ಯಾದಗಿರಿ: ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಷನ್ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ ಆರೋಪದ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರು ವ್ಯಕ್ತಿಗಳ ವಿರುದ್ಧ ಜಿಲ್ಲೆಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಮ್ಮಾಪುರ ನಿವಾಸಿ ಅಶೋಕ ಅವರು ನೀಡಿದ ದೂರಿನಂತೆ, ವಣಕಿಹಾಳ ಹಾಗೂ ಹಸನಾಪುರ ಗ್ರಾಮಗಳ ವಿವಿಧ ಸರ್ವೆ ಸಂಖ್ಯೆಗಳ ಕುರಿತು ಮುಟೇಷನ್ ನಂ. 28 ಮತ್ತು 30 (05-10-1996)ಗಳ ನಕಲಿ ಪ್ರತಿಗಳನ್ನು ತಯಾರಿಸಿ, ಸರಕಾರಿ ಸೀಲ್–ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಸುರಪುರ ತಹಸೀಲ್ದಾರ್ ಕಚೇರಿಗಳಿಂದ ನಡೆದ ಪರಿಶೀಲನೆ, ಅಭಿಲೇಖಾಲಯ ಶಾಖೆಯ ವರದಿಗಳು ಹಾಗೂ ಪಹಣಿ ದಾಖಲೆಗಳ ಪರಿಶೀಲನೆಯಿಂದ ಈ ಮುಟೇಷನ್ ಪ್ರತಿಗಳು ಕೊಟ್ಟಿ (ನಕಲಿ) ದಾಖಲೆಗಳಾಗಿವೆ ಎಂಬುದು ದೃಢಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಸವರಾಜ ತಂದೆ ರಾಜಶೇಖರಪ್ಪ ಸಜ್ಜನ್, ಡಿಸಿಸಿ ಬ್ಯಾಂಕ್ ಕಲಬುರಗಿ ನಿರ್ದೇಶಕ ಸುರೇಶ ತಂದೆ ರಾಜಶೇಖರಪ್ಪ ಸಜ್ಜನ್ ಹಾಗೂ ಪ್ರಕಾಶ ತಂದೆ ರಾಜಶೇಖರಪ್ಪ ಸಜ್ಜನ್ ವಿರುದ್ಧ ಐಪಿಸಿ ಕಲಂ. 464, 465, 468, 471 ಮತ್ತು 420 ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಪೊಲೀಸ್ ಮೂಲಗಳು ತಿಳಿಸಿವೆ.
