Author: Satyakam NewsDesk

  • ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.

    ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

     

    ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.

    ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.

    ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.

    ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

  • ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಸಿನಿಮಾ ಲೋಕದಲ್ಲಿ ಜನಪ್ರಿಯತೆ ಪಡೆದವರು ಎದುರಿಸಬೇಕಾದ ದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ತಮ್ಮ ಹೆಸರು ಮತ್ತು ಮುಖದ ದುರುಪಯೋಗ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆ ಡೀಪ್‌ಫೇಕ್ ಎಂಬ ಹೊಸ ಅಪಾಯವನ್ನು ತಂದುಕೊಟ್ಟಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಈ ತಂತ್ರಜ್ಞಾನವು ಯಾರ ಮುಖವನ್ನು ಬೇರೆ ವ್ಯಕ್ತಿಯ ದೇಹದ ಮೇಲೆ ನಿಖರವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಜವಾದ ಹಾಗೇ ಕಾಣುವ ನಕಲಿ ವೀಡಿಯೋಗಳನ್ನು ರಚಿಸಲಾಗುತ್ತದೆ. ಇದೇ ತಂತ್ರಜ್ಞಾನದಿಂದ ಈಗ ಮೆಗಾಸ್ಟಾರ್ ಚಿರಂಜೀವಿ ಸಂಕಷ್ಟ ಅನುಭವಿಸುತ್ತಿದ್ದಾರೆ

    ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿಯೂ, ಸಾಮಾನ್ಯ ಜನರಲ್ಲಿಯೂ ಆಘಾತ ಮೂಡಿಸಿದೆ. ಚಿರಂಜೀವಿ ಅವರ ಹೆಸರು, ಮುಖದ ಹೋಲಿಕೆ ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಿದ ಅಶ್ಲೀಲ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಟ ಸ್ವತಃ ಕಾನೂನು ಹೋರಾಟ ಆರಂಭಿಸಿದ್ದಾರೆ.

    ಚಿರಂಜೀವಿ ಅವರ ದೂರಿನಲ್ಲಿ ಏನಿದೆ?

    ಹಲವು ವೆಬ್‌ಸೈಟ್‌ಗಳು ನನ್ನ ಹೆಸರು ಮತ್ತು ಮುಖವನ್ನು ಬಳಸಿ ಕೃತಕವಾಗಿ ರಚಿಸಿದ ಅಶ್ಲೀಲ ವೀಡಿಯೋಗಳನ್ನು ಪ್ರಕಟಿಸಿವೆ. ಈ ವೀಡಿಯೋಗಳು ನನಗೆ ವಿರುದ್ಧವಾದ ತಪ್ಪು ಗ್ರಹಿಕೆಯನ್ನು ಉಂಟುಮಾಡಿ, ನನ್ನ ಮಾನ-ಗೌರವಕ್ಕೆ ಧಕ್ಕೆಯುಂಟುಮಾಡಿವೆ. ನನ್ನ ಮೇಲೆ ಜನರಲ್ಲಿದ್ದ ಸದ್ಭಾವನೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ, ಎಂದು ತಿಳಿಸಿದ್ದಾರೆ.

    ಈ ದೂರು ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಷನ್‌ಗಳು 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 79, 294, 296 ಮತ್ತು 336(4) ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4 ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.

    ಚಿರಂಜೀವಿ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, ಈ ವೀಡಿಯೋಗಳು ಸಂಪೂರ್ಣ ನಕಲಿ. ಕೃತಕ ಬುದ್ಧಿಮತ್ತೆ ಮೂಲಕ ನನ್ನ ಮುಖಭಾವ, ಶರೀರಭಾಷೆ ಮತ್ತು ವ್ಯಕ್ತಿತ್ವವನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಮಾನಹಾನಿಕಾರಕ, ಎಂದು ಖಂಡಿಸಿದ್ದಾರೆ.

    ಈ ಪ್ರಕರಣ ಕೇವಲ ಚಿರಂಜೀವಿಯವರ ವೈಯಕ್ತಿಕ ಹಕ್ಕಿನ ವಿಷಯವಲ್ಲ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರಕ್ರಿಯೆಗಳ ವಿರುದ್ಧ ಎಚ್ಚರಿಕೆಯ ಗಂಟೆ ಎಂಬಂತೆ ಪರಿಣಿತರು ಹೇಳಿದ್ದಾರೆ. ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಸೃಜನಶೀಲ ಕ್ಷೇತ್ರಗಳಿಗೆ ಅವಕಾಶಗಳನ್ನೂ ಕೊಡುವುದೇ ಸರಿ, ಆದರೆ ಅದನ್ನು ದುರುಪಯೋಗ ಮಾಡಿದರೆ ವ್ಯಕ್ತಿಗಳ ಗೌರವ ಮತ್ತು ಸಮಾಜದ ನೈತಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ.

    ಹೈದರಾಬಾದ್ ಪೊಲೀಸರು ಈಗ ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಚಿರಂಜೀವಿಯ ಪ್ರಕರಣದಿಂದ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

  • ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಉತ್ತಮ‌ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಶಾಸಕ ಶರಣಗೌಡ ಕಂದಕೂರ ವೈದ್ಯರಿಗೆ ಕಿವಿ ಮಾತು ಹೇಳಿದರು.

    ತಾಲೂಕಿನ ಅರಕೇರಾ(ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಶಸ್ತ್ರ ಚಿಕಿತ್ಸಾಲಯದ ಕೋಣೆಯನ್ನು ಉದ್ಘಾಟಿಸಿದ ಶಾಸಕರು, ಸರ್ಕಾರಿ ದವಾಖಾನಿಗಳಿಗೆ ಬರುವವರು ಬಡವರೇ ಆಗಿರುತ್ತಾರೆ. ಅವರಿಗೋಸ್ಕರವೇ ಸರ್ಕಾರಗಳು‌ ಇಂತಹ ವ್ಯವಸ್ತೆ ಮಾಡಿರುತ್ತದೆ. ಕಾರಣ, ನಿಗದಿತ ಅವಧಿಯಲ್ಲಿ ರೋಗಕ್ಕೆ ತಕ್ಕ ಚಿಕಿತ್ಸೆ ನೀಡುವ ಮೂಲಕ ತಾವುಗಳು ಎರಡನೇ ದೇವರಾಗಬೇಕೆಂದು ಮಾರ್ಮಿಕವಾಗಿ ಹೇಳಿದರು.

    ಇಲ್ಲಿ ಇನ್ನೂ ಏನಾದರೂ ಸೌಲಭ್ಯಗಳು ಬೇಕಾದರೇ ತಮ್ಮ ಗಮನಕ್ಕೆ ತಂದರೇ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ‌ ಪ್ರಯತ್ನ ಮಾಡಲಾಗುವುದೆಂದರು.

    ಪರಮಾನಂದೇಶ್ವರ ಶ್ರೀಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ಡಿಎಚ್ ಒ ಡಾ.ಮಹೇಶ ಬಿರಾದಾರ, ಡಾ.ಎಂ.ಎಸ್.ಪಾಟೀಲ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ನೀಲಾಂಬಿಕಾ ಎಂ.ಜಾಪಟ್ಟಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

  • ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025–28 ನೇ ಅವಧಿಯ ಚುನಾವಣೆಯು ನವೆಂಬರ್ 9ರಂದು ನಡೆಯಲಿದ್ದು, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ದಿನೇಶ್ ವಿ.ಸಿ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕ ಕುಮಾರಸ್ವಾಮಿ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

    ಈ ವೇಳೆ ಸಂಜೆಕಾಲ ಪತ್ರಿಕೆಯ ಸಂಪಾದಕರಾದ ರಾಜೇಶ್ ಪಾಟೀಲ್, ಪತ್ರಕರ್ತರಾದ ತೋಟೆಂದ್ರ, ಮಲ್ಲು ಕಾಮರೆಡ್ಡಿ, ಕುದಾನ್ ಸಾಬ್, ಬಸವರಾಜ್ ಕಾಂಬಳೆ, ಮಂಜು ಬಿರಾದಾರ್, ದೇವಿಂದ್ರ ಕಿಲ್ಲನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!

    ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!

    ಭಾರತೀಯ ಸಂಸ್ಕೃತಿಯಲ್ಲಿ ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ. ಕಳಶವು ದೇವತೆಯ ಶಕ್ತಿ, ಶುದ್ಧತೆ ಮತ್ತು ಸೃಷ್ಟಿಯ ಮೂಲ ತತ್ವದ ಪ್ರತೀಕವೆಂದು ವೇದಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ಇಡುವ ತೆಂಗಿನಕಾಯಿ ಕೇವಲ ಅಲಂಕಾರವಲ್ಲ ಅದು ದೈವೀ ಶಕ್ತಿಯ ಆವರಣ ಎಂದು ಪರಿಗಣಿಸಲಾಗುತ್ತದೆ.

    ಆದರೆ ಅನೇಕರು ಪೂಜೆ ಮುಗಿದ ಬಳಿಕ ಈ ಕಳಶದ ತೆಂಗಿನಕಾಯಿಯನ್ನು ಏನು ಮಾಡಬೇಕು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ತಿಳಿಯದೇ ಗೊಂದಲದಲ್ಲಿರುತ್ತಾರೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಶಾಸ್ತ್ರೋಕ್ತವಾಗಿ ನೀಡಿರುವ ಮಾಹಿತಿ ಹೀಗಿದೆ.

    ಕಳಶದಲ್ಲಿನ ತೆಂಗಿನಕಾಯಿಯ ದೈವೀ ಮಹತ್ವ: 

    ಕಳಶಕ್ಕೆ ಇಡುವ ತೆಂಗಿನಕಾಯಿ ದೇವರ ಸಾನಿಧ್ಯದಲ್ಲಿ ಇರಿಸುವುದರಿಂದ ಅದು ದೈವ ಸ್ವರೂಪ ಪಡೆಯುತ್ತದೆ. ಹೀಗಾಗಿ ಪೂಜೆ ಬಳಿಕ ಅದನ್ನು ನಿರ್ಲಕ್ಷ್ಯವಾಗಿ ಅಥವಾ ಸಾಮಾನ್ಯ ಉಪಯೋಗಕ್ಕಾಗಿ ಬಳಸಬಾರದು.

    ಮಾಂಸದ ಅಡುಗೆಯಲ್ಲಿ ಬಳಸಬಾರದು: 

    ಶಾಸ್ತ್ರಗಳಲ್ಲಿ ಉಲ್ಲೇಖವಾದಂತೆ, ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನು ಮಾಂಸದ ಅಡುಗೆಗೆ ಬಳಸುವುದು ಅಪಶಕುನ ಎಂದು ಹೇಳಲಾಗಿದೆ. ಇಂತಹ ಪ್ರಯೋಗದಿಂದ ಪೂಜೆಯ ಪಾವಿತ್ರ್ಯ ಕಳೆದುಹೋಗುತ್ತದೆ.

    ಸಿಹಿ ಪದಾರ್ಥಕ್ಕೆ ಬಳಸುವುದು ಶ್ರೇಷ್ಠ:

    ಜ್ಯೋತಿಷಿ ವಿವೇಕಾನಂದ ಆಚಾರ್ಯರ ಪ್ರಕಾರ, ಕಳಶದ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳು (ಉದಾ: ಪಾಯಸ, ಹೋಳಿಗೆ, ಲಾಡು ಮುಂತಾದವು) ತಯಾರಿಸಲು ಬಳಸುವುದು ಅತ್ಯಂತ ಶುಭಕರ. ತಯಾರಿಸಿದ ಸಿಹಿ ಪದಾರ್ಥಗಳನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಹಂಚಿದರೆ ಶುಭಫಲ ದೊರೆಯುತ್ತದೆ.

    ತೆಂಗಿನಕಾಯಿ ಆಯ್ಕೆ ಮಾಡುವಾಗ ಎಚ್ಚರಿಕೆ:

    ಕಳಶಕ್ಕೆ ಇಡುವ ತೆಂಗಿನಕಾಯಿ ಪೂರ್ಣವಾಗಿ ಒಣಗಿರಬಾರದು. ಒಣ ತೆಂಗಿನಕಾಯಿ ಕಳಶದಲ್ಲಿ ಇಟ್ಟರೆ ಮನೆಯವರ ಜೀವನದಲ್ಲಿ ಸಂಕಷ್ಟಗಳು ಅಥವಾ ಅಡೆತಡೆಗಳು ಎದುರಾಗಬಹುದು ಎಂದು ಶಾಸ್ತ್ರ ನುಡಿಸುತ್ತದೆ.

    ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ ಅಥವಾ ಬಿರುಕು ಬಿಟ್ಟರೆ ಏನಾಗುತ್ತದೆ?

    ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ, ಅದು ಆರ್ಥಿಕ ನಷ್ಟ ಅಥವಾ ಹಣಕಾಸಿನ ತೊಂದರೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.

    ತೆಂಗಿನಕಾಯಿಗೆ ಬಿರುಕು ಬಿದ್ದರೆ, ಮನೆಯ ಸದಸ್ಯರಿಗೆ ಅಪಘಾತ ಅಥವಾ ಅನಾರೋಗ್ಯ ಉಂಟಾಗುವ ಸಂಭವವಿದೆ ಎಂಬ ನಂಬಿಕೆಯೂ ಇದೆ.

    ನೀರಿಲ್ಲದ ತೆಂಗಿನಕಾಯಿ ಶಕುನ:

    ಕಳಶಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ, ಅದು ಸಂತಾನ ಭಾಗ್ಯ ಕುಂದಿಸುವ ಸೂಚನೆ ಎಂದು ಹೇಳಲಾಗಿದೆ. ಕೆಲವೆಡೆ ಇದನ್ನು ಮಕ್ಕಳು ದಾರಿ ತಪ್ಪುವ ಸಾಧ್ಯತೆ ಎಂದೂ ಅರ್ಥೈಸಲಾಗುತ್ತದೆ.

    ಅರ್ಚಕರಿಗೆ ಅಥವಾ ಅನ್ಯರಿಗೆ ನೀಡಬಾರದು: 

    ಪೂಜೆ ಮುಗಿದ ಬಳಿಕ ಕಳಶದ ತೆಂಗಿನಕಾಯಿಯನ್ನು ಅನ್ಯರಿಗೆ ಅಥವಾ ಅರ್ಚಕರಿಗೆ ನೀಡುವುದು ತಪ್ಪು ಎಂದು ಜ್ಯೋತಿಷಿ ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ, ಪೂಜೆಯಿಂದ ಪಡೆದ ಪುಣ್ಯ ಫಲ ನಮ್ಮಿಂದ ದೂರವಾಗಿ, ಅದನ್ನು ಸ್ವೀಕರಿಸಿದವರಿಗೆ ತಲುಪುತ್ತದೆ ಎಂದು ನಂಬಿಕೆ ಇದೆ.

    ಕಳಶದ ತೆಂಗಿನಕಾಯಿ ಕೇವಲ ಪೂಜಾ ಸಾಮಗ್ರಿ ಅಲ್ಲ, ಅದು ದೇವರ ಕೃಪೆಯ ಪ್ರತೀಕ. ಅದನ್ನು ಗೌರವದಿಂದ ಬಳಸುವುದು, ಸಿಹಿ ಪದಾರ್ಥ ತಯಾರಿಸಿ ಹಂಚಿಕೊಳ್ಳುವುದು ಮತ್ತು ನಿರ್ಲಕ್ಷ್ಯವಾಗಿ ಉಪಯೋಗಿಸದಿರುವುದು ಶಾಸ್ತ್ರೋಕ್ತ ಶ್ರೇಷ್ಠ ಕ್ರಮ ಎಂದು ಪರಿಗಣಿಸಲಾಗಿದೆ.

  • ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಹಬ್ಬದ ಸೀಸನ್‌ ಕಳೆದ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಏರಿಳಿತ ಕಂಡ ಚಿನ್ನದ ದರ ಈಗ ಸಡಿಲವಾಗಿ ಇಳಿಕೆಯಾಗತೊಡಗಿದ್ದು, ಚಿನ್ನಾಭರಣ ಪ್ರಿಯರ ಮುಖದಲ್ಲಿ ನಗು ಮೂಡಿಸಿದೆ. ಸೋಮವಾರದಂತೆ ಚಿನ್ನದ ಬೆಲೆಗಳಲ್ಲಿ ಸಾವಿರ ರೂಪಾಯಿಗಿಂತಲೂ ಹೆಚ್ಚು ಇಳಿಕೆ ದಾಖಲಾಗಿದೆ.

    ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 27ರಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ಆಗಿದೆ. ಕೇವಲ ಒಂದು ದಿನದಲ್ಲೇ ಸುಮಾರು ₹1,140 ಇಳಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ ಹೋಲಿಕೆಯಾಗಿ ಇಳಿಕೆಯಾಗಿದೆ ಪ್ರತಿ ಗ್ರಾಂ ₹11,410 ಹಾಗೂ 10 ಗ್ರಾಂ ₹1,14,100. ಅಂದರೆ ಸುಮಾರು ₹1,050 ಇಳಿಕೆ ಕಂಡಿದೆ.

    ಬೆಂಗಳೂರು ಮಾರುಕಟ್ಟೆಯಲ್ಲಿಯೂ ಇದೇ ರೀತಿಯ ಇಳಿಕೆ ವಾತಾವರಣ ಕಂಡುಬಂದಿದೆ. ಇಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ರೂ. ಇದೆ. ಜಿಎಸ್‌ಟಿ ಮತ್ತು ಕಾರ್ಮಿಕ ಶುಲ್ಕ ಸೇರಿಸಿದ ನಂತರದ ಬೆಲೆಯಲ್ಲಿ ಮಳಿಗೆಯಿಂದ ಮಳಿಗೆಗೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಬೆಳ್ಳಿ ಬೆಲೆಯೂ ತಗ್ಗಿದ್ದು, ಪ್ರತಿ ಗ್ರಾಂ ₹157 ಹಾಗೂ ಕೆಜಿ ₹1,57,000 ರೂ. ಆಗಿದೆ.

    ಇಳಿಕೆಯ ಹಿಂದಿನ ಕಾರಣಗಳು

    ಹಬ್ಬದ ಕಾಲಾವಧಿ ಮುಗಿದ ಬಳಿಕ ಖರೀದಿ ಒತ್ತಡ ಕಡಿಮೆಯಾಗಿರುವುದು ಚಿನ್ನದ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಬಹುದು. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ತೋರಿಸಿಕೊಂಡಿದ್ದು, ಚೀನಾ ಅಮೆರಿಕಾ ನಡುವಿನ ವ್ಯಾಪಾರ ಉದ್ವಿಗ್ನತೆ ಶಾಂತವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಹಲವು ಹೂಡಿಕೆದಾರರು ಇತ್ತೀಚಿನ ಏರಿಕೆಯ ಬಳಿಕ ಲಾಭ ಪಡೆದು ಚಿನ್ನ ಮಾರಾಟ ಮಾಡುತ್ತಿರುವ ಹಿನ್ನೆಲೆ ಕೂಡ ದರ ಇಳಿಕೆಗೆ ಕಾರಣವಾಗಿದೆ.

    ಆರ್ಥಿಕ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳು ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ಇನ್ನೂ ಸ್ವಲ್ಪ ಇಳಿಕೆ ಆಗುವ ಸಂಭವನೀಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೂಡಿಕೆ ಅಥವಾ ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯವಾಗಬಹುದು.

    ಇದೀಗ ಚಿನ್ನದ ಮಾರುಕಟ್ಟೆ ಸ್ಥಿರತೆಯ ಹಾದಿಯಲ್ಲಿ ಸಾಗುತ್ತಿದ್ದು, ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶ. ಆದರೆ ಕೇವಲ ತಾತ್ಕಾಲಿಕ ಲಾಭಕ್ಕಾಗಿ ಖರೀದಿ ಮಾಡುವವರಿಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ ದರದ ಅಲೆಮಾಲೆ ಇನ್ನೂ ಸಂಪೂರ್ಣ ನಿಂತಿಲ್ಲ.

    ಹಬ್ಬದ ಬಳಿಕದ ಈ ಇಳಿಕೆ ಚಿನ್ನಾಭರಣ ಪ್ರಿಯರಿಗೆ ಖಂಡಿತವಾಗಿಯೂ ಸಿಹಿ ಸುದ್ದಿ. ಯೋಗ್ಯ ಸಮಯದಲ್ಲಿ ವಿವೇಕದಿಂದ ಖರೀದಿ ಮಾಡಿದರೆ ಇದು ನಿಜಕ್ಕೂ “ಸುವರ್ಣಾವಕಾಶ

  • ಬಿಪಿಎಲ್ ಕಾರ್ಡ್‌ ರದ್ದು ಅನರ್ಹರಿಗಷ್ಟೆ-ಸಚಿವ ಮುನಿಯಪ್ಪ ಸ್ಪಷ್ಟನೆ

    ಬಿಪಿಎಲ್ ಕಾರ್ಡ್‌ ರದ್ದು ಅನರ್ಹರಿಗಷ್ಟೆ-ಸಚಿವ ಮುನಿಯಪ್ಪ ಸ್ಪಷ್ಟನೆ

    ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್‌ಗಳ ರದ್ದತಿ ಕುರಿತು ಕಳೆದ ಕೆಲವು ದಿನಗಳಿಂದ ಹಲವಾರು ಊಹಾಪೋಹಗಳು ನಡೆಯುತ್ತಿದ್ದರೂ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಜನರಲ್ಲಿ ಶಾಂತಿ ಮೂಡಿಸಿದೆ.

    ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಅವರು, ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ಹಂಚಿಕೆ ರದ್ದಾಗುವುದಿಲ್ಲ. ಅನರ್ಹರು ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದರೆ, ಅವರ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುತ್ತದೆ. ಆ ಕಾರ್ಡ್‌ಗಳನ್ನು ಎಪಿಎಲ್ (Above Poverty Line) ವರ್ಗಕ್ಕೆ ವರ್ಗಾಯಿಸಲಾಗುತ್ತದೆ, ಎಂದು ಹೇಳಿದರು.

    ಸಚಿವರ ಪ್ರಕಾರ, ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯದ ಒಟ್ಟು ಬಿಪಿಎಲ್ ಕಾರ್ಡ್‌ಗಳಲ್ಲಿ ಶೇಕಡಾ 15ರಷ್ಟು ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದುಪಡಿಸಲು ಸೂಚನೆ ನೀಡಲಾಗಿದೆ. ಈ ಕ್ರಮದಿಂದ ಯಾವುದೇ ನಿಜವಾದ ಫಲಾನುಭವಿಗಳಿಗೆ ನಷ್ಟವಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇನ್ನು, ಬಿಪಿಎಲ್ ಪಟ್ಟಿ ಅಡಿಯಲ್ಲಿ ಅನೇಕ ಅನರ್ಹರು ಸೇರಿದ್ದಾರೆಂಬ ಮಾಹಿತಿ ನಮಗೆ ಬಂದಿದೆ. ತಾಂತ್ರಿಕ ಪರಿಶೀಲನೆಯ ನಂತರ ಆ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸುತ್ತೇವೆ. ನಿಜವಾದ ಬಡ ಕುಟುಂಬಗಳ ಹಿತಾಸಕ್ತಿಯನ್ನು ಯಾವುದೇ ರೀತಿಯಲ್ಲಿಯೂ ಹಾನಿಗೊಳಿಸುವುದಿಲ್ಲ. ಇದಲ್ಲದೆ, ಆಹಾರ ಭದ್ರತೆ ಹಾಗೂ ಪೌಷ್ಟಿಕಾಂಶ ವಿತರಣೆಯತ್ತ ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನೂ ರೂಪಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಶೀಘ್ರದಲ್ಲೇ ಎಣ್ಣೆ, ಬೇಳೆ, ಕಾಳುಗಳು ಹಾಗೂ ಇತರ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಕಾರ್ಡ್‌ದಾರರಿಗೆ ವಿತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ, ಎಂದು ಮುನಿಯಪ್ಪ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಯುಕ್ತ ಕಾರ್ಯಯೋಜನೆಯಡಿ ಬಿಪಿಎಲ್ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಅನರ್ಹರು ಪಟ್ಟಿ ಹೊರಗೆ ಬಿದ್ದು, ನಿಜವಾದ ಬಡ ಕುಟುಂಬಗಳು ಹೆಚ್ಚಿನ ಸೌಲಭ್ಯ ಪಡೆಯಲಿವೆ ಎಂಬುದು ಸಚಿವರ ನಿಲುವಾಗಿದೆ.

    ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ರಾಜ್ಯವ್ಯಾಪಿಯಾಗಿ ನಡೆಯಲಿದ್ದರೂ, ಅದು ಕೇವಲ ಅನರ್ಹ ಕಾರ್ಡ್‌ಗಳಿಗೂ ಮಾತ್ರ ಅನ್ವಯಿಸುತ್ತದೆ. ಯಾವುದೇ ಹಕ್ಕುದಾರ ಕುಟುಂಬಗಳ ಕಾರ್ಡ್‌ಗಳು ರದ್ದಾಗುವುದಿಲ್ಲ ಎಂದು ಸಚಿವ ಮುನಿಯಪ್ಪ ಅವರ ಸ್ಪಷ್ಟನೆ ರಾಜ್ಯದ ಲಕ್ಷಾಂತರ ಫಲಾನುಭವಿಗಳಿಗೆ ಭರವಸೆ ನೀಡಿದಂತೆ ಆಗಿದೆ.

  • ಪುಷ್ಪಾ ಸ್ಟೈಲ್‌ನಲ್ಲಿ ಸ್ಮಗ್ಲಿಂಗ್ ಪ್ಲಾನ್-750 ಕೆ.ಜಿ. ಶ್ರೀಗಂಧ ವಶ

    ಪುಷ್ಪಾ ಸ್ಟೈಲ್‌ನಲ್ಲಿ ಸ್ಮಗ್ಲಿಂಗ್ ಪ್ಲಾನ್-750 ಕೆ.ಜಿ. ಶ್ರೀಗಂಧ ವಶ

    ಕರ್ನಾಟಕದ ಶ್ರೀಗಂಧವು ವಿಶ್ವಪ್ರಸಿದ್ಧ. ಅದರ ಸುಗಂಧ ಮತ್ತು ಔಷಧೀಯ ಗುಣಗಳ ಕಾರಣದಿಂದಾಗಿ ವಿದೇಶಗಳಲ್ಲಿ ಇದರ ಬೇಡಿಕೆ ಅಪಾರವಾಗಿದೆ. ಆದರೆ ಇದೇ ಬೇಡಿಕೆ ಅಕ್ರಮ ಕಟಾವು ಮತ್ತು ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ಕಾನೂನು ಬಿಗಿಗೊಳಿಸಿದ್ದರೂ, ಲಾಭದಾಸೆಯೆಡೆಗೆ ಕಣ್ಣಿಟ್ಟ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

