Author: Shivu

  • ಮಹಿಳೆಯರಿಗೆ ಸುರಕ್ಷಿತ ನಗರ ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಹೇಳಿಕೆ

    ಮಹಿಳೆಯರಿಗೆ ಸುರಕ್ಷಿತ ನಗರ ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಹೇಳಿಕೆ

    ಮಹಿಳಾ ಸುರಕ್ಷತೆ ವಿಚಾರದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿರುವುದು ನಗರಕ್ಕೆ ಮಾತ್ರವಲ್ಲ, ರಾಜ್ಯಕ್ಕೂ ಹೆಮ್ಮೆಯ ಸಂಗತಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಮಹಿಳೆಯರ ವಾಸಕ್ಕೆ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ ಎಂಬ ಸಮೀಕ್ಷೆ, ಪೊಲೀಸ್ ಇಲಾಖೆಯ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ತಕ್ಕ ಉತ್ತರವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.

    ಚೆನ್ನೈ ಮೂಲದ ಅವತಾರ್ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ ಸುರಕ್ಷತೆ, ತಂತ್ರಜ್ಞಾನ ಬಳಕೆ, ಮೂಲಸೌಕರ್ಯ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ಬೆಂಗಳೂರು 53.29 ಅಂಕಗಳನ್ನು ಗಳಿಸಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಸಾಧನೆಗೆ ಕಾರಣರಾದ ಬೆಂಗಳೂರು ನಗರ ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳಿಗೂ ಅಭಿನಂದನೆ ಸಲ್ಲಿಸಿದರು.

    ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದ ಅವರು, ತಾವೇ ಸ್ವತಃ ಬೆಂಗಳೂರು ನಗರ ಪೊಲೀಸ್ ಕಮಾಂಡ್ ಸೆಂಟರ್‌ಗೆ ತೆರಳಿ ರಾತ್ರಿ ಎರಡು ಗಂಟೆಯವರೆಗೂ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿದ್ದಾಗಿ ವಿವರಿಸಿದರು. ಇಂತಹ ಜಾಗರೂಕತೆಯೇ ಬೆಂಗಳೂರನ್ನು ಮಹಿಳೆಯರಿಗೆ ಸುರಕ್ಷಿತ ನಗರವಾಗಿ ರೂಪಿಸಿದೆ ಎಂದರು.

    ಈ ಹಿಂದೆ ಕೂಡ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲಿ ಉತ್ತಮ ಸ್ಥಾನ ಪಡೆದಿತ್ತು ಎಂದು ನೆನಪಿಸಿದ ಅವರು, ವಿರೋಧ ಪಕ್ಷಗಳು ದಿನನಿತ್ಯ ಬೆಂಗಳೂರಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿವೆ. ಆದರೆ ಈ ಸಮೀಕ್ಷಾ ವರದಿ ಅವರ ಆರೋಪಗಳಿಗೆ ಸ್ಪಷ್ಟ ಉತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.

    ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೊರಟಗೆರೆಯಲ್ಲಿ ನಡೆದ ಪೂಜೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರತಿಯೊಬ್ಬ ರಾಜಕಾರಣಿಗೂ ಬೆಂಬಲಿಗರು ಮತ್ತು ಅಭಿಮಾನಿಗಳು ಇರುತ್ತಾರೆ. ತಮ್ಮ ನಾಯಕ ಎತ್ತರಕ್ಕೆ ಹೋಗಬೇಕು ಎಂದು ಅವರು ಬಯಸುವುದು ಸಹಜ. ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದರು.

    ಬಳ್ಳಾರಿ ಹಾಗೂ ಹುಬ್ಬಳ್ಳಿ ಪ್ರಕರಣಗಳನ್ನು ಸಿಐಡಿಗೆ ವಹಿಸಿರುವುದರ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಆದೇಶ ಹೊರಡಿಸಲಾಗಿದೆ. ನಾವು ಏನನ್ನಾದರೂ ಮುಚ್ಚಿಡುತ್ತಿದ್ದೇವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆಯ ನಂತರ ಸತ್ಯ ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದರು.

    ಧ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ವಿಳಂಬವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಾಜ್ಯಪಾಲರು ಮಸೂದೆಯನ್ನು ಅಧ್ಯಯನ ಮಾಡುತ್ತಿದ್ದಾರೆ ಎನ್ನಿಸುತ್ತದೆ. ವಾಪಸ್ ಕಳಿಸಿ ಸ್ಪಷ್ಟನೆ ಕೇಳಿದರೆ ಸರ್ಕಾರ ನೀಡಲಿದೆ. ಒಂದುವೇಳೆ ತಿರಸ್ಕರಿಸಿದರೆ ಮುಂದಿನ ಕ್ರಮವನ್ನು ಸರ್ಕಾರ ತೀರ್ಮಾನಿಸಲಿದೆ ಎಂದು ತಿಳಿಸಿದರು.

    ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಸರ್ಕಾರ ಕಠಿಣ ನಿಲುವು ಹೊಂದಿದೆ ಎಂದ ಅವರು, ಗಡಿಯಲ್ಲಿ ಹಣಕೊಟ್ಟು ಒಳನುಗ್ಗುತ್ತಿರುವ ಆರೋಪಗಳಿದ್ದರೆ ಕೇಂದ್ರ ಸರ್ಕಾರ ಗಡಿಭದ್ರತೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಏಜೆಂಟ್‌ಗಳ ಮೂಲಕ ಅಕ್ರಮವಾಗಿ ಬಂದವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲಾಗುತ್ತಿದೆ. ವಿದೇಶಿಗರ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯ. ಅಧಿಕೃತ ವೀಸಾ ಇಲ್ಲದವರಿಗೆ ಮನೆ ಬಾಡಿಗೆ ನೀಡಬಾರದು ಎಂಬ ಸೂಚನೆಗಳನ್ನು ನೀಡಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

  • ಬಳ್ಳಾರಿ ಪ್ರಕರಣ ನೆಪದಲ್ಲಿ ಕಾಂಗ್ರೆಸ್–ಜೆಡಿಎಸ್ ಅಸಭ್ಯ ಸೋಶಿಯಲ್ ಮೀಡಿಯಾ ಸಮರ

    ಬಳ್ಳಾರಿ ಪ್ರಕರಣ ನೆಪದಲ್ಲಿ ಕಾಂಗ್ರೆಸ್–ಜೆಡಿಎಸ್ ಅಸಭ್ಯ ಸೋಶಿಯಲ್ ಮೀಡಿಯಾ ಸಮರ

     


    ರಾಜಕೀಯ ಆರೋಪ–ಪ್ರತ್ಯಾರೋಪಗಳು ಹೊಸದಲ್ಲ. ಆದರೆ ಇತ್ತೀಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸೋಶಿಯಲ್ ಮೀಡಿಯಾ ಸಮರ ನೋಡಿದರೆ, ರಾಜಕೀಯ ಭಾಷೆ ಯಾವ ಮಟ್ಟಕ್ಕೆ ಇಳಿಯುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಎದ್ದು ಬರುತ್ತದೆ. ಬಳ್ಳಾರಿ ರೆಡ್ಡಿ ಬಣಗಳ ಶೂಟೌಟ್ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಟ್ವೀಟ್ ಯುದ್ಧ, ವಿಷಯದ ಗಂಭೀರತೆಯನ್ನು ಮರೆಸಿ ವೈಯಕ್ತಿಕ ನಿಂದನೆ, ಕೆಳಮಟ್ಟದ ಪದಪ್ರಯೋಗ ಮತ್ತು ಅಸಭ್ಯ ಆರೋಪಗಳ ಕಡೆಗೆ ತಿರುಗಿದೆ.

    ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗಳಿಂದ ಪ್ರಾರಂಭವಾದ ವಿವಾದಕ್ಕೆ ಕಾಂಗ್ರೆಸ್ ಐಟಿ ಸೆಲ್ ತೀವ್ರ ಪ್ರತಿಕ್ರಿಯೆ ನೀಡಿತು. ಆರೋಪಗಳಿಗೆ ಉತ್ತರಿಸುವ ಬದಲು ಬಳಸಿದ ಭಾಷೆ, ರಾಜಕೀಯ ಚರ್ಚೆಯ ಘನತೆಯನ್ನೇ ಪ್ರಶ್ನಿಸುವಂತಿತ್ತು. ‘ಪೇಪರ್ ಟೈಗರ್’, ‘ಅನುಭವದ ಕೊಚ್ಚೆ’ ಎನ್ನುವ ಪದಗಳಿಂದ ಹಿಡಿದು, ಅಧಿಕಾರಕ್ಕಾಗಿ ಯಾವ ಪಕ್ಷದ ಜತೆಯಾದರೂ ಕೈಜೋಡಿಸುವ ಸಮಯಸಾಧಕತನದ ಆರೋಪಗಳವರೆಗೂ ಮಾತಿನ ದಾಳಿ ನಡೆಯಿತು. ಬಳ್ಳಾರಿ ಪ್ರಕರಣದ ತನಿಖೆ, ಸತ್ಯಾಸತ್ಯತೆಗಳ ಬಗ್ಗೆ ಮಾತನಾಡಬೇಕಾದ ಜಾಗದಲ್ಲಿ, ವೈಯಕ್ತಿಕ ನಡವಳಿಕೆಗಳ ಬಗ್ಗೆ ವ್ಯಂಗ್ಯವೇ ಮುಂಚೂಣಿಗೆ ಬಂತು.

    ಇದಕ್ಕೆ ಪ್ರತಿಯಾಗಿ ಜೆಡಿಎಸ್ ಐಟಿ ವಿಂಗ್ ಕೂಡ ತಗ್ಗಲಿಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಹಳೆಯ ವಿವಾದಗಳು, ಸಿಡಿ ಪ್ರಕರಣಗಳು, ಹನಿಟ್ರಾಪ್ ಆರೋಪಗಳು, ರಿಯಲ್ ಎಸ್ಟೇಟ್ ವ್ಯವಹಾರಗಳ ಮಾತುಗಳನ್ನು ಎತ್ತಿ ಹಿಡಿದು ತಿರುಗೇಟು ನೀಡಿತು. ಇದು ರಾಜಕೀಯ ಪ್ರತಿಕ್ರಿಯೆಯೇ ಅಥವಾ ವೈಯಕ್ತಿಕ ದ್ವೇಷದ ಬಹಿರಂಗ ಪ್ರದರ್ಶನವೇ ಎಂಬ ಗೊಂದಲ ಜನರಲ್ಲಿ ಮೂಡಿತು.

    ಇಷ್ಟರಲ್ಲೇ ಕಾಂಗ್ರೆಸ್ ಮತ್ತೆ ಕೌಂಟರ್ ಕೊಟ್ಟು, ಜೆಡಿಎಸ್‌ನ್ನು ‘ಬ್ಲೂ ಬಾಯ್ಸ್’ ಪಾರ್ಟಿ ಎಂದು ಕರೆದಿತು. ಹಾಸನ್ ಮೂಲದ ಅಶ್ಲೀಲ ವಿಡಿಯೋ ಪ್ರಕರಣಗಳನ್ನು ಉಲ್ಲೇಖಿಸಿ, ಜೆಡಿಎಸ್ ನಾಯಕರನ್ನು ನೇರವಾಗಿ ಗುರಿಯಾಗಿಸಿಕೊಂಡಿತು. ಈ ಹಂತಕ್ಕೆ ಬಂದಾಗ, ಬಳ್ಳಾರಿ ಶೂಟೌಟ್ ಪ್ರಕರಣವೇ ಹಿನ್ನೆಲೆಗೆ ಸರಿದು, ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅವಮಾನಿಸುವ ಸ್ಪರ್ಧೆಯೇ ಮುಖ್ಯ ವಿಷಯವಾಗಿ ಪರಿಣಮಿಸಿತು.

    ಒಟ್ಟಿನಲ್ಲಿ, ಈ ಟ್ವೀಟ್ ಸಮರದಲ್ಲಿ ಸೋತಿದ್ದು ಯಾರೋ ಒಬ್ಬ ಪಕ್ಷವಲ್ಲ; ರಾಜಕೀಯ ಸಂಸ್ಕೃತಿಯೇ. ಜನಸಾಮಾನ್ಯರ ಸಮಸ್ಯೆಗಳು, ಕಾನೂನು–ಕ್ರಮ, ತನಿಖೆಯ ಪಾರದರ್ಶಕತೆ ಕುರಿತು ಮಾತನಾಡಬೇಕಾದ ನಾಯಕರು, ಅಸಭ್ಯ ಪದಗಳ ಮೂಲಕ ಪರಸ್ಪರ ಕಚ್ಚಾಡುತ್ತಿರುವ ದೃಶ್ಯ ರಾಜಕೀಯದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತಿದೆ. ಅಧಿಕಾರಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಷೆಯ ಮಿತಿಯನ್ನು ಮೀರಿ ಹೋಗುತ್ತಿರುವ ಈ ಪ್ರವೃತ್ತಿ, ‘ಇದು ರಾಜಕೀಯವೇ, ಅಥವಾ ಕೀಳು ಮಟ್ಟದ ಮನರಂಜನೆಯೇ?’ ಎಂಬ ಪ್ರಶ್ನೆಯನ್ನು ಸಾರ್ವಜನಿಕರ ಮುಂದೆ ನಿಲ್ಲಿಸಿದೆ.

  • ನಡಿನ್ ಡಿ ಕ್ಲಾರ್ಕ್ ಆಲ್ರೌಂಡ್ ಶೋ; WPL 2026 ಉದ್ಘಾಟನೆಯಲ್ಲಿ ಮುಂಬೈ ಮಣಿಸಿದ ಆರ್‌ಸಿಬಿ

    ನಡಿನ್ ಡಿ ಕ್ಲಾರ್ಕ್ ಆಲ್ರೌಂಡ್ ಶೋ; WPL 2026 ಉದ್ಘಾಟನೆಯಲ್ಲಿ ಮುಂಬೈ ಮಣಿಸಿದ ಆರ್‌ಸಿಬಿ


    ಮಹಿಳಾ ಪ್ರೀಮಿಯರ್ ಲೀಗ್ 2026ಕ್ಕೆ ಅದ್ಭುತ ಆರಂಭ ಸಿಕ್ಕಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದವರೆಗೂ ಕುತೂಹಲ ಕಾಪಾಡಿಕೊಂಡು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಕೇಂದ್ರಬಿಂದು ನಡಿನ್ ಡಿ ಕ್ಲಾರ್ಕ್. ಬೌಲಿಂಗ್‌ನಲ್ಲೂ ಬ್ಯಾಟಿಂಗ್‌ನಲ್ಲೂ ಎದುರಾಳಿಯನ್ನು ಬೆಚ್ಚಿಬೀಳಿಸಿದ ಅವರು, ಆರ್‌ಸಿಬಿಗೆ ಮರೆಯಲಾಗದ ಆರಂಭವನ್ನು ನೀಡಿದರು.

