Author: Satyakam NewsDesk

  • ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಪರ್ಥ್‌ನ ವಾಕಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮಳೆಯ ಅಡಚಣೆಯಿಂದ 26 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ಕೇವಲ 136 ರನ್‌ಗಳಿಗೆಯೇ ಸಿಮಿತವಾಯಿತು.

    ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು, ವೇಗ ಮತ್ತು ಬೌನ್ಸ್‌ನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಂಕಷ್ಟ ಅನುಭವಿಸಿದರು. ನಾಯಕ ಶುಭಮನ್ ಗಿಲ್ (12), ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0), ಹಾಗೂ ಶ್ರೇಯಸ್ ಅಯ್ಯರ್ (6) ಇವರೆಲ್ಲರೂ ಕೂಡ ಮೈದಾನಕ್ಕೆ ಇಳಿದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ (32) ಮತ್ತು ಅಕ್ಷರ್ ಪಟೇಲ್ (28) ಇವರು ಮಾತ್ರ ಸ್ವಲ್ಪ ಹೋರಾಟ ನೀಡಿದರೂ ತಂಡ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು.

    ಆಸ್ಟ್ರೇಲಿಯಾ ಪರ ವೇಗದ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್ ಮತ್ತು ಅಬ್ಬಾಟ್ ತೀವ್ರ ಆಕ್ರಮಣ ನಡೆಸಿದರು.

    ಭಾರತ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 21.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ಟ್ರಾವಿಸ್ ಹೆಡ್ (8) ಮತ್ತು ಮ್ಯಾಥ್ಯೂ ಶಾರ್ಟ್ (10) ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರೂ ನಾಯಕ ಮಿಚೆಲ್ ಮಾರ್ಶ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡವನ್ನು ತಲುಪಿಸಿದರು. ಅವರು 51 ಎಸೆತಗಳಲ್ಲಿ 46 ಅಜೇಯ ರನ್‌ಗಳನ್ನು ಬಾರಿಸಿದರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಟ್ ರೆನ್ಶಾ (21) ರನ್ ಗಳಿಸಿ ಗೆಲವು ಸುಲಭಗೊಳಿಸಿದರು.

    ಭಾರತ ಪರ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕದ ಮೊದಲ ಏಕದಿನದಲ್ಲಿ ಭಾರತಕ್ಕೆ ಈ ಸೋಲು ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಅಗ್ರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮಳೆ ಅಡಚಣೆ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

  • 53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ರಾಜಕಾರಣಿ ಹಾಗೂ ಸಂವೇದನಾಶೀಲ ಕಲಾವಿದರಾದ ಅನಂತ್ ನಾಗ್ ಅವರಿಗೆ ಈ ವರ್ಷ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕನ್ನಡಿಗರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ. ಸುಮಾರು ಐದು ದಶಕಗಳಷ್ಟು ದೀರ್ಘ ಮತ್ತು ವೈವಿಧ್ಯಮಯ ಕಲಾಜೀವನದಲ್ಲಿ ಅನಂತ್ ನಾಗ್ ಅವರು ನಟನೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಮಾಡಿದವರು. ಶಿಸ್ತಿನ ಅಭಿನಯ, ಸಾಂಸ್ಕೃತಿಕ ನಂಟು ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಚಲನಚಿತ್ರ ರಂಗದಲ್ಲಷ್ಟೇ ಅಲ್ಲ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿಯೂ ವಿಶಿಷ್ಟ ಗುರುತು ಮೂಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ, ಪದ್ಮ ಪ್ರಶಸ್ತಿ ಪಡೆದ ನಟರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಅನಂತ್ ನಾಗ್ ಮಾತನಾಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಇದು ನನ್ನ ಪ್ರಶಸ್ತಿ ಅಲ್ಲ, ಕನ್ನಡ ಚಿತ್ರರಂಗದ್ದು ಎಂದು ಅವರು ವಿನಯದಿಂದ ಹೇಳಿದ್ದಾರೆ.

    ಜಗ್ಗೇಶ್ ಮಾತು ನೆನಪಿಸಿಕೊಂಡ ಅನಂತ್ ನಾಗ್:

    ಇದೇ ಸಂದರ್ಭದಲ್ಲಿ ಅನಂತ್ ನಾಗ್, ಹಿರಿಯ ನಟ ಮತ್ತು ಸಂಸದ ಜಗ್ಗೇಶ್ ಅವರ ಮಾತುಗಳನ್ನು ನೆನಪಿಸಿಕೊಂಡು, ಅರ್ಹರಿಗೆ ಪ್ರಶಸ್ತಿ ಕೊಡಬೇಕು ಅಂತ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಅವ್ರು ಎಂದು ಅವರು ಹೇಳಿದ್ದನ್ನು ಸ್ಮರಿಸಿದರು. ಈ ಪ್ರಶಸ್ತಿಯ ಹಿಂದಿನ ಉದ್ದೇಶವೇ ಕನ್ನಡ ಚಿತ್ರರಂಗದ ಸೇವೆಗೆ ಸಿಕ್ಕ ಗೌರವವೆಂದು ಅವರು ತಿಳಿಸಿದ್ದಾರೆ.

    ರಾಜಕೀಯ ನೆನಪು ಹಂಚಿಕೊಂಡ ಅನಂತ್ ನಾಗ್: 

    ತಮ್ಮ ರಾಜಕೀಯ ಹಾದಿಯನ್ನು ಸ್ಮರಿಸಿದ ಅವರು, ನಾನು ಮೊದಲ ಸಲ ಅಸೆಂಬ್ಲಿಗೆ ಹೋದಾಗ ಮಂತ್ರಿಯಾಗಿದ್ದೆ. ಆಗ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ‘ಇಷ್ಟು ಸ್ಮಾರ್ಟ್ ವ್ಯಕ್ತಿ ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ?’ ಅನ್ನಿಸಿತು. ಆಗಿನಿಂದಲೂ ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಅನ್ನಿಸಿತು” ಎಂದು ನಗುತ್ತಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

    53 ವರ್ಷಗಳ ಸಿನಿ ಜರ್ನಿಯ ಮೆಲುಕು: 

    ತಮ್ಮ 53 ವರ್ಷಗಳ ಸಿನಿಮಾ ಬದುಕಿನ ಬಗ್ಗೆ ಮಾತನಾಡಿದ ಅವರು, ನಿರ್ದೇಶಕರು, ನಿರ್ಮಾಪಕರು, ಸಾಹಿತ್ಯಕಾರರು ಮತ್ತು ಸಂಭಾಷಣೆ ಬರಹಗಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ನಾನು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ. ಎಕ್ಸೆಪ್ಶನ್ ಕೊಟ್ಟಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನೂ ಮಾಡಿಲ್ಲ. ಆದರೆ ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಅದನ್ನೇ ಅವರು ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

    ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆಯುತ್ತಿರುವ ಪವಿತ್ರ ಕೆಲಸ ಇದು. ನಾನು 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದೆ. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್‌ ಅವರಿಗೆ ಸನ್ಮಾನ ಎಂದಿದ್ದಕ್ಕಾಗಿ ಮಾತ್ರ ನಾನು ಇಲ್ಲಿ ಬಂದಿದ್ದೇನೆ ಎಂದರು. ಇನ್ನು, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದ್ದರೆ ಭಗವಂತ ಇದ್ದಾನೆ. ನೀವು ಬಣ್ಣ ಹಾಕಿಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕದೆ ನಾಟಕ ಮಾಡ್ತಿದ್ದೀವಿ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನನ್ನೇ ಟೇಕ್‌ಓವರ್ ಮಾಡಿದೆ ಎಂದು ಶ್ಲಾಘಿಸಿದರು.

    ಅನಂತ್ ನಾಗ್ ಅವರಿಗೆ ದೊರೆತಿರುವ ಪದ್ಮಭೂಷಣ ಪ್ರಶಸ್ತಿ, ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ಕನ್ನಡ ಚಿತ್ರರಂಗದ ಪರಂಪರೆ, ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ರಾಷ್ಟ್ರ ಮಟ್ಟದ ಮಾನ್ಯತೆ.

  • Railway Recruitment 2025: ಪರೀಕ್ಷೆಯಿಲ್ಲದೆ ನೇರ ಆಯ್ಕೆ ಉದ್ಯೋಗ ಪಡೆಯಲು ಸುವರ್ಣಾವಕಾಶ.! 

    Railway Recruitment 2025: ಪರೀಕ್ಷೆಯಿಲ್ಲದೆ ನೇರ ಆಯ್ಕೆ ಉದ್ಯೋಗ ಪಡೆಯಲು ಸುವರ್ಣಾವಕಾಶ.! 

    ಭಾರತೀಯ ರೈಲ್ವೆ ಯಾವಾಗಲೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸಿನ ಉದ್ಯೋಗ ಕೇಂದ್ರವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಸ್ಥಿರತೆ, ಆಕರ್ಷಕ ಸೌಲಭ್ಯಗಳು ಹಾಗೂ ದೇಶದಾದ್ಯಂತ ಕೆಲಸ ಮಾಡುವ ಅವಕಾಶಗಳಿರುವುದರಿಂದ ರೈಲ್ವೆ ಇಲಾಖೆಯ ನೇಮಕಾತಿ ಪ್ರಕಟಣೆಗಳು ಸದಾ ಜನರ ಗಮನ ಸೆಳೆಯುತ್ತವೆ. ಈಗ ಇದೇ ರೀತಿಯ ಒಂದು ಸುವರ್ಣಾವಕಾಶವನ್ನು ಈಶಾನ್ಯ ರೈಲ್ವೆ (North Eastern Railway – NER) ಪ್ರಕಟಿಸಿದೆ.

    ದೇಶದಾದ್ಯಂತ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 1104 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಗೊಂಡಿದೆ. ವಿಶೇಷವೆಂದರೆ, ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಗಳ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
    ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 2025ರ ನವೆಂಬರ್ 15ರ ಒಳಗಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸರ್ಕಾರೀ ನೌಕರಿಯಾಗಲು ಬಯಸುವ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

    ಹುದ್ದೆಗಳ ವಿಭಾಗವಾರು ವಿವರ ಹೀಗಿದೆ:
    ಮೆಕ್ಯಾನಿಕಲ್ ವರ್ಕ್‌ಶಾಪ್ – 390 ಹುದ್ದೆಗಳು
    ಸಿಗ್ನಲ್ ವರ್ಕ್‌ಶಾಪ್ – 63 ಹುದ್ದೆಗಳು
    ಬಿಡ್ಡಿ ವರ್ಕ್‌ಶಾಪ್ – 35 ಹುದ್ದೆಗಳು
    ಮೆಕ್ಯಾನಿಕಲ್ ವರ್ಕ್‌ಶಾಪ್ (ಇತರೆ) – 142 ಹುದ್ದೆಗಳು
    ಡೀಸೆಲ್ ಶೆಡ್ – 60 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ – 64 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ / ಲಕ್ಷ್ಮೀ – 149 ಹುದ್ದೆಗಳು
    ಡೀಸೆಲ್ ಶೆಡ್ / ಗೊಂಡಾ – 88 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ ವಾರಣಾಸಿ – 73 ಹುದ್ದೆಗಳು
    ವಾರಣಾಸಿಯ TRD ವಿಭಾಗ – 40 ಹುದ್ದೆಗಳು

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತಾ ಮಾನದಂಡಗಳು ಹೀಗಿವೆ:
    ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ 10ನೇ ತರಗತಿ ಮತ್ತು ಐಟಿಐ (ITI) ಉತ್ತೀರ್ಣರಾಗಿರಬೇಕು.
    ವಯೋಮಿತಿ: 2025ರ ಅಕ್ಟೋಬರ್ 16ರಂತೆ ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷಗಳೊಳಗಾಗಿ ಇರಬೇಕು.
    ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷಗಳ ಸಡಿಲಿಕೆ
    ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷಗಳ ಸಡಿಲಿಕೆ
    ಪಿಎಚ್ ಅಭ್ಯರ್ಥಿಗಳಿಗೆ – 10 ವರ್ಷಗಳ ಸಡಿಲಿಕೆ

    ಅರ್ಜಿ ಶುಲ್ಕದ ವಿವರ ಹೀಗಿದೆ:
    ಸಾಮಾನ್ಯ ಅಭ್ಯರ್ಥಿಗಳು – ₹100
    ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ ಯಾವ ರೀತಿಯಿರುತ್ತದೆ: 
    ಈ ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ರೈಲ್ವೆಯ ನಿಯಮಾವಳಿಯಂತೆ ಸ್ಟೈಪೆಂಡ್ (ಪ್ರಶಿಕ್ಷಣ ವೇತನ) ನೀಡಲಾಗುತ್ತದೆ.

    ಮುಖ್ಯ ದಿನಾಂಕ:  ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 15 ನವೆಂಬರ್ 2025 ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಅಧಿಕೃತ ವೆಬ್‌ಸೈಟ್ ಮೂಲಕ ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸಿ, ಯಾವುದೇ ಪರೀಕ್ಷೆ ಇಲ್ಲದೆ ಸರ್ಕಾರೀ ಉದ್ಯೋಗದತ್ತ ಮೊದಲ ಹೆಜ್ಜೆ ಇಡಿ.

  • ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭ | ತಿದ್ದುಪಡಿ ದಿನಾಂಕ ವಿಸ್ತರಣೆ – ಬೇಗ ಅರ್ಜಿ ಸಲ್ಲಿಸಿ

    ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭ | ತಿದ್ದುಪಡಿ ದಿನಾಂಕ ವಿಸ್ತರಣೆ – ಬೇಗ ಅರ್ಜಿ ಸಲ್ಲಿಸಿ

    ಕರ್ನಾಟಕ ಸರ್ಕಾರದ ಆಹಾರ ಭದ್ರತಾ ಯೋಜನೆಯಡಿ ರೇಷನ್ ಕಾರ್ಡ್ ಬಡ ಕುಟುಂಬಗಳಿಗೆ ಅತ್ಯಂತ ಅಗತ್ಯವಾದಂತಹ ಸೌಲಭ್ಯವಾಗಿದೆ. ಸರ್ಕಾರದ ಸಬ್ಸಿಡಿ ಯೋಜನೆಯಡಿ ಅಕ್ಕಿ, ಗೋಧಿ, ಕೆರೋಸಿನ್ ಮೊದಲಾದ ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ಕಳೆದ ಕೆಲವು ವರ್ಷಗಳಿಂದ ಹೊಸ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಿದ್ದರೂ, ಈಗ ಸರ್ಕಾರ ಮತ್ತೆ ಪ್ರಕ್ರಿಯೆ ಆರಂಭಿಸಿದೆ.

    ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೋಲಾರದಲ್ಲಿ ಘೋಷಿಸಿದಂತೆಯೇ, ನವೆಂಬರ್ 2025ರಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್‌ಗಳ ವಿತರಣೆ ಪ್ರಾರಂಭವಾಗಲಿದೆ. ಕಳೆದ ಎರಡು ವರ್ಷಗಳಿಂದ ಸುಳ್ಳು ದಾಖಲೆಗಳ ಆಧಾರದ ಮೇಲೆ ಪಡೆದ ಕಾರ್ಡ್‌ಗಳನ್ನು ಗುರುತಿಸಿ ರದ್ದುಗೊಳಿಸುವ ಪರಿಶೀಲನೆ ನಡೆಯುತ್ತಿತ್ತು. ಈಗ ಆ ಕೆಲಸ ಪೂರ್ಣಗೊಳ್ಳುತ್ತಿರುವುದರಿಂದ ನಿಜವಾದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳು ಲಭ್ಯವಾಗಲಿವೆ ಎನ್ನಬಹುದು.

    ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಅಕ್ಟೋಬರ್ 4ರಿಂದ ಅಕ್ಟೋಬರ್ 31, 2025ರವರೆಗೆ ನಡೆಯಲಿದೆ. ಅರ್ಜಿಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಎರಡೂ ರೀತಿಯಲ್ಲಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಫಾರ್ಮ್ ತುಂಬಿ ದಾಖಲೆಗಳೊಂದಿಗೆ ಸಲ್ಲಿಸಬಹುದು. ಆನ್‌ಲೈನ್ ವಿಧಾನವನ್ನು ಆಯ್ಕೆ ಮಾಡುವವರು ಆಹಾರ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಈ ಶ್ರಮ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಾರ್ಚ್ 31, 2026ರವರೆಗೆ ಆದ್ಯತೆಯ BPL ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಹೆಸರು, ವಿಳಾಸ ಅಥವಾ ಸದಸ್ಯರ ತಿದ್ದುಪಡಿ ಮಾಡಲು ಇದೇ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.

    ಅರ್ಜಿಗೆ ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಜನನ ಪ್ರಮಾಣ ಪತ್ರ (ಮಕ್ಕಳಿಗೆ), ಮತ್ತು ಹಳೆಯ ರೇಷನ್ ಕಾರ್ಡ್ ಪ್ರತಿ (ತಿದ್ದುಪಡಿ ಅರ್ಜಿಗೆ) ನೀಡಬೇಕು.

    ರೇಷನ್ ಕಾರ್ಡ್‌ನಿಂದ ಸಬ್ಸಿಡಿ ದರದಲ್ಲಿ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳು ದೊರೆಯುವುದರಿಂದ ಆರ್ಥಿಕ ಉಳಿತಾಯ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರದ ಪಾರದರ್ಶಕ ಪರಿಶೀಲನೆಯಿಂದ ನಿಜವಾದ ಫಲಾನುಭವಿಗಳಿಗೆ ಲಾಭ ತಲುಪಲಿದೆ.

    ಅರ್ಜಿಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31, 2025. ತಿದ್ದುಪಡಿಗೆ ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್ ನಂಬರ್: 1800-425-0093 ಅಥವಾ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

  • ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಇಂದಿನ ಯುವಕರು ಹೆಚ್ಚಿನ ಆದಾಯಕ್ಕಾಗಿ ದೊಡ್ಡ ನಗರಗಳಿಗೆ ಹಾರಿಹೋಗುತ್ತಿದ್ದಾರೆ. ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ನಗರಗಳಲ್ಲಿ ಲಕ್ಷಗಟ್ಟಲೆ ಸಂಬಳದ ಆಸೆಯಿಂದ ಜನರು ತಮ್ಮ ಊರನ್ನೇ ಬಿಟ್ಟು ಹೊಸ ಜೀವನ ಆರಂಭಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಕುಳಿತು ಸರಿಯಾದ ಯೋಜನೆಯೊಂದಿಗೆ ವ್ಯವಹಾರ ಪ್ರಾರಂಭಿಸಿದರೆ, ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಹಾಗಾದರೆ, ಮನೆಮಂದಿ ಸುಲಭವಾಗಿ ಪ್ರಾರಂಭಿಸಬಹುದಾದ ಐದು ಲಾಭದಾಯಕ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಈ ವ್ಯವಹಾರಗಳ ಮೂಲಕ ನೀವು ಊರಿನಲ್ಲೇ ಇದ್ದುಕೊಂಡು ಹಣ ಸಂಪಾದನೆ ಮಾಡಬಹುದು.

    1. ಸಾವಯವ ತರಕಾರಿ ಕೃಷಿ:

    ಜನರು ರಾಸಾಯನಿಕ ಮುಕ್ತ, ಆರೋಗ್ಯಕರ ತರಕಾರಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಟೊಮೇಟೋ, ಬೀನ್ಸ್, ಬೆಳ್ಳುಳ್ಳಿ, ಕ್ಯಾರೆಟ್ ಮುಂತಾದ ನೈಸರ್ಗಿಕ ತರಕಾರಿಗಳನ್ನು ಮನೆಯ ಹತ್ತಿರ ಜಮೀನಿನಲ್ಲಿ ಬೆಳಸಿ, ಹತ್ತಿರದ ನಗರ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಕಡಿಮೆ ವೆಚ್ಚ, ಉತ್ತಮ ಲಾಭ ಮತ್ತು ಆರೋಗ್ಯಕ್ಕೂ ಉಪಯುಕ್ತವಾದ ವ್ಯವಹಾರ ಇದಾಗಿದೆ.

    ಸಲಹೆ:
    ಹವಾಮಾನ ಮತ್ತು ಮಣ್ಣಿನ ಗುಣಮಟ್ಟಕ್ಕೆ ತಕ್ಕ ತರಕಾರಿಗಳನ್ನು ಆಯ್ಕೆಮಾಡಿ.
    ತಾಜಾ ಉತ್ಪನ್ನ ಮಾರಾಟ ಮಾಡುವುದರಿಂದ ಗ್ರಾಹಕರ ನಂಬಿಕೆ ಹೆಚ್ಚುತ್ತದೆ.

    2. ಡೈರಿ ವ್ಯವಹಾರ:

    ಸ್ವಲ್ಪ ಜಮೀನಿದ್ದರೆ ಹಸು ಅಥವಾ ಎಮ್ಮೆ ಸಾಕಿ ಹಾಲಿನ ಉತ್ಪನ್ನಗಳ ವ್ಯವಹಾರ ಆರಂಭಿಸಬಹುದು. ಪ್ರಾರಂಭದಲ್ಲಿ 2–3 ಹಸುಗಳನ್ನು ಸಾಕಿ ಹಾಲು, ಮೊಸರು, ತುಪ್ಪ ಮತ್ತು ಪನ್ನೀರ್ ತಯಾರಿಸಿ ಮಾರಾಟ ಮಾಡಬಹುದು. ನಂತರ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಬಹುದು. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ.

