Author: Satyakam NewsDesk

  • ದೀಪಾವಳಿಗೆ ರಾಜ್ಯ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಏರಿಕೆ..!

    ದೀಪಾವಳಿಗೆ ರಾಜ್ಯ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಏರಿಕೆ..!

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಜೀವನೋಪಾಯದ ವೆಚ್ಚದ ಹಿನ್ನೆಲೆಯಲ್ಲಿ ನೌಕರರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ತುಟ್ಟಿ ಭತ್ಯೆ (Dearness Allowance – DA) ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಈ ಕ್ರಮದಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ನೇರ ಲಾಭ ದೊರಕಲಿದೆ.

    ರಾಜ್ಯ ಸರ್ಕಾರ ಪ್ರಕಟಿಸಿರುವ ಹೊಸ ಆದೇಶದ ಪ್ರಕಾರ, ನೌಕರರ ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ DA ದರವು ಪ್ರಸ್ತುತ ಶೇ. 12.25ರಿಂದ ಶೇ. 14.25ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು 2025ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಹೆಚ್ಚುವರಿ ಭತ್ಯೆಯ ಮೊತ್ತವನ್ನು ಮುಂದಿನ ವೇತನದೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

    ಕೇಂದ್ರ ಸರ್ಕಾರವು ಇತ್ತೀಚೆಗೆ ವಿಜಯದಶಮಿ ಹಬ್ಬದ ಮುನ್ನಾದಿನ ಕೇಂದ್ರ ನೌಕರರಿಗೆ ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಈ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ, ಕೇಂದ್ರ ಸರ್ಕಾರದ DA ಏರಿಕೆಯ ನಂತರ ರಾಜ್ಯ ಸರ್ಕಾರವೂ ಅದೇ ಮಾದರಿಯನ್ನು ಅನುಸರಿಸಿ ನೌಕರರಿಗೆ ಹೆಚ್ಚುವರಿ ಭತ್ಯೆ ನೀಡುವುದು ರೂಢಿಯಾಗಿದೆ.

    ತುಟ್ಟಿ ಭತ್ಯೆ ಎಂದರೆ ಜೀವನೋಪಾಯದ ವೆಚ್ಚದ ಏರಿಕೆಯಿಂದ ನೌಕರರ ಖರೀದಿ ಸಾಮರ್ಥ್ಯದಲ್ಲಿ ಉಂಟಾಗುವ ಕುಗ್ಗುವಿಕೆಯನ್ನು ಸರಿದೂಗಿಸಲು ನೀಡುವ ಹಣಕಾಸಿನ ಪರಿಹಾರ. ಇದನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಈ ಕ್ರಮದಿಂದ ನೌಕರರ ಖರ್ಚು ಸಾಮರ್ಥ್ಯ ಹೆಚ್ಚುವ ನಿರೀಕ್ಷೆ ಇದೆ ಹಾಗೂ ಹಬ್ಬದ ಸಮಯದಲ್ಲಿ ಈ ಘೋಷಣೆ ನೌಕರರ ಮನಗಳಲ್ಲಿ ಉತ್ಸಾಹ ತುಂಬಿದೆ.

    ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ನೌಕರರು ಹಾಗೂ ಪಿಂಚಣಿದಾರರ ಮನೆಗಳಲ್ಲಿ ದೀಪಾವಳಿಯ ಸಂತಸ ಮನೆಮಾಡಿದೆ.

  • ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ : ಸಚಿವ ಲಾಡ್

    ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ : ಸಚಿವ ಲಾಡ್

    ಸತ್ಯಕಾಮ ವಾರ್ತೆ ಯಾದಗಿರಿ:

    ಆರ್.ಎಸ್.ಎಸ್. ನಿಲುವುಗಳನ್ನು ಪ್ರಶ್ನಿಸಿ ಸಾರ್ವಜನಿಕ, ಸರ್ಕಾರದ ಪ್ರದೇಶಗಳಲ್ಲಿ ಶಾಖೆ ಪ್ರದರ್ಶನ ಮಾಡುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಸಲ್ಲಿಸಿದ ಮನವಿ ಪತ್ರದ ಬಗ್ಗೆ ವಿರೋಧಿಸಿ ಅನೇಕರು ಪ್ರಿಯಾಂಕ್ ಖರ್ಗೆ ಅವರಿಗೆ ಫೋನ್ ಕರೆ ಮೂಲಕ ಜೀವ ಬೆದರಿಕೆ, ಭಯ ಹುಟ್ಟಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ, ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

    ನಗರದ ಸರ್ಕೀಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಹಲವರಿಗೆ ಜೀರ್ಣಿಸಿಕೊಳ್ಳಲು ಆಗದೆ ಅಡ್ಡ ಮಾರ್ಗದಿಂದ ವೈಯಕ್ತಿಕ ನಿಂದನೆ ಹೇಳುತ್ತಿರುವುದು ಅದು ಅವರ ಮನಸ್ಥಿತಿ ತೋರಿಸುತ್ತಿದೆ ಎಂದರು.

    ಈ ದೇಶದಲ್ಲಿ ಮಹಾತ್ಮ ಗಾಂಧಿಯನ್ನೆ ಕೊಂದ ಸಂತತಿ ಇವರದು, ಇತಿಹಾಸದಲ್ಲಿ ಒರಿಜಿನಲ್ ಹಿಂದೂಗಳ ಇವರ ಪರವಾಗಿ ಇರುವುದು ಯಾವ ಸಾಕ್ಷಿಯೂ ಇಲ್ಲ‌. ಒರಿಜಿನಲ್ ಹಿಂದೂಗಳು ಪ್ರಿಯಾಂಕ್ ಖರ್ಗೆ ಅವರ ಪರವಾಗಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

  • ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ ಎಂದು ನಂಬಿಸಿ, ಗ್ರಾಮದ ಸುಮಾರು 50 ಮಂದಿಯಿಂದ ಒಟ್ಟು ₹21.59 ಲಕ್ಷ ರೂ. ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಣ್ಣಿವಡಗೇರಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಈ ಸಂಬಂಧ ಬಸವರಾಜ @ ಬಸಪ್ಪ ಯಮನಪ್ಪ ಆಶ್ಯಾಳ ಮತ್ತು ಅವನ ಅಣ್ಣ ಮುತ್ತಪ್ಪ ಯಮನಪ್ಪ ಆಶ್ಯಾಳ ಎಂಬವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರುದಾರ ನಿಂಗಪ್ಪ ದೂಳಪ್ಪ ಪೂಜಾರಿ ನೀಡಿರುವ ದೂರಿನ ಪ್ರಕಾರ, 2013ರಲ್ಲಿ ಆರೋಪಿ ಬಸವರಾಜ ಘರಿಮಾ ಹೋಮ್ ಅಂಡ್ ಫಾರಂ ಹೌಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಇನ್ಸುರೆನ್ಸ್ ಕಂಪನಿ ಪ್ರಾರಂಭಿಸಿ, ಪ್ರತಿ ವರ್ಷ ₹1,250ರಂತೆ ಐದು ವರ್ಷ ಹಣ ಕಟ್ಟಿದರೆ ಹೂಡಿಕೆ ಡಬಲ್ ಆಗುತ್ತದೆ ಎಂದು ಭರವಸೆ ನೀಡಿದ್ದನು.

    ಈ ಭರವಸೆ ನಂಬಿ ಗ್ರಾಮದ ಸುಮಾರು 50 ಮಂದಿ ಒಟ್ಟು ₹21.59 ಲಕ್ಷ ರೂ. ಹೂಡಿಕೆ ಮಾಡಿದರು. ಆದರೆ 2019ರಲ್ಲಿ ಅವಧಿ ಮುಗಿದರೂ ಹಣವನ್ನು ಹಿಂತಿರುಗಿಸದೆ ಕಾಲಹರಣ ಮಾಡಿದನು. 2020ರಲ್ಲಿ ಗ್ರಾಮ ಹಿರಿಯರ ಸಮ್ಮುಖದಲ್ಲಿ ನಡೆದ ನ್ಯಾಯಪಂಚಾಯಿತಿಯಲ್ಲೂ ಐದು ವರ್ಷಗಳ ಅವಧಿ ಕೇಳಿ ವಂಚನೆ ಮುಂದುವರಿಸಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇತ್ತೀಚೆಗೆ ದೂರುದಾರರು ಹಣವನ್ನು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅಣ್ಣ ಮುತ್ತಪ್ಪ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

    ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ BNS ಕಲಂ 316(2), 318(3), 351(2), 352 ಹಾಗೂ 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

  • ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಆಯುರ್ವೇದ ಚಿಕಿತ್ಸೆ  ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮಹಿಳೆ ನೀಡಿದ ದೂರಿನ ಪ್ರಕಾರ ಹೊಟ್ಟೆನೋವಿನ ಚಿಕಿತ್ಸೆಗಾಗಿ ತಾಯಿ ಹಾಗೂ ಅತ್ತೆಯೊಂದಿಗೆ ಗೋಗಿ(ಕೆ) ಗ್ರಾಮದ ಮುರ್ಸಿದ್ ಮುತ್ಯಾ ಅಲಿಯಾಸ್ ಸಯ್ಯದ ಮುರಾನ್ ಹುಸೇನಿ ಎಂಬಾತನ ಮನೆಗೆ ಅಕ್ಟೋಬರ್ 8ರಂದು  ಮಹಿಳೆ ತೆರಳಿದ್ದಳು. ಈ ವೇಳೆ  ಚಿಕಿತ್ಸೆ ನೆಪದಲ್ಲಿ ಆರೋಪಿ ಯುವತಿಯನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಒಳಗಿನಿಂದ ಹಾಕಿಕೊಂಡು, ಮೂಗಿಗೆ ಏನೋ ಔಷಧಿ ಹಚ್ಚಿ ಸುಂದಾಗುವಂತೆ ಮಾಡಿ, ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂದರ್ಭದಲ್ಲಿ ಮಹಿಳೆ ಚೀರಿದಾಗ ಆಕೆಯ ತಾಯಿ ಬಾಗಿಲು ಬಡಿದು ಒಳಗೆ ಬಂದಿದ್ದು, ಆರೋಪಿ ತನ್ನ ತಪ್ಪನ್ನು ಮುಚ್ಚಿಹಾಕಲು ಆಕೆಗೆ ಚಿಕಿತ್ಸೆ ಮುಗಿದಿದೆ ಎಂದು ಹೇಳಿದನೆಂದು ದೂರಿನಲ್ಲಿ ತಿಳಿಸಲಾಗಿದೆ.

    ಘಟನೆಯ ಬಳಿಕ ಮಹಿಳೆ ಮನೆಗೆ ಹೋದ ನಂತರ ತಾಯಿ ಮತ್ತು ಅತ್ತೆಗೆ ವಿಷಯ ತಿಳಿಸಿದ್ದು, ನಂತರ ಗೋಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.

  • ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಸತ್ಯಕಾಮ ವಾರ್ತೆ ಸುರಪುರ:

    ಕನ್ನಡ ನಾಡು ನುಡಿ ನೆಲ ಜಲದ ಭಾಷೆ ವಿಷಯಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೀಮು ನಾಯಕ ಕಳೆದ ಅನೇಕ ವರ್ಷಗಳಿಂದ ಕನ್ನಡಪರ ಹೋರಾಟಗಾರನಾಗಿದ್ದು ಮುಂದೆಯೂ ಉತ್ತಮವಾದ ಸಂಘಟನೆಯನ್ನು ಜಿಲ್ಲೆಯಲ್ಲಿ ಬೆಳೆಸಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ಇಂದು ತುಂಬಾ ಅಪಾಯದಲ್ಲಿದೆ ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕನ್ನಡಿಗರಿಗೆ ಇದ್ದು, ಮ.ರಾ.ಮೂರ್ತಿ, ವಿ.ಕೃ ಗೋಕಾಕ ಡಾ.ರಾಜಕುಮಾರ್,ವಾಟಾಳ

    ನಾಗರಾಜ್, ಜಿ ನಾರಾಯಣ ಕುಮಾರ್ ಸೇರಿದಂತೆ ಹಲವು ಮಹನೀಯರು ಕನ್ನಡಕ್ಕಾಗಿ ದುಡಿದಿದ್ದಾರೆ ಅಂತವರಿಂದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಆರಂಭಗೊಂಡಿದೆ ಎಂದರು.

    ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಭೀಮು ನಾಯಕ ಮಲ್ಲಿಬಾವಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬೆಳೆಸುವುದಾಗಿ ತಿಳಿಸಿದರು.

    ಪ್ರಸ್ತಾವಿಕವಾಗಿ ಸಾಹಿತಿ ಅಶೋಕ ಚೌಧರಿ ಮಾತನಾಡಿ, 80ರ ದಶಕದಲ್ಲಿ ಕನ್ನಡಕ್ಕೆ ಪಕ್ಕದ ರಾಜ್ಯಗಳ ಭಾಷೆಗಳು ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಜಿ ನಾರಾಯಣ ಕುಮಾರ್ ಅವರು ರಾಜ್ಯದಲ್ಲಿ ಕನ್ನಡಿಗರನ್ನು ಸಂಘಟಿಸುವ ಜೊತೆಗೆ ದೊಡ್ಡಮಟ್ಟದಲ್ಲಿ ಹೋರಾಟವನ್ನು ನಡೆಸಿ ಕನ್ನಡ ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.

    ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗಮಿಸುತ್ತಿದ್ದಂತೆ ನಗರದಲ್ಲಿ ಅದ್ದೂರಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌಧರಿ ಮಾತನಾಡಿದರು.ಯಲ್ಲಪ್ಪ ನಾಯಕ ಮಲ್ಲಿಬಾವಿ ನೇತೃತ್ವ ವಹಿಸಿದ್ದರು. ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಸಮಿತಿಯ ಮುಖಂಡ ರಾಜಣ್ಣ ಉಪಸ್ಥಿತರಿದ್ದರು.ಮಹೇಶ ಗಂಜಿ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ಪರಶುರಾಮ ಮಲ್ಲಿಬಾವಿ ವಂದಿಸಿದರು. ಸಂಘಟನೆಯ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

    ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಭೀಮು ಹೆಚ್.ನಾಯಕ ಅವರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಸ್ವಾಮೀಜಿಗಳ ಮೂಲಕ ನೀಡಿ ಗೌರವಿಸಲಾಯಿತು.
  • ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ – ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ 

    ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ – ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ 

    ಬೆಂಗಳೂರು: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ (ರಿ.) ವತಿಯಿಂದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

    ಅದರಂತೆ ಆನಂದ್ ಪಿ. ಮಣ್ಣೂರ ಅವರನ್ನು ಅಧ್ಯಕ್ಷರಾಗಿ, ಚಂದ್ರಕಾಂತ್ ಹಾವನೂರ್ ಅವರನ್ನು ಉಪಾಧ್ಯಕ್ಷರಾಗಿ, ಹಾಗೂ ಶಿವಕುಮಾರ್ ತೋಟ್ನಲ್ಲಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

    ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅವರು ಈ ಆಯ್ಕೆಯನ್ನು ಅನುಮೋದಿಸಿದ್ದು, ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

  • ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಸತ್ಯಕಾಮ ವಾರ್ತೆ ಬೆಂಗಳೂರು:

    ಕಲ್ಯಾಣ ಕರ್ನಾಟಕದ ಪತ್ರಿಕೆಗಳ ಧ್ವನಿ ಇದೀಗ ಸರ್ಕಾರದ ಬಾಗಿಲಲ್ಲಿ ಗಟ್ಟಿಯಾಗಿ ಮೊಳಗಿದೆ. ಹಲವು ವರ್ಷಗಳ ಆಶೆ, ಬೇಡಿಕೆ ಮತ್ತು ಹೋರಾಟಕ್ಕೆ ಹೊಸ ಆಶಾಕಿರಣ ಮೂಡಿಸಿದ್ದು, ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ನಿಯೋಗವು ಮೂರು ದಿನಗಳ ಕಾಲ ಬೆಂಗಳೂರಿನ ಪ್ರವಾಸದ ವೇಳೆ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಷಯವನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಿದೆ. ಈ ಹೋರಾಟಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂಪಾದಕರ ಹೋರಾಟದ ಮಹತ್ತರ ಹೆಜ್ಜೆಯಾಗಿದೆ.

    ನಿಯೋಗವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ವಿಸ್ತೃತ ಚರ್ಚೆ ಮಾಡಲಾಯಿತು. ಸಂಪಾದಕರ “ಕಲ್ಯಾಣ ಕರ್ನಾಟಕದ ಪತ್ರಿಕೆಗಳು ಕೇವಲ ಸುದ್ದಿಯ ವೇದಿಕೆಗಳಲ್ಲ — ಇದು ಜನರ ಧ್ವನಿ, ಹೋರಾಟದ ಶಕ್ತಿ, ಮತ್ತು ನಾಡಿನ ನಿಜವಾದ ಮುಖ” ಎಂದು ಭಾವನಾತ್ಮಕವಾಗಿ ಮನವರಿಕೆ ಮಾಡಿದರು. ಮಂಡಳಿ ಅಧ್ಯಕ್ಷರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ನಂತರ ನಿಯೋಗವು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರನ್ನು ಭೇಟಿಯಾಗಿ ವಿಷಯದ ತೀವ್ರತೆಯನ್ನು ತಿಳಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಅವರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಕ್ರಮದ ಭರವಸೆ ನೀಡಿದರು. ಅದೇ ದಿನ ವಿಧಾನಸೌಧದಲ್ಲಿ ಇರುವ ಬ್ಯಾಂಕೆಟ್ ಹಾಲ್‌ನಲ್ಲಿ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಪತ್ರ ಸಲ್ಲಿಸಲಾಯಿತು.

    ಈ ಪ್ರಯಾಣದ ಅತ್ಯಂತ ಪ್ರಭಾವಶೀಲ ಹಂತವೆಂದರೆ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾದ ಕ್ಷಣ. ಸಚಿವರು ವಿಷಯದ ಗಂಭೀರತೆಯನ್ನು ಮನಗಂಡು, “ನಿಮ್ಮ ಧ್ವನಿ ನ್ಯಾಯಸಮ್ಮತವಾಗಿದೆ. ಮಂಡಳಿ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡುತ್ತೇನೆ. ಈ ಬೇಡಿಕೆಗೆ ಸ್ಪಂದನೆ ದೊರೆಯಲಿದೆ,” ಎಂದು ಸ್ಪಷ್ಟ ಭರವಸೆ ನೀಡಿದರು. ಈ ಮಾತು ಕಲ್ಯಾಣ ಕರ್ನಾಟಕ ಸಂಪಾದಕರ ಹೋರಾಟಕ್ಕೆ ಹೊಸ ಉತ್ಸಾಹ ನೀಡಿತು.

    ಈ ಹೋರಾಟದ ಮುಂಚೂಣಿಯಲ್ಲಿ ಗೌರವಾಧ್ಯಕ್ಷರು ಸುರೇಶ ಗೌರೆ, ಪ್ರಧಾನ ಕಾರ್ಯದರ್ಶಿ ಹನುಮಂತ್ ಭೋಧಾನಕರ್, ಉಪಾಧ್ಯಕ್ಷರು ಆನಂದ ಮಣ್ಣೂರ, ಚಂದ್ರಶೇಖರ ಕವಲಗಿ, ಶಿವಕುಮಾರ್ ತೊಟ್ನಲಳಿ, ಸದಸ್ಯರು ವಿಠಲ್ ಚಿಕಣಿ ಮತ್ತು ಬಾಬು ಚೌಹಾಣ್ ಇದ್ಧರು. ಎಲರ ಒಗ್ಗಟ್ಟು, ಹೋರಾಟ ಮತ್ತು ಧ್ವನಿ ಸರ್ಕಾರದ ಕಿವಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

    ಸಂಘದ ಅಧ್ಯಕ್ಷರು ಹಾಗೂ ಸದಸ್ಯರು — ಮಾಧ್ಯಮ ಮಾನ್ಯತಾ ಸಮಿತಿ ಗುರುರಾಜ ಕುಲಕರ್ಣಿ ಅವರು ಘೋಷಣಾತ್ಮಕವಾಗಿ ಹೇಳಿದರು, ನಮ್ಮ ಧ್ವನಿ ಕೇವಲ ಪತ್ರಿಕೆಗಳಲ್ಲ, ಈಗ ಸರ್ಕಾರದ ಕಿವಿಯಲ್ಲೂ ಮೊಳಗುತ್ತಿದೆ. 2 ಪುಟ ಜಾಹೀರಾತು ನಮ್ಮ ಹಕ್ಕು — ಈ ಹೋರಾಟ ಕೇವಲ ಬೇಡಿಕೆಯಲ್ಲ, ಮಾಧ್ಯಮದ ಗೌರವದ ಹೋರಾಟ. ಈಗ ಹಿಂದಿರುಗುವುದಿಲ್ಲ.” “ಒಗ್ಗಟ್ಟಾಗಿದಾಗ ಪತ್ರಕರ್ತರ ಧ್ವನಿ ಗೋಡೆಗಳನ್ನೇ ಕಂಪಿಸುತ್ತದೆ. ಈ ಹೋರಾಟದ ಗೆಲುವಿನ ಬಾಗಿಲು ತೆರೆಯಲಾಗಿದೆ. ಅಂತಿಮ ನಿರ್ಧಾರ ಬರುವ ತನಕ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ,” ಎಂದು ಸ್ಪಷ್ಟಪಡಿಸಿದರು.

    ಸಂಘವು ಮುಂದಿನ ಹಂತದಲ್ಲಿ ಮಂಡಳಿ ಅಧ್ಯಕ್ಷರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆಸಲು ಸಜ್ಜಾಗಿದೆ. ಸಂಪಾದಕರ ಧ್ವನಿ ಇದೀಗ ಶಕ್ತಿ — ಸರ್ಕಾರದ ಕಿವಿಗೊಡಬೇಕಾದ ನಾದವಾಗಿದೆ.

  • ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅವಧಿಯನ್ನು ಇ-ಕೆವೈಸಿ ಮೂಲಕ ಪೂರ್ಣಗೊಳಿಸಲಾಗುತ್ತಿದ್ದು, ಎಲ್ಲ್ಲಾ ನರೇಗಾ ಕೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಕಡ್ಡಾಯವಾಗಿ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ರವರು ಮನವಿ ಮಾಡಿದ್ದಾರೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದ್ದು, ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮೂಲಕ ಪೂರ್ಣಗೊಳಿಸಲು ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ ಎಂದರು.

    ತರಬೇತಿ ಪಡೆದ ಎಲ್ಲಾ ಸಿಬ್ಬಂದಿಗಳು ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಕೂಲಿಕಾರ್ಮಿಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳದ ಜಾಬ್-ಕಾರ್ಡ್ಗಳು ನಿಷ್ಕ್ರಿಯವಾಗುತ್ತವೆ ಎಂದು ತಿಳಿಸಿದ್ದಾರೆ.

    ಮಹಾತ್ಮಗಾಂಧಿ ನರೇಗಾ ಯೋಜನೆಯ ಹೆಚ್ಚು ಪಾರದರ್ಶಕ ಅನುಷ್ಟಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ತಮ್ಮ ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಅಷ್ಟೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಹಾಪುರ 51944, ಸುರಪುರ 56669, ಯಾದಗಿರಿ 40934, ಗುರುಮಿಟಕಲ್ 22022, ವಡಗೇರಾ 32215 ಹಾಗೂ ಹುಣಸಗಿ 48155 ಸೇರಿ ಒಟ್ಟು 2,51,939 ಜನ ಸಕ್ರಿಯ ಕೂಲಿಕಾರ್ಮಿಕರಿದ್ದು, ಎಲ್ಲರೂ ಸಹ ತಪ್ಪದೇ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಅಪ್ಲೇಟ್ ಮಾಡಿಕೊಳ್ಳಲು ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್ಟಿ, ಜಿಕೆಎಂ ಸೇರಿದಂತೆ ನರೇಗಾ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

  • ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ : ಬಾಕಿ ಉಳಿದ ಕಡತಗಳ ಪರಿಶೀಲನೆ 

    ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ : ಬಾಕಿ ಉಳಿದ ಕಡತಗಳ ಪರಿಶೀಲನೆ 

    ಸತ್ಯಕಾಮ ವಾರ್ತೆ ಯಾದಗಿರಿ:

    ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ ದಿಢೀರ್ ಭೇಟಿ ನೀಡಿ,  ಕಚೇರಿಯ ಕೆಲಸಕಾರ್ಯಗಳು ಸರಿಯಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಲೋಕಾಯುಕ್ತ ಪಿಐ ರಾಜಶೇಖರ್ ಹಳಿಗೋಧಿ ಅವರ ನೇತೃತ್ವದಲ್ಲಿ ಈ ಪರಿಶೀಲನೆ ನಡೆದಿದೆ.

    ಆ ಸಮಯದಲ್ಲಿ ಕಚೇರಿಯಲ್ಲಿದ್ದ ಬಾಕಿ ಉಳಿದ ಕಡತಗಳ ಪರಿಶೀಲನೆ ಕೈಗೊಳ್ಳಲಾಯಿತು. ಕೆಲ ದಾಖಲೆಗಳಲ್ಲಿ ವಿಳಂಬ ಹಾಗೂ ಅಪೂರ್ಣ ಮಾಹಿತಿಯಿರುವ ಕುರಿತು ಅಧಿಕಾರಿಗಳು ಗಮನಹರಿಸಿದರು ಎಂದು ಮೂಲಗಳು ತಿಳಿಸಿವೆ.

    ಪರಿಶೀಲನೆ ವೇಳೆ ಸಿಬ್ಬಂದಿಗಳಾದ ಅಮರನಾಥ್, ಸಂತೋಷಮ್ಮ ಸೇರಿದಂತೆ ಇತರರು ಹಾಜರಿದ್ದರು.

  • ನಿಧನ ವಾರ್ತೆ :

    ನಿಧನ ವಾರ್ತೆ :

    ಗುರುಮಠಕಲ್ : ಪಟ್ಟಣದ ನಿವಾಸಿ ದೇವೀಂದ್ರಮ್ಮ ಗಂ. ಲಕ್ಷ್ಮಪ್ಪ ಯಾದವ (70) ರವಿವಾರ ಬೆಳಿಗ್ಗೆ ಅನಾರೋಗ್ಯಾದಿಂದ ನಿಧನರಾಗಿದ್ದಾರೆ.

    ಪುತ್ರ ನರಸಿಂಹಲು ಶಾಕಾಧಿಕಾರಿ(ಜೇಸ್ಕಾಂ) ಹಾಗೂ ಬುಗ್ಗಪ್ಪ (ಜೆಸ್ಕಾಂ) ಸೇರಿದಂತೆಯೇ ಐವರು ಪುತ್ರರು ಹಾಗೂ ನಾಲ್ವರು ಪುತ್ರಿ, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅಂತ್ಯ ಕ್ರಿಯೆಯು ನಾಳೆ ಮಧ್ಯಾಹ್ನ 2 ಗಂಟೆಗೆ ಗುರುಮಟಕಲನ ಲಕ್ಷ್ಮೀನಗರ ರುದ್ರಭೂಮಿಯಲ್ಲಿ ನೆರೆವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.