Author: Satyakam NewsDesk

  • ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಆರ್ ಸಿ ಬಿ ನಾಯಕ

    ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಆರ್ ಸಿ ಬಿ ನಾಯಕ

    ಕ್ರಿಕೆಟ್ ಅಭಿಮಾನಿಗಳಿಗೆ ಇಂದೋರ್‌ನ ರಣಜಿ ಮೈದಾನದಲ್ಲಿ ಇಂದು ಹಬ್ಬದ ವಾತಾವರಣವಿತ್ತು. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದ ರಜತ್ ಪಾಟಿದಾರ್, ಈಗ ದೇಶೀಯ ಕ್ರಿಕೆಟ್‌ನಲ್ಲಿಯೂ ಅದೇ ರೀತಿ ಮಿಂಚಿದ್ದಾರೆ. 2025-26ರ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಪಂಜಾಬ್ ವಿರುದ್ಧ ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

    ಮಧ್ಯಪ್ರದೇಶದ ಪರ ಹೊಸ ಆಲ್-ಫಾರ್ಮ್ಯಾಟ್ ನಾಯಕನಾಗಿ ಕಣಕ್ಕಿಳಿದ ರಜತ್ ಪಾಟಿದಾರ್, ತನ್ನ ನಾಯಕತ್ವದ ಮೊದಲ ಇನ್ನಿಂಗ್ಸ್‌ನಲ್ಲೇ ನೂರರ ಗಡಿ ತಲುಪಿ ಅಜೇಯನಾಗಿ ಉಳಿದಿದ್ದಾರೆ. ಅವರು 185 ಎಸೆತಗಳಲ್ಲಿ 107 ರನ್‌ಗಳನ್ನು ಬಾರಿಸಿದ್ದು, ಅದರಲ್ಲಿ 12 ಬೌಂಡರಿಗಳಿವೆ. ಅವರ ಈ ಇನ್ನಿಂಗ್ಸ್ ತಂಡಕ್ಕೆ ಆತ್ಮವಿಶ್ವಾಸ ತುಂಬುವಂತದ್ದಾಗಿತ್ತು.

    ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿ 232 ರನ್‌ಗಳಲ್ಲಿ ಸೀಮಿತವಾಯಿತು. ಮಧ್ಯಪ್ರದೇಶದ ಆರಂಭ ಸ್ವಲ್ಪ ನಿಧಾನವಾಗಿದ್ದರೂ, ನಾಲ್ಕು ವಿಕೆಟ್‌ಗಳಿಗೆ ಕೇವಲ 155 ರನ್‌ಗಳಷ್ಟಿದ್ದಾಗ ತಂಡ ಒತ್ತಡದಲ್ಲಿತ್ತು. ಇದೇ ಸಂದರ್ಭದಲ್ಲಿ ನಾಯಕ ಪಾಟಿದಾರ್ ಕ್ರೀಸ್‌ನಲ್ಲೇ ನಿಂತು ಆಟದ ಹೊಣೆ ಹೊತ್ತರು. ಅವರಿಗೆ ಸಹಕಾರಿಯಾಗಿ ಬಂದ ವೆಂಕಟೇಶ್ ಅಯ್ಯರ್ 114 ಎಸೆತಗಳಲ್ಲಿ 73 ರನ್‌ಗಳನ್ನು ಬಾರಿಸಿದರು. ಇವರಿಬ್ಬರ ನಡುವಿನ 147 ರನ್‌ಗಳ ಜೊತೆಯಾಟ ತಂಡವನ್ನು 300 ರನ್‌ಗಳ ಗಡಿ ದಾಟಿಸಿತು.

    ಪಾಟಿದಾರ್ ಅವರ ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸ, ತಾಳ್ಮೆ, ಮತ್ತು ನಾಯಕತ್ವದ ಪೌರುಷ ಸ್ಪಷ್ಟವಾಗಿತ್ತು. ಅವರು ಪ್ರತಿ ಶಾಟ್‌ನಲ್ಲಿ ಪರಿಪಕ್ವತೆಯ ಸಂಕೇತ ತೋರಿದರು. ಶತಕ ಪೂರೈಸಿದ ನಂತರವೂ ಬ್ಯಾಟ್ ಕೈಬಿಡದೆ ಇನ್ನಿಂಗ್ಸ್ ಮುಂದುವರೆಸಿದ ರಜತ್, ಎರಡನೇ ದಿನದಾಟದ ಅಂತ್ಯಕ್ಕೆ ಅಜೇಯರಾಗಿದ್ದರು. ಪಂದ್ಯ ನಡೆಯುತ್ತಿರುವ ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ, ಅಭಿಮಾನಿಗಳು ಅವರ ಬ್ಯಾಟಿಂಗ್‌ಗೆ ತಟ್ಟಿದ ಚಪ್ಪಾಳಿಯು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು.

    ದೇಶೀಯ ಕ್ರಿಕೆಟ್‌ನಲ್ಲಿ ಪಾಟಿದಾರ್ ಈಗಾಗಲೇ ಸ್ಥಿರ ಪ್ರದರ್ಶನದ ಹೆಸರನ್ನು ಗಳಿಸಿದ್ದಾರೆ. ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರು ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಕಳೆದ ರಣಜಿ ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಾಗಿದ್ದ ಅವರು 529 ರನ್‌ಗಳನ್ನು 48.09 ಸರಾಸರಿಯಲ್ಲಿ ಗಳಿಸಿದ್ದರು.

    ಈ ಸಾಧನೆಯಿಂದಾಗಿ ರಜತ್ ಪಾಟಿದಾರ್ ಕೇವಲ ಮಧ್ಯಪ್ರದೇಶದ ನಾಯಕನಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ನ ಭವಿಷ್ಯದ ಪ್ರಮುಖ ನಾಯಕನಾಗುವ ಸಾಧ್ಯತೆಗಳನ್ನೂ ಬಲಪಡಿಸಿದ್ದಾರೆ. ಐಪಿಎಲ್‌ನಲ್ಲಿ ತನ್ನ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದ ಈ ನಾಯಕ, ಈಗ ಭಾರತಕ್ಕಾಗಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ಮಿಂಚುವ ಭರವಸೆಯನ್ನು ನೀಡುತ್ತಿದ್ದಾರೆ.

  • ಮಗುವಿನ ತಪ್ಪು ಸಹಿಸಲು ಸಾಧ್ಯವೇ? — ವರುಣ್ ಚಕ್ರವರ್ತಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ

    ಮಗುವಿನ ತಪ್ಪು ಸಹಿಸಲು ಸಾಧ್ಯವೇ? — ವರುಣ್ ಚಕ್ರವರ್ತಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ

    ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿವೆ. ಆದರೆ ಕೆಲವೊಮ್ಮೆ ಅಲ್ಲಿ ನಡೆಯುವ ನಕಾರಾತ್ಮಕ ಪ್ರತಿಕ್ರಿಯೆಗಳು ಅತಿಯಾಗಿ ಬಿಂಬಿಸುತ್ತವೆ. ಇತ್ತೀಚೆಗೆ ಜನಪ್ರಿಯ ಟೆಲಿವಿಷನ್ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್‌ಪತಿ (KBC)ಯಲ್ಲಿ ಭಾಗವಹಿಸಿದ್ದ ಬಾಲಕ ಇಶಿತ್ ಭಟ್‌ನ ಘಟನೆಯೂ ಅದಕ್ಕೆ ಒಂದು ಉದಾಹರಣೆಯಾಗಿದ.