    ಸಲಹೆ:
    ಹಾಲಿನ ಗುಣಮಟ್ಟವನ್ನು ಕಾಪಾಡಿ.
    ಸ್ಥಳೀಯ ಹೋಟೆಲ್‌ಗಳು, ಕ್ಯಾಂಟೀನು, ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಿ.

    3. ಹೂವಿನ ಕೃಷಿ:

    ಹಬ್ಬ, ಮದುವೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಹೂ ಯಾವಾಗಲೂ ಅತ್ಯಗತ್ಯ. ಮನೆಯ ಹತ್ತಿರ ಚೆಂಡು ಹೂ, ಗುಲಾಬಿ, ಮಲ್ಲಿಗೆ ಮುಂತಾದ ಹೂಗಳನ್ನು ಕಡಿಮೆ ಹೂಡಿಕೆಯಲ್ಲಿ ಬೆಳಸಿ ಮಾರಾಟ ಮಾಡಬಹುದು. ಒಂದು ಎಕರೆ ಭೂಮಿಯಲ್ಲಿ ಪ್ರತಿ ಸೀಸನ್ 50,000 ರೂ.ರಿಂದ 1 ಲಕ್ಷ ರೂ.ವರೆಗೆ ಲಾಭ ಸಾಧ್ಯ.

    ಸಲಹೆ:
    ಹೂ ಬೆಳೆಯುವ ಮೊದಲು ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿ.
    ಹೂ ಪ್ಯಾಕೇಜಿಂಗ್ ಆಕರ್ಷಕವಾಗಿರಲಿ, ಹಬ್ಬಗಳ ಸಮಯದಲ್ಲಿ ಹೆಚ್ಚು ಮಾರಾಟ ಸಾಧ್ಯ.

    4. ಕೋಳಿ ಸಾಕಾಣಿಕೆ:

    ಕೋಳಿ ಸಾಕಾಣಿಕೆ ಕಡಿಮೆ ಹೂಡಿಕೆಯಲ್ಲಿಯೇ ಪ್ರಾರಂಭಿಸಬಹುದಾದ ಅತ್ಯುತ್ತಮ ವ್ಯವಹಾರವಾಗಿದೆ. 20–25 ಕೋಳಿಗಳಿಂದ ಆರಂಭಿಸಿ, ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಸರಿಯಾದ ನಿರ್ವಹಣೆಯಿಂದ ಪ್ರತಿ ತಿಂಗಳು ಕನಿಷ್ಠ 20,000 ರೂ.ವರೆಗೆ ಸಂಪಾದನೆ ಸಾಧ್ಯ. ಸರ್ಕಾರದಿಂದ ಕೆಲ ಸಾಲಗಳು ಮತ್ತು ಸಬ್ಸಿಡಿ ಯೋಜನೆಗಳೂ ಇದಕ್ಕೆ ಸಹಾಯ ಮಾಡುತ್ತವೆ.

    ಸಲಹೆ:
    ಕೊಳಿಗಳ ಆರೋಗ್ಯ, ಆಹಾರ ಮತ್ತು ಸ್ವಚ್ಛತೆಯನ್ನು ಗಮನಿಸಿ.
    ಸ್ಥಳೀಯ ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ ನೇರವಾಗಿ ಮಾರಾಟ ವ್ಯವಸ್ಥೆ ಮಾಡಿ.

    5. ಜೇನುತುಪ್ಪ ಉತ್ಪಾದನೆ:

    ಗ್ರಾಮೀಣ ಪ್ರದೇಶಗಳಲ್ಲಿ ಜೇನುತುಪ್ಪದ ವ್ಯವಹಾರ ಬಹಳ ಲಾಭದಾಯಕ. ಮನೆಯಲ್ಲೇ ಕೆಲವು ಜೇನು ಪೆಟ್ಟಿಗೆಯಿಂದ ಪ್ರಾರಂಭಿಸಿ ನೈಸರ್ಗಿಕ ಜೇನು ಉತ್ಪಾದಿಸಬಹುದು. ನಗರಗಳಲ್ಲಿ ನೈಸರ್ಗಿಕ ಜೇನುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ, ಸರಿಯಾದ ಮಾರಾಟ ಯೋಜನೆಯೊಂದಿಗೆ ಉತ್ತಮ ಆದಾಯ ಪಡೆಯಬಹುದು.

    ಸಲಹೆ:
    ಪ್ರಾಥಮಿಕ ತರಬೇತಿ ಪಡೆದು, ಜೇನು ಪೆಟ್ಟಿಗೆ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.

    ಈ ಐದು ವ್ಯವಹಾರಗಳು ಮನೆಮಂದಿ ಸೇರಿ, ಕಡಿಮೆ ಹೂಡಿಕೆ ಮತ್ತು ಹೆಚ್ಚಿನ ಲಾಭದಾಯಕತೆಯೊಂದಿಗೆ ಪ್ರಾರಂಭಿಸಬಹುದಾದ ಉತ್ತಮ ಆಯ್ಕೆಗಳು ಇವಾಗಿವೆ. ಈ ವ್ಯವಹಾರಗಳನ್ನು ಶುರುಮಾಡಲು ಬಹಳ ಮುಖ್ಯವಾಗಿ ಪರಿಶ್ರಮ, ಗುಣಮಟ್ಟ, ಹಾಗೂ ಸರಿಯಾದ ಮಾರ್ಕೆಟಿಂಗ್ ವ್ಯವಸ್ಥೆ ಮುಖ್ಯ.

  • ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನಸಂಖ್ಯೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಅರಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಅಂತಿಮ ಹಂತ ತಲುಪಿದೆ. ಈ ಸಮೀಕ್ಷೆಯು ಕೇವಲ ಅಂಕಿ-ಅಂಶಗಳ ಸಂಗ್ರಹಣೆಯಷ್ಟೇ ಅಲ್ಲ, ಮುಂದಿನ ದಶಕಗಳಲ್ಲಿ ರಾಜ್ಯದ ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳ ರೂಪರೇಖೆ ನಿರ್ಧರಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಸಮಗ್ರ ಮಾಹಿತಿಯ ಆಧಾರದ ಮೇಲೆ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ನೀಡಲು ಈ ಸಮೀಕ್ಷೆಯು ಪೂರಕವಾಗಲಿದೆ.

    ಸಮೀಕ್ಷೆಯ ವೇಳೆ ಕೆಲ ಮನೆಗಳು ಬಿಟ್ಟುಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ನಿಮ್ಮ ಮನೆಗೆ ಸಮೀಕ್ಷಾಧಿಕಾರಿಗಳು ಭೇಟಿ ನೀಡದಿದ್ದರೆ ತಕ್ಷಣವೇ 8050770004 ಗೆ ಕರೆ ಮಾಡಿ, ನಿಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸರ್ಕಾರ ನಾಗರಿಕರನ್ನು ವಿನಂತಿಸಿದೆ. ನಾಗರಿಕರ ಸಹಕಾರದಿಂದ ಮಾತ್ರ ಈ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

    ಸಮೀಕ್ಷಾ ಅವಧಿ ವಿಸ್ತರಣೆ ಯಾಕೆ?:

    ಸಮೀಕ್ಷಾ ಕಾರ್ಯ ಆರಂಭವಾದ ನಂತರ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳು ಎದುರಾಗಿದ್ದವು. ವಿವರಗಳನ್ನು ನೇರವಾಗಿ ಮೊಬೈಲ್ ಆಪ್‌ಗಳ ಮೂಲಕ ದಾಖಲಿಸುವ ವ್ಯವಸ್ಥೆ ಇರಲಿದ್ದು, ಕೆಲವೆಡೆ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಾದ ಕಾರಣ ಪ್ರಾರಂಭಿಕ ಹಂತ ನಿಧಾನಗತಿಯಲ್ಲಿ ನಡೆಯಿತು.

