Author: Shivu

  • ಐಪಿಎಲ್‌ನಲ್ಲಿ ಧೋನಿ ಅಂತಿಮ ಅಧ್ಯಾಯ? 2026 ಬಳಿಕ CSKಯಲ್ಲಿ ಹೊಸ ಯುಗ: ರಾಬಿನ್ ಉತ್ತಪ್ಪ

    ಐಪಿಎಲ್‌ನಲ್ಲಿ ಧೋನಿ ಅಂತಿಮ ಅಧ್ಯಾಯ? 2026 ಬಳಿಕ CSKಯಲ್ಲಿ ಹೊಸ ಯುಗ: ರಾಬಿನ್ ಉತ್ತಪ್ಪ

    ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ಭವಿಷ್ಯಕ್ಕೆ ಸಂಬಂಧಿಸಿದ ಚರ್ಚೆಗೆ ಈಗ ಸ್ಪಷ್ಟ ದಿಕ್ಕು ಸಿಕ್ಕಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕದ ರಾಬಿನ್ ಉತ್ತಪ್ಪ, ಧೋನಿ ನಿವೃತ್ತಿ ಕುರಿತು ಬಹಳ ಖಚಿತ ಮಾತುಗಳನ್ನು ಆಡಿದ್ದು, ಈ ಸೀಸನ್‌ ಅವರ ಐಪಿಎಲ್ ಬದುಕಿನ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಗಟ್ಟಿಯಾಗಿದೆ.

    2026ರ ಐಪಿಎಲ್ ಮಿನಿ ಹರಾಜಿನ ನಂತರ ಮಾತನಾಡಿದ ಉತ್ತಪ್ಪ, ಸಿಎಸ್‌ಕೆ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳನ್ನು ಗಮನಿಸಿದರೆ ಎಲ್ಲವೂ ಗೋಡೆಯ ಮೇಲೆ ಬರೆಯಲ್ಪಟ್ಟಂತೆಯೇ ಇದೆ ಎಂದು ಹೇಳಿದ್ದಾರೆ. ಅನುಭವಿ ಆಟಗಾರರ ಬದಲಿಗೆ ಯುವ ಪ್ರತಿಭೆಗಳ ಮೇಲೆ ಫ್ರಾಂಚೈಸಿ ಹೆಚ್ಚು ನಂಬಿಕೆ ಇಡುತ್ತಿರುವುದು, ಧೋನಿ ನಿವೃತ್ತಿಯತ್ತ ಸಾಗುತ್ತಿರುವ ಸೂಚನೆಯೇ ಆಗಿದೆ ಎನ್ನುವುದು ಅವರ ಅಭಿಪ್ರಾಯ.

    ಧೋನಿ ಇನ್ನೊಂದು ವರ್ಷ ಆಡ್ತಾರಾ, ಇಲ್ಲವಾ ಎಂಬ ಊಹಾಪೋಹಗಳಿಗೆ ಇನ್ನು ಜಾಗವೇ ಇಲ್ಲ. ಈ ಸೀಸನ್‌ ಮುಗಿದ ಬಳಿಕ ಅವರು ಕ್ರಿಕೆಟ್‌ಗೆ ಪೂರ್ಣ ವಿರಾಮ ಕೊಡುವುದು ಬಹುತೇಕ ಪಕ್ಕಾ ಎಂದು ಉತ್ತಪ್ಪ ಹೇಳಿದ್ದಾರೆ. ಆದರೆ ಮೈದಾನದಿಂದ ದೂರ ಸರಿದರೂ, ಸಿಎಸ್‌ಕೆ ಜೊತೆಗಿನ ಅವರ ಸಂಬಂಧ ಕಡಿದು ಹೋಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಆಟಗಾರನಾಗಿ ಅಲ್ಲದಿದ್ದರೂ, ತಂಡದ ಮೆಂಟರ್ ಅಥವಾ ಮಾರ್ಗದರ್ಶಕರಾಗಿ ಧೋನಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂಬುದು ಉತ್ತಪ್ಪನ ಭವಿಷ್ಯ ನುಡಿ.

    ಸಿಎಸ್‌ಕೆ ಈಗಾಗಲೇ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಲೆಕ್ಕಾಚಾರ ಆರಂಭಿಸಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಯೋಜನೆ ನಡೆಯುತ್ತಿದ್ದು, ಧೋನಿ ಅವರ ಅನುಭವ ಮತ್ತು ಮಾರ್ಗದರ್ಶನ ಇದಕ್ಕೆ ಬಲ ನೀಡಲಿದೆ ಎಂಬ ವಿಶ್ವಾಸವೂ ವ್ಯಕ್ತವಾಗಿದೆ. ಮತ್ತೊಬ್ಬ ಜಡೇಜಾ ತರಹದ ಆಲ್‌ರೌಂಡರ್‌ಗಳನ್ನು ಬೆಳೆಸಬೇಕಾದರೆ, ಈಗಲೇ ಈ ಬದಲಾವಣೆ ಅಗತ್ಯ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವರ್ಷದ ಕೊನೆಯಲ್ಲಿ ಯುವ ಆಟಗಾರರಿಗೆ ನೀಡಿದ ಅವಕಾಶಗಳು ಸಿಎಸ್‌ಕೆ ಪಾಲಿಗೆ ಲಾಭವಾಗಿದ್ದವು. ಡಿವಾಲ್ಡ್ ಬ್ರೆವಿಸ್, ಆಯುಷ್ ಮಹಾತ್ರೆ, ಉರ್ವಿಲ್ ಪಟೇಲ್‌ಗಳಂತಹ ಯುವಕರು ತಂಡಕ್ಕೆ ಹೊಸ ಉತ್ಸಾಹ ತುಂಬಿದ್ದರು. ಇದೇ ದಾರಿಯಲ್ಲಿ ಮುಂದುವರಿದಿರುವ ಸಿಎಸ್‌ಕೆ, 2026ರ ಮಿನಿ ಹರಾಜಿನಲ್ಲಿ ಇನ್ನೂ ದೊಡ್ಡ ಹೆಜ್ಜೆ ಇಟ್ಟಿದೆ.

    ಉತ್ತರ ಪ್ರದೇಶದ 19 ವರ್ಷದ ಯುವ ಪ್ರತಿಭೆ ಪ್ರಶಾಂತ್ ವೀರ್ ಹಾಗೂ 20 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಅವರನ್ನು ಭಾರೀ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಇವರು ಇಬ್ಬರೂ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಖರೀದಿಸಲ್ಪಟ್ಟ ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಎಂಬುದು ವಿಶೇಷ.