    ಪುಷ್ಪ ಸಿನಿಮಾದಲ್ಲಿ ನೀವು ನೋಡಿದಂತೆ ರಕ್ತಚಂದನ ಕಳ್ಳಸಾಗಣೆ ಹೇಗೆ ನಡೆಯುತ್ತದೋ, ಅದೆ ರೀತಿ ಈಗ ನೈಜ ಜೀವನದಲ್ಲಿಯೂ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ ಘಟನೆಯೊಂದು ಇದಕ್ಕೆ ನಿದರ್ಶನವಾಗಿದೆ ಎನ್ನಬಹುದು. ಈ ಬಾರಿ ಕಳ್ಳರು ಈರುಳ್ಳಿ ಮೂಟೆಯೊಳಗೆ ಶ್ರೀಗಂಧದ ತುಂಡುಗಳನ್ನು ಮರೆಮಾಡಿ ಸಾಗಿಸುತ್ತಿದ್ದರು!

    ಆಂಧ್ರಪ್ರದೇಶದ ಕರ್ನೂಲ್‌ನಿಂದ ಬೆಂಗಳೂರಿನತ್ತ ಬರುತ್ತಿದ್ದ ವ್ಯಾನ್‌ನಿಂದ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಿದ್ದಾಪುರ ಪೊಲೀಸರು ವ್ಯಾನ್‌ನ್ನು ತಡೆದು ಪರಿಶೀಲಿಸಿದಾಗ, ಮೊದಲ ನೋಟಕ್ಕೆ ಇದು ಸಾಮಾನ್ಯ ಈರುಳ್ಳಿ ಸಾಗಾಟವೆಂದು ಕಂಡಿತು. ಆದರೆ ತಪಾಸಣೆ ವೇಳೆ ಈರುಳ್ಳಿ ಚೀಲಗಳ ಅಡಿಯಲ್ಲಿ ಮರೆಮಾಡಲಾಗಿದ್ದ 18 ಮೂಟೆಗಳಲ್ಲಿ ಸುಮಾರು 750 ಕೆ.ಜಿ. ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.

    ಆಂಧ್ರದ ಸಿರಾಜ್ ಎಂಬಾತ ಈ ದೊಡ್ಡ ಅಕ್ರಮ ಚಟುವಟಿಕೆಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ತನ್ನ ತಂಡದವರಾದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್ ಮತ್ತು ರಾಮ್ ಭೂಪಾಲ್ ಜೊತೆ ಸೇರಿ, ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸಿ, ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು. ನಂತರ ಬೆಂಗಳೂರಿನ ಅಕ್ರಮ ಡೀಲರ್‌ಗಳ ಮೂಲಕ ಶ್ರೀಗಂಧವನ್ನು ವಿದೇಶಗಳಿಗೆ ವಿಶೇಷವಾಗಿ ಚೀನಾಗೆ ಕಳುಹಿಸುವ ಯೋಜನೆ ಮಾಡಿಕೊಂಡಿದ್ದರು ಎನ್ನಲಾಗಿದೆ.

    ಸಿದ್ದಾಪುರ ಠಾಣಾ ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸಿ ಈ ಕಳ್ಳರ ಕೃತ್ಯವನ್ನು ಪತ್ತೆಹಚ್ಚಿದರು. ಕಳ್ಳಸಾಗಣೆಗಾರರನ್ನು ಸ್ಥಳದಲ್ಲೇ ಬಂಧಿಸಿ, ವ್ಯಾನ್‌ ಸೇರಿದಂತೆ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 750 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳ ಮೌಲ್ಯ ಲಕ್ಷಾಂತರ ರೂ.ಗಳಲ್ಲಿ ಅಂದಾಜಿಸಲಾಗಿದೆ. ಪೊಲೀಸರು ಈಗ ಈ ಅಕ್ರಮ ಜಾಲದ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಡೀಲರ್ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.

    ಈ ಪ್ರಕರಣದಿಂದ ಸುವಾಸನೆಯ ಶ್ರೀಗಂಧದ ಹಿಂದೆ ಅಡಗಿರುವ ಅಕ್ರಮದ ದುರ್ವಾಸನೆ ಮತ್ತೆ ಹೊರಬಿದ್ದಂತಾಗಿದೆ.

  • ಕೆಆರ್‌ಎಸ್ ಡ್ಯಾಂ ಮೂರನೇ ಬಾರಿ ಭರ್ತಿ-ಕಾವೇರಿ ವಿವಾದಕ್ಕೆ ತೆರೆ

    ಕೆಆರ್‌ಎಸ್ ಡ್ಯಾಂ ಮೂರನೇ ಬಾರಿ ಭರ್ತಿ-ಕಾವೇರಿ ವಿವಾದಕ್ಕೆ ತೆರೆ

    ಕರ್ನಾಟಕದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯವು ಈ ವರ್ಷ ಇತಿಹಾಸ ಸೃಷ್ಟಿಸಿದೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಸಂಪೂರ್ಣವಾಗಿ ಭರ್ತಿಯಾಗಿ, 93 ವರ್ಷಗಳ ನಂತರ ಹೊಸ ದಾಖಲೆ ನಿರ್ಮಾಣವಾಗಿದೆ. ಈ ಬಾರಿ ವರುಣನ ಕೃಪೆಯಿಂದ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ತಮಿಳುನಾಡು ಮತ್ತು ಕರ್ನಾಟಕದ ನಡುವಿನ ನೀರು ಹಂಚಿಕೆ ವಿವಾದವೂ ಪ್ರಕೃತಿಯೇ ಬಗೆಹರಿಸಿದೆ ಎನ್ನುವಂತಾಗಿದೆ.

    ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳು ಅಕ್ಟೋಬರ್ ತಿಂಗಳಲ್ಲೇ ಮತ್ತೆ ಭರ್ತಿಯಾಗಿವೆ. ಒಟ್ಟು 115 ಟಿಎಂಸಿ ನೀರು ಸಂಗ್ರಹವಿದ್ದು, ಇದರಿಂದ ರಾಜ್ಯದಾದ್ಯಂತ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗಿದೆ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು “ಇದು ವರುಣನ ಆಶೀರ್ವಾದ” ಎಂದು ಹೇಳಿದ್ದಾರೆ.

    ಸರ್ವೋಚ್ಚ ನ್ಯಾಯಾಲಯದ 2018ರ ಆದೇಶದ ಪ್ರಕಾರ, ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈ ವರ್ಷ ಜೂನ್‌ನಿಂದ ಅಕ್ಟೋಬರ್ ವರೆಗೆ ಈಗಾಗಲೇ 273.426 ಟಿಎಂಸಿ ನೀರು ಹರಿದು ಹೋಗಿದೆ — ಅಂದರೆ ನಿಗದಿತ ಪ್ರಮಾಣಕ್ಕಿಂತ 135.412 ಟಿಎಂಸಿ ಹೆಚ್ಚಾಗಿದೆ!

    ಜೂನ್ ತಿಂಗಳಲ್ಲಿ 9.19 ಟಿಎಂಸಿಗೆ ಬದಲಿಗೆ 42.256 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿಗೆ ಬದಲಿಗೆ 103.514 ಟಿಎಂಸಿ ನೀರು ಹರಿಯಿತು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೂಡ ಹೆಚ್ಚುವರಿ ನೀರಿನ ಹರಿವು ಮುಂದುವರಿದಿದೆ. ಇದರ ಪರಿಣಾಮ, ಈ ವರ್ಷ ಕಾವೇರಿ ವಿವಾದ ಪ್ರಕೃತಿಯೇ ಬಗೆಹರಿಸಿದಂತಾಗಿದೆ.

    ಕೆಆರ್‌ಎಸ್‌ನಿಂದ ಹೊರಹೊಮ್ಮುವ ನೀರಿನ ಒಂದು ಪ್ರಮುಖ ಭಾಗವನ್ನು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಬಳಸಲಾಗುತ್ತದೆ. ವರ್ಷಕ್ಕೆ ಸುಮಾರು 31 ಟಿಎಂಸಿ ನೀರು ಬೆಂಗಳೂರಿಗೆ ಬೇಕಾಗುತ್ತದೆ. ಈಗಾಗಲೇ ಜಲಾಶಯಗಳು, ಕೆರೆಗಳು ಹಾಗೂ ಸಣ್ಣ ನೀರಾವರಿ ಯೋಜನೆಗಳ ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಈ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    “ಈ ವರ್ಷ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಬೀದರ್‌ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ಎಲ್ಲೆಡೆ ಕೆರೆಗಳು ಮತ್ತು ಜಲಾಶಯಗಳು ತುಂಬಿ ತುಳುಕುತ್ತಿವೆ. ಜನರಿಗೂ, ಜಾನುವಾರುಗಳಿಗೂ ನೀರಿನ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ,” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ಕೆಆರ್‌ಎಸ್ ಜಲಾಶಯವು 1932ರಲ್ಲಿ ನಿರ್ಮಾಣವಾದಾಗಿನಿಂದ 93 ವರ್ಷಗಳಲ್ಲಿ ಕೇವಲ 16 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿಲ್ಲ. ಈ ವರ್ಷ ಮಾತ್ರ ಮೂರು ಬಾರಿ ಭರ್ತಿಯಾಗಿ ದಾಖಲೆ ಬರೆದಿದೆ. ಜೂನ್‌ನಲ್ಲಿ ಮೊದಲ ಬಾರಿ, ಅಕ್ಟೋಬರ್‌ನ ಎರಡನೇ ವಾರದಲ್ಲಿ ಎರಡನೇ ಬಾರಿ, ಮತ್ತು ಅಕ್ಟೋಬರ್ ಮೂರನೇ ವಾರದಲ್ಲಿ ಮೂರನೇ ಬಾರಿ ಗರಿಷ್ಠ ಮಟ್ಟ ತಲುಪಿದೆ.

    ನೀರಿನ ಬಗ್ಗೆ ವರ್ಷಾವರ್ಷ ಉಂಟಾಗುತ್ತಿದ್ದ ಕಾವೇರಿ ವಿವಾದಕ್ಕೂ ಪ್ರಕೃತಿಯೇ ಪರಿಹಾರ ಕಂಡುಕೊಂಡಂತಾಗಿದೆ. ಬರುವ ಬೇಸಿಗೆಯಲ್ಲಿ ಬೆಂಗಳೂರಿಗರು ನೀರಿನ ಕೊರತೆಯಿಂದ ಬಳಲುವ ಪ್ರಶ್ನೆಯೇ ಇಲ್ಲ. ವರುಣನ ಆಶೀರ್ವಾದದ ಈ ವರ್ಷ, ಕರ್ನಾಟಕ ನಿಜವಾಗಿಯೂ ನೀರಿನ ಸಮೃದ್ಧಿಯ ರಾಜ್ಯವಾಗಿ ಮೆರೆಯುತ್ತಿದೆ.

  • ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ 7 ಪರಿಣಾಮಕಾರಿ ವ್ಯಾಯಾಮಗಳ ಪಟ್ಟಿ

    ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ 7 ಪರಿಣಾಮಕಾರಿ ವ್ಯಾಯಾಮಗಳ ಪಟ್ಟಿ

    ಇತ್ತೀಚಿನ ದಿನಗಳಲ್ಲಿ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೃದಯಾಘಾತ, ಹೈಬಿಪಿ, ಹೈಕೋಲೆಸ್ಟ್ರಾಲ್, ಮತ್ತು ಡಯಾಬಿಟಿಸ್ ಮುಂತಾದ ಸಮಸ್ಯೆಗಳು ಯುವಕರಲ್ಲಿಯೂ ಹೆಚ್ಚಾಗುತ್ತಿವೆ. ಈ ಪರಿಸ್ಥಿತಿಯಲ್ಲಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳವಾದ ಮತ್ತು ಪರಿಣಾಮಕಾರಿ ವ್ಯಾಯಾಮಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

    ಹೃದಯ ಆರೋಗ್ಯವನ್ನು ಸುಧಾರಿಸಲು 7 ಪರಿಣಾಮಕಾರಿ ವ್ಯಾಯಾಮಗಳು :

    1.ಚುರುಕಾದ ನಡಿಗೆ (Brisk Walking): 

    ಪ್ರತಿದಿನ 30 ನಿಮಿಷಗಳ ಕಾಲ ಚುರುಕಾದ ನಡಿಗೆ ಮಾಡುವುದರಿಂದ ರಕ್ತ ಸಂಚರಣೆ ಸುಧಾರಿಸುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯದ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    2.ಈಜು (Swimming): 

    ಈಜು ಮಾಡುವುದರಿಂದ ಹೃದಯದ ಸ್ನಾಯುಗಳು ಬಲಪಡುತ್ತವೆ ಮತ್ತು ರಕ್ತ ಸಂಚರಣೆ ಸುಧಾರಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

    3.ಯೋಗ (Yoga): 

    ಯೋಗವು ದೇಹ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪ್ರಾಣಾಯಾಮ ಮತ್ತು ಧ್ಯಾನದಂತಹ ಯೋಗ ಅಭ್ಯಾಸಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

    4.ಸೈಕ್ಲಿಂಗ್ (Cycling): 

    ಸೈಕ್ಲಿಂಗ್ ಮಾಡುವುದರಿಂದ ಹೃದಯದ ಸ್ನಾಯುಗಳು ಬಲಪಡುತ್ತವೆ, ರಕ್ತ ಸಂಚರಣೆ ಸುಧಾರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 20 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

    5.ನೃತ್ಯ (Dance): 

    ನೃತ್ಯ ಮಾಡುವುದರಿಂದ ಹೃದಯದ ಕಾರ್ಯಕ್ಷಮತೆ ಸುಧಾರಿಸುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕೈಗಳನ್ನು ಮೇಲಕ್ಕೆತ್ತಿ ನೃತ್ಯ ಮಾಡುವುದರಿಂದ ಹೃದಯಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ.

    6.ವ್ಯಾಯಾಮಗಳು (Home Workouts): 

    ಜಿಮ್‌ಗೆ ಹೋಗದೇ ಮನೆಯಲ್ಲಿ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಉದಾಹರಣೆಗೆ, ಸ್ಕ್ವಾಟ್, ಪುಷ್-ಅಪ್, ಸ್ಟೆಪ್ ಟಚ್, ಗ್ಲೂಟ್ ಬ್ರಿಡ್ಜ್ ಮುಂತಾದ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಬಹುದು.

    7.ತೈ ಚಿ (Tai Chi): 

    ತೈ ಚಿ ಒಂದು ಚೀನೀ ಯೋಚನೆಯ ಪ್ರಕಾರದ ವ್ಯಾಯಾಮವಾಗಿದೆ. ಇದು ಶಾಂತ ಚಲನೆಗಳು ಮತ್ತು ಉಸಿರಾಟ ನಿಯಂತ್ರಣವನ್ನು ಒಳಗೊಂಡಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಹೃದಯ ಆರೋಗ್ಯಕ್ಕೆ ಇನ್ನಷ್ಟು ಸಲಹೆಗಳು: 

    ಪ್ರತಿದಿನ 150 ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮಗಳನ್ನು ಮಾಡುವುದನ್ನು American Heart Association ಶಿಫಾರಸು ಮಾಡುತ್ತದೆ.

    ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ, ಧೂಮಪಾನದಿಂದ ದೂರವಿರುವುದು, ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮುಖ್ಯ.

    ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು, ಪ್ರತಿದಿನವೂ ಚುರುಕಾದ ನಡಿಗೆ ಅಥವಾ ಇತರ ವ್ಯಾಯಾಮಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

    ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮೇಲಿನ ವ್ಯಾಯಾಮಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ದೀರ್ಘಕಾಲಿಕ ಆರೋಗ್ಯವನ್ನು ಸಾಧಿಸಬಹುದು.