Author: Satyakam NewsDesk

  • ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಸ್ಪರ್ಧಾ ಮನೋಭಾವನೆ ಮೂಡಿಸಿ : ಶಾಸಕ ಕಂದಕೂರ

    ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಸ್ಪರ್ಧಾ ಮನೋಭಾವನೆ ಮೂಡಿಸಿ : ಶಾಸಕ ಕಂದಕೂರ

    
    
    
    ಸತ್ಯಕಾಮ ವಾರ್ತೆ ಯಾದಗಿರಿ:

    ಪ್ರಸಕ್ತ ದಿನಗಳಲ್ಲಿ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡುವುದು ಅವಶ್ಯಕವಾಗಿದೆ, ಈ ನಿಟ್ಟಿನಲ್ಲಿ ವಸತಿ ಶಾಲೆಗಳಲ್ಲಿ ಶಿಕ್ಷಕರು ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಸ್ಪರ್ಧಾ ಮನೊಭಾವನೆ ಮೂಡಿಸಿದಲ್ಲಿ ಮಾತ್ರ ಅವರಲ್ಲಿರುವ ಪ್ರತಿಭೆಗಳು, ಜ್ಞಾನ ವಿಕಾಸವಾಗುತ್ತದೆ ಎಂದು ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ ಪಟ್ಟರು.

    ಗುರುಮಿಠಕಲ್ ಮತಕ್ಷೇತ್ರದ ಕೊಟಗೇರಾ ಗ್ರಾಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ೨೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಡಾ. ಬಿ.ಆರ್ ಅಂಬೇಡ್ಕರ ವಸತಿ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು, ಉದ್ಯೋಗ ಸೃಷ್ಟಿಗೆ ಹೆಚ್ಚು ಗಮನ ನೀಡುತ್ತಿದ್ದೇನೆ, ಕಾರಣ ಗ್ರಾಮೀಣ ಭಾಗದ ಜನರು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

    ಇಂತಹ ಒಳ್ಳೆಯ ಪರಿಸರದಲ್ಲಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ, ಇಲ್ಲಿನ ಶಿಕ್ಷಕರು ಪರಿಸರ ಸ್ವಚ್ಚತೆ ಆದ್ಯತೆ ನೀಡುವ ಜೊತೆಗೆ ನಿಮಗೆ ತಂಗಲು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ, ಇಲ್ಲಿಯೇ ಎಲ್ಲರೂ ವಾಸ ಮಾಡಿ, ವಿಧ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಬೋಧನೆ ಮಾಡುವ ಜೊತೆಗೆ ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.

    ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ವಸತಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡಲಾಗುತ್ತಿದೆ, ಈ ಹಿಂದೆ ನಮ್ಮ ತಂದೆಯವರು ಶಾಸಕರಾಗಿದ್ದ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಶಾಲಾ ಕೋಣೆಗಳನ್ನು ಮಂಜೂರು ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರು, ಜಿಲ್ಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ, ನಾನು ಕೂಡ ಸರ್ಕಾರದ ಮೇಲೆ ನೇಮಕಕ್ಕೆ ಒತ್ತಡ ಹಾಕಿದ್ದೇನೆ, ಅಲ್ಲದೇ ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ೨ ಬಿಸಿಎಂ ವಸತಿ ನಿಲಯಗಳ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇನೆ ಎಂದರು.

    ನೆರೆಯ ಮೊಟನಳ್ಳಿ ಕ್ರಾಸ್ ಹತ್ತಿರ ಇರುವ ಮೋರಾರ್ಜಿ ವಸತಿ ಶಾಲೆ ದುರಸ್ತಿಗೆ ಆದಷ್ಟು ಬೇಗನೇ ಕ್ರಮ ಕೈಗೊಂಡು ವಿಧ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು,ಮತಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಸಾವಿರಾರು ಜನರು ಉದ್ಯೊಗ ಹರಸಿ ಬೃಹತ್ ನಗರಗಳಿಗೆ ವಲಸೆ ಹೋಗಿದ್ದಾರೆ, ಉನ್ನತ ಅಭ್ಯಾಸ ಮಾಡಿದ ನಮ್ಮ ಯುವಕರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ, ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ, ಕಡೆಚೂರ-ಬಾಡಿಯಾಲ ಭಾಗದಲ್ಲಿ ೩ ಸಾವಿರ ಎಕರೆ ಕೈಗಾರಿಕಾ ಭೂಮಿಯಿದೆ, ನಾನೂ ಈಗಾಗಲೇ ಅವರನ್ನು ಭೇಟಿಯಾಗಿ ಇಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ವಿವರಿಸಿ, ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಅದ್ಯತೆ ನಿಡಬೇಕೆಂದು ಮನವಿ ಮಾಡಿದ್ದೇನೆ, ಅವರಿಂದಲೂ ಕೂಡ ಸಕರಾತ್ಮಕ ಬೆಂಬಲ ದೊರೆಯಲಿದೆ ಎಂದು ಹೇಳಿದರು.

    ಈ ಹಿಂದೆ ಶಾಸಕರಾಗಿದ್ದ ನಮ್ಮ ತಂದೆ ದಿ. ನಾಗನಗೌಡ ಕಂದಕೂರ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದರು, ಅವರ ಜೊತೆಯಲ್ಲಿ ನಾನೂ ಕೂಡ ಜನರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸಿದ ಪರಿಣಾಮ ನೀವೂ ನನ್ನನ್ನೂ ಶಾಸಕನಾಗಿ ಆಯ್ಕೆ ಮಾಡಿದ್ದೀರಿ, ಈ ಭಾಗದ ಹಳ್ಳಿಗಳ ಪ್ರಗತಿಗೆ ಆದ್ಯತೆ ಮೇರೆಗೆ ನಾನೂ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ವೇದಿಕೆ ಮೇಲೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ, ಬಿಆರ್‌ಸಿ ಮಲ್ಲಿಕಾರ್ಜುನ, ಮೋಟನಳ್ಳಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷಿö್ಮ, ಪ್ರಾಂಶುಪಾಲೆ ರಮಾಭಾಯಿ, ಗುರುಮಿಠಕಲ್ ಪಟ್ಟಣ ಪಂಚಾಯತ ಅಧ್ಯಕ್ಷ ಪಾಪಣ್ಣ ಮನ್ನೆ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನೀರಟ್ಟಿ, ರಾಮಣ್ಣ ಕೋಟಗೇರಾ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ದೀಪಕ್ ಬೆಳ್ಳಿ, ರವಿ ಪಾಟೀಲ್, ಗಿರಿನಾಥರಡ್ಡಿ ಚಿಂತಗುAಟಾ, ಅಶೋಕ ಕೋಟಗೇರಾ, ಬಂದಪ್ಪಗೌಡ ಲಿಂಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಶನಿವಾರ ಜಿಲ್ಲೆಗೆ ಗೃಹ ಸಚಿವರ ಆಗಮನ.?

    ಶನಿವಾರ ಜಿಲ್ಲೆಗೆ ಗೃಹ ಸಚಿವರ ಆಗಮನ.?

    *ಸತ್ಯಕಾಮ ವಾರ್ತೆ ಯಾದಗಿರಿ:*
    ಕಳೆದ ವರ್ಷದಲ್ಲೇ ಉದ್ಘಾಟನೆಯಾಗಬೇಕಿದ್ದ ನಗರ ಪೊಲೀಸ್ ಠಾಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದೂ.?, ಇದೇ ಶನಿವಾರದಂದು ಡಾಕ್ಟರ್ ಜಿ ಪರಮೇಶ್ವರ್ ರವರು ನಗರದ ಗಾಂಧಿ ವೃತದಲ್ಲಿರುವ ನೂತನ ನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜೂ.22ರಂದು ಜಿಲ್ಲೆಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಂದು ಸವ್ಯಸಾಚಿ ಡಾಕ್ಟರ್ ಜಿ ಪರಮೇಶ್ವರ್ ಯುವ ಬ್ರಿಗೇಡ್ ನ ನೂತನ ಕಛೇರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಿದ್ದಾರೆ, ತದನಂತರ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಗೃಹ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಬೆನ್ನಲ್ಲೇ ಬುಧವಾರ ತಡರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆಂದು ಮೂಲಗಳು ಖಚಿತಪಡಿಸಿವೆ..

    ಇನ್ನು ಗೃಹ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಬಗ್ಗೆ ಯಾದಗಿರಿ ಪೊಲೀಸ್ ಇಲಾಖೆ ಅಧಿಕೃತವಾಗಿ ತಿಳಿಸಿಲ್ಲ.

  • ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ

    ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ


    ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ

    ಬೆಂಗಳೂರು: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಶೀಘ್ರದಲ್ಲಿ ಸಮ್ಮೇಳನಕ್ಕೆ ದಿನಾಂಕ ನೀಡುವುದಾಗಿ ಭರವಸೆ ನೀಡಿದರು.

    ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ ಅವರು ಮಾತನಾಡಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ, ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಮತ್ತು ಮಾಲೀಕರ ಸಂಘವು ನಮ್ಮದಾಗಿದೆ. ರಾಜ್ಯಾದ್ಯಂತ ನಮ್ಮ ಸಂಘದ ಜಿಲ್ಲಾ ಘಟಕಗಳು ಪತ್ರಿಕೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ತಮ್ಮ ನೇತೃತ್ವದ ಸರ್ಕಾರದ ವತಿಯಿಂದ ನೀಡಿದ ಮತ್ತು ನೀಡುತ್ತಿರುವ ಎಲ್ಲಾ ರೀತಿಯ ಸಹಕಾರವನ್ನು ಸ್ಮರಿಸುತ್ತಿವೆ. ನಮ್ಮ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನವನ್ನು  ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ನಡೆಯಲಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ  ಹೆಚ್.ಕೆ. ಪಾಟೀಲ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದರು.

    ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು, ಉಪ ಸಂಪಾದಕರು, ಪ್ರಧಾನ ಸಂಪಾದಕರು, ವ್ಯವಸ್ಥಾಪಕ ಸಂಪಾದಕರು, ಆವೃತ್ತಿಗಳ ಸಂಪಾದಕರು ಭಾಗವಹಿಸಲಿದ್ದಾರೆ ಎಂದರು.

    ಈ ಸಮ್ಮೇಳನದಲ್ಲಿ ಮಾಧ್ಯಮ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಪತ್ರಿಕಾ ಸಂಪಾದಕರಿಗೆ ಮತ್ತು ಪತ್ರಿಕಾ ವಿತರಕರಿಗೆ ಮತ್ತು ಸಂಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಈ ಸಮ್ಮೇಳನದಲ್ಲಿ ಸುಮಾರು ಎರಡು ಸಾವಿರಕ್ಕೂ ಮೇಲ್ಪಟ್ಟು ಪತ್ರಿಕಾ ಸಂಪಾದಕರು ಮತ್ತು ಅವರ ಕುಟುಂಬದ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಂಜುನಾಥ ಬಸಪ್ಪ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿಗಳಾದ ಚನ್ನ ಬಸವ, ಖಜಾಂಚಿ ಖಾನ್ ಸಾಬ್ ಮೆಮೂನ್, ಕಾರ್ಯದರ್ಶಿಗಳಾದ ವಿ.ಅನೂಪ್ ಕುಮಾರ್, ಸಹ ಕಾರ್ಯದರ್ಶಿ ಡಾ.ಕೆ.ಎಸ್ ಸ್ವಾಮಿ,  ಸೇರಿದಂತೆ ಮತ್ತಿತರರು ಇದ್ದರು.

  • ಬಿರುಕು ಬಿಟ್ಟ ವಿದ್ಯುತ್ ಕಂಬ: ಜೀವ ಭಯದಲ್ಲಿ ಅಂಗನವಾಡಿ ಮಕ್ಕಳು

    ಬಿರುಕು ಬಿಟ್ಟ ವಿದ್ಯುತ್ ಕಂಬ: ಜೀವ ಭಯದಲ್ಲಿ ಅಂಗನವಾಡಿ ಮಕ್ಕಳು

    ಶಿಥಿಲಗೊಂಡ ಕಂಬ ದುರಸ್ತಿ ಕಾರ್ಯಕ್ಕೆ ಮುಂದಾಗದೆ ಕ್ಯಾರೇ ಎನ್ನದ ಅಧಿಕಾರಿಗಳು

    *ಸತ್ಯಕಾಮ ವಾರ್ತೆ ಯಾದಗಿರಿ:*
    ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಆವರಣದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬ ಬಿರುಕು ಬಿಟ್ಟು, ಈಗಲೋ ಆಗಲೋ ಬಿಳುವ ಹಂತದಲ್ಲಿದ್ದೂ, ಅಂಗನವಾಡಿ ಮಕ್ಕಳ ಜೀವ ರಕ್ಷಣೆಗೆ ಬೆಲೆ ಇಲ್ಲದಂತಾಗಿದೆ.

    ಹೌದು ಯಾದಗಿರಿ ಪಟ್ಟಣದ ಹತ್ತಿಕುಣಿ-ಸೇಡಂ ರಸ್ತೆ ಸಮೀಪದ ಹಳೆ ಜಾಕ್ವಾಲ್ ಮುಸ್ಲಿಂಪೂರದಲ್ಲಿರುವ ಅಂಗನವಾಡಿ ಕೇಂದ್ರ-2ರಲ್ಲಿನ ಆವರಣದಲ್ಲಿ ಬಿರುಕು ಬಿಟ್ಟ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬ ಕಾಣಬಹುದು, ಅಲ್ಲದೆ ಕಂಬದ ಸುತ್ತಲೂ ತಂತಿ ಬೇಲಿ ಅಳವಡಿಸದೇ ಇರುವುದರಿಂದ ಮಕ್ಕಳು ಆಟವಾಡುತ್ತ ಹೋಗಿ ಕಂಬ ಮುಟ್ಟಿದರೆ ಅಪಾಯ ಸಂಭವಿಸುವ ಸ್ಥಿತಿ ಇದೆ.

    ಈ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬದಲ್ಲಿ ಸಿಮೆಂಟ್ ಉದುರಿದ್ದು ಒಳಭಾಗದ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಬಲವಾದ ಗಾಳಿ ಬೀಸಿದರೆ ಕಂಬ ನೆಲಕ್ಕೊರಗುವ ಸಾಧ್ಯತೆಗಳಿವೆ. ಕೂಡಲೇ ಈ ಕಂಬ ಬದಲಾಯಿಸಲು ಜೆಸ್ಕಾಂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

    ವಿದ್ಯುತ್ ಕಂಬ ದುರಸ್ಥಿ ಮಾಡುವಂತೆ ವರ್ಷದ ಹಿಂದೆಯೇ ಅಧಿಕಾರಿಗಳಿಗೆ ತಿಳಿಸಿದ್ದೆವೆ ಆದರೆ ಕಂಬದಲ್ಲಿನ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದಾರೆ ಹೊರತು ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.

    ಇತ್ತೀಚಿಗೆ ಜಿಲ್ಲೆಯಲ್ಲಿ ಬಿರುಸಿನ ಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿದ ಘಟನೆಗಳು ಜೆಸ್ಕಾಂ ಮುಂದಿದ್ದರೂ ಕೂಡ ಅಂಗನವಾಡಿ ಕೇಂದ್ರದ ಆವರಣದಲಿರುವ ವಿದ್ಯುತ್ ಪರಿವರ್ತಕ ಕಂಬಗಳನ್ನು ತೆರುವುಗೊಳಿಸದೇ ಜೆಸ್ಕಾಂ ಅಧಿಕಾರಿಗಳು ಹಸುಗೂಸು ಮಕ್ಕಳ ಜೀವನದಲ್ಲಿ ಆಟವಾಡುತ್ತಿರುವುದು ವಿಪರ್ಯಾಸವಾಗಿದೆ.

    ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಂಡು ಅನಾಹುತವನ್ನು ತಪ್ಪಿಸಲು ಮುಂದಾಗುವರಾ.? ಎಂಬುದನ್ನು ಕಾದು ನೋಡಬೇಕಿದೆ.

  • ಸತ್ಯಕಾಮ ವರದಿಗೆ ಸ್ಪಂದಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು

    ಸತ್ಯಕಾಮ ವರದಿಗೆ ಸ್ಪಂದಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು

    ಕಲಬುರ್ಗಿ: ಇತ್ತೀಚೆಗೆ ಕಳೆದ ತಿಂಗಳು ದಿನಾಂಕ 30 ರಂದು ನಮ್ಮ ಪತ್ರಿಕೆಯಲ್ಲಿ ಅನಧಿಕೃತ ಕೇಬಲ್ ತೆರವು ಯಾವಾಗ ಎಂಬ ವರದಿಗೆ ಇಂದು ಮುಹೂರ್ತ ಬಂದಿದೆ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಯಾದಗಿರಿ ಅವರು ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ ಎಂದು ತಮ್ಮ ಉಪ ವಿಭಾಗವಾರು ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ಕೇಬಲ್ ಅಳವಡಿಸಿದವರಿಗೆ ಕಂಪನಿ ನಿಯಮ ಸಂಸಾರ ಸೂಕ್ತ ಕ್ರಮ ಕೈಗೊಂಡು ಹಾಗೂ ಇಲ್ಲಿವರೆಗೆ ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸಲು ಪಾವತಿಸಿದ ಶುಲ್ಕವನ್ನು ಮತ್ತು ಶುಲ್ಕದ ವಿವರ ತಮ್ಮ ಕಚೇರಿಗೆ ತಕ್ಷಣ ಸಲ್ಲಿಸಲು ಸೂಚಿಸುತ್ತಾರೆ.

  • ಆರ್. ಕೆ ಗೆಲುವು ಖಚಿತವೆಂದ ಸಮೀಕ್ಷೆ

    ಆರ್. ಕೆ ಗೆಲುವು ಖಚಿತವೆಂದ ಸಮೀಕ್ಷೆ

    ಸತ್ಯಕಾಮ ವಾರ್ತೆ ಕಲಬುರ್ಗಿ:
    ಕರ್ನಾಟಕ ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಂದಿದ್ದೂ, ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಬಾರಿ ಅಂತರದಲ್ಲಿ ಗೆಲುವಿನ ಪಟಾಕಿ ಸಿಡಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿ ಮಾಡಿವೆ.

    2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿ ಬಿಜೆಪಿಯ ಬಾವುಟವನ್ನು ಹಾರಿಸಿದ್ದ ಉಮೇಶ್ ಜಾಧವ್ ಅವರು ಈ ಬಾರಿಯೂ ಗೆಲುವು ಸಾಧಿಸಿ ಕಲಬುರ್ಗಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸದಿಂದ ಮತ್ತೆ ಹೈಕಮಾಂಡ್ ಉಮೇಶ್ ಜಾಧವ್ ಅವರನ್ನು ಕಣಕ್ಕೆ ಇಳಿಸಿದೆ.

    ಆದರೆ ಇದೆಲದ್ದಕ್ಕೂ ತೆರೆ ಎಳೆದಿರುವ ಚುನಾವಣೋತ್ತರ ಸಮೀಕ್ಷೆಗಳು ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುಧ್ಧ ಬಾರಿ ಅಂತರದಿಂದ ಗೆಲುವು ಸಾಧಿಸಲಿದ್ದೂ ಕಳೆದ ಬಾರಿ ಬಿಜೆಪಿಗೆ ಮತ ಚಲಾಯಿಸಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳನ್ನು ಮೆಚ್ಚಿ ಈ ಬಾರಿ ರಾಧಾಕೃಷ್ಣ ದೊಡ್ಡಮನಿ ಅವರ ಕೈ ಹಿಡಿದಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಸಮೀಕ್ಷೆಗಳ ಬಹಿರಂಗಗೊಳಿಸಿವೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮೇ 07 ರಂದು ಎರಡನೇ ಹಂತದ ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಕಾಂಗ್ರೆಸ್ಸ್ ಅಭ್ಯರ್ಥಿಯಾಗಿ ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಸ್ಪರ್ಧಿಸಿದ್ದರು.

    ಈ ಬಾರಿ ನಾನೇ ಗೆಲ್ಲುವೇ ಎಂದು ಪಣತೊಟ್ಟಿರುವ ಇಬ್ಬರೂ ಅಭ್ಯರ್ಥಿಗಳು ಜೂನ್ 04 ರ ಫಲಿತಾಂಶಕ್ಕೆ ಕಾಯಬೇಕಿದೆ.

  • ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ : ಇನ್ನೂ ಆಕ್ಟಿವ್

    ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ : ಇನ್ನೂ ಆಕ್ಟಿವ್

    ಜಿಲ್ಲಾಧಿಕಾರಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸಾರ್ವಜನಿಕರಿಗೆ ರಿಪ್ಲೈ ಮಾಡಿದ ಖದೀಮರು

    ಸತ್ಯಕಾಮ ವಾರ್ತೆ
    ಯಾದಗಿರಿ ಜಿಲ್ಲಾಧಿಕಾರಿ ಡಾ ಸುಶೀಲಾ ಬೀ ಅವರ ನಕಲಿ ಫೇಸ್ ಖಾತೆ ತೆರೆಯಲಾಗಿದೆ, ಅಲ್ಲದೇ ಈ ಖಾತೆಯಿಂದ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾಡಳಿತದಲ್ಲಿನ ಅಧಿಕಾರಿ ವರ್ಗದವರಿಗೆ ಖದೀಮರು ಮೆಸೇಜ್ ಕಳಿಸುತ್ತಿದ್ದಾರೆ.

    ಡೆಪ್ಯೂಟಿ ಕಮಿಷನ್ ಯಾದಗಿರಿ ಐಎಎಸ್ (ಸುಶೀಲಾ ಬಿ) ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿರುವ ಖದೀಮರು ಜಿಲ್ಲಾಧಿಕಾರಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಯೇ ಆ ಮೇಸೆಜ್ ಗಳಿಗೆ ರಿಪ್ಲೇ ಮಾಡಿದ್ದಾರೆ ಎಂದು ಸಾರ್ವಜನಿಕರು ನಂಬಿದ್ದಾರೆ, ಅಲ್ಲದೇ ಜಿಲ್ಲಾಧಿಕಾರಿ ಅವರಿಗೆ ಫೋಟೋ ಸ್ಟೇಟಸ್ ಇಟ್ಟುಕೊಂಡಿದ್ದ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡ ಕದೀಮರು ಅದನ್ನು ಜಿಲ್ಲಾಧಿಕಾರಿಯವರ ನಕಲಿ ಫೇಸ್ಬುಕ್ ಖಾತೆಯಲ್ಲಿ ಸ್ಟೇಟಸ್ ಇಟ್ಟಿದ್ದಾರೆ.

    ಜಿಲ್ಲಾಧಿಕಾರಿಗಳ ಹೆಸರು ಮತ್ತು ಡಿಪಿ ಯಲ್ಲಿ ಪೋಟೋ ಬಳಸಿಕೊಂಡು ವಂಚನೆ ಮಾಡಲು ಯತ್ನಿಸುವ ಪ್ರಕರಣಗಳು ಕಂಡು ಬಂದ ಮೇರೆಗೆ ಸ್ವತಹ ಜಿಲ್ಲಾಧಿಕಾರಿಯೇ ಸೈಬರ್ ಕ್ರೈಂ ನಲ್ಲಿ ಪ್ರಕರಣ ದಾಖಲಿಸಿರುವುದಾಗಿ ಮೊನ್ನೆಯಷ್ಟೇ ಹೇಳಿಕೊಂಡಿದ್ದರು. ಅದರೆ ಇದುವರೆಗೂ ಪ್ರಕರಣವನ್ನು ಭೇದಿಸದ ಸೈಬರ್ ಕ್ರೈಂ ಪೊಲೀಸರು ಜಿಲ್ಲಾಧಿಕಾರಿ ಹೆಸರಿನ ನಕಲಿ ಖಾತೆಯನ್ನು ಪತ್ತೆ ಹಚ್ಚುವಲ್ಲಿ ಆಸಕ್ತಿ ತೋರುತ್ತಿಲ್ಲ.

    ಆದಷ್ಟು ಬೇಗನೆ ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲಾಧಿಕಾರಿ ಖಾತೆಯಿಂದ ಮೋಸ ಹೋಗದಂತೆ ತಡೆಯಬೇಕಾಗಿದೆ.

  • ಅನಧಿಕೃತ ಕೇಬಲ್ ತೆರವಿಗೆ  ಮುಹೂರ್ತ ಯಾವಾಗ..?

    ಅನಧಿಕೃತ ಕೇಬಲ್ ತೆರವಿಗೆ ಮುಹೂರ್ತ ಯಾವಾಗ..?

    ಜನಪ್ರತಿನಿಧಿಗಳು, ಜೆಸ್ಕಾಂ ಅಧಿಕಾರಿಗಳು ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವರೇ?

    *ಸತ್ಯಕಾಮ ವಾರ್ತೆ ಯಾದಗಿರಿ:*
    ಜಿಲ್ಲೆಯಲ್ಲಿ ಅನದಿಕೃತ ಕೇಬಲ್ ಗಳ ಹಾವಳಿ ಮಿತಿ ಮೀರಿದ್ದು, ಕಳೆದ ಶನಿವಾರ ಸತ್ಯಕಾಮ ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ. ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನದಿಕೃತವೆಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗಿ ನಾಲ್ಕೈದು ಐದು ದಿನ ಕಳೆದರೂ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಯಾಗಲಿ, ನಗರಸಭೆ ಆಯುಕ್ತರಾಗಲಿ(ಪ್ರ), ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಿದ್ದಾರೆ..?

    ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಮ್ಮ ಪ್ರತಿನಿಧಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದಕ್ಕೆ ಕಾರಣವೇನಿರಬಹುದು.?

    ಕಾನೂನು ಬದ್ಧವಾಗಿ ಒಎಫ್‌ಸಿ ಅಳವಡಿಕೆಗೆ ನಿರ್ದಿಷ್ಟ ಶುಲ್ಕಗಳನ್ನು ಪಾವತಿಸದೆ, ಅನುಮತಿ ಪಡೆಯದೇ ಕೇಬಲ್ ಗಳನ್ನು ಅಳವಡಿಸಲಾಗಿದೆ. ಕೇಬಲ್ ಗಳಿಂದ ನಗರದ ಸೌಂದ ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆಯೇ ವಿನಾ ಇದರಿಂದ ಸರ್ಕಾರದ ಬೊಕ್ಕಸ ತುಂಬಬೇಕಿದ್ದ ಲಕ್ಷಾಂತರ ರೂಪಾಯಿ ಗುಳುಂ ಆಗುತ್ತಿದೆ.

    ನಗರದಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಪಾದಚಾರಿ ಮಾರ್ಗದಲ್ಲಿ ಮರಗಳು, ಕಂಬಗಳು ಜೊತೆಗೆ ಒಎಫ್‌ಸಿ, ಫೋನ್, ಟಿ.ವಿ ಹೀಗೆ ವಿವಿಧ ಕೇಬಲ್‌ಗಳು ನೆಲಕ್ಕೆ ಬಿದ್ದಿವೆ. ಕೆಲವು ಕಡೆ ತುಂಡಾಗಿ ಬಿದ್ದಿದ್ದರೆ, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಕೆಲವು ಕಡೆ ವಿದ್ಯುತ್ ಕಂಬಗಳಲ್ಲಿನ ಕೇಬಲ್ ಬಂಡಲ್ ಗಳು ಜೋತುಬಿದಿದ್ದು,
    ರಸ್ತೆ ಮೇಲೆ ವಾಹನ ಸವಾರರು ಸಂಚರಿಸುವಾಗ ಯಾವ ವಾಹನ/, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತವೆಯೋ ಹೇಳಲಾಗದು.

    ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಧಿಕಾರಿಗಳು ಹಾಗೂ ಜನ್ರತಿನಿಧಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಪ್ರಮುಖವಾಗಿ ವಿದ್ಯುತ್ ಕಂಬದಲ್ಲಿನ ವಿಷಯಕ್ಕೆ ಸಂಬAಧಿಸಿದAತೆ ಜೆಸ್ಕಾಂ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು, ವಿದ್ಯುತ್ ಕಂಬದಿAದ ಸ್ವಲ್ಪ ವ್ಯತ್ಯಾಸವಾದರೂ ಜೀವಹಾನಿ ಸಂಭವಿಸುವ ಅಪಾಯವಿರುತ್ತದೆ. ಇನ್ನೂ ನಿರ್ಲಕ್ಷö್ಯವಹಿಸಿದಿದಲ್ಲಿ ಅದಕ್ಕೆ ಇಲಾಖೆಯೇ ಭಾರಿ ಬೆಲೆತೆತ್ತ ಬೇಕಾಗುತ್ತದೆ!

    ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಕಠಿಣ ಕ್ರಮ ವಹಿಸಿದರೆ ಮಾತ್ರ ಕೇಬಲ್ ಮಾಫಿಯಾವನ್ನು ನಿಯಂತ್ರಿಸಲು ಸಾಧ್ಯ. ಜನಜೀವನಕ್ಕೆ ತೊಂದರೆಯಾಗುವAತೆ ಕೇಬಲ್ ಅಳವಡಿಸಿದವರಿಗೆ ಶಿಕ್ಷೆಯಾದಾಗ ಮಾತ್ರ ಸಿಕ್ಕಸಿಕ್ಕಲ್ಲಿ ಕೇಬಲ್ ಅಳವಡಿಸುವುದು ಕಡಿಮೆಯಾಗಲಿದೆ. ಜನರು ದೂರುತ್ತಾರೆಂಬ ಕಾರಣಕ್ಕೆ ನಾಮಕೇವಾಸ್ತೆಗೆ ಅದನ್ನು ಪರಿಶೀಲನೆ, ನೋಟಿಸ್‌ಗಳು ನೀಡಿ ಕೈತೊಳೆದುಕೊಂಡು ಕುಳಿತಲ್ಲಿ ಅಕ್ರಮ ನಿಯಂತ್ರಿಸುವುದು ಕಷ್ಟ ಎಂಬುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ,

    ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು,ಜನಪ್ರತಿನಿಧಿಗಳು ದುರ್ಘಟನೆ ನಡೆದಾದ ಮೇಲೆ ಎಚ್ಚೆತ್ತುಕೊಳ್ಳುವವರಾ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ, ಇನ್ನು ಯಾವಾಗ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.

  • ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯ

    ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯ

    ಜಿಯೋ ಹೊರತು ಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ

    ಸತ್ಯಕಾಮ ವಾರ್ತೆ ಯಾದಗಿರಿ:
    ನಗರದ ರಸ್ತೆ, ಪಾದಚಾರಿ ಮಾರ್ಗ, ಮರ, ವಿದ್ಯುತ್‌ ಕಂಬ, ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಖಾಸಗಿ ಕೇಬಲ್‌ಗಳು ಮೀನಿನ ಬಲೆಯಂತೆ ವ್ಯಾಪಿಸಿ ನಾಗರಿಕರಿಗೆ ಅಪಾಯ ತಂದೊಡ್ಡಿರುವ ಕಪ್ಪು ಬಣ್ಣದ ಕೇಬಲ್‌ಗಳು ಅನಧಿಕೃತವಾಗಿವೆಂದು ಗೊತ್ತಿದ್ದರೂ ಕೂಡ ಆಡಳಿತ ನಡೆಸುವವರು ಮಾತ್ರ ಇದರ ಬಗ್ಗೆ ಮೌನವಹಿಸಿದ್ದಾರೆ.

    ಹೌದು ಈ ಬಗ್ಗೆ ನಗರಸಭೆ ಹಾಗೂ ಜೆಸ್ಕಾಂ ಕಚೇರಿಗೆ ಯಾದಗಿರಿ ನಗರದಲ್ಲಿ ಓಎಫ್‌ಸಿ ಕೇಬಲ್, ಇಂಟರನೆಟ್ ಕೇಬಲ್, ಡಿಷ್ ಟಿವಿ ಕೇಬಲ್, ಫೈಬರ್ ಕೇಬಲಗಳು ಅಳವಡಿಸಲು ಇರುವ ಗೈಡ್ ಲೈನ್ಸ್‌ಗಳ ಪತ್ರದ ಪ್ರತಿ ಹಾಗೂ ಅನುಮತಿ ಪಡೆದವರ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೋರಿದ ಮಾಹಿತಿಗೆ ಉತ್ತರ ನೀಡಿದ ಜೆಸ್ಕಾಂ ಹಾಗೂ ನಗರಸಭೆ, ಜಿಲ್ಲೆಯಲ್ಲಿ ಅಧಿಕೃತವಾಗಿ ಇಲಾಖೆಗೆ ಹಣ ಪಾವತಿ ಮಾಡಿದ್ದು ಕೇವಲ ಒಂದೇ ಒಂದು ಕಂಪೆನಿ ಅದೂ ಜಿಯೋ ಮಾತ್ರ ಇನ್ನುಳಿದ ಯಾವುದೇ ಕಂಪನಿಯು ಪರವಾನಿಗೆ ಪಡೆದಿಲ್ಲ ಎಂದು ಉತ್ತರಿಸಿವೆ.

    ಜಿಲ್ಲೆಯಲ್ಲಿ ಒಎಫ್‌ಸಿ ಕೇಬಲ್‌ ಅಕ್ರಮವಾಗಿ ಹರಡಿಕೊಂಡಿದ್ದೂ. ಸರ್ಕಾರದ ಇಲಾಖೆಗಳನ್ನು ನಿಯಂತ್ರಿಸುವ ಮಾಫಿಯಾಗಳಲ್ಲಿ ಈ ಒಎಫ್‌ಸಿ ಕೇಬಲ್‌ ಮಾಫಿಯಾ ಕೂಡ ಒಂದು. ಹೀಗಾಗಿಯೇ ಅಧಿಕಾರಿಗಳು ಅನಧಿಕೃತ ಕೇಬಲ್‌ ತೆರವುಗೊಳಿಸಲು ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ತೋರುತ್ತಿಲ್ಲ.

    ಟೆಲಿಕಾಂ ಸೇವಾ ಕಂಪನಿಗಳು 4 ರಿಂದ 6 ಕಿ.ಮೀ ಉದ್ದದ ಒಎಫ್‌ಸಿ ಕೆಬಲ್ ಗೆ ಅನುಮತಿ ಪಡೆದು ಐದು ಪಟ್ಟು ಅಧಿಕ ಡಕ್ಟ್ ಅಳವಡಿಸಿ ಲಕ್ಷಾಂತರ ರೂ. ಶುಲ್ಕ ವಂಚಿಸುತ್ತಿವೆ. ಒಂದು ಸಂಸ್ಥೆಯು ಜಿಲ್ಲೆಯಲ್ಲಿ ಕೇಬಲ್ ಅಳವಡಿಕೆಗೆ ಅನುಮತಿ ಪಡೆದರೆ, ಇತರೆ ಮೂರ್ನಾಲ್ಕು ಸಂಸ್ಥೆಗಳು ಅಕ್ರಮವಾಗಿ ಅದರಲ್ಲಿ ಕೇಬಲ್‌ ಹಾಕುತ್ತಿವೆ. ಈ ಅಕ್ರಮವನ್ನು ಪರಿಶೀಲಿಸುವ ತಾಂತ್ರಿಕ ನೈಪುಣ್ಯತೆ ಅಧಿಕಾರಿಗಳಿಗಿಲ್ಲ ಈ ಕಾರಣದಿಂದ್ದಾಗಿ ಅಕ್ರಮ ಕಬಲ್ ಮಾಫಿಯಾ ಜಾಲ ವಿಸ್ತಾರಣೆಗೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

    ಮೊಬೈಲ್‌ ಟವರ್‌ಗಳು, ಬ್ರಾಂಡ್‌ಬ್ಯಾಂಡ್‌ ಸೇವೆಗಳು ಸಂಪೂರ್ಣವಾಗಿ ಒಎಫ್‌ಸಿಯನ್ನೇ ಅವಲಂಬಿಸಿವೆ. ದೂರ ಸಂಪರ್ಕ ಸೇವೆ ಒದಗಿಸುವ ಸೇವಾದಾರರದ್ದು ಒಂದು ವಿಧವಾದರೆ, ಟಿವಿ ಸೇವೆಯೊಂದಿಗೆ ಅಂತರ್ಜಾಲ ಸೇವೆ ಒದಗಿಸುವರದ್ದು ಇನ್ನೊಂದು ವಿಧ. ಐಎಸ್‌ಪಿ ಸೇವೆ ಒದಗಿಸುವವರು ಒಎಫ್‌ಸಿಯನ್ನು ಮರದಿಂದ ಮರಕ್ಕೆ, ಕಂಬದಿಂದ ಕಂಬಕ್ಕೆ ಎಳೆದು, ರಸ್ತೆಗಳಲ್ಲಿ ತೋರಣ ಕಟ್ಟಿದ್ದಾರೆ!

    ಇನ್ನೂ ಒಎಫ್‌ಸಿ ಮಾರ್ಗದ ಶುಲ್ಕದಿಂದ ತಪ್ಪಿಸಿಕೊಳ್ಳಲು ಹಲವು ಸಂಸ್ಥೆಗಳು ಅನುಮತಿ ಪಡೆದಿರುವ ಕಂಪನಿಯೊಂದಿಗೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಹಣ ಉಳ್ಳವರ ಪಾಲಾಗುತ್ತಿದೆ.

    ನಗರದಲ್ಲಿ ಬಹುತೇಕ ಕಂಬಗಳು ಕೇಬಲ್‌ನಿಂದ ಆವರಿಸಿದ್ದೂ. ಈ ಕಂಬಗಳಲ್ಲಿ ರಿಪೇರಿ ಇದ್ದರೆ ಲೈನ್‌ಮನ್‌ಗೆ ಕಂಬವೇರುವುದು ತ್ರಾಸದಾಯಕ. ಇದರಿಂದ ಅವಘಡ ಸಾಧ್ಯತೆಯೂ ಹೆಚ್ಚು, ತುರ್ತು ಸಂದರ್ಭಗಳಲ್ಲಿ ಲೈನ್‌ಮನ್‌ ಗಳು ಕಂಬವೇರಲು ಹರಸಾಹಸ ಪಡಬೇಕಾಗಿದೆ.

    ನಗರದಲ್ಲಿ ಅಕ್ರಮವಾಗಿ ಒಎಫ್ ಸಿ, ಕೇಬಲ್ ಹಾಕುವಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ಅಕ್ರಮ ಒಎಫ್ ಸಿ ಕೇಬಲ್ ಗಳ ಹಾವಳಿ ತಪ್ಪಿಸಬಹುದು. ಆದರೆ ಅಧಿಕಾರಿಗಳು ಈ ಭ್ರಷ್ಟ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಆಪ್ಟಿಕಲ್ ಕೇಬಲ್ ಹಾವಳಿಗೆ ಕಡಿವಾಣ ಹಾಕಲಾಗುತ್ತಿಲ್ಲ.

    ಕೂಡಲೇ ಸಂಬದಪ್ಪಟ್ಟ ಅಧಿಕಾರಿಗಳು ಅನಧಿಕೃತ ಕೇಬಲ್ ಮಾಫಿಯ ಕಡೆ ಗಮನಹರಿಸಿ ಕಡಿವಾಣ ಹಾಕುವರಾ ಎಂಬುದನ್ನ ಕಾದುನೋಡಬೇಕಿದೆ.

  • ಮತದಾನದ ವಿಡಿಯೋ ರೆಕಾರ್ಡ್ ಮಾಡಿ ಕೆಲವು ಮತದಾರರಿಂದ ನಿಯಮ ಉಲ್ಲಂಘನೆ

    ಸತ್ಯಕಾಮ ವಾರ್ತೆ ಯಾದಗಿರಿ:
    ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿ ಕೆಲವು ಕಡೆ  ಮತದಾರರು ಮತದಾನದ ನಂತರ ಮೊಬೈಲ್‌ ರೆಕಾರ್ಡ್‌ ಹಾಗೂ ಸೆಲ್ಫಿ ಕ್ಲಿಕಿಸಿಕೊಂಡಿರುವ ಘಟನೆಗಳು ಜಿಲ್ಲೆಯ ಕೆಲವಡೆ ನಡೆದಿವೆ.

    ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂಬ ಆದೇಶವಿದ್ರು, ಕೂಡ ಜಿಲ್ಲೆಯ ಕೆಲವು ಕಡೆ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಒಂದು ಶೋಕಿಯಾಗಿದೆ.

    ಇದಕ್ಕೆ ಸಾಕ್ಷಿಯಂತೆ ವಡಗೇರಾ ತಾಲೂಕಿನ ಕಾಡಂಗೇರಾ (ಬೀ) ಗ್ರಾಮದಲ್ಲಿ ಯುವಕನೊಬ್ಬ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್‌ ಪೇಪರ್‌ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ, ನಂತರ ಕೆಲ ಗಂಟೆಗಳ ನಂತರ ತೆಗೆದು ಹಾಕಿದ್ದೇನೆ.

    ಇದಲ್ಲದೆ ಯಾದಗಿರಿಯ ಗಂಗು ಮಡಿವಾಳ ಎಂಬ ಯುವಕ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್‌ ಪೇಪರ್‌ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ಸ್ಟೇಟ್ ಸನಲ್ಲಿ ಹಂಚಿಕೊಂಡಿದ್ದಾರೆ.