    ಒಟ್ಟಿನಲ್ಲಿ ನೋಡಿದರೆ, ಸಿಎಸ್‌ಕೆ ಒಂದು ಹೊಸ ಯುಗಕ್ಕೆ ಕಾಲಿಟ್ಟಂತಾಗಿದೆ. ಮೈದಾನದಲ್ಲಿ ಧೋನಿ ಆಟಗಾರನಾಗಿ ಕಾಣಿಸಿಕೊಳ್ಳದ ದಿನಗಳು ಹತ್ತಿರವಾಗುತ್ತಿದ್ದರೂ, ತಂಡದ ಹೃದಯವಾಗಿರುವ ಅವರ ಪಾತ್ರ ಮಾತ್ರ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿವೆ. ಕ್ಯಾಪ್ಟನ್ ಕೂಲ್ ನಿವೃತ್ತಿಯಾದರೂ, ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಅವರ ನೆರಳು ಇನ್ನೂ ಬಹುಕಾಲ ಬೀಳುತ್ತಲೇ ಇರಲಿದೆ.

  • ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲ ಬಂದಾಗ ಮಾನವನ ದೇಹದಲ್ಲಿ ಹಲವು ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಶೀತ, ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ಕೈಕಾಲುಗಳು ಚಳಿಯಿಂದ ಕಟ್ಟಿ ಹೋಗುವುದು ಇವೆಲ್ಲವೂ ಈ ಚಳಿಯ ಋತುವಿನ ಸಾಮಾನ್ಯ ಸಂಗತಿಗಳು. ಹೀಗಿರುವಾಗ ದೇಹಕ್ಕೆ ಒಳಗಿನಿಂದ ಬಲ ಕೊಡುವಂತಹ ಆಹಾರಗಳ ಮೇಲೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಹೆಸರು ಕೇಳಿಸಿಕೊಳ್ಳುವುದು ಶುಂಠಿ. ಚಳಿಗಾಲದಲ್ಲಿ ಪ್ರತಿದಿನ ಸ್ವಲ್ಪ ಪ್ರಮಾಣದ ಶುಂಠಿ ಸೇವಿಸುವುದು ಆರೋಗ್ಯಕ್ಕೆ ವಿಶೇಷವಾದ ರಕ್ಷಣೆಯನ್ನು ಕೊಡುತ್ತದೆ ಎಂದು ಹೇಳಬಹುದು.

    ಶುಂಠಿಯ ಮೊದಲ ಪ್ರಯೋಜನವೆಂದರೆ ಇದು ದೇಹವನ್ನು ಬೆಚ್ಚಗೆ ಇಡುತ್ತದೆ. ಹೊರಗಿನ ತಾಪಮಾನ ಕಡಿಮೆಯಾಗುತ್ತಿದ್ದಂತೆ ರಕ್ತ ಸಂಚಾರ ನಿಧಾನಗೊಳ್ಳುತ್ತದೆ. ಇದು ಕೈ ಕಾಲುಗಳು ಚಳಿ ಹಿಡಿಯುವ ಪ್ರಮುಖ ಕಾರಣಕ್ಕೆ ಶುಂಠಿಯು ನೈಸರ್ಗಿಕ ಉಷ್ಣಸ್ವಭಾವ ದೇಹದ ಒಳಗಿನ ತಂಪನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಶುಂಠಿ ಚಹಾ ಅಥವಾ ಶುಂಠಿ ಕಷಾಯ ಕುಡಿಯುವ ಅಭ್ಯಾಸ ಬಹಳ ಉಪಯುಕ್ತ.

    ಶುಂಠಿಯ ಮತ್ತೊಂದು ಮಹತ್ವದ ಗುಣವೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ವೈರಲ್ ಸೋಂಕುಗಳು ವೇಗವಾಗಿ ವ್ಯಾಪಿಸುವ ಸಮಯ. ದೇಹದ ರೋಗನಿರೋಧಕ ವ್ಯವಸ್ಥೆ ಬಲವಾಗಿರದಿದ್ದರೆ ಜ್ವರ, ಶೀತ, ಕೆಮ್ಮು ಮತ್ತೆ ಮತ್ತೆ ಬರುತ್ತವೆ. ಶುಂಠಿಯಲ್ಲಿರುವ ಉತ್ಕರ್ಷಣ ವಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಕ ಗುಣಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ದಿನವೂ ಸ್ವಲ್ಪ ಪ್ರಮಾಣದಲ್ಲಿ ಶುಂಠಿ ಸೇವಿಸಿದರೆ ದೇಹದ ಒಳಗಿನ ರಕ್ಷಣೆ ಸ್ವಾಭಾವಿಕವಾಗಿ ಬಲಪಡಿಸುತ್ತದೆ.

    ಚಳಿಗಾಲದಲ್ಲಿ ಹಲವರಿಗೆ ಕೀಲು ನೋವು ಮತ್ತು ಸ್ನಾಯು ಸೆಳೆತ ಹೆಚ್ಚಾಗುತ್ತದೆ. ತಂಪಿನ ಪರಿಣಾಮವಾಗಿ ದೇಹದ ಮೂಳೆ ಸ್ನಾಯುಗಳ ಚಟುವಟಿಕೆ ನಿಧಾನಗೊಳ್ಳುವುದೇ ಇದಕ್ಕೆ ಕಾರಣ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಈ ರೀತಿಯ ನೋವುಗಳನ್ನು ಕಡಿಮೆ ಮಾಡುತ್ತವೆ. ಅತಿ ತೊಂದರೆ ಇಲ್ಲದ ಹಂತದಲ್ಲಿ ಶುಂಠಿ ನಿಯಮಿತವಾಗಿ ಸೇವಿಸಿದರೆ ದೀರ್ಘಕಾಲದ ನೋವಿಗೂ ಪರಿಹಾರ ದೊರೆಯುತ್ತದೆ.

    ಈ ಋತುವಿನಲ್ಲಿ ಗಂಟಲು ನೋವು ಮತ್ತು ಲೋಳೆಯು ಹೆಚ್ಚಾಗುವುದು ಸಾಮಾನ್ಯ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಗಂಟಲೆಲ್ಲೋ ಉಂಟಾಗುವ ರಂಧ್ರ ಮತ್ತು ನೋವನ್ನು ಶಮನಗೊಳಿಸುತ್ತವೆ. ಬೆಚ್ಚಗಿನ ನೀರಿಗೆ ತುಂಡು ಶುಂಠಿ ಸೇರಿಸಿ ಕುಡಿದರೂ ಅಥವಾ ಜೇನುತುಪ್ಪದೊಂದಿಗೆ ಸೇವಿಸಿದರೂ ಗಂಟಲು ತಣಿಯುತ್ತದೆ. ಇದರಿಂದ ಕೆಮ್ಮು ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ.

    ಒಟ್ಟಾರೆ ನೋಡಿದರೆ ಚಳಿಗಾಲದ ಆರೋಗ್ಯಕ್ಕೆ ಶುಂಠಿ ಸಣ್ಣದಾಗಿದ್ದರೂ ಬಹಳ ಪರಿಣಾಮಕಾರಿ ಸಹಜ ಔಷಧ. ಇದು ದೇಹವನ್ನು ಬೆಚ್ಚಗಿಡುತ್ತದೆ, ಸೋಂಕುಗಳಿಂದ ರಕ್ಷಿಸುತ್ತದೆ, ಗಂಟಲು ತೊಂದರೆಗಳನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಕಾಪಾಡುತ್ತದೆ. ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಶುಂಠಿಯನ್ನು ಸೇರಿಸಿಕೊಂಡರೆ ಚಳಿಗಾಲದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ದೂರವಿಡಬಹುದು.

  • ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಬಿಗ್ ಬಾಸ್ ಕನ್ನಡ 11’ ಮೂಲಕ ಸಾಕಷ್ಟು ಗಮನ ಸೆಳೆದ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಇದೀಗ ಸರಳ ವಿವಾಹಕ್ಕೆ ಸಿದ್ಧರಾಗಿದ್ದಾರೆ. ಆಡಂಬರ ಇಲ್ಲದ, ಮನೆಯವರ ಆಶೀರ್ವಾದದೊಂದಿಗೆ ನಡೆಯುವ ಮದುವೆಯೇ ಇವರ ನಿರ್ಧಾರ.

    ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ಪರಿಚಯ, ನಂತರ ಪ್ರೀತಿ, ಆಮೇಲೆ ಕುಟುಂಬದವರೊಂದಿಗೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಮದುವೆಯ ಹಂತಕ್ಕೆ ಬಂದಿದ್ದಾರೆ. ಪ್ರಪೋಸ್ ಮಾಡಿದ್ದು ನಾನೇ ಎಂದು ಹೇಳಿಕೊಂಡಿರುವ ಉಗ್ರಂ ಮಂಜು, ‘ನೇರವಾಗಿ ಮದುವೆ ಬಗ್ಗೆ ಮಾತನಾಡಿದೆ. ಎರಡು ಮೂರು ತಿಂಗಳಲ್ಲೇ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೆವು’ ಎಂದು ತಮ್ಮ ಪ್ರೀತಿಯ ಕಥೆಯನ್ನು ಹಂಚಿಕೊಂಡಿದ್ದಾರೆ.

    ಮದುವೆ ಯಾವಾಗ, ಎಲ್ಲಿ ಅನ್ನೋ ಪ್ರಶ್ನೆಗೆ ಉಗ್ರಂ ಮಂಜು ತಾವೇ ಸ್ಪಷ್ಟ ಉತ್ತರ ನೀಡಿದ್ದಾರೆ. ಜನವರಿ 23ರಂದು ಹಂಸಗಿರಿ ಹೊಸೂರಿನ ಮನೆ ದೇವರಾದ ತಿಮ್ಮರಾಯಸ್ವಾಮಿ ಸನ್ನಿಧಿಯಲ್ಲಿ ಇವರ ವಿವಾಹ ನಡೆಯಲಿದೆ. ಗುರುವಿನ ಸಲಹೆ ಹಾಗೂ ತಮ್ಮ ಆಸೆಯಂತೆ ದೇವಾಲಯದಲ್ಲೇ ಮದುವೆಯಾಗಲು ನಿರ್ಧರಿಸಿದ್ದು, ಕುಟುಂಬದವರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಲಿದೆ.

    ಆಡಂಬರ, ಅತಿಯಾದ ಖರ್ಚು ನಮಗೆ ಇಷ್ಟವಿಲ್ಲ ಎನ್ನುವ ಉಗ್ರಂ ಮಂಜು, ಮದುವೆಗಾಗಿ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಿ ನಂತರ ಅದರ ಒತ್ತಡ ಹೊರುವುದಕ್ಕಿಂತ ಶಾಂತವಾಗಿ ದೇವರ ಆಶೀರ್ವಾದದೊಂದಿಗೆ ಹೊಸ ಜೀವನ ಆರಂಭಿಸುವುದೇ ನಮ್ಮ ಯೋಚನೆ ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಸಾಯಿ ಸಂಧ್ಯಾ ಕೂಡ ಹಂಚಿಕೊಂಡಿದ್ದಾರೆ.

    ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಮದುವೆಗೆ ಸಜ್ಜಾಗಿದೆ. ಜನವರಿ 23ರಂದು ಮನೆ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಸರಳ ವಿವಾಹಕ್ಕೆ ಅಭಿಮಾನಿಗಳಿಂದ ಈಗಾಗಲೇ ಶುಭಾಶಯಗಳ ಸುರಿಮಳೆ ಆರಂಭವಾಗಿದೆ.

  • ಸದನದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ!

    ಸದನದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ!

    ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿದವು. ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ತೀಕ್ಷ್ಣ ವಾಗ್ದಾಳಿ ನಡೆಯಿತು.

    ವಿರೋಧ ಪಕ್ಷದ ನಾಯಕರು “ಫೆಬ್ರವರಿ–ಮಾರ್ಚ್ ಹಣ ಏನಾಯಿತು?” ಎಂದು ಪ್ರಶ್ನೆಗಳ ಸುರಿಮಳೆಗೈದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟ ಉತ್ತರ ನೀಡದೇ ತತ್ತರಿಸಿದಂತಾಯಿತು. ಈ ಸಂದರ್ಭ ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಚಿವೆಯ ಪರವಾಗಿ ಮಾತನಾಡಿದರು. ಮೈಕ್ ಹಿಡಿದು ಉತ್ತರಿಸಿದ ಸಿಎಂ, ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

    ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಹಣ ಬಿಡುಗಡೆಯ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು. ಆದರೆ ಫಲಾನುಭವಿಗಳ ಹಣ ನಿಲ್ಲುವುದಿಲ್ಲ, ಬಾಕಿ ಇರುವ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೇ ಸದನದಲ್ಲಿದ್ದ ಅನೇಕ ಸದಸ್ಯರು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಕ್ಕ “ಗುಡ್‌ನ್ಯೂಸ್” ಎಂದು ಬಣ್ಣಿಸಿದರು.

    ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ಸಿಎಂ ತೀಕ್ಷ್ಣ ತಿರುಗೇಟು ನೀಡಿದರು. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಗೃಹಲಕ್ಷ್ಮಿ ಯೋಜನೆ ಸರ್ಕಾರದ ಪ್ರಮುಖ ಸಾಮಾಜಿಕ ಯೋಜನೆಗಳಲ್ಲೊಂದು ಎಂದು ಸ್ಪಷ್ಟವಾಗಿ ಹೇಳಿದರು.

    ಒಟ್ಟಾರೆ, ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತಾಗಿ ಭಾರೀ ಚರ್ಚೆ ನಡೆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಮಹಿಳಾ ಫಲಾನುಭವಿಗಳಲ್ಲಿ ನಿರಾಳತೆ ಮೂಡಿಸಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಶೀಘ್ರದಲ್ಲೇ ಖಾತೆ ಸೇರಲಿದೆ ಎಂಬ ಮಾತು ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹೊಸ ನಿರೀಕ್ಷೆ ತಂದಿದೆ.

  • ಹೊಸ ಆರು ತಾಲೂಕುಗಳು ಸೇರ್ಪಡೆ ; ರೂಪುಗೊಳ್ಳಲಿದೆ ‘ಹೊಸ ಬೆಂಗಳೂರು’

    ಹೊಸ ಆರು ತಾಲೂಕುಗಳು ಸೇರ್ಪಡೆ ; ರೂಪುಗೊಳ್ಳಲಿದೆ ‘ಹೊಸ ಬೆಂಗಳೂರು’

    ಬೆಂಗಳೂರು ಸುತ್ತಮುತ್ತಲಿನ ಆರು ಪ್ರಮುಖ ತಾಲೂಕುಗಳನ್ನು ಸೇರಿಸಿಕೊಂಡು ಹೊಸ ಬೆಂಗಳೂರನ್ನು ರೂಪಿಸುವ ಮಹತ್ವದ ನಿರ್ಧಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ ಹಾಗೂ ಮಾಗಡಿ ತಾಲೂಕಿನ ಬಿಡದಿ ಪ್ರದೇಶಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಭಾಗವಾಗಲಿವೆ ಎಂಬುದು ಈ ಘೋಷಣೆಯ ಮುಖ್ಯ ಅಂಶವಾಗಿದೆ.

    ಶನಿವಾರ ದೇವನಹಳ್ಳಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಯಪ್ಪ) ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಉದ್ದೇಶ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದರು. ಈಗಿರುವ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಜೊತೆಗೆ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ವಿಸ್ತಾರವಾದ ಹೊಸ ಬೆಂಗಳೂರು ನಿರ್ಮಿಸುವ ದೃಷ್ಟಿಕೋಣವನ್ನು ಸರ್ಕಾರ ಹೊಂದಿದೆ ಎಂದರು.

    ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಈ ಭಾಗಗಳ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇರುವ ಆಸ್ತಿಯನ್ನು ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾಗಿದ್ದು, ಸರ್ಕಾರ ಆಸ್ತಿ ಮೌಲ್ಯಕ್ಕೆ ಗೌರವ ತರುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ‘ಬೆಂಗಳೂರು ಉತ್ತರ’ ಎಂಬ ಹೊಸ ಗುರುತನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗಗಳು ನಗರಾಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಲಿವೆ ಎಂದು ತಿಳಿಸಿದರು.

    ನಂದಗುಡಿ, ಸೋಲೂರು ಮತ್ತು ಬಿಡದಿ ಭಾಗದ ರೈತರಿಗೆ ಅವರ ಜಮೀನಿಗೆ ಉತ್ತಮ ಬೆಲೆ ಸಿಗುವಂತೆ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಿದರೆ ಮಾತ್ರ ವಿಶ್ವದ ಗಮನ ಸೆಳೆಯುವ ಹೊಸ ಬೆಂಗಳೂರು ನಿರ್ಮಾಣ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.

    ಈ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಎಂಎಲ್‌ಸಿ ಎಸ್. ರವಿ ಹಾಗೂ ಬಯಪ್ಪ ಅಧ್ಯಕ್ಷ ಶಾಂತಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹೊಸ ಬೆಂಗಳೂರು ಕನಸಿನೊಂದಿಗೆ ರಾಜ್ಯ ರಾಜಧಾನಿಯ ವಿಸ್ತರಣೆ ಈಗ ಅಧಿಕೃತವಾಗಿ ಹೊಸ ಹಾದಿ ಹಿಡಿದಂತಾಗಿದೆ.

  • ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ಹೊಸ ಯುಗವನ್ನೇ ತೆರೆದಂತೆ, ಮೊದಲ “ಮೇಡ್‌ ಇನ್ ಇಂಡಿಯಾ” ಚಾಲಕರಹಿತ ಮೆಟ್ರೋ ರೈಲು ಬಳಕೆಗೆ ಸಿದ್ಧವಾಗಿದೆ. ಬಿಇಎಂಎಲ್ ತಯಾರಿಸಿರುವ ಈ ಫ್ಯೂಚರಿಸ್ಟಿಕ್ ಟ್ರೈನ್ ನೇರವಾಗಿ ಪಿಂಕ್‌ ಲೈನ್‌ಗಾಗಿ ರೂಪುಗೊಳ್ಳುತ್ತಿದ್ದು, 2027ರ ಮೇ ನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸಜ್ಜಾಗಲಿದೆ. ಭಾರತದ ನೆಲದಲ್ಲೇ ನಿರ್ಮಾಣವಾದ ಮೊದಲ ಸಂಪೂರ್ಣ ಚಾಲಕರಹಿತ ಮೆಟ್ರೋ ಅನ್ನೋ ವಿಶೇಷತೆ ಇದಕ್ಕೆ ಮತ್ತಷ್ಟು ಮೌಲ್ಯ ನೀಡಿದೆ.

    ಇದು 6 ಬೋಗಿಗಳ ಮೃದುವಾದ, ಶಬ್ದರಹಿತ ಮತ್ತು ರೈಲು. ರೈಲಿನ ಬಾಡಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಾಗಿದ್ದು ಗಟ್ಟಿತನ, ದೀರ್ಘಾವಧಿ ಮತ್ತು ಸುರಕ್ಷತೆ ಎಂಬ ಮೂರು ಗುಣಗಳನ್ನು ಒಂದೇ ವೇಳೆ ಒದಗಿಸುತ್ತದೆ. ಒಳಗೆ ವಿಶಾಲ ಗ್ಯಾಂಗ್‌ವೇ, USB ಚಾರ್ಜರ್‌, ಆರಾಮದಾಯಕ ಆಸನಗಳು ಎಲ್ಲವೂ ಪ್ರಯಾಣಿಕರು ಸುಲಭವಾಗಿ ಸಂಚರಿಸೋಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. 2026ರ ಮಧ್ಯಭಾಗದಲ್ಲೇ ಕಾಳೇನ ಅಗ್ರಹಾರ ತಾವರೆಕೆರೆ 7.5 ಕಿಮೀ ಮಾರ್ಗದಲ್ಲಿ ಟ್ರಯಲ್‌ ರನ್ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಸಂಪೂರ್ಣ ಪಿಂಕ್ ಲೈನ್ ತೆರೆಯಲಾಗುತ್ತದೆ.

    ಈ ರೈಲಿನ ಪ್ರಮುಖ ‘ಹೈಲೈಟ್’ ಎಂದರೆ GoA4 ತಂತ್ರಜ್ಞಾನ ಚಾಲಕರಿಲ್ಲದ ಸಂಪೂರ್ಣ ಆಟೋಮೇಟೆಡ್‌ ಮೆಟ್ರೋ ವ್ಯವಸ್ಥೆ. ರೈಲು ಎಲ್ಲಿ ಹೋದರೂ, ಎಷ್ಟು ವೇಗದಲ್ಲಿ ಓಡಿದರೂ, ಯಾವ ಸ್ಟೇಷನ್‌ನಲ್ಲಿ ನಿಲ್ಲಬೇಕಾದರೂ… ಎಲ್ಲವನ್ನೂ ದೂರದಲ್ಲಿರುವ ಕಂಟ್ರೋಲ್ ರೂಮ್‌ ನಿರ್ವಹಿಸುತ್ತದೆ. ರೈಲು ಚಲಿಸುವುದು, ಬ್ರೇಕ್ ಹಾಕುವುದು, ಬಾಗಿಲು ತೆರೆದು ಮುಚ್ಚುವುದು ಈ ಎಲ್ಲ ಪ್ರಕ್ರಿಯೆಗಳೂ ಸಿಸ್ಟಮ್‌ನಲ್ಲೇ ಪ್ರೋಗ್ರಾಮಿಂಗ್ ಆಗಿರುತ್ತವೆ. ‘CBTC’ ಎಂಬ ಅತ್ಯಾಧುನಿಕ ಕಮ್ಯುನಿಕೇಶನ್‌ ಆಧಾರಿತ ತಂತ್ರಜ್ಞಾನ ರೈಲಿನ ನಿಖರ ಸ್ಥಳದ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಸುರಕ್ಷಿತವಾಗಿ ನಡೆಸುತ್ತದೆ.

    ಸುರಕ್ಷತೆಯ ವಿಷಯಕ್ಕೆ ಬಂದರೆ, ಚಾಲಕರಿಲ್ಲದ ರೈಲು ಎಂದೇನೂ ಭಯಪಡುವ ಅಗತ್ಯವಿಲ್ಲ. ಈ ಹೊಸ ಮೆಟ್ರೋ ಒಳಗೆ ಮತ್ತು ಹೊರಗೆ ಅನೇಕ ಸೆನ್ಸರ್‌ಗಳು ಕೆಲಸ ಮಾಡುತ್ತವೆ. ಹಳಿಯ ಮೇಲೆ ಯಾವುದಾದರೂ ಅಡೆತಡೆ ಕಂಡರೂ, ಬೆಂಕಿ ಅಥವಾ ತಾಂತ್ರಿಕ ವ್ಯತ್ಯಯ ಎದುರಾದರೂ, ಸಿಸ್ಟಮ್ ತಕ್ಷಣ ಸ್ಪಂದಿಸಿ ರೈಲನ್ನು ನಿಲ್ಲಿಸುವ ವ್ಯವಸ್ಥೆ ಇದೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್‌ ರೂಂ ಜೊತೆ ನೇರವಾಗಿ ಮಾತನಾಡಲು ಪ್ಯಾಸೆಂಜರ್‌ ಅಲಾರ್ಮ್ ಸಾಧನವನ್ನು ಕೂಡ ನೀಡಲಾಗಿದೆ. ಜೊತೆಗೆ ರೈಲು ಸಂಪೂರ್ಣವಾಗಿ ಸಿಸಿಟಿವಿ ನಿಗಾವಿಡಿಯಲ್ಲಿ ಇರುತ್ತದೆ. ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ಗಳು ಮತ್ತು ರೈಲಿನ ಬಾಗಿಲುಗಳ ಸಿಂಕ್ರೊನೈಜೇಶನ್‌ ಅಪಘಾತಗಳನ್ನು ಮುಂಚೆಯೇ ತಡೆಯುತ್ತದೆ.

    ಬಿಇಎಂಎಲ್ ನಿರ್ಮಿಸಿರುವ ಈ ಟ್ರೈನ್‌ ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲ, ಇದು ಭಾರತದಲ್ಲಿ ಮೆಟ್ರೋ ತಂತ್ರಜ್ಞಾನ ಸ್ವಾವಲಂಬನ್ಯದ ಹೆಜ್ಜೆಗುರುತು. ದೆಹಲಿಯ ಕೆಲವು ಮಾರ್ಗಗಳಲ್ಲಿ ಆಗಲೇ ಡ್ರೈವರ್‌ಲೆಸ್‌ ಮೆಟ್ರೋ ಓಡುತ್ತಿದರೂ, ದೇಶೀಯವಾಗಿ ನಿರ್ಮಿತ ಪೂರ್ಣ ಚಾಲಕರಹಿತ ರೈಲನ್ನು ಮೊದಲಬಾರಿಗೆ ಬೆಂಗಳೂರು ಸ್ವಾಗತಿಸಲಿದೆ. ಮೆಟ್ರೋ ಸೇವೆಯ ವೇಗ, ಸುರಕ್ಷತೆ, ಮತ್ತು ಪ್ರಯಾಣದ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಈ ರೈಲು, ನಗರದ ಭವಿಷ್ಯದ ಸಾರಿಗೆ ವ್ಯವಸ್ಥೆಯ ನಕಲಿ ಬದಲಾವಣೆಯ ಸಂಕೇತವಾಗಿಯೇ ಕಾಣುತ್ತಿದೆ.

  • IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್‌ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ  ಬೌಲಿಂಗ್‌ನ ಪ್ರತಿ ತಪ್ಪನ್ನೂ  ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್‌ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ  ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.

    ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್​ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.

    ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.

    ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.

    ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    ಮದುವೆ ರದ್ದು ವಿಚಾರದಿಂದ ಸುದ್ದಿಯಾಗಿದ್ದ ಸ್ಮೃತಿ ಮಂದಾನಾ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆದರೆ ವೇದಿಕೆ ಮೇಲೆ ಮಾತನಾಡಿದ ಕ್ಷಣದಲ್ಲೇ ಅವರ ಮನಸ್ಸು ಎಲ್ಲಿದೆ ಎನ್ನುವುದು ಸ್ಪಷ್ಟವಾಯಿತು ಕ್ರಿಕೆಟ್‌ ಹೊರತು ಬೇರಾವುದೂ ಅವರಿಗೆ ಮುಖ್ಯವಲ್ಲ. ವೈಯಕ್ತಿಕ ಗೊಂದಲಗಳ ಮಧ್ಯೆಯೂ ಅವರ ಗಮನ ಪೂರ್ಣವಾಗಿ ಆಟದಲ್ಲೇ ಇದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ, “ಭಾರತೀಯ ಜರ್ಸಿ ಧರಿಸುವ ಯೋಚನೆಯೇ ನನ್ನನ್ನು ಮತ್ತೆ ಮತ್ತೆ ಎಬ್ಬಿಸುತ್ತದೆ. ಕ್ರಿಕೆಟ್ ಬಿಟ್ಟರೆ ಬೇರೇನೂ ನನ್ನ ಮನಸ್ಸಿಗೆ ತಟ್ಟುವುದೇ ಇಲ್ಲ,” ಎಂದು ಹೇಳಿದರು. ಮದುವೆ ವಿಷಯದಲ್ಲಿ ಏನೇ ಆಗಿರಲಿ, ತಮ್ಮ ಬದುಕಿನ ಮೂಲ ದಿಕ್ಕು ಕ್ರಿಕೆಟ್‌ ಆಗಿದೆ ಅನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.

    ವಿಶ್ವಕಪ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಆ ಟ್ರೋಫಿ ತಂಡದ ಹಲವು ವರ್ಷಗಳ ಪರಿಶ್ರಮದ ಫಲ ಎಂದು ಹೇಳಿದರು. ಫೈನಲ್ ಪಂದ್ಯಕ್ಕೂ ಮುನ್ನ ನಾವು ಗೆಲುವಿನ ಕ್ಷಣವನ್ನು ಮನಸ್ಸಿನಲ್ಲಿ ಪುನಃ ಪುನಃ ಕಲ್ಪಿಸಿಕೊಂಡಿದ್ದೆವು; ನಿಜವಾಗಿ ಟ್ರೋಫಿ ಕೈಗೆ ಸಿಕ್ಕಾಗ, ಎಲ್ಲರಿಗೂ ಅದು ಭಾವನಾತ್ಮಕ ಕ್ಷಣವಾಗಿತ್ತು ಎಂದು ಸ್ಮೃತಿ ನೆನಪಿಸಿಕೊಂಡರು.

    ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಸ್ಟ್ಯಾಂಡ್ಸ್‌ನಲ್ಲಿ ಹಾಜರಿದ್ದುದೇ ತಂಡಕ್ಕೆ ದೊಡ್ಡ ಬಲ ನೀಡಿತು ಎಂದು ಸ್ಮೃತಿ ಹೇಳಿದರು. “ಅವರ ಕಣ್ಣಲ್ಲಿ ಕಾಣಿಸಿದ ಹೆಮ್ಮೆಯೇ ನಮ್ಮ ಗೆಲುವಿನ ನಿಜವಾದ ಮೌಲ್ಯ,” ಎಂಬ ಅವರ ಹೇಳಿಕೆ, ಹಿರಿಯ ಆಟಗಾರರೊಂದಿಗೆ ಯುವ ತಂಡದ ಭಾವನಾತ್ಮಕ ಬಂಧವನ್ನು ತೋರಿಸಿತು.

    ವೈಯಕ್ತಿಕ ವಿಷಯಗಳಲ್ಲಿ ಏರಿಳಿತಗಳಿದ್ದರೂ, ಸ್ಮೃತಿ ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಯಾರಿಯಲ್ಲಿದ್ದಾರೆ. ನೆಟ್ಸ್‌ನಲ್ಲಿ ಮತ್ತೆ ಬ್ಯಾಟ್ ಹಿಡಿದಿರುವ ಅವರು, ಮೈದಾನವೇ ತಮ್ಮ ನಿಜವಾದ ಮನೆ ಎಂಬುದನ್ನು ತೋರಿಸಿದ್ದಾರೆ.

  • ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ಉಚಿತ ಪ್ರಯಾಣವನ್ನು ಮಹಿಳೆಯರಿಗೆ ನೀಡುವ ‘ಶಕ್ತಿ’ ಯೋಜನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರೂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಯೋಜನೆ ಭಾರವಾಗಿಬಿಟ್ಟಿದೆ. ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರ ಬಸ್ ಪ್ರಯಾಣದ ಸಂಖ್ಯೆ ಹೆಚ್ಚಾದರೂ, ಅದರ ವೆಚ್ಚವನ್ನು ಸರ್ಕಾರದಿಂದ ತೆಗೆಯುವ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯದ ಕಾರಣ NWKRTC ಈಗ ಗಂಭೀರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

    ಸರ್ಕಾರವು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಿದೆ. ನಿಗಮಗಳು ಪ್ರತಿಮಾಸವೂ ಈ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಿವೆ. ಆದರೆ ಸರ್ಕಾರದಿಂದ ಬರುವ ಹಣ ವಾರಂವಾರ ತಡವಾಗುತ್ತಿದ್ದು, ಮುಖ್ಯವಾಗಿ ಪೂರ್ಣ ಪ್ರಮಾಣದಲ್ಲಿ ಬರದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರತೀ ತಿಂಗಳು ಸುಮಾರು 130 ಕೋಟಿ ರೂಪಾಯಿ ಮರುಪಾವತಿ ಪಡೆಯಬೇಕಾದ NWKRTCಗೆ ಸರ್ಕಾರದಿಂದ ಸಿಗುತ್ತಿರುವುದು 100 ರಿಂದ 110 ಕೋಟಿ ರೂಪಾಯಿಗಳಷ್ಟೇ. ಉಳಿದ ಹಣ ಹಂತ ಹಂತವಾಗಿ ಜಮೆಯಾಗುತ್ತಾ ಬಂದಿದ್ದು, ಈಗ ಬಾಕಿಯ ಮೊತ್ತ ಬರೋಬ್ಬರಿ 940 ಕೋಟಿಗೆ ಏರಿದೆ.

    ಈ ದೊಡ್ಡ ಬಾಕಿಯ ಪರಿಣಾಮ ನಿಗಮದ ದೈನಂದಿನ ಚಟುವಟಿಕೆಗಳ ಮೇಲೂ ನೇರವಾಗಿ ಬಿದ್ದಿದೆ. ಸಿಬ್ಬಂದಿಯ ಪಿಎಫ್ ಕಂತುಗಳನ್ನು ಪಾವತಿಸಲು ನಿಗಮ ಬಾಧ್ಯವಾಗಿದ್ದು, ಅದಕ್ಕೂ ಸಾಲದ ಮೊರೆ ಹೋಗಬೇಕಾಯಿತು. 646 ಕೋಟಿ ರೂಪಾಯಿ ಸಾಲ ಮಾಡಿ ಸಿಬ್ಬಂದಿಯ ಪಿಎಫ್ ಕರಾರುಗಳನ್ನು ಪೂರೈಸಿದ್ದರೂ, ಇನ್ನೂ ನಿವೃತ್ತ ನೌಕರರಿಗೆ ಕೊಡಬೇಕಾಗಿರುವ ಸುಮಾರು 45 ಕೋಟಿ ರೂಪಾಯಿ ಗ್ರಾಚ್ಯುಟಿ ಮೊತ್ತ ಬಾಕಿಯೇ ಉಳಿದಿದೆ. ವೇತನಗಳ ಪಾವತಿಗೂ ಸರ್ಕಾರದಿಂದ ಬರುವ ಹಣವೇ ಬಳಸಬೇಕಾದ ಪರಿಸ್ಥಿತಿ ಬಂದಿರುವುದರಿಂದ, ಅಭಿವೃದ್ಧಿ ಕಾರ್ಯಗಳು ಅಡ್ಡಿಯಿಲ್ಲದೆ ಸಾಗಲು ನಿಗಮದ ಬಳಿ ಹಣವೇ ಉಳಿದಿಲ್ಲ.

    ಇದೇ ಸಂದರ್ಭದಲ್ಲಿ ಬಸ್‌ಗಳ ನಿರ್ವಹಣೆ, ಹೊಸ ವಾಹನಗಳ ಖರೀದಿ, ಮೂಲಭೂತ ಸೌಲಭ್ಯಗಳ ಸುಧಾರಣೆ ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಉಚಿತ ಪ್ರಯಾಣದ ಫಲಾನುಭವಿಗಳು ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದ್ದರೂ, ಆ ಹೊಣೆಯನ್ನು ಹೊರುವ ನಿಗಮಗಳು ಮೂಲಭೂತ ಆರ್ಥಿಕ ನೆರವಿಗಾಗಿ ಸರ್ಕಾರದ ಬಾಗಿಲಲ್ಲಿ ಕಾಯಬೇಕಾದ ಪರಿಸ್ಥಿತಿ ಮೂಡಿದೆ.

    ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಸುಲಭವಾಗಿರುವುದು ರಾಜ್ಯಕ್ಕೆ ಶ್ಲಾಘನೀಯ ವಿಷಯವಾದರೂ, ಅದರ ಹೊಣೆಗಾರಿಕೆಯನ್ನು ನಿಭಾಯಿಸುವ ನಿಗಮಗಳು ಆರ್ಥಿಕವಾಗಿ ಬಲಿಯಾಗಬೇಕಾದರೆ ಮರುಪಾವತಿ ವ್ಯವಸ್ಥೆಯಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯ ಸ್ಪಷ್ಟವಾಗಿದೆ.

  • ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು  ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19ರಂದು ಜಗತ್ತಿನಾದ್ಯಂತ ತೆರೆಗೆ ಬರಲು ಸಿದ್ಧವಾಗುತ್ತಿದ್ದಂತೆಯೇ, ಕನ್ನಡದಿಂದ ಹಿಡಿದು ಬಾಲಿವುಡ್‌–ಟಾಲಿವುಡ್‌ ವರೆಗೆ ಎಲ್ಲೆಡೆ ಚಲನಚಿತ್ರ ಚಲನ ಶುರುವಾಗಿದೆ. ಇನ್ನೂ ನೂರು ದಿನ ಬಾಕಿ ಇದ್ದರೂ ಟಾಕ್ಸಿಕ್ ಕುರಿತಂತೆ ಚರ್ಚೆ ಗಟ್ಟಿಯಾಗಿ ನಡೆಯುತ್ತಿದೆ. ಯಶ್ ತಮ್ಮ ಅಭಿಮಾನಿಗಳೊಂದಿಗೆ ಹೊಸ ಸಂದೇಶ ಹಂಚಿಕೊಂಡಿರುವುದು ಈ ಸಂಭ್ರಮಕ್ಕೆ ಮತ್ತಷ್ಟು ವೇಗ ನೀಡಿದೆ. ಆದರೆ ಈ ಬಾರಿ ಟಾಕ್ಸಿಕ್ ಒಬ್ಬನೇ ಕಣಕ್ಕಿಳಿಯುವುದಿಲ್ಲ; ಅದೇ ಸಮಯದಲ್ಲಿ ಇನ್ನೂ ಅನೇಕ ದೊಡ್ಡ ಸಿನಿಮಾಗಳು ಸಾಲಾಗಿ ನಿಂತಿವೆ.

    ಟಾಕ್ಸಿಕ್ ಬಿಡುಗಡೆಯಾದ ತಕ್ಷಣದ ದಿನವೇ ಅಜಯ್ ದೇವಗನ್ ನಟನೆಯ ಧಮಾಲ್ 4 ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕಾಮಿಡಿ ಮತ್ತು ಮನರಂಜನೆಯನ್ನು ಒಟ್ಟುಗೂಡಿಸಿಕೊಂಡಿರುವ ಈ ಸಿನಿಮಾಗೆ ಬಾಲಿವುಡ್‌ನಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅದರ ಜೊತೆಗೆ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಓಡುತ್ತಿದ್ದು, ಅದರ ಮುಂದಿನ ಭಾಗವನ್ನು ಇದೇ ಸಮಯಕ್ಕೆ ತರಲು ತಂಡ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ಬಾಲಿವುಡ್‌ ಸಿನಿಮಾಗಳು ತಮ್ಮದೇ ಅಭಿಮಾನಿ ಬಳಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವುದರಿಂದ, ಮರೀಚಿಕೆ ಗದ್ದಲ ಖಚಿತ.

    ಇದೇ ವೇಳೆ ಟಾಲಿವುಡ್‌ ಕೂಡ ಕೈ ಮುಗಿದು ಕುಳಿತಿಲ್ಲ. ಮಾರ್ಚ್ ತಿಂಗಳ ಕೊನೆಯಲ್ಲಿ ಡಕಾಯಿತ್ ಸಿನಿಮಾ ರಿಲೀಸ್‌ ಆಗಲು ಸಜ್ಜಾಗುತ್ತಿದೆ. ಗುಂಡು–ಗಲಾಟೆ, ಟೆನ್ಷನ್, ಆಕ್ಷನ್ ಆಲ್ ಮಿಕ್ಸೆಡ್ ಎಂಬ ಶೈಲಿಯ ಈ ಚಿತ್ರ ಈಗಲೇ ಪ್ರೇಕ್ಷಕರಲ್ಲಿ ಕುತೂಹಲ ಬಿತ್ತಿದೆ. ಅದೇ ವಾರದಲ್ಲಿ ರಾಮ್ ಚರಣ್ ತನ್ನ ಅತ್ಯಂತ ನಿರೀಕ್ಷಿತ ಪೆದ್ದಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಹಾಡುಗಳು ಮತ್ತು ಟೀಸರ್‌ಗಳು ವೈರಲ್ ಆಗಿರುವುದರಿಂದ ಈ ಚಿತ್ರದ ನಿರೀಕ್ಷೆ ಮಾರ್ಚ್‌ ತಿಂಗಳ ಹವಾ ಬದಲಾಯಿಸುವ ಮಟ್ಟಕ್ಕೆ ಏರಿದೆ. ಇದೇ ದಿನ ಮತ್ತೊಂದು ದೊಡ್ಡ ಚಲನಚಿತ್ರ, ನಾನಿ ಅಭಿನಯದ ದಿ ಪ್ಯಾರಡೈಸ್, ಪ್ರೇಕ್ಷಕರ ಮುಂದೆ ಬರಲಿದೆ. ನಾನಿಯ ಚಿತ್ರಗಳಿಗೆ ಇರುವ ನಂಬಿಕೆ ಮತ್ತು ಪ್ರೀತಿ ಈ ಚಿತ್ರಕ್ಕೂ ಬಲ ನೀಡಲಿದೆ.

    ಒಂದೇ ತಿಂಗಳಲ್ಲಿ, ಒಂದೇ ಕಾಲದಲ್ಲಿ ಆರು ಬೃಹತ್ ಸಿನಿಮಾಗಳು ತೆರೆಗೆ ಬರುವುದು ಸಾಮಾನ್ಯ ಸಂಗತಿ ಅಲ್ಲ. ಪ್ರತಿ ಚಿತ್ರವೂ ತನ್ನದೇ ಭಿನ್ನ ಜಾನರ್‌, ವಿಭಿನ್ನ ಸಿನೆಮಾಟಿಕ್‌ ಸ್ಟೈಲ್‌, ತನ್ನದೇ ಅಭಿಮಾನಿಗಳ ಬೆಂಬಲ ಇವೆಲ್ಲ ಸೇರಿ ಮಾರ್ಚ್ 2026 ಅನ್ನು ನಿಜವಾದ ಸಿನೆಮಾ ಹಬ್ಬದ ತಿಂಗಳನ್ನಾಗಿ ಮಾಡುತ್ತಿದೆ. ಇದೊಂದು ಬಾಕ್ಸ್‌ ಆಫೀಸ್‌ ಯುದ್ಧವೇ ಆಗಬಹುದು, ಆದರೆ ಪ್ರೇಕ್ಷಕರಿಗೆ ಇದು ಸಂಪೂರ್ಣ ಉತ್ಸವ.

    ಟಾಕ್ಸಿಕ್ ತನ್ನದೇ ಲೆವೆಲ್‌ನಲ್ಲಿ ದೊಡ್ಡ ನಿರೀಕ್ಷೆಯನ್ನು ಹೊತ್ತಿದ್ದರೂ, ಎದುರು ನಿಂತಿರುವ ಸಿನಿಮಾಗಳು ಕೂಡ ಲಘು ಪ್ರತಿಸ್ಪರ್ಧಿಗಳಲ್ಲ. ಯಶ್, ಅಜಯ್ ದೇವಗನ್, ರಣವೀರ್ ಸಿಂಗ್, ರಾಮ್ ಚರಣ್, ನಾನಿ ಎಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮದೇ ಆದ ಮಿಂಚನ್ನು ತೋರಿಸಲು ಸಿದ್ಧರಾಗಿದ್ದಾರೆ. ಯಾವ ಸಿನಿಮಾ ಜೋರಾಗಿ ಓಡುತ್ತದೆ, ಯಾವುದು ಬಾಕ್ಸ್‌ ಆಫೀಸ್‌ನಲ್ಲಿ ಸ್ಪರ್ಧೆಯನ್ನು ಮೀರಿಸುತ್ತದೆ ಎಂಬ ಕುತೂಹಲ ಈಗಲೇ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

    ಒಟ್ಟಾರೆ ನೋಡಿದರೆ, 2026ರ ಮಾರ್ಚ್ ತಿಂಗಳು ಸಿನಿಮಾಪ್ರಿಯರಿಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಹಬ್ಬದ ಮಾಸವಾಗಲಿದೆ. ಪ್ರೇಕ್ಷಕರು ಯಾವ ಚಿತ್ರವನ್ನು ಮೊದಲಿಗೆ ನೋಡಬೇಕು ಎಂದು ಯೋಚಿಸುವಷ್ಟರಲ್ಲಿ ಮತ್ತೊಂದು ದೊಡ್ಡ ರಿಲೀಸ್‌ ಬಾಗಿಲಲ್ಲೇ ಕಾದಿದೆ. ಒಂದು ಮಾತಿನಲ್ಲಿ ಹೇಳಬೇಕಾದರೆ ಆ ತಿಂಗಳು ಥಿಯೇಟರ್‌ಗಳಿಗೆ ಹೋಗುವುದು ಕೇವಲ ಸಿನಿಮಾ ನೋಡುವುದು ಅಲ್ಲ; ಅದು ಒಂದು ಅನುಭವ!