    ಅದೇ ರೀತಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಬಾರಿ ಶಿಕ್ಷಕರ ಬದಲು ಸರ್ಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ದೀಪಾವಳಿ ರಜಾ ಅವಧಿಯಲ್ಲಿ ಅವರು ಲಭ್ಯರಾಗದ ಕಾರಣದಿಂದ ಸಮೀಕ್ಷಾ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹೆಚ್ಚು ಕುಟುಂಬಗಳನ್ನು ಒಳಗೊಂಡಂತೆ ಸಮೀಕ್ಷೆಯನ್ನು ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಸಲಾಗುತ್ತಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಗಳು ಇವೆ.

    ಆತುರದಲ್ಲಿ ಸಮೀಕ್ಷೆ ನಡೆಯುತ್ತಿದೆಯೇ? ಸರ್ಕಾರದ ಸ್ಪಷ್ಟನೆ:

    ಸಮೀಕ್ಷೆ ಕಾರ್ಯವನ್ನು ವೇಗಗೊಳಿಸಲು ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಆರಂಭಿಕ ಹಂತದಲ್ಲಿ 3–4 ವಿಭಿನ್ನ ಆಪ್‌ಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲಾಯಿತು. ಅವುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೆಲವು ದಿನಗಳು ಬೇಕಾದ್ದರಿಂದ ಪ್ರಾರಂಭದಲ್ಲಿ ವಿಳಂಬ ಉಂಟಾಯಿತು.

    ಇದಲ್ಲದೆ, ಶಿಕ್ಷಕರಿಗೆ ಸಮೀಕ್ಷೆಯ ಜವಾಬ್ದಾರಿಯನ್ನು ನೀಡಿದಾಗ, ಅವರಿಗೆ ಮೊದಲಿನಿಂದಲೇ ಅಗತ್ಯ ತರಬೇತಿ ಮತ್ತು ಉತ್ಸಾಹದ ಕೊರತೆ ಇತ್ತು. ನಂತರ ಸರ್ಕಾರವು ಅವರಿಗೆ ತರಬೇತಿ ನೀಡಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿತು. ಇದೇ ವೇಳೆ, ಕೆಲವು ಮಾಧ್ಯಮಗಳಲ್ಲಿ ಸಮೀಕ್ಷೆ ನಡೆಯುತ್ತಿಲ್ಲ ಎಂಬ ತಪ್ಪು ಮಾಹಿತಿಗಳು ಹರಡಿದ್ದರಿಂದ ಪ್ರಾರಂಭಿಕ ಹಂತದಲ್ಲಿ ಗೊಂದಲ ಉಂಟಾಯಿತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ನಿಮ್ಮ ಸಹಕಾರವೇ ಸಮೀಕ್ಷೆಯ ಯಶಸ್ಸು:

    ಈ ಸಮೀಕ್ಷೆ ಕೇವಲ ಒಂದು ಸರ್ಕಾರಿ ಪ್ರಕ್ರಿಯೆಯಲ್ಲ, ಅದು ಭವಿಷ್ಯದ ಪೀಳಿಗೆಯ ಶಿಕ್ಷಣ, ಉದ್ಯೋಗ ಹಾಗೂ ಕಲ್ಯಾಣದ ದಿಕ್ಕನ್ನು ನಿಗದಿಪಡಿಸುವ ಪ್ರಮುಖ ಹಂತ. ನಿಮ್ಮ ಮನೆಯಲ್ಲಿ ಸಮೀಕ್ಷಾಧಿಕಾರಿಗಳು ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ನೀಡುವುದು ನಾಗರಿಕರ ಕರ್ತವ್ಯ. ಮನೆಯನ್ನು ಬಿಟ್ಟು ಹೋಗಿದ್ದರೆ 8050770004 ಈ ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ.

  • ರಾಜ್ಯಾದ್ಯಂತ 1200 ಚದರಡಿ ಮನೆಗಳಿಗೆ ಓಸಿ ವಿನಾಯಿತಿ: ಸಚಿವ ಸಂಪುಟದ ಮಹತ್ವದ ನಿರ್ಧಾರ

    ರಾಜ್ಯಾದ್ಯಂತ 1200 ಚದರಡಿ ಮನೆಗಳಿಗೆ ಓಸಿ ವಿನಾಯಿತಿ: ಸಚಿವ ಸಂಪುಟದ ಮಹತ್ವದ ನಿರ್ಧಾರ

    ರಾಜ್ಯದ ಸಾವಿರಾರು ಗೃಹಮಾಲೀಕರಿಗೆ ಸರ್ಕಾರದಿಂದ ದೊಡ್ಡ ಸಡಗರದ ಸುದ್ದಿ ಬಂದಿದೆ. ಮನೆಯ ನಿರ್ಮಾಣದ ನಂತರ ಕಡ್ಡಾಯವಾಗಿ ಪಡೆಯಬೇಕಾದ ಆಕ್ಯುಪೆನ್ಸಿ ಸರ್ಟಿಫಿಕೇಟ್‌ (OC) ಅಥವಾ ಸ್ವಾಧೀನಾನುಭವ ಪತ್ರವನ್ನು ಪಡೆಯಲು ಈಗ ಅನೇಕ ಸಣ್ಣಮಟ್ಟದ ಮನೆಮಾಲೀಕರು ಎದುರಿಸುತ್ತಿದ್ದ ತಾಂತ್ರಿಕ ಅಡೆತಡೆಗಳು ಹಾಗೂ ಕಾನೂನು ಗೊಂದಲಗಳಿಗೆ ಸರ್ಕಾರ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ.

    ಇದುವರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಷ್ಟೇ ಜಾರಿಗೆ ಇದ್ದ 1200 ಚದರಡಿ ವಿಸ್ತೀರ್ಣದ ಒಳಗಿನ ಮನೆಗಳಿಗೆ ಓಸಿ ವಿನಾಯಿತಿ ನೀತಿಯನ್ನು ಈಗ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕ್ರಮದಿಂದ ರಾಜ್ಯದಾದ್ಯಂತ ಸಾವಿರಾರು ಮನೆಗಳಿಗೆ ಕಾನೂನುಬದ್ಧ ಮಾನ್ಯತೆ ದೊರಕುವ ಸಾಧ್ಯತೆ ಇದೆ.

    ಏನಿದು ನಿರ್ಧಾರ?:

    ಬೆಂಗಳೂರು ನಗರದಲ್ಲಿ 30×40 ಅಡಿ (ಸುಮಾರು 1,200 ಚದರ ಅಡಿ) ಒಳಗಿನ ಮನೆಗಳಿಗೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣವಾಗಿದ್ದರೂ, ಅವುಗಳಿಗೆ ಓಸಿ ನೀಡದೇ ಇರಲು ಅನೇಕ ವರ್ಷಗಳಿಂದ ತೊಂದರೆ ಉಂಟಾಗುತ್ತಿತ್ತು. ಇದರಿಂದ ನೀರು, ವಿದ್ಯುತ್‌ ಮುಂತಾದ ಮೂಲಭೂತ ಸೌಕರ್ಯಗಳ ಸಂಪರ್ಕ ಪಡೆಯುವಲ್ಲಿ ನಾಗರೀಕರು ಕಷ್ಟ ಅನುಭವಿಸುತ್ತಿದ್ದರು.

    ಇದಕ್ಕೆ ಪರಿಹಾರವಾಗಿ, ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಈ ತರದ ಮನೆಗಳಿಗೆ ಓಸಿ ವಿನಾಯಿತಿ ನೀಡುವ ನೀತಿಯನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿತ್ತು. ಅದೇ ಮಾದರಿಯನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳು, ನಗರಸಭೆಗಳು ಹಾಗೂ ಪುರಸಭೆಗಳು ವ್ಯಾಪ್ತಿಯಲ್ಲಿಯೂ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

    ಯಾರಿಗೆ ಅನ್ವಯಿಸುತ್ತದೆ?:

    1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳು.

    ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಿಸಿದ ಮನೆಗಳು.

    ನೆಲಮಹಡಿ + 2 ಅಂತಸ್ತು, ಸ್ಟಿಲ್ಟ್ + 3 ಅಂತಸ್ತಿನವರೆಗೆ ನಿರ್ಮಿಸಲಾದ ವಸತಿ ಕಟ್ಟಡಗಳು.

    ಈ ತರದ ಮನೆಗಳಿಗೆ ಈಗಿನಿಂದ ಮುಂದೆ ಸ್ವಾಧೀನಾನುಭವ ಪತ್ರ ಕಡ್ಡಾಯವಿಲ್ಲದೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

    ಸುಪ್ರೀಂ ಕೋರ್ಟ್ ಸೂಚನೆ:

    ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ಸರಳವಾಗಿ ಜಾರಿಗೊಳಿಸುವಂತೆಯೂ, ಯಾವುದೇ ಕಾನೂನು ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಅನುಷ್ಠಾನಾತ್ಮಕ ಆದೇಶ ಹೊರಬಂದ ನಂತರ, ನಕ್ಷೆ ಮಂಜೂರಾತಿ ಪಡೆಯದ ನಿರ್ದಿಷ್ಟ ಮನೆಗಳಿಗೂ ಈ ವಿನಾಯಿತಿ ಅನ್ವಯವಾಗಲಿದೆ.

    ಈ ನಿರ್ಧಾರದಿಂದ, ಅನಧಿಕೃತವಾಗಿ ನಿರ್ಮಿಸಲ್ಪಟ್ಟ ಸಾವಿರಾರು ಸಣ್ಣಮಟ್ಟದ ಮನೆಗಳಿಗೆ ಕಾನೂನು ಮಾನ್ಯತೆ ದೊರೆಯುತ್ತದೆ.

    ನೀರು ಮತ್ತು ವಿದ್ಯುತ್‌ ಸಂಪರ್ಕ ಸುಗಮಗೊಳ್ಳುತ್ತದೆ. ಮನೆಮಾಲೀಕರಿಗೆ ದಾಖಲೆ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ನಗರಾಭಿವೃದ್ಧಿ ಇಲಾಖೆಯ ಕೆಲಸವೂ ಸರಳವಾಗುತ್ತದೆ.

    ಸರ್ಕಾರದ ಈ ನಿರ್ಧಾರ ರಾಜ್ಯದ ಅನೇಕ ಸಣ್ಣಮಟ್ಟದ ಮನೆಮಾಲೀಕರಿಗೆ ದೊಡ್ಡ ಶಾಂತಿ ನೀಡುವ ನಿರೀಕ್ಷೆಯಿದೆ. ಮನೆ ನಿರ್ಮಿಸಿದರೂ ಕಾನೂನು ಪ್ರಕ್ರಿಯೆಗಳ ಕೊರತೆಯಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ಇದು ನಿಜವಾದ ಗುಡ್ ನ್ಯೂಸ್ (Good News) ಆಗಿದೆ.

  • ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ಇಂದಿನ ದಿನಮಾನದಲ್ಲಿ ಚಿಕನ್‌ ಮಾಂಸವು ಭಾರತೀಯರ ಅಡುಗೆಮನೆಯಲ್ಲಿ ಅಷ್ಟೇನೂ ಹೊಸ ಪದಾರ್ಥವಲ್ಲ. ನಗರಗಳಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಚಿಕನ್‌ನ ರುಚಿಯನ್ನು ಸವಿಯುವುದು ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಹೋಟೆಲ್‌ಗಳು, ಕುಟುಂಬ ಸಮಾರಂಭಗಳು, ಹಬ್ಬ-ಹರಿದಿನಗಳು ಅಥವಾ ಸರಳ ಊಟ ಯಾವ ಸಂದರ್ಭವಾಗಿದ್ದರೂ ಚಿಕನ್‌ ಬಟ್ಟಲು ಹಾಜರಿರುವುದು ಸಾಮಾನ್ಯ. ರುಚಿ, ಪೌಷ್ಟಿಕಾಂಶ ಹಾಗೂ ಇತರೆ ಮಾಂಸಗಳಿಗಿಂತ ಹೋಲಿಕೆ ಮಾಡಿದಾಗ ಕಡಿಮೆ ಬೆಲೆಯು ಇದರ ಜನಪ್ರಿಯತೆಯ ಪ್ರಮುಖ ಕಾರಣಗಳಾಗಿವೆ.

    ಚಿಕನ್‌ನಲ್ಲಿ ವಿಟಮಿನ್ ಬಿ, ನಿಯಾಸಿನ್‌, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ತುಂಬಿರುತ್ತವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ ರೋಗನಿರೋಧಕ ಶಕ್ತಿ, ಮೂಳೆಗಳ ದೃಢತೆ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ. ಸರಿಯಾಗಿ ಬೇಯಿಸಿದ ಚಿಕನ್ ಸುಲಭವಾಗಿ ಜೀರ್ಣವಾಗುವುದರಿಂದ ಎಲ್ಲ ವಯಸ್ಸಿನವರಿಗೂ ಸೂಕ್ತವಾದ ಆಹಾರವಾಗಿದೆ.

    ಆದರೆ, ಈ ಎಲ್ಲಾ ಪ್ರಯೋಜನಗಳ ನಡುವೆಯೇ ಒಂದು ಪ್ರಮುಖ ವಿಷಯವನ್ನು ಬಹುತೇಕ ಜನರು ಕಡೆಗಣಿಸುತ್ತಾರೆ ಕೋಳಿಯ ಎಲ್ಲಾ ಭಾಗಗಳೂ ಆರೋಗ್ಯಕರವಲ್ಲ. ಕೆಲವು ಭಾಗಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಕೀಟಾಣುಗಳು, ಹಾರ್ಮೋನುಗಳು ಹಾಗೂ ಹೆಚ್ಚುವರಿ ಕೊಬ್ಬು ಅಂಶಗಳು ತುಂಬಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ, ಯಾವ ಭಾಗಗಳನ್ನು ತಿನ್ನುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಕೋಳಿಯ ಕುತ್ತಿಗೆ (Neck):

    ಕೋಳಿಯ ಕುತ್ತಿಗೆಯ ಭಾಗದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಹಾಗೂ ದುಗ್ಧರಸ ಗ್ರಂಥಿಗಳು ಅಡಗಿರುತ್ತವೆ. ಇವು ಬೇಯಿಸಿದರೂ ಸಂಪೂರ್ಣ ನಾಶವಾಗದೇ, ದೀರ್ಘಾವಧಿಯಲ್ಲಿ ದೇಹದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರ ಎಚ್ಚರಿಕೆ. ಹೀಗಾಗಿ ಚಿಕನ್ ಖರೀದಿಸುವಾಗ ಕುತ್ತಿಗೆಯ ಭಾಗವನ್ನು ತೆಗೆದುಹಾಕುವುದು ಅತ್ಯವಶ್ಯಕ.

    ಶ್ವಾಸಕೋಶ, ತಲೆ ಮತ್ತು ಕರುಳು:

    ಈ ಭಾಗಗಳಲ್ಲಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ತುಂಬಿರುತ್ತವೆ. ಅವುಗಳ ಸೇವನೆ ದೇಹದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೂತ್ರನಾಳದ ಸೋಂಕು, ಹೊಟ್ಟೆ ಉಬ್ಬರ ಹಾಗೂ ಕೊಬ್ಬಿನ ಪ್ರಮಾಣದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

    ಕೋಳಿ ಕಾಲುಗಳು (Chicken Legs):

    ಕೋಳಿ ಕಾಲುಗಳಲ್ಲಿ ಹೆಚ್ಚುವರಿ ಹಾರ್ಮೋನುಗಳು ಸಂಗ್ರಹವಾಗಿರುತ್ತವೆ. ಇವು ದೀರ್ಘಾವಧಿಯಲ್ಲಿ ಹಾರ್ಮೋನಲ್ ಅಸಮತೋಲನ, ತೂಕದ ಹೆಚ್ಚಳ ಹಾಗೂ ಮೆಟಾಬಾಲಿಕ್ (Metabolic) ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳ ಹಾಗೂ ಯುವಕರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಅಸಮತೋಲನಗಳೂ ಉಂಟಾಗುವ ಅಪಾಯವಿದೆ.

    ಕೋಳಿ ಚರ್ಮ (Chicken Skin):

    ಕೋಳಿ ಚರ್ಮವು ಕೊಬ್ಬಿನ ಅಂಶದಿಂದ ಸಮೃದ್ಧವಾಗಿದೆ. 100 ಗ್ರಾಂ ಚರ್ಮದಲ್ಲಿ ಸರಾಸರಿ 32 ಗ್ರಾಂ ಕೊಬ್ಬು ಇರುತ್ತದೆ. ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗಿ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಸ್ಥೂಲತೆ ಸಮಸ್ಯೆಗಳು ತಲೆದೋರುತ್ತವೆ.

    ಯುಎಸ್ಟಿಎ (USDA) ಅಧ್ಯಯನ ಪ್ರಕಾರ, ಚರ್ಮವಿಲ್ಲದೆ ಬೇಯಿಸಿದ ಒಂದು ಕಪ್ ಚಿಕನ್‌ನಲ್ಲಿ 231 ಕ್ಯಾಲೊರಿಗಳು ಇದ್ದರೆ, ಚರ್ಮದೊಂದಿಗೆ ಅದೇ ಪ್ರಮಾಣದ ಚಿಕನ್‌ನಲ್ಲಿ 276 ಕ್ಯಾಲೊರಿಗಳು ಇರುತ್ತವೆ ಅಂದರೆ ಹೆಚ್ಚುವರಿ ಕ್ಯಾಲೊರಿಗಳೂ ಸೇರಿ ಅನಗತ್ಯ ಕೊಬ್ಬು ದೇಹಕ್ಕೆ ಸೇರುತ್ತದೆ.

    ಚಿಕನ್‌ ಅನ್ನು ಆರೋಗ್ಯಕರವಾಗಿ ಸೇವಿಸುವ ಸರಿಯಾದ ವಿಧಾನ:

    ಚಿಕನ್ ಖರೀದಿಸುವಾಗ ಕುತ್ತಿಗೆ, ತಲೆ, ಶ್ವಾಸಕೋಶ ಮತ್ತು ಕರುಳು ಭಾಗಗಳನ್ನು ತೆಗೆದುಹಾಕಿ.

    ಚರ್ಮವಿಲ್ಲದ ಚಿಕನ್ ಆಯ್ಕೆ ಮಾಡಿ ಬೇಯಿಸಿ ತಿನ್ನುವುದು ಒಳಿತು. ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸುವುದು ಅಥವಾ ಉಪ್ಪಿನ ನೀರಿನಲ್ಲಿ ಬೇಯಿಸುವುದು ಉತ್ತಮ.

    ಅತಿಯಾಗಿ ಸೇವಿಸುವುದನ್ನು ತಪ್ಪಿಸಿ, ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿ.

    ಚಿಕನ್ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ ಅದರ ಕೆಲವು ಭಾಗಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂಬುದನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಆಯ್ಕೆ, ಸ್ವಚ್ಛ ಸಿದ್ಧತೆ ಹಾಗೂ ನಿಯಂತ್ರಿತ ಸೇವನೆಯ ಮೂಲಕ ಚಿಕನ್‌ನ ಪೌಷ್ಟಿಕ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು, ಅನಾರೋಗ್ಯದ ಅಪಾಯವನ್ನು ತಪ್ಪಿಸಬಹುದು.

  • ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸತ್ಯಪರೀಕ್ಷೆಗೆ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೆ ಕಣಕ್ಕಿಳಿಯಲು ಸಜ್ಜಾಗಿವೆ. ಕಳೆದ ವರ್ಷದ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ ಭಾರತಕ್ಕೆ, ಈ ಸರಣಿ ಒಂದು ರೀತಿಯ ಪ್ರತೀಕಾರದ ವೇದಿಕೆಯಾಗಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ನೆನಪು ಇದ್ದರೂ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಸ್ಥಳ, ಪಿಚ್, ತಂಡದ ಸಂಯೋಜನೆ ಎಲ್ಲವೂ ಭಾರತಕ್ಕೆ ಹೊಸ ಸವಾಲುಗಳು.

    ಪರ್ತ್‌ನ ವಾಕಾ ಮೈದಾನ ಎಂದರೆ ಬೌನ್ಸಿಗೆ ಪ್ರಸಿದ್ಧ ಅಲ್ಲಿ ವೇಗಿಗಳೇ ಮೇಲುಗೈ ಅದಕ್ಕಾಗಿಯೇ ಎಷ್ಟು ಪೇಸರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಪ್ರಶ್ನೆ ಈಗ ತಂಡದ ಮುಂದಿದೆ.

    ಈ ಹಿನ್ನೆಲೆಯಲ್ಲಿ ಕನ್ನಡಿಗರ ಹೆಸರುಗಳೂ ಚರ್ಚೆಯಲ್ಲಿವೆ

    ಕೆಎಲ್ ರಾಹುಲ್, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅನುಭವ, ತಾಳ್ಮೆ ಮತ್ತು ಮಧ್ಯ ಕ್ರಮದಲ್ಲಿ ನಿಲ್ಲುವ ಶಕ್ತಿ ಭಾರತಕ್ಕೆ ಅಗತ್ಯವಾದ ಅಂಶಗಳಾಗಿವೆ.

    ಮತ್ತೊಂದು ಹೆಸರು ಪ್ರಸಿದ್ಧ ಕೃಷ್ಣ ವೇಗದ ಬೌಲರ್. ವಾಕಾದಂತಹ ಪಿಚ್‌ನಲ್ಲಿ ಅವರ ಉದ್ದದ ಬೌನ್ಸ್ ಎದುರಾಳಿಗಳಿಗೆ ಕಠಿಣ ಪರೀಕ್ಷೆಯಾಗಬಹುದು. ಆದರೂ ಅವರ ಸ್ಥಾನ ಖಚಿತವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಯುವ ವೇಗಿ ಹರ್ಷಿತ್ ರಾಣಾ ಅವರ ಪ್ರದರ್ಶನವೂ ಆಯ್ಕೆದಾರರ ಗಮನ ಸೆಳೆದಿದೆ.

    ಇತ್ತ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ತಂಡದತ್ತ ಎಲ್ಲರ ಕಣ್ಣು, ಏಷ್ಯಾ ಕಪ್ ಗೆಲುವಿನ ನಂತರ, ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮಾಡಿ ಈ ಎಲ್ಲ ಯಶಸ್ಸುಗಳ ನಡುವೆ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ಮುಂದೆ ಅದು ಸಾಕಾಗುತ್ತದೆಯಾ ಎಂಬುದು ಈಗಿನ ಪ್ರಶ್ನೆ.

    ಅಕ್ಟೋಬರ್ 19ರಂದು ಭಾನುವಾರ ನಡೆಯಲಿರುವ ಈ ಮೊದಲ ಏಕದಿನ ಪಂದ್ಯ ಕೇವಲ ಪಂದ್ಯವಲ್ಲ ಅದು ಗೌರವ, ಆತ್ಮಗೌರವ ಮತ್ತು ಪ್ರತೀಕಾರದ ಪರ್ತ್‌ನ ಬೌನ್ಸಿ ಪಿಚ್‌ನಲ್ಲಿ ವೇಗಿಗಳ ರಣಭೂಮಿ ಸಜ್ಜಾಗಿದೆ.

  • ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ಭಾರತದ ಅತ್ಯಂತ ಜನಪ್ರಿಯ ಕ್ವಿಜ್ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯು ಅನೇಕ ಪ್ರತಿಭಾವಂತರನ್ನು ಪರಿಚಯಿಸಿದೆ. ಈ ಬಾರಿ ಆ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ವಿನಯ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಪ್ರೇಕ್ಷಕರ ಮನ ಗೆದ್ದಷ್ಟೇ ಅಲ್ಲ, ಒಂದು ಮಾದರಿಯನ್ನೂ ಸಹ ನಿರ್ಮಿಸಿದರು.

    ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಜೀವನದ ಪಯಣ, ಕುಟುಂಬ, ಮತ್ತು ತಮ್ಮ ಸಾಮಾಜಿಕ ಸೇವಾ ಉದ್ದೇಶಗಳ ಕುರಿತು ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿದ ‘ರಿಷಬ್ ಫೌಂಡೇಶನ್’ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಹಾಗೂ ದೈವ ನರ್ತಕರ ಜೀವನೋಪಾಯಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವನ್ನು ವ್ಯಕ್ತಪಡಿಸಿದರು.

    ಆಟದಲ್ಲಿ ಅವರು ಅತ್ಯಂತ ಶಾಂತ ಮತ್ತು ನಿಖರವಾಗಿ ಪ್ರಶ್ನೆಗಳಿಗೆ ಉತ್ತರಿಸಿದರು. ಆರಂಭದಲ್ಲಿ 50,000 ರೂ. ಮೌಲ್ಯದ ಪ್ರಶ್ನೆಯಿಂದ ಆರಂಭಿಸಿದ ಅವರು ಕ್ರಮೇಣ 12 ಪ್ರಶ್ನೆಗಳನ್ನು ಯಶಸ್ವಿಯಾಗಿ ಪೂರೈಸಿದರು. ವಿಶೇಷವಾಗಿ ಒಂದು ಕಠಿಣ ಪ್ರಶ್ನೆ “ಇಂಡೋನೇಷ್ಯಾದಲ್ಲಿರುವ ಜ್ವಾಲಾಮುಖಿಯ ಕೆಳಗೆ ಯಾವ ಹಿಂದೂ ದೇವರ ಪ್ರತಿಮೆ ಇದೆ?” ಎಂಬುದಕ್ಕೆ ಅವರು ಲೈಫ್ಲೈನ್ ಬಳಸಿಕೊಂಡು ಸರಿಯಾದ ಉತ್ತರವಾದ ‘ಗಣಪತಿ’ ಎಂದು ಹೇಳಿದರು.

    ಈ ಪ್ರದರ್ಶನದ ಫಲವಾಗಿ ರಿಷಬ್ ಶೆಟ್ಟಿ ಅವರು ₹12,50,000 ಮೊತ್ತದ ಬಹುಮಾನವನ್ನು ಗೆದ್ದರು. ಆದರೆ, ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅದನ್ನು ಬಳಸದೇ, ಅದನ್ನೆಲ್ಲ ತಮ್ಮ ಫೌಂಡೇಶನ್‌ಗೆ ದಾನ ಮಾಡಿದರು. ಅವರ ಈ ನಡೆ ಎಲ್ಲರಿಗೂ ಪ್ರೇರಣೆಯಾಗಿತು.

    ಅಮಿತಾಭ್ ಬಚ್ಚನ್ ಅವರ ಆತಿಥ್ಯದಲ್ಲಿ ನಡೆದ ಈ ಶೋ ವೇಳೆ, ಆಯೋಜಕರು ಮತ್ತು ಸ್ಪಾನ್ಸರ್‌ಗಳೂ ಕೂಡಾ ರಿಷಬ್ ಅವರ ಮಾನವೀಯ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಫೌಂಡೇಶನ್‌ಗೆ 1,500 ಕಿಲೋ ಅಕ್ಕಿ, 1,500 ಕಿಲೋ ಗೋಧಿ, 1,500 ಕಿಲೋ ತುಪ್ಪ, ಜೊತೆಗೆ ಹಿರೋ ಎಕ್ಸ್‌ಟ್ರೀಂ 125 ಬೈಕ್ ನೀಡುವುದಾಗಿ ಘೋಷಿಸಿದರು.

    ಒಟ್ಟಿನಲ್ಲಿ, ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರ ಗೆಲುವು ಕೇವಲ ಹಣದ ಗೆಲುವಲ್ಲ ಅದು ಮಾನವೀಯತೆ ಮತ್ತು ಅದು ಸಾಮಾಜಿಕ ಜವಾಬ್ದಾರಿಯ ಗೆಲುವು.