ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ಕಾಣುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಕೀಯದ ಕೇಂದ್ರಬಿಂದು ಆಗಿರುವ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬಿಕ್ಕಟ್ಟುಗಳು, ಸರ್ಕಾರಿ ಭರವಸೆಗಳ ಅನುಷ್ಠಾನ, ಹಾಗೂ ಸಿಎಂ ಕುರ್ಚಿ ಸುತ್ತಲಿನ ಹಗ್ಗಜಗ್ಗಾಟ ಎಲ್ಲವೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮನೋವೈಜ್ಞಾನಿಕ ಆಟ ಈಗ ಮತ್ತಷ್ಟು ಹೆಚ್ಚಾಗಿದೆ!
10 ದಿನಗಳ ಈ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಯ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಬಿಜೆಪಿ–ಜೆಡಿಎಸ್ ದೋಸ್ತಿ ದಾಳಿ ಸರ್ಕಾರದ ರಕ್ಷಣಾ ಕೌಶಲ್ಯಕ್ಕೆ ಪರೀಕ್ಷೆ:
ವಿಪಕ್ಷ ಬಿಜೆಪಿ–ಜೆಡಿಎಸ್ ಜಂಟಿ ದಾಳಿ ನಡೆಸಲು ತಂತ್ರ ರೂಪಿಸಿವೆ. ಸರ್ಕಾರವನ್ನು ಮೂಲೆಗೆ ತಳ್ಳಲು ಒಳಗಿನ ಅಸಮಾಧಾನ, ಬಣಗಾರಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳನ್ನು ಆಯುಧವಾಗಿ ಬಳಸಿಕೊಳ್ಳಲಿವೆ.
ಮುಂದುವರಿದ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ತರಲು ಚಿಂತನೆ ನಡೆದರೂ ಕಮಲಪಡೆ ಈಗ ಹಿಂದೆ ಸರಿದಿದೆ.
ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ. ನಂತರದಿಂದ ಪ್ರತಿಯೊಂದು ವಿಚಾರವೂ ಸರ್ಕಾರಕ್ಕೆ ಸವಾಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ.
ಉತ್ತರ ಕರ್ನಾಟಕ ಪ್ರಮುಖ ಅಸ್ತ್ರ:
ಕಳೆದ ಅಧಿವೇಶನದಲ್ಲಿ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ವಿಪಕ್ಷಗಳು ಕಿಡಿಗೇಡಿಯಾಗಿ ಪ್ರಶ್ನೆ ಎತ್ತಲಿವೆ. ನೀರಾವರಿ, ಬೆಳೆ ಬೆಲೆ ಹಾಗೂ ಮೂಲಭೂತ ಸೌಕರ್ಯಗಳ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.
ಪ್ರತಿಭಟನೆಯ ಬಿಸಿ ಬೆಳಗಾವಿಯ ಬೀದಿಗಳೂ ಕದನಭೂಮಿ:
ಅಧಿವೇಶನಕ್ಕೆ ಸಮೀಪಿಸುತ್ತಿರುವಾಗಲೇ ವಿವಿಧ ಸಂಘಟನೆಗಳು ಪ್ರತಿಭಟನೆಯ ಸಿದ್ಧತೆಯಲ್ಲಿ ಇವೆ.
- ಕಬ್ಬು ಬೆಲೆ — ರೈತರ ಆಕ್ರೋಶ
- ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಲೆ ಕುಸಿತ
- 2.5 ಲಕ್ಷ ಹುದ್ದೆಗಳ ನೇಮಕಾತಿ ಬೇಡಿಕೆ
ಒಳ ಮೀಸಲಾತಿ ವಿವಾದ ಪರಿಶಿಷ್ಟ ಸಮುದಾಯಗಳ ಪ್ರತಿಭಟನೆ:
ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರ ವೇತನ ಪರಿಷ್ಕರಣೆ.
ಮಹಾರಾಷ್ಟ್ರ ಪರ ಸಂಘಟನೆಗಳ ತಗಾದೆ ಆತಂಕ.
ಬೆಳಗಾವಿ ಅಧಿವೇಶನವೆಂದರೆ ರಾಜಕೀಯದಷ್ಟೇ ಜನಾಆಸೆಯ ವಿಷಯ! ಈ ಬಾರಿ ಕೂಡ ಆಡಳಿತ–ವಿಪಕ್ಷಗಳ ರಾಜಕೀಯ ಕಾದಾಟದ ನಡುವೆ ಜನರ ಸಮಸ್ಯೆಗಳು ಯಾವ ಮಟ್ಟಿಗೆ ಆಲಿಸಿಕೊಳ್ಳಲಾಗುತ್ತವೆ ಎಂಬುದೇ ದೊಡ್ಡ ಪ್ರಶ್ನೆ