    ಇಶಿತ್ ಭಟ್ ಎಂಬ ಐದನೇ ತರಗತಿ ವಿದ್ಯಾರ್ಥಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ. ಆಟದ ಸಮಯದಲ್ಲಿ ಅವನ ಮಾತುಗಳು ಮತ್ತು ವರ್ತನೆ ಕೆಲವರಿಗೆ ಇಷ್ಟವಾಗಲಿಲ್ಲ. “ನನಗೆ ನಿಯಮಗಳು ಗೊತ್ತು, ಆದ್ದರಿಂದ ನೀವು ಹೇಳಬೇಕಾಗಿಲ್ಲ” ಎಂದು ಹೇಳಿದ ಅವನ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಯಿತು. ಕೆಲವರು ಅವನ ನಡವಳಿಕೆಯನ್ನು ಅಸಭ್ಯ ಎಂದು ಖಂಡಿಸಿ ತೀವ್ರವಾಗಿ ಟ್ರೋಲ್ ಮಾಡಿದರು.

    ಈ ಘಟನೆ ಗಮನಿಸಿದ ಕ್ರಿಕೆಟ್ ಆಟಗಾರ ವರುಣ್ ಚಕ್ರವರ್ತಿ ಮಗುವಿನ ಪರವಾಗಿ ಧ್ವನಿ ಎತ್ತಿದ್ದಾರೆ. ಅವರು ತಮ್ಮ ‘X’ (Twitter) ಖಾತೆಯಲ್ಲಿ ಬರೆದ ಸಂದೇಶದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಈ ರೀತಿಯ ನಿಂದನೆಯನ್ನು ಖಂಡಿಸಿದ್ದಾರೆ.

    “ಇಂದಿನ ಸಾಮಾಜಿಕ ಮಾಧ್ಯಮಗಳು ಯಾವುದೇ ಅರ್ಥವಿಲ್ಲದೆ ಬಾಯಿ ಬಿಡುವ ಹೇಡಿಗಳ ತಾಣವಾಗಿ ಮಾರ್ಪಟ್ಟಿವೆ. ದೇವರ ದಯೆ, ಆತ ಇನ್ನೂ ಮಗು! ಅವನನ್ನು ಬೆಳೆದುಕೊಳ್ಳಲು ಬಿಡಿ. ಒಂದು ಮಗುವಿನ ತಪ್ಪನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ, ನಾವು ದೊಡ್ಡವರ ಹುಚ್ಚುತನಗಳನ್ನು ಹೇಗೆ ಸಹಿಸುತ್ತೇವೆ?” ಎಂದು ಪ್ರಶ್ನಿಸಿದ್ದಾರೆ.

    https://x.com/chakaravarthy29/status/1978447488924168630

    ವರಣ್ ಅವರ ಈ ಮಾತು ಬಹು ಜನರ ಹೃದಯ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದರು. ಏಕೆಂದರೆ ಒಂದು ಬಾಲಕ ಮಾಡಿದ ಸಣ್ಣ ತಪ್ಪಿಗೆ ಇಷ್ಟು ಕಠಿಣ ಪ್ರತಿಕ್ರಿಯೆ ನೀಡುವುದು ಅನಾವಶ್ಯಕ ಎಂಬ ಅಭಿಪ್ರಾಯ ಹೆಚ್ಚು ಜನರಿಂದ ಕೇಳಿಬಂದಿತು.

    ಅಮಿತಾಭ್ ಬಚ್ಚನ್ ಅವರು ಕೂಡಾ ಈ ಘಟನೆಯನ್ನು ಶಾಂತವಾಗಿ ನಿಭಾಯಿಸಿದರು. ಅವರು ಮಗುವಿನ ವರ್ತನೆಗೆ ಅಸಹನೆ ತೋರದೆ, “ಕೆಲವೊಮ್ಮೆ ಮಕ್ಕಳು ಹೆಚ್ಚು ಆತ್ಮವಿಶ್ವಾಸದಿಂದ ತಪ್ಪು ಮಾಡುತ್ತಾರೆ” ಎಂದು ಹೇಳಿ ಈ ವಿಷಯವನ್ನು ಅಲ್ಲೇ ಕೈ ಚಲ್ಲಿದರು. ಅವರ ಈ ತಾಳ್ಮೆಗೂ ವರುಣ್ ಚಕ್ರವರ್ತಿಯ ಮಾನವೀಯ ನಿಲುವಿಗೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಕೇವಲ ಒಂದು ಟಿವಿ ಘಟನೆಯಲ್ಲ, ಇದು ಸಮಾಜದ ಮನೋಭಾವನೆಗೂ ಕನ್ನಡಿಯನ್ನು ಹಿಡಿದಂತಾಗಿದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನಾದರೂ ಟ್ರೋಲ್ ಮಾಡುವುದನ್ನು ಜನರು ಮನರಂಜನೆ ಎಂದುಕೊಳ್ಳುತ್ತಾರೆ. ಆದರೆ ಅದರ ಅದು ಕೇವಲ ಒಂದು ಮಗು ಆಗಿದ್ದರೆ, ನಾವು ದೊಡ್ಡವರಾಗಿ ನಮ್ಮ ನಡವಳಿಕೆಯನ್ನು ತಿರುಗಿ ನೋಡಬೇಕಾದ ಸಮಯ ಇದಾಗಿದೆ.

    ಮಕ್ಕಳಿಂದ ತಪ್ಪುಗಳು ಆಗುವುದು ಸಹಜ ಅವರ ಬೆಳವಣಿಗೆಯ ಭಾಗವಾಗಿ ನೋಡಬೇಕಾದ ಈ ತಪ್ಪುಗಳನ್ನು ನಾವು ದೊಡ್ಡ ವಿಷಯವನ್ನಾಗಿ ಮಾಡಿದರೆ, ಅದು ಅವರ ಮನಸ್ಸಿನಲ್ಲಿ ಭಯ ಮತ್ತು ನಾಚಿಕೆ ಹುಟ್ಟಿಸುತ್ತದೆ. ಇಂತಹ ಘಟನೆಗಳು ನಮ್ಮ ಸಮಾಜದ ಸಂವೇದನೆಯನ್ನು ಪರೀಕ್ಷಿಸುವಂತಿವೆ.

    ವರುಣ್ ಚಕ್ರವರ್ತಿಯ ಮಾತುಗಳಲ್ಲಿ ನೆನಪಿಸಿಕೊಳ್ಳಬೇಕಾದದ್ದು ಒಂದೇ  “ಒಬ್ಬ ಬಾಲಕ ಮಾಡಿದ ಸಣ್ಣ ತಪ್ಪನ್ನು ಕ್ಷಮಿಸದಿದ್ದರೆ ನಾವು ನಮ್ಮ ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ.”

  • ಕರ್ನಾಟಕ ಕಂದಾಯ ಇಲಾಖೆಯಿಂದ 500 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ 

    ಕರ್ನಾಟಕ ಕಂದಾಯ ಇಲಾಖೆಯಿಂದ 500 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ 

    ರಾಜ್ಯ ಸರ್ಕಾರವು ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜನಸಾಮಾನ್ಯರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿ ಮಾಡಲು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ರಾಜ್ಯದ ಕಂದಾಯ ಇಲಾಖೆ (Revenue Department) ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 500 ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

    ಗ್ರಾಮ ಲೆಕ್ಕಿಗರು ಗ್ರಾಮ ಮಟ್ಟದಲ್ಲಿ ಭೂಮಿಯ ದಾಖಲೆ ನಿರ್ವಹಣೆ, ತೆರಿಗೆ ಸಂಗ್ರಹಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಜನಸಾಮಾನ್ಯರ ಸೇವೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ, ಈ ಹುದ್ದೆಗಳು ಕೇವಲ ಉದ್ಯೋಗವಕಾಶವಲ್ಲ ಗ್ರಾಮೀಣ ಆಡಳಿತದಲ್ಲಿ ನೇರವಾಗಿ ಭಾಗಿಯಾಗುವ ಗೌರವದ ಅವಕಾಶವೂ ಹೌದು.

    ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದು, ಕಂದಾಯ ಇಲಾಖೆಯ ಈ ನೇಮಕಾತಿಯೂ ಆ ದಿಕ್ಕಿನಲ್ಲಿಯೇ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸರ್ಕಾರಿ ಸೇವೆಯಲ್ಲಿ ದೀರ್ಘಾವಧಿಯ, ಭದ್ರ ಹಾಗೂ ಗೌರವಾನ್ವಿತ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ.

    ಸಂಸ್ಥೆಯ ವಿವರಗಳು:

    ಸಂಸ್ಥೆಯ ಹೆಸರು: ಕರ್ನಾಟಕ ಕಂದಾಯ ಇಲಾಖೆ

    ಒಟ್ಟು ಹುದ್ದೆಗಳು: 500

    ಹುದ್ದೆಯ ಹೆಸರುಗಳು:

    ಗ್ರಾಮ ಲೆಕ್ಕಿಗ (Village Accountant)

    ಪ್ರಥಮ ದರ್ಜೆ ಸಹಾಯಕ (FDA)

    ದ್ವಿತೀಯ ದರ್ಜೆ ಸಹಾಯಕ (SDA)

    ಉದ್ಯೋಗ ಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳು

    ವೇತನ ಶ್ರೇಣಿ: ₹34,100 – ₹83,700 ಪ್ರತಿ ತಿಂಗಳು (ರಾಜ್ಯ ಸರ್ಕಾರದ ವೇತನ ಶ್ರೇಣಿಯ ಪ್ರಕಾರ)

    ಶೈಕ್ಷಣಿಕ ಅರ್ಹತೆ:

    ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ, ಪದವಿ ಅಥವಾ ಬಿ.ಕಾಂ. ಪದವಿಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಯ ಪ್ರಕಾರ ಅಗತ್ಯ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿರಬಹುದು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನಿಸುವುದು ಅಗತ್ಯ.

    ವಯೋಮಿತಿ ಮತ್ತು ಸಡಿಲಿಕೆ

    ಕನಿಷ್ಠ ವಯಸ್ಸು: 18 ವರ್ಷ

    ಗರಿಷ್ಠ ವಯಸ್ಸು: 38 ವರ್ಷ

    ವಯೋಮಿತಿಯಲ್ಲಿ ಸರ್ಕಾರದ ನಿಯಮಾನುಸಾರ ಸಡಿಲಿಕೆ ಅನ್ವಯವಾಗುತ್ತದೆ:

    2A, 2B, 3A, 3B ವರ್ಗದವರಿಗೆ: 3 ವರ್ಷಗಳ ಸಡಿಲಿಕೆ

    SC/ST ವರ್ಗದವರಿಗೆ: 5 ವರ್ಷಗಳ ಸಡಿಲಿಕೆ

    ಅರ್ಜಿ ಸಲ್ಲಿಸುವ ವೇಳೆ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ.

    ಆಯ್ಕೆ ಪ್ರಕ್ರಿಯೆ:

    ಹುದ್ದೆಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯಲಿದೆ.

    ಲಿಖಿತ ಪರೀಕ್ಷೆ:

    ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಹೊರತಾಗಿ 2 ಪ್ರಮುಖ ಪತ್ರಿಕೆಗಳು (ಪ್ರತಿ ಪತ್ರಿಕೆ 100 ಅಂಕಗಳದು)

    ಋಣಾತ್ಮಕ ಅಂಕ ಪದ್ದತಿ (Negative Marking) ಇರುತ್ತದೆ.

    ದಾಖಲೆಗಳ ಪರಿಶೀಲನೆ:

    ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

    ಉದ್ಯೋಗದ ಮಹತ್ವವೇನು?

    ಗ್ರಾಮ ಲೆಕ್ಕಿಗ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ನೇರ ಪ್ರತಿನಿಧಿಗಳಂತೆ ಕಾರ್ಯನಿರ್ವಹಿಸುತ್ತವೆ. ಭೂ ದಾಖಲೆ ನಿರ್ವಹಣೆ, ತೆರಿಗೆ ಸಂಗ್ರಹಣೆ, ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಂತಹ ಕ್ಷೇತ್ರಗಳಲ್ಲಿ ಈ ಹುದ್ದೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹುದ್ದೆಯ ಮೂಲಕ ಸರ್ಕಾರಿ ಸೇವೆಯಲ್ಲಿ ಪ್ರವೇಶಿಸುವುದರಿಂದ ದೀರ್ಘಾವಧಿಯ ವೃತ್ತಿಜೀವನ ಭದ್ರತೆ, ಆರ್ಥಿಕ ಸ್ಥಿರತೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೃಪ್ತಿ ದೊರೆಯುತ್ತದೆ.

    ಅರ್ಜಿ ಸಲ್ಲಿಸುವ ವಿಧಾನ

    ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಅಧಿಸೂಚನೆಯನ್ನು ಗಮನಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಿಖರವಾದ ದಿನಾಂಕಗಳು, ಅರ್ಜಿ ಪ್ರಕ್ರಿಯೆ ಮತ್ತು ಇತರೆ ಮಾಹಿತಿಗಾಗಿ ಇಲಾಖೆಯ ಅಧಿಕೃತ ಪ್ರಕಟಣೆಯನ್ನು ನೋಡಲು ಸಲಹೆ ನೀಡಲಾಗಿದೆ.

    ಈ ನೇಮಕಾತಿ ಕರ್ನಾಟಕದ ಯುವಕರಿಗೆ ಸರ್ಕಾರಿ ಸೇವೆಯಲ್ಲಿ ವೃತ್ತಿಜೀವನ ಪ್ರಾರಂಭಿಸಲು ಅತ್ಯಂತ ಉತ್ತಮ ಅವಕಾಶವಾಗಿದೆ. ಶಿಕ್ಷಣ, ವಯಸ್ಸು ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ನೀಡಿರುವ ಸೂಚನೆಗಳನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಅಗತ್ಯ.

  • ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025–26 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ

    ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025–26 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ

    ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75ನೇ ವರ್ಷದ ಸಂಭ್ರಮದ ಅಂಗವಾಗಿ ಒಂದು ಮಹತ್ವದ ಸಾಮಾಜಿಕ ಯೋಜನೆಯನ್ನು ಆರಂಭಿಸಿದೆ. ಎಸ್‌ಬಿಐ ಫೌಂಡೇಶನ್ ಮೂಲಕ “ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ” ಎಂಬ ಹೊಸ ವಿದ್ಯಾರ್ಥಿವೇತನ ಯೋಜನೆ ಘೋಷಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಹೊಸ ಬೆಳಕಾಗಲಿದೆ.

    ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು 

    ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಅನೇಕ  ವಿದ್ಯಾರ್ಥಿಗಳು ಹಣದ ಕೊರತೆಯಿಂದ ತಮ್ಮ ವಿದ್ಯಾಭ್ಯಾಸ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಎಸ್‌ಬಿಐ ಆಶಾ ವಿದ್ಯಾರ್ಥಿವೇತನದ ಯೋಜನೆ ರೂಪಗೊಂಡಿದೆ. ಶಾಲಾ ಹಂತದಿಂದ ಪದವಿ, ಸ್ನಾತ್ತಕೋತ್ತರ ಹಾಗೂ ವೃತ್ತಿಪರ ಕೋರ್ಸ್ ಗಳ ವರೆಗೆ ವ್ಯಾಪಿಸಿದೆ.

    ಐಐಟಿ, ಐಐಎಂ, ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರ ಅಡಿಯಲ್ಲಿ ನೆರವನ್ನು ಪಡೆಯಬಹುದು, ಇದಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ಇದು ಸಹಾಯವಾಗಲಿದೆ.

    ಆರ್ಥಿಕ ನೆರವು 15 ಸಾವಿರದಿಂದ  20 ಲಕ್ಷದವರೆಗೆ:

    ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಾರ್ಷಿಕ ಕನಿಷ್ಠ ₹15,000ರಿಂದ ಗರಿಷ್ಠ ₹20 ಲಕ್ಷ ರೂ.ವರೆಗೆ ಆರ್ಥಿಕ ನೆರವು ದೊರೆಯಲಿದೆ. ಈ ಮೊತ್ತವನ್ನು  ಕಾಲೇಜು ಶುಲ್ಕ, ಪುಸ್ತಕಗಳು, ವಸತಿ, ಹಾಗೂ ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದಾಗಿದೆ.

    ಈ ವರ್ಷವೇ ದೇಶದಾದ್ಯಂತ 23,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಎಸ್ ಬಿಐ (SBI) ತಿಳಿಸಿದೆ.

    ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು

    • ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು.
    • ಶಾಲಾ ಹಂತದ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಕನಿಷ್ಠ 75% ಅಂಕಗಳು ಪಡೆದಿರಬೇಕು.
    • SC/ST ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ 10% ರಷ್ಟು ಸಡಿಲಿಕೆ ನೀಡಲಾಗಿದೆ.
    • ಶಾಲಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಮೀರಬಾರದು, ಕಾಲೇಜು ಅಥವಾ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಆದಾಯ 6 ಲಕ್ಷ ರೂ. ಮೀರಬಾರದು.
    • ವಿದೇಶದಲ್ಲಿ ಓದುವ SC/ST ವಿದ್ಯಾರ್ಥಿಗಳು ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು.

    ಅರ್ಜಿ ಮತ್ತು ಪ್ರಕ್ರಿಯೆ

    ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲ್ಲಿದ್ದೂ,  ವಿದ್ಯಾರ್ಥಿಗಳು SBI Foundation ಅಥವಾ Buddy4Study ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ, ಗುರುತಿನ ಚೀಟಿ, ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

    ಆಯ್ಕೆ ಪ್ರಕ್ರಿಯೆ ಅಂಕ, ಆದಾಯ ಮತ್ತು ಶೈಕ್ಷಣಿಕ ಸಾಮರ್ಥ್ಯದ ಆಧಾರದ ಮೇಲೆ ನಡೆಯಲಿದೆ.

    ಎಸ್‌ಬಿಐ ಆಶಾ ವಿದ್ಯಾರ್ಥಿವೇತನವು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ತರಲು ಮಹತ್ವದ ಹೆಜ್ಜೆಯಾಗಲಿದೆ. ಇದು ಕೇವಲ ಹಣಕಾಸು ನೆರವಲ್ಲ ಹಲವು ವಿದ್ಯಾರ್ಥಿಗಳಿಗೆ ಭರವಸೆ ಮತ್ತು ಪ್ರೇರಣೆ ನೀಡುವ ಯೋಜನೆಯಾಗಿದೆ. ಹಣದ ಕೊರತೆಯಿಂದ ವಿದ್ಯಾಭ್ಯಾಸ ಕಳೆದುಕೊಳ್ಳುತ್ತಿದ್ದ ಅನೇಕ ಕನಸುಗಳಿಗೆ ಈ ಯೋಜನೆ ಹೊಸ ಬೆಳಕಾಗಲಿದೆ.

  • ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಆದೇಶ, ಯುವಕರಿಗೆ ಬೃಹತ್‌ ಅವಕಾಶ!

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಆದೇಶ, ಯುವಕರಿಗೆ ಬೃಹತ್‌ ಅವಕಾಶ!

    ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಕ್ರಮದ ಮೂಲಕ ಒಟ್ಟು 2032 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡುವ ಯೋಜನೆ ರೂಪಿಸಲಾಗಿದೆ.

    ಇತ್ತೀಚೆಗೆ ಸರ್ಕಾರದಿಂದ ಹೊರಬಂದ ಆದೇಶದಲ್ಲಿ, ಕೆ.ಎಸ್.ಆರ್.ಪಿ (KSRP), ಸ್ಟೆ.ಆರ್‌ಪಿ.ಸಿ (Civil Police Constable) ಹಾಗೂ ಐ.ಆರ್.ಬಿ. (IRB – Munirabad ಘಟಕ) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ಹುದ್ದೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ರಾಜ್ಯದ ಪೊಲೀಸ್‌ ಪಡೆಗೆ ಹೊಸ ಶಕ್ತಿ ನೀಡುವ ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ನೇಮಕಾತಿ ವಿವರಗಳು ಹೀಗಿದೆ: 

    ಸರ್ಕಾರದ ಆದೇಶದ ಪ್ರಕಾರ ಹುದ್ದೆಗಳ ವಿಂಗಡಣೆ ಹೀಗಿದೆ,

    KSRP ಸ್ಟೆ.ಆರ್‌ಪಿ.ಸಿ (ಸ್ಥಳಿಯೇತರ) – 1,500 ಹುದ್ದೆಗಳು (ಪುರುಷ ಮತ್ತು ಮಹಿಳೆಯರಿಗೆ).

    ಸ್ಥಳೀಯ ವೃಂದದ ಸ್ಟೆ.ಆರ್‌ಪಿ.ಸಿ – 336 ಹುದ್ದೆಗಳು.

    IRB – ಮುನಿರಾಬಾದ್ ಘಟಕ – 166 ಹುದ್ದೆಗಳು.

    ಒಟ್ಟು, 2032 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದೆ.

     

    ಸರ್ಕಾರದ ಅಧಿಕೃತ ಪತ್ರ ಹಾಗೂ ನಿರ್ದೇಶನಗಳು ಏನು ಹೇಳುತ್ತವೆ:

    ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (DGP), ಬೆಂಗಳೂರು ಇವರಿಂದ 14-10-2025 ರಂದು ಇ-ಮೇಲ್ ಮೂಲಕ ಸಂದೇಶ ಹೊರಬಿದಿತ್ತು.

    ಇದರೊಂದಿಗೆ 13-10-2025ರ ಪತ್ರವನ್ನು ಉಲ್ಲೇಖಿಸಿ, ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಟೇಬಲ್ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಕುರಿತಾಗಿ ಸರ್ಕಾರ ನೀಡಿದ ಸ್ಪಷ್ಟೀಕರಣಗಳನ್ನು ಕೊಡಲಾಗಿದೆ.

    ಸರ್ಕಾರದ ಪತ್ರ ಸಂಖ್ಯೆ ಹೆಚ್ ಡಿ 149 ಪಿಪಿಎ 2025 (10-10-2025) ಪ್ರಕಾರ, ಪ್ರತಿಯೊಂದು ನೇರ ಮೀಸಲಾತಿ ವರ್ಗದಡಿ 2% ಮೀಸಲಾತಿ ಕ್ರೀಡಾಪಟುಗಳಿಗೆ ನಿಗದಿಪಡಿಸಲಾಗಿದೆ.

    ಘಟಕಗಳಿಂದ ಹೊಸ ವರ್ಗೀಕರಣ ಕೋರಿಕೆ:

    ಪೊಲೀಸ್ ಪ್ರಧಾನ ಕಛೇರಿಯ ನಿರ್ದೇಶನದಂತೆ, ಘಟಕಗಳೆಲ್ಲವು ನೇರ ಮತ್ತು ವರ್ಗೀಕರಣದ ಮರು ಪ್ರಸ್ತಾವನೆಗಳನ್ನು 16-10-2025 ರೊಳಗಾಗಿ ಕಳುಹಿಸಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಪರೀಕ್ಷಾ ವೇಳಾಪಟ್ಟಿ ಹಾಗೂ ನೇಮಕಾತಿ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

    ಒಟ್ಟು ಹುದ್ದೆಗಳು: 2032

    ವಿಭಾಗಗಳು: KSRP, Civil Police (Local & Non-Local), IRB

    ಪ್ರಕ್ರಿಯೆ: ನೇರ ನೇಮಕಾತಿ

    ಮೀಸಲಾತಿ: ಕ್ರೀಡಾಪಟುಗಳಿಗೆ 2% ಮೀಸಲಾತಿ

    ಅಧಿಕೃತ ನಿರ್ದೇಶನ ದಿನಾಂಕ: 14-10-2025

    ಈ ನೇಮಕಾತಿ ಪ್ರಕ್ರಿಯೆ ರಾಜ್ಯದ ಯುವಕರಿಗೆ ಸರ್ಕಾರೀ ಸೇವೆಗೆ ಸೇರುವ ಬೃಹತ್‌ ಅವಕಾಶವಾಗಲಿದೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ಪೊಲೀಸ್‌ ವೆಬ್‌ಸೈಟ್‌ https://ksp.karnataka.gov.in ಅಥವಾ ಕಛೇರಿಯ ಅಧಿಕೃತ ಇಮೇಲ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

    ಈ ಹುದ್ದೆಗಳಿಗೆ ಸ್ಪರ್ಧೆ ಭಾರೀ ಪ್ರಮಾಣದಲ್ಲಿರಲಿದ್ದು, ಅಭ್ಯರ್ಥಿಗಳು ತಕ್ಷಣದಿಂದಲೇ ದೈಹಿಕ ಮತ್ತು ಲಿಖಿತ ಪರೀಕ್ಷೆಗಳ ಸಿದ್ಧತೆಯನ್ನು ಪ್ರಾರಂಭಿಸುವುದು ಒಳಿತು.

  • ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಚಿತ್ರವೆಂದರೆ ‘ಕಾಂತಾರ ಚಾಪ್ಟರ್ 1’. ಈ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಶೋಗಳು ನಡೆಯುತ್ತಿವೆ. ಕಥಾ ಹಂದರ, ತಾಂತ್ರಿಕ ಮೆರುಗು ಹಾಗೂ ಸಂಸ್ಕೃತಿಯ ನೈಜ ಚಿತ್ರಣದಿಂದ ಈ ಚಿತ್ರವು ದೇಶಾದ್ಯಂತ ಸದ್ದು ಮಾಡುತ್ತಿದೆ. ಮೊದಲ ಭಾಗದಂತೆಯೇ, ಈ ಚಾಪ್ಟರ್ ಕೂಡ ಭಾವನಾತ್ಮಕ ಕತೆಯ ಜೊತೆಗೆ ಸಂಸ್ಕೃತಿ ಹಾಗೂ ಭಕ್ತಿಯ ಅಂಶಗಳನ್ನು ಒಟ್ಟುಗೂಡಿಸಿರುವುದರಿಂದ ಪ್ರೇಕ್ಷಕರ ಮನ ಗೆದ್ದಿದೆ.

    ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇವಿ ಆಶೀರ್ವಾದ ಪಡೆಯಲು ಧಾರ್ಮಿಕ ಯಾತ್ರೆಗೆ ತೆರಳಿದ್ದಾರೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಅವರು ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ತಮ್ಮ ಹರ್ಷವನ್ನು ಹಂಚಿಕೊಂಡ ಬಗೆ ಹೀಗಿದೆ, ಎಲ್ಲವೂ ತುಂಬಾ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ಪ್ರೇಕ್ಷಕರು ನಮ್ಮ ಸಿನಿಮಾಗೆ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು, ಅದೇ ರೀತಿಯಲ್ಲಿ ಈ ಬಾರಿಯೂ ಪ್ರೇಕ್ಷಕರು ಚಾಪ್ಟರ್ 1 ಅನ್ನೂ ಕೂಡ ಹೃದಯಪೂರ್ವಕವಾಗಿ ಸ್ವೀಕರಿಸಿರುವುದು ನನಗೆ ಅಪಾರ ಸಂತೋಷವನ್ನು ನೀಡಿದೆ.

    ಇನ್ನು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಿಷಬ್ ಶೆಟ್ಟಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಅವರು ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

    ಕಾಂತಾರ ಚಾಪ್ಟರ್ 1’ ಯಶಸ್ಸು ಕೇವಲ ಒಂದು ಸಿನಿಮಾ ವಿಜಯವಲ್ಲ, ಇದು ಕನ್ನಡ ಸಂಸ್ಕೃತಿ, ಭಕ್ತಿ ಮತ್ತು ಹಳ್ಳಿ ಜೀವನದ ಆಳವಾದ ಕಥೆಯೊಂದರ ವಿಜಯವಾಗಿದೆ.

  • ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಭಾರತದ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ವೇದಿಕೆಯ ಮೇಲೆ ತಮ್ಮ ಗಾಯನದಿಂದ ಜನಮನ ಸೆಳೆಯುವ ವಿಶಿಷ್ಟ ಶೈಲಿಯಿಂದ ಖ್ಯಾತಿ ಗಳಿಸಿರುವ ರಘು, ಇದೀಗ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಈ ಮದುವೆ ಕೇವಲ ಇಬ್ಬರು ಕಲಾವಿದರ ವೈಯಕ್ತಿಕ ಬಂಧನವಲ್ಲ, ಸಂಗೀತ ಲೋಕದಲ್ಲಿ ಮೂಡಿದ ಅಪರೂಪದ ಬಾಂಧವ್ಯಕ್ಕೂ ಸಾಕ್ಷಿಯಾಗಲಿದೆ. ಇಬ್ಬರೂ ಕೂಡ ತಮ್ಮದೇ ಆದ ಗುರುತಿನಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದು, ಅವರ ಸಂಗೀತಯಾತ್ರೆಯೇ ಈ ಪ್ರೀತಿಯ ಸೇತುವೆಯಾಗಿದೆ ಎನ್ನಬಹುದು.

    ಎರಡನೇ ವಿವಾಹ, ಹೊಸ ಬಾಳಿನ ಹೊಸ ಪುಟ: ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಅವರೊಂದಿಗೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರ ವಿವಾಹ ಮುರಿದುಬಿದ್ದಿತ್ತು. ಆ ಬಳಿಕ, ತಮ್ಮ ಸಂಗೀತಯಾತ್ರೆಯ ಮಧ್ಯೆ ವಾರಿಜಶ್ರೀ ಅವರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದರು ರಘು ದೀಕ್ಷಿತ್.

    ವಾರಿಜಶ್ರೀ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯತೆ ಅವರು, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವನ್ನು ವಿಶಿಷ್ಟವಾಗಿ ಸಂಯೋಜಿಸುವ ಶೈಲಿಗೆ ಖ್ಯಾತರಾಗಿದ್ದಾರೆ. ರಘುದೀಕ್ಷಿತ್ ಮತ್ತು ವಾರಿಜಶ್ರೀ ಹಲವಾರು ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ ಮತ್ತು ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು.

    ಸಂಗೀತದಿಂದ ಪ್ರೀತಿ, ಪ್ರೀತಿಯಿಂದ ಜೀವನ: ಸಾಕು ಇನ್ನು ಸಾಕು ಆಲ್ಬಮ್‌ನಲ್ಲಿ ಇವರ ಸಂಗೀತ ಸಹಯೋಗವೇ ಇವರ ಪ್ರೀತಿಗೆ ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತಿದೆ. COVID ಕಾಲಘಟ್ಟದಲ್ಲಿ ಇವರಿಬ್ಬರು ಹಾಡಿದ ಕೆಲವು ಹಾಡುಗಳು ಅಪಾರ ಜನಪ್ರಿಯತೆ ಪಡೆದಿದ್ದವು. ಅದೇ ಸಮಯದಲ್ಲಿ ಇವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

    ಈ ತಿಂಗಳ ಕೊನೆಯಲ್ಲಿ ಮದುವೆ: ಇವರ ವಿವಾಹ ಈ ತಿಂಗಳ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮದುವೆ ಸಂಗೀತ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಮತ್ತು ಸಂಗೀತಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

    ಹೊಸ ಜೀವನಕ್ಕೆ ಸಂಗೀತಮಯ ಶುಭಾರಂಭ: ರಘು ದೀಕ್ಷಿತ್ ಅವರ ಜೀವನದಲ್ಲಿ ಹೊಸ ವಸಂತ ಬಂದಿದೆ ಎನ್ನಬಹುದು. ಸಂಗೀತದಲ್ಲಿ ಒಂದಾಗಿದ್ದ ಈ ಇಬ್ಬರು ಕಲಾವಿದರು ಈಗ ಜೀವನದಲ್ಲೂ ಒಂದಾಗಲು ಸಿದ್ಧರಾಗಿದ್ದಾರೆ. ಇವರ ದಾಂಪತ್ಯವು ಸಂಗೀತ ಲೋಕಕ್ಕೆ ಹೊಸ ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆಯಿದೆ.

  • ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಕರ್ನಾಟಕದಲ್ಲಿ ಇತ್ತೀಚೆಗೆ ಬಿಪಿಎಲ್‌ (BPL) ಮತ್ತು ಎಪಿಎಲ್‌ (APL) ಕಾರ್ಡ್‌ಗಳ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಆಹಾರ ಇಲಾಖೆಯ ಪ್ರಕಾರ, ಅನೇಕರು ನಕಲಿ ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್ ಪಡೆದಿದ್ದರು. ಇಂತಹವರ ಕಾರ್ಡ್‌ಗಳನ್ನು ಈಗ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ನಿಜವಾದ ಬಡ ಕುಟುಂಬಗಳ ಕಾರ್ಡ್‌ಗಳೂ ಸಹ ತಪ್ಪಾಗಿ ಬದಲಾಯಿಸಿರುವುದು ಕಂಡುಬಂದಿದೆ.

    ಆದರೆ ಚಿಂತೆ ಬೇಡ! ಸರ್ಕಾರ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ ಯಾರು ನಿಜವಾಗಿಯೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಾಗಿದ್ದಾರೋ ಅವರು ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಿದರೆ, ಅವರ ಎಪಿಎಲ್‌ ಕಾರ್ಡ್‌ಗಳನ್ನು ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುತ್ತದೆ.

    ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಅರ್ಜಿಯನ್ನು ಸಲ್ಲಿಸಿದ ನಂತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ಸಾಬೀತಾದರೆ 45 ದಿನಗಳ ಒಳಗಾಗಿ ಆ ಕುಟುಂಬಕ್ಕೆ ಹೊಸ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತದೆ.

    ರಾಜ್ಯದಲ್ಲಿ ನಕಲಿ ದಾಖಲೆಗಳಿಂದ ಪಡೆದಿರುವ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 7,76,000 ಬಿಪಿಎಲ್‌ ಕಾರ್ಡ್‌ಗಳು ಅನರ್ಹ ಎಂದು ಕಂಡುಬಂದಿವೆ. ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ, ಒಟ್ಟು 13,87,651 ಪಡಿತರ ಚೀಟಿಗಳು ಅನರ್ಹ ಎಂದು ಪರಿಗಣಿಸಲಾಗಿದೆ.

    ಅದರಿಂದಾಗಿ ಅರ್ಹರು ತಮ್ಮ ಪ್ರದೇಶದ ತಹಶೀಲ್ದಾರ್‌ ಕಚೇರಿಗೆ ತೆರಳಿ, ಕುಟುಂಬದ ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ಅಥವಾ ಆಸ್ತಿ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ದಾಖಲೆಗಳು ಸರಿಯಾಗಿದ್ದರೆ ಬಿಪಿಎಲ್‌ ಕಾರ್ಡ್‌ ಮತ್ತೆ ನೀಡಲಾಗುತ್ತದೆ.

    ಆದರೆ, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳ ವಿತರಣೆ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಆದ್ದರಿಂದ ಸರ್ಕಾರವು ಮೊದಲು ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಮುಗಿಸಿ ನಂತರ ಹೊಸ ಕಾರ್ಡ್‌ಗಳನ್ನು ನೀಡುವ ಯೋಜನೆ ಹೊಂದಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಬಡ ಕುಟುಂಬಗಳು ಹೊಸ ಕಾರ್ಡ್‌ಗಾಗಿ ಕಾಯುತ್ತಿವೆ.

    ಈ ಪರಿಸ್ಥಿತಿಯಿಂದ ಜನರು ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಪಡಿತರ ಸಿಗದೆ ಅನೇಕ ಬಡ ಕುಟುಂಬಗಳು ಪರದಾಡುತ್ತಿವೆ. ಸಾರ್ವಜನಿಕರು “ಬಿಪಿಎಲ್‌ ಕಾರ್ಡ್‌ಗಳ ದುರ್ಬಳಕೆ ತಡೆಯುವುದು ಸರಿಯೇ, ಆದರೆ ನಿಜವಾದ ಬಡವರಿಗೆ ತೊಂದರೆ ಕೊಡಬಾರದು” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಒಟ್ಟಿನಲ್ಲಿ, ಸರ್ಕಾರದ ಉದ್ದೇಶ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿ ನಿಜವಾದ ಬಡ ಕುಟುಂಬಗಳಿಗೆ ನೆರವು ನೀಡುವುದಾಗಿದೆ. ಆದರೆ ತಪ್ಪು ಕಾರ್ಡ್‌ ಬದಲಾವಣೆಗಳಿಂದ ಸಮಸ್ಯೆ ಉಂಟಾಗಿದೆ. ಅರ್ಹರು 45 ದಿನಗಳೊಳಗೆ ದಾಖಲೆ ಸಲ್ಲಿಸಿದರೆ ಮತ್ತೆ ಬಿಪಿಎಲ್‌ ಕಾರ್ಡ್‌ ಪಡೆಯುವ ಅವಕಾಶವಿದೆ.

  • ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ರಾಜ್ ಕೋಟ್ : ರಣಜಿ ಟ್ರೋಫಿಯ ಎಲೈಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಶತಕ ಜೊತೆಯಾಟದ ನೆರವಿನಿಂದ ಕರ್ನಾಟಕ ತಂಡವು ಬಲಿಷ್ಠ ಸೌರಾಷ್ಟ್ರ ವಿರುದ್ಧ ಮೊದಲ ದಿನದಲ್ಲೇ ಪಂದ್ಯದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

    ಟಾಸ್ ಗೆದ್ದ ಸೌರಾಷ್ಟ್ರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಕರ್ನಾಟಕಕ್ಕೆ ಸತತ ಎರಡು ವಿಕೆಟ್ ನಷ್ಟವಾದರೂ, ಬಳಿಕ ಪಡಿಕ್ಕಲ್ ಮತ್ತು ಕರುಣ್ ನಾಯರ್ ಜೋಡಿಯ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

    ಆರಂಭಿಕ ಆಟಗಾರರಾಗಿ ನಿಕಿನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆರಂಭಿಕ ಜೋಡಿ ಸ್ವಲ್ಪ ಸಮಯ ಕ್ರೀಸ್ ನಲ್ಲಿ ನಿಂತು ಎದುರಾಳಿ ತಂಡಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಮೈದಾನಕ್ಕಿಳಿದ ಎಡಗೈ ಬ್ಯಾಟರ್ ಪಡಿಕ್ಕಲ್ 11 ಬೌಂಡರಿ ಸಹಿತ 141 ಎಸೆತಗಳಲ್ಲಿ 96 ರನ್ ಗಳಿಸಿ ಶತಕದ ಹತ್ತಿರ ತಲುಪಿ ಶತಕ ವಂಚಿತರಾದರು,

    Photo Credit: BCCI Domestic

    ಬಳಿಕ ಕಣಕ್ಕಿಳಿದ ಕರುಣ್ ನಾಯರ್ 9 ಬೌಂಡರಿ ಸಹಿತ 126 ಎಸೆತಗಳಲ್ಲಿ 73 ರನ್ ಗಳ ಸೊಗಸಾದ ಆಟವಾಡಿದರು. ಪಡಿಕ್ಕಲ್ ಮತ್ತು ಕರುಣ್ ಇವರಿಬ್ಬರ ನಡುವಿನ 146 ರನ್‌ಗಳ ತೃತೀಯ ವಿಕೆಟ್ ಜೊತೆಯಾಟ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ರನ್ ಕಲೆಹಾಕಲು ಸುಲಭವಾಯಿತು.

    ನಂತರ ಬ್ಯಾಟ್ ಬೀಸಲು ಬಂದ ಸ್ಮರಣ್ ಮತ್ತು ಶ್ರೇಯಸ್ ಗೋಪಾಲ್ ಅವರ 81 ರನ್‌ಗಳ ಜೊತೆಯಾಟ ಕರ್ನಾಟಕದ ರನ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿ ಮುಂದಿನ ದಿನದಾಟಕ್ಕೆ ಕಾಲಿಟ್ಟಿತು.

    ಸೌರಾಷ್ಟ್ರ ಪರವಾಗಿ ಬೌಲ್ ಮಾಡಿದ ಸ್ಪಿನ್ನರ್ ಧರ್ಮೇಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಕರ್ನಾಟಕದ ಬ್ಯಾಟರ್ ಗಳನ್ನು ಕಟ್ಟಿಹಾಕಲು ಮುಂದಾದರೂ ಕೂಡ ಫಲ ದೊರೆಯಲಿಲ್ಲ.

    ಪಡಿಕ್ಕಲ್ ರವರ ಲಯಬದ್ದ ಬೌಂಡರಿಗಳು ಮತ್ತು ಕರುಣ್ ನಾಯರ್ ಅವರ ಉತ್ತಮ ಬ್ಯಾಟಿಂಗ್ ಶೈಲಿ ಕರ್ನಾಟಕದ ಅಭಿಮಾನಿಗಳಿಗೆ ನಾಳಿನ ಪಂದ್ಯವನ್ನು ನೋಡಲು ಉತ್ಸಾಹ ಭರಿತರಾಗಿ ಕಾಯುವಂತೆ ಮಾಡಿದೆ.

  • ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲ್ಲೂಕಿನ ಬನೋಶಿ ಗ್ರಾಮದ ದಲಿತ ಸಮಾಜದ ಅಪ್ರಾಪ್ತೆ ಯುವತಿಯನ್ನ ಅತ್ಯಾಚಾರ ಎಸಗಿ ನೇಣು ಹಾಕಲಾಗಿದೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಂಕಿಸಿ ದೂರು ದಾಖಲಾಗಿದೆ.

    ಬನೋಶಿ ಗ್ರಾಮದ 16 ವರ್ಷದ ಬಸಮ್ಮಳ ಅತ್ಯಾಚಾರ ಏಸಗಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಅನುಮಾನಿತ ಮೂವರ ವಿರುದ್ದ ಯುವತಿಯ ತಂದೆಯಾದ ಮಾನಪ್ಪ ಚಲವಾದಿ ದೂರು ನೀಡಿದ್ದಾರೆ.

    ನನ್ನ ಮಗಳು ಬಸಮ್ಮ ಇವಳಿಗೆ ಶಾಲೆ ಬಿಡಿಸಿದ್ದು ಸದ್ಯ ಮನೆಯಲ್ಲಿಯೇ ಇರುತ್ತಿದ್ದಳು. ಈಗ ಸುಮಾರು 2-3 ತಿಂಗಳಿಂದ ಬನೋಶಿ ಗ್ರಾಮದ ಮಾಳಿಂಗರಾಯ ದಂಡೋಜಿ ಇವನು ನನ್ನ ಮಗಳು ಬಸಮ್ಮ ಇವಳಿಗೆ ಹಿಂದೆ ಬಿದ್ದು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತಾ ಅನ್ನುತ್ತಾ ನನ್ನ ಮಗಳಿಗೆ ಕಾಡಿಸುತ್ತಿದ್ದು ಈ ಬಗ್ಗೆ ನಮಗೆ ಗೊತ್ತಾಗಿ ನಾವು ನಮ್ಮ ಮಗಳಿಗೆ ಬುದ್ದಿ ಹೇಳಿ ನಮ್ಮ ಮನೆಯಲ್ಲಿ ಇರಿಸಿಕೊಂಡಿದ್ದೇವು. ಇತ್ತಿತ್ತಲಾಗಿ ನನ್ನ ಮಗಳು ಬಸಮ್ಮ ಇವಳಿಗೆ ನಮ್ಮ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡುವ ಬಗ್ಗೆ ನಾವು ಮನೆಯ ಜನರು ಮಾತನಾಡಿರುವ ಸಂಗತಿಯೂ ಮಾಳಿಂಗರಾಯ ದಂಡೋಜಿ ಇವನಿಗೆ ಗೊತ್ತಾದ ಮೇಲೆ ನನ್ನ ಮಗಳಿಗೆ ನನ್ನ ಬಿಟ್ಟು ನೀನು ಹೇಗೆ ಬೇರೆಯವನ ಸಂಗಡ ಮದುವೆ ಮಾಡಿಕೊಳ್ಳುತ್ತಿ ಅಂತಾ ನನ್ನ ಮಗಳಿಗೆ ಅವನನ್ನು ಪ್ರೀತಿಸಬೇಕು ಅಂತಾ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ, ನಮ್ಮ ಮಗಳಿಂದ ಸಂಗತಿ ಕೇಳಿ ಗೊತ್ತಾಗಿದ್ದು ಇರುತ್ತದೆ, ಹಾಗೂ ಶಿವನಗೌಡ ಬಿರಾದಾರ ಇವನು ಮಾಳಿಂಗರಾಯ ಇವನಿಗೆ ನನ್ನ ಮಗಳಿಗೆ ಕಿರುಕುಳ ನೀಡಲು ಕುಮ್ಮಕ್ಕು ನೀಡುತ್ತಿದ್ದನು ಎಂದು ಯುವತಿಯ ತಂದೆಯಾದ ಮಾನಪ್ಪ ಚಲವಾದಿ ಎಫ್ಐಆರ್ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಸೋಮವಾರ(ಅ.13) ನಮ್ಮ ಕುಟುಂಬ ಸಂತೆಗೆ ಮುದ್ದೇಬಿಹಾಳಕ್ಕೆ ಹೋಗುವಾಗ ಬಸಮ್ಮ ಇವಳು ನಮ್ಮ ಮನೆಯಲ್ಲಿಯೇ ಇದ್ದಳು. ಸಂಜೆ 5 ಗಂಟೆ ಸುಮಾರಿಗೆ ನಾವು ಮುದ್ದೇಬಿಹಾಳದಿಂದ ವಾಪಸ್ ನಮ್ಮ ಮನೆಗೆ ಹೋಗಿ ನೋಡಲು ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ರಾತ್ರಿ ಇಡೀ ದಿನ ಹುಡುಕಿದರು ನಮ್ಮ ಮಗಳು ಸಿಗಲಿಲ್ಲ. ಮರುದಿನ ಮಂಗಳವಾರ(ಅ.14) ಬೆಳಿಗ್ಗೆ ಗ್ರಾಮದ ಜಮೀನುಯೊಂದರಲ್ಲಿ ನನ್ನ ಮಗಳ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಅನುಮಾನಿತರ ವಿರುದ್ಧ ದೂರಿದ್ದಾರೆ.

    ಯುವತಿ ಅತ್ಯಾಚಾರ ಕೊಲೆ ಶಂಕೆ ಬಗ್ಗೆ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಯುವತಿಯ ಶವವಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಗಲ್ಲಿಗೇರಿಸಿ ಎಂಬ ಕೂಗು ಸಾರ್ವಜನಿಕವಾಗಿ ಕೇಳಿಬಂದವು.

    ಬನೋಶಿ ಗ್ರಾಮದಲ್ಲಿ ಯುವತಿ ಅತ್ಯಾಚಾರ ಶಂಕೆ ಬಗ್ಗೆ ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹಾಗೂ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದು, ಶಂಕಿಸಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ತನಿಖೆ ಮುಂದುವರೆದಿದೆ. ಯುವತಿಯ ಮರಣೋತ್ತರ ಪರೀಕ್ಷೆ ಬರುವವರೆಗೂ ಏನು ಹೇಳಾಗದು ಎಂದು ತಿಳಿಸಿದರು.

    ಸಂತ್ರಸ್ತೆ ಯುವತಿ ಕುಟುಂಬಕ್ಕೆ ಪರಿಹಾರ

    ಎಫ್ಐಆರ್ ಆಧರಿಸಿ ಪ್ರಾಥಮಿಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ ಮಾಡಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಇನ್ನುಳಿದ 50% ರಷ್ಟು ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುವುದು. ಈಗಾಗಲೇ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಲಾಗಿದ್ದು, ಇನ್ನುಳಿದ ಸರ್ಕಾರದ ಸೌಲಭ್ಯಗಳನ್ನು ಕುಟುಂಬಕ್ಕೆ ಇಲಾಖೆಯಿಂದ ನೀಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ ಮಠ ಹೇಳಿದ್ದಾರೆ.