     

    ಟಾಸ್ ಗೆದ್ದ ಸ್ಮೃತಿ ಮಂದಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ರನ್‌ರೇಟ್ ಕುಂಠಿತವಾಯಿತು. ಅಮೇಲಿಯಾ ಕೆರ್ ಮತ್ತು ನೆಚ್ ಸಿವಿರ್ ಬ್ರಂಟ್ ಬೇಗನೆ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಗುಣಾಲನ್ ಕಮಲಿನಿ ಸ್ವಲ್ಪ ಹೊತ್ತು ಹೋರಾಟ ನೀಡಿದರೂ, ಹರ್ಮನ್‌ಪ್ರೀತ್ ಕೌರ್ ಕೂಡ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲಿಲ್ಲ. 11 ಓವರ್‌ಗಳೊಳಗೆ ನಾಲ್ಕು ವಿಕೆಟ್‌ಗಳು ಉದುರಿದಾಗ ಮುಂಬೈ ದೊಡ್ಡ ಮೊತ್ತ ಕಟ್ಟುವ ಸಾಧ್ಯತೆ ದೂರವಾಗುತ್ತಿತ್ತು.

     

    ಅಲ್ಲಿಂದ ಪಂದ್ಯಕ್ಕೆ ಹೊಸ ತಿರುವು ತಂದದ್ದು ನಿಕೋಲಾ ಕ್ಯಾರಿ ಮತ್ತು ಸಂಜೀವನ್ ಸಜನಾ ಅವರ ಜೊತೆಯಾಟ. ಐದನೇ ವಿಕೆಟ್‌ಗೆ ಈ ಜೋಡಿ ಧೈರ್ಯವಾಗಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು ಮೇಲಕ್ಕೆತ್ತಿತು. ಸಜನಾ ಸ್ಫೋಟಕವಾಗಿ ಆಡಿದರೆ, ಕ್ಯಾರಿ ಸ್ಥಿರವಾಗಿ ರನ್ ಸಂಗ್ರಹಿಸಿದರು. ಈ ಜೊತೆಯಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 154 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಆರ್‌ಸಿಬಿ ಪರ ನಡಿನ್ ಡಿ ಕ್ಲಾರ್ಕ್ ನಾಲ್ಕು ವಿಕೆಟ್ ಕಬಳಿಸಿ ಪ್ರಮುಖ ಪಾತ್ರವಹಿಸಿದರು.

     

    ಗುರಿ ಬೆನ್ನತ್ತಿದ ಆರ್‌ಸಿಬಿಗೂ ಪಂದ್ಯ ಸುಲಭವಾಗಿರಲಿಲ್ಲ. ಆರಂಭದಲ್ಲಿ ಗ್ರೇಸ್ ಹ್ಯಾರಿಸ್ ವೇಗದ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ಉತ್ಸಾಹಗೊಳಿಸಿದರೆ, ಮಧ್ಯದಲ್ಲಿ ವಿಕೆಟ್‌ಗಳು ಬೀಳುತ್ತಿದ್ದಂತೆ ಒತ್ತಡ ಹೆಚ್ಚಾಯಿತು. ಅರುಂಧತಿ ರೆಡ್ಡಿ ಜವಾಬ್ದಾರಿಯುತವಾಗಿ ಆಡಿದರೂ, ಗೆಲುವಿನ ಹೊರೆ ನಡಿನ್ ಡಿ ಕ್ಲಾರ್ಕ್ ಮೇಲೆಯೇ ಬಂತು. ಅವರು ಕ್ರೀಸ್‌ನಲ್ಲಿ ನಿಂತು ಪ್ರತಿ ಓವರ್‌ನಲ್ಲೂ ಲೆಕ್ಕಾಚಾರ ಮಾಡಿಕೊಂಡು ಆಡಿದರು.

     

    ಪಂದ್ಯದ ಅಂತಿಮ ಓವರ್‌ನಲ್ಲಿ ಬೇಕಾಗಿದ್ದದ್ದು 18 ರನ್. ಒತ್ತಡದ ಕ್ಷಣದಲ್ಲಿ ಕ್ಲಾರ್ಕ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬೌಂಡರಿ, ಸಿಕ್ಸರ್‌ಗಳೊಂದಿಗೆ ಅವರು ಕೊನೆಯ ಎಸೆತದಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. 44 ಎಸೆತಗಳಲ್ಲಿ 63 ರನ್ ಗಳ ಅಜೇಯ ಇನ್ನಿಂಗ್ಸ್ ಮೂಲಕ ಅವರು ಆರ್‌ಸಿಬಿ ಶಿಬಿರದಲ್ಲಿ ಸಂಭ್ರಮ ಮೂಡಿಸಿದರು.

     

    ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್‌, ಬ್ಯಾಟಿಂಗ್‌ನಲ್ಲಿ ಗೆಲುವಿನ ಅರ್ಧಶತಕ – ನಡಿನ್ ಡಿ ಕ್ಲಾರ್ಕ್ ಅವರ ಆಲ್ರೌಂಡ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವ ಸಿಕ್ಕುದು ಸಹಜವೇ. ಮಹಿಳಾ ಪ್ರೀಮಿಯರ್ ಲೀಗ್ 2026ರ ಉದ್ಘಾಟನಾ ಪಂದ್ಯವೇ ಇಂತಹ ರೋಚಕತೆ ನೀಡಿರುವುದು ಮುಂದಿನ ಪಂದ್ಯಗಳ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಆರ್‌ಸಿಬಿ ಈ ಜಯದೊಂದಿಗೆ ಟೂರ್ನಿಗೆ ಭರ್ಜರಿ ಸಂದೇಶ ರವಾನಿಸಿದ್ದು, ಮುಂಬೈ ಇಂಡಿಯನ್ಸ್ ಸೋಲಿನಲ್ಲೂ ಹೋರಾಟದ ಛಾಪು ಬಿಟ್ಟಿದೆ.

  • ಆಸ್ಕರ್ ಪಟ್ಟಿಯಲ್ಲಿ ಕಾಂತಾರ; ಜನವರಿ 22ಕ್ಕೆ ನಾಮನಿರ್ದೇಶನ

    ಆಸ್ಕರ್ ಪಟ್ಟಿಯಲ್ಲಿ ಕಾಂತಾರ; ಜನವರಿ 22ಕ್ಕೆ ನಾಮನಿರ್ದೇಶನ


    ಹೊಸದಿಲ್ಲಿ: ಕನ್ನಡ ನೆಲದ ಚಿತ್ರ ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1 ಇದೀಗ ವಿಶ್ವದ ಅತಿದೊಡ್ಡ ಸಿನಿಮಾ ಪ್ರಶಸ್ತಿಯ ವೇದಿಕೆಯಲ್ಲಿ ಗಮನ ಸೆಳೆಯುತ್ತಿದೆ. 98ನೇ ಅಕಾಡೆಮಿ ಪ್ರಶಸ್ತಿ, ಅಂದರೆ ಆಸ್ಕರ್ ರೇಸ್‌ನಲ್ಲಿ ಈ ಚಿತ್ರ ಸ್ಥಾನ ಪಡೆದಿರುವುದು ಭಾರತೀಯ, ಅದರಲ್ಲೂ ಕನ್ನಡ ಸಿನಿಮಾ ರಂಗಕ್ಕೆ ಹೊಸ ನಿರೀಕ್ಷೆ ಹುಟ್ಟಿಸಿದೆ. ಇದೇ ಪಟ್ಟಿಯಲ್ಲಿ ಅನುಪಮ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವೂ ಸೇರಿಕೊಂಡಿರುವುದು ವಿಶೇಷ.

    ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಪ್ರಕಟಿಸಿರುವ ಮಾಹಿತಿಯಂತೆ, ಈ ಬಾರಿ ಜಗತ್ತಿನ ವಿವಿಧ ದೇಶಗಳಿಂದ ಆಯ್ಕೆಯಾಗಿರುವ 201 ಫೀಚರ್ ಸಿನಿಮಾಗಳ ಪೈಕಿ ಎರಡು ಭಾರತೀಯ ಸಿನಿಮಾಗಳು ಆಸ್ಕರ್ ಪರಿಗಣನಾ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಎಲ್ಲಾ ಚಿತ್ರಗಳಿಂದ ಅಂತಿಮ ನಾಮನಿರ್ದೇಶನಗಳನ್ನು ಜನವರಿ 22ರಂದು ಅಧಿಕೃತವಾಗಿ ಘೋಷಿಸಲಾಗಲಿದೆ. ಅಲ್ಲಿಯವರೆಗೆ ಭಾರತೀಯ ಸಿನಿಪ್ರಿಯರು ಕುತೂಹಲದಿಂದ ಕಾದು ನೋಡುವಂತಾಗಿದೆ.

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1 ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಕಾಂತಾರ ಚಿತ್ರದ ಮೂಲಕ ದೇಶದಾದ್ಯಂತ ಭಾರೀ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ, ಇದೀಗ ಅದರ ಮುಂದುವರಿದ ಭಾಗದೊಂದಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ ಗಮನ ಸೆಳೆಯುತ್ತಿದೆ. ಈ ಚಿತ್ರ ಅಕಾಡೆಮಿಯ ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದು, ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಆಸ್ಕರ್ ರೇಸ್‌ಗೆ ಪ್ರವೇಶಿಸಿದೆ.

    ಇನ್ನೊಂದೆಡೆ, ಅನುಪಮ್ ಖೇರ್ ನಿರ್ದೇಶಿಸಿರುವ ‘ತನ್ವಿ ದಿ ಗ್ರೇಟ್’ ಚಿತ್ರವೂ ಈ ಸ್ಪರ್ಧೆಯಲ್ಲಿದೆ. ಆಟಿಸಂ ಹಿನ್ನೆಲೆ ಹಾಗೂ ಭಾರತೀಯ ಸೇನೆಯ ಸ್ಪೂರ್ತಿದಾಯಕ ಅಂಶಗಳನ್ನು ಒಳಗೊಂಡಿರುವ ಈ ಕಥೆ, ಯುವತಿಯೊಬ್ಬಳು ತನ್ನ ತಂದೆಯ ಸೇನಾ ಸೇವೆಯಿಂದ ಪ್ರೇರಣೆಯಾಗಿ ಅದೇ ಹಾದಿಯಲ್ಲಿ ಸಾಗಲು ಬಯಸುವ ಕಥಾವಸ್ತುವನ್ನು ಒಳಗೊಂಡಿದೆ. ಚಿತ್ರದಲ್ಲಿ ಶುಭಾಂಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಾಕಿ ಶ್ರಾಫ್, ಬೋಮನ್ ಇರಾನಿ ಮತ್ತು ಕರಣ್ ಟಕ್ಕರ್ ಸೇರಿದಂತೆ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ.

    ಇದುವರೆಗೆ ಭಾರತೀಯ ಸಿನಿಮಾಗಳಿಗೆ ಪೂರ್ಣ ಪ್ರಮಾಣದ ಆಸ್ಕರ್ ಪ್ರಶಸ್ತಿ ದೊರೆತಿಲ್ಲ. ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿದ್ದೇ ದೊಡ್ಡ ಸಾಧನೆ. ಇದೀಗ ಮತ್ತೊಮ್ಮೆ ಭಾರತೀಯ ನಿರ್ಮಾಣದ ಸಿನಿಮಾಗಳು ಹಾಲಿವುಡ್ ಸಿನಿಮಾಗಳೊಂದಿಗೆ ಒಂದೇ ವೇದಿಕೆಯಲ್ಲಿ ಸ್ಪರ್ಧಿಸುತ್ತಿರುವುದು ಭಾರತೀಯ ಚಿತ್ರರಂಗದ ಮಟ್ಟ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

    201 ಚಿತ್ರಗಳ ದೀರ್ಘಪಟ್ಟಿಯಿಂದ ಯಾವ ಸಿನಿಮಾಗಳು ಅಂತಿಮ ನಾಮನಿರ್ದೇಶನ ಪಡೆಯುತ್ತವೆ ಎಂಬುದನ್ನು ಜನವರಿ 22ರಂದು ತಿಳಿಯಲಿದೆ. ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1 ಹಾಗೂ ತನ್ವಿ ದಿ ಗ್ರೇಟ್ ಚಿತ್ರಗಳು ಆ ಹಂತ ತಲುಪುತ್ತವೆಯೇ ಎಂಬುದೇ ಈಗ ಸಿನಿಪ್ರಿಯರ ದೊಡ್ಡ ಪ್ರಶ್ನೆ. ಕನ್ನಡ ಮತ್ತು ಭಾರತೀಯ ಸಿನಿಮಾ ರಂಗದ ಪಾಲಿಗೆ ಇದು ಭವಿಷ್ಯ ನಿರ್ಧಾರ ಮಾಡುವ ಕ್ಷಣವಾಗಲಿದೆ.

  • ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಬಾಕಿ ಹಣ ಸಿಗದಿದ್ದ ಮಹಿಳೆಯರಿಗೆ ಸರ್ಕಾರದಿಂದ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಇಲಾಖೆಯ ಅನುಮತಿ ದೊರಕಿದ ತಕ್ಷಣವೇ ಈ ಎರಡು ತಿಂಗಳ ಬಾಕಿ ಹಣ ಬಿಡುಗಡೆ ಆಗಲಿದೆ ಎಂದು ಹೇಳಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ವಿಧಾನಸಭೆಯಲ್ಲೂ ಈ ವಿಷಯಕ್ಕೆ ಉತ್ತರ ನೀಡಲಾಗಿದೆ ಎಂದರು.

    ಕೆಲವು ಫಲಾನುಭವಿಗಳಿಗೆ ಹಣ ಜಮಾ ಆಗದೇ ಇರುವುದಕ್ಕೆ ಕಾರಣವನ್ನೂ ಸಚಿವೆ ವಿವರಿಸಿದರು. ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಿರುವ ಕಾರಣ ಕೆಲವರ ಹಣ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಗೃಹಲಕ್ಷ್ಮಿ ಯೋಜನೆ ಸಂಪೂರ್ಣವಾಗಿ ರೇಷನ್‌ ಕಾರ್ಡ್‌ ಆಧಾರಿತವಾಗಿರುವುದರಿಂದ, ಆಹಾರ ಇಲಾಖೆಯಿಂದ ಹೊಸ ದತ್ತಾಂಶ ಬಂದ ಬಳಿಕ ಅರ್ಹರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ತೆರಿಗೆ ಪಾವತಿದಾರರಲ್ಲದ ಅರ್ಹ ಮಹಿಳೆಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇದೇ ವೇಳೆ ಗೃಹಲಕ್ಷ್ಮಿ ಸಹಕಾರ ಸಂಘದ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವೆ, ಸಂಘದ ಸದಸ್ಯರು ತಿಂಗಳಿಗೆ 200 ರೂಪಾಯಿ ಉಳಿಸುವಂತೆ ತಿಳಿಸಿದರು. ಕನಿಷ್ಠ ಆರು ತಿಂಗಳು ಸದಸ್ಯತ್ವ ಪೂರ್ಣಗೊಂಡ ನಂತರ ಸಾಲ ಸೌಲಭ್ಯ ಪಡೆಯಲು ಅವಕಾಶ ಸಿಗಲಿದೆ. ಹೆಚ್ಚು ನಿಯಮಗಳಿಲ್ಲದೆ ನಿಜವಾದ ಅರ್ಹರನ್ನು ಗುರುತಿಸಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ಯೋಚನೆಯೂ ಸರ್ಕಾರದ ಮುಂದಿದೆ ಎಂದು ಹೇಳಿದರು.

    ಮಹಿಳೆಯರ ಸುರಕ್ಷತೆ ಮತ್ತು ಸಹಾಯಕ್ಕಾಗಿ ‘ಅಕ್ಕ ಪಡೆ’ ಎಂಬ ಹೊಸ ಯೋಜನೆಯನ್ನೂ ಸರ್ಕಾರ ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆಯ ಸಹಯೋಗದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಸಿಬ್ಬಂದಿ ನೇಮಕಾತಿ ಮಾಡಲಾಗಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬಸ್‌ ನಿಲ್ದಾಣಗಳು, ದೇವಸ್ಥಾನಗಳು, ಮಾಲ್‌ಗಳು, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಸಚಿವೆ ತಿಳಿಸಿದರು.

    ಅಕ್ಕ ಪಡೆ ಶಾಲೆ ಮತ್ತು ಕಾಲೇಜುಗಳಿಗೂ ಭೇಟಿ ನೀಡಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ದೂರು ನೀಡಲು ಹಿಂಜರಿಯುವ ಮಹಿಳೆಯರ ಗುರುತು ಸಂಪೂರ್ಣವಾಗಿ ಗೌಪ್ಯವಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ವಂಚನೆ, ಕೌಟುಂಬಿಕ ಹಿಂಸೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಅಕ್ಕ ಪಡೆಗೆ ದೂರು ನೀಡಬಹುದಾಗಿದೆ ಎಂದು ಸಚಿವೆ ಹೇಳಿದರು.

    ಒಟ್ಟಾರೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಜೊತೆಗೆ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹೊಸ ಕ್ರಮಗಳು ಜಾರಿಗೆ ಬರುತ್ತಿರುವುದು ಸರ್ಕಾರದ ಮಹತ್ವಾಕಾಂಕ್ಷಿ ನಡೆ ಎಂಬುದಾಗಿ ಸಚಿವರ ಹೇಳಿಕೆ ಸ್ಪಷ್ಟಪಡಿಸಿದೆ.

  • ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿದ್ದ ಫ್ಯಾನ್ಸ್‌ ವಾರ್‌ಗೆ ನಟ ಕಿಚ್ಚ ಸುದೀಪ್‌ ಸ್ವತಃ ತೆರೆ ಎಳೆದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದ್ದ ಮಾತಿನ ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆಯೇ ಸುದೀಪ್‌ ಮಾಡಿದ ಒಂದು ಸಾಲಿನ ಟ್ವೀಟ್‌ ಎಲ್ಲ ಗದ್ದಲಕ್ಕೂ ಬ್ರೇಕ್‌ ಹಾಕಿದೆ. ದರ್ಶನ್‌ ಬಗ್ಗೆ ಅವರು ವ್ಯಕ್ತಪಡಿಸಿದ ನಿಲುವು ಇದೀಗ ಅಭಿಮಾನಿಗಳ ನಡುವೆ ವೈರಲ್‌ ಆಗಿದೆ.

    ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಡಿಸೆಂಬರ್‌ 25ರಂದು ತೆರೆಗೆ ಬರಲಿದ್ದು, ಇದರ ಹಿನ್ನೆಲೆಯಲ್ಲಿ ನಡೆದ ಹುಬ್ಬಳ್ಳಿ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಸುದೀಪ್‌ ‘ಯುದ್ಧಕ್ಕೆ ಸಿದ್ಧ’ ಎಂಬ ಮಾತು ಹೇಳಿದ್ದರು. ಈ ಮಾತು ಪೈರಸಿ ವಿರೋಧದ ಅಭಿಯಾನಕ್ಕೆ ಸಂಬಂಧಿಸಿದದ್ದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಕೆಲವರು ಇದನ್ನು ದರ್ಶನ್‌ ವಿರುದ್ಧದ ಸಂದೇಶ ಎಂದು ಅರ್ಥ ಮಾಡಿಕೊಂಡರು. ಇದರಿಂದ ಇಬ್ಬರು ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತೀವ್ರಗೊಂಡಿತು.

    ಈ ಮಧ್ಯೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗಳನ್ನೂ ಕೆಲವರು ಪರೋಕ್ಷ ಟಾಂಗ್‌ ಎಂದುಕೊಂಡು ಚರ್ಚೆಗೆ ಎಳೆದರು. ಪರಿಣಾಮವಾಗಿ ಫ್ಯಾನ್ಸ್‌ ವಾರ್‌ ದಿನೇ ದಿನೇ ಹೆಚ್ಚುತ್ತಾ ಹೋಗಿತ್ತು. ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್‌ ಟ್ವಿಟರ್‌ನಲ್ಲಿ ‘ಆಸ್ಕ್‌ ಮಿ ಎನಿಥಿಂಗ್‌’ ಸೆಷನ್‌ ನಡೆಸಿದ್ದು, ಅಲ್ಲೇ ಎಲ್ಲ ಗೊಂದಲಕ್ಕೂ ತೆರೆ ಬಿದ್ದಂತಾಯಿತು.

    ಸೆಷನ್‌ ವೇಳೆ ಒಬ್ಬ ಅಭಿಮಾನಿ ಸುದೀಪ್‌ ಹಾಗೂ ದರ್ಶನ್‌ ಜೊತೆಗಿನ ಹಳೆಯ ಫೋಟೋವೊಂದನ್ನು ಹಂಚಿಕೊಂಡು, “ಇವರ ಬಗ್ಗೆ ಒಂದು ಮಾತು ಹೇಳಿ” ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಸುದೀಪ್‌ ಯಾವುದೇ ತಿರುಗುಬಾಣವಿಲ್ಲದೆ, ಸರಳವಾಗಿ “ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೀನಿ” ಎಂದು ಉತ್ತರಿಸಿದರು. ಈ ಒಂದು ಸಾಲಿನ ಪ್ರತಿಕ್ರಿಯೆ ಸಾಕಾಯಿತು, ಇಡೀ ವಿವಾದದ ತಾಪ ತಣ್ಣಗಾಗಲು.

    ಕಿಚ್ಚ ಸುದೀಪ್‌ ಅವರ ಈ ನಿಲುವನ್ನು ಹಲವರು ಮೆಚ್ಚಿಕೊಂಡಿದ್ದು, ಸ್ಟಾರ್‌ಗಳ ನಡುವಿನ ಗೌರವ ಹಾಗೂ ಸ್ನೇಹವೇ ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸಾಬೀತಾಗಿದೆ. ಫ್ಯಾನ್ಸ್‌ ನಡುವೆ ನಡೆಯುವ ಅನಗತ್ಯ ಸಂಘರ್ಷಕ್ಕೆ ಇಂತಹ ಹೇಳಿಕೆಗಳು ಬ್ರೇಕ್‌ ಹಾಕಬೇಕು ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.

  • ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ

    ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ

    ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಭೀಕರ ಬಸ್ ದುರಂತ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಧ್ಯರಾತ್ರಿ ವೇಳೆ ಟ್ಯಾಂಕರ್‌ ಒಂದು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡು, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸ್ಥಳದಲ್ಲಿ ಕಂಡ ದೃಶ್ಯಗಳು ಮಾನವೀಯತೆಯನ್ನು ಕಲುಷಿತಗೊಳಿಸುವಂತಿದ್ದವು.

    ಅಪಘಾತದ ತೀವ್ರತೆಯನ್ನು ಕಣ್ಣಾರೆ ಕಂಡ ಮತ್ತೊಂದು ಬಸ್‌ನ ಚಾಲಕ ಹಾಗೂ ಸಿಬ್ಬಂದಿ ಹೇಳಿಕೆಗಳು ಹೃದಯವಿದ್ರಾವಕವಾಗಿವೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನ ಡೀಸೆಲ್ ಟ್ಯಾಂಕ್ ಭಾಗದಲ್ಲಿ ಭಾರೀ ಸ್ಪಾರ್ಕ್ ಉಂಟಾಗಿ, ಬೆಂಕಿ ಕ್ಷಿಪ್ರವಾಗಿ ಬಸ್‌ನೊಳಗೆ ಹರಡಿತು. ಕೆಲವೇ ಕ್ಷಣಗಳಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಒಳಗಿದ್ದವರು ಜೀವ ಉಳಿಸಿಕೊಳ್ಳಲು ಕೂಗಾಡುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದೇ ಇದೆ ಎಂದು ಅವರು ಹೇಳಿದ್ದಾರೆ.

    ಈ ಅಪಘಾತದ ವೇಳೆ ಅದೃಷ್ಟವಶಾತ್ ಪಾರಾದ ಒಂದು ಸ್ಕೂಲ್ ಟ್ರಿಪ್ ಬಸ್ ಕೂಡಾ ಅದೇ ಮಾರ್ಗದಲ್ಲಿ ಸಾಗುತ್ತಿತ್ತು. ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದ ಸುಮಾರು 43 ಮಕ್ಕಳು ಇದ್ದ ಬಸ್, ಅಪಘಾತಗೊಂಡ ಬಸ್ ಹಿಂದೆಯೇ ಸಾಗುತ್ತಿತ್ತು. ಸೀ ಬರ್ಡ್ ಬಸ್‌ಗೆ ಟ್ಯಾಂಕರ್ ಡಿಕ್ಕಿಯಾದ ಕ್ಷಣದಲ್ಲೇ ಸ್ಕೂಲ್ ಬಸ್ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಧಾನಗೊಳಿಸಿ ಎಡಬದಿಗೆ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸ್ವಲ್ಪ ಮಟ್ಟಿಗೆ ಬಸ್‌ಗೆ ಹಾನಿಯಾದರೂ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ತಕ್ಷಣವೇ ಮಕ್ಕಳನ್ನು ಬೇರೆ ವಾಹನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕಳಿಸಲಾಗಿದೆ.

    ಅಪಘಾತದ ಬಳಿಕ ಮಾನವೀಯತೆ ಮೆರೆದ ಕೆಲವರು ಜೀವ ಉಳಿಸುವ ಪ್ರಯತ್ನಕ್ಕೆ ಧಾವಿಸಿದರು. ಕೂಗು, ಗೊಂದಲದ ನಡುವೆ ಕೆಲವರು ಬಸ್‌ಗೆ ಹತ್ತಿರ ಹೋಗಿ ಗಾಯಗೊಂಡವರನ್ನು ಹೊರಕ್ಕೆ ಎಳೆದಿದ್ದಾರೆ. ಆದರೆ ಬೆಂಕಿ ಮತ್ತಷ್ಟು ತೀವ್ರವಾಗುತ್ತಿದ್ದಂತೆ ಹತ್ತಿರ ಹೋಗುವುದೇ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಮಗುವೊಂದು ಒಳಗಿದೆ ಎಂದು ತಾಯಿ ಕೂಗುತ್ತಿದ್ದ ದೃಶ್ಯ ನೋಡಿದವರು ಇನ್ನೂ ಮೌನವಾಗಿದ್ದಾರೆ.

    ಈ ನಡುವೆ ಅಪಘಾತಗೊಂಡ ಬಸ್‌ನ ಸಹಾಯಕ ಕ್ಲೀನರ್ ಹೇಳಿಕೆಯೂ ಬೆಚ್ಚಿಬೀಳಿಸುವಂತಿದೆ. ಟ್ಯಾಂಕರ್ ಬಂದು ಬಸ್‌ನ ಮಧ್ಯಭಾಗಕ್ಕೆ ಭಾರಿಯಾಗಿ ಡಿಕ್ಕಿಯಾದ ವೇಗಕ್ಕೆ ಗ್ಲಾಸ್ ಒಡೆದು, ನಿದ್ದೆಯಲ್ಲಿದ್ದ ತಾನು ಹೊರಗೆ ಎಸೆಯಲ್ಪಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅದೇ ಕಾರಣಕ್ಕೆ ಪ್ರಾಣ ಉಳಿದಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಡೀಸೆಲ್ ಟ್ಯಾಂಕ್ ಭಾಗದಲ್ಲೇ ಡಿಕ್ಕಿಯಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

    ದುರ್ಘಟನೆಯ ಬಳಿಕ ರಾಷ್ಟ್ರದಾದ್ಯಂತ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಘಟನೆಗೆ ಕಾರಣ ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಕೂಡಾ ನೀಡಿದ್ದಾರೆ.

    ಒಟ್ಟಿನಲ್ಲಿ ಚಿತ್ರದುರ್ಗದ ಈ ದುರಂತ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಕ್ಷಣಮಾತ್ರದ ಅಜಾಗರೂಕತೆ ಹೇಗೆ ಅನೇಕ ಕುಟುಂಬಗಳ ಬದುಕನ್ನೇ ಕತ್ತಲಿಗೆ ತಳ್ಳಬಹುದು ಎಂಬುದಕ್ಕೆ ಈ ಘಟನೆ ನೋವಿನ ಸಾಕ್ಷಿಯಾಗಿದೆ.

  • 2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ:  ಗಿಲ್ ತಂಡದಿಂದ ಹೊರಗೆ!

    2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಗಿಲ್ ತಂಡದಿಂದ ಹೊರಗೆ!

    2026ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದ್ದು, ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಡಿಸೆಂಬರ್ 20ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ತಂಡವನ್ನು ಅಂತಿಮಗೊಳಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರಾಗಿರುವ ಸೂರ್ಯಕುಮಾರ್ ಅವರ ನೇತೃತ್ವದಲ್ಲಿ ಭಾರತ ಈ ಬಾರಿ ಟ್ರೋಫಿಗೆ ಗಂಭೀರ ಸವಾಲು ಹಾಕಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

    ಈ ತಂಡದಲ್ಲಿ ಯುವಕರು ಮತ್ತು ಅನುಭವಿ ಆಟಗಾರರ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರಂಭಿಕ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಇದ್ದರೆ, ಮಧ್ಯಮ ಕ್ರಮದಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿರುವುದು ಗಮನಸೆಳೆದ ನಿರ್ಧಾರವಾಗಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ದಾಳಿಗೆ ಮುನ್ನಡೆಸಲಿದ್ದು, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಆಯ್ಕೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ತಂಡಕ್ಕೆ ಹೆಚ್ಚುವರಿ ಬಲ ನೀಡಿದ್ದಾರೆ.

    ತಂಡದ ಆಯ್ಕೆ ಕುರಿತು ಸ್ಪಷ್ಟನೆ ನೀಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟಿರುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಗಿಲ್ ಇತ್ತೀಚಿನ ದಿನಗಳಲ್ಲಿ ಬೇಕಾದ ಮಟ್ಟದ ಫಾರ್ಮ್‌ನಲ್ಲಿ ಇಲ್ಲದಿರುವುದರಿಂದ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೆ ಅವಕಾಶ ನೀಡಲಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಉಪನಾಯಕನ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಕ್ಸರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನೂ ಅಗರ್ಕರ್ ಸ್ಪಷ್ಟಪಡಿಸಿದರು. ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಅವರನ್ನು ಮತ್ತೆ ತಂಡಕ್ಕೆ ಕರೆತರಲಾಗಿದ್ದು, ಅವರನ್ನು ಮೀಸಲು ಆರಂಭಿಕ ಆಟಗಾರನಾಗಿ ನೋಡಲಾಗಿದೆ. ಸಂಜು ಸ್ಯಾಮ್ಸನ್ ಪ್ರಮುಖ ವಿಕೆಟ್ ಕೀಪರ್ ಆಗಿದ್ದು, ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸುವ ಉದ್ದೇಶದಿಂದ ರಿಂಕು ಸಿಂಗ್ ಅವರನ್ನು ಫಿನಿಷರ್ ಪಾತ್ರಕ್ಕೆ ಮರಳಿ ಕರೆತರಲಾಗಿದೆ.

    ಶುಭ್ಮನ್ ಗಿಲ್ ಅವರನ್ನು ತಂಡದಿಂದ ಹೊರಗಿಟ್ಟಿರುವ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗಿಲ್ ಗುಣಮಟ್ಟದ ಬ್ಯಾಟರ್ ಆಗಿದ್ದು, ಕೆಲವು ಪಂದ್ಯಗಳಲ್ಲಿ ಲಯ ತಪ್ಪಿದ್ದರೂ ಅವರ ಸಾಮರ್ಥ್ಯದ ಮೇಲೆ ಯಾವುದೇ ಸಂಶಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ನಿರ್ಧಾರವನ್ನು ಗಿಲ್ ಸರಿಯಾದ ಮನೋಭಾವದಲ್ಲಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನೂ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ 2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟವಾದ ಸುದ್ದಿ ಗೂಗಲ್‌ನಲ್ಲಿ ಭಾರೀ ಟ್ರೆಂಡ್ ಆಗಿದೆ. team india t20 wc squad ಎಂಬ ಕೀವರ್ಡ್ ಬಳಸಿ ಅನೇಕರು ಮಾಹಿತಿ ಹುಡುಕಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹೊಸ ನಾಯಕತ್ವ, ಧೈರ್ಯವಾದ ಆಯ್ಕೆಗಳು ಮತ್ತು ಯುವ ಪ್ರತಿಭೆಗಳ ಸೇರ್ಪಡೆಯೊಂದಿಗೆ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಏನು ಸಾಧಿಸಲಿದೆ ಎಂಬುದನ್ನು ಕಾದು ನೋಡುವಂತಾಗಿದೆ.

  • ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಭೇಟಿಗೆ ನಕಾರ ಹೇಳಿದ ದರ್ಶನ್

    ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಭೇಟಿಗೆ ನಕಾರ ಹೇಳಿದ ದರ್ಶನ್

    ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಆರಂಭವಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಜೈಲಿನೊಳಗಿನ ಬೆಳವಣಿಗೆಗಳು ಮತ್ತೆ ಚರ್ಚೆಗೆ ಬಂದಿವೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಈಗ ಅಂತರ ಹೆಚ್ಚಾಗಿದೆ ಎನ್ನುವ ಸುಳಿವುಗಳು ಲಭ್ಯವಾಗುತ್ತಿವೆ.

    ಜೈಲು ಸೇರಿದ ಬಳಿಕ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಬೇಕು ಎಂಬ ಆಸೆಯನ್ನು ಪವಿತ್ರಾ ಗೌಡ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಟ್ರಯಲ್ ಆರಂಭವಾದ ಈ ಸಮಯದಲ್ಲಿ, ದರ್ಶನ್ ಜೊತೆ ನೇರವಾಗಿ ಮಾತುಕತೆ ನಡೆಸಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಯತ್ನಕ್ಕೆ ದರ್ಶನ್ ಕಡೆಯಿಂದ ಸ್ಪಷ್ಟ ನಿರಾಕರಣೆ ಎದುರಾಗುತ್ತಿದೆ. ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ತಾವು ಸಿದ್ಧರಿಲ್ಲ ಎಂಬ ನಿಲುವಿಗೆ ದರ್ಶನ್ ಅಂಟಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಪರಪ್ಪನ ಅಗ್ರಹಾರ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ, ಪವಿತ್ರಾ ಗೌಡ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ಕಾನೂನಿನ ಪ್ರಕಾರ ಏನು ಸಾಧ್ಯವೋ ನೋಡಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದರು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಪವಿತ್ರಾ ಗೌಡ ಮತ್ತೆ ಮತ್ತೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಜೈಲಿನೊಳಗಿನ ಪ್ರಕ್ರಿಯೆಗಳಲ್ಲಿ ದರ್ಶನ್ ಅವರ ಸಹಕಾರ ಸಿಗುತ್ತಿಲ್ಲ.

    ದರ್ಶನ್ ಅವರು ಪವಿತ್ರಾ ಗೌಡ ಅವರನ್ನು ನಯವಾಗಿಯೇ ಆದರೆ ದೃಢವಾಗಿ ಭೇಟಿಗೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಭೇಟಿಯಾಗಲು ಬಂದವರೊಂದಿಗೆ ಅವರು ವೈಯಕ್ತಿಕ ವಿಷಯಗಳಿಗಿಂತ ಕಾನೂನು ಹೋರಾಟ, ಪ್ರಕರಣದ ಪ್ರಗತಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. “ಈ ಪರಿಸ್ಥಿತಿಗೆ ನಾನೇ ಸಿಲುಕಿದ್ದು ಸಾಕು” ಎಂಬ ಭಾವದಲ್ಲಿ ಅವರು ಯಾವುದೇ ಹೆಚ್ಚುವರಿ ಸಂಪರ್ಕ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವಂತಿದೆ.

    ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ವೇಗ ಪಡೆದುಕೊಂಡಿದೆ. ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ ಹಾಗೂ ತಾಯಿಯ ವಿಚಾರಣೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಕ್ಷಿಗಳನ್ನು ಕೋರ್ಟ್ ಎದುರು ಹಾಜರುಪಡಿಸಲಾಗಲಿದೆ. ಇಂಥ ಸಂವೇದನಾಶೀಲ ಹಂತದಲ್ಲಿ ದರ್ಶನ್ ಜೊತೆ ಮಾತನಾಡಬೇಕೆಂಬ ಪವಿತ್ರಾ ಗೌಡ ಅವರ ಆಸೆ ಈಡೇರದೆ ಉಳಿದಿದೆ.

    ಒಮ್ಮೆ ಬಹಳ ಆಪ್ತವಾಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧ, ಈ ಕೊಲೆ ಪ್ರಕರಣದ ಬಳಿಕ ಸಂಪೂರ್ಣವಾಗಿ ಬದಲಾಗಿದೆ ಎನ್ನುವುದು ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಜೈಲು ಸೇರುವುದಕ್ಕೂ ಮುನ್ನ ಅವರಿಬ್ಬರ ನಡುವಿನ ನಿಕಟತೆಯನ್ನು ಅನೇಕ ಫೋಟೋಗಳು ಮತ್ತು ವಿಡಿಯೋಗಳು ತೋರಿಸಿದ್ದವು. ಆದರೆ ಒಂದೇ ಪ್ರಕರಣ ಇಬ್ಬರ ಬದುಕನ್ನು ಸಂಪೂರ್ಣವಾಗಿ ತಿರುಗಿಸಿ ಹಾಕಿದ್ದು, ಇಂದು ಇಬ್ಬರೂ ಜೈಲಿನೊಳಗೆ ತಮ್ಮ ತಮ್ಮ ಹೋರಾಟ ನಡೆಸುವ ಸ್ಥಿತಿಗೆ ತಲುಪಿದ್ದಾರೆ.

  • ಕ್ರಿಸ್‌ಮಸ್ ಸಂಭ್ರಮಕ್ಕೆ KSRTC ಸಿದ್ಧತೆ: ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ

    ಕ್ರಿಸ್‌ಮಸ್ ಸಂಭ್ರಮಕ್ಕೆ KSRTC ಸಿದ್ಧತೆ: ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ

    ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರಯಾಣಿಕರ ಸಂಚಾರ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೆಎಸ್‌ಆರ್‌ಟಿಸಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಬ್ಬದ ದಿನಗಳಲ್ಲಿ ಊರುಗಳಿಗೆ ಹೋಗುವವರು, ಪ್ರವಾಸಿ ತಾಣಗಳಿಗೆ ತೆರಳುವವರು ಮತ್ತು ಕುಟುಂಬ ಸಮೇತರಾಗಿ ಪ್ರಯಾಣಿಸುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುವುದರಿಂದ, ಈ ಬಾರಿ ಸಾವಿರಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ. ಈ ಸೇವೆಗಳು ಡಿಸೆಂಬರ್ 19ರಿಂದ ಆರಂಭವಾಗಿ ಡಿಸೆಂಬರ್ 28ರವರೆಗೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

    ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರ ಬೇಡಿಕೆಯನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡಿರುವ ನಿಗಮ, ಡಿಸೆಂಬರ್ 19, 20 ಹಾಗೂ 24ರಂದು ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಈ ದಿನಗಳಲ್ಲಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಂತಹ ಧಾರ್ಮಿಕ ಕ್ಷೇತ್ರಗಳು, ಮಂಗಳೂರು, ಉಡುಪಿ, ಮಡಿಕೇರಿ, ಶಿವಮೊಗ್ಗದಂತಹ ಕರಾವಳಿ ಮತ್ತು ಮಲೆನಾಡು ಭಾಗಗಳು, ಜೊತೆಗೆ ಮೈಸೂರು, ಹಾಸನದಂತಹ ಮಧ್ಯ ಕರ್ನಾಟಕ ನಗರಗಳಿಗೆ ಹೆಚ್ಚುವರಿ ಸಂಚಾರ ಇರಲಿದೆ. ಇದರ ಜೊತೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಕಲಬುರಗಿ, ರಾಯಚೂರು, ಬೀದರ್ ಮುಂತಾದ ನಗರಗಳಿಗೂ ವಿಶೇಷ ಬಸ್‌ಗಳು ಓಡಲಿವೆ.

    ಹಬ್ಬ ಮುಗಿದ ಬಳಿಕ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಡಿಸೆಂಬರ್ 26 ಹಾಗೂ 28ರಂದು ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮರಳಿ ಪ್ರಯಾಣಿಸುವ ವೇಳೆ ಉಂಟಾಗುವ ದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಕೆಎಸ್‌ಆರ್‌ಟಿಸಿಯದು.

    ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ಅನುಕೂಲವೆಂದರೆ, ಈ ವಿಶೇಷ ಬಸ್‌ಗಳಿಗೆ ಯಾವುದೇ ಹೆಚ್ಚುವರಿ ಹಬ್ಬದ ದರ ವಿಧಿಸಲಾಗುವುದಿಲ್ಲ. ಸಾಮಾನ್ಯ ದಿನಗಳಲ್ಲಿರುವ ಟಿಕೆಟ್ ದರಗಳೇ ಅನ್ವಯವಾಗಲಿದ್ದು, ಪ್ರಯಾಣಿಕರು ಹೆಚ್ಚಿನ ವೆಚ್ಚದ ಭಾರವಿಲ್ಲದೆ ಪ್ರಯಾಣಿಸಬಹುದು. ಬೇಡಿಕೆ ಇನ್ನಷ್ಟು ಹೆಚ್ಚಾದಲ್ಲಿ, ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವ ವ್ಯವಸ್ಥೆಯನ್ನೂ ನಿಗಮ ಮಾಡಿಕೊಂಡಿದೆ.

    ಒಟ್ಟಾರೆ, ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಪ್ರಯಾಣ ಸುಗಮವಾಗಲು, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕೆಎಸ್‌ಆರ್‌ಟಿಸಿ ಸಮಗ್ರ ಯೋಜನೆ ರೂಪಿಸಿಕೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಸಾರಿಗೆ ವ್ಯವಸ್ಥೆಯೂ ಕೈಜೋಡಿಸಿರುವಂತಾಗಿದೆ.