ಬೆಂಗಳೂರು ಮೆಟ್ರೋಗೆ ಹೊಸ ಯುಗವನ್ನೇ ತೆರೆದಂತೆ, ಮೊದಲ “ಮೇಡ್ ಇನ್ ಇಂಡಿಯಾ” ಚಾಲಕರಹಿತ ಮೆಟ್ರೋ ರೈಲು ಬಳಕೆಗೆ ಸಿದ್ಧವಾಗಿದೆ. ಬಿಇಎಂಎಲ್ ತಯಾರಿಸಿರುವ ಈ ಫ್ಯೂಚರಿಸ್ಟಿಕ್ ಟ್ರೈನ್ ನೇರವಾಗಿ ಪಿಂಕ್ ಲೈನ್‌ಗಾಗಿ ರೂಪುಗೊಳ್ಳುತ್ತಿದ್ದು, 2027ರ ಮೇ ನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸಜ್ಜಾಗಲಿದೆ. ಭಾರತದ ನೆಲದಲ್ಲೇ ನಿರ್ಮಾಣವಾದ ಮೊದಲ ಸಂಪೂರ್ಣ ಚಾಲಕರಹಿತ ಮೆಟ್ರೋ ಅನ್ನೋ ವಿಶೇಷತೆ ಇದಕ್ಕೆ ಮತ್ತಷ್ಟು ಮೌಲ್ಯ ನೀಡಿದೆ.
ಇದು 6 ಬೋಗಿಗಳ ಮೃದುವಾದ, ಶಬ್ದರಹಿತ ಮತ್ತು ರೈಲು. ರೈಲಿನ ಬಾಡಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಾಗಿದ್ದು ಗಟ್ಟಿತನ, ದೀರ್ಘಾವಧಿ ಮತ್ತು ಸುರಕ್ಷತೆ ಎಂಬ ಮೂರು ಗುಣಗಳನ್ನು ಒಂದೇ ವೇಳೆ ಒದಗಿಸುತ್ತದೆ. ಒಳಗೆ ವಿಶಾಲ ಗ್ಯಾಂಗ್‌ವೇ, USB ಚಾರ್ಜರ್, ಆರಾಮದಾಯಕ ಆಸನಗಳು ಎಲ್ಲವೂ ಪ್ರಯಾಣಿಕರು ಸುಲಭವಾಗಿ ಸಂಚರಿಸೋಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. 2026ರ ಮಧ್ಯಭಾಗದಲ್ಲೇ ಕಾಳೇನ ಅಗ್ರಹಾರ ತಾವರೆಕೆರೆ 7.5 ಕಿಮೀ ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಸಂಪೂರ್ಣ ಪಿಂಕ್ ಲೈನ್ ತೆರೆಯಲಾಗುತ್ತದೆ.
ಈ ರೈಲಿನ ಪ್ರಮುಖ ‘ಹೈಲೈಟ್’ ಎಂದರೆ GoA4 ತಂತ್ರಜ್ಞಾನ ಚಾಲಕರಿಲ್ಲದ ಸಂಪೂರ್ಣ ಆಟೋಮೇಟೆಡ್ ಮೆಟ್ರೋ ವ್ಯವಸ್ಥೆ. ರೈಲು ಎಲ್ಲಿ ಹೋದರೂ, ಎಷ್ಟು ವೇಗದಲ್ಲಿ ಓಡಿದರೂ, ಯಾವ ಸ್ಟೇಷನ್‌ನಲ್ಲಿ ನಿಲ್ಲಬೇಕಾದರೂ… ಎಲ್ಲವನ್ನೂ ದೂರದಲ್ಲಿರುವ ಕಂಟ್ರೋಲ್ ರೂಮ್ ನಿರ್ವಹಿಸುತ್ತದೆ. ರೈಲು ಚಲಿಸುವುದು, ಬ್ರೇಕ್ ಹಾಕುವುದು, ಬಾಗಿಲು ತೆರೆದು ಮುಚ್ಚುವುದು ಈ ಎಲ್ಲ ಪ್ರಕ್ರಿಯೆಗಳೂ ಸಿಸ್ಟಮ್‌ನಲ್ಲೇ ಪ್ರೋಗ್ರಾಮಿಂಗ್ ಆಗಿರುತ್ತವೆ. ‘CBTC’ ಎಂಬ ಅತ್ಯಾಧುನಿಕ ಕಮ್ಯುನಿಕೇಶನ್ ಆಧಾರಿತ ತಂತ್ರಜ್ಞಾನ ರೈಲಿನ ನಿಖರ ಸ್ಥಳದ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಸುರಕ್ಷಿತವಾಗಿ ನಡೆಸುತ್ತದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ, ಚಾಲಕರಿಲ್ಲದ ರೈಲು ಎಂದೇನೂ ಭಯಪಡುವ ಅಗತ್ಯವಿಲ್ಲ. ಈ ಹೊಸ ಮೆಟ್ರೋ ಒಳಗೆ ಮತ್ತು ಹೊರಗೆ ಅನೇಕ ಸೆನ್ಸರ್‌ಗಳು ಕೆಲಸ ಮಾಡುತ್ತವೆ. ಹಳಿಯ ಮೇಲೆ ಯಾವುದಾದರೂ ಅಡೆತಡೆ ಕಂಡರೂ, ಬೆಂಕಿ ಅಥವಾ ತಾಂತ್ರಿಕ ವ್ಯತ್ಯಯ ಎದುರಾದರೂ, ಸಿಸ್ಟಮ್ ತಕ್ಷಣ ಸ್ಪಂದಿಸಿ ರೈಲನ್ನು ನಿಲ್ಲಿಸುವ ವ್ಯವಸ್ಥೆ ಇದೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್ ರೂಂ ಜೊತೆ ನೇರವಾಗಿ ಮಾತನಾಡಲು ಪ್ಯಾಸೆಂಜರ್ ಅಲಾರ್ಮ್ ಸಾಧನವನ್ನು ಕೂಡ ನೀಡಲಾಗಿದೆ. ಜೊತೆಗೆ ರೈಲು ಸಂಪೂರ್ಣವಾಗಿ ಸಿಸಿಟಿವಿ ನಿಗಾವಿಡಿಯಲ್ಲಿ ಇರುತ್ತದೆ. ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳು ಮತ್ತು ರೈಲಿನ ಬಾಗಿಲುಗಳ ಸಿಂಕ್ರೊನೈಜೇಶನ್ ಅಪಘಾತಗಳನ್ನು ಮುಂಚೆಯೇ ತಡೆಯುತ್ತದೆ.
ಬಿಇಎಂಎಲ್ ನಿರ್ಮಿಸಿರುವ ಈ ಟ್ರೈನ್ ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲ, ಇದು ಭಾರತದಲ್ಲಿ ಮೆಟ್ರೋ ತಂತ್ರಜ್ಞಾನ ಸ್ವಾವಲಂಬನ್ಯದ ಹೆಜ್ಜೆಗುರುತು. ದೆಹಲಿಯ ಕೆಲವು ಮಾರ್ಗಗಳಲ್ಲಿ ಆಗಲೇ ಡ್ರೈವರ್‌ಲೆಸ್ ಮೆಟ್ರೋ ಓಡುತ್ತಿದರೂ, ದೇಶೀಯವಾಗಿ ನಿರ್ಮಿತ ಪೂರ್ಣ ಚಾಲಕರಹಿತ ರೈಲನ್ನು ಮೊದಲಬಾರಿಗೆ ಬೆಂಗಳೂರು ಸ್ವಾಗತಿಸಲಿದೆ. ಮೆಟ್ರೋ ಸೇವೆಯ ವೇಗ, ಸುರಕ್ಷತೆ, ಮತ್ತು ಪ್ರಯಾಣದ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಈ ರೈಲು, ನಗರದ ಭವಿಷ್ಯದ ಸಾರಿಗೆ ವ್ಯವಸ್ಥೆಯ ನಕಲಿ ಬದಲಾವಣೆಯ ಸಂಕೇತವಾಗಿಯೇ ಕಾಣುತ್ತಿದೆ.
