Author: Satyakam NewsDesk

  • ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ:*
    ನಗರ, ಗ್ರಾಮ ಮನೆ ಬೆಳಗಬೇಕಾದ ಜೆಸ್ಕಾಂ ವಿದ್ಯುತ್ ಶಕ್ತಿ ಪೂರೈಸುವ ಕಂಬಗಳು, ಟಿಸಿಗಳು ಜೀವ ತೆಗೆಯುವ ರಕ್ಕಸ ಶಕ್ತಿಯಾಗಿ ಬಾಯಿ ತೆರೆದು ನಿಂತಿರುವ ಅಪಾಯಕಾರಿ ಜಿಲ್ಲೆಯ ಶಹಾಪುರ ನಗರದ ತುಂಬ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿವೆ.

    ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಮತಕ್ಷೇತ್ರವಾದ ಶಹಾಪೂರ ತಾಲೂಕಿನಲ್ಲಿ ಮತ್ತು ವಿಶೇಷವಾಗಿ ಶಹಾಪುರ ನಗರದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳ ಕಂಬಗಳು ಅಳವಡಿಸಿರುವ ರೀತಿ ಸ್ಥಿತಿ ನೋಡಿದರೆ ಇವು ವಿದ್ಯುತ್ ಶಕ್ತಿ ನೀಡುವ ಕಂಬಗಳೋ ಅಥವಾ ಶಕ್ತಿ ಕಿತ್ತು ಸಾವು ದಯಪಾಲಿಸುವ ಯಮಕಂಭಗಳೋ ಎಂಬ ಅನುಮಾನ ಬರದೇ ಇರದು.

    ವಿದ್ಯುಚ್ಛಕ್ತಿಯು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿದೆ, ವಿದ್ಯುತ್ ಮೇಲೆಯೇ ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೆವೆ.ಪ್ರತಿದಿನ ಸಾವಿರಾರು ಕಾರ್ಯಗಳಿಗೆ ನಮಗೆ ಇದು ಬೇಕಾಗುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ವಿದ್ಯುತ್ ಅತ್ಯಂತ ಅಪಾಯಕಾರಿ ಎಂಬುದಕ್ಕೆ ಇತ್ತೀಚಿಗೆ ಬೆಂಗಳೂರಿನ ಕಾಡು ಗೋಡಿಯಲ್ಲಿ ಸಂಭವಿಸಿದ ತಾಯಿ-ಮಗು ದುರಂತ ಸಾವು ಜ್ವಲಂತ ಸಾಕ್ಷಿ. ಅಂತಹ ಘಟನೆಗಳು ಶಹಾಪುರದಲ್ಲೂ ಸಂಭವಿಸುವ ಸಾಧ್ಯತೆಯ ಪ್ರಮಾಣ ಅತಿ ಗರಿಷ್ಟ ಮಟ್ಟದಲ್ಲಿದೆ.

    ಹೌದು ಶಹಾಪುರದಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೆ ಅಪಾಯಕಾರಿ ಸ್ಥಿತಿಯಲ್ಲಿ ತೀರ ರಸ್ತೆಗೆ ಹೊಂದಿಕೊಂಡು ಇರುವ ವಿದ್ಯುತ್ ಕಂಬಗಳು, ಟಿಸಿಗಳ ಕಂಬಗಳು ಕೈಗೆಟುಕುವ ಅಂತರದಲ್ಲಿ ತಂತಿಗಳನ್ನು ಜೋತು ಬೀಳಿಸಿಕೊಂಡು ಬಲಿಗೆ ಬಾಯಿ ತೆರೆದು ನಿಂತ ರಕ್ಕಸನ ನೋಡಿದಂತಾಗುತ್ತದೆ.

    ಉದಾಹರಣೆಗೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇಂತಹ ಅಪಾಯಕಾರಿ ವಿದ್ಯುತ್ ಕಂಬದ ಕೆಳಗೆ ವ್ಯಾಪಾರ ಮಾಡುತ್ತಿದ್ದಾರೆ ಒಂದು ವೇಳೆ ಅಚಾನಕ್ಕಾಗಿ ಅಲ್ಲಿನ ವಿದ್ಯುತ್ ಕಂಬದಲ್ಲಿನ ಕೇಬಲ್ ಅವರ ಮೇಲೆ ಬಿದ್ದರೆ ಅಲ್ಲೊಂದು ಬೆಂಗಳೂರಿನ ತಾಯಿ ಮಗುವಿನ ಘಟನೆ ನಡೆಯುವ ಸಾಧ್ಯತೆ ಪ್ರಮಾಣ ಮಾತ್ರ ಶೇ. 90ಕ್ಕೂ ಹೆಚ್ಚು ಎಂದು ಹೇಳಬೇಕು.

    ಅತ್ತ ನಗರಸಭೆ ಎದುರು ಇರುವ ಆಟೋ ಸ್ಟ್ಯಾಂಡ್ ನ ಬಳಿ ಕೂಡ ವಿದ್ಯುತ್ ಕಂಬಕ್ಕೆ ಯಾವುದೇ ಸುರಕ್ಷತೆ ಇಲ್ಲ, ಅಲ್ಲದೆ ಲಕ್ಷ್ಮಿನಗರ, ಕನ್ಯಕೂಳೂರ ಅಗಸಿ ಸೇರಿದಂತೆ ಪ್ರಮುಖ ಕಡೆ ವಿದ್ಯುತ್ ಕಂಬಕ್ಕೆ ತಂತಿಬೆಲಿ ಕೂಡ ಹಾಕಿಲ್ಲ,

    ಕೇಬಲ್ ಗೊಂಚಲು:
    ವಿದ್ಯುತ್ ಕಂಬಗಳಲ್ಲಿ ಇತರ ಕೇಬಲ್‌ಗಳು ರಾಶಿ ಇವೆ. ಬಹುತೇಕ ಕಂಬಗಳಲ್ಲಿ ವಿದ್ಯುತ್ ತಂತಿಗಳ ನಡುವೆಯೇ ನೆಟ್‌ವರ್ಕ್ ಇನ್ನಿತರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹಲವು ಕಂಬಗಳಲ್ಲಿ ಕೇಬಲ್ ಸುರಳಿ ಸುತ್ತಿ ಕೈಗೆಟಕುವಂತೆ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಕೇಬಲ್ ತುಂಡಾಗಿ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಬಿದ್ದಿವೆ. ವಿದ್ಯುತ್ ತಂತಿಗೆ ಸ್ಕಿನ್ ಆಗಿರುವ ಕೇಬಲ್ ತಾಕಿದರೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಯಾವುದೋ ಕೇಬಲ್ ಎಂದು ತುಳಿದವರ ಪ್ರಾಣಕ್ಕೆ ಯರವಾಗುವುದು ಶತಸಿದ್ಧ.

    ಈ ರೀತಿಯ ಕೇಬಲ್‌ಗಳನ್ನು ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲು ಇಲ್ಲವೇ ಸೂಕ್ತ ಪ್ರತಿಬಂಧಕೋಪಾಯ ಕೈಗೊಳ್ಳಬೇಕಾದ ಇಲಾಖೆ ಕುಂಭಕರ್ಣ ನಿದ್ದೆಗೆ ಜಾರಿದೆ.

    ಇನ್ನು ಹಲವಾರು ಕಡೆ ಫುಟ್‌ಪಾತ್‌ನಲ್ಲೇ ಬೃಹತ್ ಗಾತ್ರದ ವಿದ್ಯುತ್ ಉಪಕರಣ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವುಗಳ ಸುತ್ತ ತಂತಿ ಬೇಲಿ ಮಾದರಿಯನ್ನು ಅಳವಡಿಸಿಲ್ಲ. ಟ್ರಾನ್ಸ್ಫಾರ್ಮ್ರಗಳು ಕೆಲವೆಡೆ ಕೈಗೆಟುಕುವಷು ತಳಮಟ್ಟದಲ್ಲಿವೆ. ಇವುಗಳಿಂದಲೂ ಅಪಾಯ ಸಂಭವಿಸುವ ಸಾಧ್ಯತೆ ತೀರ ಹೆಚ್ಚು.

    ವಿದ್ಯುತ್ ಸುರಕ್ಷತೆಯ ಅಗತ್ಯತೆ ಅನಿವಾರ್ಯತೆಯನ್ನ ಅಧಿಕಾರಿಗಳು ಮನಗಾಣಬೇಕಿದೆ. ಆದರೆ ಅವರಿಗೆ ಬಡಿದೆಬ್ಬಿಸಲು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ದರ್ಶನಾಪೂರ ಅವರ ಸ್ವಮತಕ್ಷೇತ್ರದ ವಾಸ್ತವದ ಕಡೆ ಗಮನಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದೆ ಇಲ್ಲದಿದ್ದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ ಎಂಬುದು ಪತ್ರಿಕೆ ಕಳಕಳಿಯಾಗಿದೆ. ಯಾವ ಕ್ರಮ ಕೈಗೊಳ್ಳುವೋರು ಕಾದು ನೋಡಬೇಕಿದೆ.

  • ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕರಾದ ಶರಣ ಗೌಡ ಪಾಟೀಲ್ ಪಾಳಾ ಇವರು ಇಂದು ಮದ್ಯಾನ ಸೇಡಂ ರೋಡ್ ಎರ್ ಪೋರ್ಟ ಹತ್ತಿರ ತಮ್ಮ ಗೆಳೆಯನ ಕಾರಲ್ಲಿ ಕೊಂಕನಹಳ್ಳಿಗೆ ಹೋಗುವಾಗ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.
    ಪೋಲಿಸರಿಗೆ ಈಗಾಗಲೆ ದೂರು ನೀಡಿದ್ದು ಶರಣ ಗೌಡ ಇವರು ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಅಗಲಿದ ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಸೆರಿ ಐವರು ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಅಗಲಿದ ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಸೆರಿ ಐವರು ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನುಡಿ ನಮನ ಸಲ್ಲಿಸಿ, ಅವರೆಲ್ಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಚೇತನಗಳ ಸ್ಮರಣಾರ್ಥ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.

    ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ನುಡಿನಮನ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಅಗಲಿದ ಹಿರಿಯ ಪತ್ರಕರ್ತರರುಗಳು ಕೆಯುಡಬ್ಲ್ಯೂಜೆ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.

    ಜಿನ್ನಾರ್ ಪತ್ರಿಕೋದ್ಯಮದಲ್ಲಿ
    ಶಿಸ್ತಿನ ಸಿಪಾಯಿ: ಬಿ.ಕೆ ರವಿ

    ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ್ ರಾವ್ ಅವರ ಬಗ್ಗೆ ಮಾತಾಡಿದ ಕೊಪ್ಪಳ ವಿ.ವಿ ಕುಲಪತಿ ಪ್ರೊ.ಬಿ.ಕೆ.ರವಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಜಿ.ಎನ್.ರಂಗನಾಥ್ ರಾವ್ ಅವರ ಕೊಡುಗೆ ಅನನ್ಯ. ಪ್ರಜಾವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಸಾಪ್ತಾಹಿಕವನ್ನು ಅವರು ವಿಭಿನ್ನವಾಗಿ ರೂಪಿಸಿದರಲ್ಲದೆ, ಪತ್ರಿಕೋದ್ಯಮದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿಯೂ ಜನಪ್ರಿಯರಾದರು ಎಂದು ತಮಗೆ ಮಾರ್ಗದರ್ಶನ ನೀಡಿದ ನೆನಪನ್ನು ಮೆಲುಕು ಹಾಕಿದರು. ಅಗಲಿದ ಹಿರಿಯರ ನೆನಪಿನಲ್ಲಿ ಕೆಯುಡಬ್ಲ್ಯೂಜೆ ಕಾರ್ಯಕ್ರಮ ರೂಪಿಸಿ ಮಾದರಿ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು. ಸಚ್ಚಿದಾನಂದಮೂರ್ತಿ ಅವರು ದೆಹಲಿಯಲ್ಲಿ ಮೂರು ದಶಕಗಳ ಕಾಲ ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸಿದರು ಎಂದರು.

    ಸಚ್ಚಿ ಅವರ ಪ್ರತಿಭೆ ಅನನ್ಯ:
    ಎಚ್. ಬಿ. ದಿನೇಶ್:

    ದೆಹಲಿ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಚ್ಚಿದಾನಂದ ಮೂರ್ತಿ ಸದಾ ಸ್ನೇಹಪರರಾಗಿದ್ದರು. ರಾಜ್ಯದ ಅಭಿವೃದ್ಧಿ ಯೋಜನೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದರು ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಹೇಳಿದರು.

    ಸಿ.ಆರ್.ಕೆ. ಚಳುವಳಿಗಳ ನೇತಾರ: ಸಿದ್ಧನಗೌಡ ಪಾಟೀಲ್

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸಿ.ಆರ್.ಕೃಷ್ಣರಾವ್ ಅವರು ಚಳುವಳಿಗಳ ನೇತಾರ ಆಗಿದ್ದರು ಎಂದು ನವಕರ್ನಾಟಕ ಪಬ್ಲಿಕೇಶನ್ಸ್ ನ “ಹೊಸತು” ಮಾಸಿಕದ ಸಂಪಾದಕ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು. ಸಿ.ಆರ್.ಕೆ. ರಾವ್ ಅವರು ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ‌ ಕೊಂಡಿಯಾಗಿ ಪ್ರಧಾನ ಪಾತ್ರ ವಹಿಸಿಕೊಂಡಿದ್ದರು ಎಂದೂ ಗುಣಗಾನ ಮಾಡಿದರು.

    ಮಣೂರ ಅವರ ಪತ್ರಿಕಾ ರಂಗದ ಸೇವೆ ಅನನ್ಯ: ಬಿ.ವಿ.ಮಲ್ಲಿಕಾರ್ಜುನಯ್ಯ

    ಹಿರಿಯ ಪತ್ರಕರ್ತರಾಗಿದ್ದ ಪಿ.ಎಂ.ಮಣೂರ ಅವರು ಬಹಳಷ್ಟು ಪತ್ರಕರ್ತರನ್ನು ಬೆಳೆಸುವ ಮೂಲಕ, ಪತ್ರಿಕೋದ್ಯಮದಲ್ಲಿ ಅಜಾತಶತ್ರುವಾಗಿದ್ದರು ಎಂದು ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
    ವಿವಿಧ ವಿಷಯಗಳಲ್ಲಿ ಪ್ರಭುತ್ವ ಹೊಂದಿದ್ದ ಮಣೂರರವರ ಪತ್ರಿಕಾ ಸೇವೆ ನಿಜಕ್ಕೂ ಸ್ಮರಣೀಯ ಎಂದರು.

    ಕೆ.ಪ್ರಹ್ಲಾದರಾವ್ ಉತ್ತಮ ಸಂಘಟಕರಾಗಿದ್ದರು: ಪಿ.ಶೇಷಚಂದ್ರಿಕಾ
    ಕೋಲಾರವು ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರ ಕರ್ಮಭೂಮಿ ಆಗಿದ್ದರೂ, ಜಿಲ್ಲಾ ಮಟ್ಟದ ಪತ್ರಕರ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಸರ್ಕಾರ ಅಧಿಕಾರಿಗಳ ಬಳಿಗೆ ಹೋಗುವ ಮೂಲಕ ಉತ್ತಮ ಸಂಘಟಕರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ ಪಿ.ಶೇಷಚಂದ್ರಿಕಾ ನುಡಿದರು.

    ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ ಅವರು ಮಾತನಾಡಿ, ತಾವು ಬೆಂಗಳೂರುಬಂದ ಸಂದರ್ಭದಲ್ಲಿ ಇವರೆಲ್ಲರ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.
    ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಜೆ.ಎಂ.ಚಂದುನವರ, ಸಾಗ್ಗರೆ ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಚೇತನಗಳ ಗುಣಗಾನ ಮಾಡಿದರು.

    ವಿತರಕರಿಬ್ಬರ ಸಾವಿಗೆ ಸಂತಾಪ:
    ಾಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಾದ ಕುಮಾರ್ ಮತ್ತು ಮನೋಜ್ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಅವರುಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ್ ಸೇರಿದಂತೆ ಸಂಘದ ಹಲವಾರು ಸದಸ್ಯರು ನುಡಿನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು .

    ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಸಂಘದ ಖಜಾಂಚಿ ವಾಸುದೇವ ಹೊಳ್ಳ ಅವರು ವಂದನಾರ್ಪಣೆ ಮಾಡಿದರು.

  • ಕನ್ನಡ ರಾಜ್ಯೋತ್ಸವದ ಮೆರೆವಣಿಗೆ ವೇಳೆ ತಪ್ಪಿದ ಭಾರಿ ಅನಾಹುತ | ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ಕನ್ನಡ ರಾಜ್ಯೋತ್ಸವದ ಮೆರೆವಣಿಗೆ ವೇಳೆ ತಪ್ಪಿದ ಭಾರಿ ಅನಾಹುತ | ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ವಡಗೇರಾ:68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲವು ಸಂಘಟನೆ ಹಾಗೂ ಖಾಸಗಿ ಶಾಲೆಗಳ ವತಿಯಿಂದ ವಡಗೇರಾ ಪಟ್ಟಣ್ಣದಲ್ಲಿ ಮೆರವಣಿಗೆ ನಡೆಸಲಾಯಿತು, ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷದಿಂದಾಗಿ ಕೂದಲೆಳೆ ಅಂತರದಲ್ಲಿ ಶಾಲೆ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ನಡೆಯಲಿದ್ದ ಘೋರ ದುರಂತವೊಂದು ತಪ್ಪಿದಂತಾಗಿದೆ.

    ಪಟ್ಟಣ್ಣದಲ್ಲಿ ಮೆರವಣಿಗೆ ಮುಗಿಸಿಕೊಂಡು ಕಾರ್ಯಕ್ರಮದತ್ತ ತೆರಳುತ್ತಿದ್ದ ವೇಳೆ ಪಟ್ಟಣ್ಣದ ವಾಲ್ಮೀಕಿ ವೃತ್ತದ ಬಳಿ ಇದ್ದ ವಿದ್ಯುತ್ ಕಂಬದ ವಿದ್ಯುತ್ ತಂತಿ ಹರಿದು ಟ್ರ್ಯಾಕ್ಟರ್ ಟ್ರಾಲಿಯಲ್ಲಿದ ಭುವನೇಶ್ವರಿ ತಾಯಿ ಭಾವಚಿತ್ರದ ಕಟ್ಟಿಗೆಯ ಮೇಲೆ ಬಿದ್ದಿದ್ದೆ, ಈ ವೇಳೆ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ಕೈದು ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದು, ತಕ್ಷಣ ಸ್ಥಳೀಯರು ವಿದ್ಯಾರ್ಥಿಗಳನ್ನು ಕೆಳಕ್ಕಿಳಿಸಿ ರಕ್ಷಿಸುವ ಮೂಲಕ ಕೆಇಬಿಯವರಿಗೆ ಕರೆ ಮಾಡಿ ವಿದ್ಯುತ್ ಕಂಬದ ಪವರ್ ತೆಗೆಯುವಂತೆ ತಿಳಿಸಿದ್ದಾರೆ.

    ಒಂದು ವೇಳೆ ಆ ವಿದ್ಯುತ್ ತಂತಿ ವಿದ್ಯಾರ್ಥಿಗಳ ಮೇಲೆ ಬಿದ್ದು, ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾಗಿದ್ದರೆ ಇದಕ್ಕೆಲ್ಲಾ ಯಾರು ಹೊಣೆಯಾಗುತ್ತಿದ್ದರು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು,

    ಟ್ರ್ಯಾಕ್ಟರ್ ನಲ್ಲಿದ್ದ ಮಕ್ಕಳು ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದ್ದೂ, ಟ್ರ್ಯಾಕ್ಟರ್ ಚಾಲಕ ವಿದ್ಯುತ್ ಕಂಬದ ತಂತಿಗಳು ಮೇಲೆ ಇರುವುದನ್ನು ಗಮನಿಸದೆ ಚಾಲನೆ ಮಾಡಿರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

  • ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಪೊಲೀಸರಿಂದ ಹಿಗ್ಗಾಮುಗ್ಗ ಥಳಿತ| ಪ್ರಯಾಣಿಕರ ಆಕ್ರೋಶ

    ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಪೊಲೀಸರಿಂದ ಹಿಗ್ಗಾಮುಗ್ಗ ಥಳಿತ| ಪ್ರಯಾಣಿಕರ ಆಕ್ರೋಶ

    ಯಾದಗಿರಿ: ನಗರದ ರೈಲ್ವೆ ನಿಲ್ದಾಣದಲ್ಲಿ ಮದ್ಯ ಸೇವಿಸಿ ಮಲಗಿದ್ದ ಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

    ರೈಲ್ವೆ ನಿಲ್ದಾಣದಲ್ಲಿ ಕುಡಿದು ಮಲಗಿದ್ರೆ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಮೊದಲಿಗೆ ರೈಲ್ವೆ ಪೋಲಿಸರು ಬುದ್ದಿ ಮಾತು ಹೇಳಿದ್ದಾರೆ, ಆದರೂ ಪೊಲೀಸರ ಮಾತು ಕೇಳದೇ ಅಲ್ಲೇ ಮಲಗಿದ್ದ ಪ್ರಯಾಣಿಕರನ್ನು ಕಂಡು ಸಿಟ್ಟಿಗೆದ್ದ ಆರ್‌ಪಿಎಫ್ ಪೊಲೀಸರು ಕುಡಿದು ಮಲಗಿದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಕಚೇರಿಯ ಕೊಠಡಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ,

    ಇದರಿಂದ ರೊಚಿಗೆದ್ದ ಪ್ರಯಾಣಿಕರು ಆರ್‌ಪಿಎಫ್ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದಲ್ಲದೆ ಪರಿಸ್ಥಿತಿ ತಿಳಿಗೊಳಿಸಲು ಹೋದ ಇನ್ನೊಬ್ಬ ಆರ್‌ಪಿಎಫ್ ಪೊಲೀಸ್ ಪೇದೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಮ್ ನಲ್ಲಿ ಕೊಡಿ ಹಾಕಿ ಹೊಡೆಯಲು ಕಾರಣವೇನು? ಕಾಲಿಗೆ ಬಿದ್ದರೂ ಬಿಡಲಿಲ್ಲ, ಅಂತಹ ತಪ್ಪು ನಾವೇನು ಮಾಡಿದ್ದೇವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

  • ಕೆಕೆಆರ್‌ಟಿಸಿ ಬಸ್ ಗೆ ಬೆಂಕಿ ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಲಿಕ ಸ್ಥಗಿತ

    ಕೆಕೆಆರ್‌ಟಿಸಿ ಬಸ್ ಗೆ ಬೆಂಕಿ ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಲಿಕ ಸ್ಥಗಿತ

    ಕಲಬುರಗಿ,ಅ.30
    ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದ್ದು, ಸೋಮವಾರ ಕಾರ್ಯಚರಣೆಯಲ್ಲಿದ್ದ ಕರ್ನಾಟಕಕ್ಕೆ ಸೇರಿದ ಕೆಕೆಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ ಪರಿಣಾಮ ಅಂತರ ರಾಜ್ಯ ಬಸ್ ಕಾರ್ಯಾಚರಣೆಯನ್ನು ತಾತ್ಮಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ತಿಳಿಸಿದ್ದಾರೆ

    ಸೋಮವಾರ ಬೀದರ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಬಸ್ ಸಂಖ್ಯೆ ಕೆ.ಎ-38 ಎಫ್-1201 ಬಸ್ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರಾಜ್ಯ ಕಾರ್ಯಾಚರಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ಸ್ಥಳೀಯ ಪೊಲೀಸರ ನೆರವಿನಿಂದ
    ಬಸ್ ನಲ್ಲಿದ್ದ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ತಲುಪುವ ಸ್ಥಳಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಕಾರ್ಯಚರಣೆಯಲ್ಲಿರುವ ಬಸ್ ಗಳನ್ನು ಹತ್ತಿರ ಪೊಲೀಸ್ ಠಾಣೆ, ಬಸ್ ಡೀಪೋ ಗಳಲ್ಲಿ ಪಾರ್ಕ್ ಮಾಡಲು ಸಂಸ್ಥೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಮನೆಯ ಮುಂದೆ ರಂಗೋಲಿ, ದೀಪ ಹಚ್ಚುವಂತೆ ಜಿಲ್ಲಾಧಿಕಾರಿಗಳ ಮನವಿ

    ಮನೆಯ ಮುಂದೆ ರಂಗೋಲಿ, ದೀಪ ಹಚ್ಚುವಂತೆ ಜಿಲ್ಲಾಧಿಕಾರಿಗಳ ಮನವಿ

    ಕಲಬುರಗಿ,ಅ.30: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬರುವ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಮನೆಯ ಮುಂದೆ ರಂಗೋಲಿ, ಹಣತೆಯ ದೀಪ ಹಚ್ಚುವ ಮೂಲಕ ಕನ್ನಡ ಪ್ರೇಮ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಅಂದು ಬೆಳಿಗ್ಗೆ ಮನೆಯ ಮುಂದೆ
    ಕೆಂಪು-ಹಳದಿ ಬಣ್ಣದ ರಂಗೋಲಿಯಲ್ಲಿ
    “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂದು ವಾಕ್ಯವನ್ನು ಬಿಡಿಸಬೇಕು. ಇನ್ನು ಸಂಜೆ 7 ಗಂಟೆಗೆ ಮನೆ, ಕಚೇರಿ, ಅಂಗಡಿ-ಮುಂಗಟ್ಟುಗಳ ಮುಂದೆ ಹಣತೆ ದೀಪ ಹಚ್ಚಿ ಕನ್ನಡದ ಜ್ಯೋತಿ ಬೆಳಗಿಸಬೇಕೆಂದು ಅವರು ಕೋರಿದ್ದಾರೆ.

    ಇನ್ನು ರಾಜ್ಯೋತ್ಸವ ದಿನ ಸಂಜೆ 5 ಗಂಟೆಗೆ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಗಳ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವವನ್ನು ಆಚರಿಸಬೇಕು ಎಂದು ಡಿ.ಸಿ. ಅವರು ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.

    ಕರ್ನಾಟಕ ನಾಮಕರಣದ‌ ಸುವರ್ಣ ಸಂದರ್ಭ ಇದಾಗಿರುವುದರಿಂದ ರಾಜ್ಯೋತ್ಸವ ದಿನಾಚರಣೆ ಅರ್ಥಪೂರ್ಣವಾಗಿ ಅಚರಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು ರಾಜ್ಯೋತ್ಸವ ದಿನಾಚರಣೆ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಜರುಗುವಂತೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

    *ನಾಡಗೀತೆಗೆ ಗೌರವ ಸಲ್ಲಿಸಿ:*

    ರಾಜ್ಯೋತ್ಸವ ದಿನದಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುತ್ತಿದೆ. ಆ ಸಮಯದಲ್ಲಿ ಜಿಲ್ಲೆಯ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡ ಗೀತೆಗೂ ಗೌರವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

  • ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ | ಪರೀಕ್ಷಾರ್ಥಿಗಳು ಅಸಮಾಧಾನ

    ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ | ಪರೀಕ್ಷಾರ್ಥಿಗಳು ಅಸಮಾಧಾನ

    ಯಾದಗಿರಿ: ಪಿಎಸ್‌ಐ ಪರೀಕ್ಷಾ ಹಗರಣ ಮಾಸುವ ಮುನ್ನವೇ, ಈಗ ಅಂತಹದ್ದೇ ಮತ್ತೊಂದು ಹಗರಣವೊಂದು ಯಾದಗಿರಿಯಲ್ಲಿ ಬಯಲಾಗಿದೆ. ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಯುವಕ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಸಹ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆದ ಆರೋಪಿಯನ್ನು ಅಫಜಲಪುರದ ಸೊನ್ನಾ ಗ್ರಾಮದ ಪುಟ್ಟು ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಆರೋಪಿ ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಆತ ನಕಲಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.

    ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಹಾಗೂ ಎಸ್ಪಿ ಜಿ.ಸಂಗೀತಾ ದೌಡಾಯಿಸಿ, ಕೆಲಹೊತ್ತು ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಇಂದು ಮತ್ತು ನಾಳೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡುವ ಮಾಹಿತಿ ಎಸ್ ಪಿ ಗೆ ಬಂದಿದೆ. ಈ ಹಿನ್ನಲೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಇಲ್ಲಿವರಗೇ ಮೂವರನ್ನು ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.

    ರಾಜ್ಯಾದ್ಯಂತ 350 ಕೇಂದ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಸರಕಾರಿ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ನಾಳೆಯ ಕೂಡ ಪರೀಕ್ಷೆ ನಡೆಯಲಿದೆ,

    ಒಟ್ಟಾರೆಯಾಗಿ ಯಾದಗಿರಿಯಲ್ಲಿ ಐದಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ,

  • ಸರ್ಕಾರಿ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ | ಸರಕಾರಿ ಕಛೇರಿಯ ಹಲವು ವಾಹನಗಳಿಗಿಲ್ಲ ಇನ್ಸೊರೆನ್ಸ್  ಆರ್.ಟಿ.ಓ ಅಧಿಕಾರಿಗಳ ಮೌನ| ಸಾರ್ವಜನಿಕರ ಆಕ್ರೋಶ

    ಸರ್ಕಾರಿ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ | ಸರಕಾರಿ ಕಛೇರಿಯ ಹಲವು ವಾಹನಗಳಿಗಿಲ್ಲ ಇನ್ಸೊರೆನ್ಸ್ ಆರ್.ಟಿ.ಓ ಅಧಿಕಾರಿಗಳ ಮೌನ| ಸಾರ್ವಜನಿಕರ ಆಕ್ರೋಶ

    ವರದಿ: ಕುದಾನ್ ಸಾಬ್
    ಯಾದಗಿರಿ: ಜನಸಾಮಾನ್ಯರಿಗೆ ಒಂದು ಕಾನೂನು, ಸರ್ಕಾರಿ ಅಧಿಕಾರಿಗಳಿಗೆ ಮತ್ತೊಂದು ಕಾನೂನು ಎನ್ನುವ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಉದ್ಭವಿಸಿದೆ. ವಿಮೆ ಮಾಡಿಸಿ ಅಂತ ಸಾರ್ವಜನಿಕರಿಗೆ ತಿಳಿಹೇಳುವ ಸರ್ಕಾರಿ ಅಧಿಕಾರಿಗಳೇ ತಾವು ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ವಾಹನಗಳಿಗೆ ವಿಮೆ ಮಾಡಿಸದೇ ನಿರ್ಲಕ್ಷ ತೋರುತ್ತಿದ್ದಾರೆ.

    ಜನಸಾಮಾನ್ಯರಿಗಾದ್ರೆ ಹೆಲ್ಮೆಟ್ ಇಲ್ಲ. ಸೀಟ್ ಬೆಲ್ಟ್ ಹಾಕಿಲ್ಲ. ಇನ್ಸುರೆನ್ಸ್ ಇಲ್ಲ, ಎಮಿಷನ್ ಟೆಸ್ಟ್ ಇಲ್ಲ, ಮಿರರ್ ಇಲ್ಲ ಅದಿಲ್ಲ-ಇದಿಲ್ಲ ಅಂತೆಲ್ಲಾ ಪೊಲೀಸರು ಕೇಸ್ ಮೇಲೆ ಕೇಸ್ ಹಾಕಿ ಜನ ಸಾಮಾನ್ಯರ ಬಳಿ ದಂಡದ ರೂಪದಲ್ಲಿ ಪೊಲೀಸರು ಸಾವಿರಾರು ರೂಪಾಯಿ ಹಣ ವಸೂಲಿ ಮಾಡ್ತಾರೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಹಲವು ಸರ್ಕಾರಿ ವಾಹನಗಳ ಇನ್ಸೂರೆನ್ಸ್ ಮುಗಿದು ಹಲವು ವರ್ಷಗಳೇ ಕಳೆದರೂ ಅಂತಹ ಅಧಿಕಾರಿಗಳ ವಿರುದ್ದ ಆರ್. ಟಿ. ಓ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿರುವ ಹಲವು ಸರ್ಕಾರಿ ವಾಹನಗಳು ವಿಮೆರಹಿತವಾಗಿದ್ದೂ, ಪಶು ಸಂಗೋಪನಾ ಇಲಾಖೆಯ ವಾಹನದ ಇನ್ಶೂರೆನ್ಸ್ ಮುಗಿದು ಒಂದೆರಡು ತಿಂಗಳಲ್ಲ ಬರೋಬ್ಬರಿ ಹನ್ನೆರಡು ವರ್ಷವಾಗಿದೆ. ಪೊಲೀಸ್ ಇಲಾಖೆಯ ಹಲವು ವಾಹನಗಳಿಗೆ ನಾಲ್ಕೈದು ವರ್ಷಗಳ ಹಿಂದೆಯೇ ಇನ್ಶೂರೆನ್ಸ್ ಮುಗಿದಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಸುತ್ತಿರುವ ವಾಹನದ ಇನ್ಶೂರೆನ್ಸ್ ಎರಡು ವರ್ಷಗಳ ಹಿಂದೆಯೇ ಮುಗಿದಿದೆ. ಇನ್ನೂ ಹಲವು ಇಲಾಖೆಯ ಅದೆಷ್ಟೋ ಸರ್ಕಾರಿ ವಾಹನಗಳಿಗೆ ಇದುವರೆಗೂ ವಿಮೆ ಮಾಡಿಸಿಲ್ಲ. ಹೀಗಾಗಿ ಸಾರ್ವಜನಿಕರು ಕಾನೂನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗಿರಬೇಕಿದ್ದ ಅಧಿಕಾರಿಗಳೇ ಕಾನೂನು ಉಲ್ಲಂಘಿಸುತ್ತಿದ್ದು ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು ಎಂದು ಸರ್ಕಾರಕ್ಕೆ ಪ್ರಶ್ನಿಸುವಂತಾಗಿದೆ.

    ವಾಹನಗಳ ತಪಾಸಣೆಗಾಗಿ ದಾರಿಯುದ್ಧಕ್ಕೂ ನಿಲ್ಲುವ ಅಧಿಕಾರಿಗಳು ಜನಸಾಮಾನ್ಯರ ವಾಹನಗಳ ದಾಖಲೆ ಕೇಳುವುದಕ್ಕೂ ಮೊದಲು, ಸರ್ಕಾರಿ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಅಧಿಕಾರಿಗಳ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಬಹುದಿತ್ತಲ್ಲವೇ ಎಂಬ ಪ್ರಶ್ನೆ ಜಿಲ್ಲೆಯ ಜನಸಾಮಾನ್ಯರಲ್ಲಿ ಮೂಡಿದೆ.

    ಒಟ್ಟಿನಲ್ಲಿ ಸರ್ಕಾರಿ ವಾಹನಗಳಿಗೆ ಇನ್ಸುರೆನ್ಸ್ ತುಂಬುವ ಮೂಲಕ ಜವಾಬ್ದಾರಿ ಮೆರೆಯಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು. ಸಾರ್ವಜನಿಕರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುವಂತಾಗಿದೆ. ಇನ್ನಾದ್ರೂ ಆರ್.ಟಿ.ಓ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಿ ವಾಹನಗಳಿಗೆ ವಿಮೆ ಮಾಡಿಸುವ ಎಚ್ಚರಿಕೆ ನೀಡುವ ಮೂಲಕ ನಿಯಮ ಉಲ್ಲಂಘಿಸುತ್ತಿರುವ
    ಅಧಿಕಾರಿಗಳಿಗೆ ಬ್ರೇಕ್ ಹಾಕುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.

    ಸತ್ಯಕಾಮ ರಿಯಾಲಿಟಿ ಚೆಕ್ ನಲ್ಲಿ ಕಂಡುಬಂದ ಇನ್ಶೂರೆನ್ಸ್ ಇಲ್ಲದ ವಾಹನಗಳು

    ಕೆಎ33ಜಿ0264
    ಕೆಎ33ಜಿ8008
    ಕೆಎ33ಜಿ0108
    ಕೆಎ33ಜಿ0182
    ಕೆಎ33ಜಿ0184
    ಕೆಎ33ಜಿ0134
    ಕೆಎ33ಜಿ0252
    ಕೆಎ33ಜಿ0067
    ಕೆಎ33ಜಿ0104 ಇದಲ್ಲದೇ ಇನ್ನೂ ಹಲವು ಇಲಾಖೆಯಲ್ಲಿನ ವಾಹನಗಳ ಇನ್ಶೂರೆನ್ಸ್ ಮುಗಿದೂ ಹಲವು ವರ್ಷಗಳಾಗಿವೆ.

  • ಅಕ್ರಮ ಸರಾಯಿ ಮಾರಾಟ ಮಾಲು ಜಪ್ತಿ ಪ್ರಕರಣ ದಾಖಲು

    ಅಕ್ರಮ ಸರಾಯಿ ಮಾರಾಟ ಮಾಲು ಜಪ್ತಿ ಪ್ರಕರಣ ದಾಖಲು

    ಬೀದರ : ಗಣೇಶ್ ಚತುರ್ಥಿಯ ಹಬ್ಬದ ನಿಮಿತ್ಯ ಬೀದರ್ ಜಿಲ್ಲಾಧಿಕಾರಿಗಳಾದ ಶ್ರೀ ಗೋವಿಂದ ರೆಡ್ಡಿ ಅವರು ಸರಾಯಿ ಮಾರಾಟ ನಿಷೇಧ ಘೋಷಣೆ ಮಾಡಿದ್ದರು. ಆದೇಶ ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡಿ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ ಆರೋಪಿಗಳ ಸ್ಟೋರಿ ಒಂದು ಬೆಳಕಿಗೆ ಬಂದಿದೆ.
    ಬೀದರ್ ನಗರದ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಖಚಿತ ವರದಿಯ ಮೇರೆಗೆ ವರಿಷ್ಠ ಪೊಲೀಸ್ ಅಧಿಕಾರಿ ಶ್ರೀ ಚನ್ನಬಸಣ್ಣ ಎಸ್ ಎಲ್ ಹಾಗೂ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ ರವರ ದಿವ್ಯ ಮಾರ್ಗದರ್ಶನದಲ್ಲಿ ಠಾಣೆ ಪ್ರಭಾರಿ ಪಿಐ ಶ್ರೀವಿಜಯಕುಮಾರ್, ಶ್ರೀಮತಿ ತಸ್ಲೀಮ್ ಸುಲ್ತಾನಾ ಪಿ ಎಸ್ ಐ, ಮುಖ್ಯಪೇದೆ ಹನುಮ ಗೌಡರು ಹಾಗೂ ಇತರ ಪೊಲೀಸ್ ಪೇದೆಗಳೊಂದಿಗೆ ಹಠಾತ್ತನೆ ದಾಳಿ ನಡೆಸಿ ವಿವಿಧ ನಮೂನೆಯ ಅಂದಾಜು ರೂಪಾಯಿ 83,553/- ಬೆಲೆಬಾಳುವ ಸರಾಯಿ ಮತ್ತು 13,000/- ರೂಪಾಯಿ ಬೆಲೆಬಾಳುವ ಎರಡು ಮೊಬೈಲ್ ಹೀಗೆ ಒಟ್ಟು ರೂಪಾಯಿ 96,553/- ಮೌಲ್ಯದ ಮಾಲನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆಯೊಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.