಲ್ಲಿ ಅಂದಾಜಿಸಲಾಗಿದೆ. ಪೊಲೀಸರು ಈಗ ಈ ಅಕ್ರಮ ಜಾಲದ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಡೀಲರ್ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.

    ಈ ಪ್ರಕರಣದಿಂದ ಸುವಾಸನೆಯ ಶ್ರೀಗಂಧದ ಹಿಂದೆ ಅಡಗಿರುವ ಅಕ್ರಮದ ದುರ್ವಾಸನೆ ಮತ್ತೆ ಹೊರಬಿದ್ದಂತಾಗಿದೆ.

  • Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ವಿವಾದದ ಕೇಂದ್ರಬಿಂದುವಾಗಿದೆ. ಮನರಂಜನೆ, ಡ್ರಾಮಾ ಮತ್ತು ಸಂವಾದಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಈ ಕಾರ್ಯಕ್ರಮ ಈಗ ಕಾನೂನು ಗೋಜಿಗೆ ಸಿಲುಕಿದೆ. ಸ್ಪರ್ಧಿಗಳ ನಡುವೆ ನಡೆದ ಒಂದು ಘಟನೆ, ಆಡಿದ ಮಾತು, ಬಳಸಿದ ಪದ ಬಳಕೆ ಮತ್ತು ಅದರ ಪರಿಣಾಮವಾಗಿ ಉಂಟಾದ ಸಾಮಾಜಿಕ ಪ್ರತಿಕ್ರಿಯೆ ಇವೆಲ್ಲದರ ಹಿನ್ನೆಲೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಅಶ್ವಿನಿ ಗೌಡ ವಿರುದ್ಧ ದೂರು ದಾಖಲು:

    ಬಿಗ್‌ ಬಾಸ್‌ನ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಪ್ರಕಾರ, ಬಿಗ್‌ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುವಾಗ “She is S… ಆ ಕ್ಯಾಟೆಗರಿ‌ನವರು” ಎಂಬ ಪದಬಳಕೆ ಮಾಡಿರುವುದು ವ್ಯಕ್ತಿತ್ವ ನಿಂದನೆಯಾಗಿದೆ ಎಂದು ಆರೋಪಿಸಲಾಗಿದೆ.

    ದೂರಿನಲ್ಲಿ ಅಶ್ವಿನಿ ಗೌಡ ಅವರೊಂದಿಗೆ ಕಲರ್ಸ್ ಕನ್ನಡ ಚಾನೆಲ್‌ನ ವ್ಯವಹಾರ ಮುಖ್ಯಸ್ಥ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಹಾಗೂ ಡೈರೆಕ್ಟರ್ ಪ್ರಕಾಶ್ ಅವರ ಮೇಲೂ ಆರೋಪ ಹೊರಿಸಲಾಗಿದೆ. ಆರೋಪದಂತೆ, ಈ ರೀತಿಯ ನಿಂದನಾತ್ಮಕ ಪದಗಳನ್ನು ಸಂಪಾದನೆ ಮಾಡದೆ ಪ್ರಸಾರ ಮಾಡುವ ಮೂಲಕ ಚಾನೆಲ್ ಸಾಮಾಜಿಕ ಜವಾಬ್ದಾರಿಯನ್ನು ಉಲ್ಲಂಘಿಸಿದೆ. ಬಿಡದಿ ಪೊಲೀಸರು ಈ ಕುರಿತು ದೂರು ಸ್ವೀಕರಿಸಿ, ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ ಅಂದರೆ ಇದು ಗಂಭೀರವಲ್ಲದ ಪ್ರಕರಣ ಎಂದು ಗುರುತಿಸಲಾಗಿದೆ.

    ದೂರಿನ ವಿಷಯವೇನು?: 

    ದೂರಿನಲ್ಲಿ ಉಲ್ಲೇಖಿಸಿರುವಂತೆ, ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಗೌಡ ಅವರು ಬಳಸಿದ “S Category” ಎಂಬ ಪದ ಜಾತಿ ನಿಂದನೆ ಹಾಗೂ ವ್ಯಕ್ತಿತ್ವ ಹಾನಿಗೆ ಕಾರಣವಾಗುವಂತದ್ದು. ಈ ಪದ ಬಳಕೆ ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಮಾಜದ ಕೆಲವು ವರ್ಗಗಳಿಗೂ ನೋವುಂಟುಮಾಡುತ್ತದೆ ಎಂಬ ಆರೋಪ ಇದೆ.

    ದೂರುದಾರ ಪ್ರಶಾಂತ್ ಮೆತಾಲ್ ಅವರ ಪ್ರಕಾರ, “ಇಂತಹ ಪದಗಳು ಸಾರ್ವಜನಿಕವಾಗಿ ಪ್ರಸಾರವಾಗುವುದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತದೆ ಮತ್ತು ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಉದ್ದೇಶದಿಂದ ಈ ಭಾಗವನ್ನು ತೆಗೆಯದೆ ಪ್ರಸಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

    ರಕ್ಷಿತಾ ಶೆಟ್ಟಿ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದಾಗ, ಜಾಹ್ನವಿ ಮತ್ತು ಅಶ್ವಿನಿ ಗೌಡ ಫನ್ ಮಾಡಲು ಗೆಜ್ಜೆ (anklet) ಹಿಡಿದು ಅಲ್ಲಾಡಿಸಿದರೆಂದು ಹೇಳಲಾಗಿದೆ. ನಂತರ ಮನೆಯವರು ಯಾರು ಎಂದು ಕೇಳಿದಾಗ, ಇಬ್ಬರೂ ಅದು ರಕ್ಷಿತಾ ಮಾಡಿದ ಕೆಲಸ ಎಂದು ಸುಳ್ಳು ಹೇಳಿದ್ದಾರೆ.

    ಈ ವಿಷಯಕ್ಕೆ ಕೋಪಗೊಂಡ ರಕ್ಷಿತಾ ಇಬ್ಬರನ್ನೂ ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು. ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪದೆ ಗಲಾಟೆ ಮುಂದುವರಿಸಿದರು.

    ಮರುದಿನ ಬೆಳಗ್ಗೆ, ಅಶ್ವಿನಿ ಗೌಡ ಜಾಹ್ನವಿಯೊಂದಿಗೆ ಮಾತನಾಡುತ್ತಿದ್ದ ವೇಳೆ, ರಕ್ಷಿತಾಳ ಬಗ್ಗೆ “She is S… ಆ ಕ್ಯಾಟೆಗರಿಯವಳು” ಎಂದು ಹೇಳಿದ್ದು ಕ್ಯಾಮೆರಾದಲ್ಲಿ ಸೆರಿಯಾಗಿದೆ.

    ಸಾಮಾಜಿಕ ಪ್ರತಿಕ್ರಿಯೆ :

    ಈ ಘಟನೆ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಗೌಡ ವಿರುದ್ಧ ಟೀಕೆಗಳ ಮಳೆ ಸುರಿಯುತ್ತಿದ್ದು, ಕೆಲವು ವೀಕ್ಷಕರು ಅವರ ಮಾತುಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ನಿಂದನೆ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಬಿಗ್‌ ಬಾಸ್ ತಂಡದ ಸಂಪಾದನೆ ಮತ್ತು ಪ್ರಸಾರದ ನೀತಿಗಳನ್ನು ಪ್ರಶ್ನಿಸುತ್ತಿದ್ದಾರೆ.

    ಇನ್ನು, ಈ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಶ್ವಿನಿ ಗೌಡ ಅಥವಾ ಚಾನೆಲ್ ಪರವಾಗಿ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಬಿಗ್‌ ಬಾಸ್ ಮನೆಯ ಮನರಂಜನೆ ಈಗ ವಿವಾದದ ಗೂಡಿನಲ್ಲಿ ಸಿಲುಕಿದೆ. ಶಿಸ್ತಿನ ಅಭಾವ ಕಾನೂನು ಗೊಂದಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದು ಕಾದು ನೋಡಬೇಕಾಗಿದೆ.

  • ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರು: ನಗರದ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ದುರ್ಘಟನೆ ಒಂದು ವಿದ್ಯಾರ್ಥಿ ಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ತಿರುಪತಿ ಮೂಲದ ಬಿಟೆಕ್ ವಿದ್ಯಾರ್ಥಿ ಪವನ್, ತಾನು ವಾಸವಾಗಿದ್ದ ಪಿಜಿಯಲ್ಲೇ ಸಿಂಪಡಿಸಿದ್ದ ತಿಗಣೆ (ಪೆಸ್ಟಿಸೈಡ್) ಔಷಧಿಯ ವಾಸನೆಗೆ ಬಲಿಯಾದ ಘಟನೆ ನಗರದಲ್ಲಿ ದೊಡ್ಡ ಆತಂಕ ಮೂಡಿಸಿದೆ.

    ಪವನ್ ವಾಸವಾಗಿದ್ದ ಅಶ್ವಥ್ ನಗರದಲ್ಲಿನ ಬಿಎಸ್‌ಆರ್ ಪಿಜಿಯಲ್ಲಿ ಕೆಲವು ದಿನಗಳಿಂದ ತಿಗಣೆಗಳ ತೊಂದರೆ ಇತ್ತು ಎಂದು ತಿಳಿದುಬಂದಿದೆ. ಇದಕ್ಕಾಗಿ ಪಿಜಿ ನಿರ್ವಾಹಕರು ಔಷಧ ಸಿಂಪಡಿಸಿದ್ದರು. ಆದರೆ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಪವನ್ ಔಷಧ ಸಿಂಪಡಿಸಿದ ಬಳಿಕ ಕೊಠಡಿಗೆ ಹೋದಾಗ, ವಿಷಕಾರಿ ವಾಸನೆಯಿಂದ ಉಸಿರಾಟ ತೊಂದರೆ ಅನುಭವಿಸಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.

    ಅಸ್ವಸ್ಥನಾದ ಪವನ್‌ನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಗಲೇ ಪವನ್ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಪವನ್ ತಂದೆ ದೇವರಾಜಲು ಮತ್ತು ತಾಯಿ ರಮ್ಯಾ ಘಟನೆ ಕುರಿತು ಮಾತನಾಡುತ್ತಾ, “ಬೆಳಗ್ಗೆ 7 ಗಂಟೆಗೆ ಪವನ್ ಕರೆ ಮಾಡಿದ್ದ. ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಅಂದ. ಅದಾದ ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಪಿಜಿ ನಿರ್ವಾಹಕರಿಂದ ಮಗ ಮೃತಪಟ್ಟಿದ್ದಾನೆಂಬ ದುಃಖಕರ ಸುದ್ದಿ ಬಂದಿತು,” ಎಂದು ಕಣ್ಣೀರಿನೊಂದಿಗೆ ಹೇಳಿದರು.

    ಪೋಷಕರು ಪಿಜಿ ನಿರ್ವಾಹಕರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು ಆರೋಪಿಸಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. “ಔಷಧ ಸಿಂಪಡಣೆ ಮಾಡುವ ಮುನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಬೇಕಿತ್ತು. ಆದರೆ ಅಂಥ ಮಾಹಿತಿ ನೀಡದೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ,” ಎಂದು ಆರೋಪಿಸಿದ್ದಾರೆ.

    ಈ ಪ್ರಕರಣದ ಹಿನ್ನೆಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ (Unnatural Death Report) ದಾಖಲಾಗಿದೆ. ಪೊಲೀಸರು ಪಿಜಿ ನಿರ್ವಾಹಕರು ಮತ್ತು ಔಷಧ ಸಿಂಪಡಣೆ ನಡೆಸಿದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಿಜಿಗಳ ಸಂಖ್ಯೆ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ನಡೆಯಬಾರದು ಎಂಬ ಬೇಡಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಮೊಳಗುತ್ತಿದೆ.

  • ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲ್ಲೂಕಿನ ಬನೋಶಿ ಗ್ರಾಮದ ದಲಿತ ಸಮಾಜದ ಅಪ್ರಾಪ್ತೆ ಯುವತಿಯನ್ನ ಅತ್ಯಾಚಾರ ಎಸಗಿ ನೇಣು ಹಾಕಲಾಗಿದೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಂಕಿಸಿ ದೂರು ದಾಖಲಾಗಿದೆ.

    ಬನೋಶಿ ಗ್ರಾಮದ 16 ವರ್ಷದ ಬಸಮ್ಮಳ ಅತ್ಯಾಚಾರ ಏಸಗಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಅನುಮಾನಿತ ಮೂವರ ವಿರುದ್ದ ಯುವತಿಯ ತಂದೆಯಾದ ಮಾನಪ್ಪ ಚಲವಾದಿ ದೂರು ನೀಡಿದ್ದಾರೆ.

    ನನ್ನ ಮಗಳು ಬಸಮ್ಮ ಇವಳಿಗೆ ಶಾಲೆ ಬಿಡಿಸಿದ್ದು ಸದ್ಯ ಮನೆಯಲ್ಲಿಯೇ ಇರುತ್ತಿದ್ದಳು. ಈಗ ಸುಮಾರು 2-3 ತಿಂಗಳಿಂದ ಬನೋಶಿ ಗ್ರಾಮದ ಮಾಳಿಂಗರಾಯ ದಂಡೋಜಿ ಇವನು ನನ್ನ ಮಗಳು ಬಸಮ್ಮ ಇವಳಿಗೆ ಹಿಂದೆ ಬಿದ್ದು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತಾ ಅನ್ನುತ್ತಾ ನನ್ನ ಮಗಳಿಗೆ ಕಾಡಿಸುತ್ತಿದ್ದು ಈ ಬಗ್ಗೆ ನಮಗೆ ಗೊತ್ತಾಗಿ ನಾವು ನಮ್ಮ ಮಗಳಿಗೆ ಬುದ್ದಿ ಹೇಳಿ ನಮ್ಮ ಮನೆಯಲ್ಲಿ ಇರಿಸಿಕೊಂಡಿದ್ದೇವು. ಇತ್ತಿತ್ತಲಾಗಿ ನನ್ನ ಮಗಳು ಬಸಮ್ಮ ಇವಳಿಗೆ ನಮ್ಮ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡುವ ಬಗ್ಗೆ ನಾವು ಮನೆಯ ಜನರು ಮಾತನಾಡಿರುವ ಸಂಗತಿಯೂ ಮಾಳಿಂಗರಾಯ ದಂಡೋಜಿ ಇವನಿಗೆ ಗೊತ್ತಾದ ಮೇಲೆ ನನ್ನ ಮಗಳಿಗೆ ನನ್ನ ಬಿಟ್ಟು ನೀನು ಹೇಗೆ ಬೇರೆಯವನ ಸಂಗಡ ಮದುವೆ ಮಾಡಿಕೊಳ್ಳುತ್ತಿ ಅಂತಾ ನನ್ನ ಮಗಳಿಗೆ ಅವನನ್ನು ಪ್ರೀತಿಸಬೇಕು ಅಂತಾ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ, ನಮ್ಮ ಮಗಳಿಂದ ಸಂಗತಿ ಕೇಳಿ ಗೊತ್ತಾಗಿದ್ದು ಇರುತ್ತದೆ, ಹಾಗೂ ಶಿವನಗೌಡ ಬಿರಾದಾರ ಇವನು ಮಾಳಿಂಗರಾಯ ಇವನಿಗೆ ನನ್ನ ಮಗಳಿಗೆ ಕಿರುಕುಳ ನೀಡಲು ಕುಮ್ಮಕ್ಕು ನೀಡುತ್ತಿದ್ದನು ಎಂದು ಯುವತಿಯ ತಂದೆಯಾದ ಮಾನಪ್ಪ ಚಲವಾದಿ ಎಫ್ಐಆರ್ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಸೋಮವಾರ(ಅ.13) ನಮ್ಮ ಕುಟುಂಬ ಸಂತೆಗೆ ಮುದ್ದೇಬಿಹಾಳಕ್ಕೆ ಹೋಗುವಾಗ ಬಸಮ್ಮ ಇವಳು ನಮ್ಮ ಮನೆಯಲ್ಲಿಯೇ ಇದ್ದಳು. ಸಂಜೆ 5 ಗಂಟೆ ಸುಮಾರಿಗೆ ನಾವು ಮುದ್ದೇಬಿಹಾಳದಿಂದ ವಾಪಸ್ ನಮ್ಮ ಮನೆಗೆ ಹೋಗಿ ನೋಡಲು ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ರಾತ್ರಿ ಇಡೀ ದಿನ ಹುಡುಕಿದರು ನಮ್ಮ ಮಗಳು ಸಿಗಲಿಲ್ಲ. ಮರುದಿನ ಮಂಗಳವಾರ(ಅ.14) ಬೆಳಿಗ್ಗೆ ಗ್ರಾಮದ ಜಮೀನುಯೊಂದರಲ್ಲಿ ನನ್ನ ಮಗಳ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಅನುಮಾನಿತರ ವಿರುದ್ಧ ದೂರಿದ್ದಾರೆ.

    ಯುವತಿ ಅತ್ಯಾಚಾರ ಕೊಲೆ ಶಂಕೆ ಬಗ್ಗೆ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಯುವತಿಯ ಶವವಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಗಲ್ಲಿಗೇರಿಸಿ ಎಂಬ ಕೂಗು ಸಾರ್ವಜನಿಕವಾಗಿ ಕೇಳಿಬಂದವು.

    ಬನೋಶಿ ಗ್ರಾಮದಲ್ಲಿ ಯುವತಿ ಅತ್ಯಾಚಾರ ಶಂಕೆ ಬಗ್ಗೆ ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹಾಗೂ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದು, ಶಂಕಿಸಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ತನಿಖೆ ಮುಂದುವರೆದಿದೆ. ಯುವತಿಯ ಮರಣೋತ್ತರ ಪರೀಕ್ಷೆ ಬರುವವರೆಗೂ ಏನು ಹೇಳಾಗದು ಎಂದು ತಿಳಿಸಿದರು.

    ಸಂತ್ರಸ್ತೆ ಯುವತಿ ಕುಟುಂಬಕ್ಕೆ ಪರಿಹಾರ

    ಎಫ್ಐಆರ್ ಆಧರಿಸಿ ಪ್ರಾಥಮಿಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ ಮಾಡಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಇನ್ನುಳಿದ 50% ರಷ್ಟು ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುವುದು. ಈಗಾಗಲೇ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಲಾಗಿದ್ದು, ಇನ್ನುಳಿದ ಸರ್ಕಾರದ ಸೌಲಭ್ಯಗಳನ್ನು ಕುಟುಂಬಕ್ಕೆ ಇಲಾಖೆಯಿಂದ ನೀಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ ಮಠ ಹೇಳಿದ್ದಾರೆ.