Category: Agriculture

  • ಭೂಮಿ ಖರೀದಿ ವೇಳೆ ನೀವು ನೋಡಬೇಕಾದ 6 ಮುಖ್ಯ ಡಾಕ್ಯುಮೆಂಟ್ಸ್

    ಭೂಮಿ ಖರೀದಿ ವೇಳೆ ನೀವು ನೋಡಬೇಕಾದ 6 ಮುಖ್ಯ ಡಾಕ್ಯುಮೆಂಟ್ಸ್

    ಇಂದಿನ ವೇಗವಾಗಿ ವಿಸ್ತರಿಸುತ್ತಿರುವ ನಗರೀಕರಣ, ಬಂಡವಾಳ ಹೂಡಿಕೆಯ ಹೆಚ್ಚಳ ಹಾಗೂ ಆಸ್ತಿ ಮೌಲ್ಯದ ಏರಿಳಿತಗಳ ನಡುವೆ, ಭೂಮಿ ಖರೀದಿ ಬಹುತೇಕ ಜನರಿಗೆ ಪ್ರಮುಖ ಮತ್ತು ದೀರ್ಘಾವಧಿಯ ನಿರ್ಧಾರವಾಗಿದೆ. ಒಂದು ತಪ್ಪು ಮಾಹಿತಿ, ಒಂದು ತಪ್ಪು ದಾಖಲೆ ಅಥವಾ ಪರಿಶೀಲನೆಯ ಕೊರತೆ ಇವು ನಿಮ್ಮ ಜೀವನದ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳು, ಡಬಲ್ ಸೇಲ್, ವಿವಾದಾತ್ಮಕ ಜಾಗಗಳ ಮಾರಾಟದ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಭೂಮಿ ಖರೀದಿಸುವಾಗ ಕಾನೂನುಬದ್ಧ ದಾಖಲೆಯನ್ನು ಶೇಕಡಾ 100 ಸರಿಯಾಗಿ ಪರೀಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.

    ಭೂಮಿ ಖರೀದಿಸುವುದು ಕೇವಲ ಹಣಕಾಸಿನ ಹೂಡಿಕೆ ಅಲ್ಲ, ಇದು ಕಾನೂನು, ಹಕ್ಕು, ಮಾಲೀಕತ್ವ ಮತ್ತು ಭವಿಷ್ಯದ ಸುರಕ್ಷತೆಗೆ ಸಂಬಂಧಿಸಿದ ಸೂಕ್ಷ್ಮ ಪ್ರಕ್ರಿಯೆ. ಆದ್ದರಿಂದ, ಯಾವುದೇ ಭೂಮಿ/ಆಸ್ತಿಯನ್ನು ಖರೀದಿಸುವ ಮುನ್ನ, ಕೆಳಗಿನ 6 ಕಡ್ಡಾಯ ದಾಖಲೆಗಳನ್ನು ನೋಡದೇ ಒಂದು ಹೆಜ್ಜೆಯನ್ನೂ ಮುಂದಿಡಬಾರದು.

    ಹಕ್ಕುಪತ್ರ (Title Deed):

    ಭೂಮಿಯನ್ನು ಯಾರು ಹೊಂದಿದ್ದಾರೆ? ಅವರಿಗೆ ಮಾಲೀಕತ್ವ ಹೇಗೆ ಬಂದಿತು? ಇವುಗಳ ಸ್ಪಷ್ಟ ಉತ್ತರ ಹಕ್ಕುಪತ್ರದಲ್ಲಿ ಲಭ್ಯ. ಇದು ಆಸ್ತಿಯ ನಿಜವಾದ ಮಾಲೀಕರನ್ನು ಕಾನೂನಾತ್ಮಕವಾಗಿ ದೃಢಪಡಿಸುತ್ತದೆ. ಭೂಮಿ ಆನುವಂಶಿಕವಾಗಿ ಬಂದಿದೆಯೇ? ಖರೀದಿಯಿಂದ ಬಂದಿದೆಯೇ? ಮಾಲೀಕತ್ವದ ಸರಣಿ ಸರಿ ಇದೆಯೇ? ಈ ಎಲ್ಲ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

    ಸಾಲ ಕ್ಲಿಯರೆನ್ಸ್ ಪ್ರಮಾಣಪತ್ರ (Loan Clearance Certificate):

    ನೀವು ಖರೀದಿಸಲು ಹೊರಟಿರುವ ಭೂಮಿಯ ಮೇಲೆ ಯಾವುದೇ ಸಾಲ ಅಥವಾ ಬಾಧ್ಯತೆ ಇದ್ದರೆ, ನಿಮಗೆ ಭಾರೀ ತೊಂದರೆಯಾಗಬಹುದು.

    ಬ್ಯಾಂಕ್‌ಗಳಿಗೆ ಬಾಕಿ ಇರುವ ಸಾಲದ ಆಧಾರದ ಮೇಲೆ ಆಸ್ತಿ ಜಪ್ತಿ ಮಾಡುವ ಅಧಿಕಾರ ಇದೆ. ಆದ್ದರಿಂದ, ಆಸ್ತಿಯ ಮೇಲೆ ಯಾವುದೇ ಸಾಲವಿಲ್ಲ, ಎಲ್ಲಾ ಹಣಕಾಸು ಬಾಧ್ಯತೆಗಳು ಪೂರ್ಣಗೊಂಡಿವೆ ಎಂಬುದನ್ನು ದೃಢಪಡಿಸುವ ಸಾಲ ಕ್ಲಿಯರೆನ್ಸ್ ಕಡ್ಡಾಯ.

    ಎನ್‌ಒಸಿ (No Objection Certificate):

    ಆಸ್ತಿ ವಿವಾದಾತ್ಮಕವಾಗಿಲ್ಲ ಮತ್ತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಆಕ್ಷೇಪಣೆ ಇಲ್ಲವೆಂದು ತೋರಿಸಲು NOC ಅತ್ಯಂತ ಮುಖ್ಯ. ಕುಟುಂಬದ ಸದಸ್ಯರು, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್, ಸಹ ಮಾಲೀಕರು ಯಾರಿಗೂ ಆಕ್ಷೇಪಣೆ ಇಲ್ಲವೆಂಬ ಪ್ರಮಾಣಪತ್ರವಿಲ್ಲದೆ ಆಸ್ತಿ ಖರೀದಿಸಬಾರದು.

    ಮಾರಾಟ ಪತ್ರ (Sale Deed):

    • ಇದು ಆಸ್ತಿ/ಭೂಮಿಯ ಕಾನೂನುಬದ್ಧ ಮಾಲೀಕತ್ವ ನಿಮಗೆ ವರ್ಗಾಯಿಸಿದ ಅಧಿಕೃತ ದಾಖಲೆ.
    • ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ.
    • ಸ್ಟಾಂಪ್ ಶುಲ್ಕ ಪಾವತಿಸಿ.
    • ನೋಂದಾಯಿತ ಮಾರಾಟ ಪತ್ರವಿಲ್ಲದೆ ಯಾವುದೇ ಭೂಮಿ ಕಾನೂನಾತ್ಮಕವಾಗಿ ನಿಮ್ಮದಾಗುವುದಿಲ್ಲ.

    ಎಲ್ಲಾ ವೈಯಕ್ತಿಕ ದಾಖಲೆಗಳ ಫೋಟೋಕಾಪಿಗಳು:

    ಭೂಮಿ ನೋಂದಣಿಗೆ ನೀವು ಕೆಳಗಿನ ದಾಖಲೆಗಳ ಫೋಟೋಕಾಪಿಯನ್ನು ಸಲ್ಲಿಸಬೇಕು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಆದಾಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ) ಇವುಗಳಿಲ್ಲದೆ ನೋಂದಣಿ ಪ್ರಕ್ರಿಯೆ ಪೂರ್ಣವಾಗುವುದಿಲ್ಲ.

    ಜಮಾಬಂದಿ / RTC ರಸೀದಿ (Land Revenue Receipt):

    ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಕಚೇರಿ ಅಥವಾ ಮುನ್ಸಿಪಾಲಿಟಿ ಹೊಂದಿರುವ ಭೂಮಿಯ ಭೂಮಿಸಂಕೇತ ಮತ್ತು ಮಾಲೀಕತ್ವದ ದಾಖಲೆ ಇದು.

    RTC/ಜಮಾಬಂದಿಯಲ್ಲಿ, ಭೂಮಿಯ ಮಾಲೀಕರು ಯಾರು? ಭೂಮಿಯ ಬಳಕೆ ಏನು? ಯಾವುದೇ ಭೂ ತೆರಿಗೆ ಬಾಕಿಯಿದೆಯೇ? ಸ್ಪಷ್ಟವಾಗಿ ತಿಳಿದುಬರುತ್ತದೆ. ಭೂಮಿಯ ನಿಜವಾದ ಕಾನೂನು ದಾಖಲೆ ಇದು.

    ತೆರಿಗೆ ರಸೀದಿ / ನಗದು ಸಂಖ್ಯೆ ರಸೀದಿ :

    ಭೂಮಿಯನ್ನು ನೋಂದಾಯಿಸಿದ ನಂತರ ನಿಮಗೆ ದೊರೆಯುವ ರಸೀದಿ ಇದು. ಭೂಮಿಯ ಮೌಲ್ಯ, ತೆರಿಗೆ ಪಾವತಿ ವಿವರಗಳು, ಸಾಲವಿಲ್ಲ ಎಂಬ ಪುರಾವೆ ಈ ರಸೀದಿ ಭೂಮಿಯ ಮೇಲೆ ಭವಿಷ್ಯದಲ್ಲಿ ಯಾವುದೇ ವಿವಾದ ಬಾರದಂತೆ ರಕ್ಷಣೆ ನೀಡುತ್ತದೆ.

    ಭೂಮಿ ಎಂದರೆ ಲಾಭದಾಯಕ ಆಸ್ತಿ, ಆದರೆ ತಪ್ಪಾದ ದಾಖಲೆಗಳು ನಿಮ್ಮ ಜೀವನದ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ, ದಾಖಲೆಗಳನ್ನು ವಕೀಲರಿಂದ ಪರಿಶೀಲಿಸಿಕೊಳ್ಳಿ. ಯಾವ ದಾಖಲೆಗಳಲ್ಲಾದರೂ ಅನುಮಾನ ಕಂಡರೆ ಖರೀದಿಸಬೇಡಿ. ಕಾನೂನು ಬದ್ಧತೆಗಳನ್ನು ಪೂರೈಸಿದಾಗ ಮಾತ್ರ ಹಣ ಪಾವತಿಸಿ ಸುರಕ್ಷಿತ ಹೂಡಿಕೆ, ಸುರಕ್ಷಿತ ಭವಿಷ್ಯ.

  • ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ

    ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಂಗಳವಾರ ಜೋಳದಡಗಿ ಹಾಗೂ ಶಿವನೂರು ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.

    ಮೊದಲು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿದರು. ಈ ವೇಳೆ ಜೋಳದಡಗಿ ಗ್ರಾಮದ ರೈತ ದೇವೇಂದ್ರಪ್ಪ ಪೂಜಾರಿ, ಗೌಡರೆ ನೀರು ಬಂದು ನನ್ನ 4 ಎಕರೆ ಭತ್ತದ ಬೆಳೆ ನೀರಾಗ ಹೋಗ್ಯಾದ.ಪ್ರತಿ ವರ್ಷ ಇದೆ ಪರಿಸ್ಥಿತಿ ಆಗ್ಯಾದ್ ಎಂದು ನೋವು ತೊಡಿಕೊಂಡರು. ಅದೇ ರೀತಿ ರೈತ ಮಹಿಳೆ ಲಕ್ಷ್ಮಿ ಸಹ ಹಾನಿ ಕುರಿತು ಶಾಸಕರಿಗೆ ಕಷ್ಟ ತೊಡಿಕೊಂಡರು.

    ನಂತರ ಶಿವನೂರು ಗ್ರಾಮದಲ್ಲಿ ಭತ್ತ ಹಾಗೂ ಹತ್ತಿ ಬೆಳೆ ಹಾನಿ ವೀಕ್ಷಿಸಿದ ಶಾಸಕರು, ರೈತರ ಮನವಿಗಳನ್ನು ಆಲಿಸಿದರು. ರೈತ ಹಂಪಯ್ಯ ಮಾತನಾಡಿ ಕಳೆದ ವರ್ಷ ಪರಿಹಾರ ತುಂಬಾ ಕಡಿಮೆಯಿತ್ತು. ಈ ಬಾರಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.

    ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು, ನಮ್ಮ ಸರಕಾರ ಸದಾ ರೈತರ ಪರವಾಗಿಯೇ ಕಾರ್ಯನಿರ್ವಹಿಸಿದೆ. ಸುಮಾರು 3.5 ಲಕ್ಷ ಕ್ಯೂಸೆಕ್ ನೀರು ಬಿಡಲ್ಪಟ್ಟ ಕಾರಣ 22 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮಗ್ರ ಸಮೀಕ್ಷೆ ಮಾಡಿ ಯಾವುದೇ ರೈತರ ಜಮೀನು ಮಿಸ್ ಆಗದಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

    ಶಿವನೂರು ಗ್ರಾಮ ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಭವಿಷ್ಯದಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯೂ ಕೈಗೊಳ್ಳಲಾಗುತ್ತದೆ. ತಾತ್ಕಾಲಿಕವಾಗಿ ಹೆಚ್ಚಿನ ನೀರು ಬಂದರೆ ಕಾಳಜಿ ಕೇಂದ್ರಗಳಿಗೆ ಗ್ರಾಮಸ್ಥರನ್ನು ಕರೆದೊಯ್ಯಲಾಗುತ್ತದೆ ಎಂದರು.

    ಈ ವೇಳೆ ವಡಗೇರಾ ತಹಶಿಲ್ದಾರ ಮಂಗಳಾ,ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ, ಡಿವೈಎಸ್ಪಿ ಸುರೇಶ್, ಪಶುಸಂಗೋಪನೆ ಇಲಾಖೆ ಡಿಡಿ ರಾಜು ದೇಶಮುಖ, ವೆಂಕಟರೆಡ್ಡಿ ಪಾಟೀಲ, ಶಂಕರಗೌಡ ಪಾಟೀಲ,ಬಾಪುಗೌಡ ಮಾಚನೂರು,ಸಿದ್ದಪ್ಪಗೌಡ ಸೋಮಯ್ಯ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

     

     

  • ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಯಾದಗಿರಿ : ವಾಯುಭಾರ ಕುಸಿತದಿಂದಾಗಿ ಒಂದು ವಾರದವರೆಗೂ ಸುರಿದ ಸತತ ಮಳೆಗೆ ಜಿಲ್ಲೆಯ ರೈತರು ಬಿತ್ತಿದ ಹೆಸರು, ತೊಗರಿ ಮತ್ತು ಹತ್ತಿ ಇತರೆ ಬೆಳೆಗಳು ಹಾಳಾಗಿದ್ದು, ಈಗ ಆರಂಭಿಸಲಿರುವ ಸಮೀಕ್ಷೆ ಬೇಗನೆ ಮುಗಿಸಿ ಹಾನಿಗೊಳಗಾದ ರೈತರಿಗೂ ಹಾಗೂ ಮನೆಗಳು ಕುಸಿದು ಸೂರು ಕಳೆದಕೊಂಡವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಶುಕ್ರವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಬೆಳೆಗಳು ರಾಶಿ ಹಂತಕ್ಕೆ ಬಂದಿದ್ದವು, ಇದಕ್ಕೆ ಸಿದ್ದರಾಗಿದ್ದ ರೈತರಿಗೆ ಈ ಮಳೆ ಬರಸಿಡಿಲು ಬಡಿದಂತೆಯೇ ಆಗಿದೆ.

    ಹೆಸರು ರೈತರ ಮಿತ್ರ ಬೆಳೆ. 40 ದಿನಗಳಲ್ಲಿ ಕೈಸೇರುವ ಇದು ಮಾರಿ ಮುಂದಿನ ಬೆಳೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದರು. ಆದರೇ ಅವರ ಕನಸು ನುಚ್ಚುನೂರಾಗಿದೆ. ಕಾರಣ ರೈತರು ಉಳಿದರೇ ಎಲ್ಲರೂ ಉಳಿದಂತೇ. ಕಾರಣ ತ್ವರಿತಗಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಆಗಬೇಕೆಂದು ಶಾಸಕರು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆಯಿಂದ ಮನೆಗಳು ಕುಸಿದಿವೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಕಾರಣ, ಸಂಬಂಧಪಟ್ಟ ಅಧಿಕಾರಿಗಳಿಂದ ಇದರ ಸಮೀಕ್ಷೆ ಕೂಡಾ ನಡೆಸಿ ಪರಿಹಾರ ನೀಡಬೇಕೆಂದು ತುನ್ನೂರು ಮನವಿ ಮಾಡಿದ್ದಾರೆ.

  • ಕಾರ್ಮಿಕರ ಕೊರತೆ: ಕೃಷಿ ಕ್ಷೇತ್ರದಲ್ಲಿ ತಲೆದೋರಿದೆ ಅಸ್ಥಿರತೆ

    ಕಾರ್ಮಿಕರ ಕೊರತೆ: ಕೃಷಿ ಕ್ಷೇತ್ರದಲ್ಲಿ ತಲೆದೋರಿದೆ ಅಸ್ಥಿರತೆ

    ರಾಯಚೂರು: ಕೃಷಿ ಕ್ಷೇತ್ರದಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿರುವ ಕಾರ್ಮಿಕರ ಕೊರತೆ ಬಗ್ಗೆ ಲೋಕಸಭೆಯಲ್ಲಿ ಗಂಭೀರ ಚಿಂತನೆ ವ್ಯಕ್ತಪಡಿಸಿದ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ, ಇದು ರೈತರ ಜೀವನೋಪಾಯ ಹಾಗೂ ದೇಶದ ಆಹಾರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಎಚ್ಚರಿಸಿದರು.

    ಸಂಸದರು ತಿಳಿಸಿದಂತೆ, ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ ತೊಡಗುವಿಕೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಸ್ವಲ್ಪ ಮಟ್ಟಿಗೆ ಇಳಿದಿರುವುದಾದರೂ, ನೆಲಮಟ್ಟದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ವಿಶೇಷವಾಗಿ ಬಿತ್ತನೆ ಮತ್ತು ಕೊಯ್ಲಿನ ಹಂತಗಳಲ್ಲಿ, ಕರ್ನಾಟಕದ ಬಹುತೇಕ ಭಾಗಗಳಂತೆಯೇ ತಮ್ಮ ಕ್ಷೇತ್ರದಲ್ಲೂ ರೈತರು ಕಾರ್ಮಿಕರ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಉತ್ಪಾದಕತೆ ಹಾಗೂ ರೈತರ ಆದಾಯದ ಮೇಲೆ ನೇರವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ.

    ಕೇಂದ್ರ ಸರ್ಕಾರ ಕೃಷಿ ಕಾರ್ಮಿಕರನ್ನು ಬಲಪಡಿಸಲು ಮತ್ತು ಶಾಶ್ವತ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಬದ್ಧವಾಗಿದೆ ಎಂದು ಸಂಸದರು ತಿಳಿಸಿದರು. ಇದಕ್ಕಾಗಿ ಕೌಶಲ್ಯಾಭಿವೃದ್ಧಿ, ಯಾಂತ್ರೀಕರಣಕ್ಕೆ ಬೆಂಬಲ, ಆರ್ಥಿಕ ಪ್ರೋತ್ಸಾಹ ಹಾಗೂ ಆಧುನಿಕ ತಂತ್ರಜ್ಞಾನ ಒದಗಿಸುವ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ. ಕೃಷಿ ಯಾಂತ್ರೀಕರಣ ಉಪಮಿಷನ್‌ (SMAM), ಕೃಷಿ ವಿಜ್ಞಾನ ಕೇಂದ್ರಗಳು (KVKs) ಮತ್ತು ಗುರಿ ಸಾಧಿಸುವ ಕೌಶಲ್ಯಾಭಿವೃದ್ಧಿ ಯೋಜನೆಗಳಂತಹ ಕ್ರಮಗಳನ್ನು ಅವರು ಸ್ವಾಗತಿಸಿದರೂ, ಇನ್ನಷ್ಟು ಬಲಿಷ್ಠ ಕ್ರಮಗಳ ಅಗತ್ಯವಿದೆ ಎಂದರು.

    ಸಂಸದರು ಸರ್ಕಾರಕ್ಕೆ ಒತ್ತಾಯಿಸಿದ್ದು, ಯಾಂತ್ರೀಕರಣವನ್ನು ವೇಗಗೊಳಿಸಿ, ಆರ್ಥಿಕ ಪ್ರೋತ್ಸಾಹಗಳನ್ನು ಸಮಯಕ್ಕೆ ತಕ್ಕಂತೆ ನೀಡುವುದು ಮತ್ತು ಆಧುನಿಕ ಕೃಷಿ ಉಪಕರಣಗಳನ್ನು ಸಣ್ಣ ಹಾಗೂ ಅಲ್ಪಭೂಸ್ವಾಮ್ಯ ರೈತರಿಗೆ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು. ಜೊತೆಗೆ, ಗ್ರಾಮೀಣ ಯುವಕರಿಗೆ ಕೃಷಿ ಕ್ಷೇತ್ರವನ್ನು ಆಕರ್ಷಕ ಜೀವನೋಪಾಯವನ್ನಾಗಿಸಲು ಕೌಶಲ್ಯಾಭಿವೃದ್ಧಿ, ನವೀನತೆ ಮತ್ತು ಮೂಲಸೌಕರ್ಯ ಹೂಡಿಕೆಗಳ ಮೇಲೆ ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.

    ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ ರಾಯಚೂರು ಜಿಲ್ಲೆಗೆ ಈ ಯೋಜನೆಗಳಲ್ಲಿ ವಿಶೇಷ ಸ್ಥಾನಮಾನ ದೊರಕಬೇಕು ಎಂದು ಅವರು ಒತ್ತಾಯಿಸಿದರು. ಕಾರ್ಮಿಕರ ಕೊರತೆಯಿಂದ ನಮ್ಮ ರೈತರು ಹಿಂದುಳಿಯಲು ಅವಕಾಶ ನೀಡಲಾಗದು. ಶಾಶ್ವತ ಪರಿಹಾರ ದೊರೆಯುವವರೆಗೂ ನಾನು ಈ ವಿಚಾರವನ್ನು ಮುಂದುವರಿಸುತ್ತೇನೆ, ಎಂದು ಸಂಸದ ಜಿ. ಕುಮಾರ ನಾಯಕ ಸ್ಪಷ್ಟಪಡಿಸಿದರು.

  • ರಸಗೊಬ್ಬರ ಮಾರಾಟ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೃಷಿ ಅಧಿಕಾರಿ ಎಚ್ಚರಿಕೆ

    ರಸಗೊಬ್ಬರ ಮಾರಾಟ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೃಷಿ ಅಧಿಕಾರಿ ಎಚ್ಚರಿಕೆ

    ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಕೃಷಿ ಅಧಿಕಾರಿ ಭೇಟಿ ; ಪರಿಶೀಲನೆ

    ಸತ್ಯಕಾಮ ವಾರ್ತೆ ಸಿರವಾರ:

    ತಾಲೂಕಿನ ಮಲ್ಲಟ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ನೂಗಡೋಣಿ,ಎನ್ ಹೊಸೂರ, ಬಲ್ಲಟಗಿ,ಬಸವಣ್ಣ ಕ್ಯಾಂಪ್, ಮತ್ತು ಬಾಗಲವಾಡ ಗ್ರಾಮಗಳಲ್ಲಿನ ರಸಗೊಬ್ಬರ ಕೀಟನಾಶಕ ಮಾರಾಟ ಮಳಿಗೆಗಳಿಗೆ ಮಲ್ಲಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾರುತಿ ಯರಗಲ್ ಭೇಟಿ ನೀಡಿ ದಾಸ್ತಾನು ಪರಿಶೀಲನೆ ಮಾಡಿದರು.

    ರಸಗೊಬ್ಬರ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವುದರಿಂದ, ಹೆಚ್ಚಿನ ಧರಕ್ಕೆ ಮಾರಾಟ ಮಾಡುವುದು, ಅಕ್ರಮ ದಾಸ್ತಾನು ಮಾಡುವುದು ಕಾನೂನಿನ ಪ್ರಕಾರ ತಪ್ಪು. ಅವಧಿ ಮೀರಿದ, ಬೀಜ ಹಾಗೂ ಕೀಟನಾಶಕಗಳ ಮಾರಾಟ, ನಿಷೇಧಿತ ಬಯೋ ಕೀಟನಾಶಕಗಳ ಮಾರಾಟವನ್ನು ನಿಷೇಧಿಸಲಾಗಿದೆ. ನಿತ್ಯವೂ ದಾಸ್ತಾನು ಫಲಕ (ಸ್ಟಾಕ್ ಬೋರ್ಡ್) ಬರೆಯಬೇಕು. ತಪ್ಪದೇ ರೈತರಿಗೆ ಖರೀದಿಯ ರಶೀದಿ ನೀಡಬೇಕು ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.


    ಈ ಸಂದರ್ಭದಲ್ಲಿ ಕೃಷಿ ವ್ಯವಸ್ಥಾಪಕ ನಾಗರಾಜ ಕಂಬಾರ್ ಮತ್ತು ಆಂಜನೇಯ ಕೃಷಿ ಮಿತ್ರರು ಹಾಗೂ ರೈತರು ಇದ್ದರು.