Author: Satyakam NewsDesk

  • ಬಾಲ್ಯ ವಿವಾಹ: ಪೋಕ್ಸೋ ಕೇಸ್‌ ದಾಖಲು

    ಬಾಲ್ಯ ವಿವಾಹ: ಪೋಕ್ಸೋ ಕೇಸ್‌ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರ ಜೂನ್ 21ರಂದು ನಡೆದ ಬಾಲ್ಯ ವಿವಾಹ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
    ಈ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಮಲ್ಲೇಶಿ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ, ಈಗಾಗಲೇ ಮಗುವಿಗೂ ಜನ್ಮ ನೀಡಿದ್ದಾಳೆ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
    ಈ ಹಿನ್ನೆಲೆಯಲ್ಲಿ, ವರ ಹಾಗೂ ಅವರ ಪೋಷಕರು ಮತ್ತು ವಧುವಿನ ತಂದೆ-ತಾಯಿಯನ್ನು ಸೇರಿ ಒಟ್ಟು ಐವರು ವಿರುದ್ಧ ಐಪಿಸಿ ಕಲಂ 376(2)(ಎನ್), ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11, ಮತ್ತು ಪೋಕ್ಸೋ ಕಾಯ್ದೆ 2012/2013 ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
  • ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ- ಬಾಬುರಾವ್ ಚಿಂಚನಸೂರು

    ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ- ಬಾಬುರಾವ್ ಚಿಂಚನಸೂರು

    ಗುರುಮಠಕಲ್ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇಂದು ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ರಾಜ್ಯದ ಜನತೆ ಲಾಭ ಪಡೆಯುತ್ತಿದ್ದಾರೆ, ಇದರಿಂದ ಜನ ಸಂತೃಪ್ತರಾಗಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ, 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಡವರ ಪಾಲಿನ ಅನ್ನರಾಮಯ್ಯರಾಗಿದ್ದಾರೆ.

    ವಿಡಿಯೋ ನೋಡಿ : ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಕೂರಿಸಿಕೊಂಡು ಕಾರ್ಯಕ್ರಮ ಜರುಗಿಸಿ ಶಿಷ್ಟಚಾರ ಉಲ್ಲಂಘಿಸುತ್ತಾ ಬಂದಿದ್ದಾರೆ,

    ಗುರುಮಠಕಲ್ ಮತಕ್ಷೇತ್ರದ ಕುರಿತು ರಾಷ್ಟ್ರೀಯ ನಾಯಕರು ನಿರಂತರ ಮಾಹಿತಿ ಪಡೆಯುತ್ತಲೇ ಇದ್ದಾರೆ, ಇಂದು ಹೊಟ್ಟೆಕಿಚ್ಚಿಗೆ ಈ ರೀತಿ ಘಟನೆ ಜರುಗಿದ್ದು ಜನರ ಅಭಿವೃದ್ಧಿಯೆ ನನ್ನ ಕರ್ತವ್ಯ, ಇಂದಿನಿಂದ ಶಿಷ್ಠಚಾರದ ಪ್ರಕಾರ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ ಹಾಗೂ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸೇವೆ ಮಾಡುವೆ ಎಂದರು.

    ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಮನೆಗಾರ ಮಾತನಾಡಿ, ಇಂದು ಜೆಡಿಎಸ್ ಶಾಸಕರು ಸರಕಾರದ ಕಾರ್ಯಕ್ರಮಗಳಲ್ಲಿ ತಮ್ಮ ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಕೂರಿಸಿಕೊಂಡು ಕಾರ್ಯಕ್ರಮ ಜರುಗಿಸಿ ಶಿಷ್ಟಚಾರ ಉಲ್ಲಂಘಿಸುತ್ತಾ ಬಂದಿದ್ದಾರೆ, ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.

    ರಾಜ್ಯ ಸರಕಾರ ಇಂದು ಬಾಬುರಾವ ಚಿಂಚನಸೂರು ಅವರ ಮೇಲಿನ ಗೌರವ, ಅನುಭವ ಹಾಗೂ ಹಿರಿಯ ನಾಯಕತ್ವ ಕಂಡು ಸಂಪುಟ ಸ್ಥಾನಮಾನ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದಾರೆ ಆದರೆ ಇಂದು ಅಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದರು.

    ಇದೇ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಉಪಸ್ಥಿತರಿದ್ದರು. (more…)

  • ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು

    ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ನಾಯ್ಕಲ್ ಗ್ರಾಮದ ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದೂ, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಐವರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

    ನಾಯ್ಕಲ್ ಗ್ರಾಮದ 1500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ (FHTC) ನೀಡುವ ಕಾಮಗಾರಿಗೆ ₹411 ಲಕ್ಷ ವೆಚ್ಚ ನಿಗದಿಯಾಗಿತ್ತು. ಆದರೆ, ವಾಸ್ತವಿಕವಾಗಿ ಕೇವಲ 529 ಮನೆಗಳಲ್ಲಿ (35%) ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದರೂ, ದಾಖಲೆಗಳಲ್ಲಿ 1257 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ತೋರಿಸಿ ₹330.39 ಲಕ್ಷ (82.5%) ಬಿಲ್‌ ಪಾವತಿ ಮಾಡಲಾಗಿದ್ದೂ, ಅಲ್ಲದೇ ಇದಕ್ಕೆ ಹೆಚ್ಚುವರಿಯಾಗಿ ₹190 ಲಕ್ಷ ಮೊತ್ತವನ್ನು ಕೆಲಸ ಪೂರ್ಣಗೊಳ್ಳದೇ ಇರುವ ಪರಿಸ್ಥಿತಿಯಲ್ಲೇ ಪಾವತಿಸಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

     

    ತಪಾಸಣೆಯಲ್ಲಿ, MDPE ಪೈಪುಗಳನ್ನು ಸರಿಯಾಗಿ ಅಳವಡಿಸದೇ GI ಪೈಪುಗಳಿಂದ ಮುಚ್ಚಿಲ್ಲ, ನೆಲದಡಿಯಲ್ಲಿ ಹಾಕಬೇಕಾದ ಪೈಪುಗಳನ್ನು ಮೇಲ್ಮೈಯಲ್ಲಿ ಅಳವಡಿಸಲಾಗಿದೆ, ಸುಳ್ಳು ದೃಢೀಕರಣ ಪತ್ರಗಳು ಮತ್ತು ನಕಲಿ ವರದಿಗಳ ಆಧಾರದಲ್ಲಿ ಬಿಲ್‌ಗಳು ಅನುಮೋದನೆಗೊಂಡಿರುವುದು ಪತ್ತೆಯಾಗಿದ್ದು, ಇದು ತುರ್ತು ಕ್ರಮಕ್ಕೆ ಕಾರಣವಾಗಿದೆ.

     

    ಈ ಅವ್ಯವಹಾರದಲ್ಲಿ ಭಾಗಿಯಾದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಅಧಿಕಾರಿ (ಪ್ರ) ಸಹಾಯಕ ಇಂಜಿನಿಯರ್-2 ಎನ್. ಶ್ರೀನಿವಾಸ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಶಹಾಪೂರ ಪ್ರಸಕ್ತ ದೇವದುರ್ಗ ಲೋಕೋಪಯೋಗಿ ಇಲಾಖೆ, ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಬನ್ನಪ್ಪ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಯಾದಗಿರಿ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ, ಗುತ್ತಿಗೆದಾರ ವೆಂಕಟೇಶ್ ಜಿ. ಗುರಸಣಗಿ,Transportech Consultants, ಬೆಂಗಳೂರು (ಮೂರನೇ ತನಿಖಾ ತಂಡ) ಇವರ ವಿರುದ್ಧ ಇದೀಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    ಈ ಕುರಿತು ಗುನ್ನೆ ನಂ.153/2025 ಕಲಂ 318(2), 418(4), 336(3) BNS-2023 ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

    ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸ್ವಂತ ಮನೆ ಹೊಂದುವ ಕನಸಿನ ಕಡುಬಡವರ ಪಾಲಿಗೆ ಆಶ್ರಯ ಸಮಿತಿ ಆಶಾಕಿರಣವಾಗಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸೂಚಿಸಿದರು.

    ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ಸಹಾಯದಿಂದ ಭೂಮಿ ಖರೀದಿ ಮಾಡಿ ಅರ್ಹರಿಗೆ ನಿವೇಶನ ಹಂಚುವ ಯೋಜನೆ ಯಶಸ್ವಿಯಾಗಲು ಎಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದರು.

    ಈಗಿರುವ ಆಶ್ರಯ ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಮಾತ್ರ ಅರ್ಹರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ೨೦೨೫-೨೬ನೇ ಸಾಲಿನ ೨.೦ ಪಿಎಂಎವೈ (ಯು) ಅರ್ಜಿಗಳ ವಿಲೇವಾರಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಶಾಸಕರು, ನಗರದ ಮಂಗಳಮುಖಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

    ಒಟ್ಟು ೩೦೫೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಶೀಘ್ರ ಪರಿಶೀಲಿಸಿ ವ್ಯಾಲಿಡೇಶನ್ ಮಾಡಲು ಸೂಚನೆ ನೀಡಿದರು, ಸರ್ವೆ ನಂ.೧೫೧/೧ರಲ್ಲಿ ೯ ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ನೀಡುವ ನಿರ್ಣಯ ಕೈಗೊಳ್ಳಲಾಯಿತು.

    ಸರ್ವೆ ನಂ.೧೫೧ರಲ್ಲಿ ಇರುವ ೪೨ ನಿವೇಶನಗಳ ಬಗ್ಗೆ ಕಾನೂನು ಸಲಹೆ ಪಡೆದು ಪರಿಶೀಲನೆ ನಡೆಸಲು ಸೂಚಿಸಿದರು. ಅಲ್ಲದೆ ಹೈಟೆನ್ಶನ್ ವೈಯರ್ ಇರುವ ಪ್ರದೇಶದಲ್ಲಿ ಮನೆಗಳಿರುವುದರಿಂದ, ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವೈರ್ ಸ್ಥಳಾಂತರ ಹಾಗೂ ರಸ್ತೆ ನಿರ್ಮಾಣದ ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದರು.

    ಸರ್ವೆ ನಂ.೮೮/೬ ಮತ್ತು ೯೦/೨ರಲ್ಲಿ ಹಲವು ವರ್ಷಗಳಿಂದ ಅತಿಕ್ರಮಣ ನಡೆದಿರುವ ವಿಷಯವನ್ನು ಸದಸ್ಯರು ಗಮನಕ್ಕೆ ತಂದರು. ಅತಿಕ್ರಮಣ ಮಾಡಿದ ೭೦ ಜನರಿಗೆ ನೋಟಿಸ್ ನೀಡಲು ಶಾಸಕ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಸಭೆಯಲ್ಲಿ ಸದಸ್ಯರು ಆಶ್ರಯ ಸಮಿತಿಗೆ ಪ್ರತ್ಯೇಕ ಕಚೇರಿ ಮಾಡುವಂತೆ ಮನವಿ ಮಾಡಿದ್ದು, ಶಾಸಕರು ಕೂಡಲೇ ಕಚೇರಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ನಗರಸಭೆ ಪೌರಯುಕ್ತ ಉಮೇಶ ಚೌಹಾಣ್, ಆಶ್ರಯ ಸಮಿತಿ ಸದಸ್ಯರು ಪ್ರಭಾಕರ್ ಜಿ., ಆರತಿ ಅಮರೇಶ್ ಜಾಕ, ಶಿವಕುಮಾರ್ ಕರದಳ್ಳಿ, ಇಮುನವೆಲ್ ಕ್ರಿಸ್ಟೋಫರ್ ಬೆಳ್ಳಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

    ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿ ಅಕ್ರಮ ಮರಮ್ ಗಣಿಗಾರಿಕೆ ತಡೆಗಟ್ಟಲು ಆಡಳಿತ ಕ್ರಮ ಕೈಗೊಂಡಿರುವ ವೇಳೆಯಲ್ಲಿ, ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆನ್ನೆಲುಬಾಗಿ ನಿಂತಿರುವ ಆಡಿಯೋ ಬಯಲಾಗಿದೆ.
     
    ಕಂದಾಯ ನಿರೀಕ್ಷಕ ಮಹೇಂದ್ರ ಲಂಚ ಪಡೆದು ಗಣಿಗಾರಿಕೆ ಮುಂದುವರಿಯಲು ಅವಕಾಶ ನೀಡುತ್ತಿದ್ದಾನೆಂಬುದು ಆಡಿಯೋದಲ್ಲಿ ಬಯಲಾಗಿದ್ದು, ಮೀನು ಸಾಗಾಟಕ್ಕೆ ಹುಂಡಾ ಹೊಡೆದಿದ್ದೇವೆ ಎಂದು ತಹಶೀಲ್ದಾರ್‌ಗೆ ಹೇಳ್ತೀನಿ ಎಂಬ ಮಾತು ಸ್ವತಃ RI ಬಾಯಿಂದಲೇ ಕೇಳಿಬಂದಿದೆ.
    ಮೇಲಾಧಿಕಾರಿಗಳಿಗೆ RI ಯಾವ ರೀತಿ ತಪ್ಪು ಮಾಹಿತಿಯನ್ನು ಕೊಡುತ್ತೇನೆ ಎಂಬುದಕ್ಕೆ ಈ ಆಡಿಯೋ  ಸಾಕ್ಷಿಯಾಗಿದ್ದೂ. ಗ್ರಾಮ ಲೆಕ್ಕಾಧಿಕಾರಿ ದೇವೇಂದ್ರ ಅವರ ಹೆಸರೂ ಈ ಆಡಿಯೋದಲ್ಲಿ ಕೇಳಿಬರುತ್ತಿದೆ.
    ಪಟ್ಟಾ ಲ್ಯಾಂಡ್‌ನಲ್ಲೇ ಮರಮ್ ಗಣಿಗಾರಿಕೆ ಸಾಗುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದೂ,RI–VA ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅಕ್ರಮಕ್ಕೆ ಸಾಥ್ ನೀಡುತ್ತಿರುವ ತಹಶೀಲ್ದಾರ್‌ ಮೇಲೂ ತನಿಖೆ ನಡೆಯಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
    ಹಲವೆಡೆ ಅಕ್ರಮ ಗಣಿಗಾರಿಕೆ; 
    ಶಹಾಪುರ ತಾಲೂಕಿನ ವಿಭೂತಿಹಳ್ಳಿ, ಗೋಗಿ, ಇಬ್ರಾಹಿಂಪುರ, ಹುರಸುಗುಂಡಿಗಿ, ದೋರನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರ್ಬಂಧವಿಲ್ಲದೆ ಅಕ್ರಮ ಗಣಿಗಾರಿಕೆ ಸಾಗುತ್ತಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
  • ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಾಕವೇಲ್‌ದಿಂದ ಫೀಲ್ಟರ್ ಬೆಡ್‌ಗೆ ಹೋಗುವ ಮುಖ್ಯ ರೈಸಿಂಗ್ ಪೈಪ್ ಲೈನ್ ಲಿಕೇಜ ಆಗುತ್ತಿದ್ದು, ಇದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದ್ದು, ಈ ಲಿಕೇಜನ್ನು ರಿಪೇರಿ ಮಾಡುವ ಅವಶ್ಯಕತೆ ಇರುವುದರಿಂದ 2025ರ ಸೆಪ್ಟೆಂಬರ್ 2 ರಿಂದ 3ರ ವರೆಗೆ ನೀರು ಸರಬರಾಜು ಮಾಡುವುದಕ್ಕೆ ಆಗುವುದಿಲ್ಲ ನಗರದ ಸಾರ್ವಜನಿಕರು ಸಹಕರಿಸಬೇಕೆಂದು ಯಾದಗಿರಿ ನಗರಸಭೆ ಪೌರಾಯುಕ್ತರು ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.

  • ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದಲ್ಲಿ ಗಣೇಶ ಚತುರ್ಥಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಿ. ಐ. ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.

    ಪಟ್ಟಣದ ಪೊಲೀಸ್ ಠಾಣೆಯಿಂದ ಪಥ ಸಂಚಲನ ಆರಂಭವಾಗಿ ಗಂಗಾ ಪರಮೇಶ್ವರಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಮಲ್ಲಯ್ಯ ಕಟ್ಟ, ನಗರೇಶ್ವರ ದೇವಸ್ಥಾನ, ಚೌಡಿ ಕಟ್ಟ ಮಾರ್ಗವಾಗಿ ಬೀಡಿಕೆ ಕಟ್ಟದಿಂದ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.

    ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು. ಈ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನ ನಡೆಸಲಾಯಿತು ಎಂದರು.

    ಗಣೇಶ ಮೂರ್ತಿ ಮೆರವಣಿಗೆ ಮತ್ತು ಮೂರ್ತಿ ವಿಸರ್ಜಿಸುವ ಸಮಯದಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಶಾಂತಿ ಕದಡುವ ಕೆಲಸವನ್ನು ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಇದೇ ಸಂಧರ್ಭದಲ್ಲಿ ಇತ್ತೀಚೆಗೆ ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಗಣಪತಿ ತರುವ ವೇಳೆ 10ಕ್ಕೂ ಹೆಚ್ಚು ಗಣೇಶ ಮಂಡಳಿಯವರು ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಘಟನೆ ನೆನೆದ ಅವರು, ಸುರಕ್ಷತೆ ಕಾಪಾಡಿಕೊಂಡು ಹಬ್ಬ ಆಚರಿಸಿ ಎಂದರು.

  • ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಅಂತರಜಾಲದ ಮೂಲಕ ರೂ. 3.37 ಲಕ್ಷ ಮೊತ್ತವನ್ನು ವಂಚಿಸಿರುವ ಪ್ರಕರಣ ಯಾದಗಿರಿ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ ಅಪರಾಧ (ಸಿ.ಇ.ಎನ್) ಠಾಣೆಯಲ್ಲಿ ದಾಖಲಾಗಿದೆ.

    ಮಾತಾ ಮಾಣಿಕೇಶ್ವರಿ ನಗರದ ನಿವಾಸಿ, ವೃತ್ತಿಯಲ್ಲಿ ವಕೀಲರಾದ ಬಸವರಾಜ ಆರ್. ಹಾಲಗೇರ್ (48) ಅವರು ಸಲ್ಲಿಸಿದ ದೂರಿನ ಪ್ರಕಾರ ಆಗಸ್ಟ್‌ 04 ರಂದು ಅವರ ಮೊಬೈಲ್ ನಂಬರ ಇದ್ದಕ್ಕಿದ್ದಂತೆ ನಿಷ್ಕ್ರಿಯಗೊಂಡಿತು. ನಂತರ ಆಧಾರ್ OTP ಬರದೆ ಸಮಸ್ಯೆ ಎದುರಾದ್ದರಿಂದ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಆ. 06 ಮತ್ತು 07 ರಂದು ಅನಾಮಿಕರು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2 ಲಕ್ಷ ರೂ., 1.17 ಲಕ್ಷ ರೂ., 19,500 ರೂ. ಹಾಗೂ 700 ರೂ. ಮೊತ್ತವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಘಟನೆಯ ನಂತರ ಬಸವರಾಜ ಅವರು ತಕ್ಷಣವೇ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಬ್ಯಾಂಕ್‌ಗೆ ಲಿಖಿತ ಅರ್ಜಿ ಸಲ್ಲಿಸಿ ತಮ್ಮ ಖಾತೆ ಬಂದ್ ಮಾಡಿಕೊಂಡಿದ್ದಾರೆ.

    ಆ. 27 ರಂದು ವಕೀಲ ಬಸವರಾಜ ಅವರು ಸ್ವತಃ ಸಿ.ಇ.ಎನ್ ಠಾಣೆಗೆ ತೆರಳಿ ಗಣಕೀಕೃತ ದೂರು ಸಲ್ಲಿಸಿದ್ದು, ಪೊಲೀಸರು ಗುನ್ನೆ ನಂ. 21/2025ರಲ್ಲಿ ಐಟಿ ಕಾಯ್ದೆ ಸೆಕ್ಷನ್ 66(D) ಹಾಗೂ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 318(4), 319 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಯಾದಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರದ ಆದೇಶಾನುಸಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ದಿನಾಂಕ: 22.08.2025 ರಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, 07 ದಿನಗಳ ಒಳಗೆ ನೀಡಲು ಕೋರಲಾಗಿತ್ತು.

    ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಅವಧಿಯನ್ನು ವಿಸ್ತರಿಸಲು ಕೋರಿರುವ ಕಾರಣ, ಈ ಬಗ್ಗೆ ಸಲಹೆ/ಸೂಚನೆ ಮನವಿಗಳನ್ನು ನೀಡುವ ಅವಧಿಯನ್ನು ದಿನಾಂಕ: 01.09.2025 ರ ಸಂಜೆ 5.00 ಘಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ. ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬ‌ರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು.

    ಸಾರ್ವಜನಿಕರು ತಮ್ಮ ಸಲಹೆ/ಸೂಚನೆ/ ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16, ಡಿ.ದೇವರಾಜ ಅರಸು ಭವನ,ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ,ಬೆಂಗಳೂರು ಅಥವಾ kscbcb@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.ಹೆಚ್ಚಿನ‌ವಿವರಗಳಿಗೆ ದೂ.ಸಂಖ್ಯೆ 080-29506668 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

  • ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಗುರುಮಠಕಲ್: ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಹಾಗೂ ಹಬ್ಬಗಳನ್ನು ಶಾಂತಿಯುತವಾಗಿ ಸಂಭ್ರಮಿಸಿ ಆಚರಿಸಿ ಎಂದು ಗುರುಮಠಕಲ್ ಪಿ. ಐ. ವೀರಣ್ಣ ದೊಡ್ಡಮನಿ ಹೇಳಿದರು.

    ತಾಲೂಕಿನ ಪಸ್ಪುಲ್ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಊರಿನ ಮುಖಂಡರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಿ ಕಾನೂನಿನ ಸೂಚನೆಗಳನ್ನು ಅವರಿಗೆ ತಿಳಿಸಿದರು.

    ನಶೆ ಮುಕ್ತ ಭರತದಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ ಎಂದರು.

    ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಊರಿನ ಮುಖಂಡರುಗಳು ಹೆಚ್ಚಿನ ಜಾಗೃತೆ ವಹಿಸಿ ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಲು ಸೂಚಿಸಿದರು.

    ಹಬ್ಬಗಳು ನಮ್ಮಲ್ಲಿ ಸಡಗರ ಸಂಭ್ರಮ ಹೆಚ್ಚಿಸಿ ಸೌಹಾರ್ದ ಬೆಳೆಸುತ್ತವೆ. ಆದರೆ ಕೆಲವರ ಅತಿರೇಕತನದಿಂದ ಸೌಹಾರ್ದಕ್ಕೆ ಪೆಟ್ಟು ಬೀಳುತ್ತದೆ. ಅಂತಹ ಅವಕಾಶಕ್ಕೆ ಯಾವುದೇ ಸಂಘಟನೆಯವರು ಅವಕಾಶ ನೀಡದೇ ಕಾನೂನು ರೀತಿ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆಗಾಗಿ ಸ್ಥಳೀಯ ಆಡಳಿತ, ಜೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವೆಂದರು.