Author: Satyakam NewsDesk

  • ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ 

    ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ 

    ಸತ್ಯಕಾಮ ವಾರ್ತೆ ಯಾದಗಿರಿ: 

    ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಬ್ಲಾಸ್ಟಿಂಗ್‌ನಿಂದ ರಸ್ತೆ ಹದೆಗೆಟ್ಟಿದ್ದು, ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು ಇದನ್ನು ತಡೆಗಟ್ಟುವಂತೆ ವರ್ಕನಳ್ಳಿ ಗ್ರಾಮದ ಯುವಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಯಾದಗಿರಿ ತಾಲೂಕು ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ದಿನನಿತ್ಯ ಓಡಾಡುವ ಕಲಬುರಗಿ & ಸ್ಥಳೀಯ ಟಿಪ್ಪರ್‌ಗಳ ಹಾವಳಿ ಜಾಸ್ತಿಯಾಗಿ ಈ ಭಾಗದ ರಸ್ತೆಗಳು ಹದೆಗೆಟ್ಟಿದ್ದು, ಓವರ್ ಲೋಡ್ ಹಾಕಿ ನಡೆಸುತ್ತಿದ್ದಾರೆ. ವಾಹನದಲ್ಲಿ ದೊಡ್ಡ ದೊಡ್ಡ ಸೋಲಿಂಗ್ ಕಲ್ಲುಗಳು ತರುತ್ತಿದ್ದು, ಕೆಳಗಡೆ ಬಿದ್ದರೆ ಜನರ ಪ್ರಾಣಕ್ಕೆ ಹಾನಿ ಉಂಟಾಗುತ್ತದೆ. ಹಾಗೂ ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಜನರ ಆರೋಗ್ಯ ಹದಗೆಟ್ಟಿದೆ. ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.

    ಅಕ್ರಮ ಬ್ಲಾಸ್ಟಿಂಗ್‌ನಿಂದ ಸುತ್ತ-ಮುತ್ತಲಿನ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಹೊಲಕ್ಕೆ ಹೋಗುವ ರೈತರು ಭಯ ಭೀತರಾಗಿದ್ದು, ಕಲ್ಲುಗಳು ಮೈ ಮೇಲೆ ಬಿದ್ದು, ಜನ ಜಾನುವಾರುಗಳಿಗೆ ಜೀವಕ್ಕೆ ಹಾನಿ ಉಂಟಾಗುತ್ತಿದೆ. ರಾತ್ರಿ ವೇಳೆ ಕ್ವಾರಿಯಲ್ಲಿ ಮಷಿನ್‌ಗಳು ಬ್ರೇಕರ್ ಚಾಲು ಇರುವುದರಿಂದ ಜನರಿಗೆ ನಿದ್ರೆ ಬಾರದೇ ತೊಂದರೆ ಉಂಟಾಗುತ್ತಿದೆ. ರೈತರ ಜಮೀನಿನಲ್ಲಿನ ಬೆಳೆಗಳು ಕೂಡಾ ಬೆಳೆಯದಂತಾಗಿದೆ.

    ಈ ಭಾಗದಲ್ಲಿ ಗಣಿಗಾರಿಕೆ ಹಾವಳಿ ಜಾಸ್ತಿಯಾಗಿದ್ದು, ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದು, ಬ್ಲಾಸ್ಟಿಂಗ್‌ನಿಂದ ಗ್ರಾಮಗಳ ಜನರು ಭಯ ಭೀತರಾಗಿದ್ದು, ಮತ್ತು ಅಕ್ರಮವಾಗಿ ಅವ್ಯವಹತವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮದ ಬಗ್ಗೆ ಗಣಿಗಾರಿಕೆ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಕ್ರಮ ಕೈಗೊಂಡಿಲ್ಲ.

    ಆದ ಕಾರಣ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು / ಬ್ಲಾಸ್ಟಿಂಗ್ ನಿಂದ ಈ ಕೂಡಲೇ ತಡೆಹಿಡಿದು, ಜನರ ಆರೋಗ್ಯ ಕಾಪಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿದರು.

    ಈ ಸಂದರ್ಭದಲ್ಲಿ ಶಫಿ ವರ್ಕನಳ್ಳಿ ಮಲ್ಲುನಾಯಕ ವರ್ಕನಳ್ಳಿ ರವಿನಾಯಕ ಭೀಮುನಾಯಕ. ಕಾಶಿನಾಯಕ, ಭೀಮು ಮಡಿವಾಳ. ತಾಯಪ್ಪ ನಾಯಕ ಮೋದಿನ. ದೇವು ನಾಯಕ ರಾಜಪ್ಪ ನಾಯಕ ಇತರರು ಇದ್ದರು.

  • ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅಧಿಕಾರ ಸ್ವೀಕಾರ

    ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅಧಿಕಾರ ಸ್ವೀಕಾರ

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಅಧಿಕಾರ ಹಸ್ತಾಂತರಿಸಿದರು.

    ನೂತನ ಜಿಲ್ಲಾಧಿಕಾರಿಗಳಾದ ಶ್ರೀ ಹರ್ಷಲ್ ಭೋಯಾರ್ ರವರು ಮೂಲತಃ ಮಹಾರಾಷ್ಟ್ರ ರಾಜ್ಯದವರಾಗಿದ್ದು, ವರದಾ ಇವರ ಜನ್ಮಸ್ಥಳವಾಗಿದೆ.

    ಇವರು 2016ರ ಐ.ಎ.ಎಸ್ ಬ್ಯಾಚ್ ನವರಾಗಿದ್ದಾರೆ. ಸವನೂರ್, ಚಾಮರಾಜನಗರ,ವಿಜಯನಗರ, ಸಹಾಯಕ ಆಯುಕ್ತರಾಗಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ, ಅಟಲ್ ಜಿ ಜನಸ್ನೇಹಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

    ನಿರ್ಗಮಿತ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಕಲ್ಬುರ್ಗಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

  • ಮೊಹರಂ ಹಿನ್ನೆಲೆ: ಸಾರ್ವಜನಿಕವಾಗಿ ಮೆರವಣಿಗೆ ನಿಷೇಧ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

    ಮೊಹರಂ ಹಿನ್ನೆಲೆ: ಸಾರ್ವಜನಿಕವಾಗಿ ಮೆರವಣಿಗೆ ನಿಷೇಧ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪುಗುಂಪಾಗಿ ಆಚರಿಸುವುದನ್ನು ಮತ್ತು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ನಿಷೇಧಿಸಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಸುಶೀಲ ಬಿ ಅವರು ಆದೇಶ ಹೊರಡಿಸಿದ್ದಾರೆ.

    ಗುರಮಠಕಲ್ ತಾಲೂಕಿನ ತಾತಳಗೇರಾ. ಗ್ರಾಮದಲ್ಲಿ ಜುಲೈ 4 ರಿಂದ ಜುಲೈ 7 ರವರೆಗೆ ನಡೆಯಲಿರುವ ಮೊಹರಂ ಹಬ್ಬದ ಆಚರಣೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ಅಡಿ ಗ್ರಾಮದಲ್ಲಿ ಮೊಹರಂ ಹಬ್ಬ ಗುಂಪು ಗುಂಪಾಗಿ ಆಚರಿಸುವುದನ್ನು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ, ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

  • 17 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್

    17 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್

    ಸತ್ಯಕಾಮ ವಾರ್ತೆ ಯಾದಗಿರಿ:
    ಲ್ಯಾಪ್ ಟಾಪ್ ಮೂಲಕ ಆನ್ ಲೈನ್ ಕಡತಗಳನ್ನು ಬೇಗನೇ ಮುಗಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಜನರ ಕೆಲಸ ತ್ವರಿತ ಗತಿಯಲ್ಲಿ ಮಾಡಬೇಕೆಂದು  ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ನಗರದ ಶಾಸಕ‌ ಕಭೇರಿಯಲ್ಲಿ ಶುಕ್ರವಾರ ತಾಲೂಕಿನ 17 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ ಟಾಪ್ ವಿತರಣೆ ಮಾಡಿ ಮಾತನಾಡಿದರು.
    ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಈ ತಂತ್ರಜ್ಞಾನ ವಸ್ತು ನಿಮಗೆ ನೀಡಿದ್ದು, ಇದರಿಂದ ಬೇಗನೆ ಕೆಲಸವಾಗಬೇ ವಿನಾಃ ನಿರ್ಲಕ್ಷ್ಯ ಸಲ್ಲ ಎಂದು ಶಾಸಕರು ತಾಕಿತು ಮಾಡಿದರು.

    ಇ-ಆಪೀಸ್ ಕಛೇರಿ ಟಪಾಲುಗಳನ್ನು ಆನ್ ಲೈನ್ ಮೂಲಕ ಕಡತಗಳನ್ನು ರವಾನಿಸಲು ಅನುಕುಲವಾಗಲು ಸಹಕಾರವಾಗಲಿದೆ ಎಂದು ಹೇಳಿದರು.

    ತಹಸೀಲ್ದಾರ ಸುರೇಶ ಅಂಕಲಗಿ, ಕಂದಾಯ ನಿರಿಕ್ಣಕರು, ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.
  • ಶಾಲಿನಿ ರಜನೀಶ್ ವಿರುದ್ಧ ಹೇಳಿಕೆ ಖಂಡನಿಯ: ರುದ್ರಾಂಬಿಕ ಪಾಟೀಲ್

    ಶಾಲಿನಿ ರಜನೀಶ್ ವಿರುದ್ಧ ಹೇಳಿಕೆ ಖಂಡನಿಯ: ರುದ್ರಾಂಬಿಕ ಪಾಟೀಲ್

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ಕಿಳು ಮಟ್ಟದ ಹೇಳಿಕೆ ನೀಡಿರುವುದು ಇಡೀ ಮಹಿಳಾ ಕುಲವನ್ನೇ ಅವಮಾನಿಸಿದಂತಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್. ಪಾಟೀಲ್ ಚಟ್ನಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಖ್ಯ ಕಾರ್ಯದರ್ಶಿಗಳು ರಾತ್ರಿಯಲ್ಲಿ ಸರಕಾರಕ್ಕೆ ಹಾಗೂ ಇಡೀ ದಿನ ಮುಖ್ಯಮಂತ್ರಿಗಳಿಗಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಮಹಿಳೆಯರ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ ರವಿಕುಮಾರ್ ರವರು ಇದೆ ಮೊದಲ ಬಾರಿಗೆ ಈ ರೀತಿಯಾಗಿ ಮಾತನಾಡಿಲ್ಲ ಈ ಮುಂಚೆಯೂ ಕೂಡಾ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಇಂಥವರಿಗೆ ಮೊದಲು ಮೂಗುದಾರ ಹಾಕಬೇಕು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇಂಥ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ ಮಹಿಳೆ ಪುರುಷನಷ್ಟೇ ಸರಿ ಸಮಾನವಾಗಿ ಎಲ್ಲಾ ಕಾರ್ಯಗಳಲ್ಲಿಯೂ ವಿವಿಧ ಕ್ಷೇತ್ರದಲ್ಲಿ ಕೂಡ ಅತ್ಯುತ್ತಮ ಸಾಧನೆ ಮಾಡಿದ ಕೀರ್ತಿ ಮಹಿಳೆಯರಿಗೆ ಇದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಮೊದಲು ಹಲವಾರು ಹುದ್ದೆಗಳನ್ನು ನಿಭಾಯಿಸಿ ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಬಿಜೆಪಿ ಹೈಕಮಾಂಡ್ ರವಿಕುಮಾರ್ ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್. ಪಾಟೀಲ್ ಚಟ್ನಳ್ಳಿ ಎಚ್ಚರಿಸಿದ್ದಾರೆ

  • ನಾವೆಲ್ಲರೂ ಜನರೊಂದಿಗೆ ಬೆರೆತು ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ

    ನಾವೆಲ್ಲರೂ ಜನರೊಂದಿಗೆ ಬೆರೆತು ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ

    ಸತ್ಯಕಾಮ ವಾರ್ತೆ ಬೀದರ್:

    ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರತು ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.

    ಬೀದರ್ ನಗರದ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಪಕ್ಷದ ಮುಖಂಡರು, ಕಾರ್ಯಕರ್ತರು ಜನರೊಂದಿಗೆ ಬೆರೆತು,ಜನರೊಂದಿಗೆ ಇದ್ದು ಕೆಲಸ ಮಾಡಬೇಕು ಎಂದರು.

    ಮುAದಿನ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕೂಡ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಅಗತ್ಯವಾಗಿರುತ್ತದೆ. ಜನರೊಂದಿಗೆ ಜನತಾದಳ ಎಂಬ ಗುರಿಯೊಂದಿಗೆ ಸಾಗುತ್ತಿರುವ ನಾವು ನಿರಂತರವಾಗಿ ಜನರೊಂದಿಗೆ ಇರುವುದು ಅಗತ್ಯವಾಗಿರುತ್ತದೆ. ಸದಸ್ಯತ್ವ ನೋಂದಣಿ ಅಭಿಯಾನವನ್ನು ನಾವು ತುಮಕೂರು ಜಿಲ್ಲೆಯಿಂದ ಆರಂಭಿಸಿದ್ದೇವೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈಗ
    ಐದನೇ ಜಿಲ್ಲೆಯಾಗಿ ಬೀದರ್ ನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡ್ತಿದ್ದೇವೆ. ಇನ್ನೂ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲೇ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ.  ನಾವು ಜನತಾದಳ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕಾಗಿದೆ. ನಿಮ್ಮ ಚುನಾವಣೆಗಳಲ್ಲಿ ನೀವು ಗೆಲುವು ಸಾಧಿಸುವುದು  ಅಗತ್ಯವಾಗಿರುತ್ತದೆ. ಆಗಾಗಿ ತಾ.ಪಂ, ಜಿ.ಪಂ ಚುನಾವಣೆಗಳ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಕಲ್ಯಾಣ
    ಕರ್ನಾಟಕ ಭಾಗದಲ್ಲಿ ನಾವು ಹೆಚ್ಚೆಚ್ಚು ಸ್ಥಾನ  ಪಡೆದುಕೊಳ್ಳಬೇಕು ಎಂದರೇ ನಾವೆಲ್ಲರೂ ಶ್ರಮವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿರವರು ಮನವಿ ಮಾಡಿದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಪಕ್ಷ ಸಂಘಟನೆಯ ಕೆಲಸವನ್ನು ನಿಖಿಲ್ ಕುಮಾರಸ್ವಾಮಿರವರು ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಅವರು  ಮಾಡ್ತಿದ್ದಾರೆ. ನಾವು ಅವರೊಂದಿಗೆ ಕೈಜೋಡಿಸೋಣ ಎಂದರು.

    ನಾವು ರಾಜಕೀಯದಲ್ಲಿ ಜನರ ಹತ್ತಿರ ಇದ್ದು ಸೇವೆ ಮಾಡಿದಾಗ ಜನರೇ ನಮಗೆ ಅಧಿಕಾರ ಕೊಡ್ತಾರೆ. ನಾವು ಜನರೊಂದಿಗೆ ಇರೋಣ. ಗ್ಯಾರಂಟಿ ಮುಖ ತೋರಿಸಿ ಕಾಂಗ್ರೆಸ್ ಸರ್ಕಾರ ಏನ್ ಮಾಡ್ತಿದೆ ಎಂಬುದನ್ನು ಜನ ನೋಡ್ತಿದ್ದಾರೆ. ಅವರ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಸಾಗ್ತಿವೆ ಎಂಬುದನ್ನು ಕೂಡ ರಾಜ್ಯದ ಜನರು ನೋಡ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದೋಖಾ ಮಾಡ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದ್ರು ಜಿ.ಪಂ, ತಾ.ಪಂ ಚುನಾವಣೆ ಮಾಡುವ ಧೈರ್ಯ ಅವರಿಗೆ ಇಲ್ಲದಾಗಿದೆ ಎಂದು ಬಂಡೆಪ್ಪ
    ಖಾಶೆAಪುರ್ ರವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

    ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾರವರು ಸೇರಿದಂತೆ ಅನೇಕರು ಮಾತನಾಡಿ, ಜೆಡಿಎಸ್ ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ
    ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್, ಸೋಲ್ಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ಶಾಂತಲಿAಗ ಸಾವಳಗಿ, ರಾಜಶೇಖರ ಜವಳೆ, ಅಶೋಕ್ ಕೊಡ್ಗೆ, ರಾಜು ಕಡ್ಯಾಳ, ಸುದರ್ಶನ್ ಸುಂದರರಾಜ್, ಸಿದ್ರಾಮಪ್ಪ ವಂಕ್ಕೆ, ಐಲಿಂಜಾನ್ ಮಠಪತಿ, ಬಸವರಾಜ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಜಾಫೇಡ್ ಕಡ್ಯಾಳ, ಪ್ರಶಾಂತ್
    ವಿಶ್ವಕರ್ಮರವರು ಸೇರಿದಂತೆ ಅನೇಕರಿದ್ದರು.

  • ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ರಾಜುಗೌಡ ಮನವಿ

    ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ರಾಜುಗೌಡ ಮನವಿ

    ಸತ್ಯಕಾಮ ವಾರ್ತೆ ಸುರಪುರ:

    ಯಾದಗಿರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡದಂತೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

    ಈ ಕುರಿತು ಮನವಿ ಮಾಡಿ,ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ,ಮಟಕಾ,ಜೂಜು ದಂತಹ ಅನೇಕ ಅಕ್ರಮ ಚಟುವಟಿಕೆಗಳಿಗೆ ಎಸ್ಪಿ ಪೃಥ್ವಿಕ್ ಶಂಕರ್ ಅವರು ಬಂದಮೇಲೆ ಕಡಿವಾಣ ಹಾಕಿದ್ದಾರೆ.ಅಲ್ಲದೆ ಜಿಲ್ಲೆಗೆ ಇವರು ಆಗಮಿಸಿ 7 ತಿಂಗಳಾಗಿದೆ.ಆಗಲೇ ವರ್ಗಾವಣೆಗೆ ಮುಂದಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.ಆದ್ದರಿಂದ ಮುಖ್ಯಮಂತ್ರಿಗಳಾದ ತಮ್ಮ ಬಗ್ಗೆ ಅಪಾರವಾದ ಗೌರವವಿದೆ.ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವವರ ಒತ್ತಾಯ ದಿಂದ ತಾವು ಒಬ್ಬ ನಿಷ್ಠಾವಂತ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕ್ಷಕ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡಿದರೆ ಜಿಲ್ಲೆಯ ಅಭಿವೃಧ್ಧಿಗೆ ವಂಚನೆ ಮಾಡಿದಂತಾಗಲಿದೆ.ಅಲ್ಲದೆ ನಿಮ್ಮ ಸರಕಾರ ಜನರ ಕೆಂಗಣ್ಣಿಗೂ ಗುರಿಯಾಗಲಿದೆ.ಆದ್ದರಿಂದ ಯಾವುದೇ ಕಾರಣಕ್ಕೂ ಎಸ್ಪಿಯನ್ನು ವರ್ಗಾವಣೆ ಮಾಡದಂತೆ ಮನವಿ ಮಾಡುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

  • ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

    ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

     

    ಯಾದಗಿರಿ, ಜುಲೈ 3 (ಸತ್ಯಕಾಮ ವಾರ್ತೆ):

    ರಾಕ್ ಸ್ಟಾರ್ ಹಾಗೂ ನಿಮ್ಮ ಲೀಗಲ್ ಅಡ್ವೈಸರ್ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿಯಾಗಿರುವ ಪುನೀತ್ ರಾಜ್ ವಿರುದ್ಧ ಯುವತಿಯೊಬ್ಬರು ಭಾರೀ ಆರೋಪ ಹೇರಿದ್ದು, ಯೂಟ್ಯೂಬ್ ಶಾರ್ಟ್ ಫಿಲ್ಮ್‌ ನೆಪದಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ, ಮದುವೆ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ದೂರುದಾರೆಯು ನೀಡಿರುವ ದೂರಿನಂತೆ, ಇನ್‌ಸ್ಟಾಗ್ರಾಂ ಮೂಲಕ ಪುನೀತ್ ರಾಜ್ ಪರಿಚಿತನಾಗಿದ್ದ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಸ್ನೇಹ ಬೆಳೆದಿತ್ತು, ಪುನೀತ್ ರಾಜ್ ತನ್ನನ್ನು ನಿರ್ದೇಶಕ ಎಂದು ಪರಿಚಯಿಸಿಕೊಂಡು ಯುವತಿಗೆ ತನ್ನ ಶಾರ್ಟ್ ಫಿಲ್ಮ್‌ನಲ್ಲಿ ನಾಯಕಿಯಾಗಿ ನಟಿಸುವಂತೆ ಹೇಳಿದ್ದ ಇದಕ್ಕೆ ಮನೆಯವರು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆದರೂ ಪುನೀತ್, “ಇದು ಕೇವಲ ಒಂದು ದಿನದ ಚಿತ್ರೀಕರಣ,” “ನನ್ನ ಕುಟುಂಬಸ್ಥರು ಇರುತ್ತಾರೆ,” ಎಂದು ಭರವಸೆ ನೀಡಿ ಫೆಬ್ರವರಿ 16 ರಂದು ಪುನೀತ್ ರಾಜ್ ಹಾಗೂ ಆತನ ಕುಟುಂಬದವರು ಮತ್ತು ಯುವತಿ ಬಾದಾಮಿ ಮಹಾಕೂಟಕ್ಕೆ ತೆರಳಿದ್ದು, ಬಾಡಿಗೆ ರೂಮ್‌ನಲ್ಲಿ ಉಳಿದಿದ್ದರು. ಅಲ್ಲಿಯೇ ಫೆಬ್ರವರಿ 17 ಹಾಗೂ 18 ರಂದು ಮದುವೆ ನಾಟಕವಾಡಿ, ಹಿಂದೂ ಸಂಪ್ರದಾಯದಂತೆ ಪುನೀತ್ ಯುವತಿಗೆ ಮದುವೆ ಮಾಡಿಕೊಂಡಂತೆ ಕಾರ್ಯಕ್ರಮಗಳ ಎಲ್ಲಾ ದೃಶ್ಯಗಳನ್ನು ಚಿತ್ರಿಕರಿಸಿದ್ದಾನಂತೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ದಿನಾಂಕ 18 ರಂದು ರಾತ್ರಿ ಯುವತಿಯ ವಿರೋಧದ ನಡುವೆಯೂ ಪುನೀತ್ ಬಲವಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪುನೀತ್‌ ಪೋಷಕರಿಗೂ ತಿಳಿಸಿದಾಗ ಅವರು ಸಹ “ನಿನ್ನನ್ನು ನನ್ನ ಮಗನೊಂದಿಗೆ ಮದುವೆ ಮಾಡಲೆಂದು ಇದೆಲ್ಲಾ ಮಾಡಿದ್ದೇವೆ” ಎಂದು ಅವರ ಪೋಷಕರು ಉತ್ತರಿಸಿದ್ದಾರೆಂದು ಯುವತಿಯ ಆರೋಪವಾಗಿದೆ.

    ಬಳಿಕ ಯಾದಗಿರಿಗೆ ಬಂದ ಇವರು ಯುವತಿ ತನ್ನ ಮನೆಗೆ ಹೋಗುವುದಾಗಿ ತಿಳಿಸಿದಾಗ ನಿನಗೆ ಮದುವೆಯಾಗಿದೆ ನೀನು ಇಲ್ಲೇ ಇರಬೇಕು, ನಮ್ಮ ಮನೆ ಬಿಟ್ಟು ಹೋದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಯುವತಿ ಎರಡು ದಿನ ಅಲ್ಲೇ ಉಳಿದುಕೊಂಡು, ದಿನಾಂಕ 22.02.2025 ರಂದು ತನ್ನ ಮನೆಗೆ ಮರಳಿದ್ದಾಳೆ. ಬಳಿಕ ಏಪ್ರಿಲ್ 12 ರಂದು ಪುನೀತ್ ರಾಜ್ ಯುವತಿಯ ಮನೆಯ ಬಳಿ ಬಂದು ಅವರ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೇ ನಮ್ಮ ಮದುವೆಯ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಹೇಳಿರುತ್ತಾನೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ಈ ಸಂಬಂಧ ಯುವತಿ ಹೇಳಿಕೆಯಂತೆ ಪುನೀತ್ ಹಾಗೂ ಆತನ ತಂದೆ – ತಾಯಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

     

  • ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಸತ್ಯಕಾಮ ವಾರ್ತೆ ಯಾದಗಿರಿ :

    ನಗರದ ಹೊರ ವಲಯದ ಯರಗೋಳ ರಸ್ತೆ ಬಳಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜು.5ರಂದು ನಡೆಯಲಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಷ್ ಚಂದ್ರ ಕಟಕಟಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ 110 ವಿಧಾನ ಸಭಾ ಕ್ಷೇತ್ರಗಳಲ್ಲಿ 58 ದಿನಗಳವರೆಗೆ ನಡೆಯಲಿದ್ದು, ಕಾರ್ಯಕ್ರಮ ನಂತರ ಶಹಾಪೂರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.

    ಈ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ, ಜೆಡಿಎಸ್ ಜಿಲ್ಲಾ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದು ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

  • ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಿ – ನಾಗೇಶ್ ಗದ್ದಿಗಿ

    ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಿ – ನಾಗೇಶ್ ಗದ್ದಿಗಿ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದ ಮೂಲಕ ಹಾದು ಹೋಗುವ ಸಿಂದಗಿ – ಕೊಡಂಗಲ್ ರಾಜ್ಯ ಹೆದ್ದಾರಿ -15 ರಲ್ಲಿ ನಡೆಯುತ್ತಿರುವ ವಿಭಜಕ ಕಾಮಗಾರಿಯಲ್ಲಿ ಮೇಲ್ನೋಟಕ್ಕೆ ಗುಣಮಟ್ಟತೆ ಕಾಣದಾಗಿದ್ದು, ಕ್ರಿಯಾ ಯೋಜನಾ ಪಟ್ಟಿ ನೀಡುವಂತೆ ಕೋರಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್ ಗದ್ದಿಗಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಜಿಲ್ಲಾ ನಾಗರಾಭಿವೃದ್ಧಿ ಕೋಶ ನಗರೋತ್ಥಾನ ಯೋಜನಾ ಭಾಗವಾಗಿರುವ ವಿಭಜಕ (ಡಿವೈಡರ್) ಕಾಮಗಾರಿಯು ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದು ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಹೇಳಿದರು.

    ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು, ಕಾಮಗಾರಿಗಳಲ್ಲಿ ಅನೇಕ ಲೋಪಗಳು ಕಂಡರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

    ಏನಿದು ಯೋಜನೆ: ನಗರೋತ್ಥಾನ ಯೋಜನೆ ಅಡಿಯಲ್ಲಿ ಜರುಗುತ್ತಿರುವ ವಿಭಜಕ ಕಾಮಗಾರಿಯಲ್ಲಿ ಸ್ಟೀಲ್ ಕಡಿಮೆ ಪ್ರಮಾಣದಲ್ಲಿ ಬಳಸಿದ್ದನ್ನು ಖುದ್ದಾಗಿ ಕಂಡು ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಪ್ರಶ್ನಿಸಲಾಗಿ ನಮಗೆ ಇಷ್ಟೇ ಪ್ರಮಾಣದಲ್ಲಿ ಬಳಸುವಂತೆ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಕಡಿಮೆ ಪ್ರಮಾಣದ ಸ್ಟೀಲ್ ಬಳಸುತ್ತಿದ್ದು ಉಪಯುಕ್ತತೆಗಿಂತ 20-30% ಸ್ಟೀಲ್ ಕಡಿಮೆ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದ್ದೂ ಕ್ರಿಯಾ ಯೋಜನೆಯ ಪಟ್ಟಿ ನೀಡಲು ಹಲವಾರು ಬಾರಿ ಕೇಳಿದರು ಕೊಡದೆ ಇರವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ ಎಂದರು.

    ಅಧಿಕಾರಿಗಳ ಜಾಣ ಕುರುಡು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟದಿಂದ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ, ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಬೇಜವಾಬ್ದಾರಿ ತೋರಿಸಿ ಸ್ಥಳಕ್ಕೆ ಆಗಮಿಸದೆ ಅಸಡ್ಡೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಕುಲಂಕುಷವಾಗಿ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಕಳಪೆ ಕಂಡು ಬಂದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳು ಸಂಚಾರಿಸಲಿದ್ದು ಕಡಿಮೆ ಗುಣಮಟ್ಟದ ಕಾಮಗಾರಿ ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಲಿದೆ ಎಂದರು.

    ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾರಾಯಣ ಮಜ್ಜಿಗೆ, ರಾಮುಲು ಕೊಡಗಂಟಿ, ಆಯಾಜ್, ಭೀಮು, ಸುನಿಲ್ ಮೇಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ——

    ತಾಲೂಕಿನದ್ಯಾಂತ ಕಾಮಗಾರಿಗಳು ನಡೆದಿದ್ದು ಗುತ್ತಿಗೆದಾರರು ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸದೆ ದೀರ್ಘಕಾಲಕ್ಕೆ ಬಾಳಿಕೆ ಬರುವ ರೀತಿಯಲ್ಲಿ ಕಾಮಗಾರಿ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಂಬಂಧ ಪಟ್ಟ ಇಲಾಖೆಯವರು ಕಾಮಗಾರಿಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರ ಮೇಲೆ ಕ್ರಮಕೈಗೊಳ್ಳಬೇಕು.

    ನಾಗೇಶ ಗದ್ದಿಗಿ, ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ

     

    ಕಾಮಗಾರಿಯು ರಾಜ್ಯ ಹೆದ್ದಾರಿಯಲ್ಲಿ ನಡೆಯಿತ್ತಿದ್ದು ವಿಭಜಕ ನಿರ್ಮಿಸುತ್ತಿರುವ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮ ವಹಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ, ಲಘು ಸೇರಿದಂತೆ ಭಾರಿ ವಾಹನ ಪಕ್ಕದಲ್ಲಿಯೇ ಸಂಚರಿಸುತ್ತಿದ್ದು ಕಾಮಗಾರಿ ನಡೆಯುತ್ತಿರುವ ಕುರಿತಾಗಿ ಬೋರ್ಡ್ ಹಾಕದಿರುವುದು ವಿಪರ್ಯಾಸ, ಗುತ್ತಿಗೆದಾರರೇ ಕೂಲಿ ಕಾರ್ಮಿಕರ ಜೀವನಕ್ಕೆ ಬೆಲೆಯಿಲ್ಲವೇ?

    ಮಲ್ಲಿಕಾರ್ಜುನ ಅದ್ಗಲ್, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